ಒಟ್ಟು ನೋಟಗಳು

Sunday, November 27, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 15


ಹಾಕಿದ ಜನಿವಾರವ ಸದ್ಗುರುನಾಥ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಮನುಷ್ಯ ಎಷ್ಟು ಅಧಿಕಾರ, ಹಣ, ಸೌಲಭ್ಯಗಳನ್ನು ಪಡೆದರೇನು?, ಗುರುಕರುಣೆ ದೊರಕದಿದ್ದರೆ ಕೆಲವೊಮ್ಮೆ ಎಲ್ಲವೂ ವ್ಯರ್ಥವೆನಿಸಿ, ಏನಿದೆ ಈ ಜೀವನದಲ್ಲಿ? ನಾನೇಕೆ ಬದುಕಬೇಕೆಂಬ ನಿರಾಶೆಯ ಭಾವನೆ ಜಾಗೃತವಾಗುವುದುಂಟು. ಅಂತಹ ಸಂದರ್ಭದಲ್ಲಿ ಈ ಜೀವನದಲ್ಲಿ ಬದುಕಿದ್ದೇನು ಪ್ರಯೋಜನ, ಇದನ್ನು ಕೊನೆಗಾಣಿಸಿ ಬಿಡಬಾರದೇಕೆಂಬ ಭಾವನೆ ಬರುವುದೂ ಉಂಟು. ಇಂತಹ ಭಾವನೆ ಒಬ್ಬ ಸಾತ್ವಿಕರ ಮನದಲ್ಲಿ ಇದ್ದಕ್ಕಿದ್ದಂತೆ ಮೂಡಿತು. ಬಚ್ಚಲಮನೆಯಲ್ಲಿ ಅವರಿಗೆ ಈ ಭಾವನೆ ಬಂದು ಏನೋ ಅವಘಡವಾಗುವುದರಲ್ಲಿ ಅಲ್ಲೊಂದು ರೂಪ ಅವರ ಕಣ್ಣಿಗೆ ಬಿಟ್ಟು. ಆ ಚೈತ್ಯನ್ಯಮಯ ರೂಪ ಸಾವಿನೆಡೆಯಿಂದ ಜೀವನದೆಡೆಗೆ ಇವರನ್ನು ಸೆಳೆದು ತಂದಿತು. ಅಲ್ಲಿ ಕಂಡ ಚೈತನ್ಯ ರೂಪಕ್ಕೆ ಅದಾವ ಜನ್ಮದ ನಂಟಿತ್ತೋ, ಆ ಚೈತನ್ಯಕ್ಕೆ ಇವರೇನು ಸೇವೆ ಮಾಡಿದ್ದರೋ ಗೊತ್ತಿಲ್ಲ. 

ಮುಂದೆ ಸ್ನೇಹಿತರೊಬ್ಬರು 'ಸಖರಾಯಪಟ್ಟಣದ ಅವಧೂತರನ್ನೂ ನಾವು ನೋಡಲು ಹೋಗುತ್ತಿದ್ದೇವೆ ಬರುತ್ತೀರಾ' ಎಂದಾಗ ಈ ದಂಪತಿಗಳೂ ಹೊರಟೇ ಬಿಟ್ಟರು. ಗುರುನಾಥರ ಮನೆಯ ಒಳಗೆ ಕಾಲಿಟ್ಟು ಗುರುನಾಥರಿಗೆ ನಮಸ್ಕರಿಸಿದಾಗ, ಅವರಿಗೆ ನಿನ್ನೆ ದರ್ಶನ ಕೊಟ್ಟ ಮಹಾತ್ಮರು, ತಮ್ಮನ್ನುಳಿಸಿದವರು, ಇವರೇ ಎಂದು ತಿಳಿದು ಅಪಾರ ಆನಂದವಾಯಿತು. ಗುರುನಾಥರು ಇವರನ್ನು ಹತ್ತಿರಕ್ಕೆ ಕರೆದು, ಜನಿವಾರವನ್ನು ಹಾಕಿದರು, ಹರಸಿದರು. ಜನಿವಾರವೆಂದರೆ ಮರುಜನ್ಮದ ಸಂಕೇತವೋ? ಬ್ರಹ್ಮಜ್ಞಾನ ಪ್ರಾಪ್ತಿಗೆ ದಾರಿಯೋ ಆ ಗುರುನಾಥರೇ ಬಲ್ಲರು. ಜನಿವಾರ ಧರಿಸಿದ ಕುಟುಂಬದಲ್ಲಿ ಜನಿಸಿದ ಇವರಿಗೆ ಗುರುನಾಥರು 'ಹಾಕಿದ ಜನಿವಾರವ, ಸದ್ಗುರುನಾಥ ನೂಕಿದ ಭಾವಬಾರವ' ಎಂಬ ನುಡಿಯಂತೆ ಅನುಗ್ರಹಿಸಿದ್ದರು. ಜ್ಞಾನಿಗಳಿಗೆ ಜಾತಿ ಮತಗಳ ಎಲ್ಲೆ ಎಲ್ಲಿದೆ? ಓದುಗ ಗುರುಭಕ್ತರೇ, ಹಿಂದೆಂದೂ ಗುರುನಾಥರನ್ನು ನೋಡೇ ಇರದ ಅವರಿಗೆ ಗುರುನಾಥರು ಕೃಪೆ ತೋರಿ, ಉದ್ಧರಿಸಿದ ಈ ರೀತಿ ನೋಡಿದರೆ ಗುರುನಾಥರು ಹೇಳುತ್ತಿದ್ದ ಮಾತೊಂದು ನೆನಪಿಗೆ ಬರುತ್ತದೆ. 'ಒಮ್ಮೆ ಅವನ ಮನೆಯ ಒಂದು ತೊಟ್ಟು ಹಾಲನ್ನು ಕುಡಿದರೆ ಜನ್ಮ ಜನ್ಮಗಳು ಅವನ ಉದ್ಧಾರ ಮಾಡುವ ಹೊಣೆ ನನ್ನ ಮೇಲೆ ಇರುತ್ತದೆ' ಎಂಬುದು ಅದೆಷ್ಟು ಸತ್ಯ. ಗುರುಸಂಬಂಧ, ಬಾಂಧವ್ಯ, ಗುರುಕರುಣೆ ಜನ್ಮ ಜನ್ಮಾಂತರದ ನಂಟೆಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ? ಅವರ ಕೃಪೆಯಾಯಿತೆಂದರೆ ಎಷ್ಟು ದೂರ ಇದ್ದರೇನು? ಯಾವ ಸ್ಥಿತಿಯಲ್ಲಿದ್ದರೇನು? ಹಿಡಿದೆಳೆದು ತಂದು, ತಮ್ಮ ಪಾದಕ್ಕೆ ಹಾಕಿಕೊಂಡು ಉದ್ಧರಿಸುವ ರೀತಿ ಅನನ್ಯ. 

ಪರಮಹಂಸನಾಗಿ ಹೋಗಿದ್ದಾನೆ 


ಶಿವಮೊಗ್ಗದಲ್ಲಿದ್ದ ಒಬ್ಬ ಗುರುಬಂಧುಗಳಿಗೆ ಗುರುನಾಥರ ಬಗ್ಗೆ ಅಪಾರ ಒಲವು ಇದ್ದಿತು. ದಿನ ಸಂಜೆ ಮಿತ್ರರು ಸೇರಿದಾಗ ಗುರುನಾಥರ ಚಿಂತನೆಯೇ ಅವರ ಹರಟೆಯ ವಸ್ತುವಾಗಿತ್ತು. ಹರಟೆ ಹೀಗೆ ಸತ್ಸಂಗವಾಗಿತ್ತು. ಅನೇಕ ಜನ ಸಾಮಾನ್ಯರೂ ಈ ಸತ್ಸಂಗದಿಂದ ಗುರುಭಕ್ತರಾಗಿ, ಗುರುನಾಥರ ಶಿಷ್ಯರಾಗಿ, ತಮ್ಮ ಜೀವನದ ಮಾರ್ಗವನ್ನೇ ಬದಲಿಸಿಕೊಂಡಿದ್ದರು. ದೀಪ ಒಂದರಿಂದ ಸಾವಿರ ದೀಪ ಬೆಳಗಿಸುವಂತೆ, ಸದ್ಗುರುನಾಥ ಲೀಲಾಮೃತ ಅದ್ಭುತವಾದುದನ್ನೇ ಮೆರೆದಿತ್ತು. 

ಈ ರೀತಿ ತಮ್ಮ 'ಹರಟೆ' ಯಿಂದ ತಮ್ಮ ಸ್ನೇಹಿತರನ್ನೂ ಗುರುನಾಥರ ಭಕ್ತರಾಗಿಸಿದ ಅವರು ಆಂಜನೇಯನ ಭಕ್ತರು. ಗುರುನಾಥರಿಗೆ ಇದರ ಅರಿವಾಗಿ 'ನೀನು ಆಂಜನೇಯನನ್ನು ನೋಡಬೇಕೆ.. ನೋಡಿಲ್ಲಿ' ಎಂದು ಆಂಜನೇಯನ ದರ್ಶನವನ್ನು ಮಾಡಿಸಿ ಪೂರ್ಣ ಅನುಗ್ರಹಿಸಿದರಂತೆ. ತಮ್ಮ ವೃತ್ತಿಯ ಜೊತೆಗೆ ಗುರುಭಕ್ತಿಯ ಪ್ರವೃತ್ತಿಯಿಂದ ಸಂಪ್ರೀತರಾದ ಅವರಿಗೆ, ಬೆಂಗಳೂರಿಗೆ ವರ್ಗವಾಯಿತು. ಅಲ್ಲಿಂದಲೇ ಸಂಜೆ ದೂರವಾಣಿಯಲ್ಲಿ ಗುರುನಾಥ ಸಂಕೀರ್ತನವೇ ನಡೀತಿತ್ತು. 

ಒಮ್ಮೆ ಈ ಗುರುಬಂಧುಗಳ ಗುರುಬಂಧುಗಳಿಗೆ ಗುರುನಾಥರು ತೀರ್ಥಹಳ್ಳಿಯ ಬಳಿ ಸಿಕ್ಕಿದರು. ತಮ್ಮ ಸ್ನೇಹಿತರಿಗೆ ವಿಚಾರ ತಿಳಿಸಲು ಇವರು ಶತ ಪ್ರಯತ್ನಪಟ್ಟರೂ ಅವರು ಸಿಗಲಿಲ್ಲ. ಬೆಂಗಳೂರಿನಲ್ಲಿ ಅಂದೇ ಅವರೊಂದು ಬಸ್ ಅಪಘಾತದಲ್ಲಿ ಇಹಲೀಲೆಯನ್ನು ಮುಗಿಸಿದ್ದರು. ವಿಷಯ ತಿಳಿದ ಇವರು ಮೈಸೂರಿಗೆ ಓಡಿದ್ದರು. ಅಲ್ಲಿ ತಿಳಿದ ವಿಚಾರವೆಂದರೆ ಹದಿನೈದು ದಿನಗಳ ಹಿಂದೆಯಷ್ಟೇ ಗುರುನಾಥರು ಅಲ್ಲಿಗೆ ಹೋಗಿ, ಮೂರು ದಿನಗಳು ನಿರಂತರ ಅವರೊಂದಿಗಿದ್ದು ಪೂರ್ಣಾಶೀರ್ವಾದ ಮಾಡಿ ಬಂದಿದ್ದರಂತೆ. ಆ ಜೀವ ಪರಮ ಸಂತೃಪ್ತಿಯನ್ನು ಪಡೆದಿತ್ತು. ಇಹಲೀಲೆ ಮುಗಿಸಿತ್ತು. ಗುರುನಾಥರೂ ನಂತರ ಬಂದು, ಮನೆಯವರನ್ನೆಲ್ಲಾ ಸಂತೈಸಿ, 'ಅವನು ಪರಮಹಂಸನಾಗಿ ಹೋಗಿದ್ದಾನೆ. ದುಃಖಿಸಬೇಡಿರೆಂದು' ಸಮಾಧಾನ ಮಾಡಿ ಬಂದಿದ್ದರಂತೆ. ಹೀಗೆ ಗುರುನಾಥರ ಲೀಲೆಯನ್ನು, ತಮಗೆ ಗುರುದರ್ಶನ ಮಾಡಿಸಿದವರ ವಿಚಾರವನ್ನು ತಿಳಿಸುತ್ತಾ ಅವರು ತಮ್ಮ ಅನುಭವವನ್ನು ಮುಂದುವರೆಸಿದರು. 

ಗುರು ನಿನ್ನೊಳಗೇ ಇದ್ದಾನೆ ನೋಡಿಕೋ 


'ಅಂದು ಮೊದಲ ಬಾರಿಗೆ ಸಖರಾಯಪಟ್ಟಣಕ್ಕೆ ನಮ್ಮ ಮಿತ್ರರು ಗುರುದರ್ಶನ ಮಾಡಿಸಲು ನನ್ನನ್ನು ಕರೆದೊಯ್ದಾಗ ಗುರುನಾಥರು ಊರಲ್ಲಿರಲಿಲ್ಲ. ಗುರುದರ್ಶನವಷ್ಟೇನು ಸುಲಭವೇ? ನಮ್ಮ ಮಿತ್ರರು 'ಬೇಲೂರಿಗೆ ಹೋಗೋಣ... ಬೆಣ್ಣೆಯ ಅಲಂಕಾರ ಚೆನ್ನಾಗಿರುತ್ತೆ' ಎಂದು ನಮಗೆ ಬೇಜಾರಾಗದಿರಲೆಂದು ನುಡಿದರು. ಮುಂದೆ ಎರಡನೇ ಬಾರಿಗೆ ಹೋದಾಗ ಗುರುನಾಥರು ಸಿಕ್ಕರು. ಅವರ ಒಂದೊಂದು ಭೇಟಿಯೂ ಒಂದೊಂದು ಪಾಠ, ಉಪದೇಶವಾಗುತ್ತಾ, ನಮ್ಮನ್ನವರು ತಿದ್ದುತ್ತಿದ್ದರು.

ನಾವು ಕಾರಿನೊಳಗಿನಿಂದ ಹಣ್ಣು ಹಂಪಲು ತರುವುದನ್ನು ಕಂಡು, ಓಡಿ  ಬಂದ ಅವರು 'ಅಲ್ಲಿ ಅವುಗಳ ಅವಶ್ಯಕತೆ ಇಲ್ಲ.. ಅವೇನೂ ಬೇಡವೇ ಬೇಡ... ತರಬೇಡಿ.... ನೀವು ತಯಾರು ಮಾಡಿದ್ದೀರಾ... ನೀವು ಕಷ್ಟಪಟ್ಟು ಬೆಳೆದಿದ್ದರೆ ತನ್ನಿ' ಎಂದು ಖಡಾಖಂಡಿತವಾಗಿ ನುಡಿದರು. ಒಂದು ಕ್ಷಣಕ್ಕೆ ನಮಗೆ ಪೆಚ್ಚಾದರೂ, ಆಂತರ್ಯದಲ್ಲಿದ್ದ ಸತ್ಯವಾದ 'ದುಡ್ಡುಕೊಟ್ಟು ಕೊಂಡು ತಂದು ಏನೂ ಗಿಟ್ಟಿಸುವುದುಅಸಾಧ್ಯ. ಅದಕ್ಕೆ ನಿಷ್ಕಲ್ಮಷ ಭಾವ ಭಕ್ತಿ ಬೇಕೆಂದು, ಹಣದ ಅಹಮಿಕೆ ಬೇಕಾಗಿಲ್ಲ, ಅದಿಲ್ಲಿ ನಡೆಯುವುದೂ ಇಲ್ಲವೆಂಬುದನ್ನು' ಮನಗಾಣಿಸಿದ್ದರು. 

ಮತ್ತೊಮ್ಮೆ ಹೋದಾಗ 'ಯಾರು ಯಾರು ಎಲ್ಲಿದ್ದಾರೋ ಅಲ್ಲೇ ಕುಳಿತಿರಿ' ಎಂದು ಅಲ್ಲೇ ಊಟ ಹಾಕಿಸುತ್ತಿದ್ದರು. ಪಕ್ಕದಲ್ಲಿ ಕುಳಿತ ಶ್ರೀಮಂತ ಹೆಣ್ಣು ಮಗಳೊಬ್ಬಳ ಪಕ್ಕ ಒಂದು ಕೀವು ಒಸರುತ್ತಿದ್ದ ನಾಯಿ ಇತ್ತು. ಅದು ಅವರ ಸನಿಹ ಬಂದಂತೆ ಅತ್ತ ಅತ್ತ ಅವರು ಜರುಗುತ್ತಿದ್ದರು. ಆದರೂ ಗುರುನಾಥರು ಅವರನ್ನು ಅಲ್ಲಿಯೇ ಕೂರಿಸಿ ಊಟ ಬಡಿಸಿ, ಪ್ರಾಣಿದಯೆ, ಭಗವಂತನ ಸೃಷ್ಠಿಯಲ್ಲಿ ಎಲ್ಲವೂ ಸುಂದರ, ಅದರಲ್ಲಿ ಅಸಹ್ಯ ಪಡುವುದೇನೂ ಇಲ್ಲ' ಎಂಬುದನ್ನು ಭಕ್ತರಿಗೆ ತಿಳಿಸಿದ್ದರು. 

ಗುರುನಾಥ ಸಂಕೀರ್ತನವನ್ನು ಮತ್ತೆ ಅವರು ಮುಂದುವರೆಸಿದರು. 'ಗುರು ಗುರು ಎಂದು ಎಲ್ಲೆಲ್ಲೋ ಏಕೆ ಅಲೆಯುತ್ತೀರಿ. ನಿಮ್ಮೊಳಗೆ ಗುರುವಿದ್ದಾನೆ. ಅದನ್ನು ಕಂಡುಕೊಳ್ಳಿ' ಎಂದಾಗ ಅವರ ಸರಳತೆ ನನಗೆ ಪ್ರಿಯವಾಯಿತು. 

'ಒಮ್ಮೆ ಭಾರಿ  ಮೊತ್ತದ ಹಣ, ನನಗೆ ಅನಿವಾರ್ಯವಾಗಿತ್ತು. ಅದನ್ನು ಹೇಗೆ ಹೊಂದಿಸುವುದೆಂಬ ಚಿಂತೆಯಲ್ಲಿದ್ದೆ. ಗುರುನಾಥರ ಕೃಪೆಯಾಯಿತೆಂಬಂತೆ, ನನ್ನ ಮಿತ್ರರೊಬ್ಬರು ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು, ಅಲ್ಲಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ಬಂದು ನನಗೆ ಹಣ ನೀಡಿ ಸಹಕರಿಸಿದ್ದರು. ಇದು ಆ ಗುರುನಾಥರ ಕರುಣೆ ಎಂದೇ ನನಗನಿಸಿದ್ದು. ಮತ್ತೊಮ್ಮೆ ನಾನು ಕಂಡ ವಿಚಿತ್ರವೆಂದರೆ, ಜಗದ್ಗುರುಗಳು ಸಖರಾಯಪಟ್ಟಣಕ್ಕೆ ಬರುತ್ತಾರೆಂದು ತಿಳಿದು ನಾವು ಶಿವಮೊಗ್ಗದಿಂದ ಹೊರಟೆವು. ನಮ್ಮ ಮಿತ್ರರು ಶೃಂಗೇರಿಯಿಂದ ಹೊರಟರು. ಭಾರಿ ಮಳೆ, ಹೇಗಪ್ಪಾ ಎಂದು ನಾವು ಚಿಂತಿಸುತ್ತಾ, ಸಖರಾಯಪಟ್ಟಣ ತಲುಪಿದಾಗ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಗದ್ಗುರುಗಳು ಬಂದು ಹೋಗುವವರೆಗೆ ಒಂದು ಹನಿ ಮಳೆ ಇರಲಿಲ್ಲ. ಇಲ್ಲಿ ಯಾರಿಗೆ ಏನೂ ತೊಂದರೆಯಾಗಿರಲಿಲ್ಲ. ಗುರುನಾಥರೆಂದರೆ, ಸಾಮಾನ್ಯರೇ? ಪ್ರಕೃತಿಯ ಮೇಲೆ ಅವರ ಪ್ರಭಾವ ಅದೆಷ್ಟಿತ್ತೆಂಬುದು ಎಲ್ಲರಿಗೂ ಅರಿವಾಗಿತ್ತು. ಗುರುನಾಥರ ವಿನಯಶೀಲತೆ, ಜಗದ್ಗುರುಗಳಿಗೆ ತೋರುವ ಗೌರವದಂತೆ, ಕೂಲಿಯಾಳುಗಳ ಜೊತೆ ಅವರ ವರ್ತನೆಯೂ ಎಷ್ಟು ಆಪ್ಯಾಯಮಾನವಾಗಿತ್ತೆಂದರೆ, 'ಅಯ್ಯಾ ಒಂದಷ್ಟು ಕಾಯಿ ಕಿತ್ತು ಕೊಡುತ್ತಿರುವನಯ್ಯ' ಎಂದು ಕೇಳುವ ರೀತಿ, ಕೆಲಸ ಮಾಡಿದವರಿಗೆ ಹಣ ನೀಡಿ' ನಿನಗೆ ಸಾಕಾಗುತ್ತೆನಯ್ಯಾ, ಇನ್ನೂ ಸ್ವಲ್ಪ ಬೇಕೇನಯ್ಯಾ' ಎಂದು ಪ್ರೀತಿಯಿಂದ ನುಡಿವ ರೀತಿ - ಅದು ಅವರಿಗೇ ಮೀಸಲು. ಗುರುನಾಥರ ಬಳಿ ಹೋದಾಗ ಅವರಾಡುತ್ತಿದ್ದ ಮಾತು ಯಾರಿಗೋ, ಎನಿಸುತ್ತಿದ್ದರೂ ಅದು ಯಾರನ್ನೋ ಕುರಿತಾಗಿಯೇ ಇರುತ್ತಿತ್ತು. ಅವರೆಷ್ಟು ಬೈದರೂ ಮತ್ತೆ ಮತ್ತೆ ಅವರ ಬಳಿ ಹೋಗಬೇಕೆಂಬ ಆಸೆಯೇ ಆಗುತ್ತಿತ್ತೇ ಹೊರತು ಬೇಸರವಾಗುತ್ತಿರಲಿಲ್ಲ. ಎಲ್ಲ ಬಲ್ಲವರಂತೆಯೇ ಗುರುನಾಥರು ಸರ್ವಾಂತರ್ಯಾಮಿಗಳೆಂಬುದಕ್ಕೆ ಈ ನಿದರ್ಶನ ಕೇಳಿ. ನಮ್ಮ ಸ್ನೇಹಿತರ ಸಹೋದರಿ ಅಮೇರಿಕೆಯಲ್ಲಿದ್ದರು. ಅವರು ಗುರುನಾಥರ ಭಕ್ತೆ. ಅಮೇರಿಕೆಯ ತಮ್ಮ ಮನೆಯಲ್ಲಿ ಅವರು ಗುರುನಾಥರ ಫೋಟೋ ಹಾಕಿಕೊಂಡಿದ್ದರು. ಆಕೆಯ ಯಜಮಾನರು ಗುರುನಾಥರ ಫೋಟೋ ನೋಡಿ ಏನೋ ಸಲ್ಲದ ಮಾತನಾಡಿದ್ದರಂತೆ. ಒಂದು ದಿನ ಗುರುನಾಥರು ಬೆಂಗಳೂರಿನ ಅವರ ಸಂಬಂಧಿಗಳ ಮನೆಗೆ ಹೋಗಿ 'ಏನಮ್ಮಾ ನಿನ್ನ ತಂಗಿಗೆ ಫೋನು ಮಾಡಿಕೊಡೆಂದು' ಅವಸರಿಸಿದಾಗ, ಫೋನಿನಲ್ಲಿ ಅಂತರ ರಾಷ್ಟ್ರೀಯ ಕರೆಗಳ ಕರೆನ್ಸಿ ಮುಗಿದಿರುವುದನ್ನು ಗಮನಿಸದೇ, ಡಯಲ್ ಮಾಡಿ ಗುರುನಾಥರಿಗೆ ನೀಡಿದರಂತೆ. ಇತ್ತಲಿಂದ ಗುರುನಾಥರು 'ಏನಮ್ಮ ನಿನ್ನ ಗಂಡ ನನಗೆ ಬಯ್ಯುತ್ತಾನಂತಲ್ಲ. ನಾನೇನು ತಪ್ಪು ಮಾಡಿದೀನಿ? ಅವನಿಗೆ ಕೊಡು, ಎಂದು ಅವರ ಜೊತೆಯೂ ಅದೆಷ್ಟೋ ಹೊತ್ತು ಮಾತನಾಡಿದಾಗ, ಆ ಮನುಷ್ಯ ಕರಗಿ ನೀರಾಗಿ ಗುರುನಾಥರ ಭಕ್ತರಾಗಿಬಿಟ್ಟರಂತೆ. ಈಗಲೂ ಅವರು ಗುರುನಾಥರ ಸ್ಮರಣೆಯಲ್ಲಿದ್ದಾರೆ. ಇದಕ್ಕಿಂತ ಆಶ್ಚರ್ಯವೆಂದರೆ, ಕರೆನ್ಸಿಯೇ ಇಲ್ಲದೆ ಗುರುನಾಥರು ಅಷ್ಟೊಂದು ಹೊತ್ತು ಹೇಗೆ ಮಾತನಾಡಿದರು. ಅಮೆರಿಕದಲ್ಲಾದದ್ದು ಇವರಿಗೆ ಹೇಗೆ ತಿಳಿಯಿತು. ಎಲ್ಲ ಅಯೋಮಯ. ಇದೇ ನಮ್ಮ ಗುರುನಾಥರು' ಎಂದು ಭಾವಪರವಶರಾಗುತ್ತಾರೆ ಅವರು.


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

No comments:

Post a Comment