ಒಟ್ಟು ನೋಟಗಳು

Sunday, November 13, 2016

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 40


ದೇವರ ಕೆಲಸ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಆ ವ್ಯಕ್ತಿ ಚರಣದಾಸನಾದ ನನಗೆ ಬಹಳ ಪರಿಚಿತರು. ಜೊತೆಗೆ ಗುರುವಾಕ್ಯವನ್ನು ಕಿಂಚಿತ್ತೂ ಲೋಪವಾಗದಂತೆ ನಡೆಸಬೇಕೆಂಬ ನಿಷ್ಠೆ ನಾನು ಅವರಿಂದ ಕಲಿತುಕೊಂಡ ಪಾಠ. ಅವರದು ಭೀಮ ಭಕ್ತಿ ಎನ್ನಬಹುದು. 

ಇತ್ತೀಚೆಗೆ ನನಗೆ ಕರೆ ಮಾಡಿದ ಆ ವ್ಯಕ್ತಿ "ನೋಡಿ, ನೀವು ನಮ್ಮ ಮನೆಗೆ ಬರಬೇಕು. ಬೆಂಗಳೂರಿಗೆ ಬಂದಾಗ ತಿಳಿಸಿ" ಅಂದಿದ್ದರು. ಅಂತೆಯೇ ಅವರ ಮನೆಗೆ ಹೋದೆ. ಗುರುನಿವಾಸಕ್ಕೆ ಬರುತ್ತಿದ್ದಾಗ ಅವರಲ್ಲಿರುತ್ತಿದ್ದ ನಿಷ್ಠೆ ನೆನಪಾಗಿ "ಏನಾದ್ರೂ ಹೇಳಿ.." ಅಂದೆ. ಆತ "ನೋಡಿ, ನಮಗೆ ಗುರುವಾಕ್ಯವೇ ಜೀವನ" ಎಂದು ನುಡಿದು ಹೀಗೆ ಹೇಳತೊಡಗಿದರು: - "ಒಮ್ಮೆ ಗುರುನಾಥರು ನಮಗೆ ಅದ್ವೈತ ಪೀಠವೊಂದರ ಜೀರ್ಣೋದ್ಧಾರದ ಜವಾಬ್ದಾರಿಯನ್ನು ನೀಡಿದ್ದರು. ಅದರ ಮೌಲ್ಡಿಂಗ್ ಕೆಲಸಕ್ಕೆ ಮುನ್ನೂರು ಚೀಲ ಸಿಮೆಂಟ್ ಬೇಕಿತ್ತು. ನಾನು ಸಂಬಂಧಪಟ್ಟವರಿಗೆ ತಿಳಿಸಿ ಬೇಕಾದ ಹಣವನ್ನು ಕಳಿಸಿದ್ದೆ. ಆಗ ಕರೆ ಮಾಡಿದ ಆ ವ್ಯಕ್ತಿ 'ಸ್ವಾಮಿ, ಲಾರಿ ಚಳುವಳಿ ಇರೋದ್ರಿಂದ ಸಿಮೆಂಟ್ ಕಳಿಸೋದು ತಡವಾಗುತ್ತೆ' ಅಂದರು. ನಾವಿಲ್ಲಿ ಮೌಲ್ಡಿಂಗ್ ಕಾರ್ಯಕ್ಕೆ ಎಲ್ಲ ಸಿದ್ಧ ಮಾಡಿಕೊಂಡಿದ್ದು ಇಲ್ಲಿ ಕೆಲಸಕ್ಕೆ ಎಂಬತ್ತು ಜನ ಕೆಲಸಗಾರರು ಸಿದ್ಧವಾಗಿದ್ದಾರೆ. ಏನು ಮಾಡಬೇಕು ಅಂತ ತಿಳಿಯಲಿಲ್ಲ. ಇದರ ಮಧ್ಯೆ ಗುರುನಾಥರು ನಾವು ಹೊರಡೋ ಮುನ್ನ: "ನೋಡಯ್ಯಾ, ಯಾರೇ ಗುರುಬಂಧುಗಳು ಈ ಕಾರ್ಯಕ್ಕೆ ಸಹಾಯ ಮಾಡಲು ಬಂದಲ್ಲಿ ನನ್ನ ಗಮನಕ್ಕೆ ತರದೇ ಒಪ್ಪಕೊಳ್ಳಬಾರದು" ಎಂದು ಆದೇಶಿಸಿದ್ದರು. ಕೈಯಲ್ಲಿ ಬೇರೆಡೆಯಿಂದ ಸಿಮೆಂಟ್ ತರಿಸುವಷ್ಟು ಹಣವೂ ಇರಲಿಲ್ಲ. ಏನು ಮಾಡಬೇಕೆಂದು ತಿಳಿಯಲಿಲ್ಲ. ಕೂಡಲೇ ಗುರುವನ್ನು ಪ್ರಾರ್ಥಿಸಿ , ಗುರುವಿನ ಮುಂದೆ ತುಪ್ಪದ ದೀಪವಿರಿಸಿ, ಕೆಲ ವ್ಯವಹಾರ ಮಿತ್ರರನ್ನು ಸಂಪರ್ಕಿಸಿದೆವು. ಯಾರೋ ಒಬ್ಬರಿಂದ ಸಿಮೆಂಟಿಗೆ ವ್ಯವಸ್ಥೆ ಆಯಿತು ಹಾಗೂ ಎಲ್ಲ ಕೆಲಸವೂ ಸಾಂಗವಾಗಿ ನೆರವೇರಿತು. ಕೆಲಸ ಮುಗಿದ ಮರುದಿನ ಈ ಹಿಂದೆ ಬರಬೇಕಿದ್ದ ಮುನ್ನೂರು ಚೀಲ ಸಿಮೆಂಟ್ ಬಂದಿತು. 

ಇದನ್ನು ನೋಡಿ ನಮಗೆ "ನಿನ್ನದೆಲ್ಲವನ್ನೂ ಗುರುವಿಗರ್ಪಿಸಿ ನಿಂತ್ಕೊಳಯ್ಯ. ಸಾಕು ಆ ಗುರು ಅವನ ಕೆಲಸ ಅವನೇ ಮಾಡಿಸ್ಕೊತಾನೆ" ಎಂಬ ನನ್ನೊಡೆಯನ ಮಾತು ನೆನಪಾಯಿತು... " ಎಂದು ನಿಲ್ಲಿಸಿದರು. ನಂತರ ಗುರು ನಿವಾಸಕ್ಕೆ ಬರುವ ಮೊದಲು ಆ ಪೀಠದ ಜೀರ್ಣೋದ್ಧಾರಕ್ಕೆ ಇನ್ನೂ ಹನ್ನೆರಡು- ಹದಿಮೂರು ಲಕ್ಷ ಹಣ ಬೇಕಾಗುವುದೆಂದು ನಾನು ಮತ್ತು ನನ್ನ ಮಿತ್ರನು ಲೆಕ್ಕ ಹಾಕಿದ್ದೆವು. ನಾನು ಅಲ್ಲಿಂದ ಗುರುನಿವಾಸಕ್ಕೆ ಬಂದೊಡನೆ ಗುರುನಾಥರು "ನೋಡಯ್ಯ, ಅಲ್ಲಿನ ಕೆಲಸಕ್ಕೆ ಇನ್ನೂ ಹನ್ನೆರಡು-ಹದಿಮೂರು ಲಕ್ಷ ಬೇಕಾಗುತ್ತೆ ಅಲ್ವೇ.. ನಂದು ಎಂಟು ಲಕ್ಷ ಇದೆ ಬಾಕಿ ಸ್ವಲ್ಪ ನೀವು ಹೊಂದಿಸಬೇಕು" ಎಂದು ನನ್ನತ್ತ ನೋಡಿ ನಕ್ಕರು. ಆ ಕ್ಷಣ ಅದೇನೆಂದು ತಿಳಿಯಲಿಲ್ಲ... ಅದೇನೆಂದರೆ, ನಾನು ನನ್ನ ಅಣ್ಣನ ಜೊತೆ ಸೇರಿ ಬೆಂಗಳೂರು ಸಮೀಪ ಸ್ವಲ್ಪ ಜಾಗ ತೆಗೆದುಕೊಂಡಿದ್ದು, ಅದನ್ನು ಮಾರಲಾಗಿ ನಮ್ಮಿಬ್ಬರಿಗೂ ತಲಾ ಎಂಟು ಲಕ್ಷ ಲಾಭವಾಯ್ತು. ನನ್ನಂತವನಿಗೆ ಇಂತ ಅವಕಾಶ ನೀಡಿದ್ರಲ್ಲಾ.. ನನ್ನ ಬದುಕು ಸಾರ್ಥಕವಾಯಿತೆಂದುಕೊಂಡೆ. 

ಗುರುನಾಥರು "ನೀವು ಮಾಡಿರೋ ಕಾರ್ಯಕ್ಕೆ ನಿಮಗೊಂದು ಉಂಗುರ ನೀಡಿ ಗೌರವಿಸಬೇಕೆಂದುಕೊಂಡಿದ್ದೆ. ಕೂಡಲೇ ನಿಮ್ಮ ಗುರು ಭಕ್ತಿಗೆ ಬೆಲೆ ಕಟ್ಟಿದಂತಾಗುವುದೆಂದೆನಿಸಿ ಸುಮ್ಮನಾದೆ ಕಣಯ್ಯಾ.... ನೀ ಮಾಡಿರೋ ಕೆಲಸದಿಂದ ಹಿರಿಯ ಯತಿಗಳು ಬಹಳ ಆನಂದಗೊಂಡಿದ್ದಾರೆ. ಆದ್ದರಿಂದ ನಿಮ್ಮ ಹೆತ್ತವರಿಗೆ ಸಿಗಬೇಕಾದ ಗೌರವ ಸಿಕ್ಕಂತಾಯಿತು... ಎಂದು ಕ್ಷಣ ತಡೆದು ಒಬ್ಬ ಗುರು ಶಿಷ್ಯನಿಂದ ಇದಕ್ಕಿಂತ ಇನ್ನೇನು ತಾನೇ ಅಪೇಕ್ಷಿಸುತ್ತಾನೆ ಅಲ್ವೇ?" ಎಂದು ನನ್ನತ್ತ ಪ್ರೀತಿ ತುಂಬಿ ದಿಟ್ಟಿಸಿದರು. ನಾನು ಗುರುಚರಣಕಮಲಗಳಿಗೆರಗಿದೆ. 

"ಗುರುವೇ ನಿನಗೆ ಏನನ್ನೂ ನೀಡಲು ನಾವುಗಳು ಅಸಮರ್ಥರು. ಕಾರಣ ಎಲ್ಲವೂ ನಿನ್ನದೇ.. ಆದರೆ ಎಂದೆಂದಿಗೂ ನಿನಗೆ ನೋವು ಕೊಡದಂತೆ ಭಾರವಾಗದಂತೆ ಬದುಕಿಸಿಬಿಡು ಎಂದು ಪ್ರಾರ್ಥಿಸಿದೆ" ಎಂದು ಕಣ್ತುಂಬಿ ನುಡಿದು ಮೌನವಾದರು. ಚರಣದಾಸನಾದ ನಾನು, ಆ ತುಂಬು ಕುಟುಂಬದ ಸೌಹಾರ್ದತೆ, ಏಕ ನಿಷ್ಠೆಯನ್ನು ನೆನಪಿಸಿಕೊಳ್ಳುತ್ತಾ ಅವರಿಂದ ಬೀಳ್ಕೊಂಡು ಹೊರಟು ಬಂದೆ..... ,,,,,,,,  

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment