ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 3
ಅದೃಷ್ಟವಂತರಿಗೆ ಲಾಟರಿ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಸಖರಾಯಪಟ್ಟಣದ ಗುರುನಾಥರ ದರ್ಶನ ಅದೆಷ್ಟು ಜನಗಳಿಗಾಗಿದೆ ಎಂದು ಪ್ರಶ್ನೆ ಮಾಡುತ್ತಾ ಹೋದರೆ 'ಅದೃಷ್ಟವಂತರಿಗೆ ಲಾಟರಿ, ಭಾಗ್ಯವಂತರಿಗೆ ಬಂಪರ್' ಎಂಬ ಮಾತು ನೆನಪಾಗುತ್ತದೆ. ಮೊನ್ನೆ ನಮ್ಮ ಸ್ನೇಹಿತರೊಬ್ಬರು "ನಾವು ಅದೇ ಊರಿನಲ್ಲಿದ್ದೀವಿ ಸಾರ್, ಏನೋ ಲೋಕಾಭಿರಾಮವಾಗಿ ಮಾತಾಡಿದ್ವಿ. ಬೇರೆ ಬೇರೆ ಊರಿನಿಂದ ಬಂದ ಜನಗಳ ದಂಡನ್ನು ನೋಡಿ ... ಏನೋ ಎಂತೋ ಎಂದು ಸುಮ್ಮನಿದ್ದುಬಿಟ್ಟಿವಿ. ಬಂದ ಅನೇಕರು ಬಂಪರ್ ಬಹುಮಾನ ಹೊಡೆದರು - ಅವರನ್ನು ನಂಬಿ. ನಾವಿಲ್ಲಿದ್ದವರು, ಅವರ ದರ್ಶನ ಮಾಡಿದವರು ನಮಗೆ ಲಾಟರಿಯಷ್ಟೇ ಸಿಕ್ಕಿದ್ದು" ಎಂದಿದ್ದರು.
ಹೀಗೆ ಮತ್ತೊಬ ಗುರುಬಂಧುಗಳನ್ನು "ತಮಗೆ ಗುರುನಾಥರ ಪರಿಚಯ, ಪ್ರಭಾವ ಹೇಗಾಯ್ತು" ಎಂದು ಪ್ರಶ್ನಿಸಿದಾಗ ಹೀಗೆನ್ನುತ್ತಾರೆ. "ಎದುರು ಮನೆಗೆ ಯಾರೋ ಗುರುಗಳು ಬಂದಿದ್ದಾರೆ ಅಂದರು. ಗುರುಗಳೆಂದ ಕೂಡಲೇ ಪಲ್ಲಕ್ಕಿ, ಮುಮ್ಮೇಳ, ಹಿಮ್ಮೇಳಗಳೂ, ಭಾಜಾಭಜಂತ್ರಿ, ಮಂತ್ರಘೋಷಗಳ ಕಲ್ಪನೆ ಇದ್ದ ನನಗೆ - ಅಲ್ಲಿ ಕಂಡಿದ್ದು ಗಡ್ಡಬಿಟ್ಟ, ಒಂದು ತುಂಡು ಪಂಚೆಯಲ್ಲಿ ಒಬ್ಬ ವ್ಯಕ್ತಿ. ದೊಡ್ಡವರೆಂದರೆ ಒಂದು ನಮಸ್ಕಾರ ಮಾಡುವುದು ನನ್ನ ಪದ್ಧತಿ, ಮನಸ್ಸಿನಲ್ಲೇ ಗೌರವ ತೋರಿ ನಮಸ್ಕರಿಸಿದೆ. ಮೊದಲ ಬಾರಿ ಅವರ ಸರಳತೆಯು ನನ್ನ ಮೇಲೆ ಪರಿಣಾಮ ಬೀರಿತ್ತೋ, ಅಥವಾ ಗುರುಶಕ್ತಿ ಪ್ರಭಾವಲಯಕ್ಕೆ ನನ್ನನ್ನು ಸೆಳೆದುಕೊಳ್ಳುವ ಕಾಲ ಸಮೀಪಿಸಿತ್ತೋ. ಈ ಹಿಂದೆ ನಾನವರ ಬಗ್ಗೆ ಕೇಳಿಯೂ ಇರಲಿಲ್ಲ. ಕಂಡೂ ಇರಲಿಲ್ಲ. ಅಲ್ಲೇ ಕುಳಿತಿದ್ದೆ. ಗುರುಗಳು ನನ್ನನ್ನು 'ಯಾರು ನೀವು' ಎಂದು ಪ್ರಶ್ನಿಸಿದರು. 'ನಾನು ಶಿವಮೊಗ್ಗದವನು , ಟ್ರಾನ್ಸ್ಫರ್ ಆಗಿ ಇಲ್ಲಿಗೆ ಬಂದಿದ್ದೇನೆ' ಎಂದು ತಿಳಿಸಿದೆ. ಗುರುನಾಥರು ಒಂದು ಕ್ಷಣ ಅವರ ಮುಖ ನೋಡಿ "ಬಟ್ಟೆಯ ವ್ಯಾಪಾರ ಮಾಡುತ್ತಿದ್ದೀರಲ್ಲಾ, ಐದು ಸಾವಿರ ಬಂಡವಾಳ ಹಾಕಿದ್ದೀರಲ್ಲ, ಒಳ್ಳೆಯದು, ಆ ಕೆಲಸ ಮುಂದುವರಿಸಿ ಒಳ್ಳೆಯದಾಗುತ್ತದೆ" ಎಂದರಂತೆ.
ಎರಡು ತಿಂಗಳ ಹಿಂದೆ ಬಟ್ಟೆ ವ್ಯಾಪಾರ ಪ್ರಾರಂಭಿಸಿದ್ದು, ತಮ್ಮ ಬಳಿ ಐದು ಸಾವಿರಗಳನ್ನು ಇವರು ತೊಡಗಿಸಿದ್ದುದು ಗುರುನಾಥರಿಗೆ ಹೇಗೆ ತಿಳಿಯಿತು? - ಎಂಬ ಜಿಜ್ಞಾಸೆ ಭಕ್ತರ ಮನದಲ್ಲಿ. ಆದರೆ ಆ ಜಿಜ್ಞಾಸೆ ಕೆಲಕ್ಷಣದಲ್ಲಿಯೇ ಮಾಯವಾಗಿ - ಗುರುಸಮರ್ಥನಲ್ಲವೇ ಎಂದು ಭಾವಿಸಿದ ಅವರು, ಮೌನವಾಗಿ, ತಮ್ಮನ್ನರ್ಪಿಸಿಕೊಂಡರಂತೆ. ಮುಂದೆ ಎಲ್ಲವನ್ನು ಗುರುವಿಗೆ ಅರ್ಪಿಸಿ, ಗುರುನಾಥರ ಆಜ್ಞೆಯ ಮೇರೆಗೆ ನಡೆಯತೊಡಗಿದರಂತೆ. ಒಮ್ಮೆ ಅತೀ ಕಷ್ಟ ಬಂದಾಗ ಗುರುನಾಥರನ್ನು ಕಾಣಲು ಸಖರಾಯಪಟ್ಟಣಕ್ಕೆ ಹೋದಾಗ ಎಲ್ಲವನ್ನು ಅರಿತ ಗುರುನಾಥರು ಬೊಗಸೆ ತುಂಬಾ ಹಣ ನೀಡಿ "ಇನ್ನು ನಿನ್ನ ಎಲ್ಲ ಕಷ್ಟಗಳೂ ದೂರವಾಯ್ತು. ಆನಂದದಿಂದ ಗುರುಭಕ್ತಿಯಲ್ಲಿ ಜೀವನ ಸಾಗಿಸಿ" ಎಂದು ಹರಸಿ ಕಳುಹಿಸಿದರು. ಪದೇ ಪದೇ ಗುರು ಮನೆಗೆ, ಸಖರಾಯಪಟ್ಟಣಕ್ಕೆ ಹೋಗದಿದ್ದರೂ ಇವರು ನೆನೆದಾಗಲೆಲ್ಲಾ ಗುರುನಾಥರೇ ಬಂದು ದರ್ಶನವೀಯುತ್ತಾರೆ. "ಒಂದು ಹೆಜ್ಜೆ ನೀ ನನ್ನ ಕಡೆ ಬಂದರೆ, ನಾ ನಿನ್ನ ಕಡೆ ಹತ್ತು ಹೆಜ್ಜೆ ಬರುತ್ತೇನೆಂಬ" ಗುರುವಾಕ್ಯವನ್ನು ಸತ್ಯವಾಗಿಸಿದ್ದನ್ನಿಲ್ಲಿ ಕಾಣಬಹುದಾಗಿದೆ. ಲಾಟರಿಯಲ್ಲ ಗುರುನಾಥರ ಕೃಪೆಯ ಬಂಪರ್ ಇವರಿಗೆ ದೊರೆತಿದೆ.
ನಾನಿದೀನಿ ಎಂದರೂ ಹುಣಸೇತೊಕ್ಕು ಮಾಡುವುದು ನಿನ್ನ ಕರ್ಮ
ಗುರುನಾಥರ ಕೃಪೆ ದೊರೆಯಲು ಅದೆಷ್ಟು ಜನ್ಮದ ಪುಣ್ಯಬೇಕೋ? ಶಿವಮೊಗ್ಗದ ಒಬ್ಬ ಸಾಧ್ವಿ, ಪಡಬಾರದ ಕಷ್ಟಗಳನ್ನೆಲ್ಲಾ ಅನುಭವಿಸಿ, ಮದುವೆಯಾದರೂ ಸಂತಾನ ಭಾಗ್ಯವಾಗದೇ ದಿನದಿನದ ಜೀವನ ಸಾಗಿಸುವುದೂ ದುಸ್ತರವಾದಾಗ - ಅದಾರಿಂದಲೋ ಗುರುನಾಥರ ವಿಚಾರ ಅವರಿಗೆ ತಿಳಿಯಿತು. ಬಹುಶಃ ಕರ್ಮ ಕಳೆಯಲು ಗುರುಗಳ ಆಶೀರ್ವಾದ ಸಿಗಬೇಕೇನೋ, ಅದೇ ಮನುಷ್ಯನಿಗೆ ಗುರುದೆಸೆ. ಇವರು ಗುರುನಾಥರ ಬಳಿ ಆರ್ತರಾಗಿ ಸಾಗಿದರು.
ಗುರುನಾಥರ ಹಲವು ಪರೀಕ್ಷೆಗಳಲ್ಲಿ ಇವರು ಪಾಸಾಗಿದ್ದು - ಕೇವಲ ಅನನ್ಯ ಶರಣಾಗತಿಯಿಂದ, ಕೊನೆಗೆ "ನಾನಿದೀನಿ ಹೋಗು.... ನಿನ್ನ ರಕ್ಷಣೆಗೆ" ಎಂದರು ಗುರುನಾಥರು. ನಿರಂತರ ಕಾಯುವ, ಭರವಸೆ ಪಡೆದ ಆ ಸಾಧ್ವಿ ಶಿವಮೊಗ್ಗದ ತಮ್ಮ ಮನೆಗೆ ಮರಳಿದರು. ಕಾಲಾನಂತರದಲ್ಲಿ ಮಗು ಜನಿಸಿತು. ಮನದಲ್ಲಿ ಗುರುನಾಥರ ದರ್ಶನ ಪಡೆಯಬೇಕೆಂಬ ಭಾವವಿದ್ದರೂ ಜಂಜಾಟದಲ್ಲಿ ವರ್ಷಗಳೇ ಕಳೆದುಹೋದವು.
'ನಾನು ಏನಾದರೂ ಮಾಡಬೇಕು' ಎಂಬ ವಿಚಾರ ಬಂದಾಗ ಹಲವು ರೀತಿಯ ವ್ಯರ್ಥ ಪ್ರಯತ್ನಗಳನ್ನು ಮಾಡತೊಡಗುತ್ತೇವೆ. ಆದರೆ, ಗುರುಕೃಪೆ ಇಲ್ಲದೇ ಯಾವುದೂ ಕೈ ಹತ್ತುವುದಿಲ್ಲ. - ಇದೇಕೆ ಎಂಬ ಕಾರಣವೂ ಹೊಳೆಯದೆ ಮನಸ್ಸೇ ಮಂಕಾಗಿಬಿಡುತ್ತದೆ. ಅಂತೆಯೇ ಇವರು ಮೆಣಸಿನಪುಡಿ, ಸಾರಿನ ಪುಡಿ, ಹುಣಸೆ ತೊಕ್ಕುಗಳನ್ನು ಮಾಡಿ ಮಾರಿ ಸಂಸಾರ ನಿರ್ವಹಣೆಗೊಂದಿಷ್ಟು 'ನಾನೂ' ಸಹಾಯ ಮಾಡಬೇಕೆಂದು ಪ್ರವೃತ್ತರಾದರು.
ಒಳ್ಳೆಯ ಮಾರುಕಟ್ಟೆ ಸಿಗುವ ಸೂಚನೆಗಳೂ ಕಂಡುಬಂದವು. ಅವರ ತಂಗಿ "ಒಂದು ಐದು ಕೆ.ಜಿ. ಹುಣಸೇತೊಕ್ಕಿನ ಆರ್ಡರ್ ಬಂದಿದೆ, ಅವರಿಗೆ ಇಂತಿಷ್ಟು ದಿನದಲ್ಲಿ ಕೊಡಬೇಕು, ಅವರು ವಿದೇಶಕ್ಕೆ ಹೋಗುತ್ತಿದ್ದಾರೆ - ಅರ್ಜೆಂಟಿದೆ. ನಾನು ಹುಣಸೇಕಾಯಿ ಕಳಿಸ್ತೀನಿ" ಎಂದಿದ್ದರು. ಇದರ ತಯಾರಿಯಲ್ಲಿ ನಿರತರಾದ ಇವರಿಗೆ ತಮ್ಮ ಬಂಧುಗಳ ಮನೆಕಟ್ಟುವ ಸಮಸ್ಯೆ ಎದುರಾದಾಗ, ಕೂಡಲೇ ಗುರುನಾಥರ ನೆನಪಾಯ್ತು. ಮಾರನೆಯ ದಿನವೇ ಹೊರಡುವುದೆಂದು ತೀರ್ಮಾನಿಸಿದರು. ಗುರುನಾಥರ ದರ್ಶನದ ಸೆಳೆತದ ಮುಂದೆ ಲಾಭ ತರುವ ಹುಣಸೆಹಣ್ಣು ಏನೂ ಅಲ್ಲವೆಂದು ತೀರ್ಮಾನಿಸಿ ಹೊರಟೇಬಿಟ್ಟರು ಗುರುದರ್ಶನಕ್ಕೆ.
ಗುರುಮನೆಗೆ ಬಂದು ದರ್ಶನ ಪಡೆದು ಇತರ ಗುರುಭಕ್ತರ ಜೊತೆಗೆ ಈ ಸಾಧ್ವಿಯೂ ಕುಳಿತಿದ್ದರು. ಗುರುನಾಥರ ಸ್ವಭಾವವೇನೆಂದರೆ ಏನಾದರೂ ಮಾತನಾಡುತ್ತಿರುವುದು. ಆದರೆ ಅದು ಯಾರನ್ನು ಕುರಿತದ್ದು, ಯಾರಿಗೆ ಹೇಳುತ್ತಾರೆಂಬುದು ಒಗಟೇ. ಕೆಲವೊಮ್ಮೆ ಅದು ಅನೇಕರಿಗೂ ಅನ್ವಯಿಸುವ ಗುರುವಾಣಿಯೂ ಆಗಿರುತ್ತದೆ.
ಸ್ವಲ್ಪ ಹೊತ್ತಿನಲ್ಲಿ ಅಲ್ಲಿಂದ ಎದ್ದು ಮನೆಯ ಒಳಗೆ ಹೋಗುತ್ತಾ ಗುರುನಾಥರು "ನಿನ್ನನ್ನು ನಾನು ಕಾಯುತ್ತೇನೆಂದರೂ ಮೆಣಸಿನ ಪುಡಿ ಕುಟ್ಟುವುದು, ಹುಣಸೇತೊಕ್ಕನ್ನು ಮಾಡೋದು ನಿನ್ನ ಹಣೆಬರಹವಾಗಿದ್ದಾಗ ನಾನೇನು ಮಾಡಲಿ ನಿನ್ನ ಕರ್ಮ" ಎಂದು ಹೇಳುತ್ತಿದ್ದರು. ಅಷ್ಟಾಗಿ ಕಿವಿ ಕೇಳದಿದ್ದರೂ ಆ ಸಾಧ್ವಿಗೆ ಗುರುಗಳೆಂದ ನುಡಿಗಳು ಕೇಳಿದವು, ಅದು ತನ್ನನ್ನೇ ಕುರಿತದ್ದು ಎಂದು ಅರಿವಾಯಿತು. ಗುರುನಾಥರು 'ನಿನ್ನ ರಕ್ಷಣೆಯ ಹೊಣೆ ನನ್ನದೆಂದು' ಹೇಳಿದ್ದರೂ - ಪರಿಪೂರ್ಣ ಅವರ ಧ್ಯಾನದಲ್ಲಿ ನಿರತಳಾಗದೆ - ನಾನೆಂತಹ ಕೆಲಸದಲ್ಲಿ ಬಿದ್ದೆ ಎಂಬ ಜ್ಞಾನೋದಯವಾಗುತ್ತಲೇ - "ತಪ್ಪಾಯ್ತು ಗುರುವೇ - ಇನ್ನೇನು ಬೇಡ ನಿನ್ನ ಸೇವೆಯಲ್ಲಿರುತ್ತೇನೆ" ಎಂದು ಮನದಲ್ಲಿ ಬೇಡಿಕೊಂಡರು. ಅನೇಕ ವರ್ಷಗಳೇ ಆಯಿತು. ಗುರುನಾಥರೇ ಅವರ ಉಸಿರಾಗಿದೆ. ಹೂವಿನ ಸರವೆತ್ತಿದಂತೆ ಸಂಸಾರ ನೆಡೆಯುತ್ತಿದೆ. ಅವರ ಮನೆಗೆ ಬಂದವರಾರೂ ಹಾಗೆ ಹೋಗಲ್ಲ - ಆದರಾತಿಥ್ಯಗಳು ನೆಡೆಯುತ್ತಲೇ ಇರುತ್ತದೆ. ಕೊಡುವವನು ಅವನಿರುವಾಗ ನಮಗೇಕೆ ಚಿಂತೆ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಾಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http:// srivenkatachalaavadhoota. blogspot.in/
No comments:
Post a Comment