ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 47
ನನ್ನ ಭಿಕ್ಷಾಟನೆ ಗುರು ಪರೀಕ್ಷೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರ ಮನೆಯಲ್ಲಿ ಎಂದಿನಂತೆ ದನ ಕರುಗಳನ್ನು ನೋಡಿಕೊಳ್ಳುವುದು, ಬಂದವರಿಗೆ ಆಯಾ ಹೊತ್ತಿಗೆ ಊಟೋಪಚಾರ ಸ್ವಚ್ಛಗೊಳಿಸುವುದು, ಹಸುಗಳಿಗೆ ಮೇವು ಹಾಕುವುದು, ತೋಟ ನೋಡುವುದು, ಅಮ್ಮನಿಗೆ ಅಡುಗೆ ಕಾರ್ಯದಲ್ಲಿ ಸಹಕರಿಸುವುದು, ಸಾಮಾನು ಸರಂಜಾಮು ತರುವುದು ಹಾಗೂ ಇವೆಲ್ಲದರೊಂದಿಗೆ ಗುರು ಪುತ್ರನ ಅನ್ನಾಹಾರ ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿತ್ತು.
ಅದು ಬಹುಶಃ 2004 ರ ಇಸವಿ ಇರಬೇಕು. ಇದ್ದಕ್ಕಿದಂತೆಯೇ ಗುರುನಾಥರು ನನ್ನನ್ನು ಊರಿಗೆ ಕಳುಹಿಸಿಬಿಟ್ಟರು. ಪ್ರತಿನಿತ್ಯ ಸಮೀಪವಿದ್ದ ಮಠದ ಜಗದ್ಗುರುಗಳು ದರ್ಶನ, ಗಣಪತಿ ದರ್ಶನ, ಹಾಗೂ ದೇವಿ ದೇಗುಲಕ್ಕೆ ಹೋಗಬೇಕೆಂದು ತಿಳಿಸಿದರು. ಒಂದು ವಾರ ಅಥವಾ ಹದಿನೈದು ದಿನಕ್ಕಿಂತ ಹೆಚ್ಚು ದಿನ ಗುರುನಾಥರನ್ನು ಬಿಟ್ಟು ದೂರವಿದ್ದು ಅಭ್ಯಾಸವಿರದ ನಾನು ಆತಂಕಗೊಂಡಿದ್ದೆ.
ನನ್ನಲ್ಲಿದ್ದ ವಿಪರೀತವಾದ ಹಠಮಾರಿತನ ಹಾಗೂ ದುರಹಂಕಾರ ಈ ಸ್ವಭಾವಗಳೇ ನನ್ನನ್ನು ಗುರುನಾಥರ ಸಾಮೀಪ್ಯದಿಂದ ದೂರ ಮಾಡಿತ್ತೆಂಬುದು ನಂತರ ತಿಳಿಯಿತು. ಕೈಯಲ್ಲಿ ಕೆಲಸವಿಲ್ಲ. ಊರಿನಲ್ಲಿ ಮನೆ ಊಟ ಮಾಡಲು ಮನಸ್ಸಿಲ್ಲ. ನನ್ನ ಸ್ಥಿತಿ ಅಯೋಮಯವಾಗಿತ್ತು. ಆದರೆ ಗುರುವಾಕ್ಯ ನಡೆಸಲೇಬೇಕಿತ್ತು.
ಸುಮಾರು 48 ದಿನಗಳ ವನವಾಸದ ನಂತರ ಮುಂದೇನು ಮಾಡಲಿ ಎಂಬ ಪ್ರಶ್ನೆ ಕಾಡುತ್ತಿತ್ತು. ಕಡೆಗೊಂದು ದಿನ ಧೈರ್ಯ ಮಾಡಿ ಇದ್ದರೆ ಗುರುವೇ ನಿನ್ನೊಂದಿಗೆ ಮಾತ್ರ. ಇಲ್ಲದಿದ್ದಲ್ಲಿ ಈ ಕಾಲುಗಳು ಎಲ್ಲಿಗೆ ಕರೆದುಕೊಂಡು ಹೋಗುತ್ತೋ ಅಲ್ಲಿಗೆ ಹೋಗ್ತೀನಿ ಅಂತ ಪಾರ್ಥನೆ ಮಾಡಿ ಸಖರಾಯಪಟ್ಟಣಕ್ಕೆ ಹೋಗಲು ಬೇಕಾದಷ್ಟು ಹಣವನ್ನು ಮಾತ್ರ ತೆಗೆದುಕೊಂಡು ಹೊರಟೆ.
ಬಹುಶಃ 11:30 ಕ್ಕೆ ಮನೆ ಮುಂದೆ ಇದ್ದೆ. ಗುರುನಾಥರೇ ಬಂದು ಕದ ತೆಗೆದು "ಬಾರಯ್ಯಾ ಅನ್ನ ಮಾಡು" ಎಂದರು.
ನಂತರ ಒಂದೆರಡು ದಿನ ಎಲ್ಲವೂ ಸುಗಮವಾಗಿತ್ತು. ನಂತರ ಇದ್ದಕ್ಕಿದ್ದಂತೆ ಮನೆಯಲ್ಲಿ ಯಾರು ತಪ್ಪು ಮಾಡಿದ್ರೂ ನಮಗೆ ಬಯ್ಯತೊಡಗಿದರು. ಈ ಬಯ್ಗುಳ ಯಾವ ಮಟ್ಟಕ್ಕೆ ಹೋಯಿತೆಂದರೆ ಶಿಷ್ಯರಲ್ಲಿ, ಊರಿನಲ್ಲಿ ಯಾರೇ ತಪ್ಪು ಮಾಡಿದರೂ ಬಯ್ಗುಳ ಮಾತ್ರ ನಂಗೇನೆ.
ಬೇಸತ್ತ ನಾನು ಒಂದು ಕ್ಷಣ, ನಾನು ಬಂದಿದ್ದೇ ತಪ್ಪಾಯಿತೇನೋ? ಹೊರಟು ಬಿಡ್ಲಾ ಅಂತ ಯೋಚಿಸಿದೆ. ಮರು ಕ್ಷಣವೇ "ಇಲ್ಲಿ ಬಂದು ಗುರುವೆಂದು ಒಪ್ಪಿದೀನಿ. ಇದ್ರೂ ಸತ್ರೂ ಇವರ ಕಾಲ ಬುಡದಲ್ಲೇ" ಅಂತ ದೃಢ ತೀರ್ಮಾನ ತೆಗೆದುಕೊಂಡೆ.
ಇದಾದ ನಂತರ ಬಯ್ಗುಳ ಮತ್ತೂ ಹೆಚ್ಚಾಯ್ತು. ಅಮ್ಮ ಏನಾದ್ರೂ ನನ್ನ ಕರೆದರೆ, "ಏನ್ ಕರೀತಿಯಾ? ಇನ್ನು ಇಷ್ಟು ದಿನದಲ್ಲಿ ಅವನು ನಂಗೆ ಹಾಗೆ ಬಯ್ತಾನೆ, ಹಿಂಗೆ ಬಯ್ತಾನೆ" ಅಂತ ಕೂಗಾಡ್ತಿದ್ರು.
ನಾನು ಇನ್ನೇನು ಅಳಬೇಕು ಅನ್ನುವ ಸ್ಥಿತಿಗೆ ತಲುಪಿದಾಕ್ಷಣ ಇದ್ದಕ್ಕಿದ್ದಂತೆ ನಗ್ತಾ "ಹೋಗ್ಲಿ ಬಿಡು ಒಂದು ಮಾತು ಬರುತ್ತೆ, ಹೋಗುತ್ತೆ, ಬನ್ನಿ ಮಲಗೋಣ" ಅಂತಿದ್ರು.
ಸದಾ ಅವರೊಟ್ಟಿಗೆ ಇಟ್ಟುಕೊಂಡಿರುತ್ತಿದ್ದರು. ಪ್ರತಿ ಬಾರಿ ಬಯ್ಯುವಾಗ "ಅವನಿಗಿನ್ನೂ ಪರೀಕ್ಷೆ ಮುಗಿದಿಲ್ಲ" ಅಂತ ಹೇಳುತ್ತಿದ್ದರು.
ಆಗೆಲ್ಲಾ ನಾನು ನೇರವಾಗಿ ದನದ ಕೊಟ್ಟಿಗೆಗೆ ಹೋಗಿ ಕೈಮುಗಿದು "ದೇವಾ ಎಂದೂ ಗುರುವಿನಿಚ್ಛೆಗೆ ವಿರುದ್ಧವಾಗಿ ನನ್ನನ್ನು ನಡೆಸಬೇಡ ತಂದೇ...." ಎಂದು ಅಂಗಲಾಚಿ ಪ್ರಾರ್ಥಿಸುತ್ತಿದ್ದೆ.
ಪ್ರತಿ ನಿತ್ಯ ಇದೇ ರೀತಿ ನಡೆಯುತ್ತಿತ್ತು. ನಾನು ಬಯ್ಗುಳ ತಾಳಲಾರದೇ ಇನ್ನೇನು ಅಳಬೇಕು ಅನ್ನುವಷ್ಟರಲ್ಲಿ ಗುರುನಾಥರು ಇದ್ದಕ್ಕಿದ್ದಂತೆ ಪ್ರಶಾಂತರಾಗಿ "ಒಂದು ಮಾತು ಬರುತ್ತೆ ಹೋಗುತ್ತೆ ಹೋಗ್ಲಿ ಬಿಡು. ಒಂದು ಲೋಟ ಹಾಲು ಕೊಡು, ಮಲಗಲು ಸಿದ್ಧ ಮಾಡು" ಅನ್ನುತ್ತಿದ್ದರು.
ಮತ್ತೆ ಬೆಳಗಾದ ನಂತರ ಅದೇ ಸ್ಥಿತಿ. ಈ ರೀತಿ ಬಹುಶಃ ಆರು ತಿಂಗಳು ನಡೆದಿರಬೇಕು ಅನಿಸುತ್ತದೆ. ನಂತರ ಒಂದು ದಿನ ನನ್ನನ್ನು ಅದ್ವೈತ ಪೀಠವೊಂದರ ಯತಿಗಳ ದರ್ಶನಕ್ಕೆ ಕಳಿಸಿದರು ನಾವು ಬಹುಶಃ ರಾತ್ರಿ ಒಂದು ಗಂಟೆಗೆ ವಾಪಸಾದೆವು.
ಪಕ್ಕದ ಕೊನೆಯಲ್ಲಿ ಮಲಗಿದ್ದ ಗುರುನಾಥರು ನನ್ನ ಕರೆದು "ಕಾಲು ಒತ್ತಯ್ಯ" ಅಂದ್ರು.
ಸ್ವಲ್ಪ ಸಮಯ ಹೋದ ನಂತರ ಗುರುನಾಥರು ನಿದ್ರಿಸಿದರೆಂದು ತಿಳಿದ ನಾನು ಹೊರಗೆ ಮಲಗಲು ಸಿದ್ಧನಾಗಿ ಅಲ್ಲಿಂದ ಎದ್ದೆ. ಕೂಡಲೇ ನನ್ನ ಕೈ ಹಿಡಿದ ಗುರುಗಳು "ಹೋಗ್ಬೇಡ ಇಲ್ಲೇ ನನ್ನ ಜೊತೇಲೇ ಮಲಗಿಕೋ" ಅಂದ್ರು. ನಾನು ಭಯದಿಂದಲೇ ಮಲಗಿದೆ. ಇಡೀ ರಾತ್ರಿ ನನ್ನ ಕೈ ಹಿಡ್ಕೊಂಡೇ ಮಲಗಿದ್ರು.
ಬಹುಶಃ ಈ ಘಳಿಗೆ ನನ್ನ ಏಳಿಗೆಗೆ ಬರೆದ ದಿನವೆನಿಸುತ್ತದೆ. ಆ ನಂತರ ನನ್ನನ್ನು ಪರೀಕ್ಷೆ ಮಾಡುತ್ತಿದ್ದರಾದರೂ ಹತ್ತು ಹಲವು ಜವಾಬ್ದಾರಿಗಳನ್ನು ಹೇಗೆ ಸಮರ್ಥವಾಗಿ ನಿಭಾಯಿಸಬೇಕೆಂಬುದನ್ನು ಹೇಳಿಕೊಟ್ಟರು.
ಹಾಗೇ ಮತ್ತೊಂದು ದಿನ ಬಹುಶಃ ಶನಿವಾರ ಬೆಳಿಗ್ಗೆ ನನ್ನ ಕರೆದು ಹೀಗೆ ಹೇಳಿದರು: "ನೋಡಯ್ಯಾ, ಸೌಂದರ್ಯಲಹರಿ ಹೇಳುವ ಮುತ್ತೈದೆಯರು ನಾನಿರುವಲ್ಲಿಗೆ ಬರುತ್ತಾರೆ. ಆದರೆ ಗುರು ಇಲ್ಲಿ ಮಾತ್ರವಿರುವುದಿಲ್ಲ. ಅವರವರ ಮನೆಯ ಮುಂದೆಯೂ ಯಾವ ರೂಪದಲ್ಲಿ ಬೇಕಾದರೂ ಬರಬಹುದು ಆಲ್ವಾ?. ಅದಕ್ಕೆ ನೀನು ಇಂದು ಅವರೆಲ್ಲರ ಮನೆಗೆ ಹೋಗಿ ಅವರ ಮುಂದೆ ನನ್ನನ್ನು ಬಯ್ದು ಭಿಕ್ಷೆ ಬೇಡಿಕೊಂಡು ಬಾ" ಅಂದ್ರು.
ಅದಕ್ಕೂ ಮುನ್ನ ಗುರುಶಿಷ್ಯ ಬಂಧ - ಸಂಬಂಧವೇನೆಂಬುದನ್ನು ಹೇಳಿ ನಂತರ "ಈಗ ಹೋಗ್ತಾ ಇರೋದು ನೀನಲ್ಲ ನಾನು. ಬಾ ನನ್ನ ಚಪ್ಪಲಿ ಹಾಕಿಕೊಂಡು ಹೋಗು" ಎಂದು ತನ್ನ ಚಪ್ಪಲಿ ಬಿಚ್ಚಿಕೊಟ್ಟರು.
ನಾನು ಅದನ್ನೇ ಹಾಕಿಕೊಂಡು ಭಿಕ್ಷೆ ಬೇಡುತ್ತಾ ಹೋದೆ. ಊರಿನಲ್ಲಿ ನನ್ನ ಪರಿಚಯ ಚೆನ್ನಾಗಿತ್ತು. ಆದರೂ ಮೂರ್ನಾಲ್ಕು ಮನೆಗಳವರು ನನ್ನ ದನಿ ಕೇಳಿ "ಬಂದ.... ನಿಂತ್ಕೊಂಡ ಭಿಕ್ಷೆಗೆ" ಅಂತ ಬಯ್ದರು. ನಾನು ಬೇಡುತ್ತಲೇ ಇರುವುದನ್ನು ನೋಡಿ ಹೊರಬಂದು ನೋಡಿ ನಂತರ ತಪ್ಪಾಯಿತೆಂದು ಭಿಕ್ಷೆ ನೀಡಿದರು. ಇನ್ನು ಕೆಲವರು ನನ್ನ ಸಮೀಪ ಬರಲೂ ಹೆದರಿದರು.
ಅಲ್ಲಿಂದ ಮುಂದೆ ಬಂದ ನಾನು ಶಿವ ದೇಗುಲದ ಪೂಜಾರಿಯ ಮನೆ ಮುಂದಿನ ಮೋರಿಯ ಮೇಲೆ ಕುಳಿತು ಭಿಕ್ಷೆ ಬೇಡಲಾರಂಭಿಸಿದೆ. ಒಳಗಿನಿಂದ "ನೋಡೂ, ನಾನು ಲಲಿತಾ ಸಹಸ್ರನಾಮ ಪಾರಾಯಣ ಮಾಡುತ್ತಿದ್ದೀನಿ, ಏಳುವಂತಿಲ್ಲ. ಆಮೇಲೆ ಬಾ" ಎಂಬ ಧ್ವನಿ ಬಂತು. ನಾನು ಪಟ್ಟು ಬಿಡದೇ ಭಿಕ್ಷೆ ಬೇಡಲಾರಂಭಿಸಿದೆ. ಸಿಟ್ಟಿಗೆದ್ದ ಮನೆಯೊಡತಿ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾ ದೇಗುಲಕ್ಕೆ ಹೋಗಿ ತನ್ನ ಪತಿಗೆ ದೂರು ನೀಡಿದಳು. ಹೊರಬಂದ ಭಟ್ಟರು ಗೋಡೆ ಬದಿಯಿಂದ ಬಗ್ಗಿ ನೋಡಿ 'ಏಯ್ ಯಾಕೋ, ತಲೆ ಸರಿ ಇಲ್ವಾ...... ಎದ್ದೇಳೋ ಮೇಲೆ' ಅಂದ್ರು.
ತಲೆ ತಗ್ಗಿಸಿ ಕುಳಿತಿದ್ದ ನಾನು "ಅಯ್ಯಾ ನಿಂಗ್ ಹೊಡೀಬೇಕು ಅಂತಿದ್ರೆ ಈ ಬೆನ್ನಮೇಲೆ ಹೊಡಿಯಪ್ಪಾ... ಈ ಹಸಿದ ಹೊಟ್ಟೆಯ ಮೇಲೆ ಹೊಡೀಬೇಡ ಅಂದೆ ದೀನನಾಗಿ, ನನ್ನ ನೋಡಿದ ಭಟ್ಟರು ಕೂಡಲೇ 'ಲೇ ಲೇ ತಗೀ ಬಾಗಿಲ, ಯಾರ್ ಬಂದಿದ್ದಾರೆ ನೋಡ್' ಎಂದು ಕೂಗಾಡತೊಡಗಿದರು.
ಅಲ್ಲಿಂದ ವಾಪಸಾದ ನಂತರ ಗುರುನಾಥರು "ಏನ್ ಅನುಭವವಾಯ್ತಯ್ಯಾ?" ಅಂದ್ರು.
ನಾನು ಅಳ್ತಾ ಹೇಳಿದೆ, "ಗುರುಗಳೇ ನಿಜವಾಗ್ಲೂ ಅದೊಂದು ಅನುಭವ. ನಾನು ಎಂಬುದನ್ನು ಬದಿಗಿಟ್ಟು ಬೇಡಬೇಕು. ಆಗ ಪ್ರತಿ ಮನೆಯವರ ತಿರಸ್ಕಾರಪೂರ್ವಕ ಮಾತು, ನಾಯಿಗೆ ಎಸೆದಂತೆ ಭಿಕ್ಷೆ ನೀಡುವ ರೀತಿ "ನಮ್ಮೊಳಗಿನ ನಾನು" ಅನ್ನು ನಾಶ ಮಾಡಬೇಕು. ನಂತರ ಎಲ್ಲ ಮನೆಯಿಂದ ತಂದ ಭಿಕ್ಷೆಯನ್ನು ಒಂದು ಮರದಡಿ ಕೂತು ತಿನ್ನುವಾಗ ಸಿಗುವ ಆನಂದ ವರ್ಣಾತೀತವಾದದ್ದು ಗುರುಗಳೇ" ಎಂದೆ.
ಗುರುಗಳು "ಹೌದಯ್ಯ" ಎಂದು ನಕ್ಕು ಸುಮ್ಮನಾದರು. ಗುರುನಾಥರು ಈ ಮಧ್ಯೆಯೇ ನನ್ನ ಪರೀಕ್ಷೆ ಮಾಡಿದರು. ಈ ನಡುವೆ ನನ್ನ ಪರೀಕ್ಷೆ ಪಾಸ್ ಮಾಡಿಸಿಕೊಡಲಿಲ್ಲವೆಂಬ ಕಾರಣಕ್ಕೆ ನನ್ನ ಜಗಳ ಆಗಾಗ್ಯೆ ನಡೆಯುತ್ತಲೇ ಇರುತ್ತಿತ್ತು.
ಒಮ್ಮೆ ಗುರುನಾಥರನ್ನು ರೇಗಿಸಲು ತೀರ್ಮಾನಿಸಿ ಯಾವುದೋ ಹುಡುಗಿಯ ಸ್ನೇಹ ಬೆಳೆಸಲು ಹೋಗಿ ಅದು ನನಗೇ ಮುಳುವಾಗುವ ಪ್ರಸಂಗವೂ ನಡೆಯಿತು.
ಮತ್ತೊಮ್ಮೆ ನನ್ನ ಜಗಳದಿಂದ ಸಿಟ್ಟಾದ ಗುರುನಾಥರು "ನೋಡಯ್ಯಾ ನಿನ್ನ ಹಿಡಿದಿಟ್ಟಿರೋದು ನಾನೇ. ನೀ ಎಲ್ಲೇ ಹೋದ್ರೂ ನಾ ಸಹಿ ಹಾಕುವ ತನಕ ನಿನ್ನ ಕೆಲಸವಾಗುವುದಿಲ್ಲ. ನಿನಗೆ ನನ್ನಿಂದ ಒಂದು ಕೆಲಸವಾಗಬೇಕಾಗಿದೆ" ಆ ನಂತರ ನಿನ್ನ ಕೆಲಸವಾಗುವುದು. ನಿನ್ನ ಮನೆ ಬಾಗಿಲಿಗೇ ನಿನ್ನ ಉದ್ಯೋಗ ಪತ್ರ ಬರುವುದು. ಅಲ್ಲಿಯವರೆಗೆ ನನ್ನ ಜೊತೆ ಇರುವುದಷ್ಟೇ ನಿನ್ನ ಕೆಲಸ ತಿಳೀತಾ....?" ಅಂದ್ರು.
ಆದರೂ ನನ್ನ ಮನೋ ಚಾಂಚಲ್ಯ ಹಾಗೂ ಅವೆಲ್ಲಕ್ಕಿಂತ ಮೇಲಾಗಿ ಇತರರ ಚುಚ್ಚು ನುಡಿಗಳಿಂದ ಆಗಾಗ್ಗೆ ಚಿಂತಾಕ್ರಾಂತನಾಗುತ್ತೇನೆ.
"ಎಷ್ಟೇ ಪರೀಕ್ಷೆ, ಎಷ್ಟೇ ಬಯ್ಗುಳವಾದರೂ ಪರಸ್ಪರರಲ್ಲಿದ್ದ ಅದಮ್ಯ ಪ್ರೀತಿ, ನಂಬಿಕೆ ಎಂದಿಗೂ ಕಡಿಮೆ ಆಗಿರಲಿಲ್ಲ. ಗುರು ಕರುಣಾ ಸಮುದ್ರ, ಅವನ ಪ್ರೀತಿ ಅನನ್ಯ"........,,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment