ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 44
"ಮೌನೇನ ಕಲಹಂ...... "
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಅವರ ಪತ್ನಿಯ ಸಂಬಂಧಿಯೋರ್ವರು ಅಡಿಕೆ ವ್ಯಾಪಾರ ನಡೆಸುತ್ತಿದ್ದರು. ಗುರು ಕೃಪೆಯಿಂದ ಅವರ ವ್ಯವಹಾರ ಕೋಟಿ ಮೀರಿತ್ತು. ಹಣ, ಅಧಿಕಾರ, ಯೌವ್ವನ ಒಂದೆಡೆ ಸೇರಿದಾಗಲೂ ಮೈಮರೆವು ಬರದಂತೆ ಬದುಕುವವನೇ ಪರಿಪೂರ್ಣ ವ್ಯಕ್ತಿ ಆಗಲು ಸಾಧ್ಯ. ಅದಕ್ಕೆ ಗುರುನಾಥರು ಮೇಲಿನ ಮೂರು ಅಂಶಗಳು ಸೇರಿದಾಗಲೂ ಸೇರಿರದಂತೆ ಬದುಕಬೇಕೆಂದು ಪ್ರತಿಯೊಬ್ಬರಿಗೂ ಹೇಳುತ್ತಿದ್ದರು.
ಆ ಸಂಬಂಧಿಕರು ಹಣ ಮದದಿಂದ ವರ್ತಿಸತೊಡಗಿದರು. ಆಗಲೂ ಗುರುನಾಥರು ಅವರನ್ನು ಅಷ್ಟೇ ಗೌರವ ಪ್ರೀತಿಯಿಂದ ಕಾಣುತ್ತಿದ್ದರು. ಆ ಸಂಬಂಧಿಕರ ಮಗಳಿಗೆ ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಒಮ್ಮೆ ಎಂದಿನಂತೆ ಗುರುನಾಥರು ಊರೊಳಗೆ ಹೋಗಿ ಈಶ್ವರ ದರ್ಶನ ಮಾಡಿ ಎಲ್ಲ ಮನೆಯವರನ್ನು ಮಾತನಾಡಿಸುತ್ತಾ, ಹಣ್ಣು, ಹೂವು ನೀಡುತ್ತಾ 'ಆ ಸಂಬಂಧಿಕರ' ಮನೆ ಮುಂದೆ ಬಂದರು.
ಆಗ ಮನೆಯಲ್ಲಿದ್ದ ಆ ಹುಡುಗಿಯನ್ನು ಕರೆದು ಅಕ್ಕರೆಯಿಂದ ಮಾತನಾಡಿಸಿ ಅವಳ ಕೈಗೆ ಒಂದಿಷ್ಟು ಒಣ ದ್ರಾಕ್ಷಿಯನ್ನು ನೀಡಿದರು. ಆದರೆ ಹಣ ಮದ, ಮೈಮರೆವು ಅನಾಹುತವನ್ನು ಮಾಡಿಸುತ್ತದೆ. ಅಂತೆಯೇ ಆ ಹುಡುಗಿ ಆ ದ್ರಾಕ್ಷಿಯನ್ನು ತಾತ್ಸಾರದಿಂದ ಗುರುನಾಥರ ಮುಖಕ್ಕೆ ಎಸೆದು "ನೀನು ನಿನ ದ್ರಾಕ್ಷಿ ನಿನ್ನ ಹತ್ತಿರನೇ ಇರಲಿ" ಎಂದು ಅಬ್ಬರಿಸಿದಳು.
ಅಂತಹ ಪರಿಸ್ಥಿತಿಯನ್ನು ಸಮಚಿತ್ತದಿಂದ ಸ್ವೀಕರಿಸಿದ ನಮ್ಮ ಗುರುನಾಥರು "ನೋಡಯ್ಯಾ, ಎಂತಹ ನಡವಳಿಕೆ" ಎಂದಷ್ಟೇ ಹೇಳಿ ಮುನ್ನೆಡೆದರು.
ಆ ಹುಡುಗಿಯ ಸಹೋದರ ದನ ಕರುಗಳನ್ನು ಮೇಯಿಸಲು ದ್ವಿಚಕ್ರ ವಾಹನದಲ್ಲೇ ಅಬ್ಬರದಿಂದ ಓಡಾಡುತ್ತಿದ್ದರು.
ಒಮ್ಮೆ ಮಳೆಗಾಲದ ಕಾಲ. ಗುರುನಾಥರು ಎಂದಿನಂತೆ ಕೆಲ ಭಕ್ತರೊಂದಿಗೆ ಈಶ್ವರ ದರ್ಶನಕ್ಕಾಗಿ ಊರೊಳಗೆ ಹೋಗುತ್ತಿದ್ದರು. ಆಗ ಮಳೆ ಬಂದು ರಸ್ತೆಯ ಗುಂಡಿಗಳು ನೀರಿನಿಂದ ತುಂಬಿತ್ತು. ಅದೇ ಸಮಯಕ್ಕೆ ದನ ಹೊಡೆದು ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದ ಆ ಹುಡುಗಿಯ ತಮ್ಮ ಉದ್ದೇಶಪೂರ್ವಕವಾಗಿ ತನ್ನ ವಾಹನವನ್ನು ಗುರುನಾಥರ ಸಮೀಪ ತಂದು ಅಲ್ಲಿದ್ದ ಗುಂಡಿಗೆ ಹಾರಿಸಿ ಅದರಲ್ಲಿದ್ದ ಕೊಚ್ಚೆ ನೀರೆಲ್ಲವೂ ಗುರುನಾಥರ ಮೈಗೆ ಹಾರುವಂತೆ ಮಾಡಿ ಮುನ್ನೆಡೆದ.
ಆಗಲೂ ಗುರುನಾಥರು "ಎಂತಹ ಬಂಧುಗಳು ನೋಡಯ್ಯಾ...... !" ಎಂದಷ್ಟೇ ಹೇಳಿ ಮುನ್ನಡೆದರು. ಇದಾಗಿ ಕೆಲ ಕಾಲದ ನಂತರ ಅಡಿಕೆ ಚೇಣಿ ಮಾಡುತ್ತಿದ್ದ ಆ ಬಂಧುಗಳು ಗುರುನಾಥರ ಮೌನದ ಅರ್ಥವನ್ನು ತಿಳಿಯದೆ ಪದೇ ಪದೇ ಗುರುನಾಥರಿಗೆ ಅವಮಾನವಾಗುವಂತೆ ನಡೆದುಕೊಳ್ಳಲಾರಂಭಿಸಿದರು.
ಒಮ್ಮೆ ಇದನ್ನು ಕಂಡು ಕೆಂಡಾಮಂಡಲವಾದ ಗುರುನಾಥರು ಮನೆಯ ಮೆಟ್ಟಿಲು ಹತ್ತುತ್ತಾ ತೊಡೆ ತತ್ತಿ "ನನ್ನ ಕಾಲ ಕೆಳಗೆ ಬರಬೇಕಾಗಬಹುದು" ಎಂದು ನುಡಿದು ಮನೆಯೊಳಗೆ ಹೋದರು. ಬೆಂಕಿಯನ್ನು ಎದುರಿಸಿ ನಿಂತವರುಂಟೆ?
ಆ ವರ್ಷ ಅಧಿಕ ಲಾಭ ಪಡೆಯಲು ಅತಿ ಹೆಚ್ಚು ಅಡಿಕೆ ಖರೀದಿಸಿದ್ದ ಆ ಬಂಧುಗಳಿಗೆ ಆಘಾತ ಕಾಡಿತ್ತು. ಏರಿದ್ದ ಅಡಿಕೆ ಬೆಲೆ ಧಿಡೀರನೆ ಕುಸಿದು ಅವರು ಒಂದು ಕೋಟಿಗೂ ಹೆಚ್ಚು ಸಾಲದಲ್ಲಿ ಮುಳುಗಿದರು. ತೀರಿಸಲು ಅವರಲ್ಲಿ ಯಾವ ಮೂಲ ಸಂಪತ್ತು ಇರಲಿಲ್ಲ. ಇದರಿಂದಾಗಿ ಅವರ ಮನೆಯಲ್ಲಿ ನೆಮ್ಮದಿ ದೂರವಾಯ್ತು. ಸಾಲಗಾರರು ದಿನೇ ದಿನೇ ಮನೆ ಮುಂದೆ ಬರತೊಡಗಿದರು. ಇದ್ದ ಕೆಲವು ಎಕರೆ ಜಮೀನನ್ನು ಮಾರುವಂತಾಯಿತು. ಆದರೂ ಕೊಡಿ ಸಾಲ ತೀರಿಸಲಾಗಲಿಲ್ಲ.
ಇದರಿಂದ ಮನನೊಂದ ಆ ಬಂಧುಗಳು ಕುಡಿತಕ್ಕೆ ದಾಸರಾದರು. ಪತ್ನಿ ಖಾಯಿಲೆಗೊಳಗಾಗಿ ಹಾಸಿಗೆ ಹಿಡಿಯುವಂತಾಯಿತು. ಮಗ ಅವಮಾನ ತಾಳಲಾರದೆ ಕೊನೆಯದಾಗಿ ಗುರುನಾಥರಲ್ಲಿಗೆ ಬಂದು ಶರಣಾದರು. ಅವರಿಗೆ ಹೊತ್ತೊತ್ತಿನ ಊಟಕ್ಕೂ ಕಷ್ಟವಾಗಿ ಕೊನೆಗೆ ಗುರುನಾಥರೇ ವ್ಯವಸ್ಥೆ ಮಾಡುವಂತಾಯಿತು. ಒಮ್ಮೆ ಸಾಲದ ಕಾಟ ಜಾಸ್ತಿಯಾಗಿ ಆ ಬಂಧುಗಳ ಮಗ ಆತ್ಮಹತ್ಯೆಗೆ ಯತ್ನಿಸಿದರು. ಆಗ ಅವರನ್ನು ಕಾಪಾಡಿದ್ದು ನಮ್ಮ ಗುರುನಾಥರು. ನಂತರ ಆ ಸಾಲಗಾರರನ್ನು ಕರೆಸಿ ಮಾತನಾಡಿದ ಗುರುನಾಥರು ತಾನೇ ಹಣ ನೀಡಿ ಆ ಬಂಧುಗಳನ್ನು ಋಣಮುಕ್ತವಾಗಿಸಿದರು.
ಅಂದು ಮುಖಕ್ಕೆ ದ್ರಾಕ್ಷಿ ಎಸೆದಿದ್ದ ಆ ಹೆಣ್ಣು ಮಗಳಿಗೆ ವಿವಾಹ ಮಾಡುವವರು ಯಾರೂ ಇರಲಿಲ್ಲ. ಆಗ ಮುಂದೆ ನಿಂತ ಗುರುನಾಥರು ಅವಮಾನವನ್ನೆಲ್ಲ ಸಹಿಸಿಕೊಂಡು ಆಕೆಗೆ ವಿಹಾಹ ಮಾಡಿ ತಂದೆ ತಾಯಿಗಳು ಮಾಡಬೇಕಾದ ಕರ್ತವ್ಯವನ್ನು ಮುಗಿಸಿದರು.
ಇಲ್ಲಿ ನಾವು ಗಮನಿಸಬೇಕಾದ್ದು ಈ ಎಲ್ಲ ಘಟನೆಗಳನ್ನಲ್ಲ. ಬದಲಿಗೆ ಈ ಘಟನೆಗಳ ಹಿಂದೆ ತನ್ನೆಲ್ಲ ಮಾನ ಅವಮಾನಗಳನ್ನು ಈಶ್ವರನಿಗೆ ಸಮರ್ಪಿಸಿ ನಿಂತ ಗುರುನಾಥರ ಮೌನದ ಹಿಂದಿನ ಮರ್ಮ.
ಈ ಘಟನೆಗಳನ್ನು ನೋಡಿದಾಗ "ಮೌನೇನ ಕಲಹಂ ನಾಸ್ತಿ. ಕವಳಂ ಜಾಸ್ತಿ" ಎಂದು ಗುರುನಾಥರು ಆಗಾಗ್ಗೆ ನಗುತ್ತಾ ಹೇಳುತ್ತಿದ್ದ ಮಾತು ನೆನಪಾಗುತ್ತದೆ.
"ಸುಮ್ಮನಿದ್ದವರನ್ನು ಬ್ರಹ್ಮನೂ ಗೆಲ್ಲಲಾರ" ಎಂಬ ನಾಣ್ಣುಡಿ ಇಂತಹ ಘಟನೆಗಳಿಂದ ಪೂರ್ಣಾರ್ಥ ಪಡೆಯುವುದು ಎನಿಸುತ್ತದೆ. ಈ ಮೌನ ಚರಣದಾಸನಾದ ನನ್ನಂತಹ ದುರಹಂಕಾರಿ ಸಿಡುಕನಿಗೆ ನಿಜವಾದ ಮಾರ್ಗದರ್ಶಿ.....,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment