ಒಟ್ಟು ನೋಟಗಳು

Tuesday, November 29, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 17


ಕೇಳಿದ್ದೆ ಕಣ್ಣಾರೆ ಕಂಡೆ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಒಂದು ಪೀಠದ ಶ್ರೀಗಳು ಶಿವಮೊಗ್ಗದ ಮುಖಾಂತರ ತರೀಕೆರೆಗೆ ಹೋಗಿ ಮಾರನೆಯ ದಿನ ಅಲ್ಲೊಂದು ದೊಡ್ಡ ಕಾರ್ಯಕ್ರಮ ನಡೆಸಲಿದ್ದರು. ಶಿವಮೊಗ್ಗದ ಒಬ್ಬ ಭಕ್ತರು ಬಸ್ಸಿನಲ್ಲಿ ತರೀಕೆರೆಯಿಂದ ಬರುತ್ತಾ ಸಹ್ಯಾದ್ರಿ ಕಾಲೇಜಿನ ಬಳಿ, ಮರದ ನೆರಳಿನಲ್ಲಿ ಗುರುನಾಥರು ಕುಳಿತಿರುವುದನ್ನು ಕಂಡು ಆಶ್ಚರ್ಯದಿಂದ ನನ್ನ ಬಳಿ ಬಂದು ತಿಳಿಸಿದರು... ಎಂದು ಶಿವಮೊಗ್ಗದ ಒಬ್ಬ ರಾಮಭಕ್ತರೂ, ಗುರುನಾಥರ ಆರಾಧಕರೂ ಆದ ಗುರುಬಂಧು ಒಬ್ಬರು ಗುರುನಾಥರ ಲೀಲಯನ್ನು ಪ್ರಾರಂಭಿಸಿದರು. 

"ನಾನು ರಿಕ್ಷಾ ಮಾಡಿಕೊಂಡು ಇನ್ನೊಂದಿಬ್ಬರ ಜೊತೆ ಅಲ್ಲಿಗೆ ಹೋದೆ. ಮಹಾನುಭಾವರು ಅತ್ಯಂತ ಸರಳರಂತೆ ರಸ್ತೆ ಬದಿಯಲ್ಲಿ ಕುಳಿತಿದ್ದರು. ಅದೆಷ್ಟು ಹೊತ್ತಿನಿಂದ ಅಲ್ಲಿ ಕಾಯುತ್ತಿದ್ದರೋ, ಗುರುನಾಥರಿಗೆ ನಮಿಸಿದೆ. 'ಬನ್ನಿ ಆರೋಗ್ಯವೇ ಒಂದು ಕುರ್ಚಿ ತಂದು ಕೊಡಯ್ಯ ಇವರಿಗೆ' ಎಂದರು. ನಾನು ಬೇಡವೆಂದು ಮರದ ಬೊಡ್ಡೆಯ ಮೇಲೆ ಕುಳಿತುಕೊಂಡೆ. ಗುರುನಾಥರು ತಮಾಷೆ ಮಾಡುತ್ತಾ 'ಬಹಳ ಬುದ್ಧಿವಂತರಪ್ಪ. ಈ ಕುರ್ಚಿ ಯಾರದ್ದೋ. ಯಾವಾಗ ಬೇಕಾದರೂ ತೆಗೆದುಕೊಂಡು ಹೋಗಬಹುದು. ಮರದ ಬೊಡ್ಡೆಯಿಂದ ಏಳುವ ಪ್ರಸಂಗ ಬರುವುದಿಲ್ಲ. ಯಾರೂ ಏಳಿಸುವುದಿಲ್ಲ ' ಎಂದರು. ಸಂಜೆ ಆರು, ಏಳು, ಎಂಟು ಗಂಟೆಯೂ ಆಯಿತು. ನಾವಾದರೆ ಅರ್ಧ ಗಂಟೆ ಕಾದು, ಬಂದ ಮೇಲೆ ತಿಳಿಸು ಎಂದು ಯಾರಿಗಾದರೂ ವಹಿಸಿ ಹೋಗುತ್ತಿದ್ದೇವೇನೋ. ಎಂಟೂವರೆಗೆ ಯಾರಿಗೋ ಏನೋ ಗುರುನಾಥರು ಹೇಳಿದರು. ಊಟ ಸಿದ್ಧವಾಗಿ ಬಂದಿತು. ಅಲ್ಲಿದ್ದವರಿಗೆಲ್ಲಾ ಸಂತರ್ಪಣೆಯಂತೆ, ಆ ರಸ್ತೆಯಲ್ಲೇ ವಿತರಿಸಿದರು.... ಮುಂದೆ ಒಂಬತ್ತು  ಒಂಬತ್ತೂವರೆಗೆ, ಗುರುನಾಥರು ಕಾಣಬೇಕಿದ್ದ ಪೀಠದ ಶ್ರೀಗಳ ಕಾರು ಬಂದಿತು. ಗುರುನಾಥರು ಎದ್ದು ಹೋಗಿ ಆ ಶ್ರೀಗಳಿಗೆ ತೋರಿಸಿದ ಅನುನಯ ವಿನಯಗಳು, ಅಲ್ಲಿದ್ದ ನಮಗೆ, ಗುರುಗಳೊಂದಿಗೆ ಹೇಗೆ ವಿನೀತರಾಗಿರಬೇಕೆಂಬುದನ್ನು ನಿರ್ದೇಶಿಸುವ ಪಾಠದಂತಿತ್ತು. ಮುಂದೆ ಗುರುನಾಥರು ಆ ಶ್ರೀಗಳೊಂದಿಗೆ ಮಾತನಾಡಿ ನಂತರ ತಮ್ಮ ಕಾರಿನ ಡಿಕ್ಕಿಯಿಂದ ಒಂದೊಂದೇ ವಸ್ತುಗಳನ್ನು ತಂದು ಅರ್ಪಿಸುತ್ತಿದ್ದರು. ಶ್ರೀಗಳ ಕಾರು ತುಂಬಿತು. ಹಿಂದಿದ್ದ ವ್ಯಾನು ತುಂಬತೊಡಗಿತು. ಕಾರಿನ ಡಿಕ್ಕಿಯಲ್ಲಿ ಏನಿತ್ತು, ಎಷ್ಟಿರಲು ಸಾಧ್ಯ? ಗುರುನಾಥರು ಕೈಯಲ್ಲಿ ತಂದು ತುಂಬುವಲ್ಲಿ ಎಲ್ಲವೂ ಅಪಾರವಾಗುತ್ತಿದ್ದವು. ನಾಳಿನ ಕಾರ್ಯಕ್ರಮಕ್ಕೆ ಬೇಕಾದ ಅಕ್ಕಿ, ಬೇಳೆ, ಬೆಲ್ಲ, ತರಕಾರಿ, ಹಣ್ಣು, ಹಂಪಲು ಎಲ್ಲವೂ ಒಂದಾದ ಮೇಲೆ ಒಂದರಂತೆ ಶ್ರೀಗಳ ವ್ಯಾನು ತುಂಬಿ ಹೋಯಿತು. ನೋಡುತ್ತಿದ್ದ ನನಗೆ ಅಕ್ಷಯ ಭಂಡಾರದ ದರ್ಶನ ಮಾಡಿಸಿದ್ದರು ಗುರುನಾಥರು. ಅದೆಲ್ಲಿಂದ ಸೃಷ್ಠಿಯಾಗಿ ಬರುತ್ತಿತ್ತೋ ಕೊನೆಗೆ 'ಬಹಳ ಸಮಯವಾಯಿತು. ನೀವೆಲ್ಲಾ ಹೋಗಿ ಬನ್ನಿರೆಂದು' ನಮಗೆ ಆಶೀರ್ವದಿಸಿದಾಗ - ಸದ್ಗುರುನಾಥಾ ಕೇಳಿದ್ದೆ. ಒಳ್ಳೆಯ ಸಮಯದಲ್ಲಿ ಕಣ್ಣಾರೆ ಕಾಣುವ ಅವಕಾಶವನ್ನು ಒದಗಿಸಿದಿರಲ್ಲಿ, ಮನದಲ್ಲೇ ನೆನೆಯುತ್ತಾ ನಾವೆಲ್ಲಾ ಮನೆಗೆ ಬಂದೆವು. ಇನ್ನೂ ಇಂತಹ ಘಟನೆಗಳಿವೆ. ನೆನಪಿಗೆ ಬರುತ್ತಿಲ್ಲ" ಎಂದರು. 

ದೇವರ ದರ್ಶನವಾಯ್ತು ಮನೆಗೆ ನಡೆಯಿರಿ 

ಇದೇ  ರಾಮಭಕ್ತರಿಗೆ ಗುರುನಾಥರು ನೀಡಿದ ಇನ್ನೊಂದು ವಿಚಿತ್ರ ಅನುಭವವನ್ನು ಅವರಿಂದಲೇ ಕೇಳೋಣ ಬನ್ನಿ. 

"ಅಂದು ಬೆಂಗಳೂರಿನಲ್ಲಿದ್ದೆ. ಆಂಜನೇಯನ ದರ್ಶನ ಮಾಡಿ ಬರೋಣವೆಂದು ನಮ್ಮ ಪರಿವಾರದೊಂದಿಗೆ ಹೊರಟೆವು". ಸಂಜೆ ಸುಮಾರು ಐದು ಗಂಟೆ ಇರಬಹುದು. ಹೋಗುತ್ತಿದ್ದ ಕಾರು, ಒಂದು ಮನೆಯ ಎದುರು ಇದ್ದಕ್ಕಿದ್ದಂತೆ ನಿಂತುಬಿಟ್ಟಿತು. ಡ್ರೈವ್ ಮಾಡುತ್ತಿದ್ದವರು, ಕೆಳಗಿಳಿದು ಬಾನೆಟ್ ಎತ್ತಿ ಪರೀಕ್ಷಿಸುತ್ತಿದ್ದರು. ನಾನು ಕಾರಿನಿಂದ ಕೆಳಗಿಳಿದು ಅತ್ತಿತ್ತ ನೋಡುತ್ತಿದ್ದಾಗ ನಮ್ಮ ಜೊತೆಗಿದ್ದವರು 'ಮಾಮಾ ಕಾಫಿ ಎಂದು ಯಾರಾದರೂ ಮನೆಗೆ ಹೋದೀರಾ. ಮೊದಲೇ ನಿಮಗೆ ಕಾಫಿ ಹುಚ್ಚು' ಎಂದು ತಮಾಷೆ ಮಾಡಿದರು. ಇಲ್ಲೆಲ್ಲಿ, ನನಗ್ಯಾರೂ ಪರಿಚಯವಿಲ್ಲ. ಇನ್ನು ಕಾಫಿ ಕೊಡೋರು ಯಾರು? ಎಂದೆ. ಇದಾದ ಒಂದೈದು ನಿಮಿಷದಲ್ಲಿ, ಆ ಎದುರು ಮನೆಯ ಬಾಗಿಲು ತೆರೆಯಿತು. ಆ ಮನೆಯ ತಾಯಿ 'ಬನ್ನಿ ಬನ್ನಿ ಒಳಗೆ ಬನ್ನಿ' ಎಂದು ಗೌರವದಿಂದ ಕರೆದರು. 'ಇಲ್ಲಾ ಇನ್ನೇನು ಹೊರಡ್ತೀವಿ. ಅಲ್ಲದೆ ಇನ್ನೂ ಜನರಿದ್ದಾರೆ ಕಾರಲ್ಲಿ' ಎಂದೆ. ಅದಕ್ಕೆ ಅವರು 'ಅವರೂ ಬರ್ತಾರೆ... ನೀವು ಒಳಗೆ ಹೋಗಿ' ಎಂದರು. ಒಳಗೆ ಹೋದ ನನಗೆ ಕಂಡಿದ್ದು ಗುರುನಾಥರ ಚಿತ್ರ. ಇದೇನು ಇವರ ಚಿತ್ರ ಎಂದೆ. ಅದಕ್ಕವರು ನಮ್ಮ ಗುರುಗಳು. ಬನ್ನಿ ಎಲ್ಲಾ ಕಾಫಿ ಕುಡಿಯಿರಿ, ಎಂದು ಎಲ್ಲರಿಗೂ ಕಾಫಿ ಹಂಚಿದರು. ನಾನು ಗುರುನಾಥರ ಚಿತ್ರಕ್ಕೆ ನಮಿಸಿದೆ. ಆಗ ಮನೆಯೊಡತಿ ಹೇಳಿದರು. 'ನೀವು ಬರುತ್ತೀರಿ. ನಿಮಗೆ ಕಾಫಿ ಕೊಟ್ಟು ಕಳಿಸಬೇಕೆಂದು ನಿನ್ನೆಯೇ ಗುರುನಾಥರು ತಿಳಿಸಿದ್ದರು' ಎಂದಾಗ ನಮಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ನಮ್ಮನ್ನು ನೀವು ಗುರುತಿಸಿದ್ದಾದರೂ ಹೇಗೆ? ಎಂದು ಪ್ರಶ್ನಿಸಿದಾಗ ಅದನ್ನೂ ಗುರುನಾಥರೇ ತಿಳಿಸಿದ್ದರು. 'ಕಪ್ಪು ಬಣ್ಣದ ಕಾರು, ನಿಮ್ಮ ಮನೆ ಬಾಗಿಲಲ್ಲೇ ನಿಲ್ಲುತ್ತೆ. ಒಬ್ಬರು ನಾಮ ಹಾಕಿಕೊಂಡಿರುತ್ತಾರೆ. ಅವರ ಪಕ್ಕದಲ್ಲಿ ಅವರ ಮನೆಯವರು ಇರುತ್ತಾರೆಂದು ಎಲ್ಲಾ ಹೇಳಿದ್ದರು'.... ಎಂದರು. ಗುರುನಾಥರ ಲೀಲೆಗಳನ್ನು ನಾನೊಂದು, ಅವರೊಂದು ಹೀಗೆ ಹೇಳುತ್ತಾ ಸತ್ಸಂಗ ನಡೆಯುತ್ತ ರಾತ್ರಿ ಒಂಬತ್ತು ಗಂಟೆಯಾದುದು ನಮ್ಮ ಅರಿವಿಗೇ ಬಂದಿರಲಿಲ್ಲ. ನಾವು ಹೊರಡುತ್ತೇವೆ ಎಂದು ಎದ್ದಾಗ - ಆ ತಾಯಿ ಉಪ್ಪಿಟ್ಟು ಸಜ್ಜಿಗೆ ಕೊಡದೆ ಕಲಿಸಬೇಡ ಎಂದಿದ್ದಾರೆ ಎಂದು ಹೇಳುತ್ತಾ ಅವನ್ನೆಲ್ಲಾ ನೀಡಿದರು. ಎಲ್ಲ ಮುಗಿಸಿಕೊಂಡು 'ನಡೆಯಿರಿ ಮನೆಗೆ' ಎಂದಾಗ, ಎಲ್ಲರೂ ದೇವಸ್ಥಾನ ಎಂದರು. ದೇವರ ದರ್ಶನವೇ ಆದ ಮೇಲೆ ದೇವಸ್ಥಾನವೇಕೆ ಎಂದು ಮನೆಗೆ ನಡೆದೆವು". 

ನಾನು ಬಂದು ಎಷ್ಟೊತ್ತು ಆಯ್ತು ಕಾಫಿ ಕೊಡಲ್ವಾ


ಶಿವಮೊಗ್ಗದ ರಾಮಭಕ್ತರೊಬ್ಬರು ದೈವಾಧೀನರಾಗಿದ್ದರು. ನೂರಾರು ಜನಗಳು ಸೇರಿದ್ದರು. ಯಾರೋ ಒಂದು ದೊಡ್ಡ ಪಾತ್ರೆಯಲ್ಲಿ ಬಿಸಿ ಬಿಸಿ ಇಡ್ಲಿಯನ್ನು ಕಳಿಸಿದ್ದರು. ಏತಕ್ಕಿದು? ಎಂದು ಕೇಳಿದಾಗ ಎಲ್ಲರಿಗೂ ಕೊಡಬೇಕಂತೆ, ಎಂದರು. ಆದರೆ, ಸಾವಿನ ಮನೆಯಲ್ಲಿ ಇದನ್ನು ಹೇಗೆ ತೆಗೆದುಕೊಳ್ಳುವುದೆಂದು ವಾಪಸ್ಸು ಕಳಿಸಿದಾಗ- ಕೆಲ ಸಮಯದಲ್ಲೇ ಅದು ವಾಪಸ್ಸು ಬಂದಿತು. ತಂದವರು ಹೇಳಿದರು 'ಸಖರಾಯಪಟ್ಟಣ ಗುರುಗಳು ಮತ್ತೆ ಹೇಳಿ ಕಳಿಸಿದ್ದಾರೆ.. ಇದನ್ನು ತೆಗೆದುಕೊಳ್ಳಲೇಬೇಕಂತೆ' ಅವಧೂತರ ಆಜ್ಞೆಯನ್ನು ಮೀರುವವರ್ಯಾರು. ಮೃತರ ಬಂಧುಗಳು ಇಡ್ಲಿ ಪಾತ್ರೆಯನ್ನು ತಮ್ಮ ಪಕ್ಕದವರ ಮನೆಯಲಿ ಇಡಿಸಿ 'ಅಂತಿಮಯಾತ್ರೆಗೆ ಬಂದ ಎಲ್ಲರಿಗೂ ಇದನ್ನು ಹಂಚಿಬಿಡಿ, ಎರಡು ಇಡ್ಲಿಯನ್ನು ಮಾತ್ರ ತೆಗೆದಿಡಿ-  ಆಮೇಲೆ ಕೇಳಿದಾಗ ಕೊಡಿ' ಎಂದಿಡಿಸಿದರು. ಬಂದವರಿಗೆಲ್ಲಾ ಇಡ್ಲಿ ಸಂತರ್ಪಣೆಯಾಯ್ತು ಸಾವಿನ ಮನೆಯಲ್ಲಿ ಹಸಿವು ಜಾಸ್ತಿ ಎಂದು ಗುರುನಾಥರಿಗರಿಯದೆ? 

ಮುಂದೆ ಅಂತ್ಯಕ್ರಿಯೆ ಮುಗಿಸಿಬಂದ ಅವರು ಆ ಎರಡು ಇಡ್ಲಿಯನ್ನು ತರಿಸಿ ಮನೆಯವರಿಗೆಲ್ಲಾ ಒಂದೊಂದು ಚೂರು ನೀಡಿ ತಾವೂ ತಿಂದು, ಸಖರಾಯಪಟ್ಟಣದ ಅವಧೂತರ ಪ್ರಸಾದವಿದೆಂದರು.

ಅವಧೂತರ ಅನೇಕ ವಿಚಾರಗಳು ಅಲ್ಲಿ ಬಂದವು. ಅಂತ್ಯಕ್ರಿಯೆಗೆ ಬಂದವರೆಲ್ಲಾ ಇದನ್ನು ಕೇಳಿ 'ಮಾಮಾ ನಾವೂ ಒಂದು ದಿನ ಸಖರಾಯಪಟ್ಟಣಕ್ಕೆ ಹೋಗೋಣ' ಎಂದಾಗ ಮತ್ಯಾರೋ 'ನಾವು ಹೋಗುವುದೇನು ಬೇಡ. ಅವರೇ ಇಲ್ಲಿಗೆ ಬರುತ್ತಾರೆ' ಎಂದುಬಿಟ್ಟರು. 

ನಾಲ್ಕನೆಯ ದಿನ ಬೆಳಗಿನ ಒಂಬತ್ತಿರಬಹುದು. ಅವಧೂತರು ದೇವಸ್ಥಾನಕ್ಕೆ ಬಂದು ಬಿಟ್ಟರಂತೆ. ಬೇರೆ ಯಾರಿಗೋ ತಿಳಿಸಿ ತೀರ್ಥಪ್ರಸಾದ ಕೊಡುವ ವ್ಯವಸ್ಥೆ ಮಾಡಿಸಿದ್ದಾಯಿತು. ನಂತರ ಅವರು ನೇರವಾಗಿ ಸತ್ತವರ ಮನೆಯ ಒಳಗೆ ಹೋದರು. ಅವರೊಂದಿಗೆ ಇನ್ನೂ ಅನೇಕರಿದ್ದರು. ಎಲ್ಲರನ್ನೂ ಕರೆದು ಕುರ್ಚಿ ಹಾಕಿದರು. ಸ್ವಲ್ಪ ಹೊತ್ತು ಕುಳಿತ ಗುರುನಾಥರು 'ಏನು ನಾನು ಬಂದು ಇಷ್ಟೊತ್ತಾಯ್ತು. ಕಾಫಿ ಗೀಫಿ ಕೊಡಲ್ವಾ" ಎಂದಾಗ, ಆ ಮನೆಯವರು ಪಕ್ಕದ ಮನೆಯಿಂದ ಕಾಫಿ ತರಿಸಲು ಯಾರಿಗೋ ಹೇಳಿದಾಗ ಮತ್ತೆ 'ಯಾಕೆ ನಿಮ್ಮಲ್ಲಿ ಕಾಫಿ ಮಾಡುವುದಿಲ್ಲವಾ? ಅಥವಾ ಕಾಫಿ ಇದೆಯೋ ಇಲ್ಲವೋ? ಪಕ್ಕದ ಮನೆಯ ಕಾಫಿ ಏಕೆ? ನಿಮ್ಮ ಮನೇದೇ ಕೊಡಿರಿ' ಎಂದರು. ಬೆಳ್ಳಿ ಲೋಟದಲ್ಲಿ ಕಾಫಿ ತಂದು ಕೊಟ್ಟಾಗ ಬೆಳ್ಳಿ ಬೇಡ ಬಹಳ ಬಿಸಿ. ಸ್ಟೀಲ್ ಲೋಟದಲ್ಲೇ ಕೊಡಿ... ಹಾಂ... ನನಗೊಬ್ಬನಿಗೆ ಕೊಟ್ಟರೆ ಹೇಗೆ ಕುಡೀಲಿ.. ಇವರುಗಳಿಗೂ ಕೊಡಿ" ಎಂದು ಕೊಡಿಸಿದರು. ಗುರುನಾಥರೇನೋ ಕಾಫಿ ಕುಡಿಯುತ್ತಿದ್ದರು. ಬಾಕಿಯವರ ಮನದಲ್ಲಿ ಮಡಿಮೈಲಿಗೆಯ ತಾಕಲಾಟ ನಡೀತಿತ್ತು. ಇದನ್ನು ಅರ್ಥ ಮಾಡಿಕೊಂಡಂತೆ.... 'ಕುಡೀರಯ್ಯಾ ಯಾವುದು ಮೈಲಿಗೆ? ಈ ಲೋಟಾನಾ , ಈ ಕಾಫೀನಾ? ಯಾವುದು ಮೈಲಿಗೆ' ಎಂದು ಪ್ರಶ್ನಿಸಿದಾಗ ಉತ್ತರ ಹೇಳಲು ಯಾರಿಗೆ ಧೈರ್ಯವಿದೆ. ಮುಂದೆ ಮೈಲಿಗೆಯ ಬಗ್ಗೆ ಮಾತನಾಡುತ್ತಾ, ಆಧ್ಯಾತ್ಮದ ಅನೇಕ ವಿಚಾರವನ್ನೇ ಗುರುನಾಥರು ಎಲ್ಲರ ಮುಂದಿಟ್ಟರು. 'ಈ ಪರಮಾತ್ಮ ಈ ಶರೀರ ಬಿಟ್ಟು ಹೋದ ಮೇಲೆ ಏನಿದೆ? ಮುಂಚೆ ಮುಟ್ಟಬೇಡ, ಮುಟ್ಟಬೇಡ ಮಾಡಿ ಅಂತಾರೆ.... ಈಗ ಮೈಲಿಗೆ, ಮೈಲಿಗೆ ಅಂತಾರೆ. ಯಾರಿಗೆ ಮೈಲಿಗೆ, ಯಾವುದು ಮೈಲಿಗೆ, ಮಡಿ ಯಾವುದು? ನಾ ಮೈಲಿಗೆನೋ, ಅವರು ಮೈಲಿಗೆನೋ ' ಎಲ್ಲಾ ಕೇಳುತ್ತಾ ಮೌನರಾಗಿ ಬಿಟ್ಟರು. 

ನಂತರ ಗುರುನಾಥರು, ಮೃತರ ಪತ್ನಿಯನ್ನು ನೋಡಬಹುದಾ ಎಂದು ಕೇಳಿಕೊಂಡು ಒಳಹೋದರು. "ನಮಸ್ಕಾರ ತಾಯಿ. ನೀವು ಪುಣ್ಯಾತ್ಗಿತ್ತಿ" ಎಂದರು. ಅಲ್ಲಿದ್ದವರಿಗೆಲ್ಲಾ 'ಇದೇನಿದು ಗುರುನಾಥರು ಗಂಡನನ್ನು ಕಳೆದುಕೊಂಡು ವೈಧವ್ಯದ ದುಃಖದಲ್ಲಿರುವವರಿಗೆ ನೀವು ಪುಣ್ಯಾತ್ಗಿತ್ತಿ ಎನ್ನುತ್ತಿದ್ದಾರಲ್ಲಾ' ಎಂಬ ಚಿಂತೆ. 

ಗುರುನಾಥರು ಮುಂದುವರೆಸಿ 'ನೀವು ಪುಣ್ಯಾತ್ಗಿತ್ತಿನೇ. ಯಾಕೆಂದರೆ ಈ ವೈಧವ್ಯ ಜಾಸ್ತಿ ದಿನಗಳಿರಲ್ಲ. ಇನ್ನು ಆರು ತಿಂಗಳಲ್ಲೇ ನಿಮಗೂ ಮುಕ್ತಿ ಸಿಗುತ್ತದೆ' ಎಂದರಂತೆ. 

ಗುರುನಾಥರ ಕೃಪೆ ಸಿಕ್ಕವರು ಪುಣ್ಯಾತ್ಗಿತ್ತಿ ಅಲ್ಲದೆ ಮತ್ತೇನು? ಸ್ವತಃ ಗುರುನಾಥರೇ ಮನೆಗೆ ಬಂದು ಆ ತಾಯಿಗೆ ಸದ್ಗತಿ ನೀಡಿದರು. ಅಷ್ಟೊತ್ತಿಗೆ ಅದೆಲ್ಲಿಂದಲೋ ಬುಟ್ಟಿಗಟ್ಟಲೆ ಕಿತ್ತಳೆಹಣ್ಣು ಬಂದಿತು. ಎಲ್ಲರಿಗೂ ಹಂಚಿ ಹರಸಿದರು - ಹೀಗೆ ಗುರುನಾಥರು ಸಂಕಟದಲ್ಲಿ ಬಳಲುವ ಭಕ್ತರ ಮನೆಗೆ ತಾವೇ ಬಂದು, ಕೇಳಿ ಆತಿಥ್ಯ ಪಡೆದು, ಉದ್ಧರಿಸುವ ಉದ್ಧಾಮಗುಣಿಗಳು. 

ಅವರನ್ನೇ ಕೇಳಿ ನನಗೇನು ಗೊತ್ತು 


ಒಬ್ಬ  ರಾಮ ಭಕ್ತರು. ಅದುವರೆಗೆ ಗುರುನಾಥರನ್ನು ಮುಖತಃ ಕಂಡಿರಲಿಲ್ಲ. ಆದರೆ ಬಹಳಷ್ಟು ಗುರುನಾಥರ ಬಗ್ಗೆ ಕೇಳಿದ್ದರು. ಸದ್ಭಕ್ತಿ ಮನದಲ್ಲಿ ಇತ್ತು ಅವರಿಗೆ. ಬೇಲೂರಿಗೆ ತಮ್ಮ ಬಂಧುಗಳ ಜೊತೆ ಕಾರಿನಲ್ಲಿ ಹೊರಟವರು ಕಡೂರಿನ ಬಳಿ ಬಂದಾಗ, ಸಖರಾಯಪಟ್ಟಣಕ್ಕೆ ಹೋಗಿ ಅವಧೂತರನ್ನು ಕಂಡು ಹೋಗೋಣವೇ ಎಂದಾಗ ಎಲ್ಲರೂ ಸರಿ ಎಂದರು. 

ಅವರು ಸಖರಾಯಪಟ್ಟಣಕ್ಕೆ ಬಂದಿದ್ದು ಅದೇ ಮೊದಲು. ಒಂದು ಮನೆಯ ಮುಂದೆ ಕಾರು ನಿಲ್ಲಿಸಿ ಮುಂದೆ ನಿಂತವರನ್ನು 'ಅವಧೂತರ ಮನೆ ಇದೇನಾ.. ಅವರು ಇದ್ದಾರಾ ಎಂದು' ಕೇಳುತ್ತಾರೆ... ಎದುರಿಗಿದ್ದವರು "ಹೌದು ಇದೇ  ಮನೆ ಬನ್ನಿ ಒಳಗೆ.. ಇದ್ದಾರೆ.. ಕಾರಿನಿಂದ ಇಳಿಯಿರಿ" ಎಂದಾಗ ಎಲ್ಲ ಇಳಿದು ಒಳ ಹೊರಟಾಗ ಎರಡು ನಾಯಿಗಳು ಬಂದು ಬಾಲ ಅಲ್ಲಾಡಿಸುತ್ತಾ ಇವರೆಲ್ಲರನ್ನೂ ಒಳಗೆ ಕರೆದುಕೊಂಡು ಹೋಗುವಂತೆ ಹೋದವು. ಒಳ ಮನೆಯಲ್ಲಿ ತುಂಬಾ ಜನ ಕುಳಿತಿದ್ದರು. ಅಡುಗೆಯ ಮನೆಗೆ ಕರೆದೊಯ್ದರು. ಅಲ್ಲಿ ಈಗಾಗಲೇ ಬಡಿಸಿ ಸಿದ್ಧವಾಗಿದ್ದ ಐದು ಎಲೆಯಲ್ಲಿ ಊಟಕ್ಕೆ ಕೂರಲು ತಿಳಿಸಿದರು. 'ಇಲ್ಲ ಹೊಟ್ಟೆ ತುಂಬಿದೆ. ಈಗ ತಾನೇ ಕಡೂರಿನಲ್ಲಿ.... ' ಎಂದು ಇವರು ಹೇಳುತ್ತಿದ್ದರೆ 'ಇಲ್ಲಾ ಇಲ್ಲಾ ಊಟಕ್ಕೆ ಕೂರಲೇಬೇಕು. ಬಡಿಸಿರಿ' ಎಂದು ಮನೆಯವರಿಗೆ ತಿಳಿಸಿದ ಆ ವ್ಯಕ್ತಿಗಳು ಮತ್ತಾರೂ ಅಲ್ಲ ಅವರೇ ಸದ್ಗುರುನಾಥರು. 

ಬಂದವರೆಲ್ಲಾ ಗುರುನಾಥರಿಗೆ ನಮಿಸಿ, ತಮ್ಮ ದೇವಾಲಯದ ಕಾರ್ಯಕ್ರಮ ಒಂದರ ಆಹ್ವಾನ ಪತ್ರಿಕೆಯನ್ನು ನೀಡಿದರು. ಇಷ್ಟರಲ್ಲಿ ಗುರುನಾಥರು ಅಟ್ಟ ಹತ್ತಿ, ಒಂದು ದೊಡ್ಡ ಸುವಾಸನೆ ಬೀರುತ್ತಿರುವ ಹಲಸಿನ ಹಣ್ಣೊಂದನ್ನು ತಂದು, ನಮ್ಮೊಂದಿಗೆ ಬಂದ ಹೆಣ್ಣು ಮಗಳಿಗೆ ನೀಡುತ್ತಾ, ಡ್ರೈವರಾಗಿ ಬಂದ ಅವರ ಯಜಮಾನರ ಕಡೆ ನೋಡುತ್ತಾ "ಏನಯ್ಯಾ, ಹೆಂಡತಿ ಎರಡು ಹಲಸಿನ ತೊಳೆ ಕೇಳಿದರೆ ಕೊಡಿಸಬಾರದೇ, ಹಾಗೆ ಕಾರು ಓಡಿಸಿಕೊಂಡು ಬಂದಿರಲ್ಲಾ" ಎಂದಾಗ ನಾವೆಲ್ಲಾ ಆಶ್ಚರ್ಯಪಟ್ಟೆವು. ಅಲ್ಲಿ ನಡೆದ ವಿಚಾರ ಇವರಿಗೆ ಹೇಗೆ ತಿಳಿಯಿತು" ಎಂದು. 

ನಾವೆಲ್ಲಾ ಗುರುನಾಥರಿಗೆ ನಮಿಸಿ ಹೊರಡಲಿದ್ದೆವು. ಆಗ ಅವರು 'ಒಳಗೆ ಅಮ್ಮನಿಗೆ ನಮಸ್ಕಾರ ಮಾಡಿ ಬಂದಿರಾ ಒಳಹೋಗಿ' ಎಂದರು. ಒಳಗೆ, ದೇವರ ಮನೆಗೆ ಹೋದಾಗ, ಆ ಮಹಾತಾಯಿ, ನಾವು ಕೊಟ್ಟ ಪತ್ರಿಕೆಗೆ ಅರಿಶಿನ-ಕುಂಕುಮ ಹೂವುಗಳನ್ನೇರಿಸಿ ಪೂಜೆ ಮಾಡಿ ನಮಸ್ಕರಿಸುತ್ತಿದ್ದರು. - ದೇವಾಲಯಗಳ ಪತ್ರಿಕೆ ಎಂದರೆ ಓದಿ ಎಸೆಯುವ ನಮಗೆ, ಅದರ ಬೆಲೆ ಎಷ್ಟೆಂಬುದು ಅದನ್ನು ಹೇಗೆ ಗೌರವಿಸಬೇಕೆಂಬುವ ಪಾಠ ದೊರಕಿತ್ತು. ಆ ಮಹಾತಾಯಿಗೆ ನಮಿಸಿ ಹೊರಬಂದು , ಗುರುನಾಥರಿಗೆ ಹೇಳಿ ಹೊರಡುವಷ್ಟರಲ್ಲಿ ಇನ್ನೊಂದು ದೊಡ್ಡ ಹಣ್ಣನ್ನವರು ನಮಗೆ ಕೊಡಲು ಹಿಡಿದುಕೊಂಡು ನಿಂತಿದ್ದರು. 'ಗುರುನಾಥರೇ ಸಾಕು. ನೀವು ಕೊಟ್ಟಿದ್ದೇ ಸಾಕಷ್ಟು ದೊಡ್ಡದಿದೆ. ಎಲ್ಲರಿಗೆ ಆಗುತ್ತೆ' ಎಂದಾಗ.... ಆಗ ಕೊಟ್ಟಿದ್ದು ಆ ತಾಯಿಗೆ, ಈಗ ಕೊಡುತ್ತಿರುವುದು ನಿನಗಲ್ಲ... ಅಲ್ಲಿ ಬೇಲೂರಿನಲ್ಲಿ' ನಿನ್ನನ್ನು ನೋಡಲು ಬರುವ ಎಲ್ಲಾ ಭಕ್ತರಿಗೆ ಈ ಪ್ರಸಾದವನ್ನು ಹಂಚಿಬಿಡಿ" ಎಂದು ಬಲವಂತವಾಗಿ ನೀಡಿದರು - ಎಂದವರು ಗುರುನಾಥರ ಉದಾರತೆ - ದಾನತತ್ಪರತೆ, ಸೇವಾಗುಣವನ್ನು ನೆನೆದರು. 

ಗುರುನಾಥರ ರೀತಿಯೇ ಹೀಗಲ್ಲವೇ. ಸಾಕು ಸಾಕೆನ್ನುವವರೆಗೆ, ಸಾಕೆಂದರೂ ಮತ್ತಷ್ಟನ್ನು ತಾನಾಗಿದೆಯೋ, ಇಲ್ಲವೋ ಎಂಬುದನ್ನು ಪರಿಗಣಿಸದೇ, ನೀಡುವುದೇ  ಅವರ ಮಹಾಗುಣ. ಗುರುನಾಥರ ಭಕ್ತಕೋಟಿಯಲ್ಲೂ ಈಗಲೂ ಸಹಾ ಅದೇ ಗುಣಗಳನ್ನು ಕಂಡಾಗ ನೆನಪಾಗುವುದು ಹರಿಹರನ ರಗಳೆಯಲ್ಲಿ ಬರುವ ಇಳೆಯಾಂಡ ಗುಡಿಮಾರನ ಕಥೆ. ಕಥೆಯಲ್ಲಿ ಒಬ್ಬ ಇಳೆಯಾಂಡ ಗುಡಿಮಾರ ತನ್ನದೆಲ್ಲವನ್ನೂ ಶಿವಗರ್ಪಣ, ದಾನ ಮಾಡಿದ ವಿಚಾರ. ಇಲ್ಲಿ ಶಿವಸ್ವರೂಪಿಯಾದ ಗುರುನಾಥರು ನೂರಾರು, ಸಾವಿರಾರು ಅಂತಹ ಇಳೆಯಾಂಡ ಗುಡಿಮಾರನಂತಹ ಶಿಷ್ಯರನ್ನೇ ನಿರ್ಮಿಸಿರುವುದು, ಕೊಡುಗೈ ಭಕ್ತರನ್ನು ಕೊಟ್ಟಿರುವುದು ನಮ್ಮ ಸೌಭಾಗ್ಯ. 

ಬನ್ನಿ ಮತ್ತೆ ಸಖರಾಯಪಟ್ಟಣಕ್ಕೆ ಗುರುನಾಥರ ಮನೆಗೆ ಹೋಗೋಣ. ಅಲ್ಲಿದ್ದವರೊಬ್ಬರು ಈ ರೀತಿ ಗುರುನಾಥರಿಂದ ಅದರ ಪಡೆದ ರಾಮಭಕ್ತರನ್ನು 'ಸ್ವಾಮಿ ನಿಮಗಿವರೆಷ್ಟು ದಿನದಿಂದ ಪರಿಚಯ? ಎಂದಾಗ, 'ಇವತ್ತೇ ನಾನು ಮೊದಲು ಗುರುನಾಥರನ್ನು ನೋಡುತ್ತಿರುವುದು ಎಂದೇ. 'ಬಹಳ ಹೊತ್ತಿನಿಂದ ಗುರುಗಳು ಒಳಗೂ ಹೊರಗೂ ಚಡಪಡಿಸುತ್ತಾ ಯಾರದೋ ಬರುವಿಗಾಗಿ ಕಾಯುತ್ತಿದ್ದರು. ಎಷ್ಟು ಹೊತ್ತಿನಿಂದ ಎಷ್ಟೊಂದು ಜನ ಕಾಯುತ್ತಿದ್ದಾರೆ. ಆದರೆ, ಗುರುನಾಥರು ನಿಮಗಾಗಿ ಎಲೆ ಹಾಕಿಕೊಂಡು ಕಾಯುತ್ತಿದ್ದಾರಲ್ಲ.. ಏನಿದರ ರಹಸ್ಯ?' ಎಂದು ಅವರು ಕೇಳಿದಾಗ, ಆ ರಾಮಭಕ್ತರೆನ್ನುತ್ತಾರೆ: 'ನನಗೇನು ಗೊತ್ತು. ಎಲ್ಲ ಬಲ್ಲ ಆ ಗುರುನಾಥರನ್ನೇ ಕೇಳಬೇಕು' ,  ಒಳಗೆ ಹೋಗಿ ಅಮ್ಮನಿಗೆ ನಮಸ್ಕಾರ ಮಾಡಿ ಬರುವಾಗ ಅವರೆಂದಿದ್ದರು.  'ಬರ್ತಾ ಇರಿ ಮುಂದಿನ ಸಾರಿ ನೀವು ಬಂದಾಗ ಅವನು ಮನೆಯಲ್ಲಿ ಇರುವುದಿಲ್ಲ - ಹಾಗಂತ ನೀವು ಬರದೇ ಹೋಗಬೇಡಿ' ಎಂದು ಕರೆ ನೀಡಿದ್ದರು' ಪ್ರೀತಿಯಿಂದ. ಅರಿತವರಿಗೆ ಮಾತ್ರ ಅರಿವಾಗುತ್ತೆ. ಅದು ನಡೆದಿದ್ದೂ ಹಾಗೆಯೇ" ಎಂದು ಮುಂದುವರೆಸಿ, "ಕೂಡಲಿಯ ಕಿರಿಯ ಶ್ರೀಗಳೊಂದಿಗೆ ಬೆಂಗಳೂರಿಗೆ ಹೊರಟಿದ್ದ ನಾನು ಸಖರಾಯಪಟ್ಟಣಕ್ಕೆ ಗುರುದರ್ಶನ ಮಾಡಿ ಹೋಗೋಣವೆಂದಾಗ, ಆಯಿತೆಂದರು. ಮನೆಯ ಬಾಗಿಲಿಗೆ 'ಹೋಗಿ ಕಾರು ನಿಲ್ಲಿಸಿ ನಾನು ಒಳ ಹೋದೆ. ಗುರುಪತ್ನಿಯವರು ಇದ್ದರು. 'ಶೀಗಳು ಬಂದಿದ್ದಾರೆ. ಒಳಕರೆತರಲೇ " ಎಂದಾಗ, ಅವರು ಕೂಡಲೇ ಒಂದು ಬಿಂದಿಗೆ ನೀರು, ಅದರ ಮೇಲೆ ಕಾಯಿ ಇಟ್ಟುಕೊಂಡು ಶ್ರೀಗಳನ್ನು ಸ್ವಾಗತಿಸುವ ಸಿದ್ಧತೆ ಮಾಡಿದರು. ಅದೆಲ್ಲಿ ಇದ್ದವೊ, ಎರಡು ನಾಯಿಗಳು ಬಂದು ಶ್ರೀಗಳ ಕಾರಿನ ಬಳಿ ನಿಂತು, ಬಾಲ ಅಲ್ಲಾಡಿಸತೊಡಗಿದವು. ಮನೆಯ ಒಳಗಿನವರೆಗೆ ಬಾಲ ಅಲ್ಲಾಡಿಸುತ್ತಾ ಬಂದವು. ಒಳಗೆ ಶ್ರೀಗಳನ್ನು ಮನೆ ಹಾಕಿ ಕೂರಿಸಿದೆವು. ಅವರು ಜಪದಲ್ಲಿದ್ದರು. ಅಮ್ಮ ಹೊರಬಂದು 'ಮನೆಯಲ್ಲಿ ಹಾಲಿಲ್ಲವಲ್ಲ ಶ್ರೀಗಳಿಗೆ ಕೊಡಲು, ಎಂದಾಗ ನಾನು ತರುತ್ತೇನೆ. ಎಲ್ಲಿ ಸಿಗುತ್ತೆ ಹೇಳಿ ಎಂದಾಗ, 'ಈ ಊರಲ್ಲಿ ಹಾಲು ಸಿಗುವುದು ಕಷ್ಟ' ಎನ್ನುತ್ತಿರುವಾಗ - ಮನೆಯ ಮುಂದೆ ಅಂಬಾ ಎಂದು ಗೋಮಾತೆಯೊಂದು ಬಂದಿತು. ಅಮ್ಮ ಅದರ ಹಾಲು ಕರೆದರು. ಕರುವೂ ಇಲ್ಲ, ತಿಂಡಿಯೂ ಇಲ್ಲ. ಎಲ್ಲರಿಗೂ ಹಾಲನ್ನು ಅಮ್ಮ ನೀಡಿದರು. ಶ್ರೀಗಳು ಹೊರಟಾಗ ಆ ಎರಡು ನಾಯಿಗಳು ಕಾರಿನವರೆಗೆ ಶ್ರೀಗಳನ್ನು ಕಳಿಸಿಕೊಟ್ಟು 'ಊಂ' ಎಂದವು. ಶೀಗಳು ಕೇಳಿದರು 'ಏನಿದು ಈ ವಿಚಿತ್ರ' ಶ್ರೀಗಳೇ ತಮಗೆ ವೇದ್ಯವಾಗದ್ದು ಏನಿದೆ? ಎಂದೆ. ಹೀಗೆ ಅಮ್ಮನ ಮಾತೂ ಸತ್ಯವಾಗಿತ್ತು. ಬಂದ ನಮಗೆ ದತ್ತನ ರೂಪದಲ್ಲಿ ಆದರಿಸಿ - ಸತ್ಕರಿಸಿದ ಗುರುನಾಥರ ಲೀಲಾ ವಿನೋದ ಅರಿತವರಿಗೆ ಮಾತ್ರ ಅರಿವಾಗಿತ್ತು. ಗುರುನಾಥರ ಮನೆಯ ಸತ್ಕಾರ್ಯ, ಬಂದವರ ಸೇವೆಯಲ್ಲಿ ಆ ಮನೆಯ ಪ್ರಾಣಿ ಪಕ್ಷಿಗಳೂ ತಮ್ಮ ಕರ್ತವ್ಯವನ್ನು ಸ್ವಯಂ ಪ್ರೇರಿತವಾಗಿ ನೆರವೇರಿಸುತ್ತಿದ್ದನ್ನು ನೋಡಿದರೆ, ಗುರುನಾಥರ ಮನೆ ಒಂದು ಸಾಮಾನ್ಯ ಮನೆಯಲ್ಲ ಅದೊಂದು ಋಷ್ಯಾಶ್ರಮವೇ ಆಗಿತ್ತು. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 



।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।



For more info visit :  http://srivenkatachalaavadhoota.blogspot.in/

No comments:

Post a Comment