ಒಟ್ಟು ನೋಟಗಳು

Friday, November 18, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 6


ದೀಪದ ಬಡ್ಡೆಗಿದ್ದೂ ಬೆಳಕು ಪಡೆದ ಕೆಲವರು 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।


ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ದೀಪದ ಬಡ್ಡೆಯಲ್ಲಿ ಕತ್ತಲು, ಹಿತ್ತಲಗಿಡ ಮದ್ದಲ್ಲ - ಎಂಬೆಲ್ಲಾ ಗಾದೆ ಮಾತುಗಳಿವೆ. ಆದರೆ, ಗುರುಕರುಣೆ ಆಯಿತೆಂದರೆ, ದೀಪದ ಬುಡದ ಕತ್ತಲಲ್ಲಿದ್ದವರಿಗೂ ಜ್ಞಾನದ ಬೆಳಕು ಗುರುಗಳ ಕೃಪೆಯಿಂದಾಗುತ್ತದೆ - ಗಾದೆ ಮಾತಿನಲ್ಲಿ ಸುಳ್ಳಾದೀತು. 

ಗುರುನಾಥರ ಊರಿನಲ್ಲಿದ್ದವರೇ, ಒಬ್ಬರು ಅದು ಹೇಗೋ ಅವರ ಪ್ರಭಾವಕ್ಕೆ ಒಳಗಾಗಿ ಅವರ ಒಡನಾಟಕ್ಕೆ ಬಂದರು. ಹೆಚ್ಚೇನೂ ತರ್ಕ ಮಾಡದ ಅವರು ಗುರುನಾಥರ ಬಗ್ಗೆ ಕೇಳಿದಾಗ ತಮ್ಮ ಅನುಭವವನ್ನು ಹಂಚಿಕೊಂಡ ರೀತಿ ಹೀಗಿದೆ: "ಮುಂಚೆ ನಮ್ಮ ಅಣ್ಣ ಇವರ ಜೊತೆಗಿರುತ್ತಿದ್ದರು. ಹತ್ತಿರದ ಸಂಬಂಧಿಗಳವರು. ನಮ್ಮವರಾಗಿದ್ದರೂ ಅಷ್ಟೇನೂ ಒಡನಾಟವಿರಲಿಲ್ಲ. ಆದರೂ ಸುಮಾರು 1988 ರಿಂದ ಪರಿಚಯ. 1992 ರಲ್ಲಿ ನಾನೊಂದು ಅಂಗಡಿ ಮಳಿಗೆ ನಿರ್ಮಿಸುತ್ತಿದ್ದೆ. ಇದ್ದಕ್ಕಿದ್ದಂತೆ ಬಂದ ಗುರುನಾಥರು "ನೋಡು ಇನ್ನೊಂದು ವಾರದೊಳಗೆ ಪ್ರವೇಶ ಮಾಡಿಬಿಡು. ಇಲ್ಲಾ ಅಂದರೆ ಇನ್ನೊಂದು ವರ್ಷ ಕಾಯಬೇಕಾದೀತು" ಎಂದರು. 

ಅವರ ಕೃಪೆಯಿಂದ ವಾರದೊಳಗೆ ಗೃಹಪ್ರವೇಶ, ಹೋಮ ಹವನಗಳಾದವು. ಈ ಕೆಲಸಗಳ ಒತ್ತಡದಿಂದ ಬಳಲಿದ ನಮ್ಮ ತಂದೆಯನ್ನು ಪರ ಊರಿನಲ್ಲಿದ್ದ ನಮ್ಮಣ್ಣನ ಮನೆಗೆ ಚೆಕಪ್ ಗಾಗಿ ಕಳಿಸಿದೆವು. ನಮ್ಮ ತಾಯಿ ಇಲ್ಲೇ ಇದ್ದರು". 

ಅಂದು ಗುರುನಾಥರು ನನ್ನನ್ನು ಕರೆದು "ಅಲ್ಲಯ್ಯಾ ಅಪ್ಪ ಅಮ್ಮನ್ನ ಬೇರೆ ಬೇರೆ ಮಾಡಿದೀಯಲ್ಲಾ. ಇದು ಸರೀನಾ... ? ಮೊದಲು ಅವರು ಒಟ್ಟಿಗೆ ಇರುವಂತೆ ಮಾಡು" ಎಂದರು. ಕೂಡಲೇ ನಾನು ಅಮ್ಮನನ್ನು ಕರೆದೊಯ್ದು ತಂದೆಯವರಿದ್ದ ನಮ್ಮಣ್ಣನ ಮನೆಗೆ ಬಿಟ್ಟು ಬಂದೆ. ಎರಡು ಮೂರು ದಿನಗಳಲ್ಲಿ ಸಂಧ್ಯಾವಂದನೆ ಮಾಡುತ್ತಿದ್ದ ನಮ್ಮ ತಂದೆಯವರು ಹೃದಯಾಘಾತದಿಂದ ಪರಮಾತ್ಮನ ಮಡಿಲು ಸೇರಿದ್ದರು. ಮುಂದಿನ ಆಗು ಹೋಗುಗಳನ್ನೆಲ್ಲಾ ಅರಿತ ಗುರುನಾಥರು ಹೀಗೆಲ್ಲಾ ಮಾಡಿ ತೋರಿಸಿದರೂ ನಮಗೇನೂ ಆಗ ಅನಿಸುತ್ತಿರಲಿಲ್ಲ. ಇಂತಹ ಅನೇಕ ಘಟನೆಗಳು ಬಂದವರ ಸಮ್ಮುಖದಲ್ಲಿ ನಡೆಯುತ್ತಿತ್ತು. ನಾನು ಸುಮ್ಮನೆ ಸಾಕ್ಷೀಭೂತನಾಗಿರುತ್ತಿದ್ದೆ". 

"ಗುರುನಾಥರ ಮನೆಯಲ್ಲಿ ದೊಡ್ಡ ದನಗಳ ಗುಂಪು ಇತ್ತು. ಮೇಯಲು ಹಿಂದಿನ ದಿನ ಮಾಳಕ್ಕೆ ಬಿಟ್ಟು ಬಂದವುಗಳು ರಾತ್ರಿಯಾದರೂ ಬಂದಿರಲಿಲ್ಲ. ಪ್ರತಿನಿತ್ಯ ಸಂಜೆ ಅವುಗಳೆಲ್ಲಾ ಸಹಜವಾಗಿ ಮನೆಗೆ ಬರುತ್ತಿದ್ದವು - ಅಂದು ಬೆಳಿಗ್ಗೆಯೇ ಎದ್ದ  ಗುರುಗಳು 'ಬಾರಯ್ಯಾ ಆಂಜನೇಯನಿಗೆ ಹೂವು ಹಾಕಿ ಬರೋಣ' ಎಂದು ಕರೆದೊಯ್ದರು. ಹೂವು ಹಾಕಿ ಕಣಿವೆ ಆಂಜನೇಯನ ಬಳಿ ಕೆಲಹೊತ್ತು ಕುಳಿತಿದ್ದು ಮನೆಗೆ ಬರುವಲ್ಲಿ ದನದ ಹಿಂಡು ತನ್ನಷ್ಟಕ್ಕೆ ತಾನೇ ಬರುತ್ತಿದ್ದವು - ಗುರುನಾಥರು ಆಂಜನೇಯನಿಗೆ ಅದೇನು ಹೇಳಿದರೋ ನನಗಂತೂ ತಿಳಿಯಲಿಲ್ಲ" ಸತ್ಸಂಗ ಮುಂದುವರೆಯಿತು. 

ಬಲ್ಲಾಳೇಶ್ವರನೆಂದರೆ ಗುರುನಾಥರಿಗೆ ಎಲ್ಲಿಲ್ಲದ ಭಕ್ತಿ. ಅನೇಕ ಸಾರಿ ಮಳೆ ಇಲ್ಲದೆ ಬರಗಾಲ ಬರುವಂತಹ ಸಂದರ್ಭದಲ್ಲಿ ಬಲ್ಲಾಳೇಶ್ವರನಿಗೆ ಪರ್ಜನ್ಯ ಮಾಡಿಸಿ "ಏಹಿ ಇಂದ್ರ, ಏಹಿ ವರುಣ, ಏಹಿ ಪರ್ಜನ್ಯ, ಸದ್ಯಸ್ಯವೃಷ್ಟಿನಿಂದೇಹಿ" ಎಂದು ಪ್ರಾರ್ಥಿಸಿದರೆಂದರೆ ಮಳೆ ಅಬ್ಬರಿಸಿ ಸುರಿದು, ಅಯ್ಯನಕೆರೆ ತುಂಬಿ ಕೋಡಿ ಹರಿಯುತ್ತಿತ್ತು. ಅಷ್ಟು ದೂರದಿಂದ ನೀರು ಹೊತ್ತು ತಂದು ಬಲ್ಲಾಳೇಶ್ವರನನ್ನು ಪೂಜಿಸುವುದೆಂದರೆ - ಅವರಿಗೇನೋ ಸಂತಸ. ಹಾಗಾಗಿ, ನನ್ನ ಬಳಿ ಆಗಾಗ್ಗೆ ಹೇಳುತ್ತಿದ್ದರು. "ಅಯ್ಯ, ಪ್ರತಿ ಸೋಮವಾರವಾದರೂ ಬಲ್ಲಾಳೇಶ್ವರನಿಗೊಂದು ಪೂಜೆ ಮಾಡಿ ಕೈಮುಗಿದು ಬಾ. ನಿನಗೇನೂ ಮಂತ್ರ ಬರುವುದಿಲ್ಲವೇ - ಚಿಂತೆ ಎದ. ಭಕ್ತಿಯಿಂದ ಓಂ ನಮಃ ಶಿವಾಯ ಎಂದು, ಒಂದು ಚೊಂಬು ನೀರು ಹಾಕು ಅಷ್ಟೇ ಸಾಕು" ಎನ್ನುತ್ತಿದ್ದರು. ಮಂತ್ರಕ್ಕೆಷ್ಟು  ಪ್ರಾಧಾನ್ಯತೆ ಇತ್ತೋ ಅಷ್ಟೇ ಪ್ರಾಧಾನ್ಯತೆಯನ್ನು ಮುಗ್ಧ ಭಕ್ತಿಗೂ ಅವರು ಕೊಡುತ್ತಿದ್ದರು". 

ಗುರುನಾಥರ ಸಮಾಧಿಯ ಪ್ರಶಾಂತ ವಾತಾವರಣದಲ್ಲಿ ಕುಳಿತ ಆ ಗುರುಬಂಧುಗಳು ಮತ್ತೆ ನೆನಪಿಸಿಕೊಂಡು, ಗುರು ಸಂಕೀರ್ತನವನ್ನು ಮುಂದುವರಿಸಿದರು. "ಒಂದು ದಿನ ಗುರುನಾಥರು 'ನಾಳೆ ಬೆಂಗಳೂರಿಗೆ ನಿಮ್ಮ ಮನೆಗೆ ಬರುತ್ತೇನೆ, ಏನಾದರೂ ವಿಚಾರವಿದ್ದರೆ ಈ ನಂಬರಿಗೆ ಫೋನ್ ಮಾಡು' ಎಂದು ನನ್ನ ನಂಬರನ್ನು ಒಬ್ಬ ಮಹಿಳೆಗೆ ಕೊಟ್ಟರು. ಮಾರನೆಯ ದಿನ ಬೆಳಗಿನಿಂದ ನಾನು ಅವರ ಮನೆಯ ಬಳಿಯೇ ಇದ್ದೆ. ಹಿಂದಿನ ಕೊಟ್ಟಿಗೆಯಲ್ಲಿ ಅವರು ಹನ್ನೊಂದರವರೆಗೆ ಮಲಗಿದ್ದರು - ತದನಂತರ 'ನೀನು ಮುಂದಿನಿಂದ ಬಾಗಿಲು ಹಾಕಿಕೊಂಡು ಚಿಲಕ ಹಾಕಿಕೊಂಡು ಹೋಗುವುದಾದರೆ, ಕೆಲಸವಿದ್ದರೆ ಹೋಗು, ಇಲ್ಲಿ ಪ್ರಶಾಂತವಾಗಿದೆ' ಎಂದು ನನ್ನನ್ನು ಕಳಿಸಿ ನಾಲ್ಕೂವರೆವರಗೆ ಮಲಗಿಯೇ ಇದ್ದರು. ಮಧ್ಯಾನ್ಹದ ಮೂರೂವರೆಯ ಹೊತ್ತಿಗೆ, ನಿನ್ನೆ ಬಂದಿದ್ದ ಆ ತಾಯಿ ಬೆಂಗಳೂರಿನಿಂದ ನನಗೆ ಫೋನ್ ಮಾಡಿ "ಮಧ್ಯಾನ್ಹ ಗುರುಗಳು ನಮ್ಮ ಮನೆಗೆ ಬಂದಿದ್ದರು, ಬಾಳೆಹಣ್ಣಿನ ಪ್ರಸಾದ ನೀಡಿದರು - ತುಂಬಾ ಸಂತೋಷವಾಯಿತೆಂದು' ಹೇಳಿದರು. ನಾನು ಕೊಟ್ಟಿಗೆಗೆ ಬಂದು ನೋಡಿದರೆ ಗುರುನಾಥರು ಇಲ್ಲೇ ಇದ್ದಾರೆ. ನಾಲ್ಕೂವರೆಗೆ ಫೋನ್ ವಿಚಾರ ತಿಳಿಸಿದರೆ ಸುಮ್ಮನೆ ನಕ್ಕುಬಿಟ್ಟರು". 

ದುಡ್ಡನ್ನು ಅಕ್ಷಯವಾಗಿಸಿದ ಘಟನೆಯೊಂದನ್ನು ಸ್ಮರಿಸಿಕೊಂಡು ಮತ್ತೆ ಹೀಗೆ ಹೇಳತೊಡಗಿದರು. "ಅವತ್ತು ಒಬ್ಬ ಜಗದ್ಗುರು ಪೀಠದ ಸದ್ಗುರುಗಳು ಗುರುನಾಥರ ಮನೆಗೆ ಬಂದಿದ್ದರು. ಸುಮಾರು ಒಂದು ನೂರೈವತ್ತು ಜನಗಳಿಗೂ ಜಾಸ್ತಿ ಜನರು ಸೇರಿದ್ದರು. ಆಗ ಗುರುನಾಥರು ನನಗೆ ಒಂದು ನೂರು ರೂಪಾಯಿ ನೋಟನ್ನು ಕೊಟ್ಟು 'ಒಂದು ರೂಪಾಯಿನ ಚಿಲ್ಲರೆ ತಂದು ಶ್ರೀಗಳಿಗೆ ಮುಟ್ಟಿಸಿ ಎಲ್ಲರಿಗೂ ಕೊಡಯ್ಯಾ' ಎಂದು ಹೇಳಿದರು. ನಾನು ಹಾಗೆ ಮಾಡುತ್ತಾ ಹೋದೆ. ಅಲ್ಲಿದ್ದ ಎಲ್ಲರಿಗೂ ಹಂಚಿದ ಮೇಲೆಯೂ ತಟ್ಟೆಯಲ್ಲಿ ಹತ್ತು ಹದಿನೈದು ನಾಣ್ಯಗಳಿದ್ದವು. ಇಂತಹ ಪ್ರಸಂಗಗಳಿಗೇನೂ ಕೊರತೆ ಇಲ್ಲ" ಎಂದರು. 

ಯಾವ ಕ್ಷಣಕ್ಕೆ ಏನು ಬೇಕು, ಎಷ್ಟು ಬೇಕೋ ಅದು ಅದೆಲ್ಲಿಂದ ಗುರುನಾಥರ ಬಳಿ ವಿಸ್ಮಯವಾಗಿ ಪ್ರಕಟವಾಗುತ್ತಿತ್ತು ಎಂಬುದನ್ನು ತಿಳಿಸುತ್ತಾ "ನಾನೇ ಬೆಳಿಗ್ಗೆ ಸ್ನಾನ ಮಾಡಿಸಿ ಹೊಸ ದೋತರ ಉಡಿಸಿ, ಗುರುನಾಥರನ್ನು ಕಳಿಸುತ್ತಿದ್ದೆ. ಅರಳಿಕಟ್ಟೆಯ ಬಳಿ ಬರುವಲ್ಲಿ ಯಾರಾದರೂ ಬಂದು ನಮಸ್ಕರಿಸಿದರೆ, ಸೊಂಟದಲ್ಲಿ ಕೈ ಆಡಿಸಿ ಕಿತ್ತಳೆಹಣ್ಣು ತೆಗೆದು ಸುಲಿದು ಕೊಡುತ್ತಿದ್ದರು. ದ್ರಾಕ್ಷಿ ನೀಡುತ್ತಿದ್ದರು - ಅದೆಲ್ಲಿಂದ ಬರುತ್ತಿತ್ತು ಎಂಬುದೇ ನನಗೆ ಸಮಸ್ಯೆಯಾಗಿತ್ತು. ಪ್ರತಿನಿತ್ಯ ಅವರು ಮಲಗುವ ದಿಂಬು ಹಾಸಿಗೆಗಳನ್ನು ಕೊಡವಿ ಹಾಸಿರುತ್ತಿದ್ದೆ. ಬೆಳಗಿದ್ದ ಗುರುನಾಥರು 'ಹೋಟೆಲಿನಿಂದ ತಿಂಡಿ ತರಲು ದುಡ್ಡಿಲ್ಲವೆನಯ್ಯಾ ... ಆ ದಿಂಬಿನ ಕೆಳಗೆ ಒಂದು ನೂರರ ನೋಟಿರಬಹುದು ನೋಡು' ಎಂದಾಗ ಹೋಗಿ ನೋಡಿದರೆ ಅಲ್ಲೊಂದು ನೂರರ ನೋಟಿರುತ್ತಿತ್ತು. ಹಾಗಾದರೆ ನಾನು ಹಾಸಿಗೆ ಕೊಡವಿದ್ದು ಸುಳ್ಳೇ - ನೀವೇ ಹೇಳಿ" ಎಂದು ಮೌನವಾದರು. 

ಗುರುನಾಥರ ವೇದಿಕೆಯ ಎದುರು ಕುಳಿತ ಅವರಿಗೆ ಮತ್ತೆ ಗುರುನಾಥರ ಮಾತುಗಳೇ ನೆನಪಾಗಿ, ಹೇಳತೊಡಗಿದರು. "ನಂದೂ ಅಂತಿರಬಾರದು ಕಣಯ್ಯಾ..... ನೀನೇನು ಒಳ್ಳೆಯ ಮನಸ್ಸಿನಿಂದ ಮಾಡುತ್ತೀಯೋ ಅದು ಒಳ್ಳೆಯದೇ ಆಗುತ್ತದೆ' ಎನ್ನುತ್ತಿದ್ದರು. ಪಶುಪ್ರಾಣಿಗಳ ಬಗ್ಗೆ, ಭಿಕ್ಷುಕರು, ವೃದ್ಧರು, ಸಂಕಟದಲ್ಲಿದ್ದವರಿಗೆ ವೆಂಕಟರಮಣನಂತೆ ಸಹಾಯ ಮಾಡುತ್ತಿದ್ದರು. ಗಿಡಮರಗಳ ಬಗ್ಗೆಯೂ ಅದೆಷ್ಟು ಕಾಳಜಿ ಇತ್ತೆಂದರೆ, ಜಗದ್ಗುರುಗಳು ಊರಿಗೆ ಆಗಮಿಸಿ - ತಂಗಿದ್ದಾಗ, ಬಹು ದೊಡ್ಡ ಚಪ್ಪರವನ್ನು ಹಾಕಿಸಿದ್ದರು. ಅದಕ್ಕೆ ಬೇಕಾದ ಗರಿಗಳನ್ನು ತರುವಾಗ 'ಅಯ್ಯಾ ಅವಕ್ಕೂ ಜೀವ ಇದೆ ಕಣ್ರಯ್ಯಾ. ಒಣಗಿರುವ ಗರಿಗಳನ್ನೇ ಸಾಧ್ಯವಾದಷ್ಟು ಎಳೆದು ತನ್ನಿ. ಹಸಿ ಗರಿಗಳನ್ನು ಮರದಿಂದ ಕಿತ್ತರೆ ಅವಕ್ಕೆ ನೋವಾಗುವುದಿಲ್ಲವೆನಯ್ಯಾ, ನಿಮಗೆ ಶ್ರಮವಾದರೂ ಸಹಿಸಿಕೊಳ್ಳಿ' ಎನ್ನುತ್ತಿದ್ದರು ಗುರುನಾಥರು. 

ಮೊದಲಿನಿಂದಲೂ ಗುರುನಾಥರ ಸಾಧನೆಯ ಬಗ್ಗೆ ಅವರ ಅಮ್ಮನವರು ಈ ಗುರುಬಂಧುವಿಗೆ ತಿಳಿಸಿದ ವಿಚಾರವೂ ಬಂದಿತು. "ಪೂಜೆ, ಪುನಸ್ಕಾರ, ದೇವತಾರ್ಚನೆಗಳೆಂದರೆ ಎರಡು ಮೂರು ತಾಸುಗಳಾಗುತ್ತಿತ್ತು. ಆಗ ಇತ್ತಕಡೆಯ ಪರಿವೆಯೇ ಗುರುನಾಥರಿಗೆ ಇರುತ್ತಿರಲಿಲ್ಲವಂತೆ. ದೇವರ ಮನೆಯಲ್ಲಿ ಪಟಗಳಿಗೆ ಹೂವಿಡುವಾಗ ಗಂಧ ಹಚ್ಚಿ ಇಡುತ್ತಿದ್ದರು. ಅನೇಕ ಸಾರಿ ನಾಗರಹಾವೊಂದು ಬಂದು, ಗಂಧವನ್ನು ನೆಕ್ಕುತ್ತಿದ್ದುದನ್ನು ಗುರುನಾಥರ ಮಾತೃಶ್ರೀಯವರು ನೋಡಿದ್ದರಂತೆ. ಅಲ್ಲದೆ ಆ ದೇವರ ಮನೆಯಲ್ಲಿ ಆಗಾಗ್ಗೆ ನಾಗರಾಜನ ದರ್ಶನವಾಗುವುದು ಸಹಜವಾಗಿತ್ತು. ವೆಂಕಟೇಶ್ವರನ ವರಪ್ರಸಾದದಿಂದ ಜನಿಸಿದ ಗುರುನಾಥರಿಗೆ - ಗುರುಗಳು, ಸನ್ಯಾಸಿಗಳೆಂದರೆ ಅಪಾರಭಕ್ತಿ. ತಾವೆಷ್ಟು ಸಾಧಕರಾದರೂ ಯತಿ-ಗುರುಗಳ ಸೇವೆ ಎಂದರೆ ದಿನರಾತ್ರಿಗಳ ಪರಿವೆ ಇರುತ್ತಿರಲಿಲ್ಲ" ಎನ್ನುತ್ತಾರೆ. "ಏನೋ ನನ್ನನ್ನು ಗುರುಗಳು ನಿರಂತರ ತಮ್ಮ ಬಳಿ ಇಟ್ಟುಕೊಂಡಿದ್ದು ನನ್ನ ಹಿತಕ್ಕಾಗಿ, ನನ್ನಿಂದ ಅವರಿಗದೆಷ್ಟು ಉಪಕಾರವಾಯಿತೋ ನಾ ತಿಳಿಯೆ - ತಪ್ಪಾದಾಗ ತಂದೆಯಂತೆ ಗದರಿ ತಿದ್ದಿದ್ದಿದೆ, ತಾಯಿ ಪ್ರೀತಿಯಿಂದ ನನ್ನನ್ನು ಸಲಹಿದ್ದಿದೆ. ಗುರುನಾಥರಿಂದ ಅನೇಕ ಸದ್ಗುರುಗಳ ಸೇವೆ ಸಿಕ್ಕಿದೆ" ಎಂದು ವಿನಮ್ರವಾಗಿ ಗತಜೀವನದ ವೈಭವವನ್ನು ನೆನೆದರು. 


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಾಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


No comments:

Post a Comment