ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 2
ಸರ್ವಾಂತರ್ಯಾಮಿ ಸದ್ಗುರು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುಚರಿತ್ರೆಯಲ್ಲಿ ಒಂದು ಘಟನೆ ಬರುತ್ತದೆ. ಗುರುಗಳು ಗಾಣಗಾಪುರದಲ್ಲಿ ಇರುವಾಗ, ದೀಪಾವಳಿಯ ಹಬ್ಬಕ್ಕೆ ಸುತ್ತಮುತ್ತಲಿನ ಊರಿನ ಜನಗಳು ಬಂದು "ನಮ್ಮಲ್ಲಿಗೆ ಬರಬೇಕೆಂದು' ಗುರುಗಳನ್ನು ಪ್ರಾರ್ಥಿಸುತ್ತಾರೆ. ಗಾಣಗಾಪುರದ ಊರಿನ ಜನಗಳು "ಹಬ್ಬದ ದಿನ ನೀವು ಈ ಊರಿನಲ್ಲೇ ಇರಬೇಕು ಗುರುಗಳೇ" ಎಂದು ಒತ್ತಾಯಿಸುತ್ತಾರೆ. ಎಲ್ಲ ಭಕ್ತರಲ್ಲಿರುವ ಮುಗ್ಧಪ್ರೀತಿಯನ್ನು ಕಂಡು ವಿಸ್ಮಿತರಾದ ಗುರುಗಳು ಒಬ್ಬೊಬ್ಬರನ್ನೇ ಕರೆದು ಗುಟ್ಟಿನಲ್ಲಿ "ನಿಮ್ಮ ಊರಿಗೇ ದೀಪಾವಳಿಗೆ ಬರುತ್ತೇನೆ. ಯಾರಿಗೂ ಹೇಳಬೇಡಿ" ಎಂದು ಕಳಿಸಿ, ನಂತರ ಹಬ್ಬದ ದಿನ ಗಾಣಗಾಪುರದಲ್ಲೂ, ಏಳು ಊರುಗಳಲ್ಲಿಯೂ ಒಂದೇ ಕಾಲದಲ್ಲಿ ಭಕ್ತರನ್ನು ಸುಪ್ರೀತಗೊಳಿಸಿದ ದತ್ತಾತ್ರೇಯರಂತೆ - ದತ್ತನ ಅವತಾರಿಗಳೇ ಆದ ಗುರುನಾಥರು ಒಂದೇ ದಿನ ಸಖರಾಯಪಟ್ಟಣದಲ್ಲೂ, ಬಹುದೂರದ ಮತ್ತೊಂದು ಗುರು ಆಶ್ರಮದಲ್ಲೂ ಇದ್ದು, ಮುಂದಾಗಬಹುದಾದ ದೊಡ್ಡ ಅವಘಡವನ್ನು, ಸಾವಿರಾರು ಜನರ ಪ್ರಾಣವನ್ನು ರಕ್ಷಿಸಿದ, ವಿಚಾರ ಗುರುನಾಥರ ಲೀಲಾವಿನೋದಕ್ಕೆ ಹಿಡಿದ ಕೈಗನ್ನಡಿ.
ಇದಾದ ಕೆಲವೇ ದಿನಗಳಲ್ಲಿ ಗುರುನಾಥರನ್ನು ಒಬ್ಬ ಗುರುಬಂಧುಗಳು ನೋಡಲು ಹೋಗಿದ್ದರು. ಅವರ ದರ್ಶನ ಅಷ್ಟು ಸುಲಭವಲ್ಲ. ಅಲ್ಲೇ ಇದ್ದರೂ, ದಿನಗಟ್ಟಲೆ ಕಾದರೂ ದರ್ಶನವಾಗದ ಅನೇಕ ದಿನಗಳಿವೆ. ಅವರ ಕೃಪೆಯಾದರೆ ಕ್ಷಣದಲ್ಲಿಯೇ ದರ್ಶನವಾಗಿಬಿಡುತ್ತದೆ. ಗುರುಗಳಿಗೆ ದೇಹಾಲಸ್ಯವೆಂದು ದರ್ಶನಾರ್ಥಿಗಳನ್ನು ಒಳಬಿಡುತ್ತಿರಲಿಲ್ಲ. ಆದರೂ ಈ ಗುರುಬಂಧುಗಳಿಗೆ ಗುರುಗಳ ನಿಕಟ ಒಡನಾಟವಿದ್ದುದರಿಂದ ಒಳಗೆ ಹೋಗಲು ಸಾಧ್ಯವಾಯಿತು. ಗುರುನಾಥರು ಪ್ರೀತಿಯಿಂದ ಅವರನ್ನು ಕರೆದರು. "ಇಪ್ಪತ್ತೊಂದು ದಿನಗಳು ಬಹಳ ಸಂಕಟ ಪಟ್ಟೆನಮ್ಮ. ಆ ವಿಷ ನೋಡು ಮೈಮೇಲೆ ಎಂತಹ ಪರಿಣಾಮ ಬೀರಿದೆ. ಅತೀವ, ಸಹಿಸಲಾರದ ನೋವು ಅನುಭವಿಸಿದೆ" ಗುರುನಾಥರ ಈ ಮಾತುಗಳನ್ನು ಕೇಳಿದ ಅವರು ಗದ್ಗದಿತರಾದರು. "ಗುರುವೇ ನಿಮಗೆ ಆ ಸಾಮರ್ಥ್ಯ ಇರುವುದರಿಂದ ಅದನ್ನು ಜಯಿಸಿದಿರಿ. ಸಾವಿರಾರು ಭಕ್ತರ ಪ್ರಾಣಗಳನ್ನು ಉಳಿಸಿದಿರಿ, ಜಗತ್ತಿನ ರಕ್ಷಣೆಗೆ ಹಾಲಾಹಲವನ್ನೇ ಕುಡಿದ ಶಿವನಾದ ನಿಮಗಲ್ಲದೇ ಬೇರೆ ಯಾರಿಗೆ ಈ ಸಾಮರ್ಧ್ಯವಿದೆ? ನಮ್ಮ ಗುರುನಾಥರು ಇಂತಹವರೆಂಬ ಹೆಮ್ಮೆ ಪಡುವುದಲ್ಲದೇ. ನಾವು ಏನು ಮಾಡಲು ಸಾಧ್ಯ" ಎಂದು ನುಡಿಯುವುದಲ್ಲದೇ ಅವರಿನ್ನೇನು ಮಾಡುವುದಕ್ಕಾಗುತ್ತದೆ. ಈ ಘಟನೆಯನ್ನು ತಿಳಿಸುತ್ತಾ ಆ ಭಕ್ತರು ಕಣ್ಣೀರು ಸುರಿಸುತ್ತಿದ್ದರು.
ಗುರುನಾಥರು ಅಸೀಮ ಸಾಧಕರು, ಅವತಾರ ಪುರುಷರಾದರೂ ಕರ್ಮಗಳನ್ನು ಅನುಭವಿಸಿಯೇ ತೀರಬೇಕೆಂಬುದನ್ನು ಅನೇಕ ಉದಾಹರಣೆಗಳೊಂದಿಗೆ ತಿಳಿಸುತ್ತಿದ್ದರು. ನೋವಾಗಲೀ, ಆನಂದವಾಗಲೀ, ಅದನ್ನು ಅನುಭವಿಸುತ್ತಿದ್ದರೂ - ಅದರಿಂದ ಹೊರತಾಗಿ ನಿತ್ಯಾನಂದದಲ್ಲೇ ಇರುತ್ತಿದ್ದುದು ಯಾರೂ ನೋಡಬಹುದಾಗಿತ್ತು. ನಿತ್ಯ ಲೀಲಾವಿನೋದಿಗಳಾವರಾಗಿದ್ದರೂ ತಮಗೂ ಇದಕ್ಕೂ ಏನೂ ಸಂಬಂಧವಿಲ್ಲವೇನೋ ಎಂಬಂತಿರುತ್ತಿದ್ದರು.
ದರ್ಶನಾರ್ಥಿಗಳೆಂದ ಕೂಡಲೇ ರವೀಂದ್ರನಾಥ ಟಾಗೂರರ ಒಂದು ವಿಚಾರ ನೆನಪಿಗೆ ಬರುತ್ತದೆ. ಎಲ್ಲೆಲ್ಲಿಂದಲೋ ದೂರದಿಂದ ಬರುವ ಟಾಗೂರರ ಶಿಷ್ಯರು ಕಾಲ ಸಮಯದ ಪರಿಯೇ ಇಲ್ಲದೆ ಗುರುಗಳನ್ನು ಕಾಣಲು ಪೀಡಿಸುತ್ತಿದ್ದರಂತೆ. ಗುರುವಿನ ದೇಹಕ್ಕೂ ಊಟ, ತಿಂಡಿ, ವಿಶ್ರಾಂತಿಗಳು ಬೇಕೆಂಬ ಪರಿಕಲ್ಪನೆ ಇಲ್ಲದೆ "ನಾವು ಬಹುದೂರದಿಂದ ಬಂದಿದ್ದೇವೆ. ಗುರುದರ್ಶನ ಈಗಲೇ ಆಗಬೇಕಂದು' ಹಠ ಹಿಡಿಯುವ ಭಕ್ತರು ಅನೇಕರಿರುತ್ತಿದ್ದರಂತೆ. ಅಂತಹವರನ್ನು ಟಾಗೂರರು 'ದರ್ಶನಾರ್ಥಿ ಹೋ ಕ್ಯಾ?" ಎಂದು ಕೇಳುತ್ತಿದ್ದರಂತೆ. ಅಂತಹ ದರ್ಶನಾರ್ಥಿಗಳೆಂದರೆ ಭಯ ಬೀಳುತ್ತಿದ್ದರಂತೆ. ತಮ್ಮ ಬೇಕು, ಬೇಡ, ವಿಶ್ರಾಂತಿ, ಆಲಸ್ಯಗಳನ್ನು ಕಡೆಗಣಿಸಿ ದರ್ಶನ ನೀಡಿ ಕಳುಹಿಸುತ್ತಿದ್ದರಂತೆ. ಇಂತಹ ತೊಂದರೆಗಳು ನಮ್ಮ ಗುರುನಾಥರಿಗೆ ನಾವೆಷ್ಟು ನೀಡಿದ್ದೇವೆಯೋ? ಆದರೂ ಅದನ್ನೆಲ್ಲಾ ಸಹಿಸಿ ದರ್ಶನವೀಯುತ್ತಿದ್ದರು ನಮ್ಮ ಗುರುನಾಥರು. ಅಷ್ಟೇ ಏಕೆ, ಆರ್ತನ ಬಳಿಗೇ ಬಂದು ಸಂತೈಸುತ್ತಿದ್ದರು.
ಸದ್ಗುರು ಸಮರ್ಥ
ಅದೊಂದು ದೊಡ್ಡ ಗುರುಕ್ಷೇತ್ರ. ಸಹಸ್ರಾರು ಭಕ್ತರು ಗುರುವಿನ ಸೇವೆಯಲ್ಲಿ ತೊಡಗಿದ್ದಾರೆ. ಒಂದೆಡೆ ಗುರುಭಜನೆ ಮತ್ತೊಂದೆಡೆ ಗುರುವಿನ ಆರಾಧನೆ. ಇದಕ್ಕೆ ಬಂದವರಿಗೆಲ್ಲಾ ಉಣಬಡಿಸಲು ಭಕ್ಷ್ಯ ಭೋಜ್ಯಗಳು ಸಿದ್ಧವಾಗುತ್ತಿವೆ. ಇನ್ನೇನು ಪ್ರಸಾದ ವಿನಿಯೋಗವಾಗಬೇಕು. ಅಷ್ಟರಲ್ಲೇ ಮಹಾತ್ಮರೊಬ್ಬರು ಅದೆಲ್ಲಿದ್ದರೋ ಬಂದರು. ಅಲ್ಲಿನವರಿಗೆಲ್ಲಾ ಅವರು ಪರಿಚಯವಿರುವವರೇ, ಅವಸರ ಅವಸರವಾಗಿ ತಮಗೆ ಊಟ ಬಡಿಸಲು ತಿಳಿಸಿದರು. ಅದರ ನಂತರ ಅಲ್ಲಿನವರಿಗೆ "ಒಂದು ದೊಡ್ಡ ಗುಂಡಿ ತೊಡಿಸಿ ಮಾಡಿದ ಎಲ್ಲಾ ಅಡಿಗೆಯನ್ನೂ ಮಣ್ಣಿನಲ್ಲಿ ಮುಚ್ಚಿಬಿಡಿರಿ" ಎಂದರಂತೆ. ಆ ಮಹಾತ್ಮರ ಬಗ್ಗೆ ಅಪಾರವಾದ ಗೌರವವಿದ್ದರೂ ಇಷ್ಟೊಂದು ಜನರಿಗೆ ಮಾಡಿದ ಅಡುಗೆ ಹೇಗೆ ಮಣ್ಣಿಗೆ ಹಾಕಿ, ಹೊಸದಾಗಿ ಮಾಡುವುದು ಎಂದು ಅವರು ಚಿಂತಿಸುತ್ತಿರುವಾಗ, ಮುಂದಾಗಬಹುದಾದ ಬಹುದೊಡ್ಡ ಅನಾಹುತವನ್ನು ತಪ್ಪಿಸಲಿಕ್ಕಾಗಿ, ಅಲ್ಲಿದ್ದ ಅಡುಗೆಯನ್ನು ಅಲ್ಲೇ ಇದ್ದ ಪ್ರಾಣಿಯೊಂದಕ್ಕೆ ಒಂದಿಷ್ಟು ಬಡಿಸಿದರು. ಕ್ಷಣಮಾತ್ರದಲ್ಲೇ ಅದನ್ನು ತಿಂದ ಆ ಪ್ರಾಣಿ ಅಸುನೀಗಿತು. ಅಲ್ಲಿದ್ದವರಿಗೆಲ್ಲಾ ಮಹಾತ್ಮರ ಮೇಲಿದ್ದ ಗೌರವ ಭಕ್ತಿ ಮತ್ತೂ ಹೆಚ್ಚಿತು, ಮಾಡಿದ ಅಡುಗೆಯನ್ನೆಲ್ಲಾ ಭೂಮಿಯಲ್ಲಿ ಮುಚ್ಚಿ ಹೊಸದಾಗಿ ಮಾಡುವುದರ ಜೊತೆಗೆ ಮುಂದಾಗಬಹುದಾದ ದೊಡ್ಡ ದುರಂತವನ್ನು ತಪ್ಪಿಸಿದ ಮಹಾತ್ಮರನ್ನು ವಿಷವುಂಡು, ಜೀರ್ಣಿಸಿಕೊಂಡ ಇವರನ್ನು ಸಾಕ್ಷಾತ್ ಶಿವ ಸ್ವರೂಪರೆಂದೇ ಭಾವಿಸಿದರು.
ತದನಂತರ ಈ ವಿಷಯವು ಆ ಕ್ಷೇತ್ರದ ಸನಿಹದಲ್ಲಿರುವ ಮಹಾತ್ಮರ ಬಂಧುವಿಗೆ ತಿಳಿದು ಅವಾಕ್ಕಾದರು. ಕೂಡಲೇ ತಮ್ಮ ಊರಿಗೆ ಫೋನಾಯಿಸಿ "ಹೀಗಾಯಿತಂತೆ, ಇಷ್ಟು ದೂರ ಬಂದವರು ನಮ್ಮ ಮನೆಗೆ ಬರದೇ ಹೋಗಿದ್ದಾರಲ್ಲಮ್ಮಾ... ಯಾಕೆ ಹೀಗೆ ಮಾಡಿದರು" ಎಂದಾಗ, ಅತ್ತಲಿಂದ ಬಂದ ಉತ್ತರ ಇನ್ನೂ ಆಶ್ಚರ್ಯಮಯವಾಗಿತ್ತು. "ಇದೇನಮ್ಮಾ ಹೀಗೆ ಹೇಳ್ತೀ. ಬೆಳಗಿನಿಂದ ಸಂಜೆಯವರೆಗೆ ಇಲ್ಲೇ ನಮ್ಮ ಮನೆಯಲ್ಲೇ ನಮ್ಮ ಕಣ್ಣು ಮುಂದೆ ಇದ್ದಾರೆ. ನಿನ್ನ ಮಾತು ವಿಚಿತ್ರವಾಗಿದೆ. ಅವರೆಲ್ಲೂ ಹೋಗಿಲ್ಲ". ಮನೆಯಲ್ಲಿ ಎಲ್ಲರುದುರು ಇದ್ದದ್ದೂ ಸತ್ಯ. ಅದೇ ಸಂದರ್ಭದಲ್ಲಿ ಆ ದೂರದೂರಿನ ಗುರುಕ್ಷೇತ್ರದಲ್ಲಿ ಕಂಡುಬಂದಿದ್ದೂ ಸತ್ಯ. ವಿಷದಡುಗೆಯನ್ನು ಉಂಡು ನೀಲಕಂಠನಂತೆ ಇದ್ದದ್ದೂ ಸತ್ಯ. ಅದೆಲ್ಲಕ್ಕಿಂತ ತಮ್ಮ ಭಕ್ತರನ್ನು ರಕ್ಷಿಸಿ, ಗುರು ಆಶ್ರಮಕ್ಕೆ ಬರಬಹುದಾದ ಆಪತ್ತಿನಿಂದ ರಕ್ಷಿಸಿದ್ದು ಇನ್ನೂ ದೊಡ್ಡ ಸತ್ಯ. ಸತ್ಯವೇ ಆಕಾರವಾದ, ನಿತ್ಯ ಸತ್ಯರಾದ ಆ ಮಹಾತ್ಮರು ಯಾರೆಂದು ಮತ್ತೆ ಹೇಳಬೇಕಿಲ್ಲ. ಪ್ರಖರ ಸೂರ್ಯನಿಗೆ, ಹೇಗೆ ಬೆಳಕು ತೋರಿಸಿ ಪರಿಚಯಿಸಬೇಕಿಲ್ಲವೋ , ಹಾಗೆಯೇ ಗುರುನಾಥರ ಭಕ್ತರೆಲ್ಲರಿಗೂ ಆ ಮಹಾತ್ಮರು ಸಖರಾಯಪಟ್ಟಣದ ಗುರುನಾಥರೆಂದು ಈಗಾಗಲೇ ತಿಳಿದಿದೆ. "ಸಮರ್ಥ ಸದ್ಗುರು" ಎಂಬುದು ಹೀಗೆ ವಿಧಿಯನ್ನರಿತು, ಎದುರಿಸಿ ತಮ್ಮವರನ್ನು ರಕ್ಷಿಸುವುದರಿಂದಲೇ ಸಾರ್ಥಕವಾಗಿದೆ. ಕೃಷ್ಣ ಭಕ್ತೆಯಾದ ಮೀರಾ ತನ್ನ ಪತಿ ನೀಡಿದ ವಿಷವನ್ನು ಕೃಷ್ಣಾರ್ಪಣವೆಂದು ಸೇವಿಸಿ ಬದುಕುಳಿದಂತೆ, ಎಲ್ಲವನ್ನೂ ಭಗವದರ್ಪಣ ಭಾವದಿಂದ ಮಾಡುವ ಗುರುನಾಥರಿಗೆ ಯಾವ ವಿಷ ಏನು ಮಾಡೀತು?
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಾಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http://srivenkatachalaavadhoota.blogspot.in/
No comments:
Post a Comment