ಒಟ್ಟು ನೋಟಗಳು

Wednesday, November 23, 2016

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 50


ಮಳೆ ನಿಂತಿತು 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


"ಬುದ್ಧಿ, ಮನಸ್ಸು, ಜೀವಗಳೆಲ್ಲವೂ ಸಂಪೂರ್ಣವಾಗಿ ಗುರುವಿನಲ್ಲಿ ಲಯವಾಗಲು ಬಹುಶಃ ಗುರು ಕೃಪೆಯಿಂದ ಕರ್ಮಕ್ಷಯವಾಗಬೇಕು. ಅಥವಾ ಜನ್ಮಾಂತರದ ಪುಣ್ಯವಿಶೇಷವಿರಬೇಕೇನೋ... " ಆದರೆ ಕೆಲವು ಸಂದಿಗ್ದ ಪರಿಸ್ಥಿತಿಯಲ್ಲಿ ಜನರ ಗುರುಭಕ್ತಿ ಹಾಗೂ ಧೃಡತೆ ಅಸಾಧ್ಯವನ್ನು ಸಾಧ್ಯವಾಗಿಸುವುದೆನಿಸುತ್ತದೆ. 

ಒಮ್ಮೆ ಕಳಸ ಸಮೀಪವಿರುವ ಚರಣದಾಸನ ಮನೆಯಲ್ಲಿ ಗದ್ದೆ ಕಟಾವಿನ ಸಮಯ. ಇದ್ದಕ್ಕಿದ್ದಂತೆಯೇ ಮಳೆ ಬೀಳಲಾರಂಭಿಸಿತು. ಹಾಗಂತ ಅದು ಮಳೆಯ ಕಾಲವೂ ಆಗಿರಲಿಲ್ಲ.. ವಾರ್ಷಿಕ ಒಂದು ಬೆಳೆ ಬೆಳೆಯುತ್ತಿದ್ದ ಆತನ ಸೋದರ ಚಿಂತಾಕ್ರಾಂತರಾದರೂ ತಕ್ಷಣವೇ ಗುರು ಸ್ಮರಣೆ ಮಾಡಿ "ಗುರುವೇ ಇದೆಲ್ಲವೂ ನಿನ್ನದಾದಲ್ಲಿ ಉಳಿಸಿಕೊಡು" ಎಂದು ಪ್ರಾರ್ಥಿಸಿದನು. 

ಮರುದಿನ ಬೆಳಿಗ್ಗೆ ಆಳುಗಳೊಂದಿಗೆ ಗದ್ದೆಗೆ ಹೊರಡುವವರೆಗೂ ಬೀಳುತ್ತಿದ್ದ ಮಳೆ ಇದ್ದಕ್ಕಿದ್ದಂತೆ ನಿಂತು ಹೋಗಿ ಕಾಡು ಬಿಸಿಲು ಬೀಳಲಾರಂಭಿಸಿತು. ಅಂದು ನಿಂತ ಮಳೆ ಭತ್ತ ಪೂರ್ತಿ ಕಣಕ್ಕೆ ತಂದು ಜೋಡಿಸಿ ಮುಚ್ಚಿಡುವವರೆಗೂ ಒಂದು ಹನಿ ಮಳೆ ಇರಲಿಲ್ಲ. ಎಲ್ಲ ಕೆಲಸ ಮುಗಿದಾಕ್ಷಣ ಮತ್ತೆ ಮಳೆ ಬೀಳಲಾರಂಭಿಸಿತು. 

ಮತ್ತೊಮ್ಮೆ ಗುರುನಾಥರು ದೇಹಾಂತ್ಯವಾದ ನಂತರ ಬತ್ತವನ್ನು ಹುಲ್ಲಿನಿಂದ ಬೇರ್ಪಡಿಸುವ ಕಾಲದಲ್ಲೂ ಕೇವಲ ಧೂಳು ಆರುವಷ್ಟು ಮಾತ್ರವೇ ಹನಿ ಬಿದ್ದು ಹೋಗಿತ್ತು. ಇನ್ನೊಮ್ಮೆ ನನ್ನ ಸೋದರ ಮನೆ ಮಾಡು ಬಿಚ್ಚಿ ಸ್ವಚ್ಛಗೊಳಿಸುತ್ತಿದ್ದನು. ಆಗ ನಿತ್ಯವೂ ಬರುತ್ತಿದ್ದ ಮಳೆ ಐದು ದಿನಗಳ ಕಾಲ ನಿಂತು ಹೋಗಿದ್ದು ಕೆಲಸವಾದ ನಂತರ ಮತ್ತೆ ಮಳೆ ಬೀಳಲಾರಂಭಿಸಿತು. 

ಮತ್ತೊಮ್ಮೆ ಗುರುನಾಥರ ಜೀವಿತಕಾಲದಲ್ಲಿ ನಡೆದ ಘಟನೆ. ನಾನು ನನ್ನ ಹಠಮಾರಿತನ ಹಾಗೂ ದುರಹಂಕಾರಕ್ಕೆ ಹೆಸರುವಾಸಿ. ಗುರುನಾಥರಿಗೆ ಎರಡು ಮನೆಗಳಿದ್ದು, ಹೊರ ಮನೆಯ ಹಿಂದಿನ ಹಿತ್ತಿಲಲ್ಲಿಟ್ಟಿದ್ದ ಹುಲ್ಲಿನ ಬವಣೆ ಇದ್ದಕ್ಕಿದ್ದಂತೆಯೇ ಬಿದ್ದು ಹೋಯ್ತು. ಅದು ಮಳೆಕಾಲದ ಆರಂಭಕಾಲ. ಕಾರ್ಮೋಡ ಮುಗಿಲನ್ನಾವರಿಸಿತ್ತು. ಬಿದ್ದ ಹುಲ್ಲನ್ನು ತಂದು ತುಸು ದೂರವಿರುವ ಇನ್ನೊಂದು ಮನೆಯ ಅಟ್ಟದಲ್ಲಿ ಜೋಡಿಸಬೇಕಿತ್ತು. ಹೊತ್ತು ಸಾಗಿಸುತ್ತಿದ್ದವರು ಚರಣದಾಸ ಹಾಗೂ ಅವನ ಸ್ನೇಹಿತ ಮಾತ್ರ. 

ಮಳೆ ಬೀಳುವ ಭಯ ಒಂದೆಡೆ. ಕೇಳೋಣವೆಂದರೆ ಗುರುನಾಥರು ಎಲ್ಲಿಗೋ ಹೊರಟು ಬಿಟ್ಟರು. ಮಳೆ ಹನಿ ನಿಧಾನವಾಗಿ ಬೀಳತೊಡಗಿತು. ಆಗ ಜೊತೆಗಿದ್ದ ಚರಣದಾಸನ ಸ್ನೇಹಿತ ಚರಣದಾಸನಾದ ನನ್ನನ್ನು ಕುರಿತು: "ನಿಮ್ಮಿಂದ ಸಾಧ್ಯವಿದೆ. ಗುರುಸ್ಮರಣೆ ಮಾಡಿ ದಯಮಾಡಿ ಮಳೆ ನಿಲ್ಲಿಸಿ" ಎನ್ನತೊಡಗಿದನು. 

ನಾನು ಕೆಲಕಾಲ ಯೋಚಿಸಿ ಒಂದು ಮಾತನ್ನು ಜೋರಾಗಿ ಹೇಳಿ ನಿಂತೆ. ಅದಾಗಿ ಒಂದೆರಡು ನಿಮಿಷದಲ್ಲಿ ಇದ್ದಕ್ಕಿದ್ದಂತೆಯೇ ಮಳೆ ನಿಂತು ಹೋಯ್ತು. ಸ್ನೇಹಿತ ಬಂದು ಕೈ ಮುಗಿದರು. 

ನಂತರ ವಿಷಯ ತಿಳಿದ ಗುರುನಾಥರು "ಹಾಗೆಲ್ಲಾ ಪ್ರಕೃತಿಯನ್ನು ಎದುರು ಹಾಕ್ಕೊಬ್ಬರದು ಕಣಯ್ಯಾ" ಅಂದ್ರು. ಈ ಘಟನೆಗಳನ್ನು ಗಮನಿಸಿದಾಗ ಗುರುನಾಥರು ಆಗಾಗ್ಗೆ ನನಗೆ ಹೇಳುತ್ತಿದ್ದ "ನೋಡಯ್ಯಾ, ನಾನು ಅನ್ನೋ ಈ ದೇಹ ನಿನ್ನೊಂದಿಗೆ ಇರುವಾಗ ನೀ ಹೇಗೆ ನಡ್ಕೊಳ್ತೀ ಅನ್ನೋದಕ್ಕಿಂತ, ಈ ದೇಹ ನಿನ್ನಿಂದ ದೂರವಿದ್ದಾಗಲೂ ನಿನ್ನೊಂದಿಗೆ ಇದೆ ಎಂಬ ಶುದ್ಧ ಭಾವದಲ್ಲಿ ಇರ್ತೀಯಲ್ಲಾ ಅದೇ ನಿಜವಾದ ಗುರುತ್ವ" ಎಂಬ ಮಾತು ನೆನಪಿಗೆ ಬರುತ್ತದೆ.....,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment