ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 52
ಕಡ್ಡಿ ಮುರಿದಂತೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಆ ಹುಡುಗ ಮೂಲತಃ ಮಲೆನಾಡು ಮೂಲದವನು. ಬಹುಶಃ ಹತ್ತನೇ ತರಗತಿಯಲ್ಲಿ ಓದುತ್ತಿದ್ದವ. ಒಮ್ಮೆ ಇದ್ದಕ್ಕಿದ್ದಂತೆ ನಾಪತ್ತೆಯಾದ. ಅವನ ತಂದೆತಾಯಿಗಳು ಜ್ಯೋತಿಷ್ಯ, ಶಾಸ್ತ್ರ ಪೂಜೆಗಳೆಲ್ಲವನ್ನೂ ಮಾಡಿಸಿದರು. ಕೊನೆಗೆ ಪೋಲೀಸ್ ಇಲಾಖೆಗೆ ಮಗ ಕಳೆದು ಹೋದ ಬಗ್ಗೆ ದೂರು ನೀಡಿದ್ದೂ ಆಯ್ತು. ಆದರೆ ಪ್ರಯೋಜನ ಮಾತ್ರ ಶೂನ್ಯ.
ಹೀಗಿರಲು ಯಾರಿಂದಲೋ ಗುರುನಾಥರ ಬಗ್ಗೆ ತಿಳಿದು ಕೂಡಲೇ ಗುರುನಿವಾಸಕ್ಕೆ ಬಂದು ನನ್ನೊಡೆಯನ ಚರಣಕ್ಕೆರಗಿ ಮಗನ ವಿಚಾರ ಕೇಳಿದರು.
ಅಂದು ಮಲೆನಾಡಿನಲ್ಲಿ ನಕ್ಸಲ್ ಚಳುವಳಿ ಬಲವಾಗಿತ್ತಾದ್ದರಿಂದ ಆ ದಂಪತಿಗಳಿಗೆ ತಮ್ಮ ಮಗ ನಕ್ಸಲ್ ಹೋರಾಟಕ್ಕೆ ಸೇರಿದನಾ? ಎಂಬ ಕಳವಳವೂ ಇತ್ತು. ಆ ವಿಚಾರವನ್ನು ಗುರುಗಳಲ್ಲಿ ನಿವೇದಿಸಿದರು.
ತುಸು ಹೊತ್ತು ಸುಮ್ಮನಿದ್ದ ಗುರುನಾಥರು ಬೇರೇನೂ ಹೇಳದೆ ಒಂದೇ ಮಾತಿನಲ್ಲಿ "ನಿಮ್ ಮಗ ಸುರಕ್ಷಿತವಿದ್ದಾನೆ. ಮನೆಗೆ ಬರ್ತಾನೆ. ಧೈರ್ಯವಾಗಿರಿ" ಎಂದು ಅಭಯ ನೀಡಿ ಕಳಿಸಿದರು.
ಅದಾಗಿ ಬಹುಶಃ 2-3 ವರ್ಷದ ನಂತರ ಆ ಹುಡುಗ ಇಂದು ಹಿಂತಿರುಗಿರುವನು. ತೀರಾ ಇತ್ತೀಚೆಗೆ ಆತನ ಮದುವೆಯೂ ಆಯಿತೆನಿಸುತ್ತದೆ. ಹೀಗೆ ಗುರುನಾಥರ ಮಾತು ಇಂದಿಗೂ ಕಡ್ಡಿ ಮುರಿದಂತೆ ನಡೆದೇ ತೀರುವುದು. ಮೊನ್ನೆ ಆ ಹುಡುಗನ ತಂದೆ ತಾಯಿಗಳು ಮಗನ ಮದುವೆಗೆ ಕರೆಯಲು ನಮ್ಮಲ್ಲಿಗೆ ಬಂದಿದ್ದರೂ ಕೂಡ.
ಅದೇ ರೀತಿ ಇನ್ನೊಮ್ಮೆ ಓರ್ವ ಗಣ್ಯ ವ್ಯಕ್ತಿಯ ಕಾರು ಗುರುನಾಥರ ಮನೆ ಸಮೀಪದ ತಿರುವಿನಲ್ಲಿ ಗುರುನಿವಾಸದ ಮುಂದೆ ಬರುವುದಕ್ಕೂ ಗುರುನಾಥರು ಮೆಟ್ಟಿಲಿಳಿದು ಬರುವುದಕ್ಕೂ ಸರಿಯಾಯಿತು. ಕಾರಿನಿಂದಿಳಿಯ ಹೊರಟವರನ್ನು ತಡೆದ ಗುರುನಾಥರು ಇನ್ನೊಂದು ಕಾರಿನಲ್ಲಿ ಹೊರಟರು. ಗಣ್ಯರ ಕಾರೂ ಹಿಂಬಾಲಿಸಿತು. ಆ ಗಣ್ಯರು ಯಾಕೆ ಬಂದರೆಂದೂ ಗುರುಗಳು ಕೇಳಲಿಲ್ಲ. ಅವರಿಗೆ ಹೇಳೋಕೂ ಸಮಯ ಸಿಗಲಿಲ್ಲ. ಹಾಗೆ ಸುಮ್ಮನೆ ಗುರುಗಳಿದ್ದ ಕಾರನ್ನು ಹಿಂಬಾಲಿಸುತ್ತಿದ್ದರಷ್ಟೇ.
ಗುರುಗಳಿದ್ದ ಕಾರು ಅರಸೀಕೆರೆ ಸಮೀಪವಿರುವ ಹೋಟೆಲ್ ಒಂದರ ಸಮೀಪ ನಿಲ್ತು. ಆ ಗಣ್ಯರೂ ತಮ್ಮ ಕಾರನ್ನು ನಿಲ್ಲಿಸಿ ಗುರುನಾಥರ ಸಮೀಪ ಬಂದರು. ಆಗ ಗುರುನಾಥರು ಅಲ್ಲೇ ತುಸು ದೂರದ ಬೀಡಾ ಅಂಗಡಿ ಮುಂದಿದ್ದ ಹುಡುಗನತ್ತ ಕೈ ತೋರಿಸಿ: "ನೋಡಿ ನೀವ್ ಹುಡುಕುತ್ತಾ ಇದ್ದ ಹುಡುಗ ಅಲ್ಲಿದ್ದಾನೆ" ಎಂದು ನಕ್ಕರು. ತಾವೇನೂ ಹೇಳದೆ ತಮ್ಮ ಸಮಸ್ಯೆ ಪರಿಹಾರವಾದದ್ದನ್ನು ಕಂಡು ಆ ಗಣ್ಯ ವ್ಯಕ್ತಿಗಳು ಆನಂದಪರವಶರಾಗಿ ಗುರುಗಳಿಗೆ ವಂದಿಸಿದರು.
ಇತ್ತೀಚಿಗೆ ಗುರುಭಕ್ತರೊಬ್ಬರು ನಮ್ಮ ಮನೆಗೆ ಬಂದಿದ್ದರು. ಗುರುನಾಥರ ಬಗ್ಗೆ ಮಾತನಾಡುತ್ತಾ ತಾನು ಗುರುನಿವಾಸಕ್ಕೆ ಬಂದ ಸಂದರ್ಭವನ್ನು ಹೀಗೆ ಹೇಳತೊಡಗಿದರು. "ಕೆಲ ವರ್ಷದ ಹಿಂದೆ ನಾನು ಸಮಸ್ಯೆಗಳ ಸರಮಾಲೆ ಹೊತ್ತುಕೊಂಡು ಎಲ್ಲೂ ಪರಿಹಾರ ಕಾಣದೆ ಕೊನೆಗೆ ಸಖರಾಯಪಟ್ಟಣಕ್ಕೆ ಬಂದೆ. ನನ್ನ ಮಾತನಾಡಿಸುತ್ತಾ ಗುರುನಾಥರು 'ನೀವು ಏನೂ ಮಾಡಬೇಡಿ. ಒಂದು ಹೊಸ ಟಯರ್ ತಂದು ಅದನ್ನು ಒಂದು ಬಿಳಿ ಬಟ್ಟೆಯಲ್ಲಿ ಸುತ್ತಿ ನಿಮ್ಮ ಮನೆಯಲ್ಲಿಟ್ಟು ಪ್ರತೀ ದಿನ ಒಂದು ಸಾರಿ ಅದನ್ನು ನೋಡ್ಬೇಕು. ನಿಮಲ್ಲಾ ಸಮಸ್ಯೆ ಪರಿಹಾರವಾಗುತ್ತೆ' ಅಂದಿದ್ರು. ಇಂದು ಅವರ ಕೃಪೆಯಿಂದ ನಮ್ಮ ಕುಟುಂಬ ನೆಮ್ಮದಿಯಾಗಿದೆ" ಎಂದು ಹೇಳಿ ಮತ್ತೊಂದು ವಿಚಾರ ಹೇಳತೊಡಗಿದರು.
"ಮತ್ತೊಮ್ಮೆ ನಮ್ಮ ಸಂಬಂಧಿಯೊಬ್ಬರ ಮಗ ಕಾಣೆಯಾಗಿದ್ದನು. ಅವನ ಹುಡುಕಾಟಕ್ಕಾಗಿ ಗುರುನಿವಾಸಕ್ಕೆ ಹೋದೆವು. ನಮ್ಮನ್ನು ನೋಡಿ ಗುರುಗಳು 'ನೀವೆಲ್ಲೂ ಹುಡುಕಬೇಡಿ. ಅವನಾಗಿಯೇ ಬರುತ್ತಾನೆ. ಧೈರ್ಯವಾಗಿರಿ' ಎಂದು ಅಭಯ ನೀಡಿ ಕಳಿಸಿಕೊಟ್ಟರು. ಆಗ ಆ ಹುಡುಗ ಏಳನೆಯ ತರಗತಿಯಲ್ಲಿದ್ದು ಓದನ್ನು ಅರ್ಧಕ್ಕೆ ನಿಲ್ಲಿಸಿ ಮನೆ ಬಿಟ್ಟಿದ್ದನು. ಹನ್ನೆರಡು ವರ್ಷದ ನಂತರ ಗುರುವಾಕ್ಯದಂತೆಯೇ ಆತ ವಾಪಸಾಗಿದ್ದು ಇಂದು ಪದವಿ ಮುಗಿಸಿ ಮಂಗಳೂರು ಸಮೀಪ ಒಂದು ಸ್ವಂತ ಉದ್ಯಮ ಆರಂಭಿಸಿರುವನು" ಎಂದು ಆನಂದಪರವಶರಾಗಿ ನುಡಿದು, 'ಅವರು ಮನುಷ್ಯ ದೇಹ ತಾಳಿ ಭುವಿಗೆ ಬಂದ ಸಾಕ್ಷಾತ್ ಈಶ್ವರನೇ..... ಬೇಡಿ ಬಂದ ಭಕ್ತರ ಉದ್ದಾರಕ್ಕಾಗಿ ತನ್ನದೆಲ್ಲವನ್ನೂ ಮರೆತು ಬಾಳಿದ ಅಂತಹ ಸದ್ಗುರು ಇನ್ನೊಬ್ಬರಿಲ್ಲ' ಎಂಬುದು ನಮ್ಮ ನಂಬಿಕೆ ಎಂದು ಹೇಳಿ ಕೈ ಮೇಲೆತ್ತಿ ಆ ಗುರುವಿಗೆ ಕೈ ಮುಗಿದರು" ಎಂದು ನುಡಿದರು.......,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment