ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 39
ಸುನಾಮಿ ಮುನ್ಸೂಚನೆ ಹಾಗೂ ಸನ್ಯಾಸಿಯೊಬ್ಬರಿಗೆ ಕೇಡುಗಾಲದ ಕುರಿತ ಭವಿಷ್ಯ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಈ ಘಟನೆ ನಡೆದದ್ದು ಸುಮಾರು 2004 ರಲ್ಲಿ. ಗುರುನಾಥರು ಈ ಕುರಿತು ಬಹುಶಃ ಮೂರ್ನಾಲ್ಕು ವರ್ಷ ಮುಂಚಿತವಾಗಿಯೇ ಮುನ್ನೆಚ್ಚರಿಕೆ ನೀಡಿದ್ದರೆಂದು ಸ್ವತಃ ಗುರುನಾಥರೇ ಆಗಾಗ್ಗೆ ನನ್ನೆದುರು ಹೇಳುತ್ತಿದ್ದರು.
ತಮಿಳುನಾಡು ಮೂಲದ ಖ್ಯಾತ ಮಠವೊಂದರ ಯತಿವರೇಣ್ಯರೊಬ್ಬರು ಕರ್ನಾಟಕಕ್ಕೆ ಬಂದಿದ್ದಾಗ ಅವರ ದರ್ಶನ ಪಡೆದ ಗುರುನಾಥರು ಆ ಯತಿವರೇಣ್ಯರೊಂದಿಗೆ ಕೆಲ ಕಾಲ ಇದ್ದರು. ಆಗ "2004 ರಲ್ಲಿ ತಮಗೆ ಹಾಗೂ ಮಠಕ್ಕೆ ಬಹಳ ಕೆಟ್ಟ ಕಾಲವಿದ್ದು, ಹಲವು ಆಪಾದನೆ ಬರುವುದು, ಕೊಲೆ ಆಪಾದನೆ ಬರುವುದು, ತಮ್ಮ ಬಂಧನವೂ ಆಗುವುದು. ಆದರೆ ನಂತರ ಆರೋಪ ಮುಕ್ತರಾಗುವಿರಿ. ತಮ್ಮ ಮಠದಲ್ಲಿ ರಂಗೋಲಿ ಹಾಕಿದ ನೆಲ ಒಡೆದಿದೆ. ಅದನ್ನು ಸರಿಪಡಿಸಿದಲ್ಲಿ ಈ ಪರೀಕ್ಷಾ ಕಾಲವನ್ನು ಸುಗಮವಾಗಿ ದಾಟಬಹುದು" ಎಂದೂ ಹೇಳಿದ್ದರಂತೆ. ಆದರೆ ಆ ಯತಿವರೇಣ್ಯರು ಗುರುನಾಥರ ಮಾತನ್ನು ಅಂದು ಗಂಭೀರವಾಗಿ ಪರಿಗಣಿಸಲಿಲ್ಲ ಎಂದೆನಿಸುತ್ತದೆ. ಆದರೆ ನಂತರ ನಡೆದ ಘಟನೆಗಳೆಲ್ಲವೂ ಈಗ ಇತಿಹಾಸ.
ಹಾಗೆಯೇ ಇನ್ನೊಮ್ಮೆ ಅಂದು ಅಸ್ತಿತ್ವದಲ್ಲಿದ್ದ ಸರ್ಕಾರಕ್ಕೆ 108 ದಿನಗಳು ಬಹಳ ಸಂಕಷ್ಟದ ದಿನಗಳೆಂದೂ, ಓರ್ವ ಖ್ಯಾತ ಚಲನಚಿತ್ರ ನಟನ ಅಪಹರಣವಾಗುವುದೆಂದೂ ತಿಳಿಸಿದ್ದರು. ಮಾತ್ರವಲ್ಲ ಆ ನಟನ ಹೆಸರನ್ನೂ ಕೂಡಾ ನಮಗೆಲ್ಲ ತಿಳಿಸಿದ್ದರು. ಅದು ನಡೆದಿರುವುದು ಕಣ್ಣಿಗೆ ಕಾಣುವ ಸತ್ಯ.
ಅಂದು ಗುರುನಾಥರು ಇದ್ದಕ್ಕಿದ್ದಂತೆಯೇ ವ್ಯಗ್ರರಾಗಿದ್ದರು. ಗುರುವಿಗೆ ಸದಾ ತನ್ನ ಭಕ್ತರ ಹಿತ ಚಿಂತನೆಯೇ ಪ್ರಮುಖವಾಗಿರುತ್ತದೆ ಎಂಬುದಕ್ಕೆ ಈ ಘಟನೆ ಜ್ವಲಂತ ಉದಾಹರಣೆ. ನಿಂತಲ್ಲಿ ನಿಲ್ಲಲಾಗದೆ ಓಡಾಡುತ್ತಿದ್ದ ಗುರುನಾಥರು ಮನೆಯಲ್ಲಿ ಇರಲಾಗದೆ ಭಕ್ತರ ಕಾರಿನಲ್ಲಿ ಎಲ್ಲೋ ಹೊರಟು ಹೋದರು.
ಮೂರ್ನಾಲ್ಕು ದಿನಕ್ಕೊಮ್ಮೆ ಸ್ವಲ್ಪ ಆಹಾರ ಸೇವಿಸುತ್ತಿದ್ದರು. ಬಹುಶಃ ಹದಿನೈದ್ದು ಇಪ್ಪತ್ತು ದಿನ ಇದೆ ಸ್ಥಿತಿ ಮುಂದುವರೆದಿತ್ತು. ಅವರು ಓಡಾಡುವಾಗ ತನ್ನೊಂದಿಗೆ ಓರ್ವ ವೈದ್ಯರೊಬ್ಬರನ್ನು ಹಾಗೂ ಅವರ ಕುಟುಂಬದವರೆಲ್ಲರನ್ನೂ ಕರೆದುಕೊಂಡು ಹೋಗುತ್ತಿದ್ದರು.
ಆ ವೈದ್ಯರು ರಾಜಾ ದಿನವನ್ನು ತನ್ನ ಕುಟುಂಬದೊಂದಿಗೆ ಕಳೆಯಲು ಕಡಲ ತೀರದ ಯಾತ್ರಿ ನಿವಾಸವೊಂದರಲ್ಲಿ ಕೊಠಡಿ ಕಾಯ್ದಿರಿಸಿದ್ದರು.
ಈ ವಿಷಯ ತಿಳಿದ ಗುರುನಾಥರು ಆ ಪ್ರವಾಸವನ್ನು ರದ್ದು ಪಡಿಸಲು ವಿನಂತಿಸಲು ಆ ವೈದ್ಯರು ಗುರುನಾಥರು ಹೇಳಿದಂತೆಯೇ ಪ್ರವಾಸವನ್ನು ರದ್ದುಪಡಿಸಿದ್ದರು.
ತಮಿಳುನಾಡಿನ ಕರಾವಳಿ ಮೇಲೆ ಭೀಕರ ಸುನಾಮಿ ಅಪ್ಪಳಿಸುವ ಎರಡು ಮೂರು ದಿನ ಮುಂಚಿತವಾಗಿ ಗುರುನಾಥರು ತನ್ನೊಂದಿಗಿದ್ದ ಭಕ್ತರನ್ನು ಕುರಿತು "ನನ್ನಿಂದ ಹತ್ತು ಕಿಲೋಮೀಟರ್ ದೂರದಲ್ಲಿ ಬೆಂಕಿ ಹಿಡಿದುಕೊಂಡು ಯಾರೋ ಬರುತ್ತಿದ್ದಾರೆ. ಭೂಮಿಯೊಳಗೆ ಬೆಂಕಿಯಿಂದ ಅನಾಹುತವಾಗುತ್ತದೆ. ಆದ್ದರಿಂದ ನೀರಿನಲ್ಲಿ ಅಲ್ಲೋಲ ಕಲ್ಲೋಲವಾಗಿ ಸಾವಿರಾರು ಜನರ ಸಾವು ಸಂಭವಿಸುವುದು" ಎಂದಿದ್ದರು. ಆ ವೈದ್ಯರು ತನ್ನ ಪ್ರವಾಸವನ್ನು ರದ್ದುಪಡಿಸದಿದ್ದಲ್ಲಿ ಅವರು ಕುಟುಂಬ ಸಮೇತ ಸಮುದ್ರ ರಾಜನಿಗೆ ಆಹುತಿಯಾಗಬೇಕಿತ್ತು. ಆದರೆ ಗುರು ಕೃಪೆಯಿಂದ ಉಳಿದುಕೊಂಡರು.
"ಗುರು ಕರುಣಾಮಯಿ" ಎಂದು ತಿಳಿಸಲು ಇವು ಕೇವಲ ಕೆಲವು ನಿದರ್ಶನಗಳು ಮಾತ್ರ. ಹೇಳದಿರುವುದು, ತಿಳಿಯದಿರುವುದು ಬಹಳಷ್ಟಿವೆ......,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment