ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 16
ಸದ್ಗುರು ಮಾತೆಗೆ ನಮಿಸಿ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಕೂಡಲಿಯ ಒಬ್ಬರ ಮನೆಗೆ ಗುರುನಾಥರು ಆಗಾಗ್ಗೆ ಹೋಗಿ ಬರುತ್ತಿದ್ದರು. ಆ ಮನೆಯವರೂ ಗುರುನಾಥರ ಬಗ್ಗೆ ಆಪಾರ ಪ್ರೀತಿ ತೋರುತ್ತಿದ್ದರು. ಗುರುನಾಥರು ತಮ್ಮ ಮನೆಗೆ ಬರಬೇಕು, ಅವರ ಶಿಷ್ಯ ವೃಂದವೆಲ್ಲಾ ತಮ್ಮ ಮನೆಗೆ ಬಂದು ಆತಿಥ್ಯ ಪಡೆಯಬೇಕೆಂದು ಆಶಿಸುತ್ತಿದ್ದರು. ಆ ಸಜ್ಜನರು ಅಂತಹ ಸ್ಥಿತಿವಂತರಲ್ಲದಿದ್ದರೂ, ಔದಾರ್ಯ, ಗುರುಭಕ್ತಿಯಲ್ಲಿ ಅವರು ಶ್ರೀಮಂತರೆ. ಗುರುನಾಥರು ಪದೇ ಪದೇ ಅವರ ಮನೆಗೇ ಏಕೆ ಹೋಗುತ್ತಾರೆ, ಆ ಊರಲ್ಲಿ ಇನ್ನೂ ಅನೇಕ ಮನೆಗಳಿವೆಯಲ್ಲ, ಎಂದು ಅನೇಕರು ಮನದಲ್ಲಿ ಚಿಂತಿಸಿದ್ದೂ ಇದೆ. ನಿರಂತರ ಗುರುನಾಥರ ನಿರೀಕ್ಷಣೆಯಲ್ಲಿದ್ದ ಆ ಮನೆಯ ತಾಯಿ ಎಂದಾದರೂ ಅತ್ಯಂತ ಉತ್ಕಂಟಿತರಾಗಿ ಗುರುನಾಥರನ್ನು ನೋಡುವ ಅಪೇಕ್ಷೆಪಟ್ಟರೆ, ಅದು ಹೇಗೋ ಗುರುನಾಥರ ದರ್ಶನವಾಗಿಬಿಡುತ್ತಿತ್ತು.
ಗುರುನಾಥರಿಗೆ ಮುಂದಿನ ಆಗುಹೋಗುಗಳೆಲ್ಲಾ ತಿಳಿದಿದ್ದಂತೆ ಕಾಣುತ್ತದೆ. ಒಮ್ಮೆ ಆ ತಾಯಿ ಗುರುನಾಥರನ್ನು ನೋಡಬೇಕೆಂದು ಅಪೇಕ್ಷಿಸಿದರು. ಗುರುನಾಥರು ಕೂಡಲಿಗೆ ಬಂದಿದ್ದಾರೆಂದು ತಿಳಿಯಿತು. ಅಷ್ಟರಲ್ಲಿ ಅಶ್ವತ್ಥಮರದ ಪ್ರದಕ್ಷಿಣೆಗೆ ಹೋಗುವ ಸಮಯವಾಗಿತ್ತು. ಆ ತಾಯಿ ಹೊರಟರು. ದಾರಿಯಲ್ಲೇ ಗುರುನಾಥರು ಕಂಡು, ಸೌಖ್ಯ ವಿಚಾರ ಮಾಡಿದರು. ಆ ತಾಯಿ ಅಶ್ವತ್ಥ ಕಟ್ಟೆಯ ಪೂಜೆ ಪ್ರದಕ್ಷಿಣೆಗೆ ಹೊರಟರು. ತಮ್ಮ ಪೂಜೆ ಮುಗಿಸಿಕೊಂಡು ಮತ್ತೆ ಬರುವವರೆಗೆ ಗುರುನಾಥರು ಬಿಸಿಲಲ್ಲೇ ನಿಂತಿದ್ದರು. ಆ ತಾಯಿಯನ್ನು ಭವಾನಿಶಂಕರ ದೇವಾಲಯದ ಮೆಟ್ಟಿಲ ಮೇಲೆ ಕೂರಬೇಕೆಂದು ಗುರುನಾಥರು ಕೋರಿದರು. ನಂತರ ಅವರ ನೂರಾರು ಶಿಷ್ಯರನ್ನು ಕರೆಸಿ 'ತಾಯಿಗೆ ನಮಸ್ಕರಿಸಿ ಎಂದು ಹೇಳಿ ತಾವೂ ನಮಸ್ಕರಿಸಿ ತಮ್ಮ ಬಳಿ ಇದ್ದ ಹಣವನ್ನು ಅರ್ಪಿಸಿದರು. ಏನು, ಏಕೆ ಎಂದು ಕೇಳದೆ ಗುರುನಾಥರು ತೋರಿದ ಮಾರ್ಗದಲ್ಲಿ ನಡೆಯುವ ಅವರ ಶಿಷ್ಯ ವರ್ಗದ ಮನದಲ್ಲಿ ಎಂದೂ ಪ್ರಶ್ನೆಗಳು ಉದ್ಭವಿಸೇ ಇಲ್ಲ. ಆದರೆ ಇದಾದ ಕೆಲವೇ ವರ್ಷಗಳಲ್ಲಿ ಆ ತಾಯಿಯ ಸತ್ಪುತ್ರರು ಜಗದ್ಗುರು ಪೀಠದಲ್ಲಿ ವಿರಾಜಮಾನರಾದರು. ಜಗದ್ಗುರುಗಳ ಮಾತೆಗೆ ನಮಿಸುವ ಅವಕಾಶ ಸಾಮಾನ್ಯವಾದ್ದೇ? ಹೀಗೆ ಸದ್ಗುರುನಾಥರ ದೂರದೃಷ್ಠಿ ಎಂತೆಂತಹುದೋ ಘನ ಕಾರ್ಯಗಳನ್ನು ಮಾಡಿಸಿವೆ. ಅವರ ಶಿಷ್ಯರಿಗೆ ಅಪಾರವಾದದ್ದನ್ನೆಲ್ಲಾ ಕರುಣಿಸಿದೆ.
ಇಂದೂ ಆ ಮುಗ್ಧ ತಾಯಿ ಗುರುನಾಥರ ಬಗ್ಗೆ ಅಪಾರ ಗೌರವ ತೋರಿಸುತ್ತಾ ಅವರ ವಾತ್ಸಲ್ಯ ಆಧಾರಗಳನ್ನು ಕೊಂಡಾಡುತ್ತಾ 'ಇಷ್ಟು ಬೇಗ ನಮ್ಮಿಂದ ದೂರವಾಗುತ್ತಾರೆಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ ' ಎಂದು ತಾವೇನೋ ಬಹುದೊಡ್ಡ ನಿಧಿಯನ್ನು ಕಳೆದುಕೊಂಡಂತೆ ದುಃಖಿಸುತ್ತಾರೆ. ಗುರುನಾಥರ ಹೆಸರೆತ್ತಿದರೆ ಭಾವಪರವಶರಾಗುತ್ತಾರೆ.
ಗುರುನಾಥರೆಂದರೆ ಒಂದು ಅಯಸ್ಕಾಂತವಿದ್ದಂತೆ
ಶಂಕರಲಿಂಗ ಭಗವಾನರ ಪ್ರಿಯ ಶಿಷ್ಯರಾದ ಶಾಮಣ್ಣನವರು ಗುರುನಾಥರ ಬಗ್ಗೆ ತಿಳಿಸುತ್ತ 'ಅತ್ಯಂತ ಸರಳ ಸಜ್ಜನರು, ತಪಸ್ವಿಗಳೂ, ಎಲ್ಲರನ್ನು ತಮ್ಮೆಡೆಗೆ ಆಕರ್ಷಿಸುವ ಮಹಾ ಸಾಧಕರು, ಸಖರಾಯಪಟ್ಟಣದ ಅವಧೂತರು' ಎನ್ನುತ್ತಾ ತಮ್ಮ ಮಾತನ್ನು ಮುಂದುವರೆಸಿದರು. ಮೊದಲ ಬಾರಿ ಅವರ ದರ್ಶನಕ್ಕೆ ಬಂದಾಗ ಗುರುನಾಥರು ಸಿಗಲಿಲ್ಲ. ಬಹಳ ಖಿನ್ನರಾಗಿ ನಾವು ಅಲ್ಲಿಯ ಬಿಲ್ವಪತ್ರ ವನದಲ್ಲಿ ಕುಳಿತು ಗುರುನಾಥರನ್ನು ಸ್ಮರಿಸುತ್ತಾ, ಇನ್ನೇನು ಊರಿಗೆ ಹೊರಡುವುದೆಂದು ಗುರುನಾಥರ ಮನೆಗೆ ಬಂದಾಗ ಅವರಾಗಲೇ ಬಂದಿದ್ದರು. ದರ್ಶನವಿತ್ತು ಆಶೀರ್ವದಿಸಿದರು. ಶಂಕರಲಿಂಗರ ಭಕ್ತರೆಂದರೆ ಅವರಿಗದೆಷ್ಟು ಪ್ರೀತಿಯೋ ಮುಂದೆ ನಮನ್ನು ಎರಡು ದಿನಗಳು ಅಲ್ಲಿಯೇ ಉಳಿಸಿಕೊಂಡಿದ್ದರು. ಶೃಂಗೇರಿಗೆ ಕಳಿಸಿದರು. ದೇವನೂರಿಗೆ ಕಳಿಸಿದರು. ಮುಂದೊಂದು ದಿನ 'ಯಾರು ಊರಿಗೆ ಹೋಗಬೇಕೋ ಅವರು ಹೊರತು ಹೋಗಿ' ಎಂದಾಗ ನಾವೆಲ್ಲಾ ಹೊರಟೆವು. ಗುರುನಾಥರೂ ಬಂದು ಕಾರಿನಲ್ಲಿ ಕುಳಿತರು. ನಾನು ಚಪ್ಪಲಿ ಧರಿಸಿದ್ದೆ. ಸಂಕೋಚದಿಂದ ದೂರವೇ ಕುಳಿತರೂ ಗುರುನಾಥರು ಅತ್ಯಂತ ಪ್ರೀತಿಯಿಂದ ಹತ್ತೀರ ಕುಳಿತಾಗ ನನಗೆ ಏನೋ ನಿಧಿ ಸಿಕ್ಕಂತಾಯಿತು. ಆ ಸ್ಪರ್ಶ, ಅವರ ಮನೆಗೆ ಹೋಗುವಾಗ ನಾವು ಒಂದಿಷ್ಟು ಹೂವುಗಳನ್ನು ತೆಗೆದುಕೊಂಡಿದ್ದೆವು. ಅವರಿಗೆ ಅರ್ಪಣೆ ಮಾಡಲು ನಾವು ಬಯಸಿದರೆ, 'ಬೇಡ ಒಳಗೆ ಗುರುಪಾದುಕೆ ಇದೆ. ಅದಕ್ಕೆ ಅರ್ಪಿಸಿ' ಎಂದಾಗ ಗುರುನಾಥರ ಸರಳತೆ, ಮಹಾನ್ ವ್ಯಕ್ತಿತ್ವ ನನ್ನ ಕಣ್ಣು ತೆರೆಸಿತ್ತು. ಮುಂದೆ ಬಾಣಾವರದ ಕಡೆ ನಾವು ಕಾರಿನಲ್ಲಿ ಹೋಗುತ್ತಿರುವಾಗ ಯಾರೋ ಮೆಣಸಿನಕಾಯಿ ಬೇಕೆಂದರು. ಕ್ಷಣದಲ್ಲಿ ಅದ್ಯಾರೋ ಒಂದು ಬುಟ್ಟಿ ಹಿಟ್ಟು ಹಚ್ಚಿಕರಿದ ಮೆಣಸಿನಕಾಯಿಯನ್ನೇ ಕೊಟ್ಟುಬಿಟ್ಟರು. ಶಂಕರಲಿಂಗ ಭಾಗವಾನರನ್ನು ತಮ್ಮ ಹನ್ನೊಂದನೇ ವಯಸ್ಸಿನಿಂದಲೇ ಕಂಡಿದ್ದ ಗುರುನಾಥರು, ಗುರುಗಳ ಆರಾಧನೆಗೂ ಬರುತ್ತಿದ್ದರು. ಅವರು ಬಂದರೆಂದರೆ ಜನ ಇರುವೆ ಬೆಲ್ಲಕ್ಕೆ ಮುತ್ತಿದಂತೆ ಇವರನ್ನು ಮುತ್ತುತ್ತಿದ್ದರು. ಅವರ ಪ್ರವಚನ ಸತ್ಸಂಗಗಳು ಅಲ್ಲಿದ್ದವರಿಗೆಲ್ಲಾ ಬಹಳ ಪ್ರಿಯವಾಗುತ್ತಿತ್ತು. ಅವರ ಮಾತುಗಳಲ್ಲಿ ಅನೇಕ ಜನರ ಮನದ ಸಂಶಯಗಳಿಗೆ ಉತ್ತರ ಸಿಕ್ಕಿಬಿಡುತ್ತಿತ್ತು. ಯಾರೂ ಬಾಯಿ ಬಿಟ್ಟು ಕೇಳುವ ಪ್ರಶ್ನೆಯೇ ಇರುತ್ತಿರಲಿಲ್ಲ. ಒಮ್ಮೆ ನಾನು ಅವರ ಊರಿಗೆ ಹೋಗಿದ್ದೆ. ಜಗದ್ಗುರುಗಳು ಬಂದಿದ್ದರು.
ಆಗ ಗುರುನಾಥರು ನನಗೆ 'ಎಲ್ಲಿ ಅರಸಿ, ನಿನ್ನ ಗುರುವೇ ಎಲ್ಲಿ ನೋಡಿದರಲ್ಲಿ ನೀ' ಎಂಬ ಗೀತೆಯನ್ನು ಹಾಡಿ ಎಂದರು. ನನಗೆ ಬರದಿದ್ದರೂ ಪ್ರಯತ್ನಿಸಿದೆ. ಗುರುನಾಥರೂ ದನಿಗೂಡಿಸಿದರು. ಹೀಗೆ ಅಪಾರ ದಯಾವಂತರಾದ ಗುರುನಾಥರ ಬಗ್ಗೆ ಎಷ್ಟು ಹೇಳಿದರೂ ಮುಗಿಯದು ಎಂದು ಮೌನರಾದರು.
ಎಲ್ಲಾ ಬರ್ನ್ ಆಯ್ತು, ಪ್ಲಾಶ್ ಮಾಡಿ ಬಿಟ್ಟೆಯಾ
ಪ್ರಚಾರ ಪ್ರಿಯರೂ, ಫೋಟೋ ಪ್ರಿಯರೂ ಆಗಿರಲಿಲ್ಲ ನಮ್ಮ ಗುರುನಾಥರು. ಕೆಲವೊಂದು ಘಟನೆಗಳು ನಡೆದು, ಗುರುನಾಥರ ಫೋಟೋ ತೆಗೆಯಬೇಕೆಂದರೆ ಅವರ ಭಕ್ತರು ಹೆದರುತ್ತಿದ್ದರು. ನಾನೂ ಒಮ್ಮೆ ಅವರ ಫೋಟೋ ತೆಗೆಯಲು ಹೋದಾಗ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ವೇದಿಕೆಯ ಬಳಿ ನನ್ನನ್ನು ಕರೆದೊಯ್ದು 'ಇದರ ಫೋಟೋ ತೆಗೆದುಕೊಳ್ಳಿ' ಎಂದು ತಿಳಿಸಿದ್ದರು.
ಸಖರಾಯಪಟ್ಟಣದಲ್ಲಿ ಅನೇಕ ವರ್ಷಗಳು ಗುರುನಾಥರ ಮನೆಯ ಎದುರಿನ ಮನೆಯಲ್ಲಿದ್ದು, ಗುರುನಾಥರೊಂದಿಗೆ ತುಂಬಾ ಪ್ರೀತಿಯಿಂದ ಇದ್ದ ಒಬ್ಬ ಯುವಕರು, ಆದಾಗ ಚಿಕ್ಕಮಗಳೂರಿಗೆ ಹೋಗಿ ನೆಲೆಸಿ ವ್ಯಾಪಾರಸ್ಥರಾಗಿದ್ದರು. ಅವರ ಅಣ್ಣನ ಮಗನ ಉಪನಯನದ ಸಮಯ. ಗುರುನಾಥರು ಮನೆಗೆ ಬಂದಿದ್ದರು. ಯಾವುದೋ ಮಾತಿನಲ್ಲಿದ್ದಾಗ ಅದೇ ಹೊಸದಾಗಿ ಕ್ಯಾಮೆರಾ ಕೊಂಡಿದ್ದ ಇವರು ಒಂದು ಫೋಟೋ ತೆಗೆದೇಬಿಟ್ಟರು. ಪ್ಲಾಶ್ ಆಯ್ತು. 'ಪ್ಲಾಶ್ ಆಯ್ತಾ.... ಎಲ್ಲಾ ಪ್ಲಾಶ್ ಆಗಿ ಬಿಡ್ತು... ಮುಗಿತು.. ಎಲ್ಲಾ ಮುಗಿದೋಯ್ತು' ಎಂದುಬಿಟ್ಟರಂತೆ.
ಚಿಕ್ಕಮಗಳೂರಿನಲ್ಲಿದ್ದ ಇವರದೊಂದು ಲಕ್ಷಾಂತರ ಬೆಳೆಯ ಅಂಗಡಿ ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಬಿದ್ದು, ಎಲ್ಲಾ ಸುತ್ತು ಭಸ್ಮವಾಗಿ ಹೋಯಿತು. ನಂತರ ಈ ಭಕ್ತರು ಗುರುನಾಥರ ಬಳಿ ಸಖರಾಯಪಟ್ಟಣಕ್ಕೆ ಹೋದರು. ಸುಟ್ಟ ಅಂಗಡಿಯ ಬೂದಿಯನ್ನು ತರಿಸಿದರು. ಮತ್ತೇನೇನೋ ಮಾಡಿದರೋ..... ಆದರೀಗ ಅವರ ಶಿಷ್ಯರು, ಗುರುನಾಥರ ಕೃಪೆಯಿಂದ ಮೊದಲಿಗಿಂತ ದೊಡ್ಡ ಸ್ಥಿತಿ ತಲುಪಿದ್ದಾರೆ. ನಿರಂತರ ಗುರುನಾಥರನ್ನು ಸ್ಮರಿಸುತ್ತಾ ಉತ್ತಮ ಜೀವನ ಸಾಗಿಸುತ್ತಿದ್ದಾರೆ.
ಗುರುನಾಥರ ಅಂದು ತೆಗೆದ ಫೋಟೋ ಈಗಲೂ ಅವರ ಬಳಿ ಇದೆ. ಗುರುನಾಥರ ಬಾಯಿಯಿಂದಲೇ ಬಸ್ ಎಂದು ಧೂಳು ಬೂದಿ ಬಂದಂತಿದೆ. ನಂತರ ಗುರುಗಳು ಶಾಂತರಾದಾಗ ತಮ್ಮ ಆ ಭಕ್ತರ ಜೊತೆಯಲ್ಲಿ ತೆಗೆಸಿದ ಶಾಂತ ಮುಖ ಮುದ್ರೆಯ ಚಿತ್ರವೂ ಲಭ್ಯವಿದೆ.
'ಕರುಣಾಳುಗಳಾದ ಗುರುನಾಥರು ಏನೇ ಮಾಡಿದರೂ ಅದರಲ್ಲಿ ತಮ್ಮ ಭಕ್ತರ ಮುಂದಿನ ಮಂಗಲಮಯ ಚಿಂತನೆಯೇ ಇರುತ್ತದೆ ಎನ್ನುತ್ತಾರೆ'.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http://
No comments:
Post a Comment