ಒಟ್ಟು ನೋಟಗಳು

Wednesday, August 8, 2018

ಗುರುನಾಥ ಗಾನಾಮೃತ 
ಇಂಥ ಗುರು ನಿಮಗೆಲ್ಲಿ ದೊರಕ್ಯಾನೊ
ರಚನೆ: ಅಂಬಾಸುತ 

ಇಂಥ ಗುರು ನಿಮಗೆಲ್ಲಿ ದೊರಕ್ಯಾನೊ ಈ ಧರೆಯೊಳಗೆ
ಇಂಥ ಗುರು ನಿಮಗೆಲ್ಲಿ ದೊರಕ್ಯಾನೊ ||ಪ||
ಕಾಂತನಂತೆ ಬಂದು ಅನಂತ ಚಿಂತೆಗಳಿಗೆ ಅಂತ್ಯ ಹಾಡಿ
ಅಂತರಂಗವ ನೋಡಿ ಅರಿವಿನ ಜ್ಯೋತಿ ಬೆಳಗುವ ಧೀಮಂತ ||ಅ.ಪ||

ದೃಷ್ಟಿಯಿಂದಲೇ ದುಷ್ಟತನ ಕಳೆವಾ
ಬಹುಶ್ರೇಷ್ಟತೆಯನೆ ಎತ್ತಿಹಿಡಿದು ಪಾಲಿಸಿರಿ ಎನುವಾ
ಪದಪೋಣಿಸಿ ವೇದವಾಕ್ಯಗಳನ್ನದರೊಳಗಿರಿಸಿ
ಪರಮಪದವನ್ನೀಯುವ ಪರಮಪಾವನ ನಾಮಕ ||೧||

ವಿತ್ತವನ್ನೆಂದಿಗೂ ಮುಟ್ಟ್ಯಾನೋ
ಭಕ್ತರ ಚಿತ್ತವನ್ನೆಂದಿಗೂ ಬಿಟ್ಟು ಹೋಗ್ಯಾನೋ
ಅತ್ತು ಕರೆಯಲು ಬೇಕು ಎನ್ನದೆ ಪಕ್ಕದಲ್ಲೇ ತಾನಿದ್ದು
ಚೊಕ್ಕವಾಗಿರಿಸೆಲ್ಲರ ಚಿಕ್ಕತನವ ದೂರಿರಿಸೊ ||೨||

ಮೆರೆದು ಮಹತ್ತೆನಿಸಿಕೊಳ್ಳಾನೊ
ಈ ಚಿನುಮಯಾತ್ಮಕ ಮರೆಯೊಳಗಿನ ಮೂರ್ತಿರೂಪನೊ
ಅಗಣಿತದ ಲೀಲೆಯನು ತೋರುತ ತ್ರಿಜಗ ವ್ಯಾಪಕನಾಗಿ ನಿಂತನೊ
ಸುಜನರಿಗೆ ಸುಮವಾಗಿ ಕಂಡನೆ ದುರ್ಜನರಿಗೆ ಸಿಂಹನೊ ||೩||

ಸಖರಾಯಪುರದೊಳಿಹನೊ
ಆನಂದದಿ ಆತ್ಮಸಖನೆನಿಸಿಹನೊ
ಅವಧೂತನಾಗಿಹನೊ ಆದಿ ಅಂತ್ಯವ ಮೀರಿಹನೊ
ಅಂಬಾಸುತನ ಪದಕೆ ಮುದದಿಂದ ನಲಿದಿಹನೊ ||೪||
ಗುರುನಾಥ ಗಾನಾಮೃತ 
ಭಜಕಜನ ಪಾಲಕ ಗುರುದೇವ 
ರಚನೆ: ಅಂಬಾಸುತ 

ಭಜಕಜನ ಪಾಲಕ ಗುರುದೇವ
ನಿನ್ನ ಭಜಿಸುವೆನನವರತ ಉದ್ಧರಿಸೊ ದೇವಾ
ಎಮ್ಮನುದ್ಧರಿಸೊ ದೇವಾ ||ಪ||

ತಂದೆ ತಾಯಿ ಬಂಧು ಬಳಗ
ಸಖ ಸರ್ವಸ್ವ ನೀನೆಂದು ನಂಬುತಲಿ
ನಿನಗೆ ಶರಣಾಗುತಲಿ
ಮಾಯೆಯ ಅಳಿಸೆನ್ನುತಲೀ
ಸುಜ್ಞಾನದ ಹಾದಿಯೊಳಿರಿಸೆನ್ನುತಲಿ
ಹರಸೆನ್ನುತಲೀ ||೧||

ಕನಸಿನಾಚೆಯೊಳೆಮ್ಮನಿರಿಸಿ
ಕಂದನೆನ್ನುತ ಕುಂದುಗಳನ್ನೆಲ್ಲ ಕ್ಷಮಿಸಿ
ಮನವಾ ಸ್ಥಿರಗೊಳಿಸಿ
ಅರಿವಿನಾನಂದವ 
ಸಲಹೊ ಅರಿವಿನ ಅರಸು ನೀನೆನ್ನುತಲೀ
ನಾನೆಂಬುದ ಕಳೆಯುತಲೀ ||೨||

ಸಖರಾಯಪುರದೊಳು ನೆಲೆಸಿ
ಅತ್ಮಸುಖದಾ ಸಾರವನು ಸಾತ್ವಿಕರಿಗುಣಿಸಿ
ಸಚ್ಚಿದಾನಂದನೆನಿಸಿ
ಅಂಬಾಸುತನಾ ಪಾಲಿಸಿ
ಜನ್ಮ ಜನ್ಮಾತಂತರದಾ ಪುಣ್ಯದ ಫಲ ತಾನೆನಿಸಿ
ಪೂರ್ಣತ್ವವ ಬೋಧಿಸಿದೆ ||೩||

Monday, August 6, 2018

ಗುರುನಾಥ ಗಾನಾಮೃತ 
ಎಲ್ಲಾ ನಿನ್ನದೇ ಗುರು ಈ ಜಗ ಈ ಮನ ಈ ತನುವು
ರಚನೆ: ಆನಂದರಾಮ್, ಶೃಂಗೇರಿ  


ಎಲ್ಲಾ ನಿನ್ನದೇ ಗುರು ಈ ಜಗ ಈ ಮನ ಈ ತನುವು
ನೀನಲ್ಲದೆ ಇನ್ನೇನಿದೆ ಜಗದಿ ಎಲ್ಲಾ ಗುರುಮಯವು|

ನಾನು ನನ್ನದು ಎಲ್ಲಾ  ಭ್ರಮೆಯು ನೀನೇ ಸತ್ಯವು
ಅಣು ಅಣುವು ತುಂಬಿ ತೋರುತ್ತಿದೆ ನೀನೇ ನಿತ್ಯವು|

ಏನು ನಿನ್ನ ಲೀಲೆಯೋ ಗುರುವೇ ಅರಿವಿಗೆ ಬಾರದು
ಎಲ್ಲಾ ನಿನದೆಂದು ನಿನಗರ್ಪಿಸೆ ಎಲ್ಲಾ ಕಳೆಯುವುದು|

ಮನ ನಿಲ್ಲದೆ ಎಲ್ಲೋ ಓಡುವುದು ಬಾರವಾಗುವುದು
ನಿನ್ನ ಬಜಿಸಿದೊಡೆ ಎಲ್ಲೆಮೀರದೆ ಶಾಂತವಾಗುವುದು|

ಆಸೆ ಬುರುಕನ ಮನವಿದು ಏನನೋ ಬಯಸುವುದು
ನಿನ್ನ ನಾಮವು ನಿಜ ಬಕುತಿಯ ದಾರಿ ತೋರುವುದು|

ನಿರರ್ಥಕ ಜೀವನ ಬೇಡವೋ ಗುರು ಅರ್ಥ ನೀಡೋ
ನೀ ನಡೆವ ಹಾದಿಯಲಿ  ದೂಳುಮಾಡಿ ನಡೆದಾಡೋ|

ಗುರುನಾಥ ಗಾನಾಮೃತ 
ಅರಿಯದಾದೆ ಗುರುವೇ ನಿನ್ನ ತಿಳಿಯದಾದೆ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಅರಿಯದಾದೆ ಗುರುವೇ ನಿನ್ನ ತಿಳಿಯದಾದೆ ಗುರುವೇ
ಎನೂ ಅರಿಯದೆ ಎಲ್ಲಅರಿತಂತೆ ನಟಿಸಿಮೂಡನಾದೆ|

ಏನು ಬಲ್ಲನು ಇವ ಬರೀ ಒಣಜಂಬದ ಗೂಡಿವನು
ನುಡಿವನು ಇವನು ಒಣ ವೇದಾಂತವನು ಮೂಡನು|

ಬಲ್ಲವರ ಸಂಗ ಮಾಡನುಇವನು ನಿನ್ನನೇನು ಬಲ್ಲನು
ಅಲ್ಪನು ಇವನು ನಾನೇ ಮೇಲೆ0ದು ತಿಳಿದಿಹನು|

ಮನಶುದ್ದಿ ಇಲ್ಲದ ಇವನು ಬಕುತಿ ಏನು ಮಾಡುವನು
ತೋರಿಕೆಯ ಬಕುತಿಯನು ತೋರಿ ಬದುಕುತಿಹನು|

ಹಾಡಿ ಹೊಗಳುವ ಇವ ಬರೀಪದಗಳಜೋಡಿಸಿಹನು
ಮನವ ಹರಿದೊಡೆ ಬಿಟ್ಟು ನಿಜ ಬಕುತಿ ಎನ್ನುವನು|

ಇನ್ನು ಸಾಕು ಗುರುವೇ ಕರುಣೀಸೋ ಇನ್ನು ಇವನನ್ನು
ಬಲು ದೈನ್ಯದಿ ಬೇಡಿಹನು ಗುರುವೇ ಕರುನಿಸೆಂದು|
ಗುರುನಾಥ ಗಾನಾಮೃತ 
ಅಳುಕದಿರು ಮನವೇ 
ರಚನೆ: ಅಂಬಾಸುತ 

ಅಳುಕದಿರು ಮನವೇ 
ಅರಿವನ ಗುರು ನಿನ್ನೊಡನೆ ಇದ್ದಾನೆ ||ಪ||
ಅರಿಗಳನೆಲ್ಲಾ ಗುದ್ದ್ಯಾನೆ
ಆತ್ಮಸುಖವನ್ನೀಯುತಾನೇ ||

ಕಂಡದ್ದೆಲ್ಲಾ ಒಳಿತಾಗಿ
ಅನೇಕತೆಯೊಳು ಏಕತೆಯಾಗಿ
ಅರಸುವುದ ಮರೆಸುತ್ತಾನೇ
ನಿನ್ನೊಳಗಿನ ಅರಸನ ತೋರುತ್ತಾನೆ ||೧||

ಉಂಡದ್ದೆಲ್ಲಾ ಸಿಹಿಯಾಗಿ
ಆತ್ಮಸುಖದಾ ರಸ ಧಾರೆಯಾಗಿ
ಹರಿಸುತ್ತಾನೆ ತಾ ಹರಸುತ್ತಾನೆ
ನಿನ್ನನ್ನೇ ಹರನಾ ಮಾಡುತ್ತಾನೆ ||೨||

ಬಾಧೆ ಕಳೆದು ಬೋಧನಾಗಿ
ಬುದ್ಧನ ಬದ್ದತೆ ಉದಾಹರಣೆಯಾಗಿ
ಕಲಿಸುತ್ತಾನೆ ಕಲಿಯ ಮರೆಸುತ್ತಾನೆ
ಮೌನದಿ ನಿನ್ನ ನಿಲ್ಲಿಸುತಾನೆ ||೩||

ಅಂಬೆಯನ್ನಾಗಿಸುತ್ತಾನೆ
ಸುತರನ್ನೆಲ್ಲಾ ಸೇರಿಸುತ್ತಾನೆ
ಸಖನಾಗಿ ತಾ ರಾಯನಾಗಿ
ಪುರಕೆ ದಾರಿಯ ತೋರುತಾನೆ ||೪||
ಗುರುನಾಥ ಗಾನಾಮೃತ 
ಸಾವಧಾನದಿಂದ ಸೇವೆ ಮಾಡಿ ಧನ್ಯರಾಗಿರೊ
ರಚನೆ: ಅಂಬಾಸುತ 

ಸಾವಧಾನದಿಂದ ಸೇವೆ ಮಾಡಿ ಧನ್ಯರಾಗಿರೊ
ಸಗುಣರೂಪಿ ಗುರುವ ಮೂರುತಿಯ ಮನದಿ ತುಂಬಿಕೊಳ್ಳರೊ ||ಪ||

ವಿಷಯವೆಂಬೊ ವಿಷವ ಬಿತ್ತದೆ ಪರವಶವು ನೀವಾಗಿರೊ
ರಾಗದ್ವೇಶವ ರಾಚೊ ಮಾತನು ಆಡದೆ ಮೌನವಾಗಿ ||೧||

ಕಳೆಯೊ ಸಮಯವ ಕೂಡಿಕೊಂಡು ಕೊಳೆಯ ಕಳೆದುಕೊಂಡು
ತನು ಮನವ ದಂಡಿಸಿ ತನ್ಮಯತೆಯನೇ ಇರಿಸೀ ||೨||

ಅರಿಗಳೆಲ್ಲರ ಮರೆತು ಅರಿವ ಕೊಡುವ ದೊರೆಯ ಅರಸೀ
ಸರಸದಿಂದ ಭಕ್ತಿ ರಸದಿ  ಗುರುವಿನೊಡನಾಡುತಾ ||೩||

ಸಮರ್ಥ ಸದ್ಗುರು ಸುಲಭ ಸಾಧ್ಯನು ಸೇವೆಗೆಂದಿಗೂ
ಅಂಬಾಸುತನ ಪದದೊಳಡಗಿಹ  ಹೇಳಲೆಂದಿಗೂ ||೪||
ಗುರುನಾಥ ಗಾನಾಮೃತ 
ದೂರ ತಳ್ಳಬೇಡ ಅರಿವೆ ದೂರ ತಳ್ಳಬೇಡ
ರಚನೆ: ಅಂಬಾಸುತ 

ದೂರ ತಳ್ಳಬೇಡ ಅರಿವೆ ದೂರ ತಳ್ಳಬೇಡ
ದಾರಿಹೋಕ ನಾನಲ್ಲ ದೈನ್ಯತೆಯನು ಮರೆವುದಿಲ್ಲ ||ಪ||

ಬಾಗಿ ಭೋಗ ಬಿಟ್ಟು ವಿರಾಗಿಯಾಗಿ ಬಂದಿಹೆನು
ರಾಗಿಗಾಗಿ ಅಲ್ಲವೇ ಅಲ್ಲ ತ್ಯಾಗಿಯೆಂದು ಮೆರೆವುದಿಲ್ಲ ||೧||

ಮುಚ್ಚಿಡಲು ಮನಸು ಇಲ್ಲ ಬಿಚ್ಚಿಡಲು ಭಯವು ಇಲ್ಲ
ಬಚ್ಚಿಡಲು ಏನೇನೂ ಇಲ್ಲ ಹುಚ್ಚುತನವೊ ತಿಳಿಯೆನಲ್ಲ ||೨||

ಹೆಣಕೂ ಉಸಿರು ಹಣದಿಂದ ಕ್ಷಣಿಕವೆಂದು ತಿಳಿವುದಿಲ್ಲ
ನೀ ಸಿಗದೇ ನಿಜಸುಖವೂ ಇಲ್ಲ ಸಿಕ್ಕರೆ ಜಗಕೆ ಸಖ ನಾನಲ್ಲ ||೩||

ಮೂರ್ತಿರೂಪವಾಗಿ ನೀನು ಕಾಣುವೆಯಂತೆ ಗುರುವೆನಿಸಿ
ಅಂಬಾಸುತಗೆ ಸರಸವೆನಿಸೊ ಪದದೊಳಗೆ ಅರಸನಾಗಿ ||೪||
ಗುರುನಾಥ ಗಾನಾಮೃತ 
ಕುಣಿಯುತ ಬಾರೋ ನಲಿಯುತ ಬಾರೋ
ರಚನೆ: ಅಂಬಾಸುತ 

ಕುಣಿಯುತ ಬಾರೋ ನಲಿಯುತ ಬಾರೋ
ಕನಿಕರ ತೋರಿ ಒಲಿಯುತ ಬಾರೋ
ಭಕ್ತರ ಭಾವಕೆ ನಗುತಲಿ ಬಾರೊ
ಬೇಡುವೆ ಸಖರಾಯಪುರಾಧೀಶನೆ ಬಾರೋ ||

ಮಂಗಳ ವಾದ್ಯದೊಡನೆ ಮಂಗಳವೆನ್ನುತ ಬಾರೋ
ಸುಮಂಗಲಿಯರಿಂ ಆರತಿ ಸ್ವೀಕರಿಸುತ ಬಾರೋ
ಸರ್ವಮಂಗಳೆಯೊಡಗೂಡುತ ಬಾರೋ
ಸರ್ವರಕ್ಷಕ ಪ್ರಭುವೇ ಸಂಭ್ರಮದಿ ನೀ ಬಾರೋ ||

ಸಖರಾಯಪುರವಾಸನೇ ಸರಸದಿ ಬಾರೋ
ಸುಖವೀಯುವ ಮಹನೀಯನೆ ಸಡಗರದಿ ಬಾರೋ
ಅಂಬಾಸುತನಂತರಂಗದ ಪ್ರಭುವೆ ಅರಿವಾಗಿ ಬಾರೋ
ಅಡಿಗಡಿಗೆರಗುವೆ ಆದರೂಪನಾಗಿ ಬಾರೋ ||
ಗುರುನಾಥ ಗಾನಾಮೃತ 
ತರಗೆಲೆಯಂತೇ ಬದುಕು
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ತರಗೆಲೆಯಂತೇ ಬದುಕು
ಎತ್ತ ಸಾಗುವುದು ಗುರಿಯಾ ಮರೆತು ||

ಗುರುನಾಮವೆಂಬ ತಂಪಾದ ಗಾಳಿ ಬೀಸಿ
ಗುರುಗೀತೆಯೆಂಬ ಗಂಧದಿ ತೇಲಿ |
ಸೇರಿತು ತರಗೆಲೆ ಗುರುಸಾನಿಧ್ಯವ
ಪಡೆಯಿತು ದಿವ್ಯ ಗುರುಪಾದಸ್ಪರ್ಶವ || ೧ ।।

ಕಂಡಿತದದಕೆ ಅಪೂರ್ವ ದಿವ್ಯಚೇತನಾ
ಸ್ವಾನಂದದಿ ನಗುವ ಪೂರ್ಣಚಂದಿರನಾ |
ಧನ್ಯತೆಯಿಂದ ಪಡೆಯಿತು ಮಾನಸೋಲ್ಲಾಸ 
ಜನ್ಮಾಂತರದ ಚಿದ್ವಿಕಾಸ || ೨ ||

ಮತ್ತೆ ಎತ್ತ ಗಾಳಿ ಬೀಸುವುದೋ 
ಯಾವ ಬಂಧನಕೆ ಸಿಲುಕುವುದೋ |
ಇರುವಷ್ಟು ಘಳಿಗೆ ಸಿಗಲಿ ಸಾರ್ಥಕತೆ
ಗುರುಛಾಯೆಯಡಿಯಲಿ ನಿಶ್ಚಿಂತತೆ || ೩ ||

Wednesday, August 1, 2018

ಗುರುನಾಥ ಗಾನಾಮೃತ 
ಗತಿ ನೀನೇ ಗುರುನಾಥ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಗತಿ ನೀನೇ ಗುರುನಾಥ 
ಈ ಭವದಲಿಹ ನಮಗೆ |
ಮತಿ ನೀನೇ  ಗುರುದೇವ
ಈ ಅಜ್ಞಾನದಲಿಹ  ನಮಗೆ ||

ಮಾತಾಪಿತನು ನೀನು
ಜಗದ ಸಿರಿಯೇ ನೀನು |
ಬಂಧುಸಖನು ನೀನೇ
ನನ್ನ ಮನದೊಡೆಯನೂ ನೀನೇ ||

ನಾ ನುಡಿವ ಮಾತು ನೀ‌ನು
ನಾ ಸ್ಮರಿಸೋ ನಾಮ ನೀನು |
ನಾ ಪೂಜಿಸುವ ದೈವ ನೀನು 
ನಾ ಭಜಿಸುವ ಶಕ್ತಿ ನೀನು ||

ನನ್ನ ಜೀವನವೇ‌ ನಿನ್ನ ಭಿಕ್ಷೆ 
ಸಿಗಲಿ ನನಗೆ ನಿನ್ನ ರಕ್ಷೆ |
ಪದಸೇವೆಯ ಭಾಗ್ಯವ ಕೊಡು ನೀನು
ಕೇಳುವುದೊಂದೇ ನಿನ್ನಲ್ಲಿ ನಾನು ||

ಗುರುನಾಥ ಗಾನಾಮೃತ 
ಯಾರಿಹರೈ ಈ ಪ್ರಭುವಿನಂತವರು
ರಚನೆ: ಅಂಬಾಸುತ 

ಯಾರಿಹರೈ ಈ ಪ್ರಭುವಿನಂತವರು
ಯಾರಿಹರೈ ಎನ್ನ ಗುರುವಿನಂಥವರು ||ಪ||
ತ್ರಿಜಗವಂದಿತರು ತ್ರಿಗುಣಾತೀತರು
ತ್ರಿಮೂರ್ತಿರೂಪರು ತ್ರಿಭುವನ ಪಾಲಕರು ||ಅ.ಪ||

ನೋಟದಲೇ ಮನ ಕಲ್ಮಷ ಕಳೆವರು
ನಾಟುವ ಮಾತನ್ನಾಡುವಂಥವರು
ನಾಟಕೀಯತೆಯ ನಡೆ ನಡೆ ಎನ್ನುವವರು
ದಿಟ್ಟ ಮೂರುತಿಯಾಗಿ ಕಂಡಂಥವರು ||೧||

ನಾಲ್ಕಾಶ್ರಮವಾ ಮೀರಿದಂಥವರು
ನಾಕವ ಇಳೆಯಲೇ ತೋರಿದಂಥವರು
ನಾಡಿ ಹಿಡಿಯದೆ ಭವ ರೋಗ ಕಳೆವವರು
ನೋಯಿಸದಾ ಹಾಗೆ ನನ್ನತನ ಕಿತ್ತವರು ||೨||

ನಕ್ಕಾಗ ಹರಿಯಂತೆ ಕಂಡವರು
ಸಿಟ್ಟುಗೊಂಡಾಗ ನರಹರಿ ಇವರು
ಗಟ್ಟಿಯಾಗಿ ಬಿಡದೆ ಪಾದವ ಹಿಡಿಯೇ
ಜಗದಾ ಗುಟ್ಟನು ಬಿಚ್ಚಿಡುವವರು ||೩||

ಸಖರಾಯಪುರದೊಳು ಸಖನಾಗಿರುವರು
ಆತ್ಮಸುಖವೀಯೇ ಕಾದಿರುವವರು
ಅಂಬಾಸುತನ ತಾಯಂತೆ ಕಾದಿರುವವರು
ಜಗದಂಬೆ ಪಾದವ ತೋರುವಂಥವರು ||೪||

Tuesday, July 31, 2018

ಗುರುನಾಥ ಗಾನಾಮೃತ 
ಪಾಲಯಮಾಂ ಗುರುನಾಥ
ರಚನೆ: ಅಂಬಾಸುತ 

ಪಾಲಯಮಾಂ ಗುರುನಾಥ
ಪರಿ ಪಾಲಯಮಾಂ ಗುರುನಾಥ ||ಪ||
ಪರಮಪದವೀಯೊ ಎಂದು ಬೇಡೆನು ನಾ ಪರಮಪುರುಷನೆ
ನಿನ್ನ ಪಾದಪದುಮದ ಧೂಳನ್ನೆನ್ನಾ ಶಿರದ ಮೇಲಿರಿಸೊ ||ಅ.ಪ||

ಹಂಗಿರದಾ ಶ್ರೀರಂಗನ ರೂಪನೆ
ಸತ್ಸಂಗವನಿತ್ತು ನೀ ಸಲಹಯ್ಯ
ಭಂಗವಿಧೂರನೆ ನಿನ್ನ ಮರೆಯದಾ ಹಾಂಗೆ ಜ್ಞಾನ ಗಂಗೆಯನು ಸ್ಪುರಿಸಿ
ಮಂಗತನವ ಮರೆಸುತ ದೇವನೆ ನೀ ಎನ್ನಂತರಂಗದೊಳು ಬಂದು ನೆಲೆಸೊ ||೧||

ಗುರುದೇವನೆ ಗುಣಪರಿಪೂರ್ಣನೆ
ಘನ್ನ ಮಹಿಮೆಯಾ ತೋರಯ್ಯಾ
ಆರರಿಗಳ ಅಟ್ಟಾಡಿಸಿ ಓಡಿಸಿ ಆದಿಮೂರುತಿ ನಿನ್ನ ಅರ್ಚನೆಗಯ್ಯುವ
ನಿಜ ಆನಂದವ ನಿರುತವು ನೀನಗೆ ಪಾಲಿಸಲೇ ಬೇಕೈ ಗುರುವೇ ||೨||

ಶ್ರೀಕೃಷ್ಣಯೋಗೀಂದ್ರ ಅವತಾರಿ
ನಾರಾಯಣ ಯೋಗೀಂದ್ರ ರೂಪಿ
ಸಖರಾಯಪುರದೊಳು ಸಾತ್ವಿಕ ರೂಪದಿ ಬಂದ ಶಿಷ್ಯರನು ಸಲಹುತಲಿರುವೆ
ಅಂಬಾಸುತನ ಈ ಮೊರೆಯನು ಕೇಳುತ ಕನಿಕರದಿ ದರುಶನವನ್ನೀಯೊ ||೩||
ಗುರುನಾಥ ಗಾನಾಮೃತ 
ಒಲ್ಲದ ಮನದಿಂದ ಕೈ ಮುಗಿದು ಬೇಡಿದೊಡೆ
ರಚನೆ: ಆನಂದರಾಮ್, ಶೃಂಗೇರಿ  


ಒಲ್ಲದ ಮನದಿಂದ ಕೈ ಮುಗಿದು ಬೇಡಿದೊಡೆ
ಎಲ್ಲೋ ಮನವಿತ್ತು ಕೂಗಿದೊಡೆ ಬರಲಾರನು
ಗುರುರಾಯ ಸಖರಾಯಪುರದ ಮಹನೀಯನು|
                                                      
ನಡೆದಾಡುವ ದೇವನು ನಿನ್ನ ಎಲ್ಲಾ ನಡೆಯ ಬಲ್ಲನು
ಕಣ್ತಪ್ಪಿಸಿ ನಡೆಯದೇನು ಅವ ಎಲ್ಲಾ  ಬಲ್ಲ ದೇವನು|
                                             
ಅವಕಾಶವಾದಿಯಂತೆ ಭಕ್ತಿ  ತೋರಿದೊಡೆ ನಾನು
ಮರುಳಾಗಿ ಕರುಣಿಸನು ಎಂದೂ ನನ್ನ ಗುರುದೇವನು

ಪ್ರಚಾರ ಪ್ರಿಯನಲ್ಲ ನನ್ನ ಗುರು ಏನೂ ಬಯಸನು
ಅಡೆತಡೆಯಿಲ್ಲದೆ ಗುರು ಸದಾ ಸ್ವಪ್ರಕಾಶಿಸುವವನು|

ಏನೂ ಬಯಸದ ಗುರು ಇರುವುದೆಲ್ಲ ಕೊಡುವನು
ನಿನ್ನರ್ಪಣೆಯ  ಎಲ್ಲರಿಗೂ ಅವ ಸಮರ್ಪಿಸುವನು|

ಅರ್ತತೆಯ ಕೂಗಿನ  ನಿಜ  ಬಕುತನ  ಪ್ರಿಯ ಇವನು
ನಿಜಬಕುತನ ತಿದ್ದಿತೀಡಿ ಸದಾ ಸರಿದಾರಿ ತೋರುವನು

ಬೃಂದಾವನದಲಿ ನೆಲಸಿಹನು ನಮ್ಮೆಲ್ಲರ ದೇವನು
ಸಕರಾಯಪುರವೆಂಬ ಪುಣ್ಯ ಭೂ ವೈಕುಂಠದೊಳು|
ಗುರುನಾಥ ಗಾನಾಮೃತ 
ನೀ ಕಾಡಬೇಡವೊ ನೀ ದೂಡಬೇಡವೊ
ರಚನೆ: ಅಂಬಾಸುತ 

ನೀ ಕಾಡಬೇಡವೊ ನೀ ದೂಡಬೇಡವೊ
ನಾ ನಿನ್ನ ದಾಸನೊ ಸದ್ಗುರುರಾಯ ||ಪ||
ನಾ ಕಾಡುವೆ ನಾ ಬೇಡುವೆ
ನಿನ್ನಡಿಯನೆ ಸದಾ ||ಅ.ಪ||

ದೇಹಿ ಎನ್ನುತ ನಿನ್ನ ಕರುಣಾದಾಹಿಯಾಗಿ
ಬಂದಿಹೆನೊ ಬಳಲುತ ಭವದ ಮನೆಯಿಂದ
ಬರಿದಾದ ಈ ಮನದಿ ನಿನ್ನ ಮೂರುತಿ ತುಂಬಿ
ಸಲಹಯ್ಯ ಸಾಕೆನಗೆ ಬೇರೇನು ಬೇಡೆನೊ ||೧||

ಹೊಸಿಲ ದಾಟಿಸೊ ನಿನ್ನ ಮನೆಯೊಳಗೆ ಸೇರಿಸೊ
ಹಸಿದು ಬಂದಿಹೆನೊ ಹುಸಿಯನಾಡುತಲಿಲ್ಲ
ಭಕ್ಷ್ಯ ಭೋಜನ ಬೇಡೆ ಧನಕನಕ ಮೊದಲೇ ಬೇಡೆ
ದೊರೆ ನೀನು ದೀನ ನಾನು ಪ್ರೇಮದೀ ಹರಸೋ ||೨||

ಗುರುವಿರದ ಬಾಳೆಂದೂ ಹಾಳು ಗುಡಿಯಂತೆ
ಗುರುವಿದ್ದರೆ ಬೇರೇ ದೈವವೇ ಬೇಡವಂತೆ
ಗುರಿತೋರು ಬಾ ಗುರುವೇ ಘನತನದ ಅರಿವೆ
ಗುಣಪೂರ್ಣನಾಗಿಸೆನ್ನ ನಿನ್ನ ಸೇವೆಯ ನೀಡೀ ||೩||

ಸಖರಾಯಪುರವಾಸಿ ಸದ್ಗುರುನಾಥಾ
ಅಂಬಾಸುತ ಎಂದೂ ನಿನ್ನಯ ದಾಸ
ಅವನ ಈ ಮೊರೆಯ ಕೇಳಯ್ಯ ನಾಥ
ಕರುಣೆ ತೋರುತ ಕಾಯೊ ಸದ್ಗುರುನಾಥ ||೪||
ಗುರುನಾಥ ಗಾನಾಮೃತ 
ಹಾಸಿಗೆ ಹೇಸಿಗೆ ಎನಿಸಿದ ಮೇಲೆ
ರಚನೆ: ಅಂಬಾಸುತ 

ಹಾಸಿಗೆ ಹೇಸಿಗೆ ಎನಿಸಿದ ಮೇಲೆ
ಕಾಸಿಗೆ ಕಿಮ್ಮತ್ತು ಕೊಡದ ಮೇಲೆ
ಕನಸಿಗೆ ಕಾಲ ಕಳೆಯದ ಮೇಲೆ
ಏರುವೆ ನೀ ಮಾಳಿಗೆಯಾ
ಏರುವೆ ನೀ ಮಾಳಿಗೆಯಾ||

ಮರಣದಾ ಭಯವ ಬಿಟ್ಟ ಮೇಲೆ
ಮತ್ತಿನ ಮೋಹವ ಸುಟ್ಟ ಮೇಲೆ
ಮರೆಮಾಚದೆ ಎದಿರು ನಿಂತಾ ಮೇಲೆ
ಏರುವೆ ನೀ ಮಾಳಿಗೆಯಾ
ಏರುವೆ ನೀ ಮಾಳಿಗೆಯಾ ||

ಬದುಕ ಬಂಧನವೆಂದು ಭಾವಿಸದ ಮೇಲೆ
ಬರಡಿಗೆ ಕನಿಕರ ತೋರಿದ ಮೇಲೆ
ಭಾವಕ್ಕೆ ಪ್ರತಿಭಾವವ ನೀಡಿದ ಮೇಲೆ
ಏರುವೆ ನೀ ಮಾಳಿಗೆಯಾ
ಏರುವೆ ನೀ ಮಾಳಿಗೆಯಾ ||

ಅರಿವಿನಾ ಹಾದಿ ಹಿಡಿದಾ ಮೇಲೆ
ಆದಿಗೆ ಆದ್ಯತೆ ನೀಡಿದ ಮೇಲೆ
ಆತಂಕವೆಂಬುದ ತಳ್ಳಿದ ಮೇಲೆ
ಏರುವೆ ನೀ ಮಾಳಿಗೆಯಾ
ಏರುವೆ ನೀ ಮಾಳಿಗೆಯಾ ||

ಆನಂದವೆಂಬೋದೆ ಇಲ್ಲಿ ಮಾಳಿಗೆ
ಆನಂದ ರೂಪಿ ಗುರು ಇರುವ ಮಾಳಿಗೆ
ಅಂಬಾಸುತ ತಾನೇರಲು ಬೇಡಿಹ ಮಾಳಿಗೆ
ಗುರುಪಾದ ಕೃಪೆಯಿಂದ ಕಾಣುವ ಮಾಳಿಗೆ 
ಏರುವೆ ನೀ ಮಾಳಿಗೆಯಾ
ಏರುವೆ ನೀ ಮಾಳಿಗೆಯಾ ||

Monday, July 30, 2018

ಗುರುನಾಥ ಗಾನಾಮೃತ 
ಯಾವ ಸೇವೆಯ ಮಾಡಲಿ  ಗುರುವೇ ನಿನ್ನ ಪ್ರೀತಿ ಪಡೆಯಲು 
ರಚನೆ: ಆನಂದರಾಮ್, ಶೃಂಗೇರಿ  


ಯಾವ ಸೇವೆಯ ಮಾಡಲಿ  ಗುರುವೇ ನಿನ್ನ ಪ್ರೀತಿ ಪಡೆಯಲು
ಎಷ್ಟು ಮಾಡಿದರೂ ಸಾಲದು ನಿನ್ನ ಕರುಣೆ ದೊರೆಯಲು|

ಯಾವ ಹೂವ ಅರ್ಪಿಸಿ ಬೇಡಲಿ ನಿನ್ನ ಚರಣಕ್ಕೇ
ಮಾಲೆಯೋ ಬಿಡಿ ಪುಷ್ಪವೋ ಅರಿಯದಾದೆ ಗುರುವೇ"|

ಹೇಗೆ ಮಡಿ ಮಾಡಿ ಬರಲಿ ನಾನು ನಿನ್ನ ಸನಿಹಕೇ
ಮಲಿನ ಮನವ  ಶುದ್ಡಿ ಮಾಡಿ ಬರಲೇ ಗುರುವೇ|

ಉಟ್ಟ ಬಟ್ಟೆಯೊಳು ನಾ ನಿನ್ನ ಬಜಿಸಲೇ ಗುರುವೇ
ನಾರಿನ ಮಡಿಯ ಬಟ್ಟೆ ಎನ್ನ ಬಳಿ ಇಲ್ಲ ಗುರುವೇ|

ಫಲ ಪುಷ್ಪ ಸಿಹಿ ಹಣ್ಣು ತಾಂಬೂಲ ಬುಟ್ಟಿಯಲಿರಿಸಿ
ಪಂಚಾಮೃತ ಎಳನೀರು ಒಪ್ಪವಾಗಿಇಡುವೆ ಗುರುವೇ|

ಮಂತ್ರವಿಲ್ಲದೆ ಬರಿ ಮಂತ್ರಾಕ್ಷತೆಯಲಿ ಪೂಜಿಸುವೆ
ಆರತಿ ಮಾಡದೆ ಮನಧಾರತಿ ಬೆಳಗುವೇ ಗುರುವೇ|

ಇನ್ನು ತಡಮಾಡದೆ ನಿನ್ನ ದರುಶನವ ನೀಡು ಗುರುವೇ
ನಿನ್ನ ಅಶಿರ್ವಾದವೆ  ಎನಗೆ ತೀರ್ಥಪ್ರಸಾದ ಗುರುವೇ|