ಒಟ್ಟು ನೋಟಗಳು

Monday, November 7, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 34


ಗುರು ಕರುಣಾಳು 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಆ ವ್ಯಕ್ತಿ ರಾಷ್ಟ್ರೀಯ ಪಕ್ಷ ಒಂದರಲ್ಲಿ ಪ್ರತಿನಿಧಿಯಾಗಿದ್ದು, ರಾಜ್ಯ ಸರ್ಕಾರದ ಹಲವು ಖಾತೆಗಳನ್ನು ನಿಭಾಯಿಸಿದ ಅನುಭವಿ. ಹಾಗೂ ಇದೀಗ ಸಂಸದರಾಗಿರುವರು. ಅದಕ್ಕೂ ಮುನ್ನ ನಡೆದ ಒಂದು ಚುನಾವಣೆಯಲ್ಲಿ ತನ್ನೆಲ್ಲ ಆಸ್ತಿಯನ್ನು ಅಡವಿಟ್ಟು ಚುನಾವಣೆ ಸ್ಪರ್ಧಿಸಿದ್ದ ಆತ ದಯನೀಯ ಸೋಲುಂಡು ಹತಾಶರಾಗಿ ಸಾಯಲು ತೀರ್ಮಾನಿಸಿದರು. ಅದಕ್ಕೂ ಮುನ್ನ ಗುರುನಾಥರ ದರ್ಶನ ಪಡೆಯಲೋಸುಗ ಬಂದರು. 

ಗುರುನಾಥರು "ಆ ವ್ಯಕ್ತಿ ಹೊರ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ದಿಟ" ಎಂದು ಮನಗಂಡು ಆತನನ್ನು ಎಂಟು ಹತ್ತು ದಿನಗಳ ಕಾಲ ತನ್ನ ಮನೆಯಲ್ಲಿಯೇ ಊಟೋಪಚಾರ ಮತ್ತು ಆಶ್ರಯ ನೀಡಿ ಆತ್ಮವಿಶ್ವಾಸ ತುಂಬಿ ಕಳಿಸಿದರು. ಇಂದು ಅದೇ ವ್ಯಕ್ತಿ ಸಂಸದರಾಗಿ ಆಯ್ಕೆಯಾಗಿರುವರು. 

ಹಾಗೆಯೇ ಚುನಾವಣಾ ಪೂರ್ವದಲ್ಲಿ ಹಲವಾರು ಪಕ್ಷಗಳ ಅಭ್ಯರ್ಥಿಗಳು ಆಶೀರ್ವಾದ ಬೇಡಿ ಬರುತ್ತಿದ್ದುದು ಸಾಮಾನ್ಯವಾಗಿತ್ತು. ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೋರ್ವರು ಎರಡು ಬಾರಿ ಸತತವಾಗಿ ಚುನಾವಣೆಯಲ್ಲಿ ಸೋತು ಹತಾಶರಾಗಿದ್ದು ಕೊನೆಯ ಪ್ರಯತ್ನವಾಗಿ ಗುರುಕೃಪೆ ಬೇಕೆಂದು ಪ್ರಾರ್ಥಿಸಿದರು. ಅವರಿಗೆ ಸಿಹಿ ತಿನ್ನಿಸಿ ಒಂದು ಪೆನ್ ನೀಡಿದ ಗುರುನಾಥರು "ಈ ಬಾರಿ ನೀನೇ ಆಯ್ಕೆಯಾಗುವೆ. ಮುಂದೆ ಸಚಿವ ಆಗುವೆ. ಭವಿಷ್ಯದಲ್ಲಿ ಮುಖ್ಯಮಂತ್ರಿಯೂ ಆಗುವೆ" ಎಂದು ಆಶೀರ್ವದಿಸಿದರು. 

ಗುರುವಾಕ್ಯ ಪ್ರಮಾಣ ಎಂದಂತೆಯೇ ಆತ ಆಯ್ಕೆಯಾದರು. ಮಾತ್ರವಲ್ಲ ಸಚಿವರೂ ಆದರು. ಇದೀಗ ಸತತವಾಗಿ ಎರಡನೇ ಬಾರಿ ಆಯ್ಕೆಯಾಗಿ ಶಾಸಕರಾಗಿರುವರು. 

ಆಯ್ಕೆಯಾದ ನಂತರ ಗುರುದರ್ಶನಕ್ಕಾಗಿ ಬಂದಿದ್ದ ಅವರಿಗೆ ಗುರುವಿನ ಸಂದೇಶ ಹೀಗಿತ್ತು: "ನೋಡಯ್ಯಾ ಅಧಿಕಾರ ಮೈಮರೆಸದಂತೆ ಎಚ್ಚರ ವಹಿಸು. ಹಣ ಮಾಡಬೇಕೆಂದು ಇದ್ರೆ ಮಾಡು. ಆದರೆ ದುರಾಸೆ ಬೇಡ. 'ಮರೆಯಬೇಡ, ಮುರಿಯಬೇಡ, ಮೆರೆಯಬೇಡ' ಎಂಬ ಮೂರು ನಿಯಮ ಪಾಲಿಸಪ್ಪಾ ಸಾಕು" ಎಂದರು. 

ಇಂದು ಆ ವ್ಯಕ್ತಿ ಗುರುಕೃಪೆಯಿಂದ ಮೂರು ಬಾರಿ ಶಾಸಕನಾಗಿ ಆಯ್ಕೆ ಆಗಿರುವರು. ಮಾತ್ರವಲ್ಲ ಒಂದು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿರುವರು. ಇಂದು ಉನ್ನತ ಸ್ಥಾನದಲ್ಲಿದ್ದರೂ ಆ ವ್ಯಕ್ತಿಯ ಗುರು ಭಕ್ತಿ ಕಿಂಚಿತ್ತೂ ಬದಲಾಗಿಲ್ಲ. ಆದರೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಆ ವ್ಯಕ್ತಿ ವಿಪರೀತ ಹಣದಾಸೆಯಿಂದ ಅದನ್ನೇ ದಂಧೆ ಮಾಡಿಕೊಳ್ಳ ಹೊರಟಿದ್ದ ಅವರಿಗೆ ಗುರುನಾಥರು ನಂತರದಲ್ಲಿ ಅಷ್ಟಾಗಿ ದರ್ಶನ ನೀಡಲಿಲ್ಲ. ಒಮ್ಮೆ ಮಾತ್ರ "ಆಸೆ ಅತಿಯಾಯಿತು. ಸರಿಮಾಡ್ಕೋ" ಎಂದು ಗದರಿಸಿದ್ದರು. 

ಹಾಗೆಯೇ ಉತ್ತರ ಕರ್ನಾಟಕ ಭಾಗದ ಶಾಸಕರೋರ್ವರಿಗೆ ಗುರುನಾಥರು "ಸಚಿವರಾಗುವಿರಿ" ಎಂದಿದ್ದರು. ಹಾಗೆಯೇ ಆಯಿತು. ಆತ ಸಚಿವರಾಗಿದ್ದರೂ, ಗುರು ದರ್ಶನಕ್ಕೆ ಬಂದಾಗಲೆಲ್ಲ ಸ್ವತಃ ಕಾಫಿ ಮಾಡಿಕೊಟ್ಟು ಅಲ್ಲಿದ್ದವರು ಕುಡಿದ ಲೋಟಗಳನ್ನು ತೊಳೆದಿಟ್ಟು ಹೋಗುತ್ತಿದ್ದರು. ಶಿಕ್ಷಣ ಸಚಿವರಾಗಿದ್ದ ಅವರು ಇಂದಿಗೂ ಗುರು ಕೃಪೆಯಿಂದ ಸಜ್ಜನ ರಾಜಕಾರಿಣಿ ಎನಿಸಿರುವರು. 

ಒಮ್ಮೆ ಓರ್ವ ಮಂತ್ರಿಯ ಮನೆಗೆ ವಿಶ್ವ ವಿಖ್ಯಾತ ಮಠದ ಸನ್ಯಾಸಿಯೋರ್ವರು ಬರುವವರಿದ್ದರು. ದರ್ಶನಕ್ಕೆ ಅಲ್ಲಿಗೆ ತೆರಳಿದ ಗುರುನಾಥರು ಅಲ್ಲಿದ್ದವರಿಗೆಲ್ಲ ಊಟ, ಹಣ್ಣು ಹಂಚುತ್ತಿದ್ದರು. ಆಗ ಸಚಿವೆಯಾಗಿದ್ದ ಓರ್ವ ಮಹಿಳೆ ಸೀದಾ ಬಂದು, "ಯಾರು ನೀವು? ಇಲ್ಲೆಲ್ಲಾ ಹಂಚಬೇಡಿ" ಎಂದು ಗದರಿಸಿದರು. 

ಆಗ ಅಲ್ಲೇ ಇದ್ದ ಗುರುನಾಥರು "ಏನಮ್ಮಾ ಚುನಾವಣೆಗೂ ಮುನ್ನ ಭೇಟಿಯಾದಾಗ ನಿನ್ನ ನಡವಳಿಕೆ ಹೇಗಿತ್ತು? ಈಗ ಸಚಿವೆಯಾದ ಮೇಲೆ ಹೇಗಿದ್ದೀಯಾ? ನಿನ್ನ ಹೆಸರೇನು ಹೇಳು? ಮುಂದಿನ ಚುನಾವಣೆಯಲ್ಲಿ ಅದೇ ಆಗ್ತೀಯಾ" ಎಂದರು. 

"ಗುರು ಮುನಿದರೆ ಹರನು ಕಾಯಲಾರ". ಆಕೆ ಮತ್ತೆ ಆಯ್ಕೆ ಆಗಲಿಲ್ಲ. ಹಾಗೂ ಇಂದಿಗೂ ರಾಜಕೀಯ ಸ್ಥಾನಮಾನಕ್ಕಾಗಿ ವ್ಯರ್ಥ ಪ್ರಯತ್ನ ಮಾಡುತ್ತಿರುವರು. ಗುರುನಾಥರು ಆಗಾಗ್ಗೆ ಹೇಳುತ್ತಿದ್ದ ಒಂದು ಮಾತು ಸದಾ ನೆನಪಾಗುತ್ತಿರುವುದು. ಅದೇನೆಂದರೆ: "ಈಶ ವರ ಅಂದ್ರೆ ಬೇಡಿದ್ದನ್ನು ಕೊಡುವವನು. ಅವನನ್ನು ನಂಬು. ಅವನಿಗೆ ನೀರು ಹಾಕು ನಿರಂತರವಾಗಿ. ಎಲ್ಲವೂ ಅವನೇ ನೋಡುವನು"....... ,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 



।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment