ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 18
ಶೃಂಗೇರಿಗೆ ಹೋಗಿ ಜಗದ್ಗುರುಗಳಿಂದ ಫಲಮಂತ್ರಾಕ್ಷತೆ ಪಡೆಯಿರಿ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಸಖರಾಯಪಟ್ಟಣದಲ್ಲಿ ಅನೇಕ ವರ್ಷಗಳು ವಾಸವಾಗಿದ್ದು, ತದನಂತರ ಶಿವಮೊಗ್ಗಕ್ಕೆ ಬಂದು ನೆಲೆಸಿದ ಗುರುಬಾಂಧವರೊಬ್ಬರ ಮನೆಗೆ ಗುರುನಾಥರು ಆಗಾಗ್ಗೆ ಬರುತ್ತಿದ್ದರು. ಗುರುನಾಥರ ವಿಚಾರವಾಗಿ ಅವರು ಕಂಡ ವಿಚಾರವನ್ನವರು ಸ್ಮರಿಸುತ್ತಾ ಹೀಗೆ ಹೇಳುತ್ತಾರೆ: "ಸುಮಾರು ನಲವತ್ತೈದು ವರ್ಷಗಳಿಂದ ವೆಂಕಟಾಚಲಯ್ಯನವರ ಪರಿಚಯ ನನಗಿತ್ತು. ನಮ್ಮ ಮಾವನವರ ಮನೆಯ ಎದುರಿಗೇ ಅವರ ಮನೆ ಇತ್ತು. ಓದಿದ ಸುಸಂಸ್ಕೃತರಾದ ಅವರು ಉತ್ತಮ ಕೃಷಿಕರಾಗಿದ್ದರು. ಆಸ್ತಿಕರು. ನಮ್ಮ ಜೊತೆಗೆ ಕ್ರಿಕೆಟ್ ಆಟಕ್ಕೆ ಬರುತ್ತಿದ್ದರು. ಮುಂದೆ ಕೆಲದಿನಗಳಲ್ಲೇ ಅವರು ಆಂತರ್ಯದ ಸಾಧನೆಯಿಂದಲೋ, ಮತ್ಯಾವ ಶಕ್ತಿಯಿಂದಲೋ ಅವರ ಬಗ್ಗೆ ಜನಗಳಲ್ಲಿ ಗುರುಭಾವನೆ ಬೆಳೆಯತೊಡಗಿತು. ಅವರು ಭೂತ ಭವಿಷ್ಯತ್ ವರ್ತಮಾನಗಳನ್ನು ಬಲ್ಲವರಾದರು. ಅನೇಕ ನೊಂದವರಿಗೆ ದಾರಿದೀಪರಾದರು. ಒಮ್ಮೆ ನಮ್ಮ ಮಗಳ ಮದುವೆಯ ವಿಚಾರದಲ್ಲಿ ಮನಸ್ಸಿಗೆ ಸ್ವಲ್ಪ ಕಿರಿಕಿರಿಯಾದಾಗ, ಅವರ ಬಳಿ ನೇರವಾಗಿ ಹೋಗಿದ್ದೆ. ಫಲಪುಷ್ಪ ತಾಂಬೂಲಗಳನ್ನು ತೆಗೆದುಕೊಂಡು ಹೋದಾಗ ಒಳಕರೆದರು. "ನೀವು ಸೀದಾ ಈಗಲೇ ಜಗದ್ಗುರುಗಳ ಬಳಿ ನಡೆಯಿರಿ. ಇದನ್ನೆಲ್ಲಾ ಅವರಿಗರ್ಪಿಸಿರಿ. ನೀವು ಅಲ್ಲೇನೂ ಅವರ ಬಳಿ ಪ್ರಸ್ತಾಪಿಸುವುದು ಬೇಡ. ಅವರಿಂದ ಫಲ ಮಂತ್ರಾಕ್ಷತೆಗಳನ್ನು ಪಡೆದುಕೊಳ್ಳಿರಿ. ಎಲ್ಲ ಸರಿಯಾಗುತ್ತೆ. ನಿಮ್ಮ ಮಗಳು ಸುಖವಾಗಿರುತ್ತಾಳೆ" ಎಂದು ನನ್ನನ್ನು ಶೃಂಗೇರಿಗೆ ಆ ಕೂಡಲೇ ಕಳಿಸಿದರು. ಈ ಹಿಂದೆ ಅನೇಕ ಸಾರಿ ಇವರು ಹೋದರೂ ಗುರುನಾಥರು ಸಿಕ್ಕಿರಲಿಲ್ಲ.
"ಶೃಂಗೇರಿ ತಲುಪಿದ ನಾನು ಜಗದ್ಗುರುಗಳನ್ನು ಭೇಟಿಯಾದಾಗ, ಗುರುನಾಥರ ಬಗ್ಗೆ ನಮ್ಮೂರಿನ ಇತರರ ಬಗ್ಗೆ ಸಹಜವಾಗಿ ಪ್ರಸ್ತಾಪಿಸಿದರು. ಒಂದು ಹುಸಿನಗೆಯನ್ನು ನಕ್ಕರು. ಆ ನಗೆ ತಮಗೆಲ್ಲವೂ ತಿಳಿದಿದೆ - ನೀವೇನೂ ಚಿಂತಿಸಬೇಡಿರೆಂಬ ಅಭಯದಂತಿತ್ತು. ನಂತರ ಫಲಮಂತ್ರಾಕ್ಷತೆಯನ್ನು ನೀಡಿದರು. ಗುರುನಾಥರು ಹೀಗೆ ಆಶೀರ್ವದಿಸಿ, ಜಗದ್ಗುರುಗಳ ಆಶೀರ್ವಾದವನ್ನು ದಯಪಾಲಿಸಿದರು. ಈಗ ನನ್ನ ಮಗಳು, ಒಂದು ಮಗುವಿನೊಂದಿಗೆ ಗುರುನಾಥರ ನುಡಿಯಂತೆ ಸೌಖ್ಯದಿಂದಿದ್ದಾಳೆ. ಇನ್ನೂ ವಿಶೇಷವೆಂದರೆ ಆ ಮಗಳು ತಾಯಿ ಹೊಟ್ಟೆಯಲ್ಲಿದ್ದಾಗಲೂ ಗುರುನಾಥರು ನಮ್ಮ ಮನೆಗೆ ಬಂದಿದ್ದರು. ಹೀಗಾಗಿ, ಗುರುನಾಥರ ಶ್ರೀರಕ್ಷೆ ನಮಗೆಂದಿಗೂ ಇದೆ" ಎಂದು ಸ್ಮರಿಸುತ್ತಾರೆ. ಎಲ್ಲ ನಿರ್ವಹಿಸಬಲ್ಲ ಸಬಲರು ಗುರುನಾಥರಾಗಿದ್ದರೂ ಅವರು ನೀಡುತ್ತಿದ್ದ, ತೋರಿಸುತ್ತಿದ್ದ ಕ್ಷೇತ್ರಗಳು, ನಿರ್ದೇಶಿಸುತ್ತಿದ್ದ ದರ್ಶನಗಳ ಮರ್ಮವೇನೆಂದು ತಿಳಿಯುವುದೇ ಅಸಾಧ್ಯವಾಗಿತ್ತು".
ಭವರೋಗ ವೈದ್ಯ
ಗುರುನಾಥರ ಬಗ್ಗೆ ಮತ್ತೆ ತಮ್ಮ ಅನುಭವವನ್ನು ಬಿಚ್ಚಿಡುತ್ತಾ ಅವರು ಹೀಗೆ ಮುಂದುವರೆಸಿದರು. "ಅರಸೀಕೆರೆಯಲ್ಲಿ ನಮ್ಮ ಬಂಧುಗಳೊಬ್ಬರಿದ್ದಾರೆ. ಅವರ ಮಗನಿಗೆ ಕಣ್ಣಿನ ಮೇಲೊಂದು ದೊಡ್ಡ ಗೆಡ್ಡೆ ಎದ್ದಿದ್ದು, ಅನೇಕ ರೀತಿಯ ಚಿಕಿತ್ಸೆ ಮಾಡಿಸಿದ್ದರೂ ಗುಣವಾಗಿರಲಿಲ್ಲ. ಒಮ್ಮೆ ಗುರುನಾಥರು ಅರಸೀಕೆರೆಯ ಸೀತಾರಾಮ ಕಲ್ಯಾಣ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು. ಆಗ ನಮ್ಮ ಬಂಧುಗಳು ಮಗನನ್ನು ಕರೆದುಕೊಂಡು ಹೋಗಿ ಗುರುನಾಥರಿಗೆ ನಮಿಸಿ ಬೇಡಿಕೊಂಡರು. ಗುರುನಾಥರು ಆ ಮಗುವಿನ ಕಣ್ಣಿನ ಮೇಲೆ ಕೈ ಇಟ್ಟು ಅದೇನು ಚಿಕಿತ್ಸೆ, ಆಶೀರ್ವಾದ ಮಾಡಿದರೋ ಅವರೇ ಬಲ್ಲರು. ಮುಂದೆ ಯಾವುದೇ ಔಷಧಿಗಳಿಲ್ಲದೆ, ನಂತರದಲ್ಲಿ ಅವನು ಗುಣಮುಖನಾದನು. ಉತ್ತಮವಾಗಿ ಓದುತ್ತಾ, ಅವನೀಗ ಇಂಜಿನಿಯರಿಂಗ್ ಮಾಡುತ್ತಿದ್ದಾನೆ. ಆ ಮನೆಯವರೆಲ್ಲರೂ ಈಗಲೂ ಗುರುನಾಥರ ಭಕ್ತರಾಗಿ, ಅವರ ಸೇವೆಯಲ್ಲಿ ತೊಡಗಿದ್ದಾರೆ. ಹೀಗೆ ಯಾವ ಚಿಕಿತ್ಸೆಯಿಂದಲೂ ಗುಣವಾಗದ್ದು ಭವರೋಗಹರ ವೈದ್ಯರಾದ ಗುರುನಾಥರ ಸ್ಪರ್ಶ ಮಾತ್ರದಿಂದ ಗುಣವಾಗಿಬಿಟ್ಟಿತು ಎಂದು ಸ್ಮರಿಸುತ್ತಾರೆ.
ಏನೂ ಆಗಲ್ಲ ಹೆದರಬೇಡ
ಗುರುಕಥಾಮೃತವನ್ನು ಮುಂದುವರೆಸಿದ ಆ ಗುರು ಬಂಧುಗಳು ತಮಗಾದ ಮತ್ತೊಂದು ಘಟನೆಯನ್ನು ಸ್ಮರಿಸುತ್ತಾ ಹೀಗೆ ಮುಂದುವರೆಸಿದರು. "ನನ್ನ ಮಗಳ ಜೀವನದಲ್ಲಿ ಗುರುನಾಥರ ಕೃಪೆ ಆಗಾಗ್ಗೆ ಆಗುತ್ತಲೇ ಸಾಗಿದೆ. ಜೀವನದ ಪ್ರಮುಖ ಘಟ್ಟವಾದ ಎಸ್. ಎಸ್. ಎಲ್. ಸಿ. ಯಲ್ಲಿ ಬಹಳ ಶ್ರಮ ಪಟ್ಟು ಓದಿದ ಅವಳಿಗೆ ಇದ್ದಕ್ಕಿದ್ದಂತೆ ಜ್ವರ ಬಂದು ಅಮ್ಮ ಬಂದಿತು. ಪರೀಕ್ಷೆಗೆ ಹೋಗುವುದಕ್ಕೂ ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಧಿಕ ಅಂಕ ಪಡೆಯಬೇಕೆಂದು ಓದಿದ್ದ ಅವಳು, ಪರೀಕ್ಷೆ ಎದುರಿಸುವುದು, ಮುಂದಿನ ತರಗತಿಗಳಲ್ಲಿ ಪ್ರವೇಶ ಪಡೆಯುವುದು ಅಸಾಧ್ಯವೆಂದು ಭಾವಿಸಿ ಭೀತಳಾಗಿದ್ದಳು. ಆಗ ಒಂದು ದಿನ ರಾತ್ರಿ ಹನ್ನೊಂದೂವರೆಗೆ ಗುರುನಾಥರು ನಮ್ಮ ಮನೆಗೆ ಎಲ್ಲಿಗೋ ಹೋದವರು ಬಂದರು. ನಾವುಗಳೆಲ್ಲಾ ನೀವೇ ರಕ್ಷಿಸಬೇಕೆಂದು ಕೇಳಿಕೊಂಡಾಗ "ಏನೂ ಆಗಲ್ಲ ಹೆದರಬೇಡಿ" ಎಂದು ಅವಳ ಹಾಸಿಗೆಯ ಬಳಿ ಬಂದು, ಅದೇನೋ ಮಂತ್ರಿಸಿ, ಹಾಸಿಗೆಯ ಕೆಳಗೆ ಇಟ್ಟರು. ಎಲ್ಲ ಸುಸೂತ್ರವಾಯಿತು. ಪರೀಕ್ಷೆಗೂ ಹೋದಳು. ಉತ್ತಮ ಅಂಕವನ್ನೂ ಪಡೆದಳು".
ಹೀಗೆ ಪದೇ ಪದೇ ಅವರು ಸಂಕಟದಲ್ಲಿ ಬಿದ್ದಾಗ ಗುರುನಾಥರು ಅವರನ್ನು ರಕ್ಷಿಸುತ್ತಾ ಬಂದಿದ್ದಾರೆ. ಗುರುನಾಥರಿಗೆ ನಮ್ಮವರು ತಮ್ಮವರೆಂಬ ಬೇಧಭಾವವೇ ಇಲ್ಲ. ಅವರ ಕೃಪೆ ಯಾವಾಗ, ಯಾರ ಮೇಲಾಗುತ್ತದೆ ಎಂದು ಊಹಿಸುವುದೂ ಅಸಾಧ್ಯ.
ಆಪದ್ಭಾಂಧವರು
"ನಮ್ಮ ಮನೆಯ ಮುಂದೆ ಒಬ್ಬ ಪತ್ರಿಕಾ ಪ್ರತಿನಿಧಿಗಳಿದ್ದರು. ಅವರ ಮನೆಯಲ್ಲಿ ಅವರ ತಾಯಿ ಹಾಗೂ ಅವರ ಹೆಂಡತಿ ಇದ್ದರು. ಒಮ್ಮೆ ಯಾವುದೋ ಕಾರ್ಯ ನಿಮಿತ್ತ ಅವರು ಬೆಂಗಳೂರಿಗೆ ಹೋಗಿದ್ದರು. ರಾತ್ರಿ ಹನ್ನೆರಡು ಗಂಟೆಯ ಸಮಯದಲ್ಲಿ ಆ ಪತ್ರಿಕಾ ಪ್ರತಿನಿಧಿಗಳ ಹೆಂಡತಿ ಬಂದು 'ಮನೆಯಲ್ಲಿ ಅವರು ಇಲ್ಲ. ವೃದ್ಧರಾದ ನಮ್ಮ ಅತ್ತೆ ಹೇಗೆ ಹೇಗೋ ಮಾಡುತ್ತಿದ್ದಾರೆ. ನನಗೇನೂ ದಿಕ್ಕೇ ತೋಚುತ್ತಿಲ್ಲ. ಸ್ವಲ್ಪ ಬರ್ತೀರಾ' ಎಂದು ಕರೆದಾಗ, ನಾನು ಹೋದೆ. ನೋಡಿದರೆ ದೇಹ ತಣ್ಣಗಾಗುತ್ತಿತ್ತು. ಆ ಕ್ಷಣದಲ್ಲಿ ಏನೂ ಮಾಡುವಂತಿರಲಿಲ್ಲ. ಯಾರು ಯಾರಿಗೆ ತಿಳಿಸಬೇಕೆಂದು ಮಾತನಾಡುತ್ತಿರುವಾಗ, ಆ ಸರಿ ರಾತ್ರಿಯಲ್ಲಿ ನಮ್ಮ ಮನೆಗೆ ಬಂದ ಗುರುನಾಥರು, ಯಜಮಾನರು ಎಲ್ಲಿದ್ದಾರಮ್ಮಾ? ಎಂದು ಕೇಳಿ ನೇರವಾಗಿ ಎದುರು ಮನೆಗೇ ಬಂದರು. ಆ ವೃದ್ಧೆ ಅದೆಷ್ಟು ಪುಣ್ಯ ಮಾಡಿದ್ದರೋ, ಅಂತಿಮ ಘಳಿಗೆಯಲ್ಲಿ ಗುರುನಾಥರ ಸಾನ್ನಿಧ್ಯ ಅವರಿಗೆ ಸಿಕ್ಕಿತ್ತು. ನಾನು ಆ ರಾತ್ರಿಯೇ ಅನ್ಯ ಕಾರ್ಯ ನಿಮಿತ್ತ ಪರ ಊರಿಗೆ ಹೋಗಲೇ ಬೇಕಾಗಿತ್ತು. ಇದನ್ನು ಅರಿತ ಗುರುನಾಥರು "ನೀವು ಹೊರಡಿ. ನಾನಿಲ್ಲಿ ಎಲ್ಲಾ ನೋಡಿಕೊಳ್ಳುತ್ತೇನೆ" ಎಂದು ಅಲ್ಲೇ ಇದ್ದು , ಅವರ ಮಗ ಬೆಂಗಳೂರಿನಿಂದ ಬರುವವರೆಗೆ ಎಲ್ಲ ನೋಡಿಕೊಂಡಿದ್ದರು.
ಗುರುನಾಥರು ಇವರ ಮನೆಗೆ ಬಂದಾಗ ಸಾಮಾನ್ಯ ಒಂದು ಚಾಪೆ, ದಿಂಬು ಕೊಡಿ ಸಾಕೆಂದು ಮಲಗಿ ಬೆಳಗಿನ ಜಾವವೇ ಎದ್ದು ಎಲ್ಲಿಗೆ ಹೋಗುತ್ತಿದ್ದರೋ ಒಂದೂ ಅರಿವಾಗುತ್ತಿರಲಿಲ್ಲ. ಯಾರಿಗಾದರೂ ಆಪದ್ಭಾಂಧವರಾಗಿ ಬಂದು ಸಹಕರಿಸಿದರೂ, ಕೆಲಸವಾದ ಮೇಲೆ ಒಂದು, ವಂದನೆಯನ್ನು ಅಪೇಕ್ಷಿಸಿದೇ ಹೋಗಿ ಬಿಡುತ್ತಿದ್ದುದು ಗುರುನಾಥರ ಒಂದು ಲಕ್ಷಣವಾಗಿತ್ತು.
ಗುಡ್ಡವನ್ನು ಕಡ್ಡಿಯಾಗಿಸಿದ ಗುರುನಾಥರ ಭಕ್ತರ ಮನೆಯ ಕಾಫಿ
ಒಂದು ಸಣ್ಣ ಅವಘಡವಾಯ್ತು ಒಬ್ಬರಿಗೆ. ಅವರ ಬಂಧುಗಳು ಗುರುನಾಥರ ಭಕ್ತರು. ಮುಂದೆ ಅವರು ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದಾಗ ಯಾರದೋ ಬೇಜವಾಬ್ದಾರಿಯಿಂದ ಸೀರಿಯಸ್ ಆಗಿ ಅವರನ್ನು ಐಸಿಯುಗೆ ಸೇರಿಸಲಾಯ್ತು. ಎಲ್ಲರೂ ಗಾಭರಿಯಾಗಿಬಿಟ್ಟರು. ಜೀವನ ಮರಣದ ಪ್ರಶ್ನೆ.
ಇವರನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಹೋದ, ಗುರುನಾಥರ ಶಿಷ್ಯರು ಒಬ್ಬರು, ಗುರುಗಳನ್ನು ಅನನ್ಯವಾಗಿ ಸ್ಮರಿಸಿದರು ಮತ್ತು ಸನಿಹದಲ್ಲೇ ಇರುವ ಗುರುನಾಥರ ಭಕ್ತರೊಬ್ಬರ ಮನೆಗೆ ಬಂದು, ಪರಿಸ್ಥಿತಿಯನ್ನು ವಿವರಿಸಿ... 'ನೋಡಿ ನಿಮ್ಮ ಮನೆಯ ಕಾಫಿಯನ್ನು ಕೊಡಿ.. ಗುರುನಾಥರ ತೀರ್ಥವೆಂದು ಭಾವಿಸಿ, ಅವರಿಗೆ ಅದನ್ನು ಕುಡಿಸುತ್ತೇನೆ. ಗುರುನಾಥರ ಕೃಪೆಯಿಂದ ಅವರು ಹುಷಾರಾಗುತ್ತಾರೆ' ಎಂದು ಹೇಳುತ್ತಾ, ಭಕ್ತಿಭಾವದೊಂದಿಗೆ ಗುರುನಾಥರ ಶಿಷ್ಯರ ಮನೆಯ ಕಾಫಿಯನ್ನು ಕುಡಿಸಿದರಂತೆ. ಐಸಿಯುನಲ್ಲಿ ಇದ್ದ ಅವರು ಅಪಾಯದಿಂದ ಪಾರಾದರು. ಈಗ ಆರಾಮವಾಗಿಯೂ ಇದ್ದಾರೆ. ಹೇಗಿದೆ? ಗುಡ್ಡವಾಗಿ ಬಂದಿದ್ದ ಅವಘಡ ಕಡ್ಡಿಯಂತೆ ಹಗುರವಾಗಿತ್ತು. ಅವರ ಭಕ್ತರ ಮನೆಯ ಕಾಫಿ - ಭಕ್ತರ ದೃಢಭಾವದಿಂದ ಮಾಡಿದ ಗುರುನಾಥರ ಸ್ಮರಣೆ.
ಬದುಕುವ ಮಾರ್ಗ ಕಲಿಸಿದ ಗುರುನಾಥರು
ಒಬ್ಬ ಗುರು ಬಂಧುಗಳು ಒಂದು ದೊಡ್ಡ ಅಂಗಡಿ ನಡೆಸುತ್ತಿದ್ದರು. ಅವರ ಕೈಕೆಳಗೆ ಅನೇಕ ಜನ ನಂಬಿಗೆಯವರಂತೆ ನಾಟಕವಾಡುವ ಕೆಲಸದವರಿದ್ದಿರಬಹುದು. ಇದು ಆ ಗುರುಬಂಧುವಿಗೆ ಅರಿವೇ ಆಗಿರಲಿಲ್ಲ. ಮನಸ್ಸು ಬಂದಾಗಲೆಲ್ಲಾ ಗುರುನಾಥರನ್ನು ಕಾಣಲು ಸಖರಾಯಪಟ್ಟಣಕ್ಕೆ ಹೋಗುತ್ತಿದ್ದರು. ಇವರ ಈ ರೀತಿ ಕಂಡ ಅವರ ಬಂಧುಗಳು 'ಇವನಿಗೆ ಏನೋ ಹುಚ್ಚು ಹಿಡಿದಿದೆ' ಎಂದೂ ಅಂದಿದ್ದರು. ಕೊನೆಗೊಂದು ದಿನ ಮೇಲಿನವರು ಬಂದು ಪರೀಕ್ಷಿಸಿ, ಇವರನ್ನು ಕೆಲಸದಿಂದ ವಜಾ ಮಾಡಿದುದೂ ಅಲ್ಲದೆ ಲಕ್ಷಗಟ್ಟಲೆಯ ಬಾಕಿ ಹೇರಿದರು.
ಮಾರನೆಯ ದಿನ ಬೆಳಿಗ್ಗೆ ಎಂದಿನಂತೆ ಪೂಜೆ ಪುನಾಸ್ಕಾರ ಮಾಡಿ ಬಟ್ಟೆ ಹಾಕಿ ಹೋರಾಟ ಇವರನ್ನು ಅವರ ಪತ್ನಿ ಎಚ್ಚರಿಸಿದರು. ಈಗ ನಿಮ್ಮ ಕೆಲಸ ಇಲ್ಲ. ಎಲ್ಲಿಗೆ ಹೊರಟಿರಿ? ಹೌದು ಎಲ್ಲಿಗೆ ಹೋಗೋದು ಗುರುನಾಥರಲ್ಲಿಗೆ ಎಂದು ಸಖರಾಯಪಟ್ಟಣಕ್ಕೆ ಬಂದರು ಆ ಗುರುಬಂಧುಗಳು.
ಬಂಧುಗಳೆಲ್ಲ ಮೂಗಳೆದರು. 'ಬೇಡ ಬೇಡ ಎಂದರೂ ಎಲ್ಲ ಬಿಟ್ಟು ಬೇಜವಾಬ್ದಾರಿಯಿಂದ ಹೋಗುತ್ತಿದ್ದ ಈಗ ಯಾರು ಇವನನ್ನು ಕಾಪಾಡುತ್ತಾರೆ' ಎಂದರು .
ಸಖರಾಯಪಟ್ಟಣಕ್ಕೆ ಬಂದ ಇವರನ್ನು ಸಾಂತ್ವನಗೊಳಿಸಿ ಗುರುನಾಥರೆಂದರು. 'ಅಲ್ಲಪ್ಪಾ ಹದಿಮೂರು ಲಕ್ಷ ನಿನ್ನ ಮೇಲೆ ಬರಬೇಕಿತ್ತು. ನಾನು ಎಷ್ಟಂತ ಮಾಡಲಿ, ಕಾಯಲಿ ಮೂರು ಲಕ್ಷ ಕೊಡಬೇಕಾಗಿದೆಯಲ್ಲ ಚಿಂತಿಸಬೇಡಿ' ಎಂದು ಅಭಯ ನೀಡಿದರು. ಸಾಲ ತೀರಿಸುವ ಮಾರ್ಗವನ್ನೂ ತೋರಿಸಿದರು. ಇಂದೂ ಅವರು ನೂರಾರು ಜನಗಳಿಗೆ ದರ್ಶಿನಿಯೊಂದರ ಮೂಲಕ ಉತ್ತಮ ಆಹಾರ ಪಾನೀಯಗಳನ್ನೊದಗಿಸುವ ಕಾರ್ಯವನ್ನು ಮಾಡುತ್ತಾ ಸಂತಸದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಗುರುಕೃಪೆ ಅವರಿಗೆ ಬದುಕುವ ಮಾರ್ಗ ಕಳಿಸಿದೆ.
ನನಗೆ ಸೀರೆ ಕೊಡುವುದಿಲ್ಲವಾ
ಒಮ್ಮೆ ಸೀರೆ ವ್ಯಾಪಾರ ಮಾಡುತ್ತಿದ್ದ ಗುರುಭಕ್ತೆಯೊಬ್ಬರು ಗುರುನಾಥರ ಬಳಿ ಹೋದಾಗ 'ನನಗೆ ಸೀರೆ ಕೊಡುವುದಿಲ್ಲವಾ' ಎಂದು ಕೇಳಿದ್ದರಂತೆ. ಗುರುನಾಥರೇಕೆ ಸೀರೆ ಕೇಳಿದರೋ ಯಾರಿಗೂ ಅರ್ಥವಾಗಲಿಲ್ಲ. ಅಂದು ಗುರುನಾಥರನ್ನು ಕಾಣಲು ಹೋದ ಆ ಭಕ್ತೆ ಸೀರೆ, ಬ್ಲೌಸ್ ಪೀಸ್, ಶಲ್ಯ ಪಂಚೆಗಳನ್ನೆಲ್ಲಾ ತೆಗೆದುಕೊಂಡು ಹೋಗುವುದಷ್ಟೇ ಅಲ್ಲದೆ, ತಮ್ಮ ಬಳಿ ಉಳಿದಿದ್ದ ಇನ್ನೊಂದು ಹತ್ತು ಸೀರೆಯನ್ನು ಒಂದಿಷ್ಟು ಬ್ಲೌಸ್ ಪೀಸನ್ನು ತೆಗೆದುಕೊಂಡು ಹೋಗಿದ್ದರು.
'ಇದೇನು ಒಂದು ಕೇಳಿದರೆ ಇಷ್ಟೊಂದು ತಂದಿದೀಯಲ್ಲಾ. ಇರಲಿ. ಇಲ್ಲಿರುವ ಎಲ್ಲರಿಗೂ ಕೊಟ್ಟುಬಿಡು' ಎಂದರು. ಶಿವಮೊಗ್ಗದಿಂದ ಬಂದಿದ್ದ ಗುರುಭಕ್ತ ದಂಪತಿಗಳಿಗೆ ಮೊದಲು ವಸ್ತ್ರದಾನ ಮಾಡಿಸಿ, ಮುಂದೆ ಎಲ್ಲರಿಗೂ ಸೀರೆ ಕುಪ್ಪಸಗಳ ದಾನ ಮಾಡಲು ಹೇಳಿದರು. ಹಾಗೆ ಮಾಡುತ್ತಿರುವಾಗ 'ನನಗೆ ಬ್ಲೌಸ್ ಪೀಸ್ ಕೊಡು ಎರಡು' ಎಂದು ಗುರುನಾಥರು, ಒಂದೊಂದು ತೊಡೆಯ ಮೇಲೂ ಒಂದೊಂದನ್ನು ಇಟ್ಟುಕೊಂಡು 'ನೋಡು ಆ ಬ್ಲೌಸ್ ಪೀಸುಗಳ ಮಧ್ಯೆ ನಿನ್ನ ಸೀರೆಗೆ ಮ್ಯಾಚ್ ಆಗುವುದೊಂದಿದೆ. ಅದನ್ನ ನೀನೇ ಹೊಲಿಸಿಕೋ' ಎಂದರು. ಆದರೆ ಅದಾಗಲೇ ಯಾರಿಗೋ ಹೋಗಿಬಿಟ್ಟಿತ್ತು.
'ಗುರುನಾಥರೇ ನೀವು ನಿನ್ನೆ ಕನಸಿನಲ್ಲಿ ಬಂದಿದ್ದಿರಿ. ತಲೆ ಬಾಚಿಕೊಂಡಿದ್ದಿರಿ. ನನಗೆ ಹಣೆಗೆ ಕುಂಕುಮ ಹಚ್ಚಿ ಜಪಮಾಲೆಯನ್ನು ನೀಡಿದಿರಿ' ಎಂದು ಆ ಭಕ್ತೆ ವಿನಂತಿಸಿಕೊಂಡಾಗ, ಯಾರಪ್ಪಾ ಅಲ್ಲಿ ಬಾಚಣಿಕೆ ತನ್ನಿ ಎಂದು ತಲೆ ಬಾಚಿಸಿಕೊಂಡರು. ಗುರುನಾಥರ ಸಾನ್ನಿಧ್ಯದಲ್ಲಿ ಆನಂದ ಪಡುತ್ತಿರುವ ಆ ಭಕ್ತೆಗೆ ರಾಮನ ಗೀತೆಗಳೆಂದರೆ ಅತ್ಯಂತ ಪ್ರೀತಿ. ತಮ್ಮ ಬಂಧುಗಳೊಬ್ಬರಿಗೆ 'ರಾಯರ ಆ ಹಾಡನ್ನು ಹಾದಿ ಎಂದರಂತೆ'. ಹಾಡು ಕೇಳುತ್ತಾ ಆನಂದ ಭಾಷ್ಪ ಸುರಿಸುತ್ತಿದ್ದ ಭಕ್ತೆಗೆ, 'ರಾಮ ಎಂದರೆ ಆರಾಮ ಎಂದು ಹೇಳಿದ್ದರಲ್ಲದೆ, ನಿನಗೆ ಪೂರ್ಣಾನುಗ್ರಹವಿದೆ. ನೀನು ನುಡಿಯುತ್ತಿರು. ನಾನು ನುಡಿಸುತ್ತೇನೆ' ಎಂದು ಅನುಗ್ರಹಿಸಿದರಂತೆ.
ಆ ಭಕ್ತೆ ಇಂದೂ ಗುರುನಾಥರ ಆ ನುಡಿಗಳನ್ನೇ ಮೆಲುಕು ಹಾಕುತ್ತಾ ಅವರ ನಾಮಸ್ಮರಣೆ ಮಾಡುತ್ತಾ ಅವರು ಜೀವನ ನಡೆಸುತ್ತಿದ್ದಾರೆ. ಗುರುನಾಥರು ಹೇಳಿದ್ದನ್ನ ಬಂದವರಿಗೆ ಹೇಳುತ್ತಾರೆ. ಅದು ಸತ್ಯವೂ ಆಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।