ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 12
ಕುಚೇಲನ ಮನೆಗೆ ಬಂದ ಶ್ರೀಕೃಷ್ಣ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರ ಶಿಷ್ಯರುಗಳನ್ನೆಲ್ಲಾ ಮಾತನಾಡಿಸುತ್ತಾ ಹೋದಂತೆ, ಅವರ ಲೀಲಾ ವಿನೋದಗಳು ಅದೆಷ್ಟು ಅಪಾರ-ಅನಂತ ಎನ್ನುವುದರ ಅರಿವಾಗತೊಡಗಿತು. ಗುರುಬಂಧುಗಳೊಬ್ಬರನ್ನು ನಿನಗೆ ಗುರುನಾಥರ ಪರಿಚಯ ಹೇಗಾಯ್ತು. ನಿಮ್ಮ ಮೇಲೇನು ಪ್ರಭಾವ ಬೀರಿದರು ಎಂದು ಕೇಳಿದಾಗ ಸಹಜವಾಗಿ ಅವರು ಹೀಗೆ ಹೇಳತೊಡಗಿದರು.
"ಬೆಂಗಳೂರಿನಲ್ಲಿ ಮೊದಲು, ಗುರುಬಂಧು ಒಬ್ಬರ ಮನೆಯಲ್ಲಿ ಗುರುನಾಥರನ್ನು ಕಾಣುವ ಸುಯೋಗ ಒದಗಿತು. ನಾನು ಬಯಸಿಯೋ, ಬಯಸದೆಯೋ, ಪದೇ ಪದೇ ಗುರುನಾಥರ ದರ್ಶನವಾಗುತ್ತಿತ್ತು. ಮತ್ತೆ ಇನ್ನೊಬ್ಬ ಸ್ನೇಹಿತರು ನನ್ನನ್ನು ಕಡೂರಿನ ಒಂದು ಗುರುಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ಬರುತ್ತಾ ಸಖರಾಯಪಟ್ಟಣದಲ್ಲಿಳಿದು ಗುರುದರ್ಶನ ಮಾಡಿಕೊಂಡು ಊರಿಗೆ ಬಂದೆ. ನನ್ನ ವ್ಯಾಪಾರದ ವಸ್ತುಗಳನ್ನು ಸಖರಾಯಪಟ್ಟಣದಲ್ಲಿ ಗುರುನಾಥರ ಮನೆಯ ಸಮೀಪದಲ್ಲಿಡುತ್ತಿದ್ದೆ. ಶ್ರೀರಾಮನವಮಿಯ ಸಮಯ. ಗುರುನಾಥರ ಮನೆಯಲ್ಲಿ ನೂರು ರೂಪಾಯಿ ಇಟ್ಟುಕೊಂಡು ಸಕ್ಕರೆ ನಿಂಬೆಹಣ್ಣು ತರಿಸಲು ನೋಡುತ್ತಿದ್ದರು. ನಾನು ಹೋಗಿ ಅವುಗಳನ್ನು ತಂದುಕೊಟ್ಟೆ. ಗುರುನಾಥರ ದೃಷ್ಟಿ ನನ್ನ ಮೇಲೆ ಬಿತ್ತು. ಸಹಜವಾಗಿ 'ಏನು ಬಂದಿದ್ದು' ಎಂದು ಗುರುನಾಥರು ಕೇಳಿದಾಗ, 'ನಿಮ್ಮ ಜೊತೆ ಇರಲು ಬಂದೆ' ಎಂದುಬಿಟ್ಟೆ. ಎಲ್ಲೆಲ್ಲಿಂದಲೋ ಗುರುನಾಥರನ್ನು ಹುಡುಕಿ ಬರುವ ಜನರಿದ್ದರು. ನಮಗೆ ಗುರುಕಾರುಣ್ಯ. ಹಾಗಾಗಿ ಕೇವಲ ಇಪ್ಪತ್ತೆರಡು ಕಿಲೋಮೀಟರ್ ಗಳಷ್ಟು ಹತ್ತಿರದಲ್ಲಿ ಗುರುನಾಥರು ಸಿಕ್ಕಿದ್ದರು. ಇದು ನಮ್ಮ ಪುಣ್ಯ. ಆದರೆ, ಆನೇಕ ಸಾರಿ ಅವರನ್ನು ಕಾಣಲು ಹೋಗಬೇಕೆಂದರೆ ಹಲವು ಅಡೆತಡೆಗಳು ಬರುತ್ತಿದ್ದವು. ಮನದಲ್ಲಿ ನಿರ್ಧಾರ ಅಚಲವಾಗಿದ್ದರೆ ಅದು ಹೇಗೋ ಎಸ್.ಟಿ.ಡಿ. ಬೂತ್ ನಲ್ಲಿ ಪರಿಚಯವಾದವರೊಬ್ಬರಿಂದ ಸಾಲ ಪಡೆದಾದರೂ 'ಗುರುಸ್ಥಾನಕ್ಕೆ' ಹೋಗುತ್ತಿದ್ದೆ.
ಒಮ್ಮೆ ಅನೇಕ ದಿನಗಳಿಂದ ಗುರುನಾಥರಿನ್ನೂ ಕಂಡಿರಲಿಲ್ಲ. ನೋಡಬೇಕೆಂದು ಮನಸ್ಸಾಗಿತ್ತು. ಆದರೆ ಹಣವಿರಲಿಲ್ಲ. ನಮ್ಮ ಮಾವನ ಮಗ ಗೌರಿ ಹಬ್ಬದ ಪೂರ್ವದಲ್ಲಿ ಇಲ್ಲಿಗೆ ಬಂದಿದ್ದರು. ಅವರೂ ಸಖರಾಯಪಟ್ಟಣಕ್ಕೆ ಹೋಗಬೇಕೆಂದಾಗ ಹೊರಟೆ. ಜೇಬಿನಲ್ಲಿ ಹಣವಿಲ್ಲ. ಎಸ್.ಟಿ.ಡಿ. ಬೂತ್ ನಲ್ಲಿ ಬೇರಾರೋ ಇದ್ದರು. ಅವರಿಂದ ಸಾಲ ಪಡೆಯುವುದು ಕಷ್ಟ. 'ಎಂಥಾ ಪರಿಸ್ಥಿತಿ ತಂದೆ ಗುರುವೆ' ಎಂದು ಮನಸ್ಸು ನೊಂದಿತು. ಅಷ್ಟರಲ್ಲಿ ರೋಡ್ ಹಂಪ್ ಬಳಿ ಗುರುನಾಥರು ಕಾರಿನಲ್ಲಿ ಬರುತ್ತಿರುವುದು ಕಂಡಾಗ, ಆದ ಸಂತೋಷ ಅಷ್ಟಿಷ್ಟಲ್ಲ. ದರ್ಶನ ನೀಡಿ ಸಾರ್ಥಕ ಮಾಡಿದರು ನನ್ನನ್ನು. ನಂತರ ಅವರು ಬಂದಿದ್ದ ಗುರು ಬಂಧುಗಳ ಮನೆಗೆ ನಾನು ಹೋದೆ. "ನಿಮ್ಮ ಮನೆ ಎಲ್ಲಿ?" ಎಂದು ವಿಚಾರಿಸಿ, ಪ್ರೀತಿಯಿಂದ ನಮ್ಮ ಮನೆಗೇ ಬಂದರು. ಕುಚೇಲನ ಮನೆಗೆ ಶ್ರೀ ಕೃಷ್ಣ ಪರಮಾತ್ಮ ಬಂದಂತಾಯ್ತು".
ಗುರು ಕರುಣೆಯ ಅಪಾರತೆಯನ್ನು ಅವರು ತೆರೆದಿಟ್ಟಿದ್ದು ಹೀಗೆ: 'ಬಡವರು, ಆರ್ತರು ಎಂದರೆ ನನಗೆ ಪ್ರೀತಿ. ಏಕೆಂದರೆ ಭಗವಂತನ ಹತ್ತಿರದಲ್ಲವರಿರುತ್ತಾರೆ' ಎಂಬ ಗುರುನಾಥರ ನುಡಿಯನ್ನಿಲ್ಲಿ ಸ್ಮರಿಸಬಹುದಾಗಿದೆ.
ಗುರುಚಿತ್ತವಿದ್ದಂತೆ
ಆ ಗುರು ಬಂಧುಗಳು ಗುರು ಕಥಾಮೃತವನ್ನು ಮತ್ತೆ ಹೀಗೆ ಮುಂದುವರೆಸಿದರು. 'ಮೊದಲ ಭೇಟಿಯಲ್ಲಿ ನಿಮ್ಮ ಬಳಿ ಇರಲು ಬಂದೆ' ಎಂದ ನನ್ನ ಮಾತನ್ನು ಒಪ್ಪಿಕೊಂಡರೋ ಏನೋ, ಅನೇಕ ಸಾರಿ ಕರೆಸಿಕೊಂಡರು. ಅವರೇ ಬಂದು ದರ್ಶನವನ್ನು ಕೊಟ್ಟರು. ಜಗದ್ಗುರುಗಳ ವೇದಿಕೆಯನ್ನು ತಮ್ಮ ಭಕ್ತರ ಮನೆಯಲ್ಲೆಲ್ಲಾ ನಿರ್ಮಿಸಿ - ಆರಾಧನೆ, ಪೂಜೆ, ಪುನಸ್ಕಾರಗಳು ನಿರಂತರ ನಡೆಸುತ್ತಾ, ಧರ್ಮ ಪರಿಪಾಲನೆಯಲ್ಲಿ ಗುರುಬಾಂಧವರನ್ನು ಗುರುನಾಥರು ಹಚ್ಚುತ್ತಿದ್ದರು. ಆದರೆ, ಯಾರ ಮನೆಯಲ್ಲಿ ಯಾವಾಗ ಏನಾಗಬೇಕೆಂಬುದೆಲ್ಲಾ ಆ ಗುರುಚಿತ್ತದಾಗಿತ್ತು.
ಒಂದು ಭಾನುವಾರ ಗುರುಬಂಧು ಒಬ್ಬರ ಮನೆಯಲ್ಲಿ ಅರುಣ ಪಾರಾಯಣ ಇದೆ ಎಂದು ಕರೆಸಿದ್ದರು. ಅಷ್ಟು ಹೊತ್ತಿಗೆ ಎರಡು ಪಾದುಕೆ ತರಿಸಬೇಕೆಂದಿದ್ದರು. ನನ್ನ ಬಳಿ ಲಿಂಗ ಮತ್ತು ಬಸವಣ್ಣನನ್ನು ತರಿಸಲು ಗುರುನಾಥರು ಹೇಳಿದ್ದರು. ನಾನವನ್ನು ತರುವಷ್ಟರಲ್ಲಿ ಪಾದುಕೆಗಳು ಬಂದಿದ್ದವು. ಅವನ್ನು ನನ್ನ ಕೈಗೆ ಕೊಟ್ಟರು. ಇದೇ ಸಮಯದಲ್ಲಿ ಅಲ್ಲಿಗೆ ಗುರುನಾಥರ ಬೀಗರು ನಂಜನಗೂಡಿನಿಂದ ಬಂದರು. ಪಾದುಕೆಗಳನ್ನು ಅವರಿಗೆ ಕೊಡಲು ನನಗೆ ತಿಳಿಸಿದರು. ಲಿಂಗ, ಬಸವಣ್ಣ ಮಾತ್ರ ನನ್ನಲ್ಲೇ ಉಳಿದಿತ್ತು. ಅವನ್ನು ಮತ್ತೊಬ್ಬ ಗುರುಬಂಧುವಿನೊಂದಿಗೆ ನಮ್ಮ ಮನೆಗೆ ಕಳಿಸಿದರು. ಅಲ್ಲಿಟ್ಟು ಆರತಿ ಮಾಡಿದೆವು. ಆಮೇಲೆ ಗುರುನಾಥರು ಫೋನು ಮಾಡಿದಾಗ 'ನೀವು ನಿಮ್ಮ ಮನೆಯಿಂದ ಮತ್ತೊಬ್ಬ ಗುರುಬಂಧುವಿನ ಮನೆಗೆ ಹೋಗಿರಿ' ಎಂದರು. ಅಲ್ಲಿ ಆರತಿ ಮಾಡಿದೆವು. ಅಲ್ಲಿಯೂ ವೇದಿಕೆ ನಿರ್ಮಿಸುವುದೆಂದಾಯ್ತು. ನಾನೊಂದೆಡೆ ನಿಂತಿದ್ದೆ. ಆಗ ಗುರುನಾಥರು ತಮ್ಮ ಮಗಳಿಗೆ ಫೋನು ಮಾಡುತ್ತಿದ್ದರು. ತಾವು ಎಲ್ಲೆಲ್ಲಿ ವೇದಿಕೆ ನಿರ್ಮಾಣ ಮಾಡಿಸುತ್ತಿದ್ದಾರೆಂದು ಮಗಳಿಗೆ ತಿಳಿಸುತ್ತಿದ್ದರು. ಅವರ ಮಾತಿನಲ್ಲಿ ನಮ್ಮ ಮನೆಯಲ್ಲೂ ವೇದಿಕೆ ನಿರ್ಮಾಣವಾಗುವುದು ತಿಳಿಯಿತು. ಗುರುನಾಥರ ಮಾತುಗಳು ಯಾರನ್ನು ಕುರಿತದ್ದು ಎಂಬುದನ್ನು ಎಚ್ಚರಿಕೆಯಿಂದ ಕೇಳಿ ತಿಳಿದುಕೊಂಡಾಗಲೇ ಬಹುದೊಡ್ಡ ಭಾಗ್ಯ ಅವರ ಪಾಲಿಗೊದಗಿ ಬರುವುದು. ಅದು ಗುರುನಾಥರ ಒಂದು ಪರೀಕ್ಷೆಯೂ ಇದಾಗಿರಬಹುದೇನೋ, ಶಿಷ್ಯರ ಸೂಕ್ಷ್ಮಮತಿಯನ್ನು ಪರೀಕ್ಷಿಸುವ ರೀತಿಯಿದೆಯೇನೋ, ಅರಿಯುವುದು ಕಷ್ಟ. ನನ್ನ ಭಾಗ್ಯವಿದು ಎಂದು ಕೂಡಲೇ ಮನೆಗೆ ಬಂದು, ವೇದಿಕೆಯ ತಯಾರಿ ನಡೆಸಿದೆವು. ಮಾರನೆಯ ದಿನವೇ ಗುರುನಾಥರೂ ಬಂದರು. ಹಿಂದಿನ ದಿನವೇ ವೇದಿಕೆಗೆ ಸಂಬಂಧಿಸಿದ ಪೂಜಾ ಕೈಂಕರ್ಯಗಳನ್ನು ಗುರುಬಂಧುಗಳು, ನಡೆಸಿಕೊಟ್ಟಿದ್ದರು. ನಾನು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ವೇದಿಕೆಯಾಯ್ತಲ್ಲ, ಇದರ ಪೂಜಾ ವಿಧಿ-ವಿಧಾನವೇನು, ನಾನೇನು ಮಾಡಬೇಕೆಂದೂ, ಚಿಂತಿಸಿರಲಿಲ್ಲ. ಏಕೆಂದರೆ ಎಲ್ಲವೂ ಗುರುನಾಥರೇ ಎಂದು ನಂಬಿದ್ದೆ. 'ಎರಡೂ ಹೊತ್ತು ಆರತಿ ಮಾಡಿಕೊಂಡು ಹೋಗಯ್ಯ ಸಾಕು' ಎಂದು ಗುರುನಾಥರು ಅತಿ ಸರಳವಾದ ಸೇವೆಯನ್ನು ತಿಳಿಸಿದರು. 'ಯದ್ಭಾವಂತದ್ಭವತಿ' ಎಂಬಂತೆ ಆಗಿತ್ತು. ಗುರುನಾಥರ ಸಹವಾಸದ ಸವಿ ನೆನೆಯುತ್ತಾ ಗುರುಬಂಧುಗಳು ಮೌನವಾದರು.
ಓಹೋ ನಂಬಣ್ಣದ್ದೇ ಕಾರು
ಗುರುನಾಥರ ಭಕ್ತರೊಬ್ಬರು ಒಂದು ಕಾರು ಕೊಂಡರು. ಮೊದಲಿನಿಂದ ಕಷ್ಟದಲ್ಲಿ ಇದ್ದರೂ 'ಗುರುನಾಥರ ಕೃಪೆಯಿಂದ ನಾನೀಸ್ಥಿತಿಗೆ ಬಂದೆ, ಕಾರು ಕೊಂಡುಕೊಂಡೆ' ಎಂಬ ಸಂತೃಪ್ತ ಭಾವ ಅವರಲ್ಲಿತ್ತು. ಆ ಸಮಯದಲ್ಲಿ ಗುರುನಾಥರು ಸಖರಾಯಪಟ್ಟಣದ ಇದ್ದರು. ಅಷ್ಟೊಂದು ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಅವರು ಬರಲಾಗದಿದ್ದರಿಂದ ಇವರೇ ಕಾರನ್ನು ಸಖರಾಯಪಟ್ಟಣಕ್ಕೆ ಒಯ್ದರು. ಗುರುನಾಥರಿಗೆ ನಮಿಸಿ, ಕಾರು ತೆಗದುಕೊಂಡು ಬಂದಿರುವ ವಿಚಾರ ತಿಳಿಸಿದಾಗ ಅವರಿಗಾದ ಸಂತಸ ಅಷ್ಟಿಷ್ಟಲ್ಲ. ತಾನೇ ಕಾರು ಕೊಂಡಂತೆ ಸಂಭ್ರಮಿಸಿದರು. ತಮ್ಮ ನೋವುಗಳನ್ನೆಲ್ಲಾ ಮರೆತು, ಮಗುವು ಒಂದು ಆಟಿಕೆಯನ್ನು ಪಡೆದಾಗ ಎಷ್ಟು ಸಂತೋಷ ಪಡುತ್ತದೆಯೋ ಹಾಗೆ ಸಂತಸಪಟ್ಟರು.
ಅದು ರಾತ್ರಿ ಒಂಬತ್ತೂವರೆಯಾಗಿತ್ತು. ಗುರುಗಳ ಹಳೆಯ ಮನೆಯಲ್ಲಿ ಊಟ ಮಾಡಿಕೊಂಡು, ಗುರುಗಳಿದ್ದ ಹೊಸಮನೆಗೆ ಬಂದೆವು. ದೂರ ನಿಲ್ಲಿಸಿದ್ದ ಕಾರನ್ನು ನಮ್ಮ ಗುರುಬಂಧುಗಳು ತಂದರು. ಗುರುನಾಥರು ಮಲಗಿದ್ದರು. ವಿಷಯ ತಿಳಿಸಿದಾಗ ಇಬ್ಬರು ಗುರುಬಂಧುಗಳು ಅವರನ್ನು ಎತ್ತಿಕೊಂಡು ಬಂದರು. "ಓಹೋ.. ನಮಗೆ ಪ್ರಿಯವಾದ ಬಣ್ಣದ್ದೇ ಕಾರು" ಎಂದು ತುಂಬಾ ಸಂತಸದಿಂದ ನುಡಿದರು. ಗುರುನಾಥರನ್ನು ಕಾರಿನಲ್ಲಿ ಕೂರಿಸಿಕೊಂಡು ಅಲ್ಲೇ ಸುತ್ತಾಡಿಸಿ, ಶಿವಾಲಯದ ಬಳಿ ಬಂದು, ದೂರದಿಂದಲೇ ನಮಸ್ಕರಿಸಿ ಮತ್ತೆ ಮನೆಗೆ ಕರೆದೊಯ್ದೆವು. ತಮ್ಮ ಶಿಷ್ಯರು ಕಾರು ತೆಗೆದುಕೊಂಡರೆಂದಾಗ, ಅವರ ಸಂತೋಷ ಅದೆಷ್ಟಿತ್ತೋ, ನಮ್ಮ ಮೇಲೆ ಅವರ ಪ್ರೀತಿ ಎಷ್ಟಿತ್ತೆಂದರೆ, ನೆನೆದರೆ ಈಗಲೂ ಮೈ ಝುಮ್ಮೆನ್ನುತ್ತದೆ' ಗುರುನಾಥರು ದೇಹತ್ಯಾಗ ಮಾಡುವ ಎರಡು-ಮೂರು ತಿಂಗಳ ಹಿಂದೆ ನಡೆದ ಘಟನೆಯನ್ನು ಸ್ಮರಿಸುತ್ತಾ ಗುರುಬಂಧು ಒರು ಶಿಷ್ಯರ ಮೇಲಿದ್ದ ಗುರುನಾಥರ ಮಮತೆಯನ್ನು ಹೀಗೆ ಬಣ್ಣಿಸಿದರು.
ಅದು ಹಾವಲ್ಲ ನಮ್ಮ ಗುರುಗಳು
ಭಗವಂತನು ಭಕ್ತರ ಉದ್ಧಾರಕ್ಕಾಗಿ ಭೂಮಿಯಲ್ಲಿ ಸದ್ಗುರುವಾಗಿ ಜನಿಸಿ ಬರುತ್ತಾನಂತೆ. ಆದರೆ, ತನ್ನನ್ನು ಜನ ಸುಲಭವಾಗಿ ಗುರುತಿಸದಂತೆ ಬಾಲಕನಾಗಿಯೋ, ಮತಿಭ್ರಮಣೆಯವರಂತೆ ನಾಟಕ ಮಾಡಿಯೋ, ಮೂಕನಾಗಿಯೋ, ವಿಕಲಾಂಗನಾಗಿಯೋ ಬರುವುದಿದೆ. ಜಗತ್ತಿನ ಜನರನ್ನು ಪರೀಕ್ಷಿಸಲು ಗುರು ಚರಿತ್ರೆಯಲ್ಲಿ ಇಂತಹದೊಂದು ಘಟನೆ ಬರುತ್ತದೆ. ಗುರುಗಳು ಮೂಕ ಮಗುವಾಗಿ ಜನಿಸಿ ಬಾಲ್ಯ ಕಳೆದು ಉಪನಯನದ ವಯಸ್ಸಿಗೆ ಬಂದಾಗ, ತಂದೆ ತಾಯಿಗಳು 'ನಿನ್ನ ಮಾತನ್ನು ಕೇಳದ ಈ ಜೀವನ ವ್ಯರ್ಥವಾಯ್ತಲ್ಲಪ್ಪಾ, ನೀನು ಯಾವಾಗ ಮಾತನಾಡುವುದು ' ಎಂದು ಬೇಡಿದಾಗ, ಜನಿವಾರವನ್ನು ತೋರಿಸಿ 'ತನಗೆ ಉಪನಯನ ಮಾಡಲು' ತಿಳಿಸುತ್ತಾರೆ. ಮೂಕ ಬಾಲಕನಿಗೆ ಬ್ರಹ್ಮೋಪದೇಶವೇ, ಎಂದು ಜನರು ಹುಬ್ಬೇರಿಸುತ್ತಾರೆ. ಆದರೆ ಉಪನಯನವಾಗುತ್ತಿದಂತೆ, ಚತುರ್ವೇದಗಳನ್ನು ಉಚ್ಚರಿಸಿ, ತಮ್ಮ ಗುರುತ್ವ ತೋರಿದ ಕಥೆ ಎಲ್ಲರರಿತದ್ದೇ. ಗುರುನಾಥರ ಬಳಿ ಸಹಾ ಇಂತಹ ಒಬ್ಬ ಮಹಾತಾಪಸಿ ಗುರು, ನರರೂಪ ಧರಿಸಿ ಬಂದಾಗ, ಆ ಬಾಲಕನನ್ನು ತಮ್ಮ ಬಳಿ ಕರೆತಂದಾಗ, 'ಇವರು ಅವಧೂತರು, ನಮಗಿಂತ ದೊಡ್ಡವರು ಚಿಂತಿಸಬೇಡಿ' ಎಂದು ಬಹು ಹಿಂದೆಯೇ ಅವರ ತಂದೆ ತಾಯಿಗಳಿಗೆ ತಿಳಿಸಿದ ಮಾತು ಮುಂದೆ ಸತ್ಯವಾಗಿತ್ತು.
ಹೀಗಾಗಿ ಗುರುನಾಥರ ಪರಿಚಯವಾಗಿ, ಅವರ ಭಕ್ತರಾಗಿ ನಡೆದುಕೊಳ್ಳುತ್ತಿದ್ದ ಆ ಮನೆಯವರಿಗೆ ಗುರುನಾಥರೆಂದರೆ ಅಪಾರ ಪ್ರೀತಿ. ಒಮ್ಮೆ ಆ ಮನೆಯವರು ಗುರುನಾಥರ ಬಳಿ 'ನಮ್ಮ ಮನೆಗೆ ಯಾವಾಗ ಬರುತ್ತೀರಿ' ಎಂದು ಕೇಳಿದಾಗ 'ನಾಳೆ ಸಂಜೆಯೇ ಬರುತ್ತೇನೆಂದು' ಹೇಳಿಬಿಟ್ಟರು.
ಆ ಮನೆಯವರು ಗುರುನಾಥರ ಬರುವಿಕೆಯನ್ನು ಎರುಡು ನೋಡುತ್ತಾ ತವಕದಲ್ಲಿದ್ದರು. ಸಂಜೆಯಾಗುತ್ತಾ ಬಂದಿತು. ಇದ್ದಕ್ಕಿದ್ದಂತೆ ಮನೆಯ ಮುಂದೆ 'ಹಾವು, ಹಾವು' ಎಂಬ ದನಿ, ಗದ್ದಲ ಕೇಳಿ ಬಂತು. ಮನೆಯವರೆಲ್ಲ ಹೊರಗೆ ಬಂದರು. ಮನೆಯ ಮುಂದಿದ್ದ ಒಂದು ದೊಡ್ಡ ಚರಂಡಿಯಲ್ಲಿ ಕರಿಯ ದೊಡ್ಡ ನಾಗರಹಾವೊಂದು ಬಂದಿತ್ತು. ಎಲ್ಲರೂ ಗಾಭರಿಯಾದರೂ ಆ ಮನೆಯ ಏಳೆಂಟು ವರ್ಷದ ಬಾಲಕ 'ಅದು ಹಾವಲ್ಲ, ನಮ್ಮ ಗುರುಗಳು, ನನ್ನನ್ನು ಅಲ್ಲಿ ಇಳಿಸಿ... ಎಂದು ಹೇಳಿ' ಆ ಹಾವನ್ನು ಪೂಜಿಸಿ ನಮಸ್ಕರಿಸಿದನಂತೆ... ಗುರುವನ್ನು ಗುರುಮಾತ್ರಾ ತಿಳಿದು ಗುರುತಿಸಬಲ್ಲ. ಸಾಮಾನ್ಯ ನರರಿಗದು ಅಸಾಧ್ಯ'.
ಮುಂದೆ ಮಾರನೆಯ ದಿನ ಸಖರಾಯಪಟ್ಟಣದಿಂದ ಗುರುನಾಥರು ಫೋನು ಮಾಡಿ 'ನಾನು ನಿನ್ನೆ ಸಂಜೆ ನಿಮ್ಮ ಮನೆಗೆ ಬಂದಿದೆ. ಎಲ್ಲರಿಗೂ ನನ್ನನ್ನು ಗುರುತಿಸಲಾಗಲಿಲ್ಲವಲ್ಲ' ಎಂದು ಮಾರ್ಮಿಕವಾಗಿ ನುಡಿದರಂತೆ.
ಹೀಗೆ ಲೀಲಾವತಾರಿಗಳಾದ ಗುರುನಾಥರು, ಹಲವು ರೂಪಗಳಲ್ಲಿ ತಾವು ಹೇಳಿದ ಸಮಯಕ್ಕೆ, ಹೇಳಿದಂತೆ ಬಂದು ಮಾತನ್ನುಳಿಸಿಕೊಂಡ ಮಹಾತ್ಮರಾಗಿದ್ದಾರೆ. ಆದರೆ ಅದನ್ನು ಅರಿತವರು ಮಾತ್ರ ವಿರಳ. ಆ ಅರಿವನ್ನು ಅವರೇ ದಯಪಾಲಿಸಬೇಕಲ್ಲ!!!
ಅವಸರವಿರುವವರು ಮುಂದೆ ಹೋಗಲಿ
ಗುರುನಾಥರು ಒಮ್ಮೆ ಒಬ್ಬ ಗುರುಬಂಧುವಿನೊಂದಿಗೆ, ಅವರು ಕೊಡಿಸಿದ್ದ ಬೇಕರಿಯ ತಿಂಡಿಯನ್ನು ತಿನ್ನುತ್ತಾ ನಿಂತಿದ್ದಾಗ ಮತ್ತೊಬ್ಬ ಪರಿಚಿತರು ಅಲ್ಲಿಗೆ ಬಂದರಂತೆ. ಗುರುನಾಥರನ್ನು ಕಂಡು 'ಬರುತ್ತೀರಾ, ನನಗೆ ಸ್ವಲ್ಪ ಅರ್ಜೆಂಟಿದೆ, ನೀವು ಬಂದರೆ ಕರೆದುಕೊಂಡು ಹೋಗುತ್ತೇನೆ' ಎಂದು ಅಂದಾಗ ಗುರುನಾಥರು 'ನಾನು ಬರುವುದು ಸ್ವಲ್ಪ ತಡವಾಗುತ್ತದೆ, ನಿಮಗೆ ಅಷ್ಟೊಂದು ಅರ್ಜೆಂಟಿದ್ದರೆ ಹೊರಬಹುದೆಂದರಂತೆ'.
ಗುರುನಾಥರು ಸನಿಹದಲ್ಲಿದ್ದರೆ ಅದೇನಾಗುತ್ತಿತ್ತೋ ಬಲ್ಲವರಾರು? ಸಾಧು ಸತ್ಪುರುಷರ ಸಂಗದಲ್ಲಿದ್ದರೆ ಯಮನೂ ಏನೂ ಮಾಡಲಾರ, ಆದರೆ ಮುಂದೆ ಒಂದೈದಾರು ಕಿಲೋಮೀಟರಿನಷ್ಟು ಕಾರಿನಲ್ಲಿ ಹೋಗಿದ್ದ ಆ ವ್ಯಕ್ತಿ, ಆಕ್ಸಿಡೆಂಟ್ ಗೊಳಗಾಗಿ ಮೃತರಾದ ಸುದ್ಧಿ ತಲುಪಿತಂತೆ.
ಗುರುಬಂಧುಗಳು 'ಅಲ್ಲ ಗುರುನಾಥರೇ ಅವರನ್ನು..... ' ಎಂದು ಏನೋ ಕೆಲ ಹೊರಟಾಗಿ "ಹೋಗುವ ಅವಸರವಿರುವವರನ್ನು ಯಾರು ತಡೆಯಲು ಸಾಧ್ಯ' ವೆಂದು ಮಾರ್ಮಿಕವಾಗಿ ನುಡಿದರಂತೆ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http:// srivenkatachalaavadhoota. blogspot.in/
No comments:
Post a Comment