ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 41
ಧೂಮಪಾನ ಔಷಧಿ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ದೀಪದ ಬುಡ ಕತ್ತಲು ಎನ್ನುವಂತೆ ಗುರುನಾಥರೊಂದಿಗೆ ಇರುವವರೆಲ್ಲರೂ ಶುದ್ಧ ಭಾವದಿಂದ ಇರುತ್ತಿರಲಿಲ್ಲ. ಅದು ಯಾವ ಜನ್ಮದ ಬಂಧವೋ ಗೊತ್ತಿಲ್ಲ.. ನಾನು ಅಲ್ಲಿರಲಿ ಬಿಡಲಿ ಪ್ರತಿದಿನ ಕನಿಷ್ಠ ಇಪ್ಪತ್ತು ಬಾರಿಯಾದರೂ ಚರಣದಾಸನಾದ ನನ್ನ ಹೆಸರನ್ನು ನೆನಪಿಸಿಕೊಳ್ಳುತ್ತಿದ್ದರು. ಇದು ಸಹಜವಾಗಿ ಅಲ್ಲಿದ್ದ ಕಾಲ ಜೊತೆಗಾರರಲ್ಲಿ ನನ್ನ ಬಗ್ಗೆ ಅಸೂಯೆ ಮೂಡಿಸಿತ್ತು.
ಗುರುನಾಥರು ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಅದೆಂದರೆ "ಮನುಷ್ಯ ಶಾಸ್ತ್ರೀ ಇರಬೇಕೆಂದರೆ ಒಂದು ನಿಮಿಷವೂ ಬಿಡುವಿರಬಾರದು. ಕೆಲಸ ಮಾಡಿ ಮಾಡಿ ರೊಂಡಿ ಎಲ್ಲಾ ಸವೆದು ಹೋಗಬೇಕು. ಆಗ ಜನರು ಇನ್ನೊಂದು ವಿಚಾರಕ್ಕೆ ಹೋಗೋಲ್ಲ ಕಣಯ್ಯ" ಅಂತ. ಅದೃಷ್ಟವಶಾತ್ ನನಗೆ ಅಲ್ಲಿ ಗುರುನಾಥರು ಕೈ ತುಂಬಾ ಕೆಲಸ ಕೊಟ್ಟಿರುತ್ತಿದ್ದರು. ಬಿಡುವು ಎಂಬುದು ನನಗೆ ಆಗದ ಪದವಾಗಿತ್ತು. ಇದು ಸಹಜವಾಗಿ ಇತರ ಸಹಚರರ ಮನದಲ್ಲಿ ಇರಿಸು ಮುರಿಸು ಉಂಟು ಮಾಡಿತ್ತು. ಜೊತೆಗಾರರ ಚುಚ್ಚು ಮಾತುಗಳು ಕೆಲವೊಮ್ಮೆ ನನ್ನನ್ನು ಬಹಳ ಘಾಸಿಗೊಳಿಸುತ್ತಿತ್ತು.
ಗುರುನಿವಾಸಕ್ಕೆ ಬಂದ ಹೊಸತರಲ್ಲೂ ಕೂಡ ಜೊತೆಗಾರರ ವ್ಯಂಗ್ಯದ ಮಾತು ಕೇಳಿ ಒಮ್ಮೆ ಊರಿಗೆ ಕಳಿಸಿದಾಗ ವಾಪಸ್ ಬಂದಿರಲಿಲ್ಲ. ಆಗ ಊರಿನಲ್ಲೇ ಕುಳಿತು ದಿನನಿತ್ಯ ಗುರು ಚರಿತ್ರೆ ಪಾರಾಯಣ ಮಾಡಿ ಬೆಳಿಗ್ಗೆ ಅಲ್ಲಿಂದ ನೇರ ಅದ್ವೈತ ಪೀಠಕ್ಕೆ ಬಂದು ಗುರುದರ್ಶನ ಮಾಡಿ ವಾಪಸಾಗುತ್ತಿದ್ದೆ. ನಾಲ್ಕನೇ ದಿನ ಅಂದರೆ ಗುರುವಾರ ಮನೆಯಿಂದ ಹೊರಡುವಾಗಲೇ ಸೋದರನಲ್ಲಿ ಇಂದು ವಾಪಸಾಗುವ ಅನುಮಾನ ವ್ಯಕ್ತಪಡಿಸಿ ಹೊರಟೆನು. ಮಠದೊಳಗೆ ಬರುತ್ತಿದ್ದಂತೆ ಗುರುನಾಥರ ದರ್ಶನವಾಯಿತು.
"ಏನ್ ಊರ್ ಕಡೆ ಬರಲಿಲ್ವಲ್ಲಾ?" ಅಂದ್ರು. ನಾನು ಗುರುಚರಿತ್ರೆ ಪಾರಾಯಣ ಮಾಡ್ತಿದ್ದೀನಿ ಸಾರ್ ಎಂದೆ.
"ಹೌದು, ಮಾಡಬೇಕಾದ್ದೇ ಕಣಯ್ಯಾ. ಆಮೇಲೆ ಸಿಗ್ತೀಯಾ ತಾನೇ?" ಅಂದ್ರು. ಹೂಂ ಅಂದೆ.
ಆ ನಂತರ ಗುರುಭಕ್ತರೊಬ್ಬರ ಮನೆಗೆ ತೆರಳಿದೆ. ಅಲ್ಲೇ ಇದ್ದ ಗುರುನಾಥರು "ಕಾರಿನ ಹಿಂಬದಿಯಲ್ಲಿ ಒಳಗೆ ಏನೋ ಇದೆ ಕೊಂಡು ಬಾ" ಅಂದ್ರು. ಹುಡುಕಲು ಕಾರಿನೊಳಗೆ ಹೋದ ಕೂಡಲೇ ಒಬ್ಬರನ್ನು ಕಳಿಸಿದ ಗುರುನಾಥರು ಕಾರಿನ ಬಾಗಿಲು ಹಾಕಿಸಿ ನನ್ನ ಕರೆದುಕೊಂಡು ಸಖರಾಯಪಟ್ಟಣ ಕಡೆಗೆ ಹೊರಟರು.
ಹೊರಡುವಾಗ, "ನಿನ್ನ ಗುರು ಇಲ್ಲೇ ಇರುವಾಗ ಗುರುಚರಿತ್ರೆ ಪಾರಾಯಣ ಬೇರೆ ಬೇಕಂತೆ ಇವನಿಗೆ" ಅಂದು ನಕ್ಕರು. ಊರಿಗೆ ತಲುಪುವಾಗ ಅಂಗಳದಲ್ಲಿ ಮೇವು ತಿಂದು ಸಗಣಿ ಹಾಕಿದ ದನಗಳು ತುಂತುರು ಮಳೆಯಿಂದಾಗಿ ಕೊಟ್ಟಿಗೆ ಸೇರಿದ್ದವು. ನನ್ನನ್ನು ನೇರವಾಗಿ ಮನೆ ಹಿಂದಿನ ಅಂಗಳಕ್ಕೆ ಕರೆತಂದ ಗುರುನಾಥರು ಒಂದು ಸಗಣಿ ಬುತ್ತಿ ತಂದು ಕೈಗಿಟ್ಟು , "ಹೋಗು ಸಗಣಿ ತೆಗೆ, ಇದು ನಿನ್ನ ಕರ್ತವ್ಯ. ಯಾರು ಏನೇ ಅಂದ್ರು ತಲೆಕೆಡಿಸಿಕೊಳ್ಳಬೇಡ" ಅಂದ್ರು. ನಾ ಸಮಾಧಾನದ ಉಸಿರು ಬಿಟ್ಟೆ. ನಂತರ ಇತರರ ಬಗ್ಗೆ ಯೋಚಿಸುವುದನ್ನು ಬಿಟ್ಟು ಗುರುನಾಥರೆಡೆಗೆ ನನ್ನ ಗಮನವನ್ನು ಕೇಂದ್ರೀಕರಿಸಲಾರಂಭಿಸಿದೆ.
ನಂತರ ಒಮ್ಮೆ ನಾಲ್ಕು ವರ್ಷಗಳ ನಂತರ ಇದ್ದಕ್ಕಿದ್ದಂತೆಯೇ ಮೈ ಕೈ ವಿಪರೀತ ನೋವು ಆರಂಭಗೊಂಡು ಕೆಲಸ ಮಾಡಲು ತ್ರಾಸವಾಗುತ್ತಿತ್ತು. ಒಮ್ಮೆ ಕರೆದು ಊರಿಗೆ ಹೋಗಿ ಗುರುದರ್ಶನ ಮಾಡಿ ಬಾ ಎಂದು ಕಳಿಸಿದರು.
"ಸ್ಪರ್ಧೆಯಿಂದ ಸಿಗುವ ಗುರು ನಂಗೆ ಬೇಕಿಲ್ಲ ಸಾರ್, ಗುರುಸ್ಪರ್ಧೆಯಿಂದ ಸಿಗೋನು ಅಲ್ಲ, ಆಲ್ವಾ ಸಾರ್?" ಎಂದು ಗುರುನಾಥರನ್ನೊಮ್ಮೆ ಕೇಳಿದ್ದೆ.
ಅದಕ್ಕವರು "ಹೌದು, ನಿನ್ನ ಮಾತು ಸರಿ ಕಣಯ್ಯಾ" ಎಂದಿದ್ರು.
ಇತ್ತ ಊರಿಗೆ ಬಂದ ನಾನು ಅಲ್ಲಿ ಸುತ್ತಲೂ ಹತ್ತಿರದವರಂತೆ ಇದ್ದ ಜನರ ನಡವಳಿಕೆಯಿಂದ ಬೇಸತ್ತು ಊರಿಗೆ ವಾಪಸಾಗದಿರಲು ಯೋಚಿಸುತ್ತಿದ್ದೆ. ಹಾಗೆಯೇ ವೈದ್ಯರಲ್ಲಿ ನನ್ನ ಕೈ ನೋವಿನ ಚಿಕಿತ್ಸೆಗಾಗಿ ಬಂದಿದ್ದೆ.
ಆಗ ಕರೆಮಾಡಿಸಿದ ಗುರುನಾಥರು "ಎಲ್ಲಿದ್ದೀಯೋ?" ಎಂದ್ರು.
ನಾನು "ಕೈ ಪರೀಕ್ಷೆಗಾಗಿ ಬಂದಿದ್ದೀನಿ. ವೈದ್ಯರು ಮೂರು ಗಂಟೆಗೆ ಬರುತ್ತಾರಂತೆ" ಅಂದೆ.
ಅದಕ್ಕವರು "ಒಂದು ಕೆಲಸ ಮಾಡು. ಒಂದು ಸಾರಿ ಬಂದು ನನ್ನ ನೋಡಿಕೊಂಡು ಹೋಗು. ಬೇಕಿದ್ರೆ ಶಿವಮೊಗ್ಗದಲ್ಲೇ ವೈದ್ಯರಿಗೆ ತೋರಿಸುವಂತೆ ಬಾರಯ್ಯಾ.... " ಅಂದ್ರು.
ಗುರುವಿನ ಬಗ್ಗೆ ಅತೀವ ಪ್ರೀತಿ ಇದ್ದರೂ ಸಲುಗೆ ಜಾಸ್ತಿಯಿದ್ದುದರಿಂದ ನಾನು ಸ್ವಲ್ಪ ಸತಾಯಿಸಿ, ಆ ನಂತರ "ಬರ್ತೀನಿ ಸಾರ್" ಎಂದೆ. ನನ್ನಲ್ಲಿ ಹಠಮಾರಿತನ ಹಾಗೂ ಅಹಂಕಾರ ಜಾಸ್ತಿ ಇತ್ತು. ಈಗಲೂ ಇದೆ.
ಶಿವಮೊಗ್ಗದ ಗುರುಭಕ್ತರ ಮನೆಯಲ್ಲಿ ವಿಶ್ರಮಿಸುತ್ತಿದ್ದ ಗುರುನಾಥರು, ನ ಅಲ್ಲಿಗೆ ಹೋದಾಕ್ಷಣ "ಬಾರಯ್ಯಾ, ಬಾ.... " ಎಂದು ಕರೆದು ಅಲ್ಲಿದ್ದವರೊಬ್ಬರಿಗೆ ನನಗೆ ಊಟ ನೀಡಲು ತಿಳಿಸಿದರು. ನಂತರ "ಏನಾಗಿದೆಯಯ್ಯಾ ಕೈ?" ಎಂದರು.
ನಾನದಕ್ಕೆ ಮುಂಗೈಗಳೆರಡೂ ವಿಪರೀತ ನೋವು, ಭಾರ ಎತ್ತಲೂ, ಕೆಲಸ ಮಾಡಲೂ ಆಗುತ್ತಿಲ್ಲ.. ಅದಕ್ಕೆ ವೈದ್ಯರಿಗೆ ತೋರಿಸೋಣ ಅಂತ ಇದ್ದೆ ಅಂದೆ.
ಅದಕ್ಕವರು "ಅಷ್ಟೇ ತಾನೇ?" ಎಂದು ಅಲ್ಲಿದ್ದವರೊಬ್ಬರನ್ನು ಕರೆದು, "ಇವನನ್ನು ಕರೆದುಕೊಂಡು ಹೋಗಿ ಸಿಗರೇಟು ಕೊಡಿಸಿ. ಹೋಗಯ್ಯಾ ನನ್ನ ಮಗನ ಹೆಸರು ಹೇಳಿ ಸಿಗರೇಟು ಸೇದು ಹೋಗಯ್ಯಾ" ಎಂದರು. ಹೋಗಿ ಸಿಗರೇಟು ಸೇದಿ ಬಂದೆ. ಆಶ್ಚರ್ಯವೆಂದರೆ, ಬಹುಶಃ ಒಂದೂವರೆ ಅಥವಾ ಒಂದು ಗಂಟೆಯಲ್ಲಿ ಕೈ ನೋವು ಹೇಳ ಹೆಸರಿಲ್ಲದಂತಾಗಿತ್ತು. ಇಂದಿಗೂ ಆ ಕೈ ನೋವು ಮರುಕಳಿಸಲಿಲ್ಲ.
ಇಲ್ಲಿ ದುಶ್ಚಟಗಳನ್ನು ಕಲಿಸುತ್ತಿದ್ದಾರೆ ಎಂಬ ತಪ್ಪು ಕಲ್ಪನೆಗಿಂತ ಮೇಲಾಗಿ ಅವರು ನೀಡುತ್ತಿದ್ದ ಔಷಧಗಳ ವಿಶಿಷ್ಟತೆಗಳನ್ನು ನೋಡುವುದು ಸಮಂಜಸವೆನಿಸುತ್ತದೆ......,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment