ಒಟ್ಟು ನೋಟಗಳು

Wednesday, November 9, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 36


ದೇವಿ ಪೂಜಾರಿಗೆ ಪುತ್ರ ಸಂತಾನ 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಆ ಬ್ರಾಹ್ಮಣ ದೇಶದ ಪ್ರಸಿದ್ಧ ಮಠವೊಂದರಲ್ಲಿ ಅರ್ಚಕರಾಗಿದ್ದರು. ಅವರಿಗೆ ಮದುವೆಯಾಗಿ ಬಹಳ ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಹಲವಾರು ವೈದ್ಯರನ್ನು ಸಂಪರ್ಕಿಸಿದರು, ಪೂಜೆ-ಪುನಸ್ಕಾರಗಳನ್ನು ಮಾಡಿಸಿದರು. ಆದರೆ, ಯಾವುದೇ ಫಲ ಕಾಣಲಿಲ್ಲ.

ಹೀಗಿರಲು ಒಮ್ಮೆ ಗುರುನಾಥರು ಅಲ್ಲಿಗೆ ಹೋಗಿದ್ದಾಗ ಗುರುದರ್ಶನ ಪಡೆದ ಆ ಅರ್ಚಕರು ತಮ್ಮ ಕೊರಗನ್ನು ನಿವೇದಿಸಿಕೊಂಡರು.

ಆಗ ಗುರುನಾಥರು: "ದೇವಿಯ ಕಾಸಿನ ಸರ ಕದ್ದವನಿಗೆ ಮಕ್ಕಳಾಗಬೇಕೆಂದರೆ ಹೇಗಪ್ಪಾ ಸಾಧ್ಯ?" ಎಂದು ಪ್ರಶ್ನಿಸಿದರು. ಮತ್ತು ಮುಂದುವರೆದು "ಅದನ್ನು ಸರಿಪಡಿಸಿಕೊ, ಮಕ್ಕಳಾಗುವುದು" ಎಂದು ನುಡಿದರು.

ಇದರಿಂದ ಒಂದು ಕ್ಷಣ ವಿಚಲಿತರಾದ ಅರ್ಚಕರು ನಂತರ ತಪ್ಪೊಪ್ಪಿಕೊಂಡರು. ನಂತರ ಗುರುನಾಥರೆಂದಂತೆಯೇ ಅವರಿಗೆ ಮುದ್ದು ಮಗು ಜನಿಸಿತು. ಇಂದು ಅವರು ಎರಡು ಮಕ್ಕಳ ತಂದೆ.

ಹಾಗೆಯೇ ರಾಜಧಾನಿಯಿಂದ ಓರ್ವ ವೈದ್ಯರು ಗುರುದರ್ಶನಕ್ಕಾಗಿ ಆಗಾಗ್ಗೆ ಬರುತ್ತಿದ್ದರು. ಅವರಿಗೂ ಬಹಳ ಕಾಲ ಮಕ್ಕಳಾಗಿರಲಿಲ್ಲ.

ಆಗ ಗುರುನಾಥರು ಆ ವೈದ್ಯ ದಂಪತಿಗಳನ್ನು ಕರೆಸಿ, ಗುರುನಾಥರ ಇನ್ನೊಂದು ಮನೆಯಲ್ಲಿ  ಆ ದಂಪತಿಗಳಿಗೆ ಮಲಗಲು ವ್ಯವಸ್ಥೆ ಮಾಡುವಂತೆ ಚರಣದಾಸನಿಗೆ ತಿಳಿಸಿದರು. ಬಹುಶಃ ಅವರು ಒಂದು ಅಥವಾ ಎರಡು ದಿನ ಗುರುನಿವಾಸದಲ್ಲೇ ಇದ್ದು ನಂತರ ಬೆಂಗಳೂರಿಗೆ ತೆರಳಿದರು.

ಇದಾಗಿ ಒಂದೆರಡು ತಿಂಗಳಿಗೆ ಆ ಮಹಿಳೆ ಗರ್ಭಿಣಿಯಾಗಿರುವರೆಂದು ತಿಳಿದು ಬಂತು. ಆಗ ನಮ್ಮಲ್ಲಿ ಮೊಬೈಲ್ ಬಳಕೆ ಇರಲಿಲ್ಲ. ಗುರುಗಳ ಮನೆಗೆ ಬರುತ್ತಿದ್ದ ಒಬ್ಬರ ಮನೆಯ ದೂರವಾಣಿಗೆ ಕರೆ ಮಾಡಿ ತಿಳಿಸುತ್ತಿದ್ದರು.

ಕೆಲವೇ ದಿನಗಳಲ್ಲಿ ಆ ವೈದ್ಯರು ಅಲ್ಲಿಗೆ ಕರೆಮಾಡಿ "ಪತ್ನಿ ಗರ್ಭಿಣಿಯಾಗಿರುವರೆಂದು ವೈದ್ಯರು ದೃಢಪಡಿಸಿದ್ದರು. ಇದೀಗ ನನ್ನ ಪತ್ನಿ ಬಹಿಷ್ಠೆಯಾಗಿರುವರು. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ದಯಮಾಡಿ ಗುರುನಾಥರಿಗೆ ತಿಳಿಸಿ" ಎಂದು ತಿಳಿಸಿದರು.

ಆ ಮನೆಯಾಕೆ ಬಂದು ತಿಳಿಸಲು ಕೂಡಲೇ "ನೀನೆ ನಿಮ್ಮನೆಯಲ್ಲಿ ಮರಳಿನಿಂದ ಏನನ್ನೋ ಮಾಡಿ ಇಡಮ್ಮಾ" (ಅದೇನು ಮಾಡಬೇಕೆಂದು ತಿಳಿಸಿದ್ದರು) ಎಂದು ಗುರುನಾಥರು ತಿಳಿಸಿದರು.

ಆಕೆ ಹಾಗೆಯೇ ಮಾಡಿದರು. ನಂತರ ಗರ್ಭ ನಿಲ್ಲುವುದೆಂದೂ, ಧೈರ್ಯವಾಗಿರುವಂತೆಯೂ ತಿಳಿಸಿದರು. ಗುರುಗಳೆಂದತೆಯೇ ಆಯ್ತು. ವೈದ್ಯಲೋಕದ ಲೆಕ್ಕಾಚಾರಗಳೆಲ್ಲಾ ತಲೆಕೆಳಕಾಗಿ ಆಕೆಗೆ ಮುದ್ದಾದ ಗಂಡು ಮಗುವಾಯ್ತು. ಇಂದು ಅವರಿಗೆ ಎರಡು ಮಕ್ಕಳಿವೆ.

ಹಾಗೆಯೇ ಇನ್ನೊಂದು ಘಟನೆ ಎಂದರೆ, ಗುರುನಾಥರು ದೇಹ ಬಿಡುವ ಒಂದು ವಾರ ಮೊದಲು ಚರಣದಾಸನಾದ ನನ್ನ ತಂಗಿಯ ಸಂತಾನದ ಬಗ್ಗೆ ಕೇಳಿದ್ದೆ. ಅದಕ್ಕೆ ಗುರುನಾಥರು "ಇನ್ನು ಎರಡು ತಿಂಗಳಲ್ಲಿ ಆಕೆ ಗರ್ಭ ಧರಿಸುವಳು. ಧೈರ್ಯವಾಗಿರಲು ತಿಳಿಸು" ಎಂದರು.

ಗುರುನಾಥರು ದೇಹ ಬಿಟ್ಟರೂ ಮಾತು ಉಳಿಯಿತು. ಎರಡು ತಿಂಗಳಲ್ಲಿ ತಂಗಿ ಗರ್ಭಿಣಿಯಾದರು. ಆಕೆ ಬೆಂಗಳೂರು ವಾಸಿ. ಬೆಂಗಳೂರಿನಲ್ಲಿ ಸ್ವಾಭಾವಿಕ ಹೆರಿಗೆಯಾಗುವ ಸಾಧ್ಯತೆ ಇದ್ದರೂ, ವೈದ್ಯರುಗಳು ಸಿಸೇರಿಯನ್ ಮಾಡುವರೆಂಬ ಪ್ರತೀತಿ ಇದೆ. ಆದರೆ ಗುರುಕೃಪೆ ಇದ್ದವರನ್ನು ಮುಟ್ಟುವವರಾರು? ನನ್ನ ತಂಗಿಗೆ ಈಗ ಎರಡು ಮಕ್ಕಳು. ಎರಡಕ್ಕೂ ಸ್ವಾಭಾವಿಕ ಜನನ.

ಗುರುನಾಥರು ಹೇಳುತ್ತಿದ್ದ ಇನ್ನೊಂದು ಘಟನೆ ಹೇಳಬೇಕೆನಿಸುತ್ತದೆ.

ಗುರುನಾಥರು ಆಗಾಗ್ಗೆ ಗೋಕರ್ಣ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರಂತೆ. ಅಲ್ಲಿನ ಬಹುಪಾಲು ಬ್ರಾಹ್ಮಣರೆಲ್ಲರೂ ಅಪರಕರ್ಮ ಹಾಗೂ ಪುರೋಹಿತ ಮಾಡಿಸುವುದರಲ್ಲಿ ನಿಪುಣರು. ಅಲ್ಲಿನ ಓರ್ವ ಬ್ರಾಹ್ಮಣರ ಮನೆಯಲ್ಲಿ ಉಳಿದಿದ್ದ ಗುರುನಾಥರಲ್ಲಿ ಮನೆಯೊಡೆಯ ತನಗೆ ಸಂತಾನ ಪ್ರಾಪ್ತಿಯಾಗದ ವಿಷಯ ತಿಳಿಸಿ ವಿಷಾದ ವ್ಯಕ್ತಪಡಿಸಿದರಂತೆ.

ಆಗ ಗುರುನಾಥರು ಅವರಿಗೆ ಧೈರ್ಯ ತುಂಬಿ "ಸಂತಾನವಾಗುವುದು. ಧೈರ್ಯವಾಗಿರಿ" ಎನ್ನಲು,

ಅವರು "ಸ್ವಾಮಿ, ನನ್ನ ಪತ್ನಿಗಾಗಲೇ ಐವತ್ತು ವರ್ಷ. ಇನ್ನೆಲ್ಲಿಯ ಸಂತಾನ?" ಎಂದು ಪ್ರಶ್ನಿಸಿದರು.

ಆಗ ಗುರುನಾಥರು "ಅದನ್ನೇ ಗುರುಕೃಪೆ ಅನ್ನೋದು" ಎಂದು ಹೇಳಿ ಅವರಿಗೆ ಆಶೀರ್ವದಿಸಿ ಅಲ್ಲಿಂದ ಬಂದರಂತೆ. ಅದಾಗಿ, ಕೆಲವೇ ದಿನಗಳಲ್ಲಿ ಆಕೆ ಗರ್ಭ ಧರಿಸಿದ್ದು ಇಂದು ಅವರಿಗೆ ಒಂದು ಮಗುವಿದೆಯಂತೆ.

"ಗುರು ಕರುಣಾ ಸಮುದ್ರನೆಂಬ ಮಾತನ್ನು ಇದಕ್ಕಾಗಿಯೇ ಹೇಳುವುದಲ್ಲವೇ?" ......,,,,,,,,


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 



।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment