ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 55
ವಿಶ್ವ ಕೋಶ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
"ನೋಡಯ್ಯಾ.... ನಾವು ಒಂದು ಹೊತ್ತು ಮನೇಲಿದ್ರೆ ಎಂಟು ಹೊತ್ತು ಹೊರಗಿರ್ಬೇಕಪ್ಪಾ.... ಈ ನೋವು ನಾವು ಪಡ್ಕೊಂಡು ಬಂದಿದ್ದು, ನಾವು ಅನುಭವಿಸಲೇಬೇಕು. ಇಲ್ಲದಿದ್ದರೆ ನಂಬಿ ಬಂದ ಜನಗಳಿಗೆ ನಾವು ಏನೂ ಮಾಡೋಕ್ಕಾಗಲ್ಲ" ... ಗುರುವಾಣಿ.
ಹೀಗೆ ತನ್ನ ನಂಬಿ ಬಂದ ಭಕ್ತ ಜನರ ಈತಿ ಬಾಧೆ ನಿವಾರಣೆಗಾಗಿ ತನ್ನೆಲ್ಲಾ ನೋವನ್ನು ನಲಿವಿನಿಂದ ಸಮಚಿತ್ತದಿಂದ ಸ್ವೀಕರಿಸಿದ ನನ್ನೊಡೆಯ "ಒಂದಕ್ಷರ ಬರೀಬೇಕಾದ್ರೂ ಯೋಚಿಸಿ ಬರಿ" ಅಂತಿದ್ರು. ಬರೆದ ಮೇಲೆ ತಿದ್ದಲು ಅಥವಾ ಹೊಡೆದು ಹಾಕಲು ಬಿಡ್ತಿರಲಿಲ್ಲ. ಬರೆದ ಪುಸ್ತಕವನ್ನು ಎಸೆಯಲು ಬಿಡ್ತಿರಲಿಲ್ಲ.
"ಪುಸ್ತಕದ ಪುಟ ತಿರುವಿದ ಮೇಲೆ ಮತ್ತ್ತೆ ಹಿಂತಿರುಗಿ ನೋಡದಂತೆ ಬದುಕಬೇಕು ಕಣಯ್ಯಾ... " ಅನ್ನುತ್ತಿದ್ದರು.
ಅಂದ್ರೆ ಓದೋವಾಗಲೇ ಆಳವಾಗಿ ಓದಬೇಕು ಅನ್ನೋದು ಅದರ ಅರ್ಥ. ಹಾಗೇನೇ ಬಾಲ ಬಂಡಿಯು ಎಂದೂ ಚಿತ್ತಾಗದಂತೆ, ಮುಕ್ಕಾಗದಂತೆ ಇರಬೇಕೆಂದು ಹೇಳ್ತಿದ್ರು. ಮಾತ್ರವಲ್ಲ ತಾನೇ ಸ್ವಯಂ ಹಾಗೇ ಬದುಕಿ ತೋರಿಸಿದ್ದರು ಕೂಡಾ....
ಯಾರೇ ಭಕ್ತಾದಿಗಳು ಯಾವುದೇ ಊರಿನ ಹೆಸರು ಹೇಳಿದ್ರೂ ಸಾಕು. ಕೂಡಲೇ ಗುರುನಾಹತರು ಆ ಭಕ್ತರ ಮನೆಯ ಬೀದಿ, ಅಲ್ಲಿದ್ದ ಇತರ ಪರಿಚಯವನ್ನು ಪಟ್ಟನೆ ಹೇಳಿ ಬಿಡ್ತಿದ್ರು. ಈ ಸಂದರ್ಭ ಒಂದು ಘಟನೆ ನೆನಪಾಗ್ತಿದೆ.
ಒಮ್ಮೆ ಬೆಂಗಳೂರು ವಾಸಿಯಾದ ಗುರು ಭಕ್ತರೊಬ್ಬರು ಚರಣದಾಸನಾದ ನನಗೆ ಕರೆ ಮಾಡಿ "ತಾನು ಬದರಿ, ಕೇದಾರ, ಹರಿದ್ವಾರ, ಮೊದಲಾದ ಕಡೆಗೆ ಪ್ರವಾಸ ಹೊರಟಿರುವುದಾಗಿಯೂ ಈ ವಿಚಾರವನ್ನು ಗುರುಗಳಿಗೆ ತಿಳಿಸಬೇಕೆಂದೂ ಹೇಳಿದ್ರು. ನಾ ಹಾಗೆ ಮಾಡಲು ಕರೆ ಮಾಡಿಸಿದ ಗುರುನಾಥರು ಸುಮಾರು ಆರು-ಎಂಟು ಜನ ತನ್ನ ಶಿಷ್ಯರ ಹೆಸರು ಅವರಿರುವ ಜಾಗ, ಅವರ ಚಹರೆಯನ್ನು ಹೇಳಿ "ಹೋಗಿ ದರ್ಶನ ಮಾಡಿ ಬಾರಯ್ಯಾ... " ಎಂದ್ರು.
ನಂತರ ಕುತೂಹಲ ತಡೆಯದೇ ಚರಣದಾಸನಾದ ನಾನು "ಅಣ್ಣಾ, ಅಲ್ಲೆಲ್ಲಾ ನಿಮಗೆ ಹೇಗೆ ಪರಿಚಯವಿರಲು ಸಾಧ್ಯ? ನೀವು ಅಲ್ಲಿಗೆ ಎಂದೂ ಹೋಗಿದ್ದಿಲ್ಲ. ಇದೆಂತು ಸಾಧ್ಯ.... ?" ಎಂದು ಪ್ರಶ್ನಿಸಿದೆ. ಕೂಡಲೇ ಗುರುಗಳು "ಯೋ... ನಿನ್ ಗುರುವನ್ನು ಏನಂತ ತಿಳಿದಿದ್ದೀಯಾ... ?" ಎಂದು ಕಣ್ಣು ಮಿಟುಕಿಸಿ ನಕ್ಕರು.
ಹೀಗೆ ಸದಾ ಲೋಕವ್ಯವಹಾರದಲ್ಲೇ ಇದ್ದರೂ ಎಂದೂ ಯಾರೂ ಬೆಲೆ ಕಟ್ಟಲಾಗದಂತೆ ಅಮೂಲ್ಯವಾಗಿ ಬಾಳಿದ ನನ್ನೊಡೆಯನ ಬದುಕೇ ಒಂದು ವಿಶ್ವಕೋಶವೆಂಬುದು ನನ್ನ ಧೃಡ ನಂಬಿಕೆ ಹಾಗೂ ಅನುಭವ.
ಅದೇ ರೀತಿ ನನ್ನೊಡೆಯ ಎಂದೂ ಯಾರ ಕೆಲಸದಲ್ಲೂ ತಪ್ಪು ಹುಡುಕುತ್ತಿರಲಿಲ್ಲ. ಹೆಚ್ಚೆಂದರೆ ಹೀಗೆ ಮಾಡಿದ್ರೆ ಇನ್ನೂ ಚಂದವಿರುತ್ತಿತ್ತಲ್ವೇ?.... ಎಂದು ಕೇಳ್ತಿದ್ರು ಅಷ್ಟೇ..... ಹೀಗೆ ಪ್ರತಿ ಜೀವಿಯ ಶ್ರಮಕ್ಕೂ ಬೆಲೆ ಕೊಡುತ್ತಿದ್ದರು. ಊಟ, ಅಡುಗೆ ವಿಚಾರದಲ್ಲೂ ಹಾಗೇನೇ..... ಅದು ಹೆಂಗಾದ್ರೂ ಇರಲಿ "ಹಸಿದು ಬಂದ ಕಾಲಕ್ಕೆ ನಾಲ್ಕು ಜನಕ್ಕೆ ಅಣ್ಣ ಒದಗಿಸಿದ್ನಲ್ಲಾ ಮಾರಾಯ.... " ಅಂತ ಅಭಿಮಾನದಿಂದ ಹೇಳಿ "ತುಂಬಾ ಚೆನ್ನಾಗಿತ್ತು ಕಣಯ್ಯಾ ಅಡುಗೆ" ಅಂತಿದ್ರು. ನನ್ನೊಡೆಯನ ಈ ನಡವಳಿಕೆ ಎಂದೂ ಯಾರಿಗೂ ನೋಯಿಸಬಾರದು ಹಾಗೂ ಪ್ರತಿ ಜೀವಿನ ಶ್ರಮಕ್ಕೂ ಬೆಲೆ ಕೊಡಬೇಕೆಂಬುದನ್ನು ಸಾರಿ ಸಾರಿ ಹೇಳುತ್ತದೆ.
"ಅಯ್ಯಾ... ಈಶ್ವರ ಕೊಟ್ಟಿದ್ದನ್ನ ಒಪ್ಕೊಳ್ತಾ ಹೋಗು... ಕೊಡೋ ಕಾಲಕ್ಕೆ ಅವನೇ ಎಲ್ಲವನ್ನೂ ಒದಗಿಸುತ್ತಾನೆ" ಎಂಬ ಗುರುನಾಥರ ಮಾತು ಇಂತಹ ವಿಚಾರದಿಂದ ಮತ್ತೆ ಮತ್ತೆ ನೆನಪಾಗುತ್ತೆ.
ಎಂತಹ ಮಹಾನ್ ಶಕ್ತಿಯಾಗಿದ್ರೂ ಭುವಿಗಿಳಿದದ್ದು ಒಂದು ಮಾನವ ಜೀವಿಯಾಗಿ ಅಲ್ವೇ? ಈ ದೃಷ್ಟಿಯಿಂದ ಕಂಡಾಗ ನಮ್ಮ ಕಣ್ಣಿಗೆ ಕಾಣುತ್ತಿದ್ದ ದೇಹ ಬಾಧೆಗಳೊಂದಾದರೆ, ಇನ್ನು ಭಕ್ತಾದಿಗಳಾದ ನಮ್ಮಂತಹವರ ನಡವಳಿಕೆಯಿಂದಾಗಿ ಆ ಮಹಾಶಕ್ತಿಗದೆಷ್ಟು ನೋವಾಗಿದೆಯೋ ಎಂದು ನೆನೆದಾಗಲೆಲ್ಲಾ ಇಂದಿಗೂ ಅವನ ನಿರೀಕ್ಷೆ ಪೂರ್ಣಗೊಳಿಸಲಾಗಲಿಲ್ಲವಲ್ಲಾ ಎಂದು ಚರಣದಾಸನಾದ ನನ್ನ ಬಗ್ಗೆ ನನಗೆ ಅಸಹ್ಯವೆನಿಸಿ ಆತಂಕಗೊಳ್ಳುತ್ತೇನೆ.......,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment