ಒಟ್ಟು ನೋಟಗಳು

Wednesday, November 30, 2016

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 57

ಗುರುಗಳ ಮನೆ ಗೂಂಡಾಗಳು 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಸಾಮಾನ್ಯವಾಗಿ ಗುರುನಾಥರು ಮನೆಯಲ್ಲಿದ್ದಾಗಲೆಲ್ಲಾ ಹಿಂದಿನ ದಿನದ ಅನ್ನ-ಅಡುಗೆ ಎಸೆಯಲು ಬಿಡುತ್ತಿರಲಿಲ್ಲ. ಬೆಳಿಗ್ಗೆ ಎಲ್ಲಿಗಾದ್ರೂ ಹೋಗುವ ಸಂಭವವಿದ್ದಲ್ಲಿ ಅಡಿಕೆ ಹಾಳೆಯಲ್ಲಿ ಅನ್ನ  ಹುಳಿ ಕಲೆಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದರು. 

ಮನೆಯಲ್ಲಿದ್ದಾಗ ನನ್ನ ಕರೆದು ಹಿಂದಿನ ದಿನದ ಅಡುಗೆ ಅನ್ನ ಕಲೆಸಲು ಹೇಳಿ ನಾ ಎಲ್ಲೇ ಇದ್ರೂ ಕರೆದು "ಬಾರಯ್ಯಾ, ನಂಗೇ ನಿಂಗೇ ಇದೇ ಗತಿ. ಇದೇ ಊಟ ಕಣೋ" ಎಂದು ಹಾಕಿ ತಿನ್ನುತ್ತಿದ್ದರು. 

ಒಮ್ಮೆ ಅಮ್ಮ ಮೆಲುದನಿಯಲ್ಲಿ "ಈ ಅಡುಗೆ ಬೇಡ. ಬೇರೆ ಹಾಕು. ಅದು ನಿನ್ನೆಯದು ಹಳಸಿರಬಹುದು" ಅಂದ್ರು. ಅದನ್ನ ಕೇಳಿಸಿಕೊಂಡ ಗುರುನಾಥರು "ಅದು ನಿನ್ನೆಯದಾದ ಮಾತ್ರಕ್ಕೆ ಬಳಸಬಾರದೆಂದಾದರೆ, ನೀ ಬಂದು ಎಷ್ಟು ವರ್ಷವಾಯ್ತು? ಹೇಳು" ಅಂದರು. ಅಮ್ಮ ಸುಮ್ಮನಾದರು. 

ಹೀಗೆ ಗುರುನಾಥರು ನಿನ್ನೆ, ಇಂದು, ನಾಳೆಗಳ ಬೇಧವಿರದಂತೆ ಬದುಕಿರಬೇಕೆಂಬುದನ್ನು ಸರಳ ಮಾತುಗಳಲ್ಲಿ ಹೇಳುತ್ತಿದ್ದರು. 

ಮೂಲದಲ್ಲಿ ಎಲ್ಲವೂ ಒಂದೇ ಎಂಬುದನ್ನು ಹೀಗೆ ಹೇಳುತ್ತಿದ್ದರು:- "ಹೆಣದ ಬಾಯಿಗೆ ನೆನೆದಕ್ಕಿ ದೇವರ ತಲೆಗೆ ಬಣ್ಣದಕ್ಕಿ ಅಲ್ವೇನಯ್ಯ?" ಅನ್ನುತ್ತಿದ್ದರು. 

ಹಾಗೆಯೇ ಮತ್ತೊಮ್ಮೆ ಜನರ ಕಾಮವನ್ನು ಕುರಿತು "ಹೆಣ್ಣು ಮಾಯೆ, ಗಂಡು ನಾಯಿ ಅಲ್ವೇ" ಎಂದಿದ್ದರು. 

ಜಗತ್ತಿನ ಪ್ರತಿಯೊಂದು ಸತ್ಯವೇ ಆದ್ರೂ ಆ ಸತ್ಯ ಎಂತಹ ಸತ್ಯ? ಅಂತ ಯೋಚಿಸಬೇಕು. ಅದು ಆ ಕ್ಷಣದ ಸತ್ಯ ಅಷ್ಟೇ. ಆ ಸತ್ಯದ ಅರಿವಿನಲ್ಲಿ ನಿತ್ಯ ಸತ್ಯದ ಬೆಳಕನ್ನು ಹುಡುಕಬೇಕು" ಅಂತಿದ್ರು. 

"ಇಲ್ಲಿ ಯಾರು ಗುರು ಇಲ್ಲ ಕಣ್ರೋ, ನಿನ್ನೊಳಗಿನ ಅರಿವೇ ಗುರು" ಅಂತಿದ್ರು. 

ಅವರಿಗೆ ಜಗತ್ತಿನ ಎಲ್ಲ ಆಗು-ಹೋಗುಗಳು ತಿಳಿದಿರುತ್ತಿತ್ತು ಎಂಬುದಕ್ಕೆ ಈ ಕೆಳಗಿನ ಘಟನೆ ಸಣ್ಣ ಉದಾಹರಣೆ ಅಷ್ಟೇ. ಗುರುನಾಥರು ನಿತ್ಯವೂ ಬೆಳಿಗ್ಗೆ ಒಂದು ಹೋಟೆಲ್ ನಿಂದ ತಿಂಡಿ ತರಿಸಿ ಹಂಚುತ್ತಿದ್ದರು. 

ಒಮ್ಮೆ ಎಂದಿನಂತೆ ತಿಂಡಿ ಸಿದ್ಧ ಮಾಡಿಸುವಂತೆ ಹೋಟೆಲ್ ನವರಿಗೆ ಕರೆ ಮಾಡಿ ತಿಳಿಸಿದ್ದೆ. ಆತ ಹಾಗೇ  ಮಾಡಿದ್ದರು. ನಾನು ಹೋಗೋದು ಸ್ವಲ್ಪ ತಡವಾಯಿತು. 

ಆಗ ಅಲ್ಲೇ ಹೋಟೆಲ್ ನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿ "ಆ ತಿಂಡಿ ಎಲ್ಲಿಗೆ?" ಎಂದು ಕೇಳಲು

ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬ "ಗುರುಗಳ ಮನೆ ಗೂಂಡಾಗಳಿಗೆ" ಎಂದರು. 

ಅದಾಗಿ ಕೆಲವೇ ದಿನಗಳಲ್ಲಿ ಹಾಗೆ ಹೇಳಿದ್ದ ಆ ವ್ಯಕ್ತಿ ಯಾವುದೋ ಸಮಸ್ಯೆಗೆ ಸಿಲುಕಿಕೊಂಡು ಗುರುನಾಥರ ಹತ್ತಿರವೇ ಬರುವಂತಾಯಿತು. 

ಆಗ ಅದೇ ಹೋಟೆಲ್ ನಿಂದ ತಿಂಡಿ ತರಿಸಿದ ಗುರುನಾಥರು ಆ ವ್ಯಕ್ತಿಗೆ "ಗುರುಗಳ ಮನೆ ಗೂಂಡಾಗಳಿಗೆ ತಿಂಡಿ ತಂದಿದ್ದೆ. ನೀನೂ ತಗೋಳಯ್ಯಾ?" ಅಂದರು. ಅದನ್ನು ಕೇಳಿದ ಆ ವ್ಯಕ್ತಿ ಅವಾಕ್ಕಾಗಿ ತಲೆ ತಗ್ಗಿಸಿದರು. 

ನೀ ಸೋಲಬಾರದು, ಬೀಳಬಾರದು, ಸೋತವರ ಆಶಾಕಿರಣ. 

ಗುರುನಾಥರ ಮನೋ ಧೃಡತೆ, ದಿಟ್ಟತನ ಹಾಗೂ ಸತ್ಯದ ತುಡಿತ ಅನನ್ಯವಾದದ್ದು. 

ಒಮ್ಮೆ ಗುರುನಾಥರಲ್ಲಿ ಚರಣದಾಸನಾದ ನಾನು ನನ್ನ ದುಃಖವನ್ನು ತೋಡಿಕೊಳ್ಳುತ್ತಾ, ಗುರುಗಳೇ ನಾಗರೀಕ ಸೇವೆಗೆ ಸೇರಬಯಸಿ ಬಂದಿರುವೆ. ನನಗೆ ಯಾರ ಸಹಕಾರವೂ ಇಲ್ಲ. ನಾನು ಗೆಲ್ತೀನಾ ಗುರುಗಳೇ? ಎಂದೆ. 

ಅದಕ್ಕವರು "ನೋಡಯ್ಯಾ, ನಾನು ಎಂಟು ತಿಂಗಳು 1 ರೂಪಾಯಿ ನಾಣ್ಯ ನೋಡಿರಲಿಲ್ಲ. 1-1/2 ದಿನ ಬೆಂಗಳೂರಿನ ಪಾರ್ಕ್ ಒಂದರಲ್ಲಿ ಊಟವಿರದೇ ಮಲಗಿದ್ದೆ ಕಣೋ... ಹೆದರ್ಕೋಬೇಡ. ನಿನ್ನನ್ನ ಕೀಳಾಗಿ ನೋಡಿದ ಪ್ರತಿಯೊಬ್ಬರೂ ನಿನ್ನ ಕಾಲ ಹತ್ತಿರವೇ ಬರುವಂತಾಗುತ್ತದೆ. ನೀ ಗೆದ್ದೇ ಗೆಲ್ತೀಯ" ಅಂದು ಧೈರ್ಯ ತುಂಬಿದರು. 

ಮತ್ತೊಮ್ಮೆ ನಾನು ಬೇಸರದಿಂದ ಗುರುಗಳೇ ಯಾರಾದ್ರೂ ನಿಮ್ಮ ಹತ್ರ ಬಂದು ಅತ್ತು ಬಿಟ್ಟರೆ ತಕ್ಷಣವೇ ಕೆಲಸ ಮಾಡಿ ಕೊಡುತ್ತೀರಲ್ಲ ಅಂದೆ. 

ಅದಕ್ಕವರು ಹೂಂನಯ್ಯಾ ಅವರ ಕಷ್ಟ ನೋಡಲಾಗಲಿಲ್ಲ ಅದಕ್ಕೆ ಅಂದ್ರು. 

ನಾನು 'ಹಾಗಾದ್ರೆ ನಾನೂ ಅತ್ತು ಬಿಡ್ತೇನೆ, ಸೋತು ಬಿಡ್ತೇನೆ' ಅಂದೆ. 

ಅದಕ್ಕವರು "ನೀ ಸೋಲಬಾರದು, ಅಳಬಾರದು ಕಣೋ" ಅಂದ್ರು. ಅದ್ಯಾಕೆ ಹಾಗೆ ಅಂದ್ರೋ ತಿಳಿದಿಲ್ಲ. ಆದರೆ ಈವರೆಗೆ ಅದೆಷ್ಟು ಅಸಮಾನ ಕಷ್ಟ ಬಂದಿದ್ದರೂ ಅಳು ಬರುತ್ತಿಲ್ಲ. "ಆಯ್ತಾ ಇಷ್ಟೇ ತಾನೇ.... ?" ಅನ್ಸುತ್ತೆ. ಹಾಗೂ ಬಹುಶಃ ಅದಕ್ಕೆ ಗುರುನಾಥರು ಹೇಳುತ್ತಿದ್ದ ಈ ಮಾತು ಧೈರ್ಯ ನೀಡುತ್ತೆ. 

ಅವರು ಯಾವಾಗ್ಲೂ "ಅಯ್ಯಾ ಇದ್ಯಾವ ಮಹಾ ಕಷ್ಟ? ಈಶ್ವರ ಇನ್ನೂ ಕಷ್ಟ ಕೊಡಲಿ" ಅನ್ನುತ್ತಾ ಇದ್ದರು. ಹಾಗೂ ಮನುಷ್ಯ ಎಣಿಸಿದಂತೆ ಏನೂ ನಡೀಬಾರದು ಕಣೋ. ಎಲ್ಲವೂ ಅವನ ವಿರುದ್ಧವಾಗೇ ನಡೀಬೇಕು. ಆಗ ಮಾತ್ರ ಮನುಜ ಮನುಷ್ಯನಾಗುತ್ತಾನೆ" ಅಂತಿದ್ರು.....,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment