ಒಟ್ಟು ನೋಟಗಳು

Saturday, November 26, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 14


ಮತ್ತೆ ಬಂದಾವೆ ಆ ಸುದಿನ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಬಹಳ ವರ್ಷಗಳು ಗುರುನಾಥರೊಂದಿಗೆ ಇರುವ, ಅವರ ಸೇವೆ ಮಾಡುವ ಅವಕಾಶ ದೊರೆತ ನಾಗೇಶ್ ಅವರು ಹೀಗೆನ್ನುತ್ತಾರೆ. 'ನಮಗಾಗ ಏನೂ ತಿಳಿದಿರಲಿಲ್ಲ. ಆದರೂ ಅವರ ಜೊತೆಗಿರುವುದೇ ಒಂದು ಸಂತಸದ ಸಂಗತಿ ಯಾಗಿರುತ್ತಿತ್ತು. ನಾವೊಂದಿಬ್ಬರು ಅವರ ಮನೆಯ ಮುಂದೆ ಕೂರುತ್ತಿದ್ದೆವು. ಜನ ನಮ್ಮನ್ನು ಹಕ್ಕಬುಕ್ಕರೆಂದು ಹಾಸ್ಯ ಮಾಡುತ್ತಿದ್ದರು. ಆಮೇಲೆ ನಾನು ಕಾರು ಓಡಿಸುತ್ತಿದ್ದೆ. ವಾರಗಟ್ಟಲೇ 'ನಡಿಯಯ್ಯಾ ಹೋಗೋಣ' ಎಂದು ಅವರೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಅತ್ಯಂತ ಸ್ನೇಹ ಪ್ರೀತಿಗಳಿಂದ ನೋಡಿಕೊಳ್ಳುವುದರ ಜೊತೆಗೆ, ನಮಗೆ ಯಾವ ಕೊರತೆಯೂ ಆಗುತ್ತಿರಲಿಲ್ಲ. ಎಲ್ಲರನ್ನೂ ಬಿಟ್ಟು ನಮ್ಮನ್ನು ತಮ್ಮ ಬಳಿ ಇಟ್ಟುಕೊಂಡ ಅವರಿಗೇನೂ ಲಾಭವಾಗದಿದ್ದರೂ, ಗುರುನಾಥರು ನಮ್ಮ ತೊಂದರೆಗಳನ್ನು ನಿವಾರಿಸಿ, ರಕ್ಷಿಸುವುದಕ್ಕೋಸ್ಕರವೇ ನಮಗೆ ಆ ಅವಕಾಶ ಒದಗಿಸಿದ್ದಾರೇನೋ ಎನಿಸುತ್ತೆ' ಎಂದು ಭಕ್ತಿಯಿಂದ ಗುರುನಾಥರನ್ನು ಸ್ಮರಿಸುತ್ತಾರೆ. 

'ಒಮ್ಮೆ ಒಬ್ಬರ ಮನೆಗೆ ಒಂದಿಷ್ಟು ಹಣ್ಣನ್ನು ಕೊಟ್ಟು ಬರಲು ನಮ್ಮನ್ನು ಅವರು ಕಳಿಸಿದ್ದರು. ನಾವು ಕಾರಿನಲ್ಲಿ ಹೊರಟೆವು. ಸಖರಾಯಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದ ಸನಿಹದ ಭಟ್ಟರ ಮನೆಯ ಬಳಿ ಒಂದು ಮನೆಯ ಮುಂದೆ ಬಿಳಿಯ ಹಸು ಬಂದಿತು. ಅಲ್ಲಿ ನೋಡಿದರೆ ಆ ಹಸುವಿಗೆ ಗುರುನಾಥರು ಬಾಳೆಹಣ್ಣು ನೀಡುತ್ತಿದ್ದರು. ಅರೆ ಇದೇನು ನಾವು ಅಲ್ಲಿಂದ ಹೊರಡುವಾಗ ಮನೆಯಲ್ಲೇ ಇದ್ದರು. ಈಗ ನೋಡಿದರೆ ಇಲ್ಲಿ ಹಸುವಿಗೆ ಬಾಳೆಹಣ್ಣು ತಿನ್ನಿಸುತ್ತಿದ್ದರಲ್ಲ ಅಂದೆ. ಅದಕ್ಕೆ ನನ್ನ ಜೊತೆಗೆ ಬಂದವರು, 'ನಿನಗೆಲ್ಲೋ ಬ್ರಾಂತು. ನಾವು ಮನೆಯಿಂದ ಹೊರಡುವಾಗ ಗುರುನಾಥರು ಜಗಲಿ ಮೇಲೆ ಕೂತಿದ್ದನ್ನು ನೋಡಿದ್ದೇವೆ' ಎಂದು ನನ್ನನ್ನೇ ದಬಾಯಿಸಿ ಬಿಟ್ಟರು. ಮುಂದೆ ವಾಪಸ್ಸು ಬಂದು ಈ ವಿಚಾರವನ್ನು ಗುರುನಾಥರ ಬಳಿ ಹೇಳಿದಾಗ 'ಅವರ ಮನೆಯಲ್ಲಿ ಹೋಗಿ ಕೇಳಿ' ಎಂದರು. ಹೋಗಿ ಕೇಳಿದಾಗ, ಆ ಮನೆಯವರು 'ಈಗ ತಾನೇ ಗುರುನಾಥರು ನಮ್ಮ ಮನೆಗೆ ಬಂದು ಕಾಫಿ ಕುಡಿದು ಹೋದರು' ಎಂದಾಗ ಎಲ್ಲರೂ ಆಶ್ಚರ್ಯಪಟ್ಟರು. ಇದೇ ಸಮಯಕ್ಕೆ ಸಾಗರದ ಗುರುನಾಥರ ಮಗಳು, ಲ್ಯಾಂಡ್  ಫೋನಿಗೆ ಫೋನ್ ಮಾಡಿ 'ಏನಮ್ಮ ಅಪ್ಪಾಜಿ ಸಾಗರದ ಇಂಥವರ ಮನೆಗೆ ಈಗ ಬಂದಿದ್ದರಂತೆ. ನಮ್ಮ ಮನೆಗೆ ಬರದೇ ಹೋಗಿದ್ದೀರಲ್ಲಾ' ಎಂದಾಗ, ಇತ್ತಲಿಂದ 'ಅವರು ಇಲ್ಲೇ ಇದ್ದಾರೆ. ಈ ಊರಲ್ಲೇ. ಅಲ್ಲಿಗೆ ಹೇಗೆ ಬರುತ್ತಾರೆ' ಎಂದು ಉತ್ತರಿಸಿದಾಗ ಅವರ ಮಗಳು ಯಜಮಾನರೊಂದಿಗೆ ಗಾಡಿಯಲ್ಲಿ ಹೋಗಿ ನೋಡಿದಾಗ ಗುರುನಾಥರು ಅಲ್ಲಿಯೂ ಇದ್ದರಂತೆ. ಹೀಗೆ ಒಂದೇ ಸಮಯದಲ್ಲಿ ಹಲವು ಕಡೆ ಪ್ರಕಟವಾಗುತ್ತಿದ್ದುದು ಗುರುನಾಥರ ಲೀಲೆಗಳಲ್ಲಿ ಒಂದಾಗಿತ್ತು' ಎನ್ನುತ್ತಾರೆ.

ಮತ್ತೊಂದು ದಿವಸ ಗುರುನಾಥರು ನಮ್ಮೊಂದಿಗೆ ಕಾರಿನಲ್ಲಿ ಹೊರಟರು. ಯಾವ ಕಡೆ ಹೋಗಬೇಕೆಂಬುದನ್ನು ಅವರೇ ಹೇಳುತ್ತಿದ್ದರು. ನಾನು ಸುಮ್ಮನೆ ಡ್ರೈವಿಂಗ್ ವೀಲ್ ಹಿಡಿದು ಕುಳಿತಿರುತ್ತಿದ್ದೆ. ರಾತ್ರಿ ಹನ್ನೆರಡು ಮೀರಿರಬಹುದು. ಎಡಕ್ಕೆ ತಿರುಗಿಸು - ಬಲಕ್ಕೆ ಹೋಗಲಿ ... ಸೀದಾ ಹೋಗ್ತಾನೇ ಇರು. ಗುರುನಾಥರ ಆದೇಶ ಪಾಲಿಸುವುದೊಂದೇ ನಮ್ಮ ಕೆಲಸ. ಇದ್ದಕ್ಕಿದ್ದಂತೆ ಆ ಕಗ್ಗಾರುಕತ್ತಲೆಯಲ್ಲಿ ಒಂದು ಮನೆಯ ಮುಂದೆ ಕಾರು ನಿಲ್ಲಿಸಲು ಹೇಳಿದರು. 'ಮನೆ ಬಳಿ ಹೋಗಿ ಬಾಗಿಲು ತಟ್ಟಯ್ಯಾ' ಎಂದರು. ನಮಗೆ ಹೆದರಿಕೆಯಾಯ್ತು. ಆದರೂ ಹೋಗಿ ಬಾಗಿಲು ತಟ್ಟಿದೆವು. ಒಳಗೆ ದೀಪಗಳು ಬೆಳಗಿದವು. 'ಯಾರು ಎಂಬ ದನಿ ಬಂತು'. ಗುರುನಾಥರು 'ಜೋರಾಗಿ ಹೋಗಿ ಹೇಳಯ್ಯಾ ನಾವು ಬಂದಿದೀವಿ ಅಂತ, ಯಾಕೆ ಹೆದರುತ್ತೀಯಯ್ಯಾ' ಅಂದರು. ಅದೇ ರೀತಿ ಮಾಡಿದೆವು. ಮನೆಯ ಎಲ್ಲಾ ದೀಪಗಳು ಬೆಳಗಿದವು. ಮನೆಯವರೆಲ್ಲಾ ಹೊರಬಂದರು. ಆ ಸರಿರಾತ್ರಿಯಲ್ಲಿ ಗುರುನಾಥರನ್ನು ಕಂಡ ಅವರ ಸಡಗರ ಹೇಳತೀರದು. ಕೂಡಲೇ ಒಳಗೆ ಹೋಗಿ ನೀರು ತಂದು ನೆಲ ಸಾರಿಸಿ, ರಂಗವಲ್ಲಿಯನ್ನಿಟ್ಟು, ಆನಂದಬಾಷ್ಪಗಳೊಡನೆ ಆರತಿ ಎತ್ತಿ, ಗುರುಗಳನ್ನು ಅವರು ಬರಮಾಡಿಕೊಂಡ ಸಂಭ್ರಮ ನೋಡಬೇಕು. 'ಅಪ್ಪಾ ಬರ್ತೀನಿ... ನಿಮ್ಮನೆಗೆ ಬರ್ತೀನಿ ಎಂದು ಹೇಳುತ್ತಿದ್ದವರು ಅಂತೂ ಈ ದಿನ ಬಂದಿರಲ್ಲಾ' ಎಂದು ಆ ಮನೆ ಮಂದಿಯೆಲ್ಲಾ ನಮಸ್ಕರಿಸಿ ಸ್ವಾಗತಿಸಿ ಸತ್ಕರಿಸಿದ್ದನ್ನು ಮರೆಯುವಂತಿಲ್ಲ' ಎಂದು ನೆನೆಸಿಕೊಂಡರು. ತಮ್ಮ ಭಕ್ತರಿಗೆ ಆ ಮಧ್ಯರಾತ್ರಿಯಲ್ಲಿ ದರ್ಶನವಿತ್ತ ಮರ್ಮವೇನೋ ತಿಳಿಯದು. ಆದರೆ ನಮಗೆಲ್ಲಾ ಗುರುನಾಥರೆಂದರೆ ಭಕ್ತರ ಮನದಲ್ಲಿ ಎಂತಹ ಶ್ರದ್ಧಾ ಭಕ್ತಿಗಳಿವೆ ಎಂಬುದರ ಅರಿವಾಗಿತ್ತು.

ಗುರುಕರುಣೆ ಯಾರಿಗೆ ಯಾವಾಗ ಹೇಗಾಗುತ್ತದೋ ಬಲ್ಲವರಾರು. ಮಧ್ಯರಾತ್ರಿಯಲ್ಲಿ ಬಂದರೂ, ಬೇಸರಿಸದೆ, ಗುರುವನ್ನು ಆದರಿಸಿ ಸತ್ಕರಿಸಿದ ಆ ಭಕ್ತರಿಗೂ ಗುರುನಾಥರಿಗೂ ಅದಾವ ಅನುಬಂಧವಿತ್ತೋ, ಆ ಸರಿ ರಾತ್ರಿಯಲ್ಲೇ ಗುರುನಾಥರು ಅದೇಕೆ ಹೀಗೆ ಬಂದರೋ.... ಅದು ಚಿದಂಬರ ರಹಸ್ಯವೇ.

ಕರೆದವರ ಮನೆಗೆ ಬರುವ ಕರುಣಾಳು ನಮ್ಮ ಗುರುನಾಥರು ಎನ್ನುತ್ತಾ ಮತ್ತೊಂದು ಅನುಭವವನ್ನು ಹೀಗೆ ತೆರೆದಿಟ್ಟರು. 'ಶಿವಮೊಗ್ಗದಲ್ಲಿ ಒಬ್ಬ ಅರಣ್ಯಾಧಿಕಾರಿಗಳಿದ್ದರು. ಆ ಪತಿ ಪತ್ನಿಯರು ಗುರುನಾಥರಿಗೆ ತುಂಬಾ ನಡೆದುಕೊಳ್ಳುತ್ತಿದ್ದರು. ಒಂದು ದಿವಸ ರಾತ್ರಿ ಹತ್ತೂವರೆಗೆ, ಅವರ ಮನೆಗೆ ಗುರುನಾಥರು ಇದ್ದಕ್ಕಿದ್ದಂತೆ, ಯಾರಿಗೂ ತಿಳಿಸದೇ ಬಂದಿದ್ದರು. ಮನೆಯೊಡತಿಗೆ ಗುರುನಾಥರು ಹೀಗೆ ಬಂದದ್ದು ಅಪಾರ ಸಂತಸ ತಂದಿತ್ತು. ಅವರು ಬಿಕ್ಕುತ್ತಾ 'ಅಪ್ಪಾ ನೀವು ಬಂದಿರಿ... ಸಧ್ಯ ನನ್ನ ಮನಸ್ಸಿಗೆ ನೆಮ್ಮದಿ ಸಿಕ್ಕಿತು. ಬೆಳಗಿನಿಂದ ಏಕೋ ಏನೋ ತುಂಬಾ ದುಗುಡ, ನೋವು, ಸಹಿಸಲಾಗದ ಆತಂಕವಾಗುತ್ತಿತ್ತು. ನಮ್ಮ ಮನೆಯವರಿಗೆ ಬೇರೆ ಆರೋಗ್ಯ ಸರಿ ಇರಲಿಲ್ಲ' ಎಂದು ವಿನಂತಿಸಿಕೊಂಡಾಗ, 'ಏನಿಲ್ಲ ಕಣಮ್ಮ ಈಗ ಹುಷಾರಾಗಿದ್ದರೆ ಕಣಮ್ಮ. ಏನೂ ಚಿಂತೆ ಮಾಡಬೇಡ.. ಎಲ್ಲಾ ಸರಿಯಾಗಿದೆ. ಇನ್ನೊಂದು ಸ್ವಲ್ಪ ಹೊತ್ತು ಬಿಟ್ಟು ನಿಮ್ಮ ಮನೆಯವರಿಗೆ ಫೋನು ಮಾಡಿ ಕೇಳಿಕೊಳ್ಳಮ್ಮ' ಎಂದರು. ಅದರಂತೆಯೇ ಫೋನು ಮಾಡಿ ಕೇಳಿದಾಗ ತಿಳಿದ ವಿಚಾರವೆಂದರೆ ಬೆಳಗಿನಿಂದ ಸ್ವಲ್ಪ ಎದೆ ನೋವು ಬಂದು ಸುಸ್ತಾಗಿದ್ದರಂತೆ. 'ಈಗ ಎಲ್ಲಾ ಕಡಿಮೆಯಾಗಿದೆ, ಆರಾಮವಾಗಿದ್ದೇನೆ, ಏನೂ ಯೋಚಿಸಬೇಡ' ಎಂದು ಉತ್ತರ ಬಂದಿತ್ತು.

ಹೀಗೆ ಗುರುನಾಥರು ತಮ್ಮ ಭಕ್ತರ ಸಂಕಟ ಸಮಯದಲ್ಲಿ ಸ್ವತಃ ಅಲ್ಲಿಗೆ ಧಾವಿಸಿ ಬರುವುದು, ಭಕ್ತರ ಬವಣೆಗಳನ್ನು ದೂರ ಮಾಡುವುದು ನಡೆದೇ ಇತ್ತು' ಎನ್ನುತ್ತಾರೆ.

ಗಾಳಿಯಲ್ಲಿ ಗಾಡಿ ಓಡಿಸಿದ ಗುರುನಾಥರು 


ಸುಮಾರು 1992ರಲ್ಲಿ ನಡೆದ ಒಂದು ಘಟನೆಯನ್ನು ನೆನೆಸಿಕೊಂಡು ಅವರು ಮತ್ತೆ ತಮ್ಮ ನೆನಪಿನ ಸುರಳಿಗಳನ್ನು ಬಿಚ್ಚಗೊಡಗಿದರು. "ಅವಾಗ ನನ್ನ ಬಳಿ ಒಂದು ಹಳೆಯ ಕಾರು ಇತ್ತು. ಒಂದು ಲೀಟರ್ ಪೆಟ್ರೋಲ್ ಗೆ ಆರು ಕಿಲೋಮೀಟರ್ ಕೊಡುತ್ತಿತ್ತು. ನನ್ನ ಹತ್ತಿರ ದುಡ್ಡು ಇರ್ತಿರಲಿಲ್ಲ. ಗುರುನಾಥರೇ ಆಗೀಗ ದುಡ್ಡು ಕೊಡುತ್ತಿದ್ದರು. ಪೆಟ್ರೋಲ್ ನಲ್ಲಿ ಸ್ಟಾರ್ಟ್ ಮಾಡಿ ಸೀಮೆಎಣ್ಣೆಗೆ ಚೇಂಜ್ ಮಾಡಿಕೊಂಡು ಓಡಿಸುತ್ತಿದ್ದೆ. ಸಖರಾಯಪಟ್ಟಣದಲ್ಲಿ ನನ್ನ ಕಾರು ಅಂದಕೂಡಲೇ ಜನ 'ಸೀಮೆಎಣ್ಣೆ ಗಾಡಿ ಬಂತು ನೋಡು' ಅನ್ನುತ್ತಿದ್ದರು. ಒಂದು ದಿನ ಬೆಳಿಗ್ಗೆ ಏಳೂ ಏಳೂವರೆ ಇರಬಹುದು. ಗುರುನಾಥರ ಜೊತೆ ಕಾರಿನಲ್ಲಿ ಹೊರಟೆವು. ಬನಶಂಕರಿ ದೇವಸ್ಥಾನದ ಹತ್ತಿರ ಬರುವಲ್ಲಿ ಸೀಮೆಎಣ್ಣೆಯೂ ಇಲ್ಲದೇ  ಕಾರು ನಿಂತಿತು. ಹಿಂದೆ ಕುಳಿತ ಗುರುನಾಥರು 'ನಡೀ ನಡೀ ಹೋಗು' ಎಂದರು. ಸೀಮೆಎಣ್ಣೆ ಖಾಲಿಯಾಗಿರುವುದನ್ನು ಗುರುನಾಥರಿಗೆ ತಿಳಿಸಿದೆ. 'ನೀನೇನ್ ಯೋಚನೆ ಮಾಡಬೇಡ' ಎಂದರು. ನನಗೋ ಪರಮಾಶ್ಚರ್ಯ. ಕಾರು ಒಂದೇ ಸಮನೆ ಓಡುತ್ತಿದೆ... ಸೀಮೆಎಣ್ಣೆಯೂ ಇಲ್ಲದೇ , ಯಗಚಿಯ ಊರ ಹತ್ತಿರ ಬಂದಿದ್ದೆವು. ಹಾಗೇ  ಸುಮ್ಮನೆ ಕುತೂಹಲದಿಂದ ರೇರ್ ಮಿರರ್ ನಲ್ಲಿ ನೋಡಿದಾಗ ಗುರುನಾಥರು ಉಟ್ಟಿದ್ದ ತುಂಡು ಪಂಚೆ ಕಿಟಕಿಯಿಂದ ಗಾಳಿಯಲ್ಲಿ ಹಾರುತ್ತಿದ್ದುದು ಕಂಡು ಬಂದಿತು. ಅಷ್ಟರಲ್ಲಿ ಊರಬಳಿ ಬಂದ ಕಾರು ನಿಂತಿತು. ತುಂಡು ಪಂಚೆ ಸೊಂಟಕ್ಕೆ ಸುತ್ತಿಕೊಂಡು ಗುರುಗಳು ಕಾರಿನಿಂದಿಳಿದು ಕೈ ಉಜ್ಜುತ್ತಿದ್ದರು. ಅಷ್ಟರಲ್ಲಿ ಅಲ್ಲಿ ಕಂಡ, ಗುರುನಾಥರ ಬಂಧುಗಳು, ಗುರುಗಳ ಕ್ಷೇಮ ಸಮಾಚಾರ ವಿಚಾರಿಸಿ 'ನಿಮ್ಮನ್ನೇ ನೋಡಲು ಬರಬೇಕೆಂದು ಹೊರಟಿದ್ದೆ. ನೀವೇ ಬಂದುಬಿಟ್ಟಿರಿ' ಎಂದರು. ಅವರಿಂದ ಐದು ಲೀಟರ್ ಸೀಮೆಎಣ್ಣೆ ತರಿಸಿದ ಗುರುನಾಥರು ಪಯಣವನ್ನು ಮುಂದುವರೆಸಿದರು.

ಏನೂ ಇಲ್ಲದೇ ಕಾರನ್ನು ಈ ರೀತಿ ಓಡಿಸಿದುದು ಸಾಮಾನ್ಯರಿಗೆ ತರ್ಕಕ್ಕೆ ನಿಲುಕದ ವಿಷಯವಾದರೂ ಗುರುನಾಥರಿಗೆ ಅದೆಲ್ಲಾ ಏನೂ ಅಲ್ಲ. ಜೊತೆಗಿದ್ದವರಿಗೆ ಗುರುನಾಥರ ಸಾಮರ್ಥ್ಯವನ್ನರಿಯಲು ಇಂತಹ ಘಟನೆಗಳು ನೆರವಾದೀತು.

ಮ್ಯಾಜಿಸ್ಟ್ರೇಟರೇ ಇವತ್ತು ಬರುವುದಿಲ್ಲ 


ಇದ್ದಕ್ಕಿದ್ದಂತೆ ಗುರುನಾಥರ ಜೊತೆ ಎಲ್ಲೆಂದರಲ್ಲಿಗೆ ಹೋಗಿಬಿಡುತ್ತಿದ್ದೆ. ಅದೇ ರೀತಿ ಮೈಸೂರಿಗೆ ತಮ್ಮ ಬಂಧುಗಳ ಮನೆಗೆ ಒಮ್ಮೆ ನನ್ನನ್ನು ಕರೆದೊಯ್ದರು. ಸುಮಾರು ಮೂರು ದಿನಗಳಾಗಿರಬಹುದು. ಆಗ ನಾನು ಗುರುನಾಥರೊಂದಿಗೆ 'ನಾಳೆ ಬೆಂಗಳೂರಿಗೆ ಹೋಗಿ ಕೋರ್ಟ್ ಕೆಲಸ ಅಟೆಂಡ್ ಮಾಡಬೇಕಿದೆ. ಹೋಗಲೇಬೇಕಿದೆ' ಎಂದೆ. ಅದಕ್ಕೆ ಗುರುನಾಥರು 'ನೀನ್ ಹೋಗ್ ಏನ್ ಮಾಡ್ತೀಯಯ್ಯಾ' ಎಂದರು. ಆದರೂ ಹಠ ಹಿಡಿದ ನನ್ನನ್ನು ಒಂದು ತೆಂಗಿನಮರದ ಬಳಿ ಕರೆದೊಯ್ದು ಮೂರು ಪ್ರದಕ್ಷಿಣೆ ಮಾಡಿಸಿ, ಕಳಿಸಿಕೊಟ್ಟರು. ಹತ್ತೂವರೆಗೆ ಕೋರ್ಟ್ ಬಳಿ ಹೋದೆ. ಹನ್ನೊಂದು ಗಂಟೆಗೆ 'ಇವತ್ತು ಮಾಜಿಸ್ಟ್ರೇಟರು ರಜಾ ಇದ್ದಾರೆ' ಎಂದು ತಿಳಿಸಿ, ಮುಂದಿನ ಡೇಟನ್ನು ಕೊಟ್ಟರು. ಇನ್ನೊಮ್ಮೆ 'ಹೋಗಯ್ಯಾ, ನೀನು ಕಾರ್ಪೋರೇಟರ್ ಆಗ್ತೀಯಾ' ಎಂದು ಗುರುನಾಥರೆಂದರು. ಅದರಂತೆಯೇ ನಾನು ಚಿಕ್ಕಮಗಳೂರಿನ ನಗರಸಭೆಯ ಸದಸ್ಯನಾದೆ.

ಗುರುನಾಥರ ವಾಣಿ ಎಂದರೆ ಅದಕ್ಕೆ ಹುಸಿಯೇ  ಇಲ್ಲ. ಅನೇಕ ಜನ ರಾಜಕಾರಣಿಗಳು ಗುರುನಾಥರ ಬಳಿ ಬಂದು ತಮ್ಮ ರಾಜಕೀಯ ಭವಿಷ್ಯವನ್ನು ಕೇಳಿದಾಗ ಗುರುನಾಥರು ನುಡಿದಂತೆ ಎಲ್ಲವೂ ನಡೆದಿರುವುದನ್ನವರು ಸ್ಮರಿಸುತ್ತಾರೆ.

ಅನೇಕ ಮಠದ ಗುರುಗಳಿಗೆ, ಸಂತರಿಗೆ ಬಂದ ದೈಹಿಕ ಕಾಯ್ಲೆ ಕಸಾಲೆಗಳಿಗೆ ಗುರುನಾಥರು ತಮ್ಮದೇ ಆದ ರೀತಿಯಲ್ಲಿ ಚಿಕಿತ್ಸೆ ಮಾಡಿ ಅವರ ದೇಹದ ಭಾದೆಗಳನ್ನು ದೂರ ಮಾಡಿದ್ದಾರೆ. ಕ್ಯಾನ್ಸರ್ ಬಂದು ತಾವಿನ್ನು ಉಳಿಯುವುದಿಲ್ಲ ಎಂದು ಹೆದರಿದ್ದ ಒಬ್ಬ ಭಕ್ತರು ಗುರುನಾಥರ ಬಳಿ ಬಂದಾಗ ಮೂರು ದಿನ ನಾನು ಹೇಳುವವರೆಗೆ ಈ ಜಾಗ ಬಿಟ್ಟು ಕದಲಬೇಡಿ' ಎಂದು ಕೂರಿಸಿ ತಾವು ಅದೇ ರೀತಿ ಕುಳಿತು, ಮಾರನೆಯ ದಿನ ಆ ಭಕ್ತರಿಗೆ ಬೆಳಗಿನ ಉಪಹಾರ ಮಾಡಿಸಿ, ಮತ್ತೊಮ್ಮೆ ಚೆಕ್ ಮಾಡಿಸಿಕೊಂಡು ಬರಲು ತಿಳಿಸಿದರು. ಆಸ್ಪತ್ರೆಯಿಂದ ಬಂದ ರಿಪೋರ್ಟ್ ನಲ್ಲಿ ಕ್ಯಾನ್ಸರಿನ ಯಾವ ಕುರುಹೂ ಇರಲಿಲ್ಲವಂತೆ. ಹೀಗೆ ಗುರುನಾಥರ ಒಂದೊಂದು ಲೀಲ್ಗಳೂ ಅಸಾಮಾನ್ಯವಾದವುಗಳಾಗಿದ್ದವು' ಎನ್ನುತ್ತಾರೆ.

ಶಿವಮೊಗ್ಗಕ್ಕೆ ಹೋಗಬೇಡ 


ಅಂದು ಗುರುನಾಥರ ಶಿಷ್ಯರೊಬ್ಬರಿಗೆ ಅನಿವಾರ್ಯ ಕೆಲಸದ ಮೇಲೆ ಶಿವಮೊಗ್ಗಕ್ಕೆ ಹೋಗಬೇಕಿತ್ತು. ಈ ವಿಚಾರವನ್ನು ಗುರುನಾಥರಲ್ಲಿ ಅರಿಕೆ ಮಾಡಿಕೊಂಡಾಗ 'ಬೇಡಯ್ಯಾ ಇವತ್ತು ನೀನು ಶಿವಮೊಗ್ಗಕ್ಕೆ ಹೋಗಬೇಡ' ಎಂದರು.

'ಇಲ್ಲ ಗುರುನಾಥರೇ ನಾನು ಹೋಗಲೇಬೇಕಿದೆ' ಎಂದಾಗ ಹಾಗಾದರೆ ಬಾ ಇಲ್ಲಿ, ಎಂದು ಅವರನ್ನು ಬಿಳಿ ಎಕ್ಕದ ಗಿಡದ ಬಳಿ ಕರೆದೊಯ್ದು, ಪ್ರದಕ್ಷಿಣೆ ಮಾಡಿಸಿ, ಒಂದು ತೆಂಗಿನಕಾಯಿ ತರಿಸಿ, ಅದನ್ನು ಮಂತ್ರಿಸಿ, ಒಂದು ಚೀಲಕ್ಕೆ ಹಾಕಿ ಆ ಚೀಲವನ್ನು ತಮ್ಮ ಶಿಷ್ಯರ ಬಗಲಿಗೆ ಹಾಕಿ, ಶಿವಮೊಗ್ಗದಿಂದ ಬರುವವರೆಗೆ ಯಾವ ಕಾರಣಕ್ಕೂ ತೆಗೆಯಲೇ ಬಾರದೆಂದು' ಎಚ್ಚರಿಸಿ ಕಳಿಸಿದರು. 'ನೀನು ಬರುವವರೆಗೆ ಇಲ್ಲೇ ಕುಳಿತಿರುತ್ತೇನೆಂದು' ಕುಳಿತುಬಿಟ್ಟಿದ್ದರು.

ಬಸ್ ನಲ್ಲಿ  ಹೊರಟ ಆ ಬಂಧುಗಳು ಇನ್ನೇನು ಶಿವಮೊಗ್ಗ ತಲುಪಬೇಕಿದ್ದಾಗ ಹರಿಗೆ ಬಳಿ ಬಹು ದೊಡ್ಡ ಆಕ್ಸಿಡೆಂಟ್ ಗೆ ಒಳಗಾದರು. ಅಕ್ಕಪಕ್ಕದ ಒಂದಿಬ್ಬರು ಸ್ಥಳದಲ್ಲೇ ಸಾವನ್ನು ಕಂಡಿದ್ದರು. ಗುರುನಾಥರ ಶಿಷ್ಯರಿಗೆ ಸಣ್ಣಪುಟ್ಟ ತರಚು ಗಾಯವಾಗಿತ್ತು. ಹಲ್ಲು ಮುರಿದುಹೋಗಿತ್ತು. ವ್ಯಾನಿನಲ್ಲಿ ಅವರನ್ನು ಆಸ್ಪತ್ರೆಗೆ ಕಳಿಸಲಾಗಿತ್ತು.

ಶಿವಮೊಗ್ಗದ ಕೆಲಸವೂ ಸರಿಯಾಗಲಿಲ್ಲವೆಂದು ವಾಪಸ್ಸು ಅಂದೇ  ಹೊರಟು ಸಖರಾಯಪಟ್ಟಣಕ್ಕೆ ಇವರು ಬಂದಾಗ ಮೈ ಕೈ ತಡವಿ ಗುರುಗಳಿವರ ನೋವನ್ನು ಪರಿಹರಿಸಿದ್ದರು. ಗುರುನಾಥರು 'ಅಂತೂ ಬದುಕಿ ಬಂದು ಬಿಟ್ಟ, ಬದುಕಿ ಬಂದುಬಿಟ್ಟ' ಎನ್ನುತ್ತಿದ್ದರಂತೆ. ಇದು ಯಾರನ್ನು ಕುರಿತಾಗಿ ಹೇಳಿದ್ದೆಂಬುದನ್ನು ಶಿವಮೊಗ್ಗಕ್ಕೆ ಹೋದವರು ವಾಪಸ್ ಬಂದಾಗ ತಿಳಿಯತಂತೆ. ಹೀಗೆ ತಮ್ಮನ್ನು ನಂಬಿದವರನ್ನು ಮೃತ್ಯುವಿನಿಂದಲೂ ಪಾರು ಮಾಡುವ ಗುರುನಾಥರ ಕರುಣೆಗೆ ಕೊನೆ ಎಲ್ಲಿದೆ.

ಮತ್ತೊಮ್ಮೆ ಈ ಭಕ್ತರು, ಇಬ್ಬರು ಮಕ್ಕಳ ಚೌಲಕರ್ಮ, ಹಾಗೂ ಉಪನಯನಗಳ ಬಗ್ಗೆ ಗುರುನಾಥರನ್ನು ಕೇಳಿದಾಗ, ಬೇಗ ಮಾಡಿ ಮುಗಿಸಿ, ಎಂದು ಅವಸರಿಸಿದರಂತೆ. ಯಾವುದೇ ಸೌಕರ್ಯಗಳನ್ನು ಮಾಡಿಕೊಂಡಿಲ್ಲಾ ಎಂದರೂ ನಾನಿದ್ದೇನೆ, ಹೇಳಿದ ದಿವಸವೇ ಮಾಡಿಬಿಡಯ್ಯಾ ಎಲ್ಲಾ ಆಗುತ್ತೆ ಎಂದು ಗುರುನಾಥರು ಭರವಸೆ ನೀಡಿದರಂತೆ. ಅದು ಹಾಗೇ ಎಲ್ಲವೂ   ಹೂವಿನ ಸರವೆತ್ತಿದಂತೆ ಮುಗಿಯಿತು.

ಮಗನ ಉಪನಯನ ಅದ್ದೂರಿಯಾಗಿ ಆಯಿತು. ಎಲ್ಲರ ಊಟವೂ ಮುಗಿಯಿತು. ಆದರೆ ವಟುವಿನ ತಂದೆ ತಾಯಿಗಳು ಮಾತ್ರಾ ಎಷ್ಟೊತ್ತಾದರೂ ಊಟ ಮಾಡಲೊಪ್ಪಲಿಲ್ಲ. ಏಕೆಂದರೆ ಅವರು ಮನದಲ್ಲಿ ದೃಢ ನಿಶ್ಚಯ ಮಾಡಿಬಿಟ್ಟಿದ್ದರಂತೆ. 'ಇಷ್ಟೆಲ್ಲಾ ನಿಂತು ನಡೆಸಿದ ಗುರುನಾಥರು ಬಂದು ಊಟ ಮಾಡುವವರೆಗೆ ನಾವು ಊಟ ಮಾಡುವುದಿಲ್ಲ' ಎಂದು.

ಗುರುನಾಥರಿಗೆ ತಿಳಿಯದ ವಿಚಾರ ಯಾವುದಿದೆ. ಮಧ್ಯಾನ್ಹವೂ ಕಳೆಯಿತು. ಇದ್ದಕ್ಕಿದ್ದಂತೆ ಗುರುಗಳ ಆಗಮನವಾಗಿಯೇ ಬಿಟ್ಟಿತು. 'ನಡಿಯಯ್ಯಾ ನನಗೆ ಗೊತ್ತು. ನಾನು ಬರದಿದ್ದರೆ ನೀವಿಬ್ಬರೂ ಉಪವಾಸವಿರುತ್ತೀರಿ ಅಂತ.... ಎಲ್ಲಿ ಎಲೆ ಹಾಕಿ' ಎಂದು ತಾವೂ ಕುಳಿತು ಊಟ ಮಾಡಿ ಇವರಿಗೂ ಊಟ ಮಾಡಿಸಿದರಂತೆ.

ಮುಂದೊಂದು ದಿನ.... ಆ ಮನೆಯೊಡತಿಗೆ ಅನೇಕ ವರ್ಷಗಳಿಂದ ಬರುತ್ತಿದ್ದ ಹೊಟ್ಟೆ ನೋವಿನ ವಿಚಾರ ಗುರುಗಳಿಗೆ ತಿಳಿಯಿತು. ಎಲ್ಲೆಲ್ಲೂ ದೊಡ್ಡ ದೊಡ್ಡ ಡಾಕ್ಟರಿಗೆ ತೋರಿಸಿ ಚಿಕಿತ್ಸೆ ಮಾಡಿಸಿದ್ದರೂ ಹೊಟ್ಟೆ ನೋವು ಹೋಗಿರಲಿಲ್ಲ. ಅಂದು ಅವರ ಮನೆಗೆ ಬಂದ ಗುರುನಾಥರು, ಏನೋ ಚಿಕಿತ್ಸೆ ಮಾಡಿದರು. 'ನೋಡಯ್ಯ ನಾಳೆ ಬೆಳಿಗ್ಗೆ ಮುಂಚೆ, ಮಂಜು ಮುಸುಕಿರುವಾಗಲೇ ನಿನ್ನ ಹೆಂಡತಿಯು ಧರಿಸಿರುವ ಕುಪ್ಪಸವನ್ನು ತೆಗೆದುಕೊಂಡು ಹೋಗಿ ಊರ ಹೊರಗಿನ ಬಸವನಹಳ್ಳಿ ಕೆರೆಯಲ್ಲಿ ಎಸೆದು ಬಂದು ಬಿಡು. ಹಿಂದೆ ತಿರುಗಿ ನೋಡಬೇಡ ಎಂದರಂತೆ. ಗುರುವಾಕ್ಯ ಪ್ರಮಾಣವೆಂದು ನಂಬಿದ ಆ ಭಕ್ತರು ಅದೇ ರೀತಿ ನಡೆದುಕೊಂಡರು. ಈಗ ಹೊಟ್ಟೆ ನೋವು ಒಂದು ದಿನವೂ ಬಂದಿಲ್ಲ. ಭವರೋಗ ವೈದ್ಯನಾದ ಗುರುನಾಥರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುತ್ತಾರೆ, ಆ ದಂಪತಿಗಳು. ಇಂದು ಗುರುನಾಥರ ನಾಮಸ್ಮರಣೆಯಲ್ಲಿ ಅತ್ಯಂತ ಸುಖವಾಗಿದ್ದಾರೆ ಅವರುಗಳು.

ಬೆಂಗಳೂರು ಕಡೆಗೆ ಹೋಗಿಬಿಡು 


ಆ ಮನೆಯ ಯಜಮಾನನಿಗೆ ಗುರುನಾಥರು 'ನೋಡಯ್ಯಾ ನಾಗೇಶ ನೀನು ಊರು ಬಿಟ್ಟು ಬೆಂಗಳೂರು ಕಡೆ ಹೋಗಯ್ಯ ಒಳ್ಳೆಯದಾಗುತ್ತೆ' ಎಂದರಂತೆ. ಇವರು 'ಗುರುನಾಥರೇ ಚಿಕ್ಕಮಗಳೂರೆಲ್ಲಿ, ಬೆಂಗಳೂರೆಲ್ಲಿ' ಎಂದು ಬೆದರಿದಾಗ 'ಬೆಂಗಳೂರಲ್ಲದಿದ್ದರೂ ಅದರ ಸನಿಹದ ಊರಾದ ತುಮಕೂರಿಗಾದರೂ ಆಯ್ತು' ಎಂದರು. ಗುರುನಾಥರ ಕೃಪೆಯಿಂದ ಅವರಲ್ಲಿ ಒಳ್ಳೆಯ ಸ್ಥಿತಿ ತಲುಪಿದ್ದಲ್ಲದೇ, ಶಿವಗಂಗೆಯ ಶ್ರೀಗಳ ಪರಿಚಯ, ಶಿವಗಂಗಾ ಸಂಸ್ಥಾನದ ಶ್ರೀರಕ್ಷೆಯನ್ನು ಕೊಡಿಸಿ, 'ಇವನನ್ನು ನೀವು ಮುಂದುವರೆಸಿಕೊಂಡು ಹೋಗಬೇಕು. ಬಹಳ ವಿನೀತನಾಗಿರುತ್ತಾನೆ. ನಂಬಿಕೆಯ ವ್ಯಕ್ತಿ' ಎಂದು ಗುರುನಾಥರು ಶಿವಗಂಗೆಯ ಶ್ರೀಗಳಿಗೆ ಪರಿಚಯಿಸಿ ಹಲವು ಸಾಧು ಸಂತರ, ಗುರುಗಳ ನಿರಂತರ ಸಹವಾಸ ದೊರಕುವಂತೆ ಗುರುನಾಥರು ಕರುಣಿಸಿದ ವಿಚಾರವನ್ನವರು ಸ್ಮರಿಸುತ್ತಾರೆ.



ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 



।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

No comments:

Post a Comment