ಒಟ್ಟು ನೋಟಗಳು

Sunday, November 6, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 33


ಕಟುಕರ ಪರಿವರ್ತನೆ  




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಈ ಘಟನೆ ಚರಣದಾಸನಾದ ನಾನು ಗುರುನಿವಾಸಕ್ಕೆ ಬಂದ ಆರಂಭದಲ್ಲಿ ನಡೆದ ಘಟನೆ. ಆ ವ್ಯಕ್ತಿ ಜನರ ಗುಂಪಿನ ಮಧ್ಯದಲ್ಲಿ ಕುಳಿತಿದ್ದನು. ಎಲ್ಲರೂ ಗುರು ದರ್ಶನಕ್ಕಾಗಿ ಕಾಯುತ್ತಿದ್ದರು. ಆಯಾಸ ಪರಿಹಾರಕ್ಕಾಗಿ ಒಳಗೆ ಮಲಗಿದ್ದ ಗುರುನಾಥರು ಎದ್ದವರೇ ಹೊರಬಂದು ಗುಂಪಿನ ಮಧ್ಯೆ ಕುಳಿತಿದ್ದ ಆ ವ್ಯಕ್ತಿಯತ್ತ ಬೆರಳು ಮಾಡಿ: "ನೀ ಕೊಲೆ ಮಾಡಿದ ಆ ಹುಡುಗಿ ಇನ್ನೂ ಸತ್ತಿಲ್ಲ ಕಣೋ. ಹೋಗು ಕೈ ತೊಳ್ಕೋ. ಕೈ ಎಲ್ಲಾ ರಕ್ತವಾಗಿದೆಯಲ್ಲ" ಎಂದರು. 

ಇದನ್ನು ಕೇಳಿದ ಆ ವ್ಯಕ್ತಿ ಹೆದರಿ ಅಲ್ಲಿಂದ ಓಡಿ ಹೋದನು. ಗುರುನಾಥರೆಂದಂತೆಯೇ ಆ ವ್ಯಕ್ತಿ ಒಂದು ಹುಡುಗಿಯನ್ನು ಅತ್ಯಾಚಾರವೆಸಗಿ ಚಾಕುವಿನಿಂದ ಇರಿದು ಸಾಯಿಸಿ ಬಂದಿದ್ದನು. ಅದು ಅವನು ಮಾಡಿದ ಇಪ್ಪತ್ತಮೂರನೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣವಾಗಿತ್ತು. ತನ್ನ ಹದಿನಾರನೇ ವಯಸ್ಸಿನಿಂದ ಇದೇ ವೃತ್ತಿ ಮಾಡುತ್ತಾ ಬಂದಿದ್ದ ಅವನು ಬದುಕನ್ನು ಬದಲಾಯಿಸಿಕೊಳ್ಳಲು ಗುರುನಾಥರ ಕೃಪೆಗಾಗಿ ಬಂದಿದ್ದನು. 

ಆ ನಂತರ ತಡರಾತ್ರಿ ವಾಪಸಾದ ಆ ಯುವಕ ತಾನು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ತಾನು ಒಳ್ಳೆಯ ಬದುಕು ಕಟ್ಟಲು ಆಶೀರ್ವದಿಸುವಂತೆ ಬೇಡಿದನು. ಮಾತ್ರವಲ್ಲ. ಪ್ರತೀ ವರ್ಷ ಅಕ್ಟೊಬರ್ ತಿಂಗಳಿನಲ್ಲಿ ತನ್ನ ಎಂಟು ಮಂದಿ ಸ್ನೇಹಿತರೊಂದಿಗೆ ಮುಂಬೈನಿಂದ ಬಂದು ಗುರುದರುಶನ ಮಾಡಿ ಹೋಗುತ್ತಿದ್ದರು. ಇಂದು ಅವರೆಲ್ಲರೂ ಉತ್ತಮ ಬದುಕು ನಡೆಸುತ್ತಿರುವರು. 

ಚರಣದಾಸನಾದ ನಾನು ಸಾಧನಾ ಸ್ಥಿತಿಯಲ್ಲಿದ್ದ ಗುರುಬಂಧುವಿನೊಂದಿಗೆ ಇರುತ್ತಿದ್ದೆ. ಅವರು ಸಾಧನಾವಸ್ಥೆಯಲ್ಲಿ ಮಲಗಿಯೋ ಅಥವಾ ಓಡಾಡುತ್ತಲೋ ಇರುತ್ತಿದ್ದರೂ ಸದಾ ಚಿಂತನೆಯಲ್ಲಿ ಮುಳುಗಿರುತ್ತಿದ್ದರು. 

ಒಮ್ಮೆ ನಾವು ಎದ್ದು ಹೊರ ಹೋಗಿ ಬರುವಷ್ಟರಲ್ಲಿ ಒಬ್ಬ ವ್ಯಕ್ತಿ ನಾವಿಬ್ಬರೂ ಮಲಗುವ ಮಂಚದ ಮೇಲೆ ಮಲಗಿದ್ದರು. ಗುರುಬಂಧು ಏನೂ ಮಾತನಾಡಲಿಲ್ಲ. ಚರಣದಾಸನಾದ ನಾನು ಮೊದಲೇ ಮುಂಗೋಪಿ, ದುರಹಂಕಾರ ಬೇರೆ. ಸಿಟ್ಟಿನಿಂದ ಆ ವ್ಯಕ್ತಿಯೆಡೆಗೆ ನೋಡಿದೆ. ಆ ನಂತರ ಆ ವ್ಯಕ್ತಿ ಎದ್ದು ಹೋದರು. 

ಆತ ತುಮಕೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು ಸ್ವಂತ ಊರಾದ ಶಿವಮೊಗ್ಗಕ್ಕೆ ವರ್ಗಾವಣೆ ಬೇಕಿದ್ದು ಆ ಉದ್ದೇಶಕ್ಕಾಗಿ ಗುರುನಿವಾಸಕ್ಕೆ ಬಂದಿದ್ದರು. ಆ ವ್ಯಕ್ತಿ ಪ್ರತಿಭಾವಂತರೂ ಆಗಿದ್ದು ಮೊದಲ ಬಾರಿ ಭೇಟಿಯಾದ ನಂತರ ಗುರುನಾಥರ ಸಹಚರರಾದ ನಮ್ಮಗಳನ್ನು ಕುರಿತು, "ಗುರುನಾಥರ ಜೊತೆ ಇರುವವರೆಲ್ಲರೂ ಅನಕ್ಷರಸ್ಥರು" ಎಂಬ ಮಾತನಾಡಿ ಹೋದರು . 

ಕೆಲ ಕಾಲದ ನಂತರ ನಡೆದ ಕಾಲೇಜು ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿಭಾವಂತನಾಗಿದ್ದ ಆತ ಎಲ್ಲಾ ವಿಷಯಗಳಲ್ಲೂ ಅನುತ್ತೀರ್ಣರಾದರು. ಆನಂತರ ಗುರುನಾಥರು ಹಾಗೂ ಅವರೊಂದಿಗಿರುತ್ತಿದ್ದ ಸಹಚರರ ಬಗ್ಗೆ ಆತನಿಗಿದ್ದ ತಾತ್ಸಾರ ಭಾವ ಸ್ವಲ್ಪ ಕಡಿಮೆಯಾಯಿತಾದರೂ ಅಂದು ಗುರುನಾಥರ ಸಹಚರರ ಬಗ್ಗೆ ಆಡಿದ ಹಗುರ ಮಾತಿನಿಂದಾಗಿ ಇಂದಿಗೂ ಜೀವನದಲ್ಲಿ ನೆಲೆ ನಿಲ್ಲಲಾಗದೆ ಪರಿತಪಿಸುತ್ತಿರುವರು. 

ಹಾಗೆಯೇ ಇನ್ನೊಮ್ಮೆ ಮಹಾರಾಷ್ಟ್ರ ವಾಸಿಯಾಗಿದ್ದ ವ್ಯಕ್ತಿಯೋರ್ವರು ಗುರುನಿವಾಸಕ್ಕೆ ಬಂದಿದ್ದರು. ಆತ ಸಮುದ್ರ ಸಂಬಂಧಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಅನುಕೂಲವಾಗಿಯೇ ಇದ್ದರು. ಆದರೆ, ಇದ್ದಕ್ಕಿದ್ದಂತೆ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಹುಪಾಲು ಬರಿಗೈಯಾಗಿ ಗುರುಕೃಪೆಗಾಗಿ ಬಂದಿದ್ದರು. 

ಅವರಿಗೆ ಗುರುನಾಥರು ಒಂದು ಈರುಳ್ಳಿಯನ್ನು ಕೊಟ್ಟು, "ಇಟ್ಕೋ ಅದನ್ನು. ಇನ್ನ ಸಂಕಷ್ಟಗಳೆಲ್ಲವೂ ದೂರವಾಗುವುದು" ಎಂದು ಹೇಳಿ ಕಳುಹಿಸಿದರು. ಇಂದು ಆ ವ್ಯಕ್ತಿ ಸುಮಾರು ಏಳು-ಎಂಟು ಹಡಗುಗಳ ಒಡೆಯ. ಮಾತ್ರವಲ್ಲ. ಎಲ್ಲ ಸಂಕಷ್ಟಗಳನ್ನು ದಾಟಿ ಬಂದಿರುವರು. ಆತನ ಗುರುಭಕ್ತಿ ಎಂತಹದೆಂದರೆ ಇಂದಿಗೂ ಆತ ಗುರುನಾಥರು ಅಂದು ನೀಡಿದ್ದ ಈರುಳ್ಳಿಯನ್ನು ಮನೆಯ ಗರ್ಭಗುಡಿಯಲ್ಲಿಟ್ಟು ಪೂಜಿಸುತ್ತಿರುವರು. 

ಶಿವಮೊಗ್ಗ ವಾಸಿಯಾದ ಆ ವ್ಯಕ್ತಿ ಉತ್ತರ ಕರ್ನಾಟಕದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಪ್ರಸಿದ್ಧಿ ಹಾಗೂ ಹಣವನ್ನು ಸಂಪಾದಿಸಿದ್ದ ಆತ ಇದ್ದಕ್ಕಿದ್ದಂತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡರು. ಸಾಲಗಾರರು ಸಾಲ ವಾಪಸ್ ಮಾಡದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ಬೆದರಿದ ಆ ವ್ಯಕ್ತಿ ಹೋಟೆಲ್ ಮುಚ್ಚಿ ಶಿವಮೊಗ್ಗದಲ್ಲೇ ನೆಲೆಸಿದರು.

ಒಮ್ಮೆ ಯಾರಿಂದಲೋ ಗುರುನಾಥರ ಬಗ್ಗೆ ತಿಳಿದ ಆತ ನೇರವಾಗಿ ಗುರುಗಳಲ್ಲಿಗೆ ಬಂದು ಪ್ರಾರ್ಥಿಸಿದರು. ಆಗ ಗುರುನಾಥರು: "ಹಾಲು ಅಳೆಯುವ ಒಂದು ಪಾತ್ರೆ ತಂದು ಅದನ್ನು ಅಂಗಡಿ ಮುಂದೆ ತಲೆ ಕೆಳಗಾಗಿ ನೇತು ಹಾಕು. ನಿನ್ನ ಎಲ್ಲ ಸಮಸ್ಯೆಗಳೂ ಪರಿಹಾರವಾಗುವುದು ಹಾಗೂ ನಿನಗೆ ಬೆದರಿಕೆ ಹಾಕಿದವರೇ ನಿನ್ನ ಬೆಂಬಲಕ್ಕೆ ನಿಂತು ಹಣ ಸಹಾಯ ಮಾಡುವರು. ಚಿಂತಿಸಬೇಡ" ಎಂದು ಹರಸಿ ಕಳುಹಿಸಿಕೊಟ್ಟರು.

ಗುರುನಾಥರಂದಂತೆಯೇ ಇಂದು ಆ ವ್ಯಕ್ತಿ ಮತ್ತೆ ಹೋಟೆಲ್ ಆರಂಭಿಸಿದ್ದು, ಅಂದು ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಗಳೇ ಬಂದು, "ಸ್ವಾಮಿ, ನೀವೇನೂ ಚಿಂತಿಸಬೇಡಿ. ಹೋಟೆಲ್ ಮಾತ್ರ ಮುಚ್ಚಬೇಡಿ. ನಿಮಗೆ ಇನ್ನೂ ಹಣ ಬೇಕಿದ್ದಲ್ಲಿ ಕೊಡುತ್ತೇವೆ" ಎಂದು ಧೈರ್ಯ ತುಂಬಿದರಂತೆ. ಇಂದು ಆ ವ್ಯಕ್ತಿ ಬಹುಪಾಲು ಋಣಮುಕ್ತನಾಗಿದ್ದು ಉತ್ತಮ ಜೀವನ ನಡೆಸುತ್ತಿರುವರು. ಗುರುನಾಥರು ಹೇಳುವ ಪರಿಹಾರಕ್ಕೂ, ಇರುವ ಸಮಸ್ಯೆಗಳಿಗೂ ಪರಸ್ಪರ ಹೋಲಿಕೆಯೇ ಇರುತ್ತಿರಲಿಲ್ಲ. ಆದರೆ ಸಮಸ್ಯೆ ಪರಿಹಾರ ಶೀಘ್ರವಾಗಿ ಆಗುತ್ತಿತ್ತು. ಅದರ ಒಳಮರ್ಮ ಗುರುವಿಗಷ್ಟೇ ತಿಳಿದಿರುತ್ತಿತ್ತು. 

ಗುರು ಭಕ್ತಿ ಭಾವ ಪ್ರಿಯನೇ ಹೊರತು ಬಾಹ್ಯಾಡಂಭರ ಪ್ರಿಯನಲ್ಲ. ಸರಳತೆಯೇ ಅದರ ಮುಖ್ಯ ಲಕ್ಷಣ. ಈ ಗುಣಗಳು ಎಲ್ಲ ಜಾತಿ, ಮತ, ಅಂತಸ್ತು ಬೇಧಗಳನ್ನು ಮೀರಿದ್ದು.......,,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment