ಒಟ್ಟು ನೋಟಗಳು

Wednesday, November 16, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 4


ಕಾಶಿಯಲ್ಲಿ ಕಂಡ ಗುರುನಾಥರು 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।


ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಸಹಸ್ರಮುಖಗಳು ಗುರುನಾಥರಿಗೆ , ಲಕ್ಷಾಂತರ ಬಂಧು ಭಕ್ತರು ಅವರಿಗೆ. ಒಬ್ಬರಿಗೆ ಒಂದು ರೀತಿ ಕಂಡರೆ, ಹರಸಿದರೆ, ಕರುಣೆ ತೋರಿದರೆ - ಮತ್ತೊಬ್ಬರಿಗೆ ನೀಡುವ ಅನುಭವವೇ ಮಗದೊಂದು ರೀತಿಯದು. ಅದೇ ಗುರುನಾಥ ಲೀಲಾಮೃತ. ಹುಡುಕುತ್ತಾ ಹೋದಷ್ಟೂ ಅನುಭವಗಳು,ಬಿಚ್ಚಿಡುವ ಪ್ರಸಂಗಗಳು, ಸತ್ಯ ಸಂಗತಿಗಳು ಕರ್ಣಾನಂದ, ಹೃದಯಾನಂದವೀವ ಸತ್ಸಂಗಗಳೇ. 

ಶಿವಮೊಗ್ಗೆಯ ಒಂದು ಪರಿವಾರವು ಗುರುನಾಥರನ್ನು ಅನನ್ಯವಾಗಿ ನಂಬಿ, ಅವರಿಂದಲೇ ಜೀವನ ನಡೆಸುತ್ತಿದೆ. ನಿಂತರೆ ಕುಳಿತರೆ ಗುರುನಾಥರಾದೇ ಸ್ಮರಣೆ. ಆ ಮನೆಯ ಚಿಕ ಹೆಣ್ಣು ಮಗಳಿಗಂತೂ ಗುರುನಾಥರೆಂದರೆ ಸರ್ವಸ್ವ. ತಂದೆ, ಅಜ್ಜ, ಅಜ್ಜಿ, ಗುರು ಎಲ್ಲರ ಪ್ರೀತಿ ಆಕೆಗೆ ಸಿಕ್ಕಿದ್ದು ಗುರುನಾಥರಿಂದಲೇ. ಗುರುನಾಥರು ಇಹಲೀಲಾ ನಾಟಕ ಮುಗಿಸಿ ಕೆಲವು ವರ್ಷಗಳೇ ಆಗಿತ್ತು. ಆ ಸಮಯದಲ್ಲಿ ಇವರು ಕಾಶಿಗೆ ಹೋದರು. ಕಾಶಿಗೆ ಹೋದರು ಇವರ ಮನದಲ್ಲಿ ಇದ್ದುದು ವಿಶ್ವನಾಥನಲ್ಲ - ವೆಂಕಟಾಚಲ ಸದ್ಗುರುವೇ. ಮಳೆಗಾಲ ಅದಾಗಿತ್ತು. ಕಾಶಿಯಲ್ಲಿ ಸಂಜೆ ಗಂಗಾ ಪೂಜೆಯ ಸಮಯ. ಭಾರಿ ಜನ ಸಮೂಹ. ಗಂಗೆಯ ಪೂಜೆಯಾದ ಮೇಲೆ ತೀರ್ಥ ಪ್ರಸಾದವನ್ನು ಯಾರಿಗೂ ಕೊಡುವ ಪದ್ಧತಿ ಅಲ್ಲಿಲ್ಲವಂತೆ. 

ಮಳೆ, ಜನ ಸಮೂಹದ ಗಲಾಟೆಯಲ್ಲಿ ಈ ಸಂಸಾರದ ಆ ಹೆಣ್ಣು ಮಗಳು ಹಾಗೂ ಅವರ ದೊಡ್ಡಪ್ಪನ ಮಗ (ಅಣ್ಣ) ತಮ್ಮ ಪರಿವಾರದಿಂದ ಬೇರೆಯಾಗಿಬಿಟ್ಟರು. ಗಂಗಾ ಆರತಿಯ ಸೊಬಗು ನೋಡುತ್ತಾ, ಜನಸಾಗರದಲ್ಲಿ ತಾವೆಲ್ಲಿದ್ದೇವೆಂದು ಅವರಿಗೆ ತಿಳಿಯಲಿಲ್ಲ. ಮುಂದೇನಾಯಿತು ಎಂಬುದನ್ನು ಆ ಹೆಣ್ಣು ಮಗಳ ಬಾಯಿಂದಲೇ ಕೇಳೋಣ. 

"ನಾವು ಹೀಗೆ ನಮ್ಮ ಗುಂಪಿನಿಂದ ಬೇರೆಯಾಗಿದ್ದೆವು. ಗಂಗಾರತಿಯಾದ ನಂತರ ಅಲ್ಲಿನ ಪುರೋಹಿತರು ನಮ್ಮನ್ನು ಕರೆದು ತೀರ್ಥ ಪ್ರಸಾದ ನೀಡಿದರು. ಇದೇನಾಶ್ಚರ್ಯ ಎಂದು ನಮಗನಿಸಿತು. ಆದರೆ ಗುರುನಾಥರು ಏನೂ ಮಾಡಿಸಬಲ್ಲರು ಎಂದು ಚಿಂತಿಸುವಾಗ 'ನಾನು ಸದಾ ನಿನ್ನನ್ನು ರಕ್ಷಿಸುತ್ತೇನೆ' ಎಂದಾಡಿದ ಅವರ ಅಭಯವಚನ ನೆನಪಾಯಿತು. ಮುಂದೆ ನಾವು ಒಳ್ಳೆಯ ಕಚೋರಿಯನ್ನು ತಿನ್ನಬೇಕೆಂದು ಕಚೋರಿಯ ಅಂಗಡಿ ಹುಡುಕುತ್ತಾ ಕಾಶಿ ವಿಶ್ವನಾಥನ ಮಹಾದ್ವಾರದ ಬಳಿ ಬರುತ್ತಿದ್ದೆವು. ಮಹಾದ್ವಾರದ ಎರಡೂ ಕಡೆ ಕಚೋರಿಯ ಅಂಗಡಿಗಳು ಇದ್ದವು. ಅಲ್ಲಿಗೆ ಬಂದ ನಾವು ವಿಶ್ವನಾಥನಿಗೆ ನಮಿಸಿ ಮುಂದೆ ನೋಡಿದಾಗ, ಜನರ ಗುಂಪಿನಿಂದ ನಮ್ಮ ಕಡೆಗೇ ಗುರುನಾಥರು ಬರುತ್ತಿದ್ದರು. ನಂಬಲಾಗದ ಕಣ್ಣು, ನಂಬಿದ ಮನಸ್ಸು, ನಾವು ಅವರತ್ತಲೇ ಹೋದೆವು. ಅವರ ಕಾಲಿಗೆ ನಮಸ್ಕರಿಸಿದೆವು. ಅವರು 'ಏ ಏ ನೀಯಾರು, ನನಗ್ಯಾಕೆ ನಮಿಸುತ್ತೀ, ದೂರ ಹೋಗು ಹೋಗು' ಎನ್ನುತ್ತಾ ಗಲಾಟೆ ಮಾಡುತ್ತಿದ್ದರು. ನನಗಂತೂ ಇವರು ನನ್ನ ಗುರುನಾಥರೇ ಎಂದು ಸ್ಪಷ್ಟವಾಗಿತ್ತು. ಕೂಡಲೇ ನನ್ನ ಕೈಲಿದ್ದ ಆಧುನಿಕ ಮೊಬೈಲ್ ನಿಂದ ನಾಲ್ಕೈದು ಫೋಟೋ ತೆಗೆದುಕೊಂಡೆ. ಅವರು ಗಲಾಟೆ ಮಾಡುತ್ತಲೇ ಇದ್ದರು. ಅಲ್ಲೇ ಇದ್ದ ಪೋಲೀಸಿನವರು 'ಅವನೊಬ್ಬ ಹುಚ್ಚ, ನೀವ್ಯಾಕೆ ನಮಸ್ಕಾರ ಮಾಡುತ್ತೀರಿ' ಎನ್ನುತ್ತಾ ಮುಂದೆ ಹೋದರು. 'ನಾನು ಇವರು ಹುಚ್ಚರಲ್ಲ. ನಮ್ಮ ಸದ್ಗುರುನಾಥರು' ಎಂದೇ ಭರವಸೆಯಿಂದ ಹೇಳಿದೆ. ಪೋಲೀಸಿನವರು ಅತ್ತ ಹೋದರು. ಗುರುನಾಥರನ್ನು ಕಂಡ ಸಂತಸ, ಅವರ ಫೋಟೋ ತೆಗೆದ ಸಂತಸದಲ್ಲಿ ನಾನು ಕ್ಯಾಮರಾದಲ್ಲಿ ನೋಡಿದರೆ ಅದೇನಾಶ್ಚರ್ಯ ಒಂದೂ ಫೋಟೋ ಬಂದಿರಲಿಲ್ಲ. ಈಗ ನನಗೆ ಇವರು ಗುರುನಾಥರೇ ಎಂಬುದು ಸ್ಪಷ್ಟವಾಯಿತು". 

"ಮತ್ತೆ ಗುರುನಾಥರು ನನ್ನ ಕಡೆಗೇ ನೋಡುತ್ತಿದ್ದರು ಈಗ ಅವರ ಮುಖದಲ್ಲಿ ಸಂತಸ ವ್ಯಕ್ತವಾಗಿತ್ತು. 'ಏ  ನಿನಗಾಗಿ ನಾನೆಷ್ಟು ಅಪಮಾನ ಸಹಿಸಬೇಕು. ಹುಚ್ಚ ಎಣಿಸಿಕೊಳ್ಳಬೇಕು, ಮಾನ ಮರ್ಯಾದೆ ಬಿಟ್ಟು ಬರಬೇಕು, ನಿನಗಾಗಿ ಕಾಯಬೇಕು' ಎಂದು ಅವರಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಮತ್ತೆ ಹೋಗಿ ಅವರಿಗೆ ನಮಿಸಿದೆವು. 'ನನಗೆ ನಿಮ್ಮದೊಂದು ಫೋಟೋ ಬೇಕೇಬೇಕು. ಈಗ ತೆಗೆದಿದ್ದರಲ್ಲಿ ಒಂದೂ ಬಂದಿಲ್ಲ' ಎಂದು ನಾನು ಅವರಿಗೆ ದಂಬಾಲು ಬಿದ್ದೆ. 'ಯಾಕೆ ಫೋಟೋ, ಏನೂ ಬೇಡ ..... ಏನೂ ಬೇಡ, ನೀನು ಚೆನ್ನಾಗಿರ್ತೀ ನಿನಗೆಲ್ಲಾ ಒಳ್ಳೆಯದಾಗುತ್ತದೆ, ನಾನು ಬರ್ತೀನಿ' ಎಂದು ಗುರುನಾಥರು ಸಹಜವಾಗಿ ಕೈಯನ್ನು ಎತ್ತುವಂತೆ ಕೈ ಎತ್ತಿದಾಗ, ನನ್ನ ಕ್ಯಾಮರಾ ಕಣ್ಣು ಮಿಟುಕಿಸಿತ್ತು. ಭಕ್ತರ ಹೃದಯಲ್ಲಿ ಸೆರೆಯಾದ ಗುರುನಾಥರು ನನ್ನ ಕ್ಯಾಮರಾಕ್ಕೂ ಕೃಪೆ ತೋರಿದ್ದರು. 'ನೋಡಿ ಅಂಕಲ್ ಈ ಫೋಟೋ' ಎಂದಳು". 

ಅದೇ ತುಂಬು ನಗು, ನಿರಾಳ ಭಾವ, ಕರುಣಾಪೂರಿತ ನೇತ್ರಗಳು. ಈ ಭಾವಚಿತ್ರದಲ್ಲಿ ಕಂಡುಬರುವ ಒಂದೇ ವ್ಯತ್ಯಾಸವೆಂದರೆ ಗುರುನಾಥರು ಉದ್ದನೆಯ ಬಿಳಿಯ ಬನಿಯನ್ ಧರಿಸಿರುವುದು. ಶಿವ ಸ್ವರೂಪಿ, ದತ್ತ  ಸ್ವರೂಪಿಯೇ ಆದ ಗುರುನಾಥರು - ಕಾಶಿ ವಿಶ್ವನಾಥನು ನಾನೇ ಎಂದು, ಕಾಶಿಯಲ್ಲಿ ಬಂದು ದರ್ಶನ ಕೊಟ್ಟಿದ್ದು ಹೀಗೆ. ಭಕ್ತಪರಾಧೀನ  ಎಂಬ ಬಿರುದು ಹೊತ್ತಿದ್ದರೂ ಭಗವಂತನನ್ನು ಕಾಣಲು ನೂರಾರು ವರ್ಷ ತಪಸ್ವಿಗಳು ತಪ ಮಾಡುತ್ತಾರೆ. ಆದರೆ ಭಕ್ತರ ಉದ್ದಾರಕ್ಕಾಗಿಯೇ ಜನಿಸಿದ ನಮ್ಮ ಗುರುನಾಥರು ಒಂದು ಕ್ಷಣದ ಭಾವಪೂರ್ಣ ಪ್ರೀತಿಗೆ ಭಕ್ತರಿಗೆ ಒಲಿಯುತ್ತಾರೆ. 



ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಾಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


1 comment:

  1. Gurudeva nimma charanagalige nanna sashtanga pranamagalu. Dayavittu nanna kshamisibidi. Tumba tappugalannu madiddene. Nanna tappina arivagide. Inna mele yara manasannu noyisuvudilla. Nimmanna adarshavagittukondu badukuttene. Dayavittu nanna mele karune torisi. Tumba tondareyalli iddene. Dari kanutta illa. Dayavittu dari torisi Gurudeva

    ReplyDelete