ಒಟ್ಟು ನೋಟಗಳು

238877

Saturday, November 5, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 32


ಗುರುವೆಂದರೆ ಬೆಂಕಿ 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಆ ವ್ಯಕ್ತಿ ನಾಡಿನ ಸಜ್ಜನ ರಾಜಕಾರಣಿ  ಎಂದು ಹೆಸರು ಪಡೆದಿದ್ದರು. ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾದವರು. ಪ್ರತಿ ಬಾರಿ ಚುನಾವಣೆಗೂ ಮುನ್ನ ಹಾಗೂ ಆಯ್ಕೆಯಾದ ನಂತರವೂ ಗುರುನಾಥರಲ್ಲಿ ಬಂದು ಆಶೀರ್ವಾದ ಪಡೆದು ಹೋಗುತ್ತಿದ್ದರು. 

ಒಮ್ಮೆ ಯಾವುದೋ ಸಮಸ್ಯೆ ನಿಮಿತ್ತ ಗುರುನಿವಾಸಕ್ಕೆ ಬಂದ ಆ ಸಂಸದರು ಗುರುನಾಥರನ್ನು ಕುರಿತು "ಸ್ವಾಮಿ, ನಿಮಗೆ ಹೇಗೂ ವಯಸ್ಸಾಯ್ತು. ನಿಮ್ಮ ಮನೆಯ ವಹಿವಾಟನ್ನು ನಿಮ್ಮ ಮಗನಿಗೆ ವಹಿಸಿ" ಎಂದು ಸಲಹೆಯನ್ನಿತ್ತರು. ಗುರುನಾಥರು ಅವರತ್ತ ಸುಮ್ಮನೆ ಒಮ್ಮೆ ನೋಡಿ ನಕ್ಕರು. 

"ಗುರುವೆಂದರೆ ಬೆಂಕಿ. ಅವರ ವೈಯಕ್ತಿಕ ವಿಚಾರಗಳಿಗಾಗಲಿ ಅಥವಾ ತನ್ನ ಕಾರ್ಯ ಬಿಟ್ಟು ಬೇರೆಯವರ ವಿಚಾರಕ್ಕೆ ಯಾರಾದರೂ ಮೂಗು ತೂರಿಸುವುದನ್ನು ಗುರುನಾಥರು ಎಂದಿಗೂ ಸಹಿಸುತ್ತಿರಲಿಲ್ಲ". 

ಆ ನಂತರ ಅಲ್ಲಿಂದ ಹೊರಟ ಆ ಸಂಸದರು ಮನೆ ತಲುಪುವ ಮುನ್ನವೇ ಇಪ್ಪತ್ತು-ಇಪ್ಪತ್ತೈದು ಬಾರಿ ಇದ್ದಕ್ಕಿದ್ದಂತೆಯೇ ಬೇಧಿ ಆಗತೊಡಗಿತು. ಮನೆ ತಲುಪಿ ವೈದ್ಯ ಮುಖೇನ ಮಾಡಿದ ಯಾವುದೇ ಔಷಧೋಪಚಾರಗಳು ಫಲಿಸಲಿಲ್ಲ. ಬೇರೆ ದಾರಿ ಕಾಣದೆ ತನ್ನವರೊಬ್ಬರನ್ನು ಗುರುನಿವಾಸಕ್ಕೆ ಕಳಿಸಿಕೊಟ್ಟರು. 

ಆಗ ಮಾತನಾಡುತ್ತಾ ಗುರುನಾಥರು "ಗುರು ಎಂದರೆ ಗುರು ಅಷ್ಟೇ. ನೀವು ಪ್ರತಿಯೊಬ್ಬರು ಇಲ್ಲಿಗೆ ಬಂದ ಉದ್ದೇಶ ಮರೆತು ಬೇರೆಡೆಗೆ, ನನ್ನ ಮನೆ ವಿಚಾರಕ್ಕೆ ಬಂದಲ್ಲಿ ವ್ಯತ್ಯಾಸವಾಗುವುದು. ಈ ಬಾಳೆಹಣ್ಣನ್ನು ಅವರಿಗೆ ಕೊಡು ಸರಿ ಹೋಗುವರು" ಎಂದು ಒಂದು ಬಾಳೆಹಣ್ಣನ್ನು ಕಳಿಸಿಕೊಟ್ಟರು. ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸಿತು. ಆ ನಂತರ ಅವರು ಗುರುನಿವಾಸಕ್ಕೆ ಬಂದು ತನ್ನ ತಪ್ಪಿಗಾಗಿ ಗುರುಗಳಲ್ಲಿ ಕ್ಷಮೆಯಾಚಿಸಿದರು. 

ಹಾಗೆಯೇ ಇನ್ನೊಮ್ಮೆ ಗುರುನಾಥರ ದರ್ಶನಕ್ಕಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ತನ್ನ ಆಪ್ತ ಸಲಹೆಗಾರರನ್ನು ಕಳಿಸಿಕೊಟ್ಟರು. ಅಂದು ಬಹಳ ಜನರು ದರ್ಶನಕ್ಕಾಗಿ ಬಂದಿದ್ದರು. 

ಬಹಳ ಹೊತ್ತು ಕಾದರೂ ತನ್ನತ್ತ ತಿರುಗಿಯೂ ನೋಡದ ಗುರುನಾಥರನ್ನು ಕುರಿತು ಆ ವ್ಯಕ್ತಿ ಸಿಟ್ಟಿನಿಂದ "ಏನ್ ಸ್ವಾಮಿ, ಎತ್ತಿನ ಗಾಡೀಲಿ ಬಂದೋರಿಗೆಲ್ಲಾ ಮಾತಾಡಿಸಿ ಕಳಿಸುತ್ತಿದ್ದೀರಲ್ಲಾ. ನನ್ನ ಯಾಕೆ ಮಾತನಾಡಿಸಲ್ಲಾ?" ಎಂದು ಅಹಂಕಾರದಿಂದ ಕೇಳಿದರು. 

ಇದರಿಂದ ಸಿಟ್ಟಿಗೆದ್ದ ಗುರುನಾಥರು "ಹೌದಯ್ಯ, ನಾನು ಅಂತಹವರಿಗೆ ಮೊದಲು ಮಾತನಾಡಿಸೋದು. ಏನೀಗ? ಮಿಗಿಲಾಗಿ ನಾನೇನು ನಿನ್ನ ಗುರುವಲ್ಲ. ನಿಂಗೆ ತಾಕತ್ತೇನಾದ್ರೂ ಇದ್ರೆ ಈ ಹಣ್ಣನ್ನು ನಿಮ್ಮ ಮಠದ ಮಠಾಧಿಪತಿಗೆ ತಿನ್ನಿಸಿ ಆಮೇಲೆ ಬಾ ನೋಡೋಣ" ಎಂದು ಹೇಳಿ ಒಂದು ಮೂಸಂಬಿ ಹಣ್ಣನ್ನು ನೀಡಿದರು. 

ಆ ವ್ಯಕ್ತಿ ಅಲ್ಲಿಂದ ಹೊರಟು ತನ್ನ ಮಠದ ಆ ಪೀಠಾಧಿಪತಿಗೆ ತಿನ್ನಿಸಿದರು. ವಯೋವೃದ್ಧರಾಗಿದ್ದ ಆ ಮಠಾಧಿಪತಿ ಎರಡು ದಿನಗಳಲ್ಲಿ ದೇಹ ಬಿಟ್ಟರು. ಇದನ್ನು ಕಂಡು ದಿಗಿಲುಗೊಂಡ ಆ ವ್ಯಕ್ತಿ ಸೀದಾ ಗುರುನಾಥರಲ್ಲಿ ಬಂದು ಕ್ಷಮೆ ಯಾಚಿಸಿದರು. 

ಅಂತೆಯೇ ಇನ್ನೊಮ್ಮೆ, ಇಂದು ವಿಶ್ವ ವಿಖ್ಯಾತರಾಗಿರುವ ಆಶ್ರಮದ ಅಧಿಪತಿಯೊಬ್ಬರು ತನ್ನ ಕೆಲ ಶಿಷ್ಯರೊಂದಿಗೆ ಗುರುನಿವಾಸಕ್ಕೆ ಬಂದರು. ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಗುರುಗಳು ಮನೆಯ ತೋಟದಲ್ಲಿ ಬೆಳೆದ ಮಾವಿನ ಹಣ್ಣನ್ನು ತಿನ್ನಲು ನೀಡಿದರು. 

ಆ ನಂತರ "ವಿಶ್ವ ಪ್ರಸಿದ್ಧಿಯಾಗುವಿರಿ" ಎಂದು ಹರಸಿದರು. ಆ ನಂತರ ಬಾಣಾವರದ ವೇದಿಕೆಗೆ ಹೋಗಲು ಹೇಳಿ ತಾನೂ ಕೂಡ ಇನ್ನೊಂದು ವಾಹನದಲ್ಲಿ ಅಲ್ಲಿಗೆ ತಲುಪಿದರು. ಅಲ್ಲಿ ನಿಂತಿದ್ದ ಅವರೆಲ್ಲರಿಗೂ ಪ್ರದಕ್ಷಿಣೆ ಬಂದು ನಮಸ್ಕರಿಸಿದರು. ಇದನ್ನು ಕಂಡ ಆ ಆಶ್ರಮದ ಅಧಿಪತಿ ಹೀಗೆ ಹೇಳಿದರು: "ಗುರುಗಳೇ, ಇಂದಿಗೆ ನನ್ನಲ್ಲಿರುವ 'ನಾನು' ಎಂಬ ಅಹಂಕಾರ ನಾಶವಾಯಿತು". 

ಕೇವಲ ತನ್ನ ದೃಷ್ಠಿ ಮಾತ್ರದಿಂದ ಏನನ್ನು ಬೇಕಾದರೂ ನೀಡಲು ಶಕ್ತರಾಗಿದ್ದ ಗುರುನಾಥರು ಮನುಷ್ಯರನ್ನು ಅವರವರಿಗೆ ತಕ್ಕಂತೆ ದೋಷ ಸರಿಪಡಿಸಲು ಬಳಸುತ್ತಿದ್ದ ಭಿನ್ನ ಭಿನ್ನ ದಾರಿಗಳು ನಿಜಕ್ಕೂ ವಿಚಿತ್ರ. ಗುರು ವಾಕ್ಯದಂತೆಯೇ ಇಂದು ಆ ವ್ಯಕ್ತಿ ಜಗತ್ಪ್ರಸಿದ್ಧರಾಗಿರುವರು. 

"ಮೊದಲು ಮನುಷ್ಯ ನಾನು ಅನ್ನೋದನ್ನು ಬಿಡಬೇಕು ಕಣಯ್ಯಾ. ಆಗಲೇ ಗುರು ಸಿಗೋದು ತಿಳೀತಾ?" ಎಂಬ ಗುರುನಾಥರ ಮಾತಿಗೆ ಇಂತಹ ಘಟನೆಗಳು ನಿದರ್ಶನವೆನಿಸುತ್ತದೆ........,,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 



।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment