ಒಟ್ಟು ನೋಟಗಳು

Saturday, November 19, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 7


ಗುರುಚಿತ್ತವೇನೋ - ಬಲ್ಲವರಾರು ?


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।


ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ನಿರಂತರ ದುಡಿದರೂ ಆತ್ಮಕ್ಕೆ ಕೇವಲ ಸಂತಸ ಒದಗುತ್ತದೆ. ಆದರೆ ಆತ್ಮದ ಗೂಡಾದ ಈ ದೇಹಕ್ಕೆ? ಪ್ರಕೃತಿ ನಿಯಮದಂತೆ ಖಾಯಿಲೆ-ಕಸಾಲೆ, ಒಂದು ಕೊನೆ ಅನಿವಾರ್ಯ. ಆದರೆ ಗುರುನಾಥರಿಗೆ ಇದಾವುದರ ಭಾವವಿದ್ದಂತೇ ಇರಲಿಲ್ಲ. ಕೆಲ ದಿನ ಗುರುನಾಥರು ಅಸ್ವಸ್ಥರಾದರು. ಗುರುನಾಥರಿಗೆ ಹೀಗಾಗಿದೆ ಎಂದು ತಿಳಿದಾಗ, ಅಂದಿನ ಸರ್ಕಾರದ ಆರೋಗ್ಯ ಮಂತ್ರಿಗಳೊಬ್ಬರು ಗುರುನಾಥರ ಬಳಿ ಬಂದಿದ್ದರು. ಈ ಹಿಂದೆ ಆ ವ್ಯಕ್ತಿಯನ್ನು ಆಶೀರ್ವದಿಸಿ, ಒಂದು ಉಂಗುರವನ್ನು ನೀಡಿ 'ನೀವು ಮಂತ್ರಿಗಳಾಗುತ್ತೀರಿ, ಚೆನ್ನಾಗಿರಿ' ಎಂದು ಗುರುನಾಥರು ಭವಿಷ್ಯ ನುಡಿದಿದ್ದರಂತೆ. 

ಗುರುನಾಥರ ಬಳಿ ಬಂದ ಆ ಮಂತ್ರಿಗಳು 'ನನ್ನ ಕಾರಲ್ಲಿ ಬಂದುಬಿಡಿ... ನಿಮಗೇನು ಚಿಕಿತ್ಸೆ ಬೇಕೋ ಅದೆಲ್ಲವನ್ನೂ ನಾನೇ ನಿಂತು ಮಾಡಿಸ್ತೀನಿ... ಯಾವುದಕ್ಕೂ ಚಿಂತಿಸಬೇಡಿ' ಎಂದು ಪರಿಪರಿಯಾಗಿ ಒತ್ತಾಯಿಸಿದರೂ ಗುರುನಾಥರ ಆಲೋಚನೆ ಬೇರೆಯೇ ಇತ್ತು. ವಿಧಿಯಾಟವನ್ನು ಬಲ್ಲ ಇಚ್ಛಾಮರಣಿಯಾದ ಅವರು 'ಆಯ್ತು ಬರೋಣ ಆಯ್ತು' ಅನ್ನುತ್ತಿದ್ದರೇ ಹೊರತು ಕಾರು ಹತ್ತಲಿಲ್ಲವಂತೆ. ಆ ಮಹನೀಯರು, ದೊಡ್ಡ ನೋಟಿನ ಬಂಡಲ್ ಒಂದನ್ನು 'ಇದು ನಿಮಗಾಗಿ ಇರಲಿ' ಎಂದು ನೀಡಿದರು. ಆಗ ಸಂಜೆಯ ಸಮಯವಂತೆ, ಶಾಲೆಯಿಂದ ಮಕ್ಕಳು ಬರುತ್ತಿದ್ದರು. ಕಾರಿನ ಡ್ರೈವರನ್ನು ಕರೆದ ಗುರುನಾಥರು "ಆ ಮಕ್ಕಳಿಗೆ ಒಂದೊಂದು ನೋಟು ಕೊಡಪ್ಪ" ಎಂದರಂತೆ. ಎಲ್ಲ ಮಕ್ಕಳಿಗೆ ಹಂಚಿ ಉಳಿದ ಹತ್ತಾರು ನೋಟುಗಳನ್ನು ಗುರುಗಳಿಗೆ ಆತ ವಾಪಸ್ಸು ನೀಡಿದಾಗ, ಅವರು ಅವುಗಳನ್ನು ಕೈಯಿಂದ ಸವರಿ, ಆ ಮಂತ್ರಿಗಳನ್ನು ಕರೆದು "ಇವು ನಿಮ್ಮ ಬಳಿ ಇರಲಿ, ನನ್ನ ಹಣ. ಬೇಕಾದಾಗ ಕೇಳುತ್ತೀನಿ" ಎನ್ನಬೇಕೆ. 

ಹೀಗೆ ಮತ್ತೊಮ್ಮೆ ಪ್ರಖರ ವಾಗ್ಮಿಗಳೊಬ್ಬರು ಗುರುನಾಥರನ್ನು ಕಾಣಲು ಬಂದರು, ಅಲ್ಲೇ ಉಳಿದರು ನಂತರ ಒಂದಷ್ಟು ಹಣವನ್ನು ತಂದು "ಗುರುನಾಥರೇ ಇದು ನನ್ನ ಸ್ವಯಾರ್ಜಿತ, ದಯಮಾಡಿ ಸ್ವೀಕರಿಸಿ" ಎಂದು ಮುಂದಿಟ್ಟರಂತೆ. ಆಗ ಗುರುನಾಥರು ಅವರ ಕೈಯಲ್ಲಿದ್ದ ಹಣವನ್ನು "ನೋಡಿ ಇವರು ಅಡಿಕೆ ಸುಲಿಯುವ ಶ್ರಮಿಕರು. ಇವರಿಗೆ ಇನ್ನೂರು ಕೊಡಿ, ಇವರು ಕಷ್ಟದಲ್ಲಿರುವವರು ಇವರಿಗಿಷ್ಟು ನೀಡಿ" ಎಂದು ಕೊಡಿಸುತ್ತಾ ಕೊಡಿಸುತ್ತಾ, ತಮ್ಮ ಮನೆಯಿಂದ ಊರಿನ ಹಳೆಯ ಬಸ್ ಸ್ಟಾಂಡ್ ವರೆಗೆ ಸಿಕ್ಕ ಅನೇಕರಿಗೆ ಹಣವನ್ನು ಕೊಡಿಸುತ್ತಾ ಸಾಗಿದರು. ಗುರುವಾಕ್ಯ ಮೀರಲಾಗದ ಆ ವಾಗ್ಮಿಗಳು ದಾನ ಮಾಡುತ್ತಾ ಸಾಗಿದರು - ಕೆರೆಯ ನೀರನು ಕೆರೆಗೆ ಚೆಲ್ಲಿಸಿದ ಗುರುನಾಥರ ರೀತಿ ಕಂಡವರು ವಿಸ್ಮಿತರಾದರು. ಗುರುವು ಹಣ, ವಸ್ತುಗಳ ದಾಸನಲ್ಲ, ಅವುಗಳಿಂದ ಗುರುಗಳನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂಬ ನಿದರ್ಶನದಂತಿತ್ತು - ಆ ಘಟನೆ. ಕೊನೆಗೆ ಉಳಿದ ಕೆಲ ನೋಟುಗಳನ್ನು ಅವರಿಗೇ ನೀಡಿ "ಇದು ನಿಮ್ಮ ಬಳಿ ಇರಲಿ. ಅವಶ್ಯಕತೆ ಬಿದ್ದಾಗ ತೆಗೆದುಕೊಳ್ಳುತ್ತೇನೆ" ಎಂದರಂತೆ. ಕುಬೇರನೇ ಗುರುಸೇವಕನಾಗಿರುವಾಗ ಹಣದ ಹಂಗೆಲ್ಲಿದೆ? .... ಏನು ನೀಡಲಿ ಸದ್ಗುರುವೇ.... ಎಂದರೆ, 'ಪರಿಶುದ್ಧ ಪ್ರೀತಿಯ ನಿಷ್ಕಲ್ಮಶ ಮನಸ್ಸನ್ನು' ಎಂಬುದೇ ಉತ್ತರವಲ್ಲವೇ. 

ದತ್ತನೆಂದರೆ ಹೆಗಲಿಗೆ ಬಿತ್ತು ಜೋಳಿಗೆ

ಜೋಳಿಗೆ ಎಂದರೆ ಮೇಲುನೋಟಕ್ಕೆ ಯಾಚನೆ, ಬೇಡುವಿಕೆಗಳ ನೆನಪಾಗುವುದು ಸಹಜವೇ. ಆದರೆ ಈ ಜೋಳಿಗೆ ಹಿಡಿದಾಗಲೇ ಅಹಂನ ಕೊನೆಯಾಗುವುದಲ್ಲವೇ, ಹುಟ್ಟಿನಿಂದ ಸಹಜವಾಗಿ ಬಂದ ಅಹಂಕಾರ, ಅಳಿಯುವುದು ಗುರುವಿನ ಕೃಪೆಯಾದಾಗಲೇ, ಶಾಶ್ವತವೂ ನಿತ್ಯ ಸತ್ಯವೂ ಆದ ಆನಂದ ನಮಗೆ ಸಿಗುವುದು. ಗಾಣಗಾಪುರಕ್ಕೆ ಹೋಗಿ ದತ್ತನ ಸೇವೆ ಮಾಡಲು ನಿಂತವರಿಗೆ ಬಹುದೊಡ್ಡ ಸೇವೆ ಎಂದರೆ 'ಭಿಕ್ಷೆ ಬೇಡುವುದು ಹಾಗೂ ಭಿಕ್ಷೆ ನೀಡುವುದು' ಎಂದರೆ ಮಧುಕರಿ ಸೇವೆಯೇ. 

ಶಿಕಾರಿಪುರದ ಒಬ್ಬ ಬಹುದೊಡ್ಡ ದತ್ತಭಕ್ತರು, ಅವರ ಪರಂಪರೆಯೆಲ್ಲಾ ದತ್ತಾರಾಧನೆಯಲ್ಲೇ ನಿರತರಾದವರು, ಅವರ ವಂಶಸ್ಥರೊಬ್ಬರು ಜೀವನೋಪಾಯಕ್ಕಾಗಿ ಸರ್ಕಾರೀ ವೃತ್ತಿ ಹಿಡಿದಿದ್ದು, ಶಿವಮೊಗ್ಗಾಕ್ಕೆಲ್ಲಾ ಚಿರಪರಿಚಿತರಾದವರು. ಅವರ ಮಗಳೊಬ್ಬರು ಶ್ರೀ ಗುರುನಾಥರೊಂದಿಗಾದ ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡರು. 

"ನಮ್ಮಮ್ಮ, ನಾನು ನನ್ನ ತಂದೆ ಸಖರಾಯಪಟ್ಟಣದ ಗುರುನಾಥರ ಮನೆಗೆ ಹೋಗಿದ್ದೆವು. ನನ್ನ ಮದುವೆಯಾಗಿತ್ತು. ಇದ್ದಕ್ಕಿದ್ದಂತೆ ನಗರದ ಮಧ್ಯದಲ್ಲಿರುವ, ಒಳ್ಳೆಯ ಶಾಪಿಂಗ್ ಕಾಂಪ್ಲೆಕ್ಸ್ ಆಗಬಹುದಾದ ಜಾಗದಲ್ಲಿ ನಮ್ಮ ತಂದೆ ದತ್ತ ಮಂದಿರ ಕಟ್ಟುವ ಯೋಚನೆ ಮುಂದಿಟ್ಟಾಗ ಮಕ್ಕಳಾದ ನಾವೆಲ್ಲಾ ಬೇಡವೆಂದಿದ್ದೆವು. ಎಲ್ಲ ಕಳೆದು ಈ ವೃದ್ಧಾಪ್ಯದಲ್ಲಿ ಆರಾಮವಾಗಿ ಇರುವುದು ಬಿಟ್ಟು ಇದೆಲ್ಲಾ ಬೇಡವೆಂದಿದ್ದೆವು. ಆದರೆ ಗುರುನಾಥರು ನಮ್ಮ ತಂದೆಯ ಮಾತಿಗೆ ಇಂಬು ನೀಡಿದರು. ದತ್ತ ಮಂದಿರ ನಿರ್ಮಾಣಕ್ಕೆ ಪೂರ್ಣಾನುಗ್ರಹ, ಆಶೀರ್ವಾದಗಳನ್ನು ನೀಡಿದಾಗ ನಮ್ಮ ಆಗ್ರಹಗಳೆಲ್ಲಾ ಮೂಲೆಗುಂಪಾಯಿತು. ನಮ್ಮ ತಂದೆಯ ಹೆಗಲಿಗೆ ಜೋಳಿಗೆಯೊಂದನ್ನು ಮಾಡಿ ಹಾಕಿದರು. ತಮ್ಮ ಬಳಿಯಿದ್ದ ಹಣವನ್ನು 'ದತ್ತ' ನ ಹೆಸರಿನಲ್ಲಿ ಭಿಕ್ಷೆ ನೀಡಿ, ನಮ್ಮ ತಂದೆ ತಾಯಿಯವರಿಗೆ ಪೂಜೆ ಮಾಡಿ ಹಾರ ಹಾಕಿ, ನಮ್ಮ ಕೈಗಳಿಗೆ ಸಿಹಿ ತುಂಬಿದ ಡಬ್ಬಿಗಳನ್ನು ನೀಡಿ 'ಇವರು ದತ್ತ ಮಂದಿರ ನಿರ್ಮಾಣ ಮಾಡುತ್ತಾರೆ, ಸಿಹಿ ತೆಗೆದುಕೊಳ್ಳಿ' ಎಂದು ನೀಡುತ್ತಾ 'ನೀವು ಹೀಗೆ ಗುರುವಿನ ಹೆಸರು ಹೇಳುತ್ತಾ ಬಸ್ ಸ್ಟಾಂಡ್ ಕಡೆಗೆ ನಡೆಯಿರಿ' ಎಂದು ಬಿಟ್ಟರು. ಸಿಹಿ ಹಂಚುತ್ತಾ ನಾವು ಅರಳೀಕಟ್ಟೆಯಿಂದ ಮುಂದೆ ಮುಂದೆ ಹೋದೆವು. ಅದೆಲ್ಲಿಂದ ಅಷ್ಟೊಂದು ಪೇಡಗಳನ್ನವರು ಸೃಷ್ಠಿಸಿದರೋ ನಮಗಂತೂ ತಿಳಿಯಲಿಲ್ಲ. ಇಷ್ಟರಲ್ಲಿ ಆ ಊರಿನ ಪರಿಚಯವಿಲ್ಲದ ನಾವು, ಯಾವ ಕಡೆ ಹೊರಟಿದ್ದೇವೆ, ಏನು ಎತ್ತ ಎಂದು ಅರಿವಾಗದಿದ್ದಾಗ, ನಾಯಿಯೊಂದು ನಮ್ಮ ಕಡೆ ನೋಡುತ್ತಾ ಮುಂದೆ ಮುಂದೆ ಸಾಗುತ್ತಿತ್ತು. ನಾವೂ ಅದರ ಹಿಂದೆಯೇ ಹೋಗುವುದೆಂದು ನಿರ್ಧರಿಸಿ, ಗುರುನಾಮ ಸ್ಮರಿಸುತ್ತಾ, ಸಿಹಿ ಹಂಚುತ್ತಾ ಮುಂದೆ ನಡೆದೆವು. ಆ ನಾಯಿ ಊರಿನಲ್ಲಿ ಒಂದು ಸುತ್ತು ಸುತ್ತಿ ಬಸ್ ಸ್ಟಾಂಡ್ ದಾರಿ ತೋರಿಸಿತು. ಎಲ್ಲ ವಿಚಿತ್ರ ಅಯೋಮಯ" ಗುರುನಾಥರ ಕಾರುಣ್ಯದ ನೆನಪಾಗಿ ಆಕೆ, ಇಲ್ಲೇ ಈಗ ಆ ಘಟನೆ ಜರುಗುತ್ತಿದೆಯೇನೋ ಎಂಬಂತೆ ಸಂಭ್ರಾಂತರಾಗಿದ್ದರು. ಪಕ್ಕದಲ್ಲಿ ಕುಳಿತ ನಾಲ್ಕಾರು ಜನ ಮಧ್ಯಾನ್ಹ ಮೂರು ಗಂಟೆಯಾಗಿದ್ದರೂ, ಊಟಕ್ಕೇಳದೆ ಗುರುಕಥಾಮೃತ ಸವಿದು ಹಸಿವೆಯನ್ನೇ ಮರೆತಿದ್ದರು. 

ಮುಂದೆ ಇವರು ಚಿಕ್ಕಮಗಳೂರಿಗೆ ಪ್ರಯಾಣಿಸಿದರು. ಬೀಗರ ಮನೆಗೆ ಬಂದಾಗ ದಟ್ಟ ಜೋಳಿಗೆಗೆ ಬೀಗರು ಐದು ಸಾರಿವೆ ನೀಡಿ "ಒಳ್ಳೆಯ ಕೆಲಸ ಮಾಡುತ್ತಿದ್ದೀರಿ - ಮುಂದುವರೆಸಿ" ಎನ್ನಬೇಕೇ. ಅಳಿಯಂದಿರೂ ಈ ಕಳಸಕ್ಕೆ ಕುಮ್ಮಕ್ಕು ನೀಡಿದರು. ತಂದೆ ಎಂಬ ಮಮಕಾರ, ಈ ವಯಸ್ಸಿನಲ್ಲಿ ತಂದೆಯವರು ಇಷ್ಟೆಲ್ಲಾ ಗುರುತರ ಕಷ್ಟ ಸಹಿಸಬಹುದೇ ಎಂಬ ಪ್ರೀತಿ - ಹೆಣ್ಣು ಮಕ್ಕಳ ಮನದಲ್ಲಿ ಭಯ ಮೂಡಿಸಿತ್ತು. 

"ಸಿದ್ಧಾರೂಢರ ಜೋಳಿಗೆ ಜಗತ್ತಿಗೆಲ್ಲಾ ಹೋಳಿಗೆ" ಎಂಬ ಮಾತೊಂದು ಜಗಜ್ಜನಿತವಾಗಿದೆ. ಅದಿಲ್ಲಿ ನೆನಪಿಗೆ ಬರುತ್ತದೆ. ಗುರುಗಳೆಲ್ಲರ ಬಳಿ ಜೋಳಿಗೆ ಇರುತ್ತದೆ. ಶಿಷ್ಯರಿಗೆ ಗುರು ಕೊಡುವುದೂ ತನ್ನ ಜೋಳಿಗೆಯನ್ನೇ. "ಬದುಕುವ ಮಾರ್ಗ ತೋರಿಸಿದ್ದೇನೆ. ಕರ್ಮ ನಿರತನಾಗು, ಆಲಸ್ಯ ಬೇಡ. ಅದರಲ್ಲಿ ಅಂಟಿಯೂ ಅಂಟದಂತೆ ಬಾಳು, ನಿನ್ನ ಹಿಂದೆ ನಾನಿದ್ದೇನೆ" ಎಂಬುದೇ ಗುರುನಾಥರ, ಎಲ್ಲ ಸದ್ಗುರುಗಳ ಜೋಳಿಗೆಗಳ ಸಂಕೇತ. 

ಇಂದು ಶಿವಮೊಗ್ಗದಲ್ಲಿ ಬಹುದೊಡ್ಡ, ಸುಂದರವಾದ ದತ್ತ  ಮಂದಿರ ನಿರ್ಮಾಣವಾಗಿದೆ. ತ್ರಿಕಾಲ ದತ್ತನ ಪೂಜೆ ನಿರಂತರ ಸಾಗಿದೆ. ಇಡೀ ಆ ಬಡಾವಣೆಯ ಜನರಿಗೆ ದಟ್ಟ ನಾಮ ಘೋಷವನ್ನುಣಿಸುತ್ತಾ ಪುನೀತವಾಗಿಸಿದೆ. 

ಮತ್ತೊಂದು ಗುರುನಾಥರ ಲೀಲೆಯನ್ನು ಆ ಮಗಳು ಮುಂದುವರೆಸಿದರು. "ದತ್ತ ಮಂದಿರ ನಿರ್ಮಾಣದ ವಿಚಾರ ತಲೆಯಲ್ಲಿ ಹೊತ್ತು , ಗುರುನಾಥರ ಆಶೀರ್ವಾದದ ಶ್ರೀರಕ್ಷೆ ಪಡೆದ ನಮ್ಮ ತಂದೆಗೆ, ಸತ್ಯನಾರಾಯಣ ವ್ರತದ ಸಂದರ್ಭದಲ್ಲಿ ಬಂದ ಗುರುಭಕ್ತರೊಬ್ಬರು "ಮಂದಿರದ ಗರ್ಭಗುಡಿಯ ಪೂರ್ಣ ವೆಚ್ಚವನ್ನು ನಾನು ಭರಿಸುತ್ತೇನೆ" ಎಂಬ ಮತ್ತೊಂದು ಬಹುಮೂಲ್ಯ ಭಿಕ್ಷೆಯನ್ನು ಜೋಳಿಗೆಗೆ ಅರ್ಪಿಸಿದರು. ಮಂದಿರ ನಿರ್ಮಾಣದ ನಂತರವೂ ಅದನ್ನು ಮತ್ತಷ್ಟು ಸುಂದರಗೊಳಿಸಲು ತಂದೆಯವರಿಂದ ಹಣಕ್ಕಾಗಿ ಪಾತ್ರ ಬಂದಾಗ ನಾನು ರೇಗುತ್ತಿದ್ದೆವು - ಆದರೆ ಅಳಿಯಂದಿರುಗಳೇ 'ನಿಮ್ಮ ಕೈಲಿದ್ದರೆ, ಒಳ್ಳೆಯ ಕೆಲಸಕ್ಕೆ ಕೊಡಿ, ಇಲ್ಲದಿದ್ದರೆ ಸುಮ್ಮನಿರಿ' ಎಂದು ಬುದ್ಧಿವಾದವನ್ನು ಹೇಳುತ್ತಿದ್ದರು. ಗುರುನಾಥರ ಆಶೀರ್ವಾದದಿಂದ ಹಿಡಿದ ಕೆಲಸ ಸಂಪೂರ್ಣವಾಯಿತು. ಛಲ ಬಿಡದ ಬಲ ನೀಡಿದ ಗುರುನಾಥರು, ನಮ್ಮ ತಂದೆಯವರ ಆಸೆಯನ್ನು ನೆರವೇರಿಸಿದರು, ದತ್ತ ಮಾರ್ಗದಲ್ಲಿ ಮುಂದುವರೆಸಿದರು. ಒಂದು ಕಾಲದಲ್ಲಿ ನಾವು ಊಟ ಮಾಡಲಿಲ್ಲವೆಂದರೆ ಏಟು ಕೊಟ್ಟು ಊಟ ಮಾಡಿಸಿಯೇ ತೀರುತ್ತಿದ್ದ, ಅಪಾರ ಪ್ರೀತಿ ತೋರುತ್ತಿದ್ದ ನಮ್ಮ ತಂದೆ, ಈಗ ಬಂದೆಯಾ, ಸೌಖ್ಯವೇ' ಎಂಬೆರಡು ಮಾತುಗಳಾಡುತ್ತಾರೆ. ದಿನರಾತ್ರಿ ಎನ್ನದೆ 'ದತ್ತ' ನ ಸೇವೆಯ ಹೊರತು ಅವರಿಗೆ ಇನ್ನೇನೂ ಬೇಡವೇನೋ - ನಮ್ಮ ತಂದೆಯ ಜೀವನಗತಿಯನ್ನೇ ಗುರುನಾಥರ ಒಂದು ದರ್ಶನ, ದತ್ತನೆಂದ ಕೂಡಲೇ ಅವರ ಬಗಲಿಗೆ ಗುರುನಾಥರು ಹಾಕಿದ ಜೋಳಿಗೆ, ಬದಲಿಸಿಬಿಟ್ಟಿದೆ - ಇದು ನಮ್ಮ ಸೌಭಾಗ್ಯ" ಎಂದು ನೆನೆಯುತ್ತಾರೆ. 

ಅವರ ತಂದೆಯವರ ಎಂಬತ್ತರ ಶಾಂತಿಗೆ ಆ ಮನೆಯ ದೊಡ್ಡ ಬಳಗವೇ ಸೇರಿತ್ತು. ಇದಕ್ಕಿಂತ ವಿಶೇಷವಾಗಿ - ಮನೆ ಮಂದಿಗಿಂತ ವಿಶ್ವವ್ಯಾಪಿಯ ದತ್ತ  ಬಳಗವೇ ಈ ಶಾಂತಿಯಲ್ಲಿ ಪಾಲ್ಗೊಂಡಿದ್ದನ್ನು ಕಾಣಬಹುದಾಗಿತ್ತು. ದತ್ತಸೇವೆ, ಮಾಡುತ್ತಾ ಎಂಬತ್ತರ ಹರೆಯದಲ್ಲಿಯೂ ದೊಡ್ಡ ದೊಡ್ಡ ಕಾರ್ಯದಲ್ಲಿ ಇವರನ್ನು ನವಯುವಕರನ್ನಾಗಿಸಿತ್ತು. 

ಅಂದು ಗುರುನಾಥರು ನೀಡಿದ ಜೋಳಿಗೆಯಿಂದ, ದಟ್ಟ ಮಂದಿರವಾಗಿ, ಅಲ್ಲಿಗೆ ಅನೇಕ ಮಹನೀಯರುಗಳ ಆಗಮನವಾಗಿ, ತನ್ಮೂಲಕ ಸಾರ್ಥಕ ಜೀವನಕ್ಕೆ ಬೇಕಾದ ಸತ್ಫಲಗಳು, ಸನ್ಮಾರ್ಗಸೂಚಿಗಳು ಎಲ್ಲ ದತ್ತಭಕ್ತರಿಗೆ ದೊರೆಯುವಂತಾಗಿದೆ. ಹೀಗೆ ಗುರುನಾಥರ ಕಾರುಣ್ಯ ದೊರೆತವರು, ನಮ್ಮ ಜನ್ಮದಾತರೆಂಬ ಹೆಮ್ಮೆ ನಮಗಿದೆ" ಎಂದು ಹೀಗೆ ತಮ್ಮ ಅನುಭವವನ್ನು ಆ ಹೆಣ್ಣುಮಗಳು ಹಂಚಿಕೊಂಡರು. 

ಐದು ನಿಮಿಷದಲ್ಲಿ ವೆಂಕಟರಮಣನನ್ನು ತೋರಿಸ್ತೀನಿ 

ಒಬ್ಬ ಸಾಹುಕಾರರು ಗುರುನಾಥರ ಬಳಿ ಬಂದು ಗುರುಗಳಿಗೆ ನಮಿಸಿ "ಗುರುಗಳೇ ನಾವು ಕಾರನ್ನು ತರುತ್ತೇವೆ, ತಿರುಪತಿಗೆ ಹೋಗೋಣ, ನೀವು ಬಂದರೆ ಐದು ನಿಮಿಷದಲ್ಲಿ ಸ್ವಾಮಿಯ ದರ್ಶನವಾಗುತ್ತಂತೆ - ತಾವು ಬರಬೇಕು" ಎಂದು ಬೇಡಿದರು. 

ಗುರುನಾಥರು ಸುಮ್ಮನಿದ್ದು ನಂತರ "ಆಯ್ತು ಬನ್ನಿ ಕಾರು ತನ್ನಿ ..... ನಮಗೂ ಒಂದಿಷ್ಟು ಕಾರು ಹತ್ತಿದಂತೆ ಆಗುತ್ತದೆ" ಎಂದು ತಮಾಷೆ ಮಾಡುತ್ತಾ "ಸರಿ ನಿಮ್ಮ ತಂದೆ ತಾಯಿ ಸೇವೆ ಮಾಡುತ್ತೀರಾ? ಅಲ್ಲಾ ಸಾರ್ ನೀವಲ್ಲಿ ಮಹಲಿನಲ್ಲಿ - ಅವರಲ್ಲಿ ಕೊಟ್ಟಿಗೆಯಲ್ಲಿ .... ಏನಮ್ಮಾ ನಿಮ್ಮತ್ತೆ ಮಾವಂದಿರ ಸೇವೆ ಮಾಡಿದ್ದೀರಾ..... ನಿಮಗೆ ಮಗನನ್ನು ಹೆತ್ತುಕೊಟ್ಟ ಅವರನ್ನು ನೀವು ಹೇಗೆ ಸೇವೆ ಮಾಡುತ್ತಿದ್ದೀರಿ" ಎಂದು ಗುರುನಾಥರು ನೇರವಾಗಿ ಮನಮುಟ್ಟುವಂತೆ ಆ ಧನಿಕರಿಗೆ ಹೇಳಿದಾಗ ಸ್ವಲ್ಪ ವಾಗ್ವಾದಗಳ ನಂತರ ಅವರಿಗೂ ಅದೇನನಿಸಿತೋ, ಅದೇನೋ ನಿರ್ಧರಿಸಿ ಒಪ್ಪಿಕೊಂಡು ಗುರುನಾಥರಿಗೆ ನಮಿಸಿ ಬೀಳ್ಕೊಟ್ಟರಂತೆ. 

ಮುಂದೆ ಅಪಾರವಾದ ಪರಿವರ್ತನೆಯು ಗುರುನಾಥರ ಕರುಣೆ, ದರ್ಶನದಿಂದ ಅವರಲ್ಲಿ ಆಯಿತು. ನಾಲ್ಕಾರು ತಿಂಗಳುಗಳ ನಂತರ ತಮ್ಮ ತಂದೆ ತಾಯಿಗಳೊಂದಿಗೆ ಬಂದ ಅವರನ್ನು - ಗುರುನಾಥರು "ನಿಮಗೆ ಐದು ನಿಮಿಷದಲ್ಲಿ ತಿರುಪತಿಯ ತಿಮ್ಮಪ್ಪನನ್ನು ತೋರಿಸುತ್ತೇನೆ" ಎಂದರು - ಹೇಗೆ ತೋರಿಸುತ್ತಾರೆ, ಎಲ್ಲಿಂದ ಕರೆಸುತ್ತಾರೆ ಎಂದು ಎಲ್ಲರೂ ಚಿಂತಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಹೊರಗಡೆ ಭೋಂ ಭೋಂ ಶಂಖನಾದ ಕೇಳಿಬಂತು. "ಬಾರಯ್ಯಾ ಒಳಗೆ" ಎಂದರು. ಭವ್ಯನಿಲುವಿನ, ನಾಮ ಧರಿಸಿದ, ಕೈಯಲ್ಲಿ ಬನವಾಸಿ ಶಂಖ, ಜಾಗಟೆ ಹಿಡಿದ ದಾಸಯ್ಯನೊಬ್ಬನು ಒಳಗೆ ಬಂದನು. "ನೋಡ್ರಯ್ಯಾ ವೆಂಕಟರಮಣನನ್ನು... ನೋಡಿ... ಇವನೇ ಸಾಕ್ಷಾತ್ ತಿರುಪತಿಯ ವೆಂಕಟರಮಣ" ಎಂದರು. ನೋಡುವ ಕಣ್ಣು ಮನಸ್ಸಿದ್ದರೆ ತಿರುಪತಿಯೂ ಇಲ್ಲೇ - ವೆಂಕಟರಮಣನೂ ನಮ್ಮ ಕಣ್ಣೆದುರಿನಲ್ಲೇ ಇರುತ್ತಾನೆ" - ಅವನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. 

ಹೀಗೆ ಗುರುನಾಥರು ತಮ್ಮ ಭಕ್ತಕೋಟಿಯ ತಪ್ಪುಗಳನ್ನು ಬಹಳ ಸುಲಭವಾಗಿ ತಿದ್ದುತ್ತಾ, ಕ್ಷಣದಲ್ಲಿ ಯಾರನ್ನು ಬೇಕಾದರೂ ತೋರಿಸುವಷ್ಟು ಸಮರ್ಥರಾಗಿದ್ದರು. ತಂದೆ-ತಾಯಿಯ, ಗುರುಹಿರಿಯರ ಸೇವೆಗಿಂತಾ ದೊಡ್ಡ ವಿಚಾರವಿಲ್ಲವೆಂಬ ಸರಳ ವಿಚಾರವರಿಯದವರಿಗೆ - ಕರ್ತವ್ಯದ ಹಾದಿಗೆ ಹಚ್ಚುವ ಇಂತಹ ಅದೆಷ್ಟೋ ಘಟನೆಗಳು ನೆಡೆದಿವೆ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಾಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


No comments:

Post a Comment