ಒಟ್ಟು ನೋಟಗಳು

Tuesday, November 29, 2016

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 56

ಅರುಣ ಪ್ರಶ್ನೆ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಸಾಮಾನ್ಯವಾಗಿ ಗುರುನಾಥರು ಮನೆಯಲ್ಲಿದ್ದಾಗ ಹಾಗೂ ಯಾವುದೇ ಭಕ್ತರ ಮನೆಯಲ್ಲಿದ್ದರೂ ಅರುಣ ಪ್ರಶ್ನೆ, ರುದ್ರ ಹಾಗೂ ಪುರುಷ ಸೂಕ್ತ ಅರುಣ, ಅನ್ನದಾನ ನಡೆಯುತ್ತಲೇ ಇರುತ್ತಿತ್ತು. ಗುರುನಾಥರು ಒಂದು ಘಟನೆಯನ್ನು ಆಗಾಗ್ಗೆ ಹೇಳುತ್ತಿದ್ದರು. 

ಒಮ್ಮೆ ಶಿವಮೊಗ್ಗದಲ್ಲಿ ಅಡಿಕೆ ಮಂಡಿ ವ್ಯವಹಾರ ಮುಗಿಸಿ ಬಸ್ ಸ್ಟ್ಯಾಂಡ್ ಸಮೀಪದ ಹೋಟೆಲ್ ಒಂದರಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದರು. ಆಗ ಅವರನ್ನು ಹುಡುಕಿ ಬಂದ ವ್ಯಕ್ತಿಯೋರ್ವರು ತಾನೊಬ್ಬ ತಹಶೀಲ್ದಾರರೆಂದು ಪರಿಚಯಿಸಿಕೊಂಡರು. ಹಾಗೂ ತನ್ನ ಹೆಂಡತಿ ಹಾಗೂ ಮಕ್ಕಳು ತನ್ನನ್ನು ಬಿಟ್ಟು ಹೋಗಿದ್ದು ಪರಿಹಾರ ಸೂಚಿಸಬೇಕೆಂದು ಪ್ರಾರ್ಥಿಸಿದರು. 

ಅದಕ್ಕೆ ಗುರುನಾಥರು "ನಾನು ಹೇಳಿದಂತೆ ಮಾಡ್ತೀರಾ? ನನ್ನ ಮಾತಿನ ಮೇಲೆ ನಂಬಿಕೆ ಇದೆಯಾ?" ಎಂದು ಪ್ರಶ್ನಿಸಲು ಅವರು ಸಮ್ಮತಿಸಿದರು. 

ಆಗ ಗುರುನಾಥರು "ಬ್ಯಾಂಕ್ ನಲ್ಲಿ ಇಷ್ಟು ಹಣವಿದೆಯಲ್ಲಾ?. ಅದು ನಿನ್ನ ಲಂಚದ ಹಣ. ಎಷ್ಟು ಲಂಚವಿದೆ. ಅದನ್ನು ಇನ್ನು ಮರೆತು ಬಿಡು. ಮುಟ್ಟಬೇಡ. ಇನ್ನು ಮುಂದೆ ಲಂಚ ಸ್ವೀಕರಿಸಬೇಡ. ಹಾಗೂ ಸದಾ ಅರುಣ ಪ್ರಶ್ನೆಯನ್ನು ಹೇಳಿಕೋ. ಇಷ್ಟೇ ದಿನದಲ್ಲಿ ನಿನ್ನ ಸಂಸಾರ ಸರಿ ಹೋಗುವುದು" ಎಂದರಂತೆ. 

ಆ ವ್ಯಕ್ತಿ ಹಾಗೆಯೇ ನಡೆದುಕೊಂಡರಂತೆ. ಅಂತೇಯೇ ಅವರ ಸಂಸಾರವು ಸರಿ ಹೋಯಿತಂತೆ. 

"ಅಯ್ಯಾ, ನನಗೆ ಈಶ್ವರ ನೀಡಿರುವ ಶಕ್ತಿಯಲ್ಲಿ ಪ್ರಕಟಪಡಿಸಿರುವುದು ಕೇವಲ .0001 ರಷ್ಟೂ ಇಲ್ಲ. ಅಷ್ಟಕ್ಕೇ ಜನ ನನ್ನ ಈ ರೀತಿ ಮುತ್ಕೋತಾರಲ್ಲಾ? ಇನ್ನೇನಾದ್ರೂ 1% ಪ್ರಕಟಪಡಿಸಿದರೆ ಈ ಜನ ನನ್ನ ಇರಗೊಡಿಸುವುದಿಲ್ಲ ಕಣೋ" ಅನ್ನುತ್ತಿದ್ದ ಮಾತು ಸದಾ ನೆನಪಾಗುತ್ತದೆ. 

"ಕೇವಲ ತನ್ನ ದೃಷ್ಠಿಯಿಂದ ಏನು ಬೇಕಾದರೂ ಸಾಧಿಸಬಲ್ಲ ಶಕ್ತಿ ಇದ್ದಾಗಲೂ, ಲೌಕಿಕದೊಳು ಪರಮ ಲೌಕಿಕನಾಗಿ ಯಾರಿಂದಲೂ ಏನನ್ನೂ ಅಪೇಕ್ಷಿಸದೆ ಕೇವಲ ತುಂಡು ಬಟ್ಟೆಯನ್ನುಡುತ್ತಿದ್ದ ಅವರ ಸರಳತೆ ಬಹುಶಃ ಜಗತ್ತಿಗೆ ಮಾದರಿ ಎನಿಸುತ್ತದೆ". 

ಕೊನೆಯ ದಿನಗಳು 


ಒಮ್ಮೆ ಓರ್ವ ಪೀಠಾಧಿಪತಿ ಗುರುನಾಥರನ್ನು ಕುರಿತು ಕೇಳಿದ ಪ್ರಶ್ನೆಗೆ, "ನನಗೆ ಗೊತ್ತಿರುವುದು ಕೇವಲ ಎರಡು ಅಕ್ಷರ ಮಾತ್ರವೇ. ಅದುವೇ ಗ ಕೊಂಬು ಗು, ರ ಕೊಂಬು ರು" ಎಂದಿದ್ರು. 

ಆ ಎರಡಕ್ಷರದ ಅರ್ಥ ತಿಳಿಯಲು ನಾನು ಇಂದಿಗೂ ಹರಸಾಹಸ ಪಡುತ್ತಿದ್ದೇನೆ. ನನ್ನ ವೈಯಕ್ತಿಕ ಲೌಕಿಕ ವಿಚಾರದ ಏರು-ಪೇರುಗಳೇನೇ ಇದ್ದರೂ, ಅವರ ಸಾನ್ನಿಧ್ಯ ನನಗೆ ಸದಾ ಒಂದು ಅವ್ಯಕ್ತವಾದ ನೆಮ್ಮದಿ, ಧೃಡತೆ ಹಾಗೂ ಸಂತಸವನ್ನು ನೀಡುತ್ತಿತ್ತು. ಇವೆಲ್ಲಾ ಇದ್ದಾಗ್ಯೂ ಗುರುನಾಥರೊಂದಿಗೆ ನನ್ನ ಜಗಳ, ತರಲೆಗಳು ಎಂದಿನಂತೆಯೇ ಸದಾ ನಡೆಯುತ್ತಲೇ ಇರುತ್ತಿತ್ತು. 

ಒಮ್ಮೆ ಏನೋ ವಿಚಾರಕ್ಕೆ ನಾನು "ಇದನ್ನೆಲ್ಲಾ ನಂಗೆ ಯಾಕೆ ಹೇಳ್ತೀರಿ ಸಾರ್? ಅದ್ರಿಂದ ನಂಗೇನ್ ಆಗ್ಬೇಕು?. ಎಲ್ರಿಗೂ ಅವರವರಿಗೆ ಬೇಕಾದ್ದೆಲ್ಲಾ ಕೊಡ್ತೀರಾ.... ? ನಂಗೆ ಯಾಕೆ ಈ ರೀತಿ ತಡ ಮಾಡ್ತಿದೀರಾ?" ಎಂದೆ. 

ಅದಕ್ಕವರು "ಒಬ್ಬ ಗುರು ಇದ್ನಂತೆ. ಅವರೊಂದಿಗೆ ಹಲವಾರು ಶಿಷ್ಯರಿದ್ರಂತೆ. ಎಲ್ರೂ ವೇದ-ವೇದಾಂತ ಪರಿಣಿತರಾದರೂ ಒಬ ಶಿಷ್ಯ ನಿನ್ನಂತವನು ಏನ್ ಮಾಡಿದ್ರೂ ವಿದ್ಯೆ ತಲೆಗೆ ಹತ್ಲಿಲ್ವಂತೆ. ಆದ್ರೆ ಸೇವೆಯಲ್ಲಿ ಮಾತ್ರ ನಿನ್ನಂತೆ ಸದಾ ಮುಂದಿದ್ನಂತೆ". 

"ಇದ್ದಕ್ಕಿದ್ದಂತೆ ಒಂದು ದಿನ ಗುರು ದೇಹ ಬಿಟ್ಟನಂತೆ. ಬಿಡುವ ಮೊದಲು ಆ ನಿನ್ನಂತಹ ಶಿಷ್ಯನನ್ನು ಕರೆದು ಒಂದು ಕಡೆ ಬೆರಳು ಮಾಡಿ ತೋರಿಸಿ ದೇಹ ಬಿಟ್ಟರಂತೆ. ಆ ಶಿಷ್ಯ ಬೆರಳು ತೋರಿಸಿದತ್ತ ನೋಡಲಾಗಿ ಅಲ್ಲಿ ಒಂದು ಹಳೆಯ ಬಟ್ಟೆ (ಅರಿವೆ). ಅದರ ಮುಂದೆ ಒಂದು ಚೂರು ಇದ್ದಿಲು ಹಾಗೂ ಅದರ ಮುಂದೆ ದೀಪ (ಬೆಳಕು) ವಿತ್ತಂತೆ" ಎಂದು ಮಾರ್ಮಿಕವಾಗಿ ನುಡಿದರು. 

ನಾನು ಅದರ ಒಳಾರ್ಥ ಅರಿಯಲು ಇಂದಿಗೂ ಪ್ರಯತ್ನಿಸುತ್ತಲೇ ಇರುವೆನು. 

ಚರಣದಾಸನಾದ ನನ್ನ ಹೆಸರನ್ನು ಬದಲಾಯಿಸಿ ಕರೆಯಲಾರಂಭಿಸಿದ ಗುರುನಾಥರು, ಒಮ್ಮೆ ಒಂದು ಬೆಳ್ಳಿಯ ಉಡುದಾರ ತರಿಸಿ ನನ್ನ ಸೊಂಟಕ್ಕೆ ಕಟ್ಟಿ, "ಯಾಕೆ ಇಷ್ಟು ಭಯ ಹಿಂಸೆ ನಿನಗೆ? ಅದಕ್ಕೆ ಇದನ್ನು ಕಟ್ಟಿರುವೆ" ಎಂದಿದ್ದರು. 

ಮತ್ತೊಮ್ಮೆ "ನಾನು ಇಚ್ಛಾಮರಣಿ. ಎಂದು ಬೇಕೋ ಅಂದು ದೇಹ ಬಿಡುವೆ" ಅಂದಿದ್ರು. 

"71ನೇ ವರ್ಷ ತುಂಬ ಸಂದಿಗ್ಧವಾದದ್ದು. ಅದನ್ನು ದಾಟಿದರೆ 83ರವರೆಗೂ ದೇಹ ಬಿಡೋಲ್ಲ" ಅಂದಿದ್ರು. 

ದೇಹ ಬಿಡುವ ಕೆಲ ತಿಂಗಳಿನಿಂದ ಹಲವಾರು ಶಿಷ್ಯರ ಮನೆಗಳಲ್ಲಿ ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳ ಸ್ಪರ್ಶ ಪಾದುಕಾ ಸಮಾಧಿ ನಿರ್ಮಿಸಿದ್ದರು. ಊರಿಂದ ಹೊರಗೆ ಎಲ್ಲೇ ಇದ್ದರೂ ರಾತ್ರಿ 10:30ರ ಒಳಗೆ ಮನೆ ತಲುಪುತ್ತಿದ್ದರು. 

ಒಮ್ಮೆ ರಾತ್ರಿ ದೌಡಾಯಿಸಿ ಮನೆಗೆ ಬಂದವರೇ, "ಎಲ್ಲಿ ಊರ ಹೊರಗೆ ಜೀವ ಹೋಗುತ್ತೋ ಅಂತ ಆತಂಕವಾಗಿತ್ತು ಕಣಯ್ಯಾ" ಅಂದಿದ್ರು. ಪದೇ ಪದೇ "ಅಯ್ಯಾ ಇನ್ನು ಈ ದೇಹ ಇಟ್ಕೊಂಡು ಕೆಲಸ ಮಾಡೋಕಾಗಲ್ಲ ಹೊರೆ ಜಾಸ್ತಿ ಆಯ್ತು ಕಣೋ" ಅಂತ ಹೇಳ್ತಿದ್ರು. 

ದೇಹ ಬಿಡುವ ಎರಡು ದಿನ ಮೊದಲು ಚಿಕ್ಕಮಗಳೂರಿನ ಹಲವು ಭಕ್ತರನ್ನೆಲ್ಲಾ ಒಂದೆಡೆ ಸೇರಿಸಿ ಊಟ ಹಾಕಿಸಿ ಎಲ್ಲರನ್ನೂ ಮಾತನಾಡಿಸಿ, ಕಾರನ್ನೇರಿ ದೃಷ್ಟಿ ಕಾಣುವವರೆಗೂ ಕೈ ಬೀಸುತ್ತಾ ಇದ್ದರು. ವಿಪರೀತ ಲೋಕದ ಭಾರ ಹೊತ್ತಿದ್ದರಿಂದ ಮೊಣಕಾಲು ಗಂಟಿನಲ್ಲಿ ಊತವಾಗಿ ಕೀವು ತುಂಬಿತ್ತು. ಕೆಲವು ವೈದ್ಯರು ತಪಾಸಣೆ ನಡೆಸಿ ಕಾಲಿಗೆ ಯಾವುದೇ ಆಪರೇಷನ್ ಬೇಡ, ಕೇವಲ ಮಾತ್ರೆಯಿಂದಲೇ ಗುಣಪಡಿಸಬಹುದೆಂದು ತಿಳಿಸಿದ್ದರು. 

ಆದರೆ ಕೆಲವರ ವ್ಯಕ್ತಿಗತ ಪ್ರತಿಷ್ಠೆಯಿಂದಾಗಿ ಆಪರೇಷನ್ ಆಗಲೇ ಬೇಕಾದ ಅನಿವಾರ್ಯತೆ ಉಂಟಾಯಿತು. 

ನಾನು ಎಂದಿನಂತೆ ನಿತ್ಯದ ಕಾರ್ಯಗಳನ್ನೆಲ್ಲ ಪೂರೈಸಿ ಗುರುನಾಥರ ದರ್ಶನಕ್ಕೆಂದು ನಿತ್ಯದಂತೆ ಅವರು ಮಲಗಿರುತ್ತಿದ್ದ ಕೋಣೆಗೆ ಹೋದೆ. ತಲೆ ಹಿಂದಕ್ಕೆ ಮಾಡಿ ಕುಳಿತಿದ್ದ ಗುರುನಾಥರು, "ಅಯ್ಯ, ವೈದ್ಯರು ಹೇಳಿದ್ರು ಆಪರೇಷನ್ ಅನಿವಾರ್ಯವಂತೆ. ಹೋಗಿ ಬರ್ತೀನಿ. ಮನೆ ಕಡೆ ಜೋಪಾನ" ಅಂದ್ರು. 

ನಾನು, "ನಿನ್ನೆ ತಾನೇ ಆಪರೇಷನ್ ಬೇಡಾಂತ ಆಗಿತ್ತಲ್ಲಾ ಸಾರ್, ಈಗೇಕೆ ಇದ್ದಕ್ಕಿದ್ದಂತೆ ಈ ತೀರ್ಮಾನ?" ಅಂದೆ. 

ಅದಕ್ಕವರು "ಜನರಿಗೆ ಈ ದೇಹದ ಮೇಲೆ ಅದೊಂದೇ ಆಸೆ ತಾನೇ? ಪೂರೈಸಿಕೊಳ್ಳಲಿ ಬಿಡು" ಅಂದ್ರು. 

ನಾನದಕ್ಕೆ, ಜನರಾಸೆ ಪೂರೈಸಿದರೆ ನೋವು ಅನುಭವಿಸಬೇಕಾದದ್ದು ನೀವಲ್ವಾ ಸಾರ್? ನಾನೇ ತಡೆಯಲೇ?" ಅಂದೆ. 

ಅದಕ್ಕವರು "ಇನ್ನೂ ಮಾತನಾಡಬೇಡ" ಅಂದ್ರು. ದೇಹ ಭಾವವನ್ನು ಸಂಪೂರ್ಣವಾಗಿ ತೊರೆದಿದ್ದ ಗುರುನಾಥರು ದೇಹದ ಮೇಲಿನ ಕಾಳಜಿಯನ್ನು ಸಂಪೂರ್ಣ ಕಡೆಗಣಿಸಿದ್ದರು. ಕೆಲವು ಶಿಷ್ಯರು ತಮ್ಮ ಮಾತಿನಂತೆಯೇ ನಡೆಯಬೇಕೆಂದು ಗುರುನಾಥರ ಗಾಯದ ಮೇಲೆ ಒತ್ತಿ ಹಿಂಸೆ ಮಾಡುತ್ತಿದ್ದಾಗಲೂ ಏನೊಂದೂ ಮಾತನಾಡುತ್ತಿರಲಿಲ್ಲ. 

ದೇಹ ಬಿಡುವ ಬಹುಶಃ ಒಂದು ತಿಂಗಳ ಮೊದಲು ನಾನು ನನ್ನ ಕೆಲಸದ ವಿಚಾರವಾಗಿ ಗುರುನಾಥರಲ್ಲಿ ಕೇಳಬೇಕೆಂದುಕೊಂಡಿದ್ದರೂ ಕೇಳಿರಲಾಗಲಿಲ್ಲ. ಅದಾಗಿ ಒಂದು ವಾರದ ನಂತರ ಹಳೆಯ ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಸಂಕಲ್ಪ ಮಾಡಿದ್ದ ಏಳು ಜನ ಯುವಕರು ಬಂದಿದ್ದರು. ನನ್ನ ಕೈಯಿಂದ ಅವರೆಲ್ಲರಿಗೂ ಕೈ ತುಂಬ ದಕ್ಷಿಣೆ, ಎಳನೀರು, ಕಾಯಿ, ಕೊಡಿಸಿದರು. 

ಆಗ ಗುರುನಾಥರು "ಈಗ ಏನೋ ಕೇಳಬೇಕೆಂದು ಒಂದು ವಾರದಿಂದ ಪ್ರಯತ್ನಿಸುತ್ತಿರುವನು. ಆದ್ರೆ ಬೇಕಾದ್ದಾಗಲಿ ನಾ ಅವನನ್ನು ಬಿಡಲ್ಲ. ಅವನಿಂದ ಒಂದು ಕಾರ್ಯವಾಗಬೇಕಾಗಿದೆ. ಅದಾದ ನಂತರ ಅವನ ಉದ್ದೇಶವನ್ನು ಪೂರೈಸುವೆ" ಎಂದು ನುಡಿದರು. ಹೀಗೆ ನಮ್ಮ ಮನದ ಸಣ್ಣ ಸಣ್ಣ ಏರುಪೇರುಗಳನ್ನು ಸದಾ ಗುರುತಿಸುತ್ತಿದ್ದ ಗುರುನಾಥರು ಕಾಲ ಬಂದಾಗ ಉತ್ತರಿಸುತ್ತಿದ್ದರು. 

ಬಹುಶಃ ಒಂದು ವಾರದ ಮೊದಲು ನನಗೆ ಯೋಗದ ಹಲವು ಪ್ರಕಾರಗಳನ್ನು ಹೇಳಿಕೊಟ್ಟರು. 

ಗುರುನಾಥರ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿದ್ದ ಓರ್ವ ಮಹಿಳೆಯ ಮಗಳು ತೀರ್ಥಹಳ್ಳಿಯಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದರು. ವಿಷಯ ತಿಳಿದ ಗುರುನಾಥರು ಕರೆ ಮಾಡಿ ಆಕೆಗೆ ಧೈರ್ಯ ತುಂಬಿದರು ಹಾಗೂ ಔಷಧಿಯನ್ನೂ ತಿಳಿಸಿದರು. 

ಅಂತೆಯೇ ಆಕೆ ಗುಣಮುಖಳಾಗಿ ವಿಷಯ ತಿಳಿಸಲು ನನಗೆ ಕರೆ ಮಾಡಿದ್ದರು. ಆಗ ಅವರೊಂದಿಗೆ ಮಾತನಾಡಿದ ಗುರುನಾಥರು "ಎಲ್ಲಿ ನಂಗೆ ಬೋಂಡ, ಸಜ್ಜಿಗೆ ಕೊಡಲ್ವೇ?" ಅಂದ್ರು. 

ಅದಕ್ಕೆ ಆ ತಾಯಿ "ಗುರುಗಳೇ ಊರಿಂದ ಬಂದಾಕ್ಷಣ ಮಾಡಿಕೊಡ್ತೀನಿ" ಅಂದ್ರು. 

ಆಗ ಗುರುನಾಥರು "ಇಲ್ಲ, ನನ್ನ ಪರವಾಗಿ ನಮ್ಮ ಚರಣದಾಸನಿಗೆ ಮಾಡಿಕೊಡು ಆಯ್ತಾ?" ಅಂದ್ರು. 

ಅದೇ ರಾತ್ರಿ 11:30 ರ ಸುಮಾರಿಗೆ ದೇಹತ್ಯಾಗ ಮಾಡಿದರು. 

ಇದಕ್ಕೂ ಒಂದು ವಾರ ಮೊದಲು ಅಲ್ಲಿನ ಓರ್ವ ಮಹಿಳೆಯನ್ನು  ಕರೆದು, "ನೋಡು, ಇನ್ನೊಂದೇ ವಾರ ನಾ ಹೊರತು ಹೋಗ್ತೀನಿ. ಆಗ ಓರ್ವ ವ್ಯಕ್ತಿ, ಅವರಿಗೆ ಸಮಾಧಾನ ಹೇಳೋಕೆ ಧೈರ್ಯವಿರೋ ಮಹಿಳೆ ಯಾರಂತ ನಮ್ಮ ಚರಣದಾಸನನ್ನು ಕೇಳ್ತಾರೆ. ಆಗ ಅವನು ನಿಮ್ಮ ಹೆಸರು ಹೇಳ್ತಾನೆ. ಹಾಗೂ ಬೆಳಗಿನ ಜಾವ 4:30 ಕ್ಕೆ ಚರಣದಾಸನೇ ಕರೆಯೋಕೆ ಬರ್ತಾನೆ. ಸಿದ್ಧವಾಗಿರಮ್ಮ" ಅಂದಿದ್ರು. ಆದ್ರೆ ಯಾರಿಗೂ ಅವರ ಮಾತಿನ ಮರ್ಮ ಅರ್ಥವಾಗಿರಲಿಲ್ಲ. ಅವರು ಹೇಳಿದಂತೆಯೇ ನಡೆದಾಗಲೇ ನಮಗೆ ಅರ್ಧವಾಗಿದ್ದು. ಆದರೇನು? ಕಾಲ ಮಿಂಚಿ ಹೋಗಿತ್ತು. 

ಕೇವಲ ಎರಡು ದಿನ ಮೊದಲು ರಾತ್ರಿ ಓರ್ವ ಭಕ್ತರಿಗೆ ಕರೆ ಮಾಡಿ "ಒಂದು ಸಾರಿ ಬಂದು ಹೋಗು ಸಾಕು. ನನ್ನ ಜೀವ ಒಂದು ವರ್ಷ ಉಳಿಯುತ್ತೆ. ಕಾರು ಕಳಿಸುತ್ತೇನೆ. ನಾನಿನ್ನು ಹಲವು ಕೆಲಸ ಮಾಡಬೇಕಿದೆ" ಅಂದ್ರು. 

ಗುರುನಾಥರಿಂದ ಹಲವು ಅನುಕೂಲಗಳನ್ನು ಪಡೆದಿದ್ದ ಆ ತಾಯಿ ಗುರುವಾಕ್ಯವನ್ನು ತಿರಸ್ಕರಿಸಿದರು. ಆಗ ಗುರುನಾಥರು "ಇನ್ನೂ ಕೇವಲ 48 ಗಂಟೆ ಕಾಲ. ಆಮೇಲೆ ನಾ ಹೊರಟು ಹೋಗ್ತೀನಿ" ಅಂದ್ರು. ಆದರೆ ಎಲ್ಲಾ ಅನುಕೂಲ ಪಡೆದಿದ್ದ ಅವರು ಗುರುವನ್ನು ಮರೆತರು. ಸಾಮಾನ್ಯವಾಗಿ ಗುರುನಾಥರು ಈ ರೀತಿ ಹೇಳಿದಾಗ "ಹೆದರಿಸಬೇಕು ಕಣಯ್ಯಾ.... " ಎಂದು ಕಣ್ಣು ಮಿಟುಕಿಸುತ್ತಿದ್ದರು. ಆದರೆ ಅಂದು ಅವರು ನಿರ್ಲಿಪ್ತ ಭಾವದಲ್ಲಿದ್ದರು. ನನಗೆ ವಿಚಿತ್ರವೆನಿಸಿತು. 

ಈ ಸಂದರ್ಭ ಗಮನಿಸಿದಾಗ ಗುರುನಾಥರು ಆಗಾಗ್ಗೆ ನಾವಿಬ್ಬರೇ ಇರುವಾಗ ಹೇಳುತ್ತಿದ್ದ ಒಂದು ಮಾತು ನೆನಪಾಗುತ್ತದೆ:- "ಅಯ್ಯಾ, ಜಗತ್ತಿನಲ್ಲಿ ಮನುಷ್ಯನಷ್ಟು ಕೆಟ್ಟ ಪ್ರಾಣಿ ಇನ್ನೊಂದಿಲ್ಲ ಕಣೋ. ಹಾವಿಗೆ ಹಲ್ಲಿನಲ್ಲಿ ವಿಷ. ನಾಯಿಗೆ ಜೊಲ್ಲಿನಲ್ಲಿ ವಿಷ. ಆದ್ರೆ ಮನುಜನಿಗೆ ಮೈ ಎಲ್ಲಾ ವಿಷ. ಅವನಿಗೆ ಕೃತಜ್ಞತೆ ಎಂಬುದಿಲ್ಲ. ಆದ್ರೆ ಸಾಧನೆ ಮಾಡಲು ಈ ಜನ್ಮಕ್ಕಿಂತ ಶ್ರೇಷ್ಠ ಜನ್ಮ ಇನ್ನೊಂದಿಲ್ಲ" ಅನ್ನುತ್ತಿದ್ದರು. 

ಮತ್ತೊಮ್ಮೆ "ಅಯ್ಯಾ ನೀ ಎಲ್ಲರನ್ನೂ ನಮ್ಮವರು ಅಂದುಕೊಂಡಿದೀಯಾ? ಈ ದೇಹ ಬಿಡಲು ನಿಂಗೇ ಗೊತ್ತಾಗುತ್ತೆ. ಆ ನಂತರ ನಾಯೀನೂ ನಿನ್ನ ಮೂಸಿ ನೋಡಲ್ಲ. ನೋಡ್ತಾ ಇರು" ಅಂದಿದ್ರು. 

ಅದು ಬದುಕಿನ ವಾಸ್ತವ. ಶಿಷ್ಯ ವೃಂದದಲ್ಲಿ ಕೆಲವೇ ಕೆಲವರನ್ನು ಹೊರತುಪಡಿಸಿ ಯಾರೊಬ್ಬರೂ ನನ್ನತ್ತ ತಿರುಗಿ ನೋಡಲಿಲ್ಲ. ಮಾತ್ರವಲ್ಲ, ಆಳಿಗೊಂದು ಚುಚ್ಚು ಮಾತನಾಡತೊಡಗಿದರು. ಇದು ನನಗೆ ಬದುಕನ್ನು ಕಲಿಸಿತೆನಿಸುತ್ತದೆ.

ಮುಂದೆ ಒಂದು ದೊಡ್ಡ ಕಾರ್ಯಕ್ರಮ ಮಾಡಿ 250ಕ್ಕೂ ಹೆಚ್ಚು ವಾಹನ ನಿಲ್ಲಿಸಲು ಏರ್ಪಾಡು ಮಾಡಬೇಕು ಅಂತಾ ಇದ್ರೂ. ಅದು ಆ ದೇಹ ಅಂತ್ಯವಾದ ದಿನ ನೆರವೇರಿತು. 

ಒಂದಿಷ್ಟು ಮಾತು:- "ಗುರುನಾಥರು ಜನರನ್ನು ಮೊದಮೊದಲು ಅವರಿಚ್ಛೆಯಂತೆ ನಡೆಯಲು ಬಿಟ್ಟು ನಿಧಾನವಾಗಿ ತನ್ನ ದಾರಿಗೆ ತಂದು ಆನಂತರ ಶಿಸ್ತನ್ನು ಕಲಿಸುತ್ತಿದ್ದ ರೀತಿ ನಿಜಕ್ಕೂ ಸ್ಮರಣೀಯ. 

ಅವರಾಡುತ್ತಿದ್ದ ಕೆಲ ಮಾತುಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ. 

ಕಂಡವರ ಕೈ ಬ್ಲಡ್ಡು. ಡಾಕ್ಟರ್ ಕೈಗೆ ದುಡ್ಡು. 

ಬ್ಯಾಂಕ್  ಅಂದ್ರೆ ಕಂಡವರ ದುಡ್ಡನ್ನು ಬಡ್ಡಿಗೆ ಬಿಟ್ಟು ತಾವು ಜೀವನ ಮಾಡುವುದು. 

ಈ ಕಪ್ಪೆಗಳು ಕೊಚ್ಚೆಯಲ್ಲಿದ್ರೂ ಎಷ್ಟು ಸುಖವಾಗಿ ಜೀವನ ಮಾಡ್ತಾವಯ್ಯಾ? ಆದ್ರೆ ಈ ಮನುಷ್ಯ ಕರ್ಲಾನ್ ಹಾಸಿಗೆ, ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಫ್ಯಾನು ಎಲ್ಲಾ ಇದ್ರೂ ಹುಟ್ಟೋ ಮಗು ಮಾತ್ರ ಅಷ್ಟಾವಕ್ರ. ಯಾಕಯ್ಯಾ ಹೀಗೆ? ಹೇಳು ನೋಡೋಣ ಅಂತಿದ್ರು. 

"ಅಯ್ಯಾ ಚರಣದಾಸ ಕೊನೆಗೆ ನನ್ನ ನಿನ್ನ ಜೊತೆ ಇರೋದು ಈ ನಾಯಿ ಕತ್ತೆ ಮಾತ್ರ ಕಣೋ. ಅವನ್ನ ಕಡೆಗಣಿಸಬೇಡ" ಅಂದಿದ್ರು. 

ನೀ ಎಲ್ಲೇ ಹೋದ್ರೂ ಜೊತೆಗಿರ್ತೀನಿ ಬಿಡಲ್ಲ. ಆ ದೇಹ ನಿಂದಲ್ಲವೋ, ನಂದು ಎಮ್ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಜೀವನದ ಕಲ್ಲು ಬೆಟ್ಟಗಳ ಹಾದಿಯನ್ನು ಧೈರ್ಯವಾಗಿ ಸಾಗಿಸುತ್ತಿದ್ದೇನೆ. ಬಂದದ್ದನ್ನು ಬಂದಂತೆ ಸ್ವೀಕರಿಸುತ್ತಾ ಬದುಕಿನಬಂಡಿ ಸಾಗಿಸುತ್ತಿದ್ದೇನೆ. 

ಮಡಿ-ಮೈಲಿಗೆ ಜಾತಿಗಳ ಬಗ್ಗೆ ಗುರುನಾಥರು ಹೀಗೆ ಹೇಳುತ್ತಿದ್ದರು. "ನಂಗೆಂತದಯ್ಯಾ ಮಡಿ-ಮೈಲಿಗೆ? ಯಾವುದಯ್ಯಾ ಜಾತಿ? ಇನ್ನೊಂದು ವಿಚಾರಕ್ಕೆ ಹೋಗೋದೇ ಮೈಲಿಗೆ. ಇತರರ ವಿಚಾರಕ್ಕೆ ಹೋಗದಿರುವುದೇ ಮಾಡಿ. ಬರೇ ಸ್ನಾನ ಮಾಡಿ ಮಡಿಬಟ್ಟೆ ಉಟ್ಟುಕೊಂಡು ಬಿಟ್ರೆ ಸಾಲದು. ಮನಸ್ಸನ್ನು ಹದಗೊಳಿಸಬೇಕು, ಶುದ್ಧಗೊಳಿಸಬೇಕು ಕಣ್ರಯ್ಯಾ" ಅಂತಿದ್ರು. 

ಒಮ್ಮೆ ಓರ್ವ ಮಹಿಳೆ ಮನೆಯಲ್ಲಿ ತುಂಬಾ ತೊಂದರೆ ಎಂದು ಬಂದಿದ್ದರು. ಅದಕ್ಕವರು ನೀಡಿದ ಪರಿಹಾರ "ಇನ್ನೊಬ್ಬರ ಮನೆ ವಿಚಾರ ಮಾತಾಡ್ತೀಯಲ್ಲಾ. ಅದೇ ನಿಂಗೆ ಹಿಂಸೆ ಆಗ್ತೀರೋದು. ಬಿಟ್ಟುಬಿಡು ಅದನ್ನ. ಎಲ್ಲ ಸರಿ ಹೋಗುವುದು" ಎಂಬುದಾಗಿತ್ತು. 

"ಎಂದಿಗೂ ನಿನ್ನೆ ಹಾಗೂ ನಾಳೆ ಬಗ್ಗೆ ಯೋಚಿಸಬೇಡ. ಸದಾ ವರ್ತಮಾನದಲ್ಲಿರು. ಒಂದು ಕ್ಷಣವೂ ಮತ್ತೆ ತಿರುಗಿ ಬರುವುದಿಲ್ಲ. ಅದಕ್ಕಾಗಿ ಪ್ರತೀ ಘಳಿಗೆಯನ್ನು ನಿಷ್ಕಾಮ ಕರ್ಮದಲ್ಲಿ ಭಗವಂತನ ನಾಮಸ್ಮರಣೆಯಲ್ಲಿ ಕಳೆಯಿರಿ" ಎನ್ನುತ್ತಿದ್ದರು.........,,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment