ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 42
ಕೆಲಸದ ರಾದ್ದಾಂತ, ಗುರುವಚನ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಚರಣದಾಸನಾದ ನಾನು ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಗ ಒಮ್ಮೆ ಸ್ನೇಹಿತನೊಂದಿಗೆ ಹೋಟೆಲ್ ಗೆ ಹೋಗಿ ಊಟ ಹೊರಬಂದಾಗ ನನ್ನ ಪರಿಚಿತರೊಬ್ಬರ ಕಾರಿನ ಮೇಲೆ ತಟ್ಟೆ ಇಟ್ಕೊಂಡು ಊಟ ಮಾಡುತ್ತಿದ್ದ ಒಬ್ಬರನ್ನು ನೋಡಿದೆ. ಪರಿಚಿತರೊಬ್ಬರು ನನ್ನನ್ನು ಅವರಿಗೆ ಪರಿಚಯ ಮಾಡಿಕೊಟ್ಟರು.
ಅದುವೇ ನನ್ನ ಹಾಗೂ ಗುರುಗಳ ಪ್ರಥಮ ಭೇಟಿ:
ಗುರುನಾಥರಿಗೆ ನಮಸ್ಕರಿಸಿದೆ. ಅವರು "ಏನ್ ಮಾಡ್ತಿದೀರಿ ಸ್ವಾಮಿ" ಅಂದ್ರು. ನಾನು ಎಂ.ಎ. ಅಂದೆ.
ಆ ನಂತರ ಈ ಚರಣದಾಸನಾದ ನಾನು ಗುರು ನಿವಾಸದಲ್ಲಿ ಆಶ್ರಯ ಪಡೆದ ಬಹು ವರ್ಷಗಳ ನಂತರ ಗುರುನಾಥರನ್ನು ಹೀಗೆ ಕೇಳಿದೆ. "ಗುರುಗಳೇ, ಇಲ್ಲಿಗೆ ಯಾರು ಯಾರು ಬರ್ತಾರೆ ಅಂತ ನಿಮಗೆ ಮೊದಲೇ ಗೊತ್ತಿರುತ್ತಾ?. ನಾನು ಇಲ್ಲಿಗೆ ಬರೋದು ನಿಮಗೆ ಗೊತ್ತಿತ್ತಾ?" ಎಂದು ಪ್ರಶ್ನಿಸಿದೆ.
ಅದಕ್ಕವರು "ಗುರು ಸ್ಥಾನದಲ್ಲಿರುವವನು ಜನ್ಮ ತಳೆಯುವ ಮೊದಲು ತನ್ನ ಜನ್ಮಾಂತರದ ಸಹಚರರನ್ನು ಅರವತ್ತರಿಂದ ನೂರಾಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನಿಸಲು ವ್ಯವಸ್ಥೆ ಮಾಡಿಟ್ಟು ಆ ನಂತರ ತಾನು ಜನ್ಮ ತಳೆಯುವನು. ಆ ನಂತರ ಯಾರನ್ನು ಯಾವಾಗ ಕರೆಸಬೇಕೆಂದು ಆದೇಶವಾಗುತ್ತದೋ ಆಗ ಒಂದು ಗುಂಡಿ ಒತ್ತುತ್ತೇವೆ. ಆಗ ಆ ವ್ಯಕ್ತಿ ಎಲ್ಲೇ ಇದ್ದರೂ ಇಲ್ಲಿಗೆ ಬರುತ್ತಾನೆ ಕಣಯ್ಯಾ. ಆ ನಂತರ ಅವನಿಗೆ ಬೇಕಾದ ತರಬೇತಿ ನೀಡಲಾಗುವುದು ತಿಳೀತಾ?" ಎಂದರು.
ಚರಣದಾಸನಾದ ನಾನು ಸರ್ಕಾರಿ ಸೇವೆಗೆ ಸೇರಬಯಸಿ ಎರಡು ಬಾರಿ ಬರೆದ ಪರೀಕ್ಷೆಗಳು ಭ್ರಷ್ಟ ವ್ಯವಸ್ಥೆಯಿಂದಾಗಿ ಹಗರಣದಲ್ಲಿ ಸಿಲುಕಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಮೂರನೇ ಬಾರಿ ಪರೀಕ್ಷೆ ಬರೆಯಲು ಸಿದ್ಧನಾದ ನನಗೆ ಗುರುನಾಥರು "ಬೇಡ ಕಣಪ್ಪಾ ಬರೀಬೇಡ. ಈ ಪರೀಕ್ಷೆಲೇ ನಿನ್ನ ಆಯ್ಕೆಯಾಗುವುದು. ಭಯ ಬಿಡು. ನಾನಿದ್ದೀನಿ ಅಂತ ಹೇಳಲಿಲ್ವಾ ನಿಂಗೆ?" ಅಂದ್ರು.
ಮತ್ತೊಮ್ಮೆ ಗುರುವೆಂಬ ಅರಿವಿರದ ನಾನು "ಗುರುಗಳೇ ನಾನು ಎಲ್ಲಿಯಾದರೂ ಕೆಲಸಕ್ಕೆ ಸೇರುತ್ತೀನಿ" ಅಂದೆ.
ಅದಕ್ಕೆ "ಹೂಂನಯ್ಯಾ ಸೇರಿಕೋ. ಈ ವಯಸ್ಸಲ್ಲಿ ದುಡೀಬೇಕು. ಸರಿ ಸರಿ ಕಳಸಕ್ಕೆ ಹೋಗುವಂತೆ. ಮೊದಲು ಇಲ್ಲಿ ಕುಳಿತಿರುವವರಿಗೆ ತಿಂಡಿ ಕೊಡು" ಅಂದ್ರು.
ನಾನು ಬಡಿಸಲಾರಂಭಿಸಿದಾಕ್ಷಣ, ಎಲ್ಲರೆಡೆಗೆ ತಿರುಗಿ "ನೋಡ್ರಯ್ಯಾ, ನಮ್ ಇವನ ಗುರುಗಳಿಗೆ ಅವ್ನಿಗೊಂದು ಸರಕಾರಿ ಕೆಲಸ ಮಾಡಿಸಿಕೊಡೋ ಯೋಗ್ಯತೆ ಇಲ್ವಂತೆ ನೋಡ್ರಯ್ಯಾ" ಅಂತ ಎರಡು ಬಾರಿ ಅಂದ್ರು.
ನಾನು ಸಂಕೋಚಪಟ್ಟು " ಹಂಗಲ್ಲ ಸಾರ್, ನಾ ಹೇಳಿದ್ದು... " ಅಂದೆ.
ಕೂಡಲೇ ಅವರು "ಹಂಗೂ ಇಲ್ಲ. ಹಿಂಗೂ ಇಲ್ಲ. ನಿಂಗೇನಯ್ಯಾ ಕೆಲಸ? ಸುಮ್ಮನೆ ನನ್ನ ಜೊತೆ ಇರು. ನಿನ್ನ ಜವಾಬ್ದಾರಿಯಲ್ಲ ನಂದೇ.ಕೆಲಸಕ್ಕೆ ಸೇರುತ್ತಾನಂತೆ ಕೆಲಸಕ್ಕೆ" ಅಂದ್ರು ಗಂಭೀರವಾಗಿ.
ನಾ ಸುಮ್ಮನಾದೆ.
ಆ ನಂತರ ಒಂದು ದಿನ ರಾತ್ರಿ ಶೌಚಕ್ಕಾಗಿ ಬಯಲಿಗೆ ಬಂದು ನನ್ನ ಕೈ ಹಿಡಿದುಕೊಂಡು ನಿಂತಿದ್ರು. ನಾ ನನ್ನ ಕೆಲಸದ ವಿಚಾರ ಪ್ರಸ್ತಾಪಿಸಿದೆ.
ಕೂಡಲೇ ಅವರು "ನೋಡಯ್ಯಾ ಅದ್ಯಾವ ಶಕ್ತಿ ಬೇಕಾದ್ರೂ ಅಡ್ಡಿ ಮಾಡಲಿ. ನಿನ್ನನ್ನು ಮಾತ್ರ ಬೀಳೋಕೆ ಬಿಡಲ್ಲ. ಮೇಲಕ್ಕೆತ್ತುತ್ತೇವೆ ಕಣಯ್ಯಾ" ಅಂದ್ರು.
ನನ್ನ ಕೆಲಸದ ವಿಚಾರವಾಗಿ ನಾನು ಆಗಾಗ್ಗೆ ಗುರುನಾಥರಲ್ಲಿ ಜಗಳವಾಡುತ್ತಿದ್ದುದೂ ಉಂಟು. ಆಗೆಲ್ಲ ಅವರು ತೋರಿಸುತಿದ್ದ ಪ್ರೀತಿ, ಸಹನೆ ನಿಜಕ್ಕೂ ಅದಮ್ಯ.
ಮತ್ತೊಮ್ಮೆ ಒಳಗೆ ಕುಳಿತಿದ್ದಾಗ "ಗುರುಗಳೇ ನಮ್ಮ ಪರೀಕ್ಷಾ ಉತ್ತರ ಪತ್ರಿಕೆ ಪ್ರತಿಗಳನ್ನು ಸುತ್ತು ಹಾಕಲಾಗಿದೆ ಎಂದು ಆಯೋಗ ಹೇಳಿದೆ. ಇನ್ನು ನಮ್ಮ ಕತೆ ಏನು" ಎಂದು ಬಹಳ ಬೇಜಾರಿನಿಂದ ಪ್ರಶ್ನಿಸಿದೆ.
ಅದಕ್ಕವರು "ನೋಡಯ್ಯಾ ಯಾವ ಉತ್ತರ ಪತ್ರಿಕೆಗಳನ್ನು ಸುಟ್ಟಿಲ್ಲ. ಎಲ್ಲವೂ ಬೆಳಕಿಗೆ ಬರಲಿದೆ. ನನ್ನ ತಲೆ ಹೋಗಬಹುದು. ಆದರೆ, ನಾಲಿಗೆ ಉಳಿಸಿಕೊಳ್ಳುತ್ತೇನೆ. ನಿನ್ನ ಜವಾಬ್ದಾರಿ ನನ್ನದು" ಎಂದರು.
ಮುಂದೆ ಒಬ್ಬ ವ್ಯಕ್ತಿ (ಹೆಸರನ್ನು ಹೇಳಿದ್ದರು) ನ್ಯಾಯಾಲಯದ ಮೆಟ್ಟಿಲೇರುವನು. ಅದರಿಂದಾಗಿ, ಈ ಅವ್ಯವಹಾರಗಳೆಲ್ಲ ಬೆಳಕಿಗೆ ಬರುವುದು. ಎಲ್ಲ ಮರು ಮೌಲ್ಯಮಾಪನವಾಗುವುದು. ಮೂರು ಪರೀಕ್ಷೆಯ ಸಾವಿರದ ಇನ್ನೂರು ಹುದ್ದೆಗಳೂ ಕಿತ್ತು ಹೋಗುವುವು. ನಿಮ್ಮನ್ನು ನೇರವಾಗಿ ಆಯ್ಕೆ ಮಾಡುವರು ತಿಳೀತಾ?" ಎಂದಿದ್ದರು. ಅದೆಲ್ಲವೂ ಇಂದು ನಿಜವಾಗಿವೆ. ಕೆಲಸವಾಗುವುದು ಎಂದಿದ್ದರೂ ಎಂದು ಆಯ್ಕೆಯಾಗುವಿ ಎಂಬುದನ್ನು ಮಾತ್ರ ಹೇಳಲಿಲ್ಲ........,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment