ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 49
16 ವರ್ಷದ ನಂತರ ಮೊಳಕೆ ಒಡೆದ ಕಾಯಿ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಅದು 1994ನೇ ಇಸವಿ. ಚಿಕ್ಕಮಗಳೂರಿನಿಂದ ಗುರುದರ್ಶನಕ್ಕಾಗಿ ಬಂದ ದಂಪತಿಗಳಿಗೆ ಗುರುನಾಥರು ತೆಂಗಿನಕಾಯಿ ನೀಡಿ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಲು ಹೇಳಿದ್ದರಂತೆ. ಆ ಕಾಯಿಗಳು ಗುರುನಾಥರು ದೇಹ ಬಿಟ್ಟು ಮೂರು ತಿಂಗಳ ನಂತರ ಮೊಳಕೆ ಒಡೆದು ಇಂದು ಗಿಡಗಳಾಗಿವೆ. ಇದು ನಾನು ಕಣ್ಣಾರೆ ನೋಡಿ ಬಂದ ಘಟನೆಯಾಗಿದೆ.
"ಗುರು ಕೃಪೆ ಇದ್ದಲ್ಲಿ ಸಾವನ್ನು ಗೆಲ್ಲಬಹುದು". ಗುರುನಾಥರ ಹೆಂಡತಿ ಕಡೆಯ ಸಂಬಂಧಿಯೊಬ್ಬರು ಆಗಾಗ್ಗೆ ಗುರು ನಿವಾಸಕ್ಕೆ ಬರುತ್ತಿದ್ದರು. ಬೆಂಗಳೂರಿನಲ್ಲಿ ಕೆಲಸದ್ದಲ್ಲಿದ್ದ ಅವರಿಗೆ ಸಿಗರೇಟು ಸೇದುವ ಅಭ್ಯಾಸ ಅತಿಯಾಗಿದ್ದಿತು. ಜೊತೆಗೆ ಕೆಲಸದ ಒತ್ತಡವೂ ಸೇರಿ ಹೃದಯಾಘಾತವಾಗಿತ್ತು. ಈ ವಿಷಯ ತಿಳಿದ ಗುರುನಾಥರು ಕೂಡಲೇ ಆಸ್ಪತ್ರೆಗೆ ಸೇರಿಸುವಂತೆ ತಿಳಿಸಿದರು.
ಚಿಕಿತ್ಸೆಗಳ ನಂತರ ಅವರು ಇಂದು ಉತ್ತಮ ಜೀವನ ನಡೆಸುತ್ತಿರುವರು. ಮಾತ್ರವಲ್ಲ ಇಂದಿಗೂ ಧೂಮಪಾನ ಮಾಡುತ್ತಲೇ ಇರುವರು.
ಕುದುರೆ ಜೂಜು ಸರಿ ಮಾಡಲು ನೂರೆಂಟು ದಾರಿಗಳು
ನೆರೆ ಜಿಲ್ಲೆಯ ಆಗರ್ಭ ಶ್ರೀಮಂತ ಕುಟುಂಬದ ವ್ಯಕ್ತಿಯೊಬ್ಬರು ನಾನು ಗುರು ನಿವಾಸಕ್ಕೆ ಬರುವ ಮೊದಲೇ ಬರುತ್ತಿದ್ದರು. ಬಹಳ ಶೋಕಿ ಹಾಗೂ ಕುದುರೆ ಜೂಜು. ಇವೆರಡು ಆ ವ್ಯಕ್ತಿಯ ದೌರ್ಬಲ್ಯಗಳು.
ಆ ವ್ಯಕ್ತಿ ಗುರುನಾಥರ ಹತ್ತಿರ ಬಂದು "ಸಾರ್, ಎಷ್ಟನೇ ಸಂಖ್ಯೆಯ ಕುದುರೆ ಮೇಲೆ ಕಟ್ಟಲಿ?" ಎನ್ನುತ್ತಿದ್ದರಂತೆ. ಗುರುನಾಥರು ಹೇಳಿದ ಸಂಖ್ಯೆಯೇ ಗೆಲ್ಲುತ್ತಲಿತ್ತಂತೆ.
ಕೊನೆಗೊಂದು ದಿನ ಗುರುನಾಥರು ಐದು ಕಲ್ಲುಗಳನ್ನು ತರಲು ತಿಳಿಸಿ, ಅದನ್ನು ಸದಾ ಜೇಬಿನಲ್ಲಿಟ್ಟು, ಕಿಸೆಗೆ ಕೈ ಹಾಕಿ ತೆಗೆ ಎಷ್ಟು ಕಲ್ಲು ಸಿಗುವುದೋ ಆ ಸಂಖ್ಯೆಯ ಕುದುರೆಯ ಮೇಲೆ ಬಾಜಿ ಕಟ್ಟು ಎಂದರಂತೆ. ಆ ವ್ಯಕ್ತಿ ಕುದುರೆ ಜೂಜಿಗೆ ಹೋದಾಗಲೆಲ್ಲಾ ಹಾಗೆಯೇ ಮಾಡಿ ಗೆಲ್ಲುತ್ತಿದ್ದರಂತೆ.
ಗುರುನಾಥರು ಹೀಗೆ ಮಾಡಿ ಕ್ರಮೇಣ ಅವರ ಜೂಜಾಟವನ್ನು ನಿಲ್ಲಿಸಿ, ಉತ್ತಮ ಸಾಂಸಾರಿಕ ಜೀವನ ನಡೆಸುವಂತೆ ಮಾಡಿರುವರು. "ನಿಜವಾದ ಪರಿವರ್ತನೆ ಎಂದರೆ ಇದೇ ಅಲ್ಲವೇ?".
ಸಖರಾಯಪಟ್ಟಣವಾಸಿ ವ್ಯಕ್ತಿಯೋರ್ವರು ಜೀವನ ನಿರ್ವಹಣೆಗಾಗಿ ಟ್ರಾಕ್ಟರ್ ಕೊಳ್ಳಲು ತೀರ್ಮಾನಿಸಿ ಗುರುಗಳ ಆಶೀರ್ವಾದ ಬೇಡಿದರಂತೆ. ಗುರುನಾಥರ ಅನುಗ್ರಹದಂತೆ ಆ ವ್ಯಕ್ತಿ ಈ ವೃತ್ತಿಯಲ್ಲಿ ಬಹಳ ಹಣವಂತರೂ ಆದರು.
ಆತ ಇನ್ನೊಂದು ಟ್ರಾಕ್ಟರ್ ಕೊಳ್ಳಲು ಯೋಚಿಸಿ, ಗುರುವಿನ ಕೃಪೆಯನ್ನು ಬೇಡಲು ಗುರುನಾಥರು "ಬೇಡ ಇದೊಂದೇ ಸಾಕು. ಆ ಹೊಸ ಟ್ರಾಕ್ಟರ್ ಒಂದು ಜೀವ ತೆಗೆಯುವುದು. ಹಾಗೂ ನಿನ್ನನ್ನು ಜೈಲಿಗೆ ಕಳುಹಿಸುವುದು" ಎಂದಿದ್ದರಂತೆ.
ಆದರೆ ಹಣದ ಮುಂದೆ ಗುರು ಕಾಣದಾಗಿ ಆ ವ್ಯಕ್ತಿ ಹೊಸ ಟ್ರಾಕ್ಟರ್ ಕೊಂಡರು. ಆದರೆ ಅದು ಕೆಲವೇ ದಿನಗಳಲ್ಲಿ ಅಪಘಾತವಾಗಿ ಓರ್ವ ವ್ಯಕ್ತಿ ಅಸುನೀಗಿದರು. ಈ ಘಟನೆ ಆಧಾರದಲ್ಲಿ ಆ ಮಾಲೀಕರು ಜೈಲು ಸೇರಬೇಕಾಯಿತು.
ಆರ್ಥಿಕವಾಗಿಯೂ ನಷ್ಟ ಅನುಭವಿಸಿದ ಅವರು ಹತಾಶರಾಗಿ ವಿಷ ಕುಡಿದು ಆಸ್ಪತ್ರೆ ಸೇರಿದರು. ವೈದ್ಯರು ಕುಡಿದ ವಿಷದ ಪ್ರಮಾಣದ ಮೇಲೆ ವ್ಯಕ್ತಿ ಬದುಕುವ ಸಾಧ್ಯತೆ ಕ್ಷೀಣ ಎಂದಿದ್ದರಂತೆ. ಈ ವಿಷಯ ತಿಳಿದ ಗುರುನಾಥರು ಕೂಡಲೇ ಐವತ್ತು ಲಿಂಬೆ ಹಣ್ಣು ತರಿಸಿ ಅದರ ರಸ ಹಾಗೆಯೇ ಕುಡಿದರು. ಇದಾದ ನಂತರ ಆಸ್ಪತ್ರೆಯಲ್ಲಿದ್ದ ಆ ವ್ಯಕ್ತಿ ಆಶ್ಚರ್ಯಕರ ರೀತಿಯಲ್ಲಿ ಚೇತರಿಸಿಕೊಂಡರು. ಇದೀಗ ಆ ವ್ಯಕ್ತಿಗೆ ಗುರುವಾಕ್ಯದಂತೆಯೇ ವಿವಾಹವಾಗಿದ್ದು ಸುಖ ಜೀವನ ನಡೆಸುತ್ತಿರುವರು..... ,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment