ಒಟ್ಟು ನೋಟಗಳು

Saturday, November 19, 2016

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 46


ಸೇವೆ  





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಮ್ಮೆ ಚರಣದಾಸನಾದ ನಾನು ಎಂದಿನಂತೆ  ನನ್ನ ಕೆಲಸ ಕಾರ್ಯಗಳಲ್ಲಿ ಮಗ್ನನಾಗಿದ್ದೆ. ಸಾಮಾನ್ಯವಾಗಿ ಗುರುನಾಥರು ಯಾರಿಗೂ ಇಂತಹ ಕೆಲಸ ಮಾಡೆಂದು ಹೇಳುತ್ತಿರಲಿಲ್ಲ. ಆದರೆ, ಗುರುನಿವಾಸದಲ್ಲಿನ ನಿತ್ಯ ಕಾರ್ಯಗಳನ್ನು ಗಮನಿಸಿ ಯಾರು ಪ್ರತಿನಿತ್ಯ ಆ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರೋ ಅವರಿಗೆ ಗುರುನಾಥರು ಹೆಚ್ಚಿನ ಜವಾಬ್ದಾರಿ ಹಾಗೂ ಕೆಲಸವನ್ನು ಹೇಳಿ ಕೊಡುತ್ತಿದ್ದರು. ಗುರುಕೃಪೆಯಿಂದ ನನಗೆ ಅಂತಹ ಅದೃಷ್ಟ ಬಂದಿತ್ತು. 

ಒಂದು ದಿನ ಹೀಗೆ ನನ್ನ ಕೆಲಸದಲ್ಲಿ ತಲ್ಲೀನವಾಗಿದ್ದಾಗ ಓರ್ವರು ನನ್ನ ಕೆಲಸಗಳನ್ನು ಗಮನಿಸಿ "ಏನಪ್ಪಾ... ಏನ್ ಅದೃಷ್ಟಾನೋ ನಿಂದೂ...... ಎಂತಹ ಗುರು ಸೇವಕನಪ್ಪಾ ನೀನೂ..... " ಎಂದು ಉದ್ಗರಿಸಿದರು. ನಾನು ಸುಮ್ಮನೆ ನಕ್ಕೆ. ಆಗ ಈ  ಮಾತನ್ನು ಕೇಳಿಸಿಕೊಂಡ ಗುರುನಾಥರು "ಏನ್ ಬರೀ ಬಾಯಿ ಮಾತಲ್ಲಿ ಹೇಳಿಬಿಟ್ಟರೆ ಏನ್ ಪ್ರಯೋಜನ? ಚರಣದಾಸನ ಆಯಾಸವೇನಾದ್ರೂ ನಿನ್ ಮಾತಿನಿಂದ ಕಡಿಮೆ ಆಗುತ್ತಾ?"

"ನೀನೂ ಎಲ್ಲಾ ಕೆಲಸಾನೂ ಬಿಟ್ಟಾಕಿ ಅವನು ಮಾಡೋ ಕೆಲಸಕ್ಕೆ ಹೆಗಲು ಕೊಟ್ರೆ ಒಪ್ಪಬಹುದಪ್ಪಾ.. ಇಲ್ದಿದ್ರೆ ಈ ಮಾತು ಬಣ್ಣದ ಮಾತಲ್ವೇ...." ಎಂದು ಗುಡುಗಿದರು. ಮತ್ತೂ ಮುಂದುವರೆದು "ಏನಂದ್ಕೊಂಡಿದ್ದೀಯಾ ಸೇವೆ ಅಂದ್ರೆ? "

"ಈ ಗಿಡ, ಮರ, ನೀರು, ಸೂರ್ಯ, ಪ್ರಕೃತಿ ಎಂದಾದ್ರೂ ನಾವು ಸೇವೆ ಮಾಡ್ತಿದ್ದೀವಿ ಅಂತ ಹೇಳ್ಕೊಂಡ್ವಾ?" 

"ಯಾವುದೋ ಘಟನೆಗೆ ಬೇಜಾರಾಗಿ ತಮ್ಮ ಕಾರ್ಯ ನಿಲ್ಲಿಸಿದ್ವಾ? ರಜೆ ಬೇಕೆಂದು ಕೇಳಿದ್ವಾ ಇಲ್ವಲ್ಲಾ....... " 

ಹಾಗೆ ಮನುಷ್ಯ ಎಂತಹ ಕಾಲದಲ್ಲೂ ಧೃತಿಗೆಡದೆ ಏನನ್ನೂ ಪ್ರತಿಫಲಾಕ್ಷೆ ಪಡದೆ ನಿರಂತರವಾಗಿ ಕಾರ್ಯತತ್ಪರನಾಗಬೇಕು. ಅದನ್ನ ಸೇವೆ ಅಂತಾರೆ" ಎಂದು ನನ್ನತ್ತ ನೋಡಿ ನಸುನಕ್ಕರು. 

ಇದು ನನಗೆ ಸೇವೆ ಪದದ ಅರ್ಥವನ್ನು ತಿಳಿಸಿತು ಹಾಗೂ ನನ್ನ ಅಹಂಕಾರ ಕಡಿಮೆ ಮಾಡಿಕೊಳ್ಳಲು ಸಹಕರಿಸಿತು. ನನ್ನೊಡೆಯನಿಗೆ ಮನದಲ್ಲೇ ವಂದಿಸಿದೆ........ ,,,,,,,


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment: