ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 38
ಮಳೆ ನಿಂತು ಹೋಯ್ತು . ಕೆರೆ ತುಂಬಿದವು
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರ ನಿವಾಸಕ್ಕೆ ಸಾಧು ಸಂತರು, ಮಠಾಧಿಪತಿಗಳು ಭೇಟಿ ನೀಡುವುದು ಸಾಮಾನ್ಯವಾಗಿತ್ತು. ಒಂದು ವಿಶ್ವ ವಿಖ್ಯಾತ ಮಠದ ಪೀಠಾಧಿಪತಿಗಳು ಪ್ರತಿ ವರ್ಷಕ್ಕೊಮ್ಮೆ ಬಿಎಂದು ಗುರುನಾಥರ ಮನೆಯಲ್ಲಿ ವಾಸ್ತವ್ಯ ಮಾಡಿ ಆಶೀರ್ವದಿಸಿ ಹೊರಡುವುದು ಪರಿಪಾಠವಾಗಿತ್ತು. ಆ ವರ್ಷ ಪೀಠಾಧಿಪತಿಗಳು ಬಂದಾಗ ಗುರುನಾಥರು "ಮರುದಿನ ಮಧ್ಯಾನ್ಹ ಊಟಕ್ಕೆ ಮೂರುವರೆ ಸಾವಿರ ಜನರಾಗುವರು ಕಣಯ್ಯಾ" ಎಂದಿದ್ದರು. ಅವರೆಂದಂತೆಯೇ, ಮೂರುವರೆ ಸಾವಿರ ಜನರಾದ ನಂತರ ಒಂದು ಹುಲ್ಲು ಕಡ್ಡಿಯೂ ಊಟಕ್ಕೆ ಇರಲಿಲ್ಲವೆಂದರೆ ಆಶ್ಚರ್ಯವಲ್ಲ.
ಹಿಂದಿನ ದಿನ ಸಂಜೆ ಆ ಮಠದ ಪೀಠಾಧಿಪತಿಗಳು ಬಂದಾಗ ಇದ್ದಕ್ಕಿದ್ದಂತೆಯೇ ಮೋಡ ಕವಿದು ಮಳೆ ಹನಿ ಬೀಳಲಾರಂಭಿಸಿತು. ಜಗದ್ಗುರುಗಳ ಆಪ್ತರೊಬ್ಬರು ಹತ್ತಿರ ಬಂದು "ಸ್ವಾಮಿ ಮಳೆ ಬಂದ್ರೆ ಕಾರ್ಯಕ್ರಮಕ್ಕೆ ತೊಂದರೆ ಆಗ್ತದೆ ಆಲ್ವಾ" ಎಂದರು. ಆಗ ಗುರುನಾಥರು ಈ ಚರಣದಾಸನನ್ನು ಕರೆದು "ಒಂದು ಕಾಯಿ ತೊಗೊಂಡು ಬಾ" ಎಂದರು. ನಾನು ತಂದು ಕೊಟ್ಟೆ. ಗುರುನಾಥರು ಅದನ್ನು ಮುಟ್ಟಿ ರಸ್ತೆಯಲ್ಲಿ ಉರುಳಿ ಬಿಡು ಎಂದು ಹೇಳಿದರು. ನಾ ಹಾಗೆಯೇ ಮಾಡಿದೆ. ಅದಾಗಿ ಕೆಲವೇ ನಿಮಿಷದಲ್ಲಿ ದಟ್ಟವಾಗಿ ಕವಿದಿದ್ದ ಮೋಡ ಮರೆಯಾಗಿ ನೀಲಾಕಾಶ ಗೋಚರವಾಯಿತು.
ಮತ್ತೊಮ್ಮೆ ಬಹುಶಃ 2004-05 ರ ಕಾಲವೆನಿಸುತ್ತದೆ. ರಾಜ್ಯ ಭೀಕರ ಬರಗಾಲಎದುರಿಸುತ್ತಿತ್ತು . ಮಳೆಯಾಗದೆ ಜನತೆ ಪರಿತಪಿಸುತ್ತಿತ್ತು . ನಾನು ಆಗ ಬೆಂಗಳೂರಿನಲ್ಲಿದ್ದೆ.
ಗುರುನಾಥರು ಕರೆಮಾಡಿ ಎಲ್ಲ ಗುರು ಭಕ್ತರು ಮತ್ತೀಕೆರೆಯಲ್ಲಿ ಇರುವ ಗುರು ಭಕ್ತರ ಮನೆಯಲ್ಲಿ ಸೇರಿ, ಒಂದು ವಾರ ಕಾಲ ಪ್ರತಿ ನಿತ್ಯ ಅರುಣಪೂರ್ವಕ ಸೂರ್ಯ ನಮಸ್ಕಾರ ಮಾಡುವಂತೆ ತಿಳಿಸಿದರು. ಪ್ರತಿ ಒಂದು ಶ್ಲೋಕಕ್ಕೆ ಒಂದರಂತೆ ಒಟ್ಟು ನೂರಾ ಮೂವತ್ತು ಸೂರ್ಯ ನಮಸ್ಕಾರ ಹಾಕಬೇಕಿತ್ತು. ಗುರು ಕೃಪೆ ಈ ಚರಣದಾಸನಲ್ಲಿ ಆ ಚೈತನ್ಯ ತುಂಬಿತು. ಒಂದು ವಾರದ ಪೂಜೆ ಮುಗಿಯುತ್ತಿದ್ದಂತೆಯೇ ಮಳೆರಾಯನ ಆಗಮನ ಭರ್ಜರಿಯಾಗಿಯೇ ಆಯಿತು.
ಅರೆಮಲೆನಾಡು ಸೀಮೆಯಾದ ಸಖರಾಯಪಟ್ಟಣದಲ್ಲಿ ಪ್ರತಿ ವರ್ಷ ಮಳೆಯ ಸಮಸ್ಯೆ ಇರುತ್ತಿತ್ತು. ಊರಿನ ಜನತೆ ಬಂದು ಮಳೆ ಬಾರಿಸಿ ಕೆರೆ ತುಂಬುವಂತೆ ಮಾಡಿ ಎಂದು ಬೇಡುವುದು ಸಾಮಾನ್ಯ ಸಂಗತಿಯಾಗಿತ್ತು. ಜನರು ಬೇಡಲಿ, ಅಥವಾ ಬಿಡಲಿ, ಗುರು ಎಂದಿಗೂ ಕರುಣಾಮಯಿ. ಗುರುನಾಥರು ಮನೆಯಲ್ಲಿ ಸೌಂದರ್ಯಲಹರಿ ಹೇಳಿಸಿ, ಮುತ್ತೈದೆಯರಿಗೆ ಬಾಗಿನ ನೀಡಿ, ಸಿಹಿ ಊಟ ಹಾಕಿಸಿ ಅವರ ಕೈಯಿಂದಲೇ ಅಯ್ಯನ ಕೆರೆಗೆ ಪೂಜೆ ಸಲ್ಲಿಸುತ್ತಿದ್ದರು.
ಅದಾಗುತ್ತಿದ್ದಂತೆಯೇ ಒಂದೋ ಊರಿನಲ್ಲಿಯೇ ಯಥೇಚ್ಛ ಮಳೆ ಬಿದ್ದು ಕೆರೆ ತುಂಬುತ್ತಿತ್ತು ಅಥವಾ ಘಟ್ಟ ಪ್ರದೇಶದಲ್ಲಿ ಮಳೆಯಾಗಿ ನೀರು ಹರಿದು ಕೆರೆ ತುಂಬುತ್ತಿತ್ತು. ಈಗ ಗುರುನಾಥರ ದೇಹಾಂತ್ಯವಾದ ನಂತರ ಕೆರೆ ತುಂಬಿದ್ದು ಕಡಿಮೆಯೇ ಎನ್ನಬಹುದು.
ಒಮ್ಮೆ ಬಯಲುನಾಡಿನ ಗ್ರಾಮಸ್ಥರೊಬ್ಬರು ಬಂದು "ಸ್ವಾಮಿ, ನಮ್ಮೂರಿನಲ್ಲಿ ಮಳೆಯಾಗಿಲ್ಲ. ಕೆರೆ ಬತ್ತಿಹೋಗಿ ಬೆಲೆ ಒಣಗಿ ಹೋಗಿ ಜಾನುವಾರುಗಳು ಸಾಯುವ ಸ್ಥಿತಿ ತಲುಪಿವೆ. ತಾವು ಕೃಪೆ ಮಾಡಬೇಕು" ಎಂದು ಪ್ರಾರ್ಥಿಸಿದರು.
ಆಗ ಗುರುನಾಥರು ಅವರಿಗೆ "ಒಂದು ಆಮೆ ತಂದು ನಿಮ್ಮೂರ ಕೆರೆಗೆ ಬಿಡು. ತಕ್ಷಣ ಮಳೆ ಬಂದು ಕರೆ ತುಂಬುವುದು" ಎಂದರು. ಆಗ ಆ ವ್ಯಕ್ತಿ "ಆಮೆಯನ್ನು ಎಲ್ಲಿಂದ ತರಲಿ" ಎಂದು ಕೇಳಲು ಗುರುನಾಥರು "ಹೋಗೋ ದಾರಿಯಲ್ಲಿಯೇ ಸಿಗುತ್ತೆ. ತೊಗೊಂಡು ಹೋಗಯ್ಯಾ" ಎಂದರು. ಆ ವ್ಯಕ್ತಿ ಅಲ್ಲಿಂದ ಹೊರತು ತಮ್ಮೂರ ಮಾರ್ಗದಲ್ಲಿ ತುಸುದೂರ ಸಾಗಿರಲು ಗುರುನಾಥರು ಹೇಳಿದಂತೆಯೇ ಆಮೆಯೊಂದು ರಸ್ತೆ ದಾಟಿ ಹೋಗುತ್ತಿತ್ತು. ಅದನ್ನು ಎತ್ತಿಕೊಂಡು ಹೋಗಿ ಕೆರೆಗೆ ಬಿಟ್ಟರು. ಕೆಲವೇ ದಿನಗಳಲ್ಲಿ ವ್ಯಾಪಕ ಮಳೆ ಬಿದ್ದು ಕೆರೆ, ಕೊಡಿ ತುಂಬಿದವು.
ಮತ್ತೊಮ್ಮೆ ಜಗದ್ಗುರುಗಳು ಸಖರಾಯಪಟ್ಟಣಕ್ಕೆ ಬಂದ ಸಂದರ್ಭ. ಗುರುನಾಥರು ಎಂದಿನಂತೆಯೇ ಎಲೆ, ಅಡಿಕೆ ಹಿಡಿದು ಅಡುಗೆ ಮನೆಗೆ ಬಂದು ಅನ್ನಪೂರ್ಣೇಶ್ವರಿಗೆ ಪೂಜೆ ಸಲ್ಲಿಸಿ "ನಾಳೆ ಮಧ್ಯಾನ್ಹ ಆರು ಸಾವಿರ ಜನ ಊಟಕ್ಕಿರುವರು" ಎಂದರು. ಅಂತೆಯೇ ಆರು ಸಾರಿವೆ ಜನ ಎಲ್ಲಿಂದ ಬಂದರು? ಕರೆದವರಾರು? ಒಂದೂ ಗೊತ್ತಿಲ್ಲ. ಆದರೆ ಜನಗಳು ಮಾತ್ರ ಇರುವೆಗಳ ಸಾಲಿನಂತೆ ಬಂದರು. ಗುರುನಾಥರು ಹೇಳಿದಂತೆಯೇ ಆರು ಸಾವಿರ ಜನ ಆದ ನಂತರ ಆ ಜನಗಳೆಲ್ಲ ಎಲ್ಲಿ ಹೋದರು ಅಂತ ಗೊತ್ತಾಗದಂತಾಯಿತು.
ವಸ್ತ್ರ ವಿತರಣೆ, ಹಣ್ಣು, ಸಿಹಿ, ಊಟ ಯಾವುದಕ್ಕೂ ಕೊರತೆಯಿರಲಿಲ್ಲ. ಮಾತ್ರವಲ್ಲ, ಪ್ರತಿಯೊಬ್ಬರೂ ಚೀಲದಲ್ಲಿ ಮನೆಗೆ ಕೊಂಡು ಹೋಗುವಷ್ಟು ವಿತರಣೆ ಆಗುತ್ತಿತ್ತು. ಯಾರು ಯಾರಿಗೂ ಹೀಗೆ ಮಾಡು ಹಾಗೆ ಮಾಡು ಎಂದು ನಿಯಂತ್ರಿಸುತ್ತಿರಲಿಲ್ಲ.
ಆದರೆ ಎಲ್ಲವೂ ಶಿಸ್ತು, ಶಾಂತಿ, ಸ್ವಚ್ಛವಾಗಿ ನಡೆದವು. ಹಾಗಾದರೆ, ಅಲ್ಲಿದ್ದ ಎಲ್ಲರನ್ನು ನಿಯಂತ್ರಿಸಿದ, ಪ್ರೇರೇಪಿಸಿದ ಶಕ್ತಿ ಯಾವುದು? ಗುರುನಾಥರು ಎಂದೂ, ಯಾರನ್ನೂ ನಿಯಂತ್ರಿಸುತ್ತಿರಲಿಲ್ಲ. ಕೇವಲ ಒಂದು ಟವೆಲ್ ಉಟ್ಟು ಒಂದೆಡೆ ಕುಳಿತಿರುತ್ತಿದ್ದರು.
"ಹಾಗಾದರೆ, ಆ ನಿಯಂತ್ರಕ ಶಕ್ತಿ ದೇಹ ಭಾವವನ್ನು ಮೀರಿದ ಆ ಎರಡಕ್ಷರವೆ ಇರಬೇಕಲ್ಲವೇ?"..... ,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment