ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 5
ನಾ ನಿನ್ನ ಬೆನ್ನ ಹಿಂದೆ ಇದ್ದು ನುಡಿಸ್ತೀನಿ..... ನೆಡೆಸ್ತೀನಿ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರು ಬಂದರೆಂದರೆ ಸಕ್ಕರೆಗೆ ಮುತ್ತುವ ಇರುವೆಗಳಂತೆ ಜನರು ಸೇರುತ್ತಾರೆ. ಅಂದೂ ಅಷ್ಟೇ ಯಾರೋ ಗುರುಗಳು ಬಂದಿದ್ದಾರಂತೆ ನೋಡೋಣವೆಂದು ಹೋದ ಒಬ್ಬಾಕೆಗೆ - ಗುರುನಾಥರು "ನೀನು ಭದ್ರಾವತಿಯವಳು ಅಲ್ಲವೇನಮ್ಮ" ಎಂದು ಕೇಳಿದಾಗ ಅವಾಕ್ಕಾದರು. "ಕೀರ್ತಿಭವನಕ್ಕೆ ನಾವು ಬರುತ್ತಿದ್ದೆವು. ನಿಮ್ಮ ತಂದೆಯವರನ್ನು ನಾವು ನೋಡಿದ್ದೇವೆ.... ಒಳ್ಳೆಯದಾಗಲಿ" ಎಂದರು. ಗುರುವಿಗೆ ಶ್ರದ್ಧಾಭಕ್ತಿಯಿಂದ ನಮಿಸಿದ ಅವರು ಎಡಬಿಡದೆ ಸಖರಾಯಪಟ್ಟಣಕ್ಕೆ ಹೋಗಲಿಲ್ಲ, ಸತ್ಸಂಗ ಮಾಡಲಿಲ್ಲ, ಆದರೆ ಮನದಲ್ಲೇ ಗುರುನಾಥರನ್ನು ನಿರಂತರ ನೆನೆಯುತ್ತಿದ್ದರು. ಗುರುನಾಥರೇ ಆಗಾಗ ದರ್ಶನವೀಯುತ್ತಿದ್ದರು. ಭಕ್ತರ ಭಾವಶುದ್ಧಿ ಗುರುವಿಗೆ ತಿಳಿಯದೇ? ಒಮ್ಮೆ ಎಲ್ಲಿಗೋ ಬಂದವರು ಅವರ ಮನೆಗೂ ಹೋದರು. ಮುಂದಿನ ಒಳಗಿನಲ್ಲಿ ಕುಳಿತು "ಯೋಚಿಸಬೇಡ, ನಿನ್ನ ಹಿಂದೆ ನಾನಿದೀನಿ. ನಾನು ನುಡಿಸ್ತೀನಿ.... ಅದನ್ನ ನಡೆಸ್ತೀನಿ" ಎಂದು ಅಭಯವನ್ನಿತ್ತರು.
ಮೊದಲಿಂದ 'ಗುರು'ವೆಂದರೆ ತುಂಬಾ ಭಕ್ತಿ ಇದ್ದ ಅವರಿಗೆ ಮಂತ್ರೋಪದೇಶವನ್ನೂ ಯತಿಗಳೊಬ್ಬರು ಈಗಾಗಲೇ ನೀಡಿದ್ದರಂತೆ. ಈಗ ಗುರುನಾಥರ ಕೃಪಾಶೀರ್ವಾದವೂ ಸಿಕ್ಕಿತು. ಯಾರಾದರೂ, ಏನಾದರೂ ಸಮಸ್ಯೆಗಳನ್ನು ಇವರೆದುರಿಗೆ ಹೇಳಿಕೊಂಡಾಗ ಗುರುನಾಥರನ್ನು ಸ್ಮರಿಸುತ್ತಾರೆ - ಸಮಸ್ಯೆಗೆ ಉತ್ತರವನ್ನು ಗುರುನಾಥರೇ ತಿಳಿಸಿದರಂತೆ - ಅವರು ಹೇಳಿಬಿಡುತ್ತಾರೆ. ಅದು ನೆಡೆದೇ ತೀರುತ್ತದೆ - ಎಲ್ಲರೆದುರಿಗದನ್ನು ಅವರು ಬಹಿರಂಗಪಡಿಸದಿದ್ದರೂ ಆ ಗೃಹಿಣಿಯ ಬಳಿ ಜಾತಕ ಬರೆಸಲು - ಅನೇಕರನ್ನು ಗುರುನಾಥರೇ ಹೇಳಿ ಕಳುಹಿಸುತ್ತಿದ್ದರಂತೆ. "ನನಗೇನು ಬರುತ್ತದೆ" ಎಂದಾಗ "ಇಲ್ಲ ಅವರು ಹೇಳಿ ಕಳುಹಿಸಿದ್ದಾರೆ, ನೀವೇ ಬರೀಬೇಕಂತೆ" ಎಂದಾಗ "ಗುರುವಿನಾಜ್ಞೆ" ಎಂದು ಪಾಲಿಸುತ್ತಾ ಬಂದಿದ್ದಾರೆ. "ಮೂಕಂ ಕರೋತಿ ವಾಚಾಲಂ" ಎಂಬ ಮಾತಿನಂತೆ, ಗುರುಕೃಪೆ - ಅವರಿಗೆ ತಿಳಿಯದ ವಿದ್ಯೆಯನ್ನು ತಿಳಿಯುವಂತೆ ಮಾಡಿದೆ.
ಇವರ ಸಮಸ್ಯೆಯನ್ನು ಬಗೆಹರಿಸಲೆಂದೇ ಅಂದು ಬಂದಂತೆ ಬಂದ ಗುರುನಾಥರು ದೂರದಲ್ಲಿದ್ದ ವಯೋವೃದ್ಧರೊಬ್ಬರನ್ನು ಬನ್ನಿ ಎಂದು ಕರೆಸಿಕೊಂಡರು. ಆಮೇಲೆ ನಮಗೆ ತಿಳಿದಿದ್ದು, ಅವರು ಶಂಕರಲಿಂಗ ಭಗವಾನರ ಶಿಷ್ಯರೆಂದು. ಅವರನ್ನು ಕರೆದ ಗುರುನಾಥರು "ನೀವು ನಮ್ಮೊಂದಿಗೆ ಬನ್ನಿ, ನಮ್ಮ ಕಾರು ಹತ್ತಿರಿ, ನಾವು ಹೋದಲ್ಲಿಗೆ ಬನ್ನಿ" ಎಂದು ಕರೆದೊಯ್ದರು. ಗುರುನಾಥರಲ್ಲಿ ಆ ಗುರುಬಂಧುಗಳು ಅದೇನು ಕೇಳಿದರೋ, ಇವರೇನು ಕರುಣಿಸಿದರೋ ಗುರುನಾಥರನ್ನು ಮೊದಲ ಬಾರಿಗೆ ನೋಡಿದ, ಬೆಂಗಳೂರಿನಿಂದ ಬಂದ ವ್ಯಕ್ತಿಗೆ ಗುರುಕಾರುಣ್ಯ ಒದಗಿತ್ತು. ಬಹಳ ಸಂತೋಷಚಿತ್ತರಾದ ಅವರು ಕೆಲವು ದಿನಗಳಲ್ಲೇ ಸಾಯುಜ್ಯವನ್ನು ಪಡೆದರು. ಶಂಕರಲಿಂಗ ಭಾಗವಾನರನ್ನೇ ಸದ್ಗುರುನಾಥರಲ್ಲಿ ಕಂಡ ಆ ಭಕ್ತರಿಗೆ ಅನಾಯಾಸವಾಗಿ ಸದ್ಗತಿಯನ್ನೇ ಕರುಣಿಸಿದ್ದರು.
ಹಾಲನ್ನದ ಕೈತುತ್ತನ್ನಿತ್ತ ಮಮತಾಮಯಿ
ದೇವಸ್ಥಾನದ ಕೆಲಸ ನೆಡೆಯುತ್ತಿತ್ತು. ಜೀರ್ಣೋದ್ಧಾರದ ಕಾರ್ಯ, ಮಂದಿರ, ಧರ್ಮಶಾಲೆಗಳ ಕಾರ್ಯವೆಂದರೆ ಅದಕ್ಕೊಂದು ಸಮಿತಿ, ನಾಲ್ಕಾರು ಜನ ಸದಸ್ಯರುಗಳು ಇರುವುದು ಸಹಜ. ಹೀಗೆ ಜನ ಸೇರಿದಾಗ ಭಿನ್ನಾಭಿಪ್ರಾಯ ಬರುವುದು ಸಹಜವೇ. ಅಂದು ಮಧ್ಯಾನ್ಹ ನಾಲ್ಕಾದರೂ ಅಲ್ಲಿ ಸೇರಿದ ಅವರು ಯಾರೂ ಊಟ ಮಾಡಿರಲಿಲ್ಲ. ಸಮಸ್ಯೆ ಬಗೆ ಹರಿದಿರಲಿಲ್ಲ. ವಾದ ವಿವಾದಗಳು ನೆಡೆಯುತ್ತಲೇ ಇತ್ತು.
ಇದೆ ಸಂದರ್ಭದಲ್ಲಿ ಎದುರುಮನೆಗೆ ಬಂದಿರುವ ಗುರುನಾಥರು ಇದ್ದಕ್ಕಿದ್ದಂತೆ ಬಾಗಿಲಿನೆಡೆಗೆ ಬಗ್ಗಿ ನೋಡುತ್ತಾರೆ. ಅದೇ ಸಮಯದಲ್ಲಿ ಕೆಲಸ ಮುಗಿಸಿ ಬರುತ್ತಿದ್ದವರು ಗುರುನಾಥರನ್ನು ಕಂಡು ತಮ್ಮ ಮನೆಗೆ ಬಂದು, ಅವರ ಶ್ರೀಮತಿಯ ಬಳಿ ಸಂಭ್ರಮ ಆಶ್ಚರ್ಯದಿಂದ ಗುರುನಾಥರು ಬಂದಿರುವ ವಿಚಾರ ತಿಳಿಸುತ್ತಾರೆ.
"ಭಯಕೃದ್ ಭಯನಿವಾರಕ" ರಾದ ಗುರುನಾಥರು ನಮ್ಮ ಸಮಸ್ಯೆಯನ್ನು ನಿವಾರಿಸಲೆಂದೇ ಬಂದಿದ್ದಾರೆಂಬ ನಂಬಿಕೆಯಿಂದ ಅಲ್ಲಿಗೆ ಹೋಗಿ ಗುರುನಾಥರಿಗೆ ಸದ್ಭಕ್ತಿಯಿಂದ ನಮಿಸಿದಾಗ "ಇದೇನು ಇಷ್ಟೊತ್ತಾದರೂ ಊಟ ಮಾಡಿಲ್ಲವೇ... ಬನ್ನಿ ಬನ್ನಿ ಮೊದಲು ಊಟ ಮಾಡಿ, ನಿಮಗೋಸ್ಕರ ಹಾಲನ್ನವನ್ನು ಕಲೆಸಿ ತಂದಿದ್ದೇನೆ" ಎನ್ನುತ್ತಾ ಎಲ್ಲರಿಗೂ ಕೈತುತ್ತು ಹಾಕಿ ಮಾತೆಯ ಮಮತೆಯನ್ನು ತೋರಿದರು. ನೆನೆಯದೆ ಬಂದ ಗುರುನಾಥರ ಪ್ರೀತಿಗೆ ನಾವೆಲ್ಲಾ ಮುಗ್ಧರಾಗಿಬಿಟ್ಟೆವು. ಮುಂದೆ ಅವರು ಮಾತನಾಡುತ್ತಾ "ನೀವು ಮಾಡುತ್ತಿರೋ ಕೆಲಸ ಸರಿಯಾಗಿಯೇ ಇದೆ. ನೀವೇನು ಹೆದರುವುದು ಬೇಡ. ಈ ಕಾರ್ಯ ಮುಂದುವರಿಯುತ್ತೆ. ಒಂದು ಸಮೂಹ ಎಂದ ಮೇಲೆ ಭಿನ್ನಾಭಿಪ್ರಾಯ, ಕಾಲೆಳೆಯುವ ಜನರೂ ಇರುತ್ತಾರೆ, ಆರ್ಥಿಕ ಸಮಸ್ಯೆ ತಲೆದೋರಿದೆಯಲ್ಲಾ ... ಎಲ್ಲ ಪರಿಹಾರವಾಗುತ್ತದೆ" ಎಂದು ಹೇಳುತ್ತಾ ಅಡಿಕೆಯನ್ನು ಮಂತ್ರಿಸಿ ಎಲ್ಲರಿಗೆ ಇತ್ತು ಆಶೀರ್ವದಿಸಿದರು. ಮುಂದೆ ಗುರುನಾಥರ ಕೃಪೆಯಿಂದ ಆ ಕಾರ್ಯ ಸುಸೂತ್ರವಾಗಿ ಮುಗಿಯಿತು. ನಮ್ಮ ಸಮಸ್ಯೆ, ನಮ್ಮ ಹಸಿವು ಗುರುನಾಥರಿಗೆ ಅದು ಹೇಗೆ ತಿಳಿಯಿತೋ ಅವರೇ ಬಲ್ಲರು.
ಉಪವಾಸವಿರುವ ಭಕ್ತರ ನೋವಿಗೆ ಸ್ಪಂದಿಸಿ ಹಾಲನ್ನವನ್ನಿತ್ತ ಗುರುನಾಥರು, ಏನೇ ಸಂಕಷ್ಟಗಳು ಬಂದಾಗಲೂ, ಭಕ್ತಿಯಿಂದ ಸ್ಮರಿಸಿದವರಿಗೆ ತಾವಿದ್ದಲ್ಲಿಂದಲೇ ಸಮಸ್ಯೆಗಳ ಪರಿಹಾರ ಸೂಚಿಸಿ, ಸಂಕಟಗಳಿಂದ ಪಾರು ಮಾಡಿದ್ದಿದೆ. ಮುಂದೇನೆಂದು ಅವರನ್ನು ಸ್ಮರಿಸಿ ಚಿಂತಿಸಿದಾಗ "ಹೀಗೆ ಉತ್ತರ ಹೇಳು, ಇಂತಹದೇ ಪರಿಹಾರ ಸೂಚಿಸು" ಎಂದು ಕಿವಿಯಲ್ಲಿ ಬಂದು ಹೇಳಿದಂತೆ ಪ್ರೇರಣೆ ಮಾಡಿದ್ದಿದೆ. ಮುಂದೆ ಅದು ಅಷ್ಟೇ ಕರಾರುವಾಕ್ಕಾಗಿ ನೆಡೆದ ಅನೇಕ ಘಟನೆಗಳಿವೆ.
ಗುರುವಾಕ್ಯ, ಗುರುಭಕ್ತಿ, ಗುರುಶಕ್ತಿ, ಆತನ ಮೇಲಿರುವ ನಂಬಿಕೆ ಇವು ತರ್ಕಕ್ಕೆ ಮೀರಿದ್ದುದು. ಅನುಭವವೇದ್ಯವಾದದ್ದು. ಭಾವ ಸಂವೇದಿಯಾದದ್ದು ಸಾಮಾನ್ಯರಿಗೆ ಇದೆಲ್ಲ ಏನು ಹುಚ್ಚು? ಎನಿಸದಿರದು. ಗುರುಭಕ್ತಿಯ ಹುಚ್ಚು ಹತ್ತಿದಾಗಲೇ ಜಗತ್ತಿನ ಹುಚ್ಚು ಹರಿಯುವುದು - ಸತ್ಯದ ಅರಿವಾಗುವುದು. ಗುರುನಾಥರು ಇಂತಹ ಅನೇಕ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಅನುಭವಿಗಳಿಗಿದು ವೇದ್ಯವೂ ಆಗಿದೆ.
ಬಾಲೋನ್ಮತ್ತ ಪಿಶಾಚ ರೂಪಗಳಲ್ಲೂ.....
ಗುರುವಿನ ಸ್ವರೂಪಗಳನ್ನು ಸ್ಥಿತಿಗಳನ್ನು ಅರಿಯುವುದಷ್ಟು ಸುಲಭವಲ್ಲ. ಅವರೆಷ್ಟು ಸರಳರೋ, ಅಷ್ಟೇ ಜಟಿಲರಾಗುವುದಿದೆ. ಮಗುವಿನಂತೆ ಮುಗ್ಧತೆಯ ಸಾಕಾರ ರೂಪವಾಗಿ ಕಂಡರೆ ಇನ್ನು ಕೆಲ ಸಮಯದಲ್ಲಿ ಇದೇನಿದು ಹೀಗೆ, ಲೋಕಕ್ಕೆ ವಿಚಿತ್ರವಾಗಿ ವರ್ತಿಸುತ್ತಾರಲ್ಲಾ ಎಂದು ಅಚ್ಚರಿಪಡಬೇಕಾಗುತ್ತದೆ.
ಗುರುನಾಥರೊಮ್ಮೆ ಭಕ್ತರೊಬ್ಬರ ಬಳಿ ಮಗುವಿನಂತೆ, ಮಗು ತಾಯಿಯೊಂದಿಗೆ ವರ್ತಿಸುವ ಬಾಲತನ ತೋರಿದ್ದೂ ಇದೆಯಂತೆ. ಆ ಅನುಭವ ಪಡೆದವರ ಮಾತುಗಳನ್ನೇ ನೋಡೋಣ. ಒಮ್ಮೆ "ಅಲ್ಲಾ ನೋಡಿ ನಾನು ಇಲ್ಲೇ ಇದೀನಿ - ಎಲ್ಲರೂ ಹೇಳ್ತಾರೆ ನಾನೆಲ್ಲೋ ಹೋಗಿದ್ನಂತೆ - ನಾನವರಿಗೆ ಚಪ್ಪಲಿ ಕೊಡಿಸಿದ್ನಂತೆ - ಹೌದಾ ನೀನೂ ನಂಬ್ತೀಯಾ" ಎಂದು ಮುಗ್ಧರಾಗಿ ಕೇಳಿದರಂತೆ. ಭಕ್ತರೇನು ಉತ್ತರಿಸುತ್ತಾರೆ. "ಗುರುನಾಥರೇ ಇದೇನು? ನಿಮಗೆ ಅಸಾಧ್ಯವೇನಿದೆ. ಇದನ್ನು ನಿಮ್ಮ ಭಕ್ತರೆಲ್ಲಾ ಕಂಡಿದ್ದಾರಲ್ಲ ಗುರುಗಳೇ" ಎಂದಾಗ ಅವರು ಮುಗ್ದರಾಗಿ ನೋಡುವ ನೋಟ ಮರೆಯುವಂತಿಲ್ಲ.
ಇನ್ನೊಂದು ಸಮಯದಲ್ಲಿ ಹರಿಹರದ ಭಕ್ತರೊಬ್ಬರು ಗುರುನಾಥರ ಮನೆಗೆ ಬಂದಿದ್ದಾಗ "ನಾಳೆ ನಿಮ್ಮ ಮನೆಗೆ ಬರುತ್ತೇನೆಂದು" ಹೇಳಿ ಕಳುಹಿಸಿದ್ದರು. ಹರಿಹಾರವೆಲ್ಲಿ - ಸಖರಾಯಪಟ್ಟಣವೆಲ್ಲಿ? ಅಂದು ಬೆಳಗಿನ ಜಾವ ಆ ವ್ಯಕ್ತಿ ಮನೆಯ ಬಾಗಿಲು ತೆಗೆದಾಗ ನಾಗರಾಜನ ರೂಪದಲ್ಲಿ ಬಂದು ಹೆಡೆಯಾಡಿಸುತ್ತಾ ದರ್ಶನವಿತ್ತು ಮರೆಯಾಗಿದ್ದರು.
ಇದನ್ನು ಒಬ್ಬ ಭಕ್ತರು ಗುರುನಾಥರ ಬಳಿ "ಏನು ತಾವು ಆ ದಿನ ಆಡಿದ ಮಾತನ್ನು ಉಳಿಸಿಕೊಳ್ಳಲು ಈ ರೂಪದಲ್ಲಿ ಹೋಗಿದ್ದರಂತಲ್ಲ ಗುರುಗಳೆ" ಎಂದು ಕೇಳಿದಾಗ - ಮುಗ್ಧರಾಗಿ ನಗುತ್ತ "ನಿನಗೂ ಇದು ಗೊತ್ತಾಗಿ ಹೋಯ್ತಾ ನೀನೂ ಇದನ್ನು ನಂಬಿದೆಯಾ" ಎನ್ನಬೇಕೆ. ಮುಂದುವರಿದ ಗುರುನಾಥರು "ನೋಡು ನಾನಿಲ್ಲೇ ಇದೀನಿ..... ಅದ್ಯಾರೋ ಅಲ್ಲಿ ಮಲಗಿದ್ದರಂತೆ.... ಪಾಪ ಛಳಿ ಎಂದು ನಾನೇ ಅವರಿಗೆ ಹೊದಿಕೆ ಹೊದಿಸಿ ಬಂದೆ ಎನ್ನುತ್ತಾರೆ.... ಹೌದಾ" ಎಂದಾಗ ಗುರುನಾಥರ ಲೀಲೆಗಳು ಅನಾವರಣಗೊಳ್ಳುತ್ತದೆ. ಎಷ್ಟೋ ಸಾರಿ ಹೀಗೆ ಗುರುನಾಥರ ಚರಿತೆಯು ಅವರ ಬಾಯಿಂದಲೇ ಕೇಳುವ ಸದಾವಕಾಶ ಅನೇಕರಿಗೆ ಒದಗಿದೆ. ಇಲ್ಲೆಲ್ಲಾ ತಾರ್ಕಿಕವಾಗಿ ಚಿಂತಿಸುವುದಕ್ಕಿಂತ ಗುರುವಿನ ಅಪಾರತೆಯ ಅರಿವಾಗುತ್ತದೆ. "ನೀನು ಹಸಿದುಕೊಂಡಿದ್ದೀಯಾ ಅಂತ ಗೊತ್ತಾಯ್ತು. ಅದಕ್ಕೆ ಊಟ ತಂದಿದೀನಿ ತಗೋ" ಎಂದು ಊಟ ಕಟ್ಟಿ ತಂದು ಕೊಟ್ಟಿದ್ದು, "ಮೂರು ದಿವಸದಿಂದ ಊಟ ಮಾಡಿರಲಿಲ್ಲ. ನೀನು ನನಗಾಗಿ ಸಜ್ಜಿಗೆ ತಂದಿದೀಯಲ್ಲ - ಎಲ್ಲರಿಗೂ ಕೊಟ್ಟು ನನಗೂ ಕೊಡು" ಎಂದು ತೆಗೆದುಕೊಂಡು ತಿಂದದ್ದು, ಬಂದಿರುವುದೇನೆಂಬುದನ್ನು ನೋಡದೆಯೇ "ರೊಟ್ಟಿ ಪಲ್ಯ ತಂದಿದೀಯಲ್ಲ ಬಹಳ ಒಳ್ಳೆಯದಾಯ್ತು ಒಳಗಿಡು" ಎಂದಿದ್ದು - ಸದ್ಗುರುವಿನ ಸರಳತೆಯ, ಪ್ರೀತಿಯ ಉದಾಹರಣೆಗಳಾಗಿವೆ - ಅವರವರ ಭಾವಶುದ್ಧತೆಗೆ ಅನುಗುಣವಾಗಿ ಗುರುಶಿಷ್ಯರ ಸಂಬಂಧವಿರುತ್ತಿತ್ತು. ಇದು ಲೋಕದ ಕಣ್ಣಿಗೆ ಕಾಣದಾಗಿದ್ದು ನಂಬಲಾಗದಾಗಿತ್ತಂತೆ.
ಒಮ್ಮೆ ಒಬ್ಬರನ್ನು ಪ್ರತಿನಿತ್ಯ ಕರೆಸಿ, ಎಲ್ಲ ಕೆಲಸ ಮಾಡಿಸಿಕೊಂಡು, ಎಲ್ಲರೆದುರು ಹೀನಾಮಾನ ಬೈದದ್ದುಂಟು - ತಲೆತಗ್ಗಿಸಿ ಕುಳಿತು ಅಳುತ್ತಿದ್ದ ಅವರಿಗೆ ಬಾಕಿಯ ಗುರುಬಂಧುಗಳು ಸಮಾಧಾನ ಹೇಳಿದರೂ - ಇದು ಎಷ್ಟೋ ದಿನಗಳು ಸಾಗುತ್ತಿತ್ತು. ಕೊನೆಗೊಂದು ದಿನ "ಇದಕ್ಕೆಲ್ಲಾ ಬೇಜಾರು ಮಾಡಿಕೊಂಡೆಯಾ. ಇಲ್ಲಿ ಕಾಣುವುದೇ ಸತ್ಯವಲ್ಲ - ಸತ್ಯ ಬೇರೆಯೇ ಇದೆ, ಅದನ್ನ ಅರ್ಥ ಮಾಡಿಕೋ" ಎಂದು ನಗಿಸುತ್ತಿದ್ದರು. ಅಳಿಸಿ ನಗಿಸುವ ಕಲೆ ಅವರಿಗೆ ಕರಗತವಾಗಿತ್ತು (ಗುರುಭಕ್ತೆಯೊಬ್ಬರು ತಮ್ಮೊಳಗಿನ ಅನುಭವವನ್ನು ಹೀಗೆ ಅಭಿವ್ಯಕ್ತಪಡಿಸಿದರು).
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಾಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http:// srivenkatachalaavadhoota. blogspot.in/
No comments:
Post a Comment