ಒಟ್ಟು ನೋಟಗಳು

Wednesday, November 16, 2016

ಶ್ರೀ ಸದ್ಗುರು ಮಹಿಮೆ   

    ಗ್ರಂಥ ರಚನೆ - ಚರಣದಾಸ 

   ಅಧ್ಯಾಯ  - 43

ಸೂತ್ರಧಾರ 




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರು ಒಂದು ಜೀವನಾನುಭವ, ಭಕ್ತರು ಗುರುವಿನ ಮಾತು ಕೆಳದಿದ್ದಾಗ್ಯೂ ಸದಾ ಭಕ್ತ ರಕ್ಷಣೆಯೇ ಸದ್ಗುರುವಿನ ಲಕ್ಷಣ. 

ಅದು ಚರಣದಾಸನಾದ ನಾನು ಗುರುನಿವಾಸದಲ್ಲಿದ್ದ ಆರಂಭದ ಕಾಲ. ಬಹುಶಃ 2002 ಮತ್ತು  2003 ಅನ್ನಿಸುತ್ತೆ. ಒಮ್ಮೆ ಗುರುನಾಥರು ಏಳೆಂಟು ಜನರನ್ನು ಕರೆದುಕೊಂಡು ಅದ್ವೈತ ಪೀಠದ ಶ್ರೀ ಶ್ರೀ ಶ್ರೀ ಗಳ ದರ್ಶನಕ್ಕೆ ಹೊರಟರು. ಒಂದು ಕಾರು, ಒಂದು ಬೈಕ್ ಹಾಗೂ ಒಂದು ಸ್ಕೂಟರ್ ಒಟ್ಟಿಗೆ ಮಠ ತಲುಪಿ ಗುರುದರ್ಶನ ಮಾಡಿ ಬಂದು ರಾತ್ರಿ ಸುಮಾರು ಒಂದು ಗಂಟೆಗೆ ಸಖರಾಯಪಟ್ಟಣದ ಕಡೆ ಹೊರಟೆವು. ಊರಿನ್ನೂ ಅರವತ್ತು ಕಿಲೋಮೀಟರ್ ದೂರವಿತ್ತು. ಆಗ ಚಾಲಕನಿಗೆ ನಿದ್ರೆ ಆವರಿಸತೊಡಗಿತು. ಗುರುನಾಥರು ನನ್ನ ತೊಡೆ ಮೇಲೆ ತಲೆಯಿಟ್ಟು ಮಲಗಿದ್ದರು. "ಅಯ್ಯ, ನಿದ್ರೇಲಿ ಗಾಡಿ ಓಡಿಸುವುದು ಬೇಡ ಕಣಯ್ಯ. ಎಲ್ಲಾದ್ರೂ ನಿಲ್ಲಿಸಿ ವಿಶ್ರಾಂತಿ ತೆಗೆದುಕೊಳ್ಳೋಣ" ಅಂತ ಪದೇಪದೇ ಹೇಳಿದರು. ಆದರೆ ಕಾರಿನ ಚಾಲಕ ಒಂದು ಊರಿನಲ್ಲಿ ಟೀ ಕುಡಿದು ಹೋಗೋಣ ಎಂದು ನಿಲ್ಲಿಸಿದ್ರು. ಟೀ ಕುಡಿದು ಮತ್ತೆ ಕುಳಿತರು. ಆಗ ಗುರುಗಳು "ಬೇಡಯ್ಯ ನಿದ್ದೆಗಣ್ಣಲ್ಲಿ ಓಡಿಸಬೇಡ" ಎಂದರು. ಆತ "ಇಲ್ಲ ಗುರುಗಳೇ ಮುಂದಿನ ಸೇತುವೆ ದಾಟಿಸಿ ಬೇರೆಯವರಿಗೆ ಗಾಡಿ ನೀಡುತ್ತೇನೆ " ಅಂದರು. 

ನನ್ನ ತೊಡೆಯ ಮೇಲೆ ತಲೆಯಿಟ್ಟು ನಿದ್ರಿಸುತ್ತಿದ್ದ ನನ್ನೊಡೆಯ ಕಾಲಿನಿಂದ ಕಾರಿನ ಕೆಳಭಾಗವನ್ನು ಬಲವಾಗಿ ಒತ್ತಿದರು. ಅಷ್ಟೇ........ 

ಸೇತುವೆ  ದಾಟಿ ಇಪ್ಪತ್ತು-ಮೂವತ್ತು ಅಡಿ ಮುಂದೆ ಹೋದ ಕಾರು ಇದ್ದಕ್ಕಿದ್ದಂತೆ ನಿಂತು ಬಿಟ್ಟಿತು. ಯಾರಿಗೂ ಏನಾಯಿತೆಂದು ತಿಳಿಯಲಿಲ್ಲ. ಒಬ್ಬೊಬ್ಬರು ಒಂದೊಂದು ಹೇಳತೊಡಗಿದರು. 

ಗುರುನಾಥರು ಚರಣದಾಸನಾದ ನನಗೆ "ಅಲ್ಲಯ್ಯಾ, ಅವೇಳೆಯಲ್ಲಿ ನಿದ್ದೆಗಣ್ಣಲ್ಲಿ ಗಾಡಿ ಓಡಿಸಿ ಹೆಚ್ಚು ಕಮ್ಮಿಯಾದ್ರೆ ಗತಿ ಯಾರು? ನನ್ನ ಮಾತಿನ ಕಡೆ ಗಮನ ಕೊಡ್ಲಿಲ್ಲ. ಏನ್ ಮಾಡೋದಪ್ಪಾ ಅಂತ ಯೋಚಿಸಿ ಒಂದು ಸಾರಿ ನೆಲ ಒತ್ತಿದೆ ಅಷ್ಟೇ! ಗಾಡಿ ನಿಂತೋಯ್ತು" ಅಂದರು. ಈ ಮಧ್ಯೆ ಗಾಡಿ ಏಕೆ ಹಠಾತ್ತಾಗಿ ನಿಂತಿತೆಂದು ತಿಳಿಯದೆ ತಡಕಾಡುತ್ತಿದ್ದ ಇತರ ಭಕ್ತರನ್ನು ಕುರಿತು "ಏನಿಲ್ರಯ್ಯಾ, ಕ್ಲಚ್ ಫೇಸಿಂಗ್ ಹೋಗಿದೆ ಅಷ್ಟೇ" ಅಂದರು. ನಂತರ ಬಾಡಿಗೆ ಕಾರು ವ್ಯವಸ್ಥೆ ಮಾಡಿಕೊಂಡು ನಾನು ಹಾಗೂ ಇನ್ನಿಬ್ಬರನ್ನು ಆ ಕಾರಿನಲ್ಲೇ ಉಳಿಸಿ ಹೊರತು ಚಿಕ್ಕಮಗಳೂರು ತಲುಪಿದರು. 

ಮರುದಿನ ಗಾಡಿ ರಿಪೇರಿ ಎಲ್ಲಿ ಮಾಡಿಸೋದಪ್ಪ? ಎಂದು ಯೋಚಿಸಿ ನೋಡಿದ್ರೆ ಕಾರು ನಿಂತಲ್ಲಿಂದ ಕೇವಲ ಹತ್ತು ಹದಿ ದೂರದಲ್ಲೇ ಗ್ಯಾರೇಜ್ ಇತ್ತು. ರಿಪೇರಿ ಮಾಡಲು ಬಂದವ ಪರೀಕ್ಷಿಸಿ, "ಏನಿಲ್ಲಾ ಕ್ಲಚ್ ಫೇಸಿಂಗ್ ಹೋಗಿದೆ ಅಷ್ಟೇ........" ಅಂದು ನುಡಿದು ಗಾಡಿ ಸರಿ ಮಾಡಿಕೊಟ್ಟನು. 

ಭಕ್ತ ರಕ್ಷಣೆಗಾಗಿ ಎಲ್ಲ ಆಟವನ್ನು ಆಡುವ ಆ ಸೂತ್ರಧಾರನಿಗೆ ಬೇರೆ ಸಮರುಂಟೆ.....? ......,,,,,,,,,,,


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment