ಒಟ್ಟು ನೋಟಗಳು

Saturday, November 26, 2016

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 53

ಅಮ್ಮ ಸತ್ತ ದಿನ ಯುಗಾದಿ ರಂಗೋಲಿ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಅಂದು ಯುಗಾದಿ. ನನಗೆ ವಿಷಯ ತಿಳಿದಾಕ್ಷಣ ಬೆಂಗಳೂರಿನಿಂದ ಮಧ್ಯಾನ್ಹ 1:30 ರ ರೈಲಿನಲ್ಲಿ ಸಖರಾಯಪಟ್ಟಣಕ್ಕೆ ಹೊರಟು ಸಂಜೆ 6:30 ಕ್ಕೆ ತಲುಪಿದೆ. ಆದಾಗ ತಾನೇ ಗುರುನಾಥರ ತಾಯಿಯ ಶವವನ್ನು ಮನೆಯಿಂದ ತೋಟಕ್ಕೆ ಸಂಸ್ಕಾರಕ್ಕಾಗಿ ಕೊಂಡೊಯ್ಯುತ್ತಿದ್ದರು. ನಾನು ಸೀದಾ ತೋಟಕ್ಕೆ ಹೋದೆ. 

ಗುಂಡಿ ತೋಡಲು ಜನರ ಅಭಾವವಿತ್ತು. ಬಂದಾಕ್ಷಣ ನನ್ನನ್ನು ಕರೆದು "ಬಾರಯ್ಯ ಕೆಲಸಕ್ಕೆ ಕೈ ಹಾಕು" ಅಂದ್ರು. 

ಮೂರನೇ ದಿನ ನನಗೊಂದು ಹಿತ್ತಾಳೆ ಪಾತ್ರೆ ದಾನ ನೀಡಿದ್ದು ಅದು ಇಂದಿಗೂ ನನ್ನೊಂದಿಗಿದೆ. ಯುಗಾದಿಯ ಹಿಂದಿನ ದಿನ ರಾತ್ರಿ ತೀರಾ ಅಸ್ವಸ್ಥರಾಗಿದ್ದ ತಾಯಿಯನ್ನು ಕುರಿತು, "ಆಯ್ತಲ್ಲಾ ಎಲ್ಲವೂ ಎಂದಾದ್ರೂ ಸಿಗೋಣ, ಸುಖವಾಗಿ ಹೋಗಿ ಬಾ" ಅಂದಿದ್ರು. 

ರಾತ್ರಿ ಮಲಗಿದ ಅಜ್ಜಿ ಆ ಮೇಲೆ ಏಳಲಿಲ್ಲ. ಆದರೆ ವಿಷಯ ಎಲ್ಲರಿಗೂ ತಿಳಿದರೆ ಹಬ್ಬ ಆಚರಿಸುವುದನ್ನೇ ನಿಲ್ಲಿಸಬಹುದೆಂದು ಯೋಚಿಸಿದ ಗುರುನಾಥರು ತಾಯಿಯ ದೇಹಕ್ಕೆ ದಪ್ಪ ಹೊದಿಕೆ ಹೊದಿಸಿದರು. ಅದು ಹೇಗಿತ್ತೆಂದರೆ ಯಾರೇ ನೋಡಿದರೂ ಆಯಾಸವಾಗಿ ಅಜ್ಜಿ ಮಲಗಿದ್ದಾರೇನೋ ಅನಿಸುತ್ತಿತ್ತು. ಅಷ್ಟೇಕೆ ರಾತ್ರಿ ಇದೇ ಅಜ್ಜಿಯ ಪಕ್ಕವೇ ಮಲಗಿದ್ದ ಓರ್ವ ಮಹಿಳಿಗೂ ಕೂಡಾ ಅಜ್ಜಿ ದೇಹ ಬಿಟ್ಟ ವಿಚಾರ ತಿಳಿದಿರಲಿಲ್ಲ. 

ಊರಿನಲ್ಲಿ ಸಂಶಯ ಬರಬಾರದೆಂಬ ಕಾರಣಕ್ಕಾಗೋ ಏನೋ, ರಸ್ತೆ ಮೇಲೆಲ್ಲಾ ಕಡೆ ರಂಗೋಲಿ ಬಿಡಿಸಿದ್ದರು. ಜೊತೆಗೆ ಯಾರಾದರೂ ಒಬ್ಬ ಭಕ್ತರನ್ನು ಊರೊಳಗೆ ಕಳಿಸಿ ಹಬ್ಬ ಆಚರಣೆ ಆಯ್ತೋ ಎಂದು ದೃಢಪಡಿಸಿಕೊಂಡು ತದನಂತರ ತಾಯಿ ದೇಹ ಬಿಟ್ಟ ವಿಚಾರ ತಿಳಿಯುವಂತೆ ಮಾಡಿದರು. 

ಹಾಗೆಯೇ ಇನ್ನೊಮ್ಮೆ ಇದ್ದಕ್ಕಿದ್ದಂತೆ "ನಾಳೆ ಬೆಳಿಗ್ಗೆ 11:30 ರ ಒಳಗೆ ಎಲ್ಲ ಊಟ ಮುಗಿಸಿಕೊಳ್ಳಬೇಕು. ಆ ನಂತರ ಊಟ ಮಾಡೋಕ್ಕಾಗಲ್ಲ" ಅಂದ್ರು. ಅಂತೆಯೇ ಮರುದಿನ ಬೆಳಿಗ್ಗೆ 11:30 ರ ಒಳಗೆ ಮನೆಯಲ್ಲಿದ್ದ ಎಲ್ಲ ಭಕ್ತರಿಗೂ ಊಟ ಬಡಿಸಿದರು. 

ಗುರುನಾಥರ ಮಗ ತನ್ನ ಸಂಬಂಧಿಗಳ ಕಾರಿನಲ್ಲಿ ಬೆಂಗಳೂರಿಗೆ ಹೊರಟರು. ದಾರಿಯಲ್ಲಿ ಕಾರು ಸರ್ಕಾರಿ ಬಸ್ ಗೆ ಡಿಕ್ಕಿ ಹೊಡೆದಿತ್ತು. ಆ ಕಾರಿನ ಮಾಲೀಕನಿಗೆ ಸುಮಾರು ಆರು ತಿಂಗಳಿನಿಂದ "ನೀ ಇಲ್ಲಿಗೆ ಸಧ್ಯಕ್ಕೆ ಕಾರು ತರಬೇಡ" ಅಂತ ಹೇಳ್ತಾನೆ ಇದ್ರು. ಆದ್ರೂ ಅಂದು ಆತ ಕಾರು ತಂದಿದ್ದರು. ಅದು ತನ್ನ ಮಗನಿಗೆ ಆಪತ್ತು ತರುವುದೆಂದು ಗೊತ್ತಿದ್ದರೂ ಈಶ್ವರ ಇಚ್ಛೆಯನ್ನು ಯಾರೂ ಮೀರಲಾರದೆಂಬ ನಿಯಮಕ್ಕೆ ತಾನೂ ಕೂಡ ಬದ್ಧರಾಗಿದ್ದರು. 

ಅಪಘಾತವಾದ ವಿಷಯ ತಿಳಿದ ಮೇಲೂ ಕೂಡಾ ತನ್ನ ಮಗನೆಂಬ ಯಾವ ಮಮಕಾರವೂ ಅಲ್ಲಿ ಕಂಡು ಬರಲಿಲ್ಲ. ಆದರೆ ಕರ್ತವ್ಯ ಪ್ರಜ್ಞೆ ಸದಾ ಜಾಗೃತವಾಗಿದ್ದಿತು. ಅಂತೆಯೇ ತನ್ನ ತಾಯಿ ದೇಹ ಬಿಡುವ ಸಂಗತಿ ಗೊತ್ತಿದ್ದಾಗಲೂ ಅವರೇ ಎಲ್ಲರಿಗೂ ಹೇಳುತ್ತಿದ್ದಂತೆ, "ಸಮಚಿತ್ತದಿಂದ ಇದ್ದು ನೋವು-ನಲಿವು, ರಾಗ-ದ್ವೇಷ, ತಪ್ಪು-ಒಪ್ಪುಗಳೆಲ್ಲಾ ನಮ್ಮ ಮನದ ಭಾವಗಳೇ. ಪಾಪ-ಪುಣ್ಯಗಳೆರಡನ್ನೂ ಮೀರಿ ಮುನ್ನಡೆಯಬೇಕು. ಆಗ ಈಶವರ ನಿಮ್ಮೊಡನಿರುವನು" ಎಂಬ ಮಾತಿನಂತೆಯೇ ನಡೆದುಕೊಂಡಿದ್ದರು. 

"ಚರಣದಾಸನಾದ ನನ್ನ ಹಾಗೂ ಗುರುನಾಥರ ನಡುವೆ ಲೌಕಿಕದಲ್ಲಿ ಗಣನೆಗೆ ಬರುವ ಯಾವ ರಕ್ತ ಬಂಧನವೂ ಇರಲಿಲ್ಲ. ಆದರೆ, ಅದಕ್ಕೂ ಮೀರಿದ ಸಂಬಂಧವಿತ್ತು". 

ಅದರ ಮರ್ಮ ತಿಳಿದಿದ್ದ ಗುರುಗಳು ನನಗೆ ಉಡುದಾರ ಹಾಕಿದರು. ಜನಿವಾರ ಹಾಕಿದರು ಹಾಗೂ ತನ್ನ ಮಗನಂತೆಯೇ ನನ್ನನ್ನು ನೋಡಿಕೊಂಡಿದ್ದರು. ಕೊನೆಯವರೆಗೂ ನುಡಿದಂತೆಯೇ ನಡೆದುಕೊಂಡರು......,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment