ಒಟ್ಟು ನೋಟಗಳು

Friday, November 18, 2016

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 45


ಸಹನೆ 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರುನಾಥರು ಯಾವಾಗಲೂ "ನೋಡಯ್ಯಾ ನಾನು ಯಾರನ್ನೂ ಬನ್ನಿ ಅಥವಾ ಹೋಗಿ ಎಂದು ಹೇಳುವುದಿಲ್ಲ. ಆ ಅಧಿಕಾರ ನನಗಿಲ್ಲ. ನನ್ನನ್ನು ಒಪ್ಪಿ ಎಂದು ನಾನು ಯಾರನ್ನೂ ಕೇಳುವುದು ಇಲ್ಲ. ಹಾಗೆಯೇ ನನ್ನ ಮಾರ್ಗವನ್ನು ಯಾರೂ ಪ್ರಶ್ನಿಸುವ ಅಥವಾ ಬದಲಿಸುವ ಅಧಿಕಾರವೂ ಯಾರಿಗೂ ಇಲ್ಲ" ಎನ್ನುತ್ತಿದ್ದರು. ಗುರುನಾಥರು ತನ್ನ ಸುತ್ತಲಿನ ಯಾವುದೇ ವಸ್ತುಗಳನ್ನಾಗಲೀ ಅಥವಾ ವ್ಯಕ್ತಿಗಳ ಮನಸ್ಸನ್ನಾಗಲಿ ಅನಾವಶ್ಯಕವಾಗಿ ಬದಲಿಸಲು ಹೋಗುತ್ತಿರಲಿಲ್ಲ. 

ಒಮ್ಮೆ ಗುರುನಿವಾಸದಲ್ಲಿ ಎಂದಿನಂತೆ ಭಕ್ತ ಜನರು ತುಂಬಿದ್ದರು. ನಿತ್ಯದಂತೆ ಅನ್ನದಾಸೋಹ ನಡೆದಿತ್ತು. ಸುಮಾರು ಮಧ್ಯಾನ್ಹ ಮೂರು ಗಂಟೆಯ ಸಮಯವಿರಬಹುದು. ಒಬ್ಬ ವ್ಯಕ್ತಿ ಗುರುನಿವಾಸವನ್ನು ಪ್ರವೇಶಿಸಿದರು. ಅವರಿಗೆ ಊಟ, ಕಾಫಿ, ನೀಡಲು ಹೋದಾಗ ಅದನ್ನು ಆತ ತಿರಸ್ಕರಿಸಿದನು. ಮಾತ್ರವಲ್ಲ ಗುರುನಾಥರ ಪ್ರತಿ ನಡೆಯನ್ನೂ ಪ್ರಶ್ನಿಸತೊಡಗಿದನು. ಜೊತೆಗೆ ಅವಮಾನ ಮಾಡತೊಡಗಿದನು. 

ಅಷ್ಟಾದರೂ ಗುರುನಾಥರು ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸಂಜೆ ಎಂದಿನಂತೆ ಹೋಟೆಲ್ ನಿಂದ ಮಸಾಲದೋಸೆ ತರಿಸಿದ ಗುರುನಾಥರು ಎಲ್ಲರಿಗೂ ವಿತರಿಸಲು ಹೇಳಿದರು. ಆ ವ್ಯಕ್ತಿ ಆ ದೋಸೆಯನ್ನು ತಿರಸ್ಕರಿಸಿದನು. 

ಅಲ್ಲಿಯವರೆಗೂ ಸುಮ್ಮನಿದ್ದ ಗುರುನಾಥರು "ನೋಡಯ್ಯಾ ನಿಂಗೆ ಇಷ್ಟವಿಲ್ಲ ಅಂದ್ರೆ ಹೊರಟು ಹೋಗು. ನಾನೇನು ನಿನ್ನನ್ನು ಬಾ ಎಂದು ಕರೆದಿಲ್ಲ. ಈಗ ಬಂದಿದ್ದೀಯಾ. ನಿನ್ನ ಸತ್ಕರಿಸುವುದು ನನ್ನ ಧರ್ಮ" ಎಂದಷ್ಟೇ ಹೇಳಿ ಸುಮ್ಮನಾದರು. 

ಇದರಿಂದ ಸುಮ್ಮನಾಗದ ಆತ ತಾತ್ಸಾರ ಭಾವದಿಂದ ಗುರುನಾಥರನ್ನು ನೋಡಿ ಅಲ್ಲಿಂದ ಹೊರಟರು. ಆದರೆ ಗುರು ಎಂದಿಗೂ ಕರುಣಾಮಯಿ. ಅಲ್ಲೇ ಇದ್ದ ಬಾಣಾವರ ಸಮೀಪದ ಓರ್ವ ವ್ಯಕ್ತಿಯನ್ನು ಕರೆದು "ನೋಡಯ್ಯಾ, ಆ ವ್ಯಕ್ತೀನ ಬಸ್ ಹತ್ತಿಸಿ ಬಾರಯ್ಯಾ......ಯಾಕೋ ನೋಡಿದ್ರೆ ಆತ ಸುರಕ್ಷಿತವಾಗಿ ಮನೆ ತಲುಪಿಲ್ಲ ಅನ್ಸುತ್ತೆ" ಎಂದರು. 

ಬಾಣಾವರದ ಆ ವ್ಯಕ್ತಿ ಗುರು ವಾಕ್ಯದಂತೆ ಆ ವ್ಯಕ್ತಿಯನ್ನು ಬಸ್ ನಿಲ್ದಾಣದವರೆಗೂ ಕಳಿಸಿ ಬಂದರು. ಆ ವ್ಯಕ್ತಿ ದುಬೈನಲ್ಲಿ ಕೆಲಸದಲ್ಲಿದ್ದು ಗುರುವನ್ನು ಪರೀಕ್ಷಿಸಲು ಬಂದಿದ್ದರು. ಕಡೂರು ಸಮೀಪದ ನಿವಾಸಿಯಾಗಿದ್ದ ಆತ ಸರ್ಕಾರಿ ಬಸ್ ಏರುವ ಬದಲು ಖಾಸಗಿ  ವಾಹನವನ್ನೇರಿ ಹೊರಟರು. ದಾರಿಯಲ್ಲಿ ಆ ವಾಹನ ಒಂದು ಗುಂಡಿಗೆ ಬಿದ್ದಿತು. ಅದರಲ್ಲಿದ್ದ ಉಳಿದವರೆಲ್ಲರೂ ಅಪಾಯದಿಂದ ಪಾರಾದರು. ಆದರೆ ಆತ ತನ್ನ ಕಾಲನ್ನು ಕಳೆದುಕೊಂಡಿದ್ದ. 

ನಂತರ ತನ್ನ ತಪ್ಪಿನಿಂದ ದುಃಖಿತನಾದ ಆತ ಮತ್ತೊಮ್ಮೆ ಗುರುದರ್ಶನ ಮಾಡಲು ಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. "ಗುರು ನಿಂದೆ ಕುಲಕ್ಷಯಂ ಎನ್ನುವುದು ಈ ಕಾರಣಕ್ಕಾಗಿಯೇ ಏನೋ... !?". 

ಹಾಗೆಯೇ ಇನ್ನೊಮ್ಮೆ ಎಂದಿನಂತೆ ಗುರುನಿವಾಸಕ್ಕೆ ಅದ್ವೈತ ಪೀಠವೊಂದರ ಯತಿಗಳು ಬರುವವರಿದ್ದರು. ಕಾರ್ಯಕ್ರಮ ಸಿದ್ಧತೆ ಜೋರಾಗಿತ್ತು. ಸುರಕ್ಷತೆ ಹಾಗೂ ಸೌಜನ್ಯದ ದೃಷ್ಠಿಯಿಂದ ಹತ್ತಿರದ ಪೋಲೀಸ್ ಸ್ಟೇಷನ್ ಗೆ ಖುದ್ದಾಗಿ ಹೋದ ಗುರುನಾಥರು ಸಬ್  ಇನ್ಸ್ಪೆಕ್ಟರ್ ಅವರನ್ನು ಕೈಮುಗಿದು ಆಮಂತ್ರಿಸಿದರು. ಆದರೆ ಅಧಿಕಾರ ಮದದಿಂದ ಆ ಅಧಿಕಾರಿ ಗುರುನಾಥರನ್ನು ಕುಳಿತುಕೊಳ್ಳಲೂ ಹೇಳದೆ "ಆಯ್ತು, ಆಯ್ತು" ಎಂದಷ್ಟೇ ಹೇಳಿ ಸಾಗ ಹಾಕಿದರು. ಇದಾವುದಕ್ಕೂ ವಿಚಲಿತರಾಗದೆ ಗುರುನಾಥರು ಮನೆಗೆ ಹಿಂತಿರುಗಿದರು. 

ನಂತರ ಕಾರ್ಯಕ್ರಮಕ್ಕೆ ಬಂದ ಆ ಅಧಿಕಾರಿ ಅಲ್ಲಿನ ವ್ಯವಸ್ಥೆ, ಯಾರ ನಿರ್ದೇಶನವೂ ಇರದೇ ಎಲ್ಲವೂ ನಡೆಯುತ್ತಿದ್ದ ರೀತಿಯನ್ನು ನೋಡಿ ಗುರು ಮಹಿಮೆಯನ್ನು ಅರಿತು ಮತ್ತೊಮ್ಮೆ ಗುರುದರ್ಶನಕ್ಕಾಗಿ ಬರಲು ಅಪೇಕ್ಷಿಸಿದರು. ಆದರೆ, ಕಾಲ ಮಿಂಚಿತ್ತು. ಮತ್ತೆ ಅವರಿಗೆ ಗುರುದರ್ಶನವಾಗಲಿಲ್ಲ. ಮಾತ್ರವಲ್ಲ ಆತ ಒಂದು ಘಟನೆಯಲ್ಲಿ ಒಬ್ಬ ಅಧಿಕಾರಿಯಾಗಿದ್ದೂ ಜನಸಾಮಾನ್ಯರಿಂದ ಹೊಡೆತ ತಿನ್ನುವಂತಾಯಿತು. ಜೊತೆಗೆ ಅಲ್ಲಿಂದ ವರ್ಗಾವಣೆಯೂ ಆಯಿತು..... ,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment