ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 28
ಗುರು ಪ್ರಸಾದ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಇದಾದ ನಂತರ ನಿಟ್ಟುಸಿರಿಟ್ಟು ಆ ತಾಯಿ ಮತ್ತೆ ಇನ್ನಷ್ಟು ಉತ್ಸಾಹದಿಂದ ಹೀಗೆ ಹೇಳತೊಡಗಿದರು.
ನೋಡಿ ಒಮ್ಮೆ ನಾಲ್ಕೈದು ದಿನಗಳಿಂದ ಇದ್ದಕ್ಕಿದ್ದಂತೆ ನನಗೆ ವಿಪರೀತ ಬಲಗೈ ಸೆಳೆತ ಹಾಗೂ ನೋವಾಗುತ್ತಿತ್ತು. ಗುರುನಾಥರು ಚಿಕ್ಕಮಗಳೂರಿನ ಭಕ್ತರ ಮನೆಯಲ್ಲಿರುವರೆಂದು ತಿಳಿದು ಅಲ್ಲಿಗೆ ದೌಡಾಯಿಸಿದೆ. ಇದಕ್ಕೂ ಮೊದಲು ವೈದ್ಯಕೀಯ ಪರೀಕ್ಷೆ ನಡೆಸಲಾಯಿತಾದರೂ ವೈದ್ಯರಿಗೆ ಕೈ ನೋವಿನ ಕಾರಣ ತಿಳಿಯಲಿಲ್ಲ. ನನ್ನ ಕಂಡೊಡನೆಯೇ ಗುರುನಾಥರು ನಗುತ್ತಾ "ಏನು ನಾಲ್ಕೈದು ದಿನದಿಂದ ಕಾಣಲಿಲ್ಲವಲ್ಲಾ?" ಅಂದ್ರು ನಗುತ್ತಾ .... ನಾನು ನನ್ನ ಕೈ ನೋವಿನ ವಿಚಾರ ತಿಳಿಸಲು ಕೂಡಲೇ ನನ್ನ ಕೈ ಮುಟ್ಟಿ "ಈ ಕೈನಾ? ನಿಂಗೇನಾಗುತ್ತೆ ಬಿಡು...." ಅಂದ್ರು. ಅದೇ ಕೊನೆ. ನನ್ನ ಕೈ ನೋವು ಹೆಸರಿಲ್ಲದಂತೆ ಮಾಯವಾಗಿತ್ತು.
ಮತ್ತೊಮ್ಮೆ ನನ್ನ ಮಗನ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ನಾನು ನನ್ನ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಗುರುನಿವಾಸಕ್ಕೆ ಬಂದ್ರೆ ಅಲ್ಲಿ ವಿಪರೀತ ಜನಜಂಗುಳಿ. ನನಗೆ ಮಾತಾಡಲು ಅವಕಾಶ ಸಿಗುತ್ತೋ ಇಲ್ಲವೋ ಅಂತ ಆತಂಕದಿಂದ ಕಣ್ಣೀರಿಟ್ಟೆ. ಕೂಡಲೇ ನನ್ನನ್ನು ಗದರಿಸಿ ಕುಳಿತುಕೊಳ್ಳಲು ಹೇಳಿದರು. ಸುಮಾರು ಒಂದೂವರೆ ಗಂಟೆ ನಂತರ "ನಿನ್ನ ಮಗನಿಗೆ ಯಾವ ತರಹದ ಸಮಸ್ಯೆ ಇಲ್ಲ. ಕೇವಲ ಕಾಲಿನ ಮಂದಿ ಹಾಗೂ ತಲೆ ಹಿಂಬದಿ ನೋವು ಬರುವುದು ಅಷ್ಟೇ" ಅಂದು ಅಲ್ಲಿದ್ದ ಜನರತ್ತ ತಿರುಗಿ "ನೋಡಿ, ಸ್ಕ್ಯಾನ್ ಮಾಡಿದೀನಿ. ಫೀಸ್ ಕೊಡ್ಬೇಡ್ವೇ ನಂಗೆ?" ಎಂದರು ನಸು ನಗುತ್ತಾ... ನಂತರ ಗುರುವಿನ ಅನುಗ್ರಹದಿಂದ ನನ್ನ ಮಗನ ಖಾಯಿಲೆ ದೂರಾಯ್ತು. ಇನ್ನೇನಾದ್ರೂ ಹೇಳಿ ಎಂಬಂತೆ ನಾನು ಅವರನ್ನು ದಿಟ್ಟಿಸಲು ಅವರು ನಸುನಕ್ಕು ಮತ್ತೆ ಮಾತು ಮಂದುವರೆಸಿದರು.
ಮತ್ತೊಮ್ಮೆ ನನ್ನ ಮಗನ ಸಲುವಾಗಿ ಬೆಳಗಾವಿಗೆ ಹೋಗಬೇಕಾಯ್ತು. ಈ ವಿಷಯ ತಿಳಿದು ಗುರುಗಳು "ಹೊರಡೋ ದಿನ ಬೆಳಿಗ್ಗೆ ಚಿತ್ರಾನ್ನ ಮಾಡಿಕೊಂಡು ಹೋಗಿ ಹಂಚು" ಅಂದಿದ್ರು. ನಾ ಹೊರಡೊ ಗಡಿಬಿಡಿಲಿ ಸ್ವಲ್ಪ ಮಾಡಿಕೊಂಡೋದೆ. ಬೆಳಗಾವಿ ತಲುಪಿದ ನಂತರ ಚಿತ್ರಾನ್ನ ಹಂಚುವ ಸಲುವಾಗಿ ರಸ್ತೆಗೆ ಬಂದು ನಿಂತಾಕ್ಷಣ ಅಲ್ಲಿದ ಜನರೆಲ್ಲಾ ಚಪ್ಪಲಿ ಬಿಚ್ಚಿಟ್ಟು ಕೈಮುಗಿದು ಪ್ರಸಾದವೆಂಬಂತೆ ಚಿತ್ರಾನ್ನ ಸ್ವೀಕರಿಸುತ್ತಿದ್ದ ರೀತಿ ಆ ನನ್ನೊಡೆಯ ಸದಾ ನಮ್ಮೊಡನಿರುವನೆಂಬ ಭಾವವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಗುರುಕೃಪೆಯಿಂದ ಬಂದ ಕೆಲಸವೂ ಸರಾಗವಾಗಿ ನಡೆಯಿತು...." ಎಂದು ನುಡಿದು ಕ್ಷಣ ತಡೆದು ಇನ್ನು ನನ್ನ ಮನದ ನೆನಪೆಂದರೆ ಒಮ್ಮೆ ನಾನು ಯಾವುದೋ ಕಾರ್ಯ ನಿಮಿತ್ತ ದಿಢೀರನೆ ಬೆಂಗಳೂರಿಗೆ ಹೋಗಬೇಕಾಯ್ತು. ಗುರುನಾಥರಿಗೆ ತಿಳಿಸದೇ ಹೊರಟು ಬಿಟ್ಟೆ. ಎರಡು ಮೂರು ದಿನದ ನಂತರ ಗುರುದರ್ಶನಕ್ಕೆ ಬಂದೆ. ನನ್ನ ನೋಡಿ ಗುರುಗಳು ಏನು? ಎರಡು ಮೂರು ದಿನಗಳಿಂದ ಕಾಣೆಯಾಗಿದ್ರಲ್ಲಾ? ಎಂದು ಪ್ರಶ್ನಿಸಿದರು.
ಆ ಕ್ಷಣವೇ ನಿನ್ನ ಮುಂದೆ ಗುರುವಿಗೆ ತಿಳಿಸದೇ ಎಲ್ಲಿಗೂ ಹೋಗಬಾರದು ಅಂತ ತೀರ್ಮಾನಿಸಿದೆ. ಕಾರಣ ಆ ಗುರು ಪ್ರತಿ ಕ್ಷಣವೂ ನಮ್ಮನ್ನು ಗಮನಿಸಿ ರಕ್ಷಿಸಿ ಕಾಯುತ್ತಿರುವನೆಂಬುದು ನಮ್ಮ ನಂಬುಗೆ. ಆ ನಂಬುಗೆಯಲ್ಲೇ ನಮ್ಮ ಜೀವನ.... ಎಂದು ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಾ ಮೌನವಾದರು ಆ ತಾಯಿ.
"ನಿನ್ನ ಅರಿವೆಂಬ ನೆರಳೇ ಗುರು" ಎಂಬ ಗುರುವಾಕ್ಯವನ್ನು ನೆನೆಯುತ್ತಾ ನಾನು ಆ ದಂಪತಿಗಳಿಗೆ ಕೈಮುಗಿದು ಹೊರಬಂದೆ.....,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment