ಒಟ್ಟು ನೋಟಗಳು

Tuesday, June 5, 2018

ಗುರುನಾಥ ಗಾನಾಮೃತ 
ದೂರಕೆ ತಳ್ಳುವೆ ಎನಲು ನೀನ್ಯಾರೊ ಗುರುವೇ
ರಚನೆ: ಅಂಬಾಸುತ 

ದೂರಕೆ ತಳ್ಳುವೆ ಎನಲು ನೀನ್ಯಾರೊ ಗುರುವೇ
ಸನಿಹದೆ ನಾನಿರುವೆ ಎನಲು ನಾನ್ಯಾರೊ ಗುರುವೇ ||ಪ||

ಇಂದು ನೆನ್ನೆಯದು ಏನೀ ಸಂಬಂಧ
ತಿಳಿದವರು ಹೇಳಿದರು ಇದು ಜನುಮದ ಅನುಬಂಧ
ಗುರಿ ಅರಿವಿಲ್ಲದೆ ನಾ ತೊಳಲಾಡಿರಲು
ಕರ ಪಿಡಿದಾ ಗುರುವೇ ನೀ ಕೈ ಬಿಡುವೆಯೊ ಏನು? ||೧||

ಮನಮಂದಿರದಿ ನಿಂತೆ ಮನವನೆ ಗುಡಿಯಾಗಿಸಿದೆ
ಮನ ತೊರೆಯುವ ಮಾತ ನೀನೇತಕೆ ಆಡಿರುವೆ
ಬಿಟ್ಟಿರುವೆಯೊ ಏನೋ ನೀ ನನ್ನನ್ನೂ
ಬಿಡದೇ ಭಜಿಸಿಹ ಈ ನಿನ್ನ ಮಗನನ್ನು ||೨||

ದಾಸರು ಪೇಳಿದರು ಯಾರ ಹಂಗಿಲ್ಲ
ನಾ ಹೇಳುತಿಹೆನೊ ಈಗ ನೀನಿರದೆ ಬದುಕಿಲ್ಲ
ನೀ ತೊರೆದರು ನಾ ತೊರೆಯೇ ಪ್ರಭುವೇ ಗುರುವೇ
ಗತಿ ನೀ ಮತಿ ನೀ ಸ್ತುತಿ ನೀ ಎನಗೆ ಗುರುವೇ ||೩||

ಅರಿಯದೆ ಬಂದೆ ಅರಿವಾಗುತ ನಿಂತೇ
ಅಂಬಾಸುತಗೆ ಆಶ್ರಯವನೆ ಇತ್ತೇ
ಹೇ ಸಖರಾಯಪುರವರಾಧೀಶ್ವರಾ
ಮರೆತು ಮರೆತು ತೊರೆಯುವೆ ಎನ್ನದಿರೊ ||೪||

Monday, June 4, 2018

ಗುರುನಾಥ ಗಾನಾಮೃತ 
ಹೇಗೆ ಭಜಿಸಲಿ ಗುರುವೇ ಪದಗಳೇ ಸಾಲದಾಗಿದೆ
ರಚನೆ: ಆನಂದರಾಮ್, ಶೃಂಗೇರಿ  


ಹೇಗೆ ಭಜಿಸಲಿ ಗುರುವೇ ಪದಗಳೇ ಸಾಲದಾಗಿದೆ
ಮನದಿ  ಮೂಡುವ ಭಾವಕೆ ಅಂತ್ಯವೇ ಇಲ್ಲದಾಗಿದೆ|

ಮನವು ಮರುಗಿದೆ ಮೂಕ ರಾಗದಿ ನಿನ್ನ ಕಾಣದೆ
ತನುವು ಭಾರವಾಗಿದೆ ನಿನ್ನ ಸೇವೆಯ ತಾ ಮಾಡದೆ| 

ಭಕ್ತಿ ಹೊರತು ಆರ್ಪಿಸಲು ಬೇರೇನಿಲ್ಲಾ  ಗುರುವೇ
ನಿತ್ಯ ನಿನ್ನ ನೆನೆಯದೆ ಮತ್ತೇನೂ ಗೊತ್ತಿಲ್ಲ ಗುರುವೇ|

 ಜೀವಕೆ ಇನ್ಯಾರ ಬಯವಿಲ್ಲ ನಿನ್ನ ಸೇವೆಯಲ್ಲಿದ್ಧಾಗ
 ಹಸಿವಿಲ್ಲಾ  ಧಣಿವಿಲ್ಲ ನಿನ್ನ ನಾಮದ ರಸ ಉಂಡಾಗ|

ಅನ್ಯರ ಚಿಂತೆ ಯಾಕೆ ನೀನಿರುವಾಗ ನನ್ನ ಗುರುವೇ
 ಅಂತರಾಳದಲಿ ನೀ ನೆಲೆ  ನಿಂತರೆ ಸಾಕು ಗುರುವೇ|

ಬೇರೇನೂ ಬೇಡೆನು ನಿನ್ನ ಕರುಣೆಯ ಹೊರತು ಗುರುವೇ
ಸಾರ್ಥಕ ಬದುಕು ನಡೆಸುವ ಬಲ ನೀಡೋ ಗುರುವೇ|
ಗುರುನಾಥ ಗಾನಾಮೃತ 
ತಡಮಾಡದೇ ಬೇಗ ಭಿಕ್ಷೆ ನೀಡೈ ಗುರುವೇ
ರಚನೆ: ಅಂಬಾಸುತ 

ತಡಮಾಡದೇ ಬೇಗ ಭಿಕ್ಷೆ ನೀಡೈ ಗುರುವೇ
ನಿನ್ನಂಗಳದಿ ನಿಂತು ನಾ ಬೇಡುತಿಹೆನು ||ಪ||
ಬಿಡಲಾರೆ ನೀ ಸ್ಥಳವಾ ನೀ ಭಿಕ್ಷೆ ನೀಡದೆ
ಬಡವ ನಾನಯ್ಯ ಬಹು ಬಳಲಿ ಬಂದಿಹೆನಯ್ಯಾ ||ಅ.ಪ||

ಕುಕ್ಷಿಯನೆ ಬಳಸಿ ಬಂದೆ ಖಾಲಿ ಜೋಳಿಗೆ ತಂದೆ
ನೀಡುವವರ ಕಾಣದಾದೇ ಹಸಿದು ಬೆಂಡಾದೆ
ಪುಣ್ಯಾತ್ಮರು ಪೇಳಿದರು ಪೋಗು ಸಖರಾಯಪುರಕೆ
ಅವಧೂತನೆಂಬಾ ಅರಸನಾ ಮನೆಗೆಂದು  ||೧||

ನೀ ಸಾಹುಕಾರನಂತೇ ಈ ಜಗದ ಒಡೆಯನಂತೆ
ಬೇಡಿಸಿಕೊಳ್ಳದೆ ನೀಡಿ ಭಕ್ತರಾ ಪೊರೆವೆಯಂತೆ
ಭಕ್ತವತ್ಸಲನೆಂಬಾ ಬಿರುದ ಪೊತ್ತಿಹೆಯಂತೆ
ದೋಷಪೂರ್ಣರ ದೋಷವನು ನೀ ಕಳೆವೆಯಂತೆ ||೨||

ಭಕ್ತಿ ಎಂಬಾ ಅನ್ನವನು ಉಣಿಸಯ್ಯ ಎನಗೀಗ 
ಜ್ಞಾನವೆಂಬೊ ಹಣವ ನೀಡಯ್ಯ ಬೇಗ 
ವೈರಾಗ್ಯವೆಂಬೊ ಘನ ಧಾನ್ಯವಾ ನೀ ನೀಡಿ
ಎನ್ನ ಜೋಳಿಗೆಯಾ ತುಂಬಿಸೋ ಬೇಗ  ||೩||

ಅವಧೂತ ಗುರುನಾಥ ಸದ್ಭಕ್ತ ಪರಿಪಾಲಕ
ಅಂಬಾಸುತನ ಈ ಮೊರೆಯಾ ಆಲಿಸೊ ಬೇಗ 
ಭಿಕ್ಷೆ ನೀಡೀಗಲೇ ರಕ್ಷೆ ನೀನೇ ಎನಗೆ
ಈ ಶಿಕ್ಷೆ ತಾಳಲಾರೆನೋ ನಿನ್ನ ಕಾಣದೇ ಇರೆನೊ ||೪||

Sunday, June 3, 2018

ಗುರುನಾಥ ಗಾನಾಮೃತ 
ನಾನು ಎನ್ನುವುದೇನಿದೆ ಗುರುವೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ನಾನು ಎನ್ನುವುದೇನಿದೆ ಗುರುವೇ
ಎಲ್ಲವೂ ನೀನೇ ಆಗಿರುವಾಗ |
ನನ್ನದು ಎನ್ನುವುದೇನಿದೆ ಪ್ರಭುವೆ
ಎಲ್ಲವೂ ನಿನ್ನದಾಗಿರುವಾಗ ||

ಕಲಿ ಎಂದರೆ ಕಲಿತುಬಿಡುವೆ  
 ಸಕಲ ವಿದ್ಯೆಗಳನ್ನು
ನುಡಿ ಎಂದರೆ ನುಡಿದುಬಿಡುವೆ
ಅಮೃತವಾಣಿಯನ್ನು |
ಮರೆ ಎಂದರೆ ಮರೆತುಬಿಡುವೆ 
ಅವಿದ್ಯೆಯ ವಿಷಯಗಳನ್ನು 
ನೆಡೆ ಎಂದರೆ ನೆಡೆದುಬಿಡುವೆ
ಜಗದ ವ್ಯಾಪಾರವ ಮುಗಿಸಿ ||

ಇರು ಎಂದರೆ ಇದ್ದುಬಿಡುವೆ
ಕಮಲದೆಲೆಯ ನೀರಿನಂತೆ |
ನಲಿ ಎಂದರೆ ನಲಿದುಬಿಡುವೆ
ಸಂತಸದಿ ಕುಣಿವ ನವಿಲಿನಂತೆ ||
ಮಾಡು ಎಂದರೆ ಮಾಡಿಬಿಡುವೆ
ಮಾಡಲಸಾಧ್ಯವಾದ ಕೆಲಸಗಳನ್ನು 
ಹಾಡು ಎಂದರೆ ಹಾಡಿಬಿಡುವೆ 
ನಿನ್ನ ನಾಮಾಮೃತದ ಸ್ತುತಿಯನ್ನು || ೨ ||

Saturday, June 2, 2018

ಗುರುನಾಥ ಗಾನಾಮೃತ 
ಗುರುವು ಬರುವನಮ್ಮಾ ಮನೆಗೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಗುರುವು ಬರುವನಮ್ಮಾ ಮನೆಗೆ
ಸದ್ಗುರುವು ಬರುವನಮ್ಮಾ |
ಜ್ಞಾನವ ಹಂಚುವನಮ್ಮಾ ಜಗಕೆ
ಸುಜ್ಞಾನವ    ಹಂಚುವನಮ್ಮಾ ||

ಸಹನೆಯ ಕ್ಷೀರವ ಕಾಯಿಸುತಾ
ಶುದ್ಧತೆಯ ನವನೀತವ ಮಥಿಸುತಾ |
ಭಕ್ತಿಪಾರಿಜಾತದ ಕಂಪನು ಬೀರುತಾ
ಚಿತ್ತದೃಢತೆಯ ಪರೀಕ್ಷಿಸುತಾ || ೧ ||

ಭಾವತರಂಗಗಳ ಶಾಂತಿಗೊಳಿಸುತಾ 
ಹೃನ್ಮನಗಳನು ತಣಿಸುತಾ |
ಚಿತ್ತಚಂಚಲತೆಯ ದೂರಮಾಡುತಾ 
ಹೃದ್ದೀಪಕೆ ಆರದ ಬೆಳಕನು ಹಚ್ಚುತಾ || ೨ ||

ಕಾಯುವ ತಪವು ಶ್ರೇಷ್ಠನೆನುತಾ 
ಅದರಲ್ಲೇ ಫಲಹೆಚ್ಚು ಎನುತಾ |
ಎಲ್ಲಾ ಪೂಜೆಗಳು ಶಿವನಿಗೆ ಸಲ್ಲುವುದೆನುತಾ  
ಆತ್ಮಜ್ಞಾನಕೆ ದಾರಿಯ ತೋರುತಾ || ೩ ||

Friday, June 1, 2018

ಗುರುನಾಥ ಗಾನಾಮೃತ 
ಸಖರಾಯಪುರವಾಸಿ ಸದ್ಗುರುನಾಥನ ಬೇಡಿರೊ
ರಚನೆ: ಆನಂದರಾಮ್, ಶೃಂಗೇರಿ  


ಸಖರಾಯಪುರವಾಸಿ ಸದ್ಗುರುನಾಥನ ಬೇಡಿರೊ
ಮನಸಾರೆ ಭಜಿಸುತ ನಿತ್ಯ ಗುರುನಾಥನ ನೆನೆಸಿರೊ|

ಭಜಿಪ ಬಕುತನ ಭವಬಂಧನವ ಕಳೆವ ಗುರು ಇವನು
ನೆನೆದ ಕ್ಷಣದಲಿ ತನ್ನ ಬಕುತನ ಬವಣೆ ತೀರಿಪನೋ|

ಗುರುವು ಮುದದಿ ಬೇಡಲು ಮನಕ್ಲೇಶವ ಕಳೆವನೊ ಮೌನದಿನೀ ಭಜಿಸಲು ಗುರುವು ಮನವ ತೊಳೆವನು|

ಶುದ್ದ ಭಕುತಿಗೆ ಒಲಿದು ತಾ  ಹರಸುವ  ಗುರು ಇವನು
ತೋರಿಕೆ ಆಡಂಬರವ  ತಾ ಬಯಸದ ಗುರು ಇವನು|

ಬೇಡಿ ಬರುವ ಭಕುತರ ಕೂಗು ಆಲಿಸುವ ಗುರು ಇವನು
ಬೆನ್ನ ಹಿಂದೆ ನಿಂತು ಕರುಣದಿ ಹರಸುವ ಗುರು ಇವನು|

ತಪ್ಪ ತಿದ್ದಿ ತನ್ನ ಭಕುತರ ಸಲಹುವ ಗುರು ಇವನು
ಎನೂ ಬಯಸದೆ ನಿತ್ಯ ಹರಸುವ ಗುರು ತಾ ಇವನು|

Monday, May 28, 2018

ಗುರುನಾಥ ಗಾನಾಮೃತ 
ಲಾಲಿ ಹಾಡುವೆ ಮಲಗು ಬಾರೊ ಮಗುವಾಗಿ
ರಚನೆ: ಅಂಬಾಸುತ 


ಲಾಲಿ ಹಾಡುವೆ ಮಲಗು ಬಾರೊ ಮಗುವಾಗಿ
ಲೀಲೆ ತೋರಿಹ ಅವಧೂತನೆ ಎನ್ನೊಡಲೊಳು ನಗುವಾಗಿ ||ಪ||

ಭಕ್ತ ಜನರಿಗೆ ಮಾತೆಯಾಗಿ ಮಮತೆಯುಣಿಸಿದೆ
ಕಷ್ಟಕಾಲದಿ ಕರಪಿಡಿದು ಕಣ್ಣೀರು ಒರೆಸಿದೆ
ಇಷ್ಟು ದಣಿದಿಹ ಧಣಿಯೆ ನಿನಗೆ ನಾನೀಗಾ
ಪಾದವೊತ್ತಿ ಪವಡಿಸೆನ್ನುವೆ ಬಾ ಬೇಗಾ ||೧||

ಜಗಕೆ ಅನ್ನವ ಇತ್ತವನೆ ನಿನಗೆ ನಾನೀಗ
ತುತ್ತು ಮಾಡಿ ಉಣಿಸುವೆ ಪರಮಾನ್ನವ
ಕಷ್ಟ ಹರಿಸುವ ದೊರೆಯೆ ನಿನಗೆ ದೃಷ್ಟಿ ತೆಗೆದು
ಇಷ್ಟದಿಂದಲಿ ಈಶ್ವರ ನೀನೇ ಎಂದು ||೨||

ಸಖರಾಯಪಟ್ಟಣದ ಗುರುನಾಥನೇ
ನಿಜಸುಖವೀವಾ ಅವಧೂತನೇ
ಅಂಬಾಸುತನಾ ಮಡಿಲೇರು ಬಾರೊ
ಈ ಲಾಲೀಯ ಕೇಳುತ ಮಲಗು ಬಾರೊ ||೩||

Sunday, May 27, 2018

ಗುರುನಾಥ ಗಾನಾಮೃತ 
ದೇವದೇವನೇ ಸಖರಾಯಾಧೀಶನೇ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ದೇವದೇವನೇ ಸಖರಾಯಾಧೀಶನೇ 
ದಾರಿತೋರೆಮಗೆ ಅನವರತ ಅವಧೂತನೇ ||

ಈ ಮನೆಯ ನೀನೆಲೆಸೋ ಗುಡಿಯಾಗಲಿ
ಈ ಪದವು ನಿನ್ನ ಜಪಿಸೋ ಹಾಡಾಗಲಿ  |
ಗುರುಭಕ್ತಿ ಮನದಲ್ಲಿ ಸದಾ ಹಸಿರಾಗಿರಲೀ 
ಗುರುಸೇವೆಗೆ ಸತತವೂ ಸಿದ್ಧವಾಗಲೀ || ೧ ||

ಕಾಯುತಿಹೆ ನಿನ್ನಾಗಮನಕೆ ಪ್ರತಿ ಕ್ಷಣವೂ
ಜಪಿಸುತಿಹೆ ನಿನ್ನ ನಾಮವೇ ಅನುಕ್ಷಣವೂ |
ಗುರುತತ್ತ್ವವು ಹೃದಯದಲಿ ಅಚ್ಚೊತ್ತಿರಲಿ
ಗುರುವಾಕ್ಯಗಳ ಸದಾ  ಅನುಸರಣೆಯಿರಲೀ || ೨ ||

ನಿನ್ನ ಹಾರೈಕೆಯೇ ನಮ್ಮ ಬದುಕು‌‌
ನಿನ್ನ ಸಂತೋಷವೇ ನಮಗೆ ಬೆಳಕು |
ಗುರುನಿಷ್ಠೆಯು ಸದಾ ಎನ್ನ ಜೊತೆಯಿರಲಿ 
ಗುರುಪಾದದಲಿ ಮನವೆನ್ನ ಲೀನವಾಗಲಿ || ೩ ||

Saturday, May 26, 2018

ಗುರುನಾಥ ಗಾನಾಮೃತ 
ಹರಸುವ ಹರನೇ ಬಂದ ಭುವಿಗೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಹರಸುವ ಹರನೇ ಬಂದ ಭುವಿಗೆ
ಹರನೇ ನರನಾಗಿ ಬಂದ ಧರೆಗೆ |
ಆ ನರನೇ ಗುರುವಾಗಿ ಒಲಿದ ಮನೆಗೆ 
ಗುರುವೇ ಆನಂದ ತಂದ ಬಾಳಿಗೆ ||

ಮಾತೆಯ ಮಮತೆಯ ತೋರುತಾ
ನಗುತಲೆ ತಪ್ಪನು ತಿದ್ದುತಾ |
ಜನರ ಮುಗ್ಧಭಕ್ತಿಯಾ ನೋಡುತಾ
ಭಕ್ತರ  ಸಂಕಷ್ಟಗಳ ಪರಿಹರಿಸುತಾ || ೧ ||

ಮನಶುದ್ಧಿಯಿಂದ ಬಾಳುವೆ ಮಾಡಿರೆನ್ನುತಾ
ಒಮ್ಮನದಿಂದ ಗುರುವನು ಸೇವಿಸಿರೆನ್ನುತಾ |
ಭಾವಶುದ್ಧಿಯಲಿ ಬದುಕನು ಕಳೆಯಿರೆನ್ನತಾ 
ಕರ್ತವ್ಯದಲ್ಲಿ ದೈವವನು ಕಾಣಿರೆನ್ನುತಾ || ೨ ||

ಸಾತ್ವಿಕರಲ್ಲಿ ನಾನಿಹೆ ಎನ್ನುತಾ
ದುರುಳರಿಗೆ ಮನವ ಶುದ್ಧಿಮಾಡಿರೆನ್ನುತಾ |
ಭವದ ಬದುಕನು ಭಕ್ತಿಯ ತೈಲದಿ ಉರಿಸಿರೆನ್ನುತಾ
ಆತ್ಮಸಾಕ್ಷಾತ್ಕಾರದ ‌ದಾರಿಯ ತೋರುತಾ || ೩ ||
ಗುರುನಾಥ ಗಾನಾಮೃತ 
ವೇಂಕಟಾಚಲನೆಂಬೊ ಗುರು ಸಂಕಟ ಹರಿಸಲು ಬಂದಾನೊ
ರಚನೆ: ಅಂಬಾಸುತ 


ವೇಂಕಟಾಚಲನೆಂಬೊ ಗುರು ಸಂಕಟ ಹರಿಸಲು ಬಂದಾನೊ
ಜಗಕಂಟಕರೆಲ್ಲರ ತುಳಿದಾನೊ ಸಖರಾಯಪುರದೊಳು ನಿಂತಾನೊ ||ಪ||

ಶ್ರೀನಿವಾಸ ಶಾರದಾಸುತನಾಗಿ ಭುವಿಯೊಳು ಜನಿಸ್ಯಾನೊ
ಭಾವಿಕ ಭಕುತರ ಭಾರವ ಕಳೆಯೇ ಭಗವಂತ ಹೀಗೆ ಇಳಿದ್ಯಾನೊ ||೧||

ನಕ್ಕಾನೊಮ್ಮೆ ಸಿಡಿದಾನೊಮ್ಮೆ  ಒಕ್ಕಲ ಮನಕೆ ವರವಾಗ್ಯಾನೆ
ಬೆಕ್ಕಸ ಬೆರಗಾಗೊ ಮಾತಾಡ್ಯಾನೆ ದತ್ತನಾಗಿಯೇ ತಾ ಕಂಡಾನೆ     ||೨||

ಸಾಧು ಪೂಜೆಯ ಮಾಡ್ಯಾನೊ ಸಜ್ಜನರ ಸಂಘವ ನೀಡ್ಯಾನೊ
ಲಜ್ಜೆ ಬಿಟ್ಟು ಭಜಿಸಿರಿ ಗುರು ಒಲಿವನು ನಿಮಗೆ ಎಂದಾನೊ ||೩||

ವೇದ ಬೋಧೆ ಮಾಡ್ಯಾನೊ ವಾದ ಬೇಡ ಎಂದಾನೊ
ಗಾದಿಗೆ ಎಂದೂ ಏರಾನೋ ಗುರು ಗೂಢ ತಿಳಿಯಿರಿ ಅಂದಾನೊ ||೪||

ಅಂಬಾಸುತನಾ ಮನದಾಗೆ ಎಂದೂ ಪದವಾಗಿ ನಲಿದು ಕುಣಿದ್ಯಾನೊ
ಪದಗಳ ಮೂಲಕ ಪಾದಪೂಜೆಯ ನಿತ್ಯ ಪಡೆಯುತ ಮೆರೆದಾನೊ ||೫||
ಗುರುನಾಥ ಗಾನಾಮೃತ 
ಸುಲಭಸಾಧ್ಯನು ಇವನು ಕಾಣಿರೊ
ರಚನೆ: ಅಂಬಾಸುತ 


ಸುಲಭಸಾಧ್ಯನು ಇವನು ಕಾಣಿರೊ
ಸಲಹುವನು ಇವನಲ್ಲಿ ಬೇಡಿರೊ
ಗುರುವರನು ಗುರುತರದ ಭಾಗ್ಯವನ್ನೀಯುವನೋ ||ಪ||

ಜಪವ ಕೇಳನೊ ತಪವ ಕೇಳನೊ
ಪೂಜೆಪುನಸ್ಕಾರವ ತಾನೆಂದು ಕೇಳನೊ
ಸತ್ಯಮಾರ್ಗದಿ ನೆಡೆಯೆ ನಿತ್ಯ ನಿರುತವು ಗುರುವು
ನಿನ್ನೊಡನೆ ಇರುವನೊ ನಿನ್ನನುದ್ಧರಿಸುವನೊ ||೧||

ಮಡಿಯ ಬೇಡನೊ ಮಾಲೆ ಬೇಡನೊ
ಆರತಿ ಗಂಧಾಕ್ಷತೆ ಬೇಡನೊ
ಭಕ್ತಿಯಾಳಕ್ಕಿಳಿದು ಸ್ಮರಿಸೆ ಗುರುವಾ
ಶಕ್ತಿ ನೀಡುವನೊ ನಿನಗೆ ಮುಕ್ತಿಯನ್ನೀಯುವನೊ ||೨||

ಪಾದಪೂಜೆ ಬದಲು ಪದಗಳಾ
ಪಾಲಿಸಿರಿ ಎನ್ನುವನೊ
ಪರಮಪುರುಷನೊ ಇವನು ಪರಮಾತ್ಮನೇ ಆಗಿಹನೊ
ಭುವಿಯ ಭಾರ ಇಳಿಸಲೆಂದೆ ತಾನವತರಿಸಿಹನೊ ||೩||

ಸಖರಾಯಪುರದ ಈ ಸಂತ ಮಹಾಂತ
ಸದ್ಭಕ್ತ ಪಾಲಕ ಅನಂತಾ
ಅಂಬಾಸುತನ ಅನವರತ ಆನಂದನೀತ
ಶ್ರೀವೇಂಕಟಾಚಲ ನಾಮಾಂಕಿತಾ||೪||

Thursday, May 24, 2018

ಗುರುನಾಥ ಗಾನಾಮೃತ 
ಸಖರಾಯಪುರದಿಂದಾ ಸದ್ಗುರು ಸಖರಾಯಪುರದಿಂದಾ
ರಚನೆ: ಅಂಬಾಸುತ 


ಸಖರಾಯಪುರದಿಂದಾ ಸದ್ಗುರು ಸಖರಾಯಪುರದಿಂದಾ
ಬಂದಾ ನೋಡಿರೊ ನಿಂದಾ ನೋಡಿರೊ
ಬೇಡಿದವರ ಮನೆ ಮುಂದೆ ತಾನಿಂದು ||ಪ||

ದಟ್ಟಿ ಸುತ್ತಿಕೊಂಡು ದಿಟ್ಟನಾಗಿ ತಾ
ಗಟ್ಟಿಯಾಗಿ ಪಾದ ಪಿಡಿದವರೆಡೆಗೆ
ಇಷ್ಟ ಪೂರೈಸುವೆ ಕಷ್ಟವ ಕಳೆಯುತಾ
ನಷ್ಟಾದ ಭಯವೇಕೆ ನಾನಿರುವೆ ಎನುತಾ ||೧||

ಆರನೇರಿದವ ಮೂರು ಮೀರಿದವ
ಘನ್ನಪೀಠದಿ ಗುಣಪೂರ್ಣನಾದವ
ಚಾತುರ್ತಾಶ್ರಮವ ಏರಿ ಕುಳಿತವ
ಚಿತ್ತದ ವಿತ್ತದ ಭ್ರಾಂತಿಯ ಕಳೆವವಾ ||೨||

ನೋಟದೆ ನಾಟುವ ಈಟಿಯ ಬೀಸುವವ
ಸತ್ಯಕೂಟದೆ ಸದಾ ವಿಹರಿಸುವವ
ಮನ ರೂಢಿಯ ರಾಡಿಯ ತೊಳೆದು ನಿಂತವ
ಲೋಕ ಗೂಢತೆ ಎಲ್ಲವ ಬಿಡಿಸಿ ತಿಳಿಸಿದವ ||೩||

ವೇಂಕಟಾಚಲನೆಂಬ ನಾಮದಿ ಇರುವವ
ಲೋಕ ಕಂಟಕಕೆ ವಿಷಕಂಠ ತಾನದವ
ಅಂಬಾಸುತನಾ ಅನವರತ ಕಾಯ್ದಿಹಾ
ಅವಧೂತ ಗುರುನಾಥ ಆದ್ಯಂತರಹಿತಾ ||೪||
ಗುರುನಾಥ ಗಾನಾಮೃತ 
ನೀ ‌ ಬಂದೆ ಗುರುನಾಥ ನಿನ್ನಯ ಮನೆಗೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ನೀ ‌ ಬಂದೆ ಗುರುನಾಥ ನಿನ್ನಯ ಮನೆಗೆ
ನೆನೆದರೇ ಸಂತೋಷ ನಮ್ಮಯ ಮನಕೆ ||

ಮಧುರ ಮಲ್ಲಿಗೆಯ ರೂಪವಾಗಿ
ಮನದ ಭಾವದ ಬಿಂಬವಾಗಿ |
ಗುರುವಾಕ್ಯಕೆ ಒಲಿದ ಬಂಧುವಾಗಿ
ಜನ್ಮಜನ್ಮಗಳ ಪುಣ್ಯದ ಫಲವಾಗಿ ||೧ ||

ನಿರ್ಮಲ ಭಕುತಿಗೆ ನೀ ಒಲಿದೆ
ಪರಾಜ್ಞಾನವ ನೀಡಲು ನೀ ಬಂದೆ |
ಭವದಿ ಕನಿಕರಿಸಿ ಕೈಹಿಡಿದೆ 
ಮುಕ್ತಿಯ ಮಾರ್ಗವ ನೀ ತೋರಿದೆ || ೨ ||

ಜನ್ಮಜನ್ಮಗಳ ತಪಸಿನ ಫಲವೋ
ತಾಯ್ತಂದೆಯರು ಮಾಡಿದ ಪುಣ್ಯವೋ |
ಬಹುದಿನದ ನಿರೀಕ್ಷೆಯ ಕಾರಣವೋ
ಶರಣಾಗತಿಯ ಕಣ್ಣೀರಿಗೆ ಸಂದ ವರವೋ || ೩ ||

Tuesday, May 22, 2018

ಗುರುನಾಥ ಗಾನಾಮೃತ 
ಅರಿವು ನೀಡೊ ಗುರುವು ಬಂದಾ ಅರಿತು ನೆಡೆಯಿರೊ
ರಚನೆ: ಅಂಬಾಸುತ 


ಅರಿವು ನೀಡೊ ಗುರುವು ಬಂದಾ ಅರಿತು ನೆಡೆಯಿರೊ
ಮರೆತು ಮರೆವು ಎನ್ನದಿರಿ ಗುರುವ ಅರಿಯಿರೊ ||ಪ||

ಆಡಂಬರದ ಪೂಜೆ ಬಿಟ್ಟು  ಆರತಿ ಮಾಡಿರೊ
ನಿರ್ಮಲ ಮನದಿ ಅವನ ಚರಣಕ್ಕೆರಗಿ ನಮಿಸಿರೊ ||೧||

ಆತ್ಮೋದ್ಧಾರದ ವರವ ಬೇಡಿ ಆನಂದ ಪಡೆಯಿರೊ
ಶಂಕೆ ಬಿಟ್ಟು ಶರಣು ಎನುತ ಅವನ ಭಜಿಸಿರೊ ||೨||

ತಮವ ಕಳೆವ ಜ್ಯೋತಿ ರೂಪ ಗುರುವು ಕಾಣಿರೊ
ತನ್ಮಯದಿ ಕೂಗೆ ಓಡಿ ಬರುವ ನೋಡಿರೊ ||೩||

ಹರಿಯು ಹರನು ಅಜನು ಭವನು ಗುರುವು ನಮಿಸಿರೊ
ಭಕ್ತಿ ಇತ್ತು ಮುಕ್ತಿವೀವ ಗುರುವ ಸ್ಮರಿಸಿರೊ ||೪||

ನಿಜಾನಂದ ನೀಡುವನು ಗುರುವು ಹರಸುತಾ
ನಾವೀಕನಾಗಿ ಭವ ಸಾಗರ ದಾಟಿಸುತಾ ||೫||

ಸಖರಾಯಪುರವಾಸಿ ಗುರುವಾ ಬೇಡಿರೊ
ಅಂಬಾಸುತನ ಪೊರೆವಾತನ ನಿತ್ಯ  ಕಾಣಿರೊ ||೬||
ಗುರುನಾಥ ಲೀಲಾಮೃತ 
ಸದ್ಗುರುವೇ ತಾಯಿ
ರಚನೆ: ಅಂಬಾಸುತ 


ಆಕೆ ಅಖಂಡವಾಗಿ ಹಲವಾರು ವರ್ಷಗಳಿಂದ ಸದ್ಗುರು ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಳು. ಗುರುನಾಥನೇ ಸರ್ವಸ್ವ ಎಂದುಕೊಂಡವಳು. ಮದುವೆಯಾಗಿ ಹಲವಾರು ವರ್ಷಗಳೇ ಕಳೆದರೂ ಆಕೆಗೆ ಸಂತಾನ ಭಾಗ್ಯವಿರಲಿಲ್ಲ. ಈ ನೋವು ಆಗಾಗ ಕಾಡುತ್ತಿದ್ದರೂ ಸಹಾ ಆಕೆ ಗುರುಸೇವೆಯಲ್ಲಿ ಅದನ್ನು ಮರೆಯುತಿದ್ದಳು. ಒಮ್ಮೆ ಆಕೆಯ ಜೊತೆಗಾರರು " ನೀನು ಇಷ್ಟೊಂದು ಭಕ್ತಿಯಿಂದ ಗುರುಸೇವೆ ಮಾಡಿತ್ತಿದ್ದೀಯಲ್ಲಾ, ಆ ಗುರುನಾಥನನ್ನೇ ಕೇಳು, ನನ್ನನ್ನು ಅನುಗ್ರಹಿಸು ಎಂದು" ಎನ್ನುತ್ತಾರೆ. ಏನೇ ಆದರೂ ಹೆಣ್ಣಿಗೆ ತಾಯ್ತನದ ಬಯಕೆ ಅಷ್ಟು ಸುಲಭವಾಗಿ ಹೋಗುವಂಥದ್ದಲ್ಲ, ಹಾಗು ಹೋಗುವುದೂ ಇಲ್ಲ. ಈಕೆಯೂ ನಿಜ ನಾನ್ಯಾಕೆ ನನ್ನ ಗುರುನಾಥರಲ್ಲಿ ಇದನ್ನು ಬೇಡಬಾರದು ಎಂದು ಗುರುನಾಥರಿದ್ದಲ್ಲಿಗೆ ಹೋಗುತ್ತಾಳೆ.

ಈಕೆಯನ್ನು ಕಂಡೊಡನೆ ಆ ಗುರುನಾಥನು, " ಅಮ್ಮಾ ಬಾ , ನಾನೂ ನಿನ್ನ ಮಗನೇ ಅಲ್ವಾ" ಎಂದು ಮಗುವಿನಂತೆ ಮುದ್ದಾಗಿ ಮಾತಾಡುತ್ತಾರೆ. ಈಕೆಯ ಆನಂದಕ್ಕೆ ಪಾರವೇ ಇಲ್ಲದಂತಾಗುತ್ತದೆ. ಗುರುನಾಥನೇ ನನ್ನನ್ನು ತಾಯಿ ಅಂದ ಮೇಲೆ, ಇದಕಿಂತ ಸೌಭಾಗ್ಯ ನನಗೆಲ್ಲಿ, ನಾನೇ ಪುಣ್ಯವತಿ, ನಾನೇ ಪುಣ್ಯವತಿ ಎನ್ನುತ್ತಾ ಆನಂದಾಶ್ರುಗಳನ್ನು ಸುರಿಸುತ್ತಾ ಗುರುನಾಥನಿಗೆ ನಮಸ್ಕರಿಸುತ್ತಾಳೆ.

ಗುರುಶಿಷ್ಯರ ನಡುವೆ ಮಾತು ಇರಲೇ ಬೇಕೆಂದಿಲ್ಲ, ಭಾವ ಸಂವಹನ ಇಲ್ಲಿ ಸೇತುವೆಯಾಗಿರುತ್ತದೆ. ಮತ್ತು ಶಿಷ್ಯನ ಪ್ರಶ್ನೆಗಳಿಗೆ ಅವನ  ಹೃದಯದೊಳಗೇ ಕುಳಿತು ಗುರು ಉತ್ತರಿಸುತ್ತಾನೆ. ಅಂತಃಶ್ರದ್ಧೆ ಇರಬೇಕಷ್ಟೇ....


ಸದ್ಗುರು ಚರಣಾರವಿಂದಾರ್ಪಣಮಸ್ತು

Monday, May 21, 2018

ಗುರುನಾಥ ಗಾನಾಮೃತ 
ಗುರುನಾಥ ನೀ ಬೆಳಗಿದೆ ಈ ಬಾಳನು
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಗುರುನಾಥ ನೀ ಬೆಳಗಿದೆ ಈ ಬಾಳನು
ಮಾತೆಯಾಗಿ ನೀ ಸಲಹಿದೆ ನಮ್ಮನು ||

ಅಜ್ಞಾನದ ಅಂಧಕಾರದಿ ನಾ ಅಡಗಿದ್ದೆ
ಮೋಹದಾ ಮುಸುಕಿನಲಿ ನಾ ಮುಳುಗಿದ್ದೆ |
ಮಿಂಚಾಗಿ ಬಂದೆ ನೀ ನನ್ನ ಮನದಲಿ
ಆಸರೆಯಾಗಿ ನಿಂತೆ ಜೊತೆಯಲಿ || ೧ ||

ಕಲೆತೆ ನಮ್ಮ ವಾಗರ್ಥಗಳಲಿ
ಬೆರೆತೆ ನನ್ನ ಮನೆಮನಗಳಲೀ |
ಬೆಳಗಿದೆ ಸುಜ್ಞಾನದಾ ಜ್ಯೋತಿಯ
ತೋರಿಸಿದೆ ಅರಿವಿನಾ ಮನೆಯ  || ೨ ||

ಅಮಿತಜ್ಞಾನದಾ ಆಗರವಾಗಿಹೆ
ಸ್ವಾತ್ಮಬೋಧದ ಬೋಧಕವಾಗಿಹೆ |
ಮನೋವ್ಯಾಪಾರದಾ ದರ್ಪಣವಾಗಿ
ಆತ್ಮಜ್ಞಾನಪಡೆಯಲು  ಸ್ಫೂರ್ತಿಯಾಗಿ || ೩ ||
ಗುರುನಾಥ ಗಾನಾಮೃತ 
ಪಾಲಿಸಿ ಅವನಾ ಪದಗಳನು
ರಚನೆ: ಅಂಬಾಸುತ 


ಪಾಲಿಸಿ ಅವನಾ ಪದಗಳನು
ಪೂಜಿಸಿರೆಮ್ಮ ಗುರುನಾಥನಾ ||ಪ||
ಪರಮಪಾವನ ಪುಣ್ಯ ಪುರುಷನಾ
ಪರಂಧಾಮ ಅವಧೂತನಾ ||ಅ.ಪ||

ಮಾತಾಪಿತರೆ ಮಹಾದೇವ ದೇವಿಯರು
ಗುರುಹಿರಿಯರೆ ಪರಬ್ರಹ್ಮ ಸ್ವರೂಪರು
ಗುರುತರ ಭಾಗ್ಯವಿದು ಸೇವಿಸೊ ಅವರನು
ಎನುತ ಎಮ್ಮನುದ್ಧರಿಸಿಹ ಗುರುವರನು ||೧||

ಬಯಸಬೇಡ ಭಾವ ಹೊರಹಾಕಬೇಡ
ಆಡಬೇಡ ಮೌನ ನೀ ಬಿಡಬೇಡ
ಹೇಳಬೇಡ ಕಲಿವುದ ನಿಲಿಸಬೇಡ
ಎನುತ ಎಮ್ಮನುದ್ಧರಿಸಿಹ ಗುರುವರನು ||೨||

ನುಡಿಯೊಳು ಮಡಿ ಇರಲಿ ಸದಾ
ಮನದೊಳು ದೈವದ ಗುಡಿ ಇರಲಿ
ದೇಹ ಗುರುವಲ್ಲ ದಾಹ ತರವಲ್ಲ
ಎನುತ ಎಮ್ಮನುದ್ಧರಿಸಿಹ ಗುರುವರನು ||೩||

ಇಚ್ಚೆ ಅವನದು ಚರ್ಚೆ ಅವನದು
ಸ್ವೇಚ್ಚೆಯಿಂದಲಿ ನೀನಿರಬೇಡ
ಕೂಡಿಡಬೇಡ ಅದ ಕೆಡಿಸಬೇಡ
ಎನುತ ಎಮ್ಮನುದ್ಧರಿಸಿಹ ಗುರುವರನು ||೪||

ಕರ್ಮದ ಮರ್ಮವ ನೀನರಿಯೊ
ಧರ್ಮದಿಂದಲೇ ನೀ ನೆಡೆಯೊ
ಶರ್ಮತನದ ಶಕ್ತಿಯ ಅನುಭವಿಸೋ
ಎನುತ ಎಮ್ಮನುದ್ಧರಿಸಿಹ ಗುರುವರನು ||೫||

ಸಖರಾಯಪಟ್ಟಣದ ಗುರುನಾಥ
ಅಂಬಾಸುತನ ಅನವರತ ಪೊರೆವಾತ
ನಿಜಧಾತ ಮುಕ್ತಿದಾತ ಈತ ಶಕ್ತಿಧಾತ
ಅವಧೂತ ಗುರುನಾಥ ಸದ್ಗುರುನಾಥ ||೬||