ಒಟ್ಟು ನೋಟಗಳು

Thursday, November 10, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 37


ಮಾತು ಬಿದ್ದ ವ್ಯಕ್ತಿಗೆ ಮಾತು ಬಂತು 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಆ ವ್ಯಕ್ತಿ ಆಗಾಗ್ಗೆ ಸಖರಾಯಪಟ್ಟಣಕ್ಕೆ ಗುರುದರ್ಶನಕ್ಕಾಗಿ ಬರುತ್ತಿದ್ದರು. ಗುರುನಾಥರು ಕೂಡ ಅವರ ಮನೆಗೆ ಹೋಗಿ ಬರುತ್ತಿದ್ದರು. 

ಒಂದು ದಿನ ಆ ವ್ಯಕ್ತಿಯ ಪತ್ನಿ ಕರೆ ಮಾಡಿ ಗಾಬರಿಯಿಂದ ಹೀಗೆ ಹೇಳಿದರು: "ಇಂದು ಬೆಳಿಗ್ಗೆ ನನ್ನ ಪತಿಗೆ ಮಾತು ಬಿದ್ದು ಹೋಗಿದೆ" ಎಂದು ತಿಳಿಸಿದರು. ಕೂಡಲೇ ಗುರುನಾಥರು ಈ ಚರಣದಾಸನನ್ನು ಅಲ್ಲಿಗೆ ಕಳಿಸಿದರು. ಗುರು ನಿವಾಸದಿಂದ ಅಲ್ಲಿಗೆ ಬಸ್ಸಿನಲ್ಲಿ ಸುಮಾರು ಎರಡು ಮೂರು ಗಂಟೆ ಪ್ರಯಾಣ. 

ನಾನು ಅವರ ಮನೆಗೆ ಹೋದಾಗ ಅವರ ಪತ್ನಿ ಹೀಗೆ ಹೇಳಿದರು: "ಬೆಳಿಗ್ಗೆ ಇದ್ದಕ್ಕಿದ್ದಂತೆ ಮನೆಯವರು ಅಮ್ಮಾ ಎಂದು ಕೂಗಿ ಬಿದ್ದರು. ನಾನು ದಿಕ್ಕು ತೋಚದೆ ಗುರುನಾಥರು ನೀಡಿದ ವಸ್ತುವನ್ನು ಅವರ ತಲೆ ಮೇಲಿರಿಸಿದೆ. ಆ ನಂತರ ಅವರು ಎದ್ದು ಕುಳಿತರಾದರೂ ಏನೇ ಪ್ರಯತ್ನಪಟ್ಟರೂ ಮಾತನಾಡಲಾಗುತ್ತಿಲ್ಲ" ಎಂದು ತಿಳಿಸಿದರು. 

ನಂತರ ನಾನು ಗುರುನಾಥರ ಅಣತಿಯಂತೆ ಅವರನ್ನು ಚಿಕ್ಕಮಗಳೂರಿನ ಗುರು ಬಂಧುಗಳ ಮನೆಗೆ ಕರೆದುಕೊಂಡು ಬಂದು ಅಲ್ಲಿಂದ ನೇರವಾಗಿ ಗುರುನಿವಾಸಕ್ಕೆ ಬಂದೆನು. ಗುರುನಾಥರು ಇನ್ನೊಂದು ಮನೆಯಲ್ಲಿ ಮಲಗಿದ್ದರು. ನಾವು ಬಂದ ವಿಚಾರ ತಿಳಿದ ಗುರುನಾಥರು ಎದ್ದು ಈ ಮನೆಗೆ ಬಂದರು. ಅದಕ್ಕೂ ಮುನ್ನ ಈ ಚರಣದಾಸನನ್ನು ಕರೆದು, ತಾನು ಮಲಗಿದ್ದ ಆ ಹಾಸಿಗೆ ಮಾಡಿಸಬಾರದೆಂದು ಹಾಗೂ ಯಾರೂ ಅದರ ಮೇಲೆ ಮಲಗಬೇಡಿರೆಂದು ತಿಳಿಸಿ ಬಂದರು. 

ಆ ವ್ಯಕ್ತಿ ನಮಸ್ಕರಿಸಿದರು. ಗುರುನಾಥರು ಅವರನ್ನು ಕರೆದು ಒಳಗಿರುವ ಪಾದುಕೆಯ ಮುಂದೆ ಕುಳಿತು ಒಂದು ಅಧ್ಯಾಯ ಗುರುಚರಿತ್ರೆ ಓದಿರೆಂದು ಅವರಿಗೆ ತಿಳಿಸಿದರು. ಅವರು ಹಾಗೆಯೇ ಮಾಡಲು ಯಾವುದೋ ಒಂದು ಪದ ಅವರ ಬಾಯಿಂದ ಬಂತು. 

ನಂತರ ರಾತ್ರಿ ಊಟವಾಗಲು ಗುರುನಾಥರು ಮಲಗಿ ಹಾಗೆಯೇ ಬಿಟ್ಟಿದ್ದ ಹಾಸಿಗೆಯಲ್ಲೇ, ಆ ವ್ಯಕ್ತಿಗೆ ಮಲಗಲು ಸೂಚಿಸಿದರು. 

ಗುರುನಾಥರು ಅಲ್ಲೇ ಪಕ್ಕದ ಕೋಣೆಯಲ್ಲಿ ಮಲಗಿದರು. ಬೆಳಿಗ್ಗೆ ಸಾಮಾನ್ಯವಾಗಿ ಗುರುನಾಥರು ನಾಲ್ಕು ಗಂಟೆ ಸುಮಾರಿಗೆ ಏಳುವ ಪರಿಪಾಠವಿತ್ತು. ಹಾಗೆಯೇ ಆ ವ್ಯಕ್ತಿಯೂ ಎದ್ದು ಬಂದು ಗುರುನಾಥರೊಡನೆ ಮಾತನಾಡಲಾರಂಭಿಸಿದರು. 

ಎಲ್ಲ ತಿಳಿದಿದ್ದ ಗುರುನಾಥರು ಆ ವ್ಯಕ್ತಿಗೆ ಮಾತು ಬಿದ್ದು ಹೋದ ಘಟನೆಯನ್ನು ನೆನಪಿಸಲಿಲ್ಲ. "ಈಗ ಮಾತು ಬಂತಲ್ಲ ಬಿಡಿ" ಎಂದು ಹೇಳಲೂ ಇಲ್ಲ. ಎಂದಿನಂತೆಯೇ ಕುಳಿತರು. 

ನಾನೂ ಅದನ್ನು ಮರೆತಿದ್ದೆ. ಬೆಳಗಿನ ಜಾವ ಅಮ್ಮ ಕಾಫಿ ನೀಡುತ್ತಾ, ಆ ವ್ಯಕ್ತಿ ಮಾತನಾಡುತ್ತಾ ಇರೋದನ್ನ ಗಮನಿಸಿ "ಏನು? ಯಾವಾಗ ಮಾತು ಬಂತು?" ಎಂದು ಪ್ರಶ್ನಿಸಿದಾಗ, ಆ ವ್ಯಕ್ತಿಗೆ ತನಗೆ ಹಿಂದಿನ ದಿನ ಮಾತು ಬಿದ್ದು ಹೋದ ಘಟನೆ ನೆನಪಾಯ್ತು. 

ಆ ವ್ಯಕ್ತಿ ಗುರುನಿವಾಸದಿಂದ ಹೊರಟ ನಂತರ ಮಾತು ಬಿದ್ದು ಹೋಗಲು ಕಾರಣವೇನೆಂದು ಗುರುನಾಥರು ತಿಳಿಸಿದರು. "ಗುರು ನಿಂದೆ ಮಾಡಿದಾನೆ ಕಣೋ. ಅದಕ್ಕೆ ಹಾಗಾಯ್ತು" ಎಂದರು......,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment