ಒಟ್ಟು ನೋಟಗಳು

Wednesday, November 2, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 29


ಆ ವ್ಯಕ್ತಿ ಇಂಜಿನಿಯರ್ ಆದದ್ದು 



                                                    
                                       ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
                                            ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



ಚಿಕ್ಕಮಗಳೂರಿನವರಾದ ಆ ವ್ಯಕ್ತಿ ಅಪ್ಪ ಅಮ್ಮಂದಿರ ಏಕೈಕ ಪುತ್ರ. ತಂದೆ ಅನಾರೋಗ್ಯವಿದ್ದು, ತಾಯಿ ಗುರುಗಳ ಪರಮ ಭಕ್ತೆ. ಅವರ ಆರ್ಥಿಕ ಸ್ಥಿತಿ ಸಾಮಾನ್ಯವಾಗಿತ್ತು. 

ಆತ ಕಷ್ಟಪಟ್ಟು ಸರ್ಕಾರ ಕೊಡಮಾಡುವ ಶಿಕ್ಷಣಕ್ಕೆ ಸಾಲ ಪಡೆದು ಇಂಜಿನಿಯರಿಂಗ್ ಓದುತ್ತಿದ್ದನು. ಕಾಲೇಜಿನಲ್ಲಿ ನಡೆವ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ದೇಶದ ಪ್ರತಿಷ್ಠಿತ ಕಂಪನಿಯೊಂದು ಅವರನ್ನು ಆಯ್ಕೆ ಮಾಡಿ ಆನಂತರ ತಿರಸ್ಕರಿಸಿತ್ತು. ಇದರಿಂದ ಆ ವ್ಯಕ್ತಿ ಬಹಳ ನೊಂದಿದ್ದು ಸಖರಾಯಪಟ್ಟಣಕ್ಕೆ ಬಂದಿದ್ದರು. 

ಆತ ಬಂದಾಗಲೆಲ್ಲ ಗುರುನಾಥರು ಇರಲಿ, ಬಿಡಲಿ ಮನೆಯ ಮೆಟ್ಟಿಲಿಗೆ ನಮಸ್ಕರಿಸಿ ಮನೆಯ ಶೌಚಾಲಯ ತೊಳೆದು ಹೋಗುತ್ತಿದ್ದರು. ಒಮ್ಮೆ ಸಿಕ್ಕ ಗುರುನಾಥರು ಅವರನ್ನು ಕರೆದು ತಾನು ಹಾಕಿದ್ದ ಜನಿವಾರವನ್ನು ತೆಗೆದು ಆ ವ್ಯಕ್ತಿಗೆ ಹಾಕಿ "ನೀನು ಗೆದ್ದೆ  ಹೋಗಿ ಬಾ" ಎಂದು ಕಳಿಸಿದರು. ಇಂದು ಆ ವ್ಯಕ್ತಿ ಹಿಂದೆ ತಿರಸ್ಕರಿಸಲ್ಪಟ್ಟ ಅದೇ ಕಂಪನಿಗೆ ಕೆಲಸಕ್ಕೆ ಸೇರುವಂತಾಗಿ ಉತ್ತಮ ಜೀವನ ನಡೆಸುತ್ತಿರುವರು. 

ಹಾಗೆಯೇ ಇನ್ನೊಮ್ಮೆ ಬೇಲೂರಿನಿಂದ ಬರುತ್ತಿದ್ದ ಓರ್ವ ವ್ಯಕ್ತಿ ರಾಜ್ಯ ಖಜಾನೆ ಇಲಾಖೆಯ ಕೆಲಸಕ್ಕೆ ಅರ್ಜಿ ಹಾಕಿ ಗುರುನಾಥರ ಆಶೀರ್ವಾದ ಪಡೆಯಲು ಬಂದಿದ್ದರು. 

ಆ ವ್ಯಕ್ತಿಯನ್ನು ಕರೆದ ಗುರುನಾಥರು "ಆ ವ್ಯಕ್ತಿ ಮೌಖಿಕ ಪರೀಕ್ಷೆ ನಡೆವುದು ಮೇಲಂತಸ್ತಿನ ಮಹಡಿಯಲ್ಲಿ. ಅಲ್ಲಿಗೆ ಹೋಗಲು ಎಷ್ಟು ಮೆಟ್ಟಿಲುಗಳಿರುವುದು. ಪರೀಕ್ಷೆ ಮಾಡುವವರು ದಪ್ಪಗಿರುವ ಓರ್ವ ಮಹಿಳೆ ಹಾಗೂ ಅವರು ಇಂತಿಂತಹ ಪ್ರಶ್ನೆ ಕೇಳುವರು. ಮತ್ತು ನೀನು ಆಯ್ಕೆ ಆಗುತ್ತಿ ಹೋಗಿ ಬಾ" ಎಂದು ಆಶೀರ್ವದಿಸಿ ಕಳುಹಿಸಿದರು. ಅವರಂದಂತೆಯೇ ಎಲ್ಲವೂ ಚಾಚೂ ತಪ್ಪದೆ ನಡೆದಿದ್ದು ಇಂದು ಆ ವ್ಯಕ್ತಿ ಬೇಲೂರಿನಲ್ಲೇ ಕೆಲಸದಲ್ಲಿರುವರು. 

ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯಲ್ಲಿ ವೃತ್ತಿಯಲ್ಲಿದ್ದ ಇಬ್ಬರು ಗುರುನಾಥರ ದರ್ಶನಕ್ಕಾಗಿ ಆಗಾಗ್ಗೆ ಬರುತ್ತಿದ್ದರು. ಅದರಲ್ಲಿ ಒಬ್ಬಾತ ಉಪನಿರೀಕ್ಷಕ ಹುದ್ದೆಗಾಗಿ ಇಲಾಖಾ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದರು. ಮೊದಲ ಬಾರಿ ಅನುತ್ತೀರ್ಣರಾಗಿದ್ದು ಎರಡನೇ ಬಾರಿ ಅರ್ಜಿ ಸಲ್ಲಿಸಿ ಅಲ್ಲಿಂದ ಗುರುಗಳ ಅನುಗ್ರಹಕ್ಕಾಗಿ ಬಂದರು. 

ಅವರಿಗೆ ಗುರುನಾಥರು ಅಲ್ಲಿ ಕೇಳುವ ಪ್ರಶ್ನೆಗಳನ್ನು ತಿಳಿಸಿ ಆಶೀರ್ವದಿಸಿ ಕಳಿಸಿದರು. ಎಲ್ಲವೂ ಅಂತೆಯೇ ನಡೆದು ಇಂದು ಗುರುಕೃಪೆಯಿಂದ ಆತ ಉಪನಿರೀಕ್ಷಕ ಹುದ್ದೆಯಿಂದ ವೃತ್ತನಿರೀಕ್ಷಕ ಹುದ್ದೆಗೆ ಬಡ್ತಿ ಹೊಂದಿರುವರು. 

ಇವೆಲ್ಲವೂ "ಗುರುವಾಕ್ಯ ಪ್ರಮಾಣ ಕಣಯ್ಯಾ" ಎಂದು ಆಗಾಗ್ಗೆ ಹೇಳುತ್ತಿದ್ದ ಗುರುನಾಥರ ಮಾತಿಗೆ ಕೆಲವು ಉದಾಹರಣೆಗಳು ಮಾತ್ರ........,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।



No comments:

Post a Comment