ಒಟ್ಟು ನೋಟಗಳು

Friday, November 25, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 13


ಕೂಡಲಿಯಿಂದ ಬಂದಿದೀವಿ ಸ್ವಾಮಿ  


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ರಾತ್ರಿ ಎಂಟು ಗಂಟೆಯಾಗಿತ್ತು. ಚಿಕ್ಕಮಗಳೂರಿನ ಭಕ್ತರೊಬ್ಬರ ಮನೆಯಲ್ಲಿ ಗುರುನಾಥರು ನಾಲ್ಕಾರು ಜನರೊಂದಿಗೆ ಮಾತನಾಡುತ್ತಿದ್ದರು. 'ಸ್ವಾಮೀಜಿ'... ಎಂದಾಗ 'ಯಾರು' ಎಂದರು ಗುರುನಾಥರು. ನಾವು ಸ್ವಾಮೀಜಿ 'ಕೂಡಲಿಯಿಂದ ಬಂದಿದ್ದೀವಿ' ಎಂದು ಅಲ್ಲೇ ಹೊರಗಡೆಯೇ ನಿಂತಿದ್ದಾಗ 'ಬನ್ನಿ... ಬನ್ನಿ ಒಳಗೆ' ಗುರುನಾಥರು ಹೊರಗೆ ನಿಂತ ನಮ್ಮ ಐದೂ ಜನರನ್ನು ಕರೆದರು. ಒಳಗೆ ಹೋದ ನಾವು ನಮಿಸಿದೆವು. 'ಅಂತೂ ಗುರುನಾಥರ ದರ್ಶನ ಸಿಕ್ಕಿತಲ್ಲ' ಮನಸ್ಸು ಹಗುರವಾಗಿತ್ತು. 'ಕೂಡಲಿ' ಎನ್ನುವ ಶಬ್ದವೇ ಬಹುಶಃ ನಮಗೆ ಗುರುನಾಥರ ದರ್ಶನ ಕೊಡಿಸಲು ಒಂದು ಎಳೆಯಾಗಿದ್ದಿರಬಹುದೇನೋ?

ಕೂಡಲಿಯ ಜಗದ್ಗುರು ಮಠಕ್ಕೆ ತಮ್ಮ ಶಿಷ್ಯರಿಂದ ಗುರುನಾಥರು ಮಾಡಿಸಿದ ಸೇವೆ ಅಪಾರ. ಹಿಂದಿನ ಜಗದ್ಗುರುಗಳು ನಿರ್ಮಿಸಿದ ಬಹುದೊಡ್ಡ ಕಲ್ಮಠದ ಮೇಲೆ ಅಷ್ಟೇ ಬೃಹತ್ತಾದ ಅತಿದೊಡ್ಡ ಸೌಲಭ್ಯಗಳುಳ್ಳ ಕಟ್ಟಡ ನಿರ್ಮಾಣವಾದದ್ದು ಗುರುನಾಥರಿಂದ. ದೂರದಿಂದ ಬಂದ ಭಕ್ತರಿಗೆ ಉಳಿಯಲು ಅನೇಕ ಅನುಕೂಲ, ನೀರು, ನೀಡಿ ವ್ಯವಸ್ಥೆಗಳಾದುದು ಗುರುನಾಥರಿಂದ ಎಂಬುದು ಅನೇಕರಿಗರಿಯದ ವಿಷಯ. ಇಬ್ಬರು ಜಗದ್ಗುರುಗಳಿಗೂ ಗುರುನಾಥರ ಭಕ್ತರಿಂದ ಕೊಡಿಸಿದ ದೇಣಿಗೆಗೆ ಲೆಕ್ಕವಿಲ್ಲ. ಒಮ್ಮೆ ಕೂಡಲಿಯ ಜಗದ್ಗುರುಗಳನ್ನು ನೋಡಲು ಹೋದಾಗ, ಆ ಗುರುಗಳ ರೂಮಿನ ತುಂಬಾ, ದೊಡ್ಡ ದೊಡ್ಡ ಡಬ್ಬಗಳಲ್ಲಿ ತುಂಬಿದ ಹಲವಾರು ಸಿಹಿ ಭಕ್ಷ್ಯಗಳು, ಹಣ್ಣು ಹಂಪಲುಗಳು, ತರಕಾರಿಗಳು, ವಸ್ತ್ರ ಧಾನ್ಯಾದಿಗಳು ವಿರಾಜಿಸುತ್ತಿದ್ದವು. ದೊಡ್ಡ ಗುರುಗಳಿಗೆ ನಮಿಸಿ ಕುಳಿತಾಗ, ತುಂಬಾ ಹಣ್ಣು ಹಣ್ಣು ವಯಸ್ಸಾದ ಅವರು ಅಷ್ಟೇ ನಿಸ್ವಾರ್ಥ ಮನಸ್ಸಿನವರು... 'ನೋಡ್ರಪ್ಪಾ ಸಖರಾಯಪಟ್ಟಣದ ಅವಧೂತರು ತಮ್ಮ ಶಿಷ್ಯರೊಂದಿಗೆ ಎಷ್ಟೆಲ್ಲಾ ಕಲಿಸಿಬಿಟ್ಟಿದ್ದಾರೆ. ಅವರು ಏನಾದರೂ ಕಳಿಸಿದರೆಂದರೆ ಹೀಗೆ ಉತ್ತಮವಾದದ್ದು, ಅಗಾಧವಾಗಿ ಕಳಿಸಿ ಬಿಡುತ್ತಾರೆ.. ಬನ್ನಿ ನೀವು ಎಲ್ಲಾ ಈ ಸಕ್ಕರೆ ಹೋಳಿಗೆಯನ್ನು ತೆಗೆದುಕೊಳ್ಳಿ... ' ಎಂದು ತುಪ್ಪವನ್ನು ಹಾಕಿ ನಮಗೆಲ್ಲಾ ಕೊಟ್ಟರು. ಸಖರಾಯಪಟ್ಟಣದ ಸಕ್ಕರೆ ಹೋಳಿಗೆ ಅದೆಷ್ಟು ಸವಿಯಾಗಿತ್ತು. ಗುರುನಾಥರು ಕಳಿಸಿದ ಪ್ರಸಾದ ಅನಾಯಾಸವಾಗಿ ಮತ್ತೊಬ್ಬ ಜಗದ್ಗುರುಗಳ ಹಸ್ತದಿಂದ ನಮಗೆ ಒದಗಿದ್ದು ನಮ್ಮ ಭಾಗ್ಯ... ಹೀಗೆ ಎರಡು ಮೂರು ಸನ್ನಿವೇಶಗಳಲ್ಲಿ ಗುರುನಾಥರ ಪ್ರಸಾದ ನನಗೆ ಸಿಕ್ಕಿತ್ತು. ಆದರೂ ಅವರ ದರ್ಶನ ಮಾತ್ರ ಆಗಿರಲಿಲ್ಲ. 

'ಕೂಡಲಿ' ಎಂಬ ಪದ ಗುರುನಾಥರಿಗೆ ಮತ್ತೊಂದು ರೀತಿಯಲ್ಲಿ ಸಂಬಧಿಸಿದ್ದಿರಬಹುದು. ನಲವತ್ತೈದು ವರ್ಷಗಳ ಹಿಂದಿನ ನಂಟು. ನಮ್ಮ ತಂದೆ ಶ್ರೀಕಂಠಯ್ಯನವರು ಗುರುನಾಥರನ್ನು, ಬಸವಾಪಟ್ಟಣದ ರಾಘಣ್ಣನವರನ್ನು, ಬೆಲಗೂರಿನ ಶ್ರೀಗುರುಗಳನ್ನು ನಮ್ಮ ಮನೆಗೆ ಕರೆತರುತ್ತಿದ್ದರು. ಇಂಥ ಸಾಧು ಸಂತರ ಸಂಗಮ ನಮ್ಮ ತಂದೆಯವರೊಂದಿಗೆ ಆಗುತ್ತಿತ್ತು. ಕೂಡಲಿಯ ಸಂಗಮದಲ್ಲಿದ್ದ ನಮ್ಮ ತಂದೆಗೆ ಸಾಧು ಸಂತರ ಸಮಾಗಮವೆಂದರೆ ಅದೇನೋ ಅಕ್ಕರೆ. 

ನಿಮ್ಮ ಮನೆಯಲ್ಲಿ ಕೈತುತ್ತು ಹಾಕುತ್ತಿದ್ದರು 


ಕೂಡಲಿಯಿಂದ ಬಂದವರೆಂದ ಕೂಡಲೇ 'ಶ್ರೀಕಂಠಯ್ಯನವರು ಹೇಗಿದ್ದಾರೆ? ಶ್ರೀನಿವಾಸ ಭಟ್ಟರು ಏನು ಮಾಡುತ್ತಿದ್ದಾರೆ? ಅಲ್ಲಿಯೇ ಸನಿಹದ ಹೊಳಲೂರಿನಲ್ಲಿದ್ದ ಒಬ್ಬ ಸಾಧಕ, ಅವಧೂತರು... ಹನುಮಂತಪ್ಪನವರು ಹೇಗಿದ್ದಾರೆಂದು ಪ್ರೀತಿಯಿಂದ ವಿಚಾರಿಸಿದರು. 

ಏನು ಉತ್ತರಿಸಲಿ.. 'ಸ್ವಾಮೀಜಿ ನಮ್ಮ ತಂದೆ, ನಮ್ಮ ಮಾವ ಇಬ್ಬರೂ ಗತಿಸಿ ಸಾಕಷ್ಟು ಕಾಲವಾಯಿತು. ಹನುಮಂತಪ್ಪ ಸ್ವಾಮಿಗಳೂ ದೈವಾಧೀನರಾಗಿ ಇಪ್ಪತ್ತು ವರ್ಷಗಳೇ ಆದವು' ಎಂದೆ. 

ಇಷ್ಟು ಹೊತ್ತಿಗಾಗಲೇ ಗುರುನಾಥರು ಎರಡು ಮೂರು ಸಾರಿ, ಅನೇಕ ಪಾನೀಯ ಪ್ರಸಾದಗಳನ್ನು ತರಿಸಿಕೊಟ್ಟಿದ್ದರು. 'ನಿಮ್ಮ ಊರಿಗೆ ನಲವತ್ತು ವರ್ಷಗಳ ಕೆಳಗೆ ಬರುತ್ತಿದ್ದೆ. ನಿಮ್ಮ ಊರಿನ ಎಲ್ಲಾ ದೇವಸ್ಥಾನಗಳ ಪೂಜೆ ಮಾಡಿ, ಎರಡು ಬಿಂದಿಗೆ ನೀರನ್ನು ಹೊತ್ತು ತಂದು ನಿಮ್ಮ ಮನೆಯಲ್ಲಿ ಇಡುತ್ತಿದ್ದೆ. ನಿಮ್ಮ ತಾಯಿ ಕೈ ತುತ್ತು ಹಾಕುತ್ತಿದ್ದರು. ನಲವತ್ತೋ, ನಲವತ್ತೈದೋ ವರ್ಷಗಳು ಆದವು. ಇನ್ನೂ ಮರೆತಿಲ್ಲ... ನಮ್ಮನ್ನು ಬಹಳ ವರ್ಷಗಳ ಹಿಂದಕ್ಕೆ ಕರೆದೊಯ್ದು ಬಿಟ್ಟಿರಿ' ಎಂದರು. ಸಂತಸ ಅವರ ಮುಖದಲ್ಲಿತ್ತು. ನನ್ನ ಜೊತೆ ಬಂದಿದ್ದ ನಮ್ಮ ಮಗಳಿಗೆ ಹಾಡು ಹೇಳಲು ಹೇಳಿದ್ದರು. ಆಕೆ ಹಾಡುತ್ತಲೇ ಗುರುನಾಥರ ಪಾದ ಒತ್ತುತ್ತಿದ್ದಳು. ನನಗೂ ಇನ್ನೊಂದು ಪಾದ ಒತ್ತುವ ಸದವಕಾಶವನ್ನು ಗುರುನಾಥರು ಕರುಣಿಸಿದ್ದರು. ಗಾನಸುಧೆ ಸಾಗುತ್ತಲೇ ಇತ್ತು... ಒಂದು ತುಂಡು ಟವೆಲನ್ನು ಸೊಂಟಕ್ಕೆ ಸುತ್ತಿ, ಹೆಗಲ ಮೇಲೊಂದು ಟವೆಲು ಧರಿಸಿ ನಿರ್ಮಲ ಮುಖದಲ್ಲಿ 'ಪರಮಾತ್ಮ' ನಂತೆ ಕಾಣುತ್ತಿರುವ ಗುರುನಾಥರನ್ನು ನೋಡುವುದೊಂದೇ ನಮ್ಮ ಕೆಲಸವಾಗಿತ್ತು. ಜನುಮ ಜನುಮಕ್ಕೆ ಸಾಕಾಗುವ ಕೃಪೆ ಸಿಕ್ಕಂತೆ ಅನಿಸಿತ್ತು. ನಾವಿಲ್ಲಿಗೆ ಬಂದಿದ್ದೇವೆ. ಗುರುನಾಥರು ಇಷ್ಟು ಸುಲಭವಾಗಿ ದರ್ಶನ ನೀಡಿರುವುದೇ ನಮಗೆ, ಅದರಲ್ಲೂ ನನಗಂತೂ ಪರಮಾಶ್ಚರ್ಯದ ಸಂಗತಿಯಾಗಿತ್ತು. 

ನಾಳೆ ನಿಮ್ಮ ಮನೆಗೆ ಬರ್ತೀನಿ 


'ಬಹಳ ದಿನಗಳಾಗಿತ್ತು ಸಂಗೀತ ಕೇಳಿ'.... ಗುರುನಾಥರು ತೃಪ್ತರಾಗಿ ಹೇಳುತ್ತಾ.. 'ಒಹೋ! ಗಂಟೆ ಹನ್ನೊಂದಾಯಿತು. ನಾವಿನ್ನು ಹೊರಡಬಹುದು. ಕಾರಿನಲ್ಲಿ ಪ್ರೆಟ್ರೋಲ್ ಇದೆಯೇ ನೋಡಿಕೊಳ್ಳಿ.. ಹಾಸನಕ್ಕೆ ಹೋಗ್ತಿದ್ದೀರಲ್ಲ ಜೋಪಾನ. ಒಳ್ಳೆಯದು ಹೋಗಿಬನ್ನಿ... ನಾಳೆ ನಿಮ್ಮ ಮನೆಗೆ ಬರ್ತೀನೀಮ್ಮ' ಎಂದು ನನ್ನ ಮಗಳಿಗೆ ಹೇಳುತ್ತಾ... ನಾವಲ್ಲಿಟ್ಟಿದ್ದ ಹಣ, ಜೂಸ್ ಡಬ್ಬಿ, ಎಲ್ಲವನ್ನು ಅವಳ ಮಡಿಲಿಗೆ ಹಾಕಿ' ಇದೆಲ್ಲಾ ನಿನಗೆ ಸೇರಬೇಕಾದ್ದು' ತಗೋ ಎಂದರು. ಇಷ್ಟು ಹೊತ್ತಿಗಾಗಲೇ ಮೊಸರನ್ನ, ಮತ್ತೇನೋ ತಿಂಡಿ, ಕಾಫಿಗಳ ಸರಬರಾಜಾಗಿತ್ತು. ಗುರು ಪ್ರಸಾದವೆಂದು ತೆಗೆದುಕೊಳ್ಳುತ್ತಲೇ ಇದ್ದೆವು. 

ಗುರುನಾಥರು ಹಾಸನದ ತಮ್ಮ ಮನೆಗೆ ಬರುತ್ತಾರಲ್ಲ ಎಂಬ ಸಂತಸ ಸಂಭ್ರಮದಿಂದ 'ಗುರುನಾಥರೇ ನಾಳೆ ಬರ್ತೀರಲ್ಲ... ಎಲ್ಲಿಗೆ ಕಾರು ತರಲಿ... ಎಷ್ಟು ಹೊತ್ತಿಗೆ ಬರಲಿ... ?' ಎಂದು ನನ್ನ ಮಗಳು ಆತಂಕದಿಂದ ಕೇಳಿದಾಗ, 'ಏನೂ ಬೇಡ... ನಾನು ಬರ್ತೀನಮ್ಮ.... ' ಹೋಗಿ ಬಾ ಎಂದು ಆಶೀರ್ವದಿಸಿದರು. 

ಗುರುನಾಥರ ಬಗ್ಗೆ ಕೇಳಿದ್ದ ನನಗೆ ಹೀಗೆ ಗುರುನಾಥರು ಮನದುಂಬುವಂತೆ ಒಂದು ದರ್ಶನ ನೀಡಿ ಹರಸಿದ್ದರು. ಈ ದರ್ಶನ ನಾನು ಮಾಡಲು ನನ್ನ ಮಗಳು ಕಾರಣವೆಂದು ನನಗನ್ನಿಸುತ್ತೆ. 

ಅಂದು ಶಿವಮೊಗ್ಗದಿಂದ ಹಾಸನಕ್ಕೆ ಹೊರಡಲಿದ್ದು ಅವಳು 'ಸಖರಾಯಪಟ್ಟಣಕ್ಕೆ ಹೋಗಿ ಗುರುನಾಥರ ದರ್ಶನ ಮಾಡಿ ಹೋಗುತ್ತೇವೆ ಎಂದಾಗ.. ನಾನು ಬರ್ತೀನಿ.. ಎಂದಿದ್ದೆ. ಅಪ್ಪಾ ಅದೆಲ್ಲಾ ಅಷ್ಟು ಸುಲಭ ಅಲ್ಲ.... ಅದೂ ಗುರುನಾಥರು ಸಿಗಬೇಕಲ್ಲ... ' ಎಂದು ರಾಗವೆಳೆದಾಗ.... 'ಗುರುನಾಥರು ಸಿಕ್ಕೇ ಸಿಗುತ್ತಾರೆ. ದರ್ಶನ ಆಗೇ ಆಗುತ್ತೆ' ಎಂದು ಅದೇನೋಭರವಸೆಯಿಂದ ಹೇಳಿಬಿಟ್ಟೆ. ಮಧ್ಯಾನ್ಹ ಹೊರಟು ಸಖರಾಯಪಟ್ಟಣಕ್ಕೆ ಬಂದು ಕಾದಿದ್ದು, ಸ್ನೇಹಿತರೊಬ್ಬರ ಮನೆಯಲ್ಲಿ ತಂಗಿದ್ದಾಗ ಅವರೂ ನನಗೆ ಗುರುನಾಥರ ವಿಚಾರ ತಿಳಿಸಿದ್ದು, ಮತ್ತೂ ನೋಡಲೇಬೇಕೆಂಬ ಇಚ್ಛೆಯನ್ನು ಭದ್ರ ಮಾಡಿತ್ತು. ಸಂಜೆ ಏಳಾದರೂ ಆ ಊರಿಗೆ ಹೊಸಬನಾದ ನನಗೆ ಏನೂ ತಿಳಿಯಲಿಲ್ಲ. ಅಕಸ್ಮಾತ್ ಸಿಕ್ಕ ಸ್ನೇಹಿತರು, ಮನೆಗೆ ಕರೆದೊಯ್ದು ತಮ್ಮ ಮನೆಯ ವೇದಿಕೆಯ ದರ್ಶನ ಮಾಡಿಸಿ, ತಮ್ಮ ಅಣ್ಣನನ್ನು ಕೇಳಿ ತಿಳಿದುಕೊಂಡು ಗುರುನಾಥರ ಸ್ಥಾನವನ್ನು ತಿಳಿಸಿದ್ದರು. ಹೀಗೆ ಹಲವು ಗುರುಬಂಧುಗಳ ಸಹಕಾರ... ಗುರುನಾಥರ ಕೃಪೆ... ಜೀವನದಲ್ಲೊಮ್ಮೆ ಮಾತ್ರ ದರ್ಶನ ಮಾಡಿಸಿತ್ತು. ಆ ಕರುಣಾಳುಗಳು ದರ್ಶನ ನೀಡಿದ್ದರು. 

ಮಾರನೆಯ ದಿನ ಅದಾವ ರೂಪದಲ್ಲಿ ಗುರುನಾಥರು ಬಂದರೋ ನಮಗಾರಿಗೂ ತಿಳಿದಿರಲಿಲ್ಲ. 'ಬೆಳಗಿನಿಂದ ಸಂಜೆಯವರೆಗೆ ಬಂದವರಿಗೆ, ನಿಮ್ಮ ಮನೆ ಬಾಗಿಲಿಗೆ ಬಂದ ಎಲ್ಲ ಪ್ರಾಣಿಗಳಿಗೆ ಏನಾದರೂ ಕೊಡಮ್ಮಾ' ಎನ್ನುವುದು ಬಿಟ್ಟು ನನ್ನಿಂದ ಬೇರೇನೂ ಮಾಡಲಾಗಲಿಲ್ಲ. ಈಗ ಗುರುನಾಥರು... ಏನೂ ಅರಿಯದ ದಡ್ಡನಿಂದ ಅವರೇ, ಲೇಖನಿಯಾಗಿ ಸದ್ಗುರುನಾಥ ಲೀಲಾಮೃತವನ್ನು ಬರೆಸುತ್ತಿರುವುದು, ತಮ್ಮ ಸಹಸ್ರಾರು ಭಕ್ತರಿಗೆ ನೀಡಿದ್ದನ್ನು, ನನಗೂ ಉಣಬಡಿಸುತ್ತಿರುವುದು, ಗುರುವಂದನೆಯ ಕಾರ್ಯಕ್ರಮದಲ್ಲಿ ಗುರುನಾಥರ ಬಂಧುಗಳ ಮಧ್ಯದಲ್ಲಿ ಇದನ್ನು ಬಿಡುಗಡೆ ಮಾಡಿಸುತ್ತಿರುವುದು ಎಲ್ಲಾ ಗುರುನಾಥರ ಲೀಲೆಯೇ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 



।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

2 comments:

  1. Where is this book sadgurunatha leelamruta available?
    What is the cost.please let me know.My name is Balachandra and mail ID balshesh@gmail.com

    ReplyDelete
  2. Gurudeva nimma charanagalige nanna namanagalu. Nanna tappina arivagide. Nanu tumba tappugalannu madiddene. Dayavittu kshamisibidi.Inn mele yara manassu noyisadante, nimmanna adarshavagittukondu badukuttene.

    ReplyDelete