ಒಟ್ಟು ನೋಟಗಳು

Sunday, November 20, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 8


ಏನ್ಸಾರ್ ನಿಮಗೊಂದು ಜವಾಬ್ದಾರಿ ವಹಿಸುತ್ತೇನೆ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।


ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರುವಿನಿಚ್ಛೆ ಏನಿರುತ್ತದೋ - ಬಲ್ಲವರಾರು? ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿಯನ್ನು - ಬಹು ಜಾಣತನದಿಂದ, ಅವರವರ ಯೋಗ್ಯತೆ, ಪರಿಸ್ಥಿತಿಗಳಿಗೆ ಅನುಗುಣವಾಗಿ ನಿಗದಿಪಡಿಸುವ ಗುರುನಾಥರ ರೀತಿ ಅರಿಯುವುದು ಅಸಾಧ್ಯ. 

ತಮ್ಮ ಬಂಧುಗಳ ಲಗ್ನಪತ್ರಿಕೆಗೆ ಹೋಗಿ, ಇನ್ನೇನು ಊಟ ಮಾಡಲು ತಯಾರಿದ್ದ ಶಿಷ್ಯರೊಬ್ಬರಿಗೆ ಗುರುನಾಥರಿಂದ ದೂರವಾಣಿ ಬಂತು. "ಎಲ್ಲಿದ್ದೀಯಾ? ಈಗಲೇ ಆದಷ್ಟು ಬೇಗ ಹೊರತು ಸಖರಾಯಪಟ್ಟಣಕ್ಕೆ ಬಂದುಬಿಡು" ಎಂದರು. ಎಂದೂ ಅವಸರಿಸದ ಗುರುನಾಥರು ಹೀಗೆ ಹೇಳುವಲ್ಲಿ ಏನೋ ವಿಶೇಷವಿದೆ ಎಂದು ತಿಳಿದ ಅವರು ಊಟವನ್ನೂ ಮಾಡದೆ, ಮೂರೂವರೆಯೊಳಗೆ ಗುರುಗಳ ಮನೆ ತಲುಪಿ ಅಲ್ಲಿಯೇ ಊಟ ಮಾಡಿದರು. ವಿಶ್ರಾಂತಿಯಿಂದ ಹೊರಬಂದ ಗುರುನಾಥರು "ಊಟವಾಯ್ತೆ" ಎಂದು ವಿಚಾರಿಸಿ ಸುಮ್ಮನಿದ್ದರು. 'ಗುರುನಾಥರೇಕೆ ಬೇಗ ಬರಲು ತಿಳಿಸಿದರು. ಇಲ್ಲಿ ನೋಡಿದರೆ ಏನೂ ಹೇಳಲೇ ಇಲ್ಲ' ಎಂದು ಮನದಲ್ಲಿ ಚಿಂತಿಸಿದ ಅವರು ಸುಮ್ಮನಾಗಿ ಬಿಟ್ಟರು. ರಾತ್ರಿಯಾಗುತ್ತಾ ಬಂದಿತು. "ನಿಮ್ಮೆಜಮಾನರಿಗೆ ಫೋನು ಮಾಡಮ್ಮಾ - ಅವರು ಬಂದು ಕರೆದುಕೊಂಡು ಹೋಗಲಿ. ಆಗ ಬರ್ತೀನಿ. ಇಲ್ಲದಿದ್ದರೆ ಇಲ್ಲೇ ಇರ್ತೀನಿ ಎಂದು ಹೇಳು" ಎಂದರು. 

"ರಾತ್ರಿ ನಮ್ಮ ಮನೆಯವರು ಬಂದರು. ಹತ್ತೂವರೆಯವರೆಗೆ ಬಂದವರಿಗೆ ಬಡಿಸುವುದು ಮುಂತಾಗಿ ಸಾಗಿತ್ತು. ಇನ್ನು ನಾವು ಹೊರಡಲಿದ್ದಾಗ ಗುರುನಾಥರು ಒಳಗೆ ಕರೆದರು. ಅನಂತನ ಉಪಾಯನದಾನದ ತಟ್ಟೆ, ಅನಂತನ ದಾರ, ಒಂದಷ್ಟು ಹಣ ಇವುಗಳನ್ನು ನಮ್ಮವರಿಗೆ ಕೊಡುತ್ತಾ "ಏನ್ಸಾರ್ ನಿಮಗೊಂದು ಜವಾಬ್ದಾರಿ ವಹಿಸುತ್ತೇನೆ, ದಯವಿಟ್ಟು ಬೇಜಾರು ಮಾಡಿಕೊಳ್ಳಬಾರದ, 'ಖಂಡಿತಾ ಅನಂತನ ವ್ರತ ಮಾಡಿ ಅನಂತಾನಂತ ಫಲ ಕೊಡುವ ಈ ವ್ರತ ನಿಮ್ಮನ್ನು ಎಲ್ಲಿಗೋ ಒಯ್ಯುತ್ತದೆ. ದಯವಿಟ್ಟು ಈ ವ್ರತ ನಾಳೆಯೇ ಮಾಡಿ" ಎಂದು ನಮ್ಮವರಿಗೆ ತಿಳಿಸುತ್ತ, "ಏನಮ್ಮಾ, ಶ್ರದ್ಧೆಯಿಂದ ನೀನೆ ಎಲ್ಲ ಕೆಲಸ ಮಾಡಬೇಕು, ಒಳಗೆ ಹೋಗಿ ಏನೇನು ಅಡಿಗೆ ಮಾಡಬೇಕೋ ಎಲ್ಲ ಕೇಳಿಕೋ" ಎಂದರು. 'ಎರಡು ಪಲ್ಯ, ಎರಡು ಕೋಸಂಬರಿ, ಉದ್ದಿನ ಕಡಬು ಚಟ್ನಿ, ಗೋಧಿ ಪಾಯಸ, ಒಂದು ಕಲಸನ್ನ, ನೀನು ಮಾಡುವ ಬೋಂಡಾ ಇವುಗಳನ್ನು ಮಾಡಿದರೆ ಸಾಕು. ಅನಂತ ವೃದ್ಧಬ್ರಾಹ್ಮಣನಾಗಿ ಬರುತ್ತಾನೆ. ಅವನಿಗೆ, ಪಕ್ವವಾದ, ಮೃದು ಆಹಾರಗಳೇ  ಇಷ್ಟ" ಎಂದಿದ್ದರು, ಅಡಿಗೆಮನೆಯಲ್ಲಿ ತಾಯಿಯವರು. 

ಆ ಸರಿರಾತ್ರಿಯಲ್ಲಿ ಬಂದು, ಅನಂತನ ಫೋಟೋ ತಂದು, ಎಲ್ಲ ಸಿದ್ಧತೆ ಮಾಡಿಕೊಂಡ ರೀತಿ ನಿಜವಾಗಲೂ ಆಶ್ಚರ್ಯವೇ - ಗುರುನಾಥರು ಆಗಾಗ್ಗೆ ಫೋನು ಮಾಡುತ್ತಾ 'ನೀನೊಬ್ಬಳೇ ಎಲ್ಲ ಮಾಡು' ಎಂದು ತಿಳಿಸುವುದಲ್ಲದೇ ಇಲ್ಲೇನಾಗುತ್ತಿದೆ ಎಂಬುದನ್ನು ಪ್ರತ್ಯಕ್ಷ ಕಂಡಂತೆ ಹೇಳುತ್ತಿದ್ದರಂತೆ - ದೂರವಾಣಿಯಲ್ಲಿ. 

ಪೂಜೆ ಪ್ರಾರಂಭಕ್ಕೆ ಸರಿಯಾಗಿ ಐದು ಜನ ಮುತ್ತೈದೆಯರು ಬಂದರು. ಗಂಗೆಯ ಪೂಜೆಯಾಗಿ, ಯಮುನೆ ಬಂದಳು. ಪುರೋಹಿತರು ಸಿಕ್ಕರು. ದಂಪತಿಗಳ ಪೂಜೆಯಾಯ್ತು - ಪ್ರತಿ ಕ್ಷಣದಲ್ಲೂ ನನ್ನ ಗುರುನಾಥರು ನಿಂತು ನಡೆಸುತ್ತಿದ್ದ ಆ ವ್ರತಕ್ಕೆ ಅವರು ಖಂಡಿತಾ ಬಂದೆ ತೀರುತ್ತಾರೆಂಬ ದೃಢಭಾವನೆ ಆ ದಂಪತಿಗಳಲ್ಲಿ ಮನೆಮಾಡಿತ್ತು - "ಯಾರಿಗೂ ಕಾಯುವುದು ಬೇಡ ಊಟ ಬಡಿಸ್ತಿರು" ಎಂದು ಮತ್ತೆ ಪೂಜೆಯಾಗುವ ವೇಳೆಯಲ್ಲಿ ಫೋನು ಮಾಡಿದ್ದರು - ಗುರುನಾಥರು. 

ಅವರ ಮನೆಗೆ ಬಂದ ಅವರ ತಾಯಿ ಕೆಲಸಕ್ಕೆ ಸಹಕಾರಿಯಾಗಲು ಬಂದರೆ, "ಬೇಡಮ್ಮಾ ಗುರುಗಳು ಎಲ್ಲ ಕೆಲಸ ನಾನೇ ಮಾಡಬೇಕೆಂದಿದ್ದಾರೆ. ನನ್ನ ಕರ್ಮ ಕಳೆಯಲು ಅವರೇನು ವಹಿಸಿದ್ದಾರೋ, ನಾನೇ ಮಾಡ್ತೀನಿ" ಎಂದಾಗ ಅವರಿಗೇನೋ ಮುನಿಸು. ಭಕ್ತರನ್ನು ಹೀಗೆ ಉಭಯ ಸಂಕಟಕ್ಕೆ ಸಿಕ್ಕಿಸಿ ತಮಾಷೆ ನೋಡುತ್ತಿದ್ದರು ಗುರುನಾಥರು. 

ಒಂದೂವರೆ, ಎರಡು ಗಂಟೆಗೆ, ಇವರ ಮನೆಯ ಮುಂದೆ ಐದಾರು ಕಾರುಗಳು ಬಂದವು. ಗುರುನಾಥರ ಜೊತೆ ಅಷ್ಟೊಂದು ಜನ, ಸಖರಾಯಪಟ್ಟಣಕ್ಕೆ ಬಂದ ಗುರುಬಂಧುಗಳನ್ನು "ಬರ್ರಯ್ಯಾ ಗುರುವಾಕ್ಯ ಸಾಧನೆ ಎಂದರೆ ಏನೆಂದು ತೋರಿಸ್ತೀನಿ. ನಿನ್ನೆ ರಾತ್ರಿ ಹೇಳಿದರೆ ಇವತ್ತಿಲ್ಲಿ ಚಾಚೂ ತಪ್ಪದೆ ಅನಂತನ ವ್ರತ ಮಾಡಿ ದಾಟಿಬಿಟ್ಟಳು ಇವಳು" ಎಂದವರಿಗೆ ಹೇಳುತ್ತಾ ಎಲ್ಲಾ ಮುತ್ತೈದೆಯರಿಗೆ ಬಾಗಿನ ನೀಡಿಸಿ ಊಟ ಹಾಕಿಸಿದರು. "ಇಷ್ಟು ಭಕ್ತಿ ಶ್ರದ್ಧೆಯಿಂದ ಕರೆದರೆ ಗುರು ಯಾಕೆ ಓಡಿ ಬರಲ್ಲ? ಇದು, ಭಾವನೆ ಎಂದರೆ" ಅನಂತನ ನೈವೇದ್ಯಕ್ಕೆ ಬಡಿಸಿದ್ದ ಎಳೆಯಲ್ಲಿ ಊಟಕ್ಕೆ ಕೂರುತ್ತಾ ಗುರುನಾಥರೆಂದರಂತೆ.

ಆ ಭಕ್ತರ ಮನೆಯಲ್ಲಿ ಅನಂತನ ವ್ರತವಿದ್ದರೂ, ಮನೆಯ ಹಿರಿಯಣ್ಣ ಬೇರೆ ಊರಿನಲ್ಲಿದ್ದು, ಅಲ್ಲಿಗೇ ಪ್ರತಿ ವರ್ಷವೂ ಇವರೇ ಹೋಗಿ ಬರುವುದಿತ್ತು. "ಕೆಲವೊಮ್ಮೆ ನಾವೇ ಏಕೆ ವ್ರತವನ್ನು ಇಲ್ಲಿಯೇ ಮಾಡಬಾರದೆಂಬ" ವಿಚಾರ ಈ ದಂಪತಿಗಳ ಮನದಲ್ಲಿ ಬಂದಿತ್ತು. ಇವರ ಮನವರಿತ ಗುರುನಾಥರು ಪರೀಕ್ಷೆಯೋಪಾದಿಯಲ್ಲಿ ಜವಾಬ್ದಾರಿಯಿತ್ತು, ಬೆನ್ನ ಹಿಂದೆ ನಿಂತು ತಾವೇ ಎಲ್ಲ ಜವಾಬ್ದಾರಿ ವಹಿಸಿಕೊಂಡು ಶಿಷ್ಯರನ್ನು ಪಾರುಗಾಣಿಸಿದ್ದರು.

ಇದನೆಲ್ಲಾ ನೆನೆಯುತ್ತಾ ಆ ಭಾವುಕ ದಂಪತಿಗಳೆನ್ನುತ್ತಾರೆ: "ಆ ವರ್ಷ ಉಪರಿ ಬಂದು ಎರಡು ದಿನಗಳೂ ಅನಂತನ ವ್ರತವಿದ್ದಿತು. ಗುರುನಾಥರು ಅವರ ನಿವಾಸದಲ್ಲಿ ಮಾಡಿದ ಕಡೆಯ ವ್ರತವಾಗಿತ್ತು - ನಮ್ಮ ಬೀದಿಯವರನ್ನೆಲ್ಲಾ ಕರೆಸಿ ಅವರಿಗೆಲ್ಲಾ ಸತ್ಕರಿಸಲು ಹೇಳಿದರು - ಗುರುನಾಥರು ಕರೆದಾಗ ಎಲ್ಲರೂ ಬಂದರು. ಅನಂತನ ರೂಪದಲ್ಲಿ ಬಂದ ಗುರುನಾಥರೇ ಅನಂತನೆಂಬುದು ನಮ್ಮ ಭಾವನೆ" ಎನ್ನುತ್ತಾರವರು.

ಗುರುಪುತ್ರರಾದವರಿಗೆ, ಗುರು ಕೃಪೆಗೆ ಪಾತ್ರರಾದ ಅನೇಕರಿಗೆ ಗುರುನಾಥರು ಹೀಗೆ ಅನೇಕಾನೇಕ ಜವಾಬ್ದಾರಿಯನ್ನು ವಹಿಸಿ, ಸದ್ಧರ್ಮದಲ್ಲಿ ನಡೆಯಲು, ನಿರಂತರ ಅವರ ಧ್ಯಾನದಲ್ಲಿ ನಿರತರಾಗಲು ಅದೇನೇನೋ ಲೀಲಾನಾಟಕವಾಡಿದ್ದರೋ... ಅವರೇ ಬಲ್ಲರು, ಆಜ್ಞೆ ಮಾಡುವಲ್ಲಿಯೂ ಅನುನಯ ತೋರುವುದು ಅವರ ವಿಶೇಷ.

ನಾಡಿದ್ದೆ ಉಪನಯನದ ಮುಹೂರ್ತ 


ತಮ್ಮ ಮಗನಿಗೆ ಏಳು ವರ್ಷಗಳಾಗಿವೆ, ಉಪನಯನ ಮಾಡಬೇಕೆಂಬ ಇಚ್ಚೆಯಿಂದ ಭಕ್ತರೊಬ್ಬರು ಗುರುನಾಥರ ಮನೆಗೆ ಬಂದರು. ಮುಹೂರ್ತ ತಿಳಿಸಬೇಕೆಂದು ಕೇಳಿದರು. "ನಾನು ಹೇಳಿದಾಗ ಮಾಡ್ತೀರಾ?" ಎಂದಾಗ ಭಕ್ತರು "ಖಂಡಿತಾ ಗುರುನಾಥರೆ.... ನೀವು ಹೇಳಿದ ದಿನವೇ ಸುದಿನ, ಅಂದೇ ಉಪನಯನ ಮಾಡುತ್ತೇವೆ" ಎಂದುಬಿಟ್ಟರು ಆ ಭಕ್ತರು. "ಹಾಗಾದರೆ ನಾಡಿದ್ದೇ ತಾ. 13 ರಂದು ಮಾಡಿಬಿಡು ಎಲ್ಲ ಸರಿಯಾಗುತ್ತೆ. ಹಾಂ.... ನಾಳೆ ಬೆಳಿಗ್ಗೆ ಜಗದ್ಗುರುಗಳ ಬಳಿ ಹೋಗಿ ಉಪನಯನದ ವಟು, ಜನಿವಾರ, ಪಂಚೆ, ಗೋಪಿಚಂದನ, ಅರಿಶಿನದ ವಸ್ತ್ರಗಳನ್ನೆಲ್ಲಾ ಮುಟ್ಟಿಸಿಕೊಂಡು ಬನ್ನಿ" ಎಂದರು. ಇನ್ನೂ ಅಲ್ಲೇ ಕುಳಿತಿದ್ದ ಇವರುಗಳನ್ನು "ಹೊರಡಿ.. ಹೊರಡಿ... ಎಷ್ಟೊಂದು ಕೆಲಸ ಇದೆ, ಹೀಗೆ ಸೋಮಾರಿಗಳಾಗಿ ಕುಳಿತು, ಎಲ್ಲ ನನ್ನ ತಲೆಯ ಮೇಲೆ ಹಾಕಬೇಡಿ - ಜಗದ್ಗುರುಗಳನ್ನು ಮೋದಿ ಮುಹೂರ್ತ ನಿರ್ಧರಿಸಿಕೊಂಡು ಬನ್ನಿ" ಎಂದವಸರ ಮಾಡಿದರು ಗುರುನಾಥರು - 'ಆರು ಗಂಟೆಗೆಲ್ಲಾ ಜಗದ್ಗುರುಗಳು ವೇದಿಕೆಯ ದರ್ಶನಕ್ಕೆ ಬರುವುದು ವಾಡಿಕೆ, ಆ ಸಂದರ್ಭದಲ್ಲಿ ಗುರುದರ್ಶನ ಸುಲಭ' ಎಂದು ಗುರುನಾಥರು ನೆನಪಿಸಿದರು.

ಯಾವುದೇ ಪೂರ್ವ ತಯಾರಿಯಾಗಿಲ್ಲ, ಜಗದ್ಗುರುಗಳನ್ನು ಕಾಣಲಿವರು ಸಿದ್ಧರಾದರು, ಬೆಳಗಿನ ಜಾವಕ್ಕೆಲ್ಲ ಚಿಕ್ಕಮಗಳೂರಿನಿಂದ ಹೊರಟು, ಶೃಂಗೇರಿ ತಲುಪಿ ವೇದಿಕೆಯ ಬಳಿ ಸಿದ್ಧರಾಗಿ ನಿಂತಿದ್ದೆವು. 'ನಾವು ಹೇಗೆ ಮಾತನಾಡಿಸುವುದೆಂತು' ಅಂದು ಅಳುಕುತ್ತಿರುವಾಗ, ಯಾರೋ ಬಾಂದಂತಾಗಿ ತಿರುಗಿ ನೋಡಿದರೆ ಗುರುನಾಥರು ಬರುತ್ತಿದ್ದಾರೆ. ತಲೆಯ ಮೇಲಿನ ಬೆಟ್ಟದ ಹೊರೆ ಇಳಿದಷ್ಟು ನಿರಾಳವಾಯ್ತು ಮನಸ್ಸು. ಗುರುನಾಥರೇ ಇವರನ್ನು ಜಗದ್ಗುರುಗಳ ಬಳಿ ಕರೆದೊಯ್ದು "ಈ ತಾಯಿ ಮಗನ ಉಪನಯನ ಮಾಡುತ್ತಾಳಂತೆ, ನೀವೇ ಮುಹೂರ್ತ ನಿರ್ಧರಿಸಿ, ಆಶೀರ್ವಾದ ಮಾಡಬೇಕು, ಈ ವಸ್ತ್ರಗಳನ್ನೆಲ್ಲಾ ಮುಟ್ಟಿ ಆಶೀರ್ವದಿಸಬೇಕು" ಎಂದು ವಿನಂತಿಸಿದರು. "ನೀವು ಬೋಧಾಯನರಲ್ಲವೇ, ಶುಕ್ರಾಸ್ತವಾಗಿದೆ, ಆದರೇನು ಗುರುನಾಥರು ನಿಮ್ಮೊಂದಿಗಿರುವುದೇ ಗುರುದೆಸೆ, 13ನೇ ತಾರೀಖಿಗೆ ಮಾಡಿಬಿಡಿ" ಎಂದು ಆಶೀರ್ವದಿಸಿದರು. ಗುರುನಾಥರು ಹೇಳಿದ ತಾರೀಕನ್ನೇ ಜಗದ್ಗುರುಗಳೂ ಸೂಚಿಸಿದ್ದರು. ಎರಡೇ ದಿನದಲ್ಲಿ, ಮನೆಯಲ್ಲೇ ಅದ್ಧೂರಿಯಾಗಿ ಉಪನಯನ ನಡೆದೇ ಹೋಯಿತು. ಏರ್ಪಾಟುಗಳೆಲ್ಲಾ ಗುರುನಾಥರ ಕರುಣೆಯಿಂದ ಉತ್ತಮವಾಗೇ ಆಗಿತ್ತು. "ಆನಂತರ ವಟುವನ್ನು ಕರೆದುಕೊಂಡು ಹೋಗಿ ಜಗದ್ಗುರುಗಳ ಆಶೀರ್ವಾದ ಪಡೆದು ಬನ್ನಿ" ಎಂದು ಗುರುನಾಥರು ತಿಳಿಸಿದಂತೆ, ಅದೂ ಆಯಿತು. 

ಅಘಟಿತಘಟನಾ ಶಕ್ತಿ ಇರುವ ಗುರುನಾಥರು ಮನಸ್ಸು ಮಾಡಿದರೆ ಅಸಾಧ್ಯವಾದುದೇನಿದೆ. ಉಪನಯನದ ಮುಹೂರ್ತವಿಡುವುದು ಬಹು ಕಷ್ಟದ ಕೆಲಸ. ಪಂಚಾಗವಿಲ್ಲ, ಲೆಕ್ಕಾಚಾರವಿಲ್ಲ - ಗುರುನಾಥರು ಹೇಳಿದ ದಿನವನ್ನೇ ಜಗದ್ಗುರುಗಳೂ ತಿಳಿಸಿದರು - ಎಲ್ಲಾ ವಿಚಿತ್ರ ಆದರೂ ಸತ್ಯ. 

ಮಲಗಿದ್ದರೂ ಭಕ್ತರದೇ ಚಿಂತೆ 

ಚಿಕ್ಕಮಗಳೂರಿನ ಒಬ್ಬ ಗುರುಬಂಧುಗಳ ಮನೆಗೆ ಆಗಾಗ್ಗೆ ಗುರುನಾಥರು ಬರುತ್ತಿದ್ದರು. ಗುರುನಾಥರು ಬಂದರೆಂಬ ವಿಚಾರ ಅದು ಹೇಗೋ ಜನಗಳಿಗೆ ತಿಳಿಯುತ್ತಿತ್ತೋ, ಜನಗಳ ಪ್ರವಾಹ ಹರಿದು ಬರುತ್ತಿತ್ತು. ಈ ಪ್ರವಾಹದಲ್ಲಿ ಒಬ್ಬ ಅಜ್ಜಿ ಅನೇಕ ಸಾರಿ ಗುರುನಾಥರನ್ನು ಕಾಣಲು ಬಂದು 'ಅವರಿಲ್ಲ' ಎಂದು ಉತ್ತರ ಕೇಳಿ ನಿರಾಶಳಾಗಿ ಹೋಗಿದ್ದಳಂತೆ. 

ಬೆಲ್ಲ ಇರುವ ಜಾಗವನ್ನು ಇರುವೆಗಳಿಗೆ ಡಂಗುರ ಸಾರಬೇಕಿಲ್ಲ - ನಮಗೇ ಅರಿವಾಗದೇ ಅವು ಬಂದು ಮುಟ್ಟಿ ಮೆಲ್ಲುತ್ತಿರುತ್ತವೆ. ಆದರೆ ಸಾಧಕರನ್ನು ಕಾಣಲು ಹೋದಾಗ, ನಮ್ಮ ಕರ್ಮಾ ಸವೆದಿರುವುದಿಲ್ಲವೋ ಅಥವಾ ಸಾಧಕರೇ ತನ್ನ ಬಳಿ ಬರುವವರಿಗೆ ಅಡೆತಡೆಗಳನ್ನು ನಿರ್ಮಿಸಿ ಪರೀಕ್ಷಿಸುತ್ತಾರೋ ಅಥವಾ ಸನಿಹದ ಸ್ಥಾನವನ್ನು ಪಡೆದ ಸಾಧಕರ ನಿಕಟವರ್ತಿಗಳು, ತಮ್ಮ ಗುರುಗಳಿಗೆ ಇತರರಿಂದ ತೊಂದರೆಯಾಗಬಾರದೆಂದು ಜನರನ್ನು ದೂರವಿಡುತ್ತಾರೋ?...ಭಗವಂತನೇ ಬಲ್ಲ. 

ಪ್ರಯತ್ನಶೀಲತೆಗೆ ಫಲ ಸಿಗುತ್ತದೆ. ಆ ಅಜ್ಜಿ ಅಂದು ಸಖರಾಯಪಟ್ಟಣಕ್ಕೆ ಹೋಗಿ - ತನ್ನ ಮನೆಯಲ್ಲಿ ಊಟ ಮಾಡಿದ್ದರೂ, ಗುರುನಾಥರು ಹೇಳಿದರೆಂದು ಅಲ್ಲಿಯೂ ಊಟ ಮಾಡಿ, ತನ್ನ ಕಷ್ಟಗಳನ್ನು  ಹೇಳಿಕೊಂಡು, ನಮಿಸಿ ಹೊರಟಾಗ, ಗುರುನಾಥರು ಅಜ್ಜಿಯ ಕೈಗೆ ಫಲ ನೀಡಿ, ಇಪ್ಪತ್ತು ರೂಪಾಯಿಗಳನ್ನು ಕೊಟ್ಟು ಕಳಿಸಿದ್ದರು. 

ಅಂದು ನಿಜವಾಗಿಯೂ ಗುರುಬಂಧುಗಳ ಮನೆಯಲ್ಲಿಯೇ ಗುರುನಾಥರು ಮಲಗಿದ್ದರು. ಮನೆಯ ಬಳಿ ಬಂದ ಆ ಅಜ್ಜಿ ನನ್ನನ್ನೂ ಬೈಯುತ್ತಾ 'ನೋಡಿ ಈ ಮನೆಯವರು ಇಲ್ಲಿ ಬಂದಾಗಲೆಲ್ಲಾ, ಗುರುನಾಥರನ್ನು ಕಾಣಲು ಬಿಡದೆ - ಸತಾಯಿಸುತ್ತಿದ್ದರು. ಈಗ ನೋಡಿ ಗುರುನಾಥರು ನನಗೆ ಸುಲಭವಾಗಿ ಸಿಕ್ಕರು ಎಂದು ಸಾತ್ವಿಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಳು. 

ಗುರುಬಂಧುಗಳು ಅನುಮಾನ ಪಡುತ್ತಾ ಮತ್ತೆ ಕೇಳಿದಾಗ ಆ ಮುದುಕಿ ಗುರುಗಳನ್ನು ಕಂಡಿದ್ದು ಮತ್ತೆ ಶೃತ ಪಡಿಸಿದಳು. ನಮ್ಮ ಗುರುಬಂಧುಗಳು ಗುರುನಾಥರು ಉಳಿದಿದ್ದ ಮನೆಯ ಒಳಗೆ ಬಂದು ನೋಡಿದರೆ ಆರಾಮವಾಗಿ ಯಾವುದರ ಪರಿವೆ ಇಲ್ಲದಂತೆ ಗುರುನಾಥರು ಮಲಗಿದ್ದರು. 

ಮಲಗಿದ್ದಾಗಲೂ ತಮ್ಮ ಭಕ್ತರಿಗಾಗಿ ಇಲ್ಲಿಯೂ, ಸಖರಾಯಪಟ್ಟಣದಲ್ಲೂ ಎಲ್ಲೆಲ್ಲೋ ಪ್ರಕಟವಾದ ಗುರುನಾಥರ ಕರುಣೆ, ಆ ಅಜ್ಜಿಯ ನಿರಂತರವಾದ, ದೃಢವಾದ ಪ್ರಯತ್ನ, ಗುರುನಾಥರು ಸಿಕ್ಕಿದ ಸಂತಸ, ಅದಕ್ಕೆ ಅಡೆತಡೆ ಮಾಡಿದವರ ಮೇಲೆ ತೋರಿದ ಸಾತ್ವಿಕ ಕೋಪ ಎಲ್ಲವೂ ಗುರುನಾಥರ ಲೀಲೆಯಲ್ಲದೆ ಮತ್ತೇನು? 

ನಿನ್ನ ಮಗಳ ಮದುವೆ ಜವಾಬ್ದಾರಿ ನನ್ನದು 

ಏನು ಮಾಡಿ ನಾವು ತಿಂದರೂ ಅದು ಹೊಟ್ಟೆಗೆ ಸೇರಿ ಆಹಾರವಾಗುತ್ತದೆ - ಮಾಡುವವರ ಮನಸ್ಸಿಗನುಗುಣವಾಗಿ ಅದು ಉಂಡವರ ಮೇಲೂ ಪರಿಣಾಮ ಬೀರುತ್ತದೆ. ಅದೇ ಮಾಡುವ ಅಡಿಗೆಯನ್ನು ಸದ್ಭಕ್ತಿಯಿಂದ ಮಾಡಿ ಭಗವಂತನಿಗರ್ಪಿಸಿ ತಿಂದರದು ಪ್ರಸಾದವಾಗಿ, ಅದು ಏರುವ ಪರಿಣಾಮ ಮತ್ತೂ ವಿಶೇಷ. 

ಗುರುನಾಥರ ಭಕ್ತೆಯೊಬ್ಬರು ಹೀಗೆ ಏನಾದರೂ ವಿಶೇಷ ಮಾಡಿದಾಗ ಗುರುನಾಥರಿಗೆ ನೈವೇದ್ಯವನ್ನು ಮನದಲ್ಲೇ ಮಾಡಿ, ತಾವೆಲ್ಲಾ ತಿನ್ನುವ ಮುಂಚೆ ಒಂದು ಸ್ವಲ್ಪ ಎತ್ತಿಟ್ಟಾಗ - ಅದೆಷ್ಟೋ ಸಾರಿ ಅಕಸ್ಮಾತ್ತಾಗಿ ಗುರುನಾಥರು ಬಂದು "ಅದೇನೋ ವಿಶೇಷ ಮಾಡಿ ನನಗಿಟ್ಟಿದ್ದೀಯಲ್ಲಾ ಕೊಡು" ಎಂದು ತೆಗೆದುಕೊಂಡಿದ್ದಿದೆಯಂತೆ. ಕೆಲವೊಮ್ಮೆ ಈ ರೀತಿ ತೆಗೆದಿಟ್ಟ ವಸ್ತು ಎರಡು ಮೂರು ದಿನವಾಗಿದ್ದರೂ, ಗುರುನಾಥರು ಅದನ್ನು ಕೇಳಿ ಪಡೆದು ಸ್ವೀಕರಿಸಿದ್ದಿದೆ. 

ಗುರುನಾಥರು ಇದ್ದಾಗ ಅನೇಕ ಬಾರಿ ಹೇಳಿದ್ದರು "ನಿನ್ನ ಮಗಳ ಮದುವೆಯ ಜವಾಬ್ದಾರಿ ನನ್ನದು. ನೀವೇನೂ ಚಿಂತಿಸಬೇಡಿ ಸಾರ್" ಅಂತ. ಮನುಷ್ಯನ ಜೀವನದಲ್ಲಿ ಏನೇನೋ ಪರಿವರ್ತನೆಗಳಾಗುತ್ತೆ - ಕಷ್ಟ ಸುಖದ ದಿನಗಳು ಬರುತ್ತವೆ - ಇವನ್ನೆಲ್ಲಾ ದಾಟಲು 'ಗುರುಸ್ಮರಣೆಯೊಂದೇ' ಭಾವಸಾಗರ ತಾರಣ ನೌಕೆ ಎಂದು ಅವರು ಭಾವಿಸಿದ್ದರು. ಕೈಯಲ್ಲಿ ಹಣವಿಲ್ಲದಿದ್ದರೂ ಮಗಳ ಮದುವೆ ನಿಶ್ಚಯವಾಯಿತು. ಗುರುಬಂಧುಗಳೆಲ್ಲಾ ಹಣಕ್ಕೇನು ಮಾಡುತ್ತೀರಿ?... ಆಗೇನೋ ಗುರುನಾಥರಿದ್ದರು.. ಈಗೇನು ಮಾಡುತ್ತೀರಿ? ಎಂದು ಪ್ರಶ್ನಿಸಿದಾಗ , ಇವರೇನೂ ಹೇಳದೇ 'ಗುರುನಾಥರು ಸರ್ವಕಾಲದಲ್ಲೂ ಇದ್ದಾರೆ - ಅವರು ನಡೆಸುತ್ತಾರೆ' ಎಂದು ಮನದಲ್ಲಿ ಧೃಡಭಾವದಿಂದ ಇದ್ದುಬಿಟ್ಟರು. 

ಗುರುನಾಥರಿಗೆ ಸಾವಿರ ಮುಖಗಳು, ಕೋಟಿ ಕೈಗಳು, ಯಾರನ್ನೂ ಕೇಳದೇ ಎಲ್ಲ ಗುರುಬಂಧುಗಳ ಮುಖಾಂತರ ಎಲ್ಲಾ ಬಂದಿತು. ಅದ್ಧೂರಿಯ ಮದುವೆ ನಡೆಯುತ್ತಿದೆ. ಧಾರೆ ನಡೆಯುತ್ತಿರುವ ಸಭಾ ಮಂಟಪದ ತುಂಬ ಇವರ ಕಣ್ಣು ಅತ್ತಿತ್ತ ಹರಿಯುತ್ತಿದೆ. ಇಷ್ಟೆಲ್ಲಾ ನೆಡೆಸಿದ ಗುರುನಾಥರು ಇಲ್ಲೇ ಎಲ್ಲೋ ಯಾವುದೋ ರೂಪದಲ್ಲಿದ್ದಾರೆ... ಅವರನ್ನು ಹೇಗೆ ಗುರುತಿಸುವುದು ಎಂದು ಮನ ಚಡಪಡಿಸುತ್ತಿತ್ತು. ಮದುವೆ ವಿಜೃಂಭಣೆಯಿಂದ ಸಾಗಿತು, ಹತ್ತು ಪೈಸೆ ಉಪಕಾರ ಮಾಡಿ ಹತ್ತು ಸಾವಿರದ ಪ್ರಚಾರ ಬೇಡಲು ಗುರುನಾಥರೇನು ಸಾಮಾನ್ಯ ಮನುಜರೇ? 

ಎಲ್ಲರ ಊಟ ಆದ ಮೇಲೆ, ಅಡಿಗೆ ಭಟ್ಟರೊಬ್ಬರು ಬಂದರು. ಗುರುಭಕ್ತರ ಬಳಿ ಸ್ವಾಭಾವಿಕವಾಗಿ ಮಾತನಾಡುತ್ತಾ "ನೀವು ಯಾರು ಬಂದರೂ ಊಟ ಹಾಕಿ ಕಲಿಸಿರಿ ಎಂದಿದ್ದಿರಿ. ನೀವಿಲ್ಲಿ ಧಾರೆ ಎರೆಯುತ್ತಿದ್ದಾಗ ಒಬ್ಬ ವೃದ್ಧರು ಸೀದಾ ಅಡಿಗೆ ಮನೆಗೇ ಬಂದು 'ಊಟ ಹಾಕಿ' ಎಂದು ಕೇಳಿದರು. ಎಲೆ ತುಂಬಾ ಬಡಿಸಿದೆ. ಬಹಳ ಖುಷಿಯಿಂದ ಬೇಗ ಬೇಗ ತಿನ್ನುತ್ತಿದ್ದರು. ಈ ವಯಸ್ಸಿನಲ್ಲಿಯೂ ಇಷ್ಟೊಂದು ಸೊಗಸಾಗಿ ಭೋಜನ ಮಾಡುತ್ತಾರಲ್ಲಾ ಅಂತ ಸಂತಸವಾಯ್ತು, ಆಮೇಲೆ ಸ್ವಲ್ಪ ಹೊತ್ತಿಗೆ ನೋಡಿದರೆ ಅವರು ಎತ್ತಲೋ ಹೋಗಿಬಿಟ್ಟಿದ್ದರು" ಹೀಗೆ ಇನ್ನೂ ಏನೇನೋ ಹೇಳುತ್ತಿದ್ದರು. ನನಗದು ಬೇಕಿರಲಿಲ್ಲ - "ನನ್ನ ಗುರುನಾಥರು ಬಂದೇ ಬರುತ್ತಾರೆಂಬ ನನ್ನ ನಂಬಿಕೆ ಸತ್ಯವಾಗಿತ್ತು. ಗುರುನಾಥರು ಊಟ ಮಾಡಿದ ನಂತರ ಆವರ ಆ ಪ್ರಸಾದದ ರೂಪದಲ್ಲಿ ಎಲ್ಲರ ಊಟವಾಗಿತ್ತು  - ಮಾತಿನ ಪ್ರಕಾರ ಮದುವೆ ಜವಾಬ್ದಾರಿ ತಾನೇ ಹೊತ್ತು - ಆಶೀರ್ವದಿಸಿ ಊಟ ಮಾಡಿ ಹೋದರಲ್ಲ" ಎಂಬ ಖುಷಿಗೆ ಅವರ ಮನ ಮುದಗೊಂಡಿತ್ತು. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


No comments:

Post a Comment