ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 9
ಅಯ್ಯಾ ನೂರರಲ್ಲಿ ಇಪ್ಪತ್ತೈದು ಮಾತ್ರಾ ನಿನಗೆ.....
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಅಂಬಳೆಯ ಒಬ್ಬ ಉತ್ತಮ ವ್ಯಕ್ತಿ. ಇದ್ದಕ್ಕಿದ್ದಂತೆ ಅವರಿಗೆ ತಾಪತ್ರಯಗಳು ಶುರುವಾದವು. ಅನ್ನಾನ ಗತಿಯಾಯಿತು. ಬಂಧು ಬಳಗವೆಲ್ಲಾ ಹೀನಾಯವಾಗಿ ಕಂಡಿತು. ಅಣ್ಣ ತಮ್ಮಂದಿರು ನಿಕೃಷ್ಟವಾಗಿ ಕಂಡರು. ಅದು ಎಂತೋ ಗುರುನಾಥರ ಕೃಪಾಛತ್ರದಡಿ ಅವರು ಬಂದರು. ತಮಗೆ ಅಂದ ಕಷ್ಟಗಳೆಲ್ಲಾ ತಮ್ಮ ಪ್ರಾರಬ್ಧ, ಇದಕ್ಕೆ ಯಾರನ್ನೂ ಅನ್ನುವಂತಿಲ್ಲ ಎಂಬ ವಿವೇಕ ಅವರಲ್ಲಿ ಉದಿಸಿತು. 'ಗುರುನಾಥರು ನನ್ನನ್ನು ಹೀಗೆ ಪರೀಕ್ಷಿಸುತ್ತ, ನನ್ನ ಕರ್ಮವನ್ನು ಕಳೆಸುತ್ತಿರಬಹುದು' ಎಂದು ಸಮಾಧಾನಿಯಾಗಿಯೇ ಇದ್ದರು. ಪರೀಕ್ಷೆ ಮುಗಿದ ಮೇಲೆ ಫಲಿತಾಂಶವಿದೆಯಲ್ಲ. ಅಂತೆಯೇ ಪರೀಕ್ಷೆಯ ಮೇಲೆ ಪರೀಕ್ಷೆಗಳು ಇದ್ದೇ ಇರುತ್ತವೆ.
ಅಂದು ಮನೆಯಲ್ಲಿ ಪಕ್ಷವಿದೆ. ಕೈಯಲ್ಲಿ ಹಣವಿಲ್ಲ. ತಮಗೆ ಆಸರೆ ನೀಡಿದ್ದ ಬಂಧುಗಳಲ್ಲಿ ಬೇಡಿದಾಗ ಎರಡು ನೂರು ರೂಪಾಯಿ ಸಾಲ ಸಿಕ್ಕಿತು. ಸಾಲ ವಾಪಸ್ಸು ಕೊಡುವುದು ಯಾವಾಗ ಅದೂ ಅವರಿಗೆ ತಿಳಿದಿಲ್ಲ. ಸಂಜೆ ಊರಿಗೆ ಬರುವ ಮುನ್ನ, ಪಕ್ಷಕ್ಕೆ ಬೇಕಾದ ಹೂವು ಹಣ್ಣು ಇತರೆ ಸಾಮಾನುಗಳನ್ನು ತಂದು, ಮಾರನೆಯ ದಿನ ಇನ್ನೂರ ಎಂಬತ್ತು ಪಿತೃಗಣಗಳಿಗೆ ಶ್ರದ್ಧಾ ಭಕ್ತಿಯಿಂದ ಪಿಂಡ ಪ್ರಧಾನ ಮಾಡುವಲ್ಲಿ ಸಂಜೆಯಾಗಿತ್ತು. ರಾತ್ರಿಯೇ ಚಿಕ್ಕಮಗಳೂರಿಗೆ ಹೋಗಿ ಅಲ್ಲೊಂದು ಮನೆಯಲ್ಲಿ ಉಳಿದರು. ತಮ್ಮ ಮನೆಯೇ ತಮ್ಮದಾಗಿರಲಿಲ್ಲ ಅವರಿಗೆ.
ಬೆಳಿಗ್ಗೆ ಎದ್ದವರೇ ಆರು ಗಂಟೆಗೆ, ಅದು ಹೇಗೆ ಬಸ್ ಸ್ಟಾಂಡಿಗೆ ಬಂದರೋ, ಅದ್ಯಾವ ಬಸ್ ಏರಿದರೋ, ಚಿಕ್ಕಮಗಳೂರಿನಿಂದ ಬಾಣಾವರಕ್ಕೆ ಹೋಗುವ ಆ ಬಸ್ಸಿನಲ್ಲಿ ಹತ್ತು ರೂಪಾಯಿ ನೀಡಿ 'ಸಖರಾಯಪಟ್ಟಣ' ಎಂದಿದ್ದರು. ಏನನ್ನೂ ಚಿಂತಿಸಲಾಗದ, ತಾವೇನು ಮಾಡುತ್ತಿದ್ದೇವೆಂದು ಅರಿಯಲಾಗದ ಸ್ಥಿತಿಗವರು ತಲುಪಿದ್ದರು. ಆದರೂ ಅದೆಂತೋ ಗುರುನಾಥರ ಊರಿಗೆ ಬಂದಿದ್ದರ. ಕೈಯಲ್ಲೊಂದಿಷ್ಟು ಒಣ ದ್ರಾಕ್ಷಿ ಹಿಡಿದು ಅವರು ಬಂದು ನಿಂತಿದ್ದು ಮತ್ತೆಲ್ಲೂ ಅಲ್ಲ ಗುರುನಾಥರ ಮನೆಯ ಮುಂದೆ.
ಸಾಮಾನ್ಯವಾಗಿ ಪಕ್ಷವಿದ್ದಾಗ ಗುರುನಾಥರು ಮನೆಯಿಂದ ಹೊರ ಬರುವುದಿಲ್ಲ. ಅಂದು ಗುರುನಾಥರ ಮನೆಯಲ್ಲಿ ಪಕ್ಷವಿತ್ತು. ಮನೆ ಬಾಗಿಲಿಗೆ ಬಂದ ಇವರಿಗೆ ದರ್ಶನವೂ ಸಿಕ್ಕಿತು. ಹತ್ತು ರೂಪಾಯಿ, ಒಂದು ತೆಂಗಿನಕಾಯಿ, ಹಾಗೂ ಒಂದು ಟವೆಲು ನೀಡಿದ ಗುರುನಾಥರು "ನೀವು ಈಗಲೇ ನಿಮ್ಮ ಮನೆಗೆ ಹೊರಡಿ. ಜನ ನಿಮಗಾಗಿ ಕಾಯುತ್ತಿದ್ದಾರೆ. ಜನರನ್ನು ಕಾಯಿಸಬಾರದು" ಎಂದರು.
'ತಾನು ಯಾವ ದೊಡ್ಡ ಮನುಷ್ಯ. ನನಗಾಗಿ ಕಾಯುವವರು ಇರುತ್ತಾರಾ?" ಎಂದು ಮನದಲ್ಲೇ ಚಿಂತಿಸಿದರು. ಗುರುನಾಥರನ್ನು ಯಾಕೆ? ಏನು? ಎಂದು ಪ್ರಶ್ನೆ ಕೇಳುವ ಸಾಮರ್ಥ್ಯವಿಲ್ಲದ ಅವರು ನೇರವಾಗಿ ಕಡೂರಿಗೆ ಬಂದು ರೈಲು ಹಿಡಿದು ಮನೆ ಸೇರಿದ್ದರು.
ಮನೆಗೆ ಬರುವಷ್ಟರಲ್ಲೇ ಸುಸ್ತಾಗಿ, ಒಂದು ತುತ್ತು ತಿಂದು ಮಲಗಿದರೆ ಸಾಕೆಂದಿದ್ದ ಇವರಿಗೆ ದಂಪತಿಗಳಿಬ್ಬರು ಕಾಡು ಕುಳಿತಿರುವುದು ಕಂಡು ಬಂತು.
'ಸ್ವಾಮಿ ನಮ್ಮ ಅಳಿಯ ಎಪ್ಪತ್ತು ಲಕ್ಷದ ಸೂಟ್ ಕೇಸ್ ತೆಗೆದುಕೊಂಡು ಮಗಳನ್ನು ಬಿಟ್ಟು ಇಲ್ಲಿಯೂ ಹೋಗಿದ್ದಾರೆ. ತುಂಬಾ ಆತಂಕದಲ್ಲಿದ್ದೇವೆ. ಏನಾದರೂ ಹೇಳಿ' ಎಂದು ದುಂಬಾಲು ಬಿದ್ದರು.
'ನನಗೇನೂ ಬರಲ್ಲಮ್ಮ, ನಿವಿತ್ಯ, ಜಾತಕ, ಭವಿಷ್ಯ ನಾನು ಹೇಳೊಲ್ಲ, ಬೇರೆಲ್ಲಾದರೂ ಹೋಗಿ' ಎಂದು ಇವರೆಂದರೂ ಅವರು ಕದಲಲಿಲ್ಲ. ಏನನಿಸಿತೋ, ಯಾವ ಸ್ಫುರಣೆಯಾಯಿತೋ 'ಮನೆಗೆ ಹೋಗಿ ಸಧ್ಯದಲ್ಲೇ ಈ ಸಂಬಂಧ ಒಳ್ಳೆಯ ವಿಚಾರ ತಿಳಿಯುತ್ತದೆ' ಎಂದರು. ಇದು ಗುರುನಾಥರ ಅಂತಃ ಪ್ರೇರಣೆಯೇ ಎಂಬುದರ ಭಾವವಾಗಿತ್ತು.
ಊಟ ಮಾಡಿ ಮಲಗಬೇಕು, ನಿನ್ನೆ ಹಾಗೂ ಈ ದಿನದ ಪ್ರಯಾಣದ ಆಯಾಸ, ಅಷ್ಟರಲ್ಲಿ ಆ ದಂಪತಿಗಳು ಮತ್ತೆ ಬಂದಿದ್ದರು. ಕೈಯಲ್ಲಿ ಒಂದು ತಟ್ಟೆ, ಅದರಲ್ಲಿ ಹೂವು ಹಣ್ಣು ಹಂಪಲು, ಕಾಯಿ, ನೂರೈವತ್ತು ರೂಪಾಯಿಗಳಿತ್ತು. 'ಸ್ವಾಮಿ ನೀವು ಹೇಳಿದಂತೆಯೇ ಮನೆಗೆ ಹೋಗುವುದರಲ್ಲಿ ನಮ್ಮಳಿಯಂದಿರು ಬಂದಿದ್ದರು'. 'ನನಗೆ ಗೊತ್ತಾಗದೇ ಈ ಸೂಟ್ ಕೇಸ್ ತೆಗೆದುಕೊಂಡು ಹೋಗಿದ್ದೆ. ಅಲ್ಲಿಗೆ ಹೋದ ಮೇಲೆ ಗೊತ್ತಾಗಿ ವಾಪಸ್ಸು ಬಂದೆ' ಎಂದರು. ನಿಮ್ಮ ಮಾತು ಸತ್ಯವಾಯಿತು. ಇದೆಲ್ಲಾ ತಗೊಳ್ಳಿ'.
'ಹೂವು ಹಣ್ಣು ಕಾಯಿ ಇಡಿ. ದುಡ್ಡು ಮಾತ್ರಾ ಬೇಡ' ಎಂದರೂ ಬಂದವರು ಕೇಳಲಿಲ್ಲ. ಮನೆಯೊಡತಿಯೂ 'ಇರಲಿ ಬಿಡಿ. ಮಗುವಿನ ಹಾಲಿಗಾಗುತ್ತದೆ' ಎಂದಾಗ ತೆಗೆದುಕೊಳ್ಳಬೇಕಾಯಿತು. ನನ್ನ ಪರಿಸ್ಥಿತಿಯೂ ಆಗ ಹಾಗೆಯೇ ಇತ್ತು.
ಮಾರನೆಯ ದಿನ ಮಲಗಿದ್ದೆ. ಬೆಳಗಿನ ಐದು ಘಂಟೆ ಇರಬಹುದು. "ಅಯ್ಯಾ ಎಂದರು. ಏನಯ್ಯಾ ನಾ ಒಂದು ಮಾತು ಹೇಳ್ತೀನಿ ನಡೆಸ್ತೀಯಾ..... ಆ ನೂರೈವತ್ತು ತಗೊಂಡ್ಯಾಲ್ಲಾ ನೂರರಲ್ಲಿ ಇಪ್ಪತ್ತೈದು ಮಾತ್ರ ನಿನಗಿಟ್ಟುಕೋ... ಉಳಿದ ಎಪ್ಪತ್ತೈದನ್ನು ಬಂದವರ ಸೇವೆಗೆ ಬಳಸು" ಗಾಭರಿಯಿಂದ ಇವರು ಎದ್ದಿದ್ದರು. ಗುರುನಾಥರ ಕೃಪೆಯ ಎಚ್ಚರಿಕೆಯ ವಾಣಿ ಇದಾಗಿತ್ತು.
ಇಂದು ಅವರ ಎಲ್ಲ ಕಷ್ಟದ ದಿನಗಳು ಗುರುನಾಥರ ಕೃಪೆಯಿಂದ ಕಳೆದಿವೆ. ನಿರಂತರ ಗುರುನಾಥರ ಸ್ಮರಣೆ, ಇತರರಿಗೆ ಗುರುನಾಥರು ನುಡಿಸಿದ ಮಾತು ತಿಳಿಸುತ್ತಾರೆ. ಮನೆಗೆ ಬಂದವರಿಗೆಲ್ಲಾ 'ಗುರುಸ್ವರೂಪ' ರೆಂದು ಭಾವಿಸಿ ಏನಾದರೂ ಕೊಡದೇ ಕಳಿಸುವುದಿಲ್ಲ. ನಿತ್ಯವೆರಡು ಹೊತ್ತು ಸಂಧ್ಯೆ, ಗುರುನಾಥರಿಗೆ ಆರತಿ ಇದರ ಕಾಯಕ - ಬೇರಾವ ಲೌಕಿಕ ಕೆಲಸಕ್ಕಿಳಿಯದ ಇವರ ಸಂಸಾರ ನೌಕೆಯನ್ನು ಗುರುನಾಥರು ಸಾಗಿಸುತ್ತಿದ್ದಾರೆ. ಪ್ರಪಂಚವನ್ನೇ ಪಾಲಿಸುವ ಆತನಿಗೆ ಅವರನ್ನು ನಂಬಿದ ಕುಟುಂಬ ಎಂದೂ ಹೊರೆಯಾಗಿಲ್ಲ.
ಮಧ್ಯರಾತ್ರಿಯಲ್ಲೂ ಮೂವತ್ತು ಪಡೆದ ಆಟೋದವನಾರು?
ಗುರು ಬಂಧುಗಳೊಬ್ಬರನ್ನು ಅವರ ಬಂಧುಗಳು, ಶೃಂಗೇರಿಯಲ್ಲಿ ನಡೆಯುತ್ತಿದ್ದ ಉಪನಯನಕ್ಕೆ ಕರೆದೊಯ್ದರಂತೆ. ವಾಪಸ್ಸು ಬರುವಾಗ ಮೆಜೆಸ್ಟಿಕ್ ನಲ್ಲಿ ಇಳಿಸಿ, ತಮ್ಮ ತಂದೆ ತಾಯಿಗಳನ್ನು ಮಾತ್ರ ಕಾರಿನಲ್ಲಿ ಕರೆದೊಯ್ದರು. ರಾತ್ರಿಯ ಒಂದೂವರೆ ಸಮಯ. ಗಂಡ ಹೆಂಡತಿ ಒಂದು ಸಣ್ಣ ಮಗು - ಕೈಯಲ್ಲಿ ಗಂಟು ಮೂಟೆ. 'ಮುಂದೇನು?' ಅವರ ಹೆಂಡತಿಯ ಪ್ರಶ್ನೆಗೆ ಗಂಡನ ಉತ್ತರ 'ಗುರುನಾಥರೇ ಗತಿ' ಎಂದರು.
'ನೀನು ಮಗುವನ್ನು ಎತ್ತಿಕೋ. ನಾನು ಗಂಟು ಮೂಟೆ ಹೊರುತ್ತೇನೆ. ಈ ಸರಿ ರಾತ್ರಿಯಲ್ಲಿ ಶ್ರೀನಿವಾಸ ನಗರಕ್ಕೆ ಆಟೋ ಹಿಡಿದರೆ ಎಷ್ಟು ಕೇಳಿಯಾರು? ಕೊಡಲು ನಮ್ಮಲ್ಲಿ ಹಣ ಎಲ್ಲಿದೆ' ಎಂದರು ಗುರುನಾಥರ ಭಕ್ತರು.
'ಬೆಂಗಳೂರಿಗೆ ಕಳಿಸಿ, ನಾನು ಹೇಳುವವರಿಗೆ ನೀನು ನಿನ್ನ ಊರಿಗೆ ಹೋಗಬೇಡ' ವೆಂಡಿದ್ದ ಗುರುನಾಥರು, ತಮ್ಮ ಶಿಷ್ಯರಿಗೆ ಬಂಧುವೆಂದರೆ ಯಾರು, ಪ್ರಪಂಚ ಹೇಗಿದೆ ಎಂಬುದರ ಅರಿವು ಮಾಡಿಕೊಳ್ಳಲೆಂದೇ ಬೆಂಗಳೂರಿಗೆ ಡೆಪ್ಯೂಟ್ ಮಾಡಿದ್ದಂತಿತ್ತಂತೆ.... ಆದರೂ ನನ್ನ ಬೆನ್ನ ಹಿಂದೆ ಗುರುನಾಥರು ಇದ್ದಾರೆಂಬ ಭರವಸೆ ಅವರಿಗಿತ್ತು.
ಆ ಸರಿ ರಾತ್ರಿಯಲ್ಲಿ ಹೆಚ್ಚು ದೂರ ಸಾಗಲಾರದೇ ನಿಂತಾಗ, ಇವರ ಬಳಿ ಒಂದು ಆಟೋ ಬಂದು ನಿಂತಿತು. ಇವರು 'ಮೀಟರ್ ಹಾಕಬೇಕು ಶ್ರೀನಿವಾಸ ನಗರಕ್ಕೆ' ಎಂದಾಗ, 'ಬರ್ರೀ ಸ್ವಾಮಿ ನಾನು ಆ ಕಡೆನೇ ಹೋಗ್ತಾ ಇದ್ದೀನಿ. ಏನೋ ಮಗಾ ಇದೆ ಅಂತ ಬಂದೆ - ನಾನೇನು ಮೋಸ ಮಾಡುವವನಲ್ಲ. ನನಗೂ ಮಕ್ಕಳು ಮರಿ ಇವೆ' ಎಂದವನೇ ಶ್ರೀನಿವಾಸ ನಗರದ ಕಡೆಗೆ ಆಟೋ ಓಡಿಸಿದ.
ಆಟೋದಲ್ಲಿ ಕುಳಿತವರು ಹೇಳುವ ಮೊದಲೇ ಮನೆಯ ಬಳಿ ಸರಿಯಾಗಿ ರಿಕ್ಷಾ ನಿಲ್ಲಿಸಿ, ಸಾಮಾನುಗಳನ್ನು ಒಳಗಿಟ್ಟು ಹೊರಡಲನುವಾದ. ಆಟೋದವನನ್ನು 'ತಡಿಯಪ್ಪಾ ಎಷ್ಟಾಯ್ತು.. ದುಡ್ಡು ತೆಗೆದುಕೊಂಡು ಹೋಗು' ಎಂದಾಗ ನಿಮ್ಮ ದುಡ್ಡಿಗಾಗಿ ನಾನು ಬಂದವನಲ್ಲಾ. ಈ ಮಗುಗಾಗಿ ಬಂದೆ' ಎಂದು ಕೇವಲ ಮೂವತ್ತು ರೂಪಾಯಿಗಳನ್ನು ಮಾತ್ರ ತೆಗೆದುಕೊಂಡು ಚಿಲ್ಲರೆ ನೀಡಿ ಹೊರಟೇ ಬಿಟ್ಟ. ನೂರು ರೂಪಾಯಿಗಿಂತ ಜಾಸ್ತಿ ಕೇಳಿದ್ದರೆ ಅವರಿಗೆ ಕೊಡಲೂ ದುಡ್ಡಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಆಟೋ ಯಾವ ಕಡೆ ಹೋಯಿತೋ ತಿಳಿಯಲಿಲ್ಲ. ಆ ಸಣ್ಣ ಮಗುವಿನ ಮೇಲೆ ಗುರುನಾಥರ ಕರುಣೆ ಇತ್ತು. ಮಗುವಿನಿಂದ ತಂದೆ ತಾಯಿಗಳಿಗೂ ಎಲ್ಲ ಸಿಕ್ಕಿತ್ತು.
ಶೃಂಗೇರಿಯಿಂದ ಹೊರಡುವಾಗ ಸಖರಾಯಪಟ್ಟಣದಿಂದ ಪ್ರಸಾದ ಬಂದಿದೆಯಂತೆ ಎಂದಾಗ, ಅವರ ಮಗಳು ಹೋಗಿ ಎರಡು ದೊನ್ನೆ ಬಿಸಿಬೇಳೆಬಾತ್ ಹಾಗೂ ಮೈಸೂರು ಪಾಕನ್ನು ತಂದಿದ್ದಳು. ಅದನ್ನೇ ಅವರ ತಾಯಿ ಕಟ್ಟಿಟ್ಟುಕೊಂಡಿದ್ದರಂತೆ. ಮಧ್ಯಾನ್ಹದಿಂದ ಉಪವಾಸವಿದ್ದ ಇವರಿಗೆ ಆ ಪ್ರಸಾದವೇ ಎಲ್ಲವಾಗಿತ್ತು. ಉಪನಯನಕ್ಕೆ ಕರೆದುಕೊಂಡು ಹೋದವರು ಬೆಂಗಳೂರಿಗೆ ತಂದು ಬಿಟ್ಟು ಕೈ ತೊಳೆದುಕೊಂಡಿದ್ದರು.
ಗುರುನಾಥರೇ ಆಟೋದವರಾಗಿ ಬಂದು ಮನೆ ಮುಟ್ಟಿಸಿದ್ದಲ್ಲದೇ, ಹೊಟ್ಟೆಗೂ ದಾರಿ ಮಾಡಿದ್ದರು. ನಿಜವಾಗಿಯೂ ಬಂಧುಗಳೆಂದರೆ ಗುರುನಾಥರು ಹಾಗೂ ಅವರ ಬಂಧುಗಳೇ ಇವರ ಬಂಧುಗಳು... ಕಷ್ಟವಾದಾಗ ಒಮ್ಮೆ ಸ್ಮರಿಸಿದ ಮಾತ್ರಕ್ಕೆ ಯಾವುದೋ ರೂಪದಲ್ಲಿ ಬಂದು ಸಹಕರಿಸುವ ಗುರುನಾಥರ ದಿವ್ಯ ಲೀಲೆಯನ್ನವರು ಇಂದೂ ಕೂಡಾ ಕೊಂಡಾಡುತ್ತಾರೆ.
ಎಂತೋ ಕರೆಸಿಕೊಂಡು ಸಲಹುತ್ತಾರೆ
ನಮ್ಮ ಮದುವೆಯಾಯಿತು. ಎರಡು ವರ್ಷಗಳಾದವು. ಮಕ್ಕಳಿಲ್ಲ ಮರಿ ಇಲ್ಲ. ಒಳ್ಳೆಯ ಕುಟುಂಬದಿಂದ ಬಂದವರು ನಾವು. ದುಡಿಯಲು ಹೋದರೆ ಯಾವುದೂ ಕೈಗೆ ಹತ್ತುತ್ತಿರಲಿಲ್ಲ. ಅನೇಕ ಬಂಧು ಬಳಗವಿತ್ತು. ಅಣ್ಣ ತಮ್ಮಂದಿರು ಇದ್ದಾರೆ. ದುಡಿಯದವರನ್ನು ಯಾರು ಆದರಿಸುತ್ತಾರೆ. ಹಿರಿಯರ ವೈದಿಕ ಮಾಡಲು ಹಣವಿಲ್ಲ. "ನೀವೆಲ್ಲಾ ಇಲ್ಲಿ ಹೀಗೆ ತಿಥಿಗೆಂದು ಬಂದು ಕುಳಿತುಬಿಟ್ಟರೆ ನಮ್ಮ ತಿಥಿಯಾಗಿ ಬಿಡುತ್ತದೆ" ಎಂಬ ಮಾತನ್ನು ಕೇಳಿದ್ದಾಯಿತು - ಯಾವ ದಾರಿಯೂ ಕಾಣುತ್ತಿಲ್ಲ. ಬಂಧು - ಮಿತ್ರರುಗಳು ಎಷ್ಟು ದಿನ ಸಾಕುತ್ತಾರೆ. ಅದೆಷ್ಟು ದಿನ ಇನ್ನೊಬ್ಬರ ಹಂಗಿನಲ್ಲಿ ಬದುಕಲು ಸಾಧ್ಯ - ಹೀಗಿರುವಾಗ ಯಾರೋ ಪುಣ್ಯಾತ್ಮರು 'ಸಖರಾಯಪಟ್ಟಣದ ಗುರುನಾಥರನ್ನು ನೋಡಿ, ನಿಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗಬಹುದು' ಎಂದರು.... ನಾನು 'ಒಹೋ ಅವರು ನನಗೆ ಗೊತ್ತು ನೋಡಿದ್ದೀನಿ. ನಮ್ಮ ಮನೆಯ ಮುಂದೆ ಕುಳಿತಿರುತ್ತಿದ್ದರು. ನಾನೆಲ್ಲೂ ಬರೋಲ್ಲ. ನೀನು ಏನಾದರೂ ಮಾಡಿಕೊ' ಹೆಂಡತಿಯ ಕರೆಗೆ ಬೇಜವಾಬ್ದಾರಿಯ ಮಾತುಗಳು ಬಂದಿದ್ದವು ನನ್ನಿಂದ.
ಗುರು ಬಂಧುಗಳ ಮೇಲಿನ ಮಾತುಗಳೆಲ್ಲಾ ನೊಂದು ಬೆಂದ ದಿಕ್ಕು ಕಾಣದಾದಂತಹ ಕಷ್ಟಜೀವಿಯ ಮಾತುಗಳು. ಕಾಲಕೂಡಿ ಬಂದಾಗ ಯಾವುದು ಏನೋ ಆಗಿ ಬಿಡುತ್ತದೆ. ಅಪಾರ ಪರಿವರ್ತನೆ ಸಾಧ್ಯವಾಗುತ್ತದೆ. ಅದಕ್ಕೆ ಕಾಲ ಬರಬೇಕು. ಕರ್ಮ ಕಳೆಯಬೇಕು. ಗುರುವಿನ ಆಶೀರ್ವಾದವೂ ಬೇಕು.
'ಬರುವುದಿಲ್ಲವೆಂದರೂ ಹೆಂಡತಿಯ ಒತ್ತಾಯದ ಮೇಲೆ ನಾನು ಸಖರಾಯಪಟ್ಟಣಕ್ಕೆ ಹೋದೆ. ಗುರುನಾಥರ ಮನೆಯ ಮುಂದೆ ನಿಂತೆವು. ಎದುರಿಗೆ ಅಂಗಳದಲ್ಲಿ ಅಡಿಕೆ ಆರಿಸುತ್ತಿದ್ದರು - ಗುರುನಾಥರು. ಅವರನ್ನು ಒಮ್ಮೆ ನೋಡುತ್ತಿದ್ದಂತೆ ನನ್ನ ಭಾವನೆಗಳೆಲ್ಲಾ ಬದಲಾಗಿ ಹೋಯ್ತು. ಆಗ್ಗೂ ಈಗ್ಗೂ ಅಜಗಜಾಂತರ ವ್ಯತ್ಯಾಸ. ಒಬ್ಬ ಮೇಧಾವಿ ತಪಸ್ವಿಯನ್ನು ಕಂಡಾಯ್ತು'. ಹೀಗೆ ತಮ್ಮ ಮೊದಲ ಭೇಟಿಯಲ್ಲಿ ಗುರುನಾಥರೊಂದಿಗಾದ ರೋಚಕ ವಿಷಯವನ್ನವರು ಮುಂದುವರೆಸಿದರು.
ವೆಂಕಟಾಚಲನೂ ಇಲ್ಲ ಸಂಕಟಾಚಲನೂ ಇಲ್ಲ
'ನಾವು ವೆಂಕಟಾಚಲರವರನ್ನು ನೋಡಲು ಬಂದಿದ್ದೀವಿ. ಬಹಳ ತೊಂದರೆಯಲ್ಲಿದ್ದೀವಿ. ಅವರನ್ನು ಕಾಣಬೇಕಿತ್ತು' ಎಂದು ನಾವು ವಿನಂತಿಸಿಕೊಂಡರೆ - ಗುರುನಾಥರಿಗೇಕೋ ಕರುಣೆ ಬರಲಿಲ್ಲ. ಬಹುಶಃ ಇನ್ನೂ ನನ್ನ ಕರ್ಮಾ ಉಳಿದಿತ್ತೇನೋ.. 'ಇಲ್ಲ ಇಲ್ಲ, ಅಂತಹವರು ಯಾರೂ ಇಲ್ಲ. ನಡೀರಿ... ನಡೀರಿ... ಇಲ್ಲಿ ಯಾವ ವೆಂಕಟಾಚಲನೂ ಇಲ್ಲ ಸಂಕಟಾಚಲನೂ ಇಲ್ಲ ನಡೀರಿ, ನಡೀರಿ...' ಗುರುನಾಥರು ಗದರುತ್ತಿದ್ದರು. 'ಆದರೂ ಹೆದರದ ನಾನು ನಮ್ಮ ಕುಲ ಗೋತ್ರಗಳನ್ನೆಲ್ಲಾ ಹೇಳಿಕೊಂಡೆ'. ಏನಂತೆ ನಡೀರಿ.... ನಡೀರಿ ಒಂದೇ ಉತ್ತರ ಬರುತ್ತಿತ್ತು ಗುರುನಾಥರಿಂದ. 'ನೀವು ಯಾರಾದರೆ ನನಗೇನ್ರೀ. ಅಂಬಳೆ ಆದ್ರೇನು, ಕಳಸಾಪುರವಾದರೆ ನನಗೇನಂತೆ' ಅದೇ ಮಾತು.
'ಅಂಬಳೆ ರಾಮಕೃಷ್ಣ ಶಾಸ್ತ್ರಿಗಳು... ದೊಡ್ಡಮನೆ ಶಾಸ್ತ್ರಿಗಳು ಅಂತ ನಮ್ಮ ಹಿರಿಯರ ಹೆಸರು ತೆಗೆದಾಗ' ಅವರ ಪುಣ್ಯದ ಫಲದಿಂದ ನನಗೆ ಗುರುಮನೆಯೊಳಗೆ ಹೋಗುವ ಅವಕಾಶ ದೊರೆಯಿತು. 'ಓಹೋ... ಅವರ ಕಡೆಯವರೋ ನೀವು ಮೊದಲೇ ಹೇಳಬಾರದೇನ್ರಿ ಒಳಗೆ ಹೋಗಿ ಕುಳಿತುಕೊಳ್ಳಿ' ಹಿರಿಯರ ಪುಣ್ಯ ಮಕ್ಕಳನ್ನು ಕಾಯುತ್ತದಂತೆ.
ಯಾರು ಯಾರೋ ಬರುತ್ತಿದ್ದರು... ಅವರಿಗೆಲ್ಲಾ ಏನೇನೋ ಪರಿಹಾರಗಳನ್ನು ಗುರುನಾಥರು ಸೂಚಿಸುತ್ತಿದ್ದರು. ಎಷ್ಟು ಹೊತ್ತು ಕಳೆದರೂ ನಮ್ಮ ಕಡೆ ಗಮನ ಹರಿಸಲೇ ಇಲ್ಲ... ಕಾಫಿ ತಿಂಡಿಗಳು ಬರುತ್ತಿದ್ದವು. 'ಅಯ್ಯಾ ಕಾಫಿ ಕೊಡು ಇವರಿಗೆ' ಎಂದು ಮತ್ಯಾರಿಗೋ ಹೇಳಿದರು. ಆದರೆ ನಾವು ಯಾಕೆ ಬಂದಿದ್ದೀವಿ ಅಂತ ಕೇಳಲಿಲ್ಲ. ನಮ್ಮ ಕಡೆ ಗಮನ ಹರಿಸಲೇ ಇಲ್ಲ. ಎದ್ದು ಹೋಗಿಬಿಡೋಣವೆಂದು ಮನಸ್ಸಾದರೂ ನನ್ನ ಹೆಂಡತಿ ಕೂರಿಸಿ ಬಿಡುತ್ತಿದ್ದಳು. ರಾತ್ರಿ ಹನ್ನೊಂದು ಗಂಟೆಯಾಯಿತು. ಹಾಸಿಗೆಯನ್ನೂ ಹಾಸಿದ್ದರು. ಆದರೆ ಅವರು ನಮ್ಮ ಕಡೆ ನೋಡುತ್ತಿಲ್ಲ. ನಾವೂ ಜಾಗ ಬಿಟ್ಟು ಕದಲಲಿಲ್ಲ. ಇಷ್ಟರಲ್ಲಿ ನನ್ನ ಹೆಂಡತಿ ತನ್ನ ಕೊರಗನ್ನು ಹೇಳಿಕೊಂಡರೂ ಉಭ ಎನ್ನಲಿಲ್ಲ. ಶುಭ ಎನ್ನಲಿಲ್ಲ. ಕುಳಿತಿದ್ದಲ್ಲಿಗೆ ಊಟ ತಿಂಡಿಗಳೆಲ್ಲಾ ಬಂತು. ಆದರೆ ಪ್ರಮುಖವಾಗಿ ನಮಗೆ ಬೇಕಾದ್ದು ಸಿಕ್ಕಿರಲೇ ಇಲ್ಲ. ಹೆಂಡತಿಯ ಒತ್ತಾಯದ ಮೇಲೆ ಬಂದ ನನಗೆ ಗುರುನಾಥರ ದರ್ಶನವಂತೂ ಸಮಾಧಾನ ತಂದಿತ್ತು. ಹಠ ಬಿಡದೇ ಹಾಸಿಗೆ ಬಳಿಯೇ ಕುಳಿತಿದ್ದೆವು. ಗುರುವಿನ ಪರೀಕ್ಷೆ ಸಾಮಾನ್ಯವಾದುದಲ್ಲ. ಗುರು ಕರುಣೆ ಸಿಕ್ಕರೆ ಇನ್ಯಾವ ಭಯವಿಲ್ಲ.
ಒಂದು ತಿಂಗಳು ಮೂರು ದಿನ ಕಾಯಿರಿ
ಗುರುನಾಥರೀಗ ನಮ್ಮ ಕಡೆ ತಿರುಗಿದರು. ನಮ್ಮ ಹಠ, ನಮ್ಮ ಆರ್ತತೆಗೆ ಕರುಣಾಮಯಿ ಗುರು ಕರಗಿದರೇನೋ? ನನ್ನ ಹೆಂಡತಿ ' ಎರಡು ವರ್ಷವಾಯಿತು ನಮಗೆ ಮಕ್ಕಳಾಗಿಲ್ಲ'. ನಿಮ್ಮನ್ನ ನಂಬಿ ಬಂದಿದ್ದೇವೆ' ಎಂದು ಕೇಳಿಕೊಂಡಳು... 'ಇನ್ನು ಒಂದು ತಿಂಗಳು ಮೂರು ದಿವಸ ಕಾಯಿರಿ.... ಒಳ್ಳೆಯ ಸುದ್ಧಿ ಬರುತ್ತದೆ' ಈಗ ನೀವೆಲ್ಲಿಗೆ ಹೋಗುತ್ತೀರಿ' ಎಂದು ಪ್ರಶ್ನಿಸಿದರು. ಇಲ್ಲೇ ನಮ್ಮ ನೆಂಟರ ಮನೆ ಇದೆ ಎಂದೆವು'. 'ಆಯ್ತು ಎಂದರು'. 'ಹೊರಡಬಹುದೇ ನಾವು ' ಎಂದು ಸಾಂಪ್ರದಾಯಿಕವಾಗಿ ಕೇಳಿದಾಗ 'ನಾನೇನು ನಿಮಗೆ ಬರೋಕೆ ಹೇಳಿದ್ನಾ.. ನನ್ನ ಏನು ಕೇಳ್ತೀರಿ. ನೀವು ಬಂದಿರಿ. ನೀವು ಹೊರಟಿರಿ. ನಿಮ್ಮನ್ನು ಹೋಗೆಂದು ಹೇಳಲು ನಾನ್ಯಾರು' ಎಂದರು. ಅದೇ ಊರಿನಲ್ಲಿದ್ದ ನಮ್ಮ ನೆಂಟರ ಮನೆಗೆ ಹೋಗಿ ಉಳಿದೆವು.
ಮಾರನೆಯ ದಿನ ಮತ್ತೆ ನಮ್ಮ ನೆಂಟರ ಮನೆಯಿಂದ ಬಂದು ಗುರುನಾಥರ ದರ್ಶನ ಪಡೆದು ಶಿವಮೊಗ್ಗಕ್ಕೆ ಬಂದೆವು. ಗುರುಗಳು ಹೇಳಿದಂತೆ ಎಲ್ಲ ನಡೆಯುತ್ತೆಂಬ ನಂಬಿಕೆ ನನಗಿತ್ತು. ಯೋಗಿಗಳು ಹೇಳಿದ್ದಾರೆ. ಅವರು ಹೇಳಿದ ಮೇಲೆ ಮುಗಿಯಿತು ಎಮ್ ದೃಢಭಾವನೆಯಲ್ಲಿ ನಾನಿದ್ದೆ. ನಮ್ಮ ಬಂಧುಗಳು ಟೆಸ್ಟ್ ರಿಪೋರ್ಟ್ ತಂದು ಕನ್ಫರ್ಮ್ ಆಯಿತೆಂದು ತಿಳಿಸಿದರು. ಗುರುನಾಥರಿಗೆ ಈ ವಿಚಾರ ತಿಳಿಸಿದಾಗ 'ಮಗುವನ್ನು ಕರೆದುಕೊಂಡು ಬರಬೇಕಯ್ಯಾ' ಎಂದರು ಪ್ರೀತಿಯಿಂದ. ಅದುವರೆವಿಗೂ ಬಹುವಚನವನ್ನೇ ಬಳಸುತ್ತಿದ್ದ ಗುರುನಾಥರು ಏಕವಚನದಿಂದ ಮಾತನಾಡಿಸಿ ನನ್ನನ್ನ ಹತ್ತಿರಕ್ಕೆಳೆದುಕೊಂಡರೆಂಬ ಸಂತಸ ನನಗಾಯ್ತು.
ಪಾದಪೂಜೆ ಮಾಡಿದ ಗುರುನಾಥರು
ಎಲ್ಲರಲ್ಲಿ ಭಗವಂತನನ್ನು ಕಾಣುವ, 'ಅಭ್ಯಾಗತ ಸ್ವಯಂವಿಷ್ಣು ಅತಿಥಿ ದೇವೋಭವ' ಎಂಬುದನ್ನು ನಿರಂತರ ನಡೆಸಿಕೊಂಡು ಬಂದ ಗುರುಗಳು, ನನ್ನ ಮಗುವಿಗೆ ಐದು ತಿಂಗಳಿದ್ದಾಗ, ನನ್ನ ಭಾವ-ಮೈದುನ, ನಾದಿನಿ, ನಾನು ನನ್ನ ಹೆಂಡತಿ ಎಲ್ಲರೂ ಗುರುನಾಥರ ಮನೆಗೆ ತೆರಳಿದೆವು. ಅಂತಹ ದೊಡ್ಡ ಯೋಗಿಗಳು ನಮ್ಮನ್ನು ಕರೆದು ಕೂರಿಸಿ, ಪಾದಪೂಜೆ ಮಾಡಿಸಿ, ವಸ್ತ್ರಗಳ ಉಡುಗೊರೆ ನೀಡುತ್ತಿದ್ದಾಗ ಮುಜುಗರವಾದರೂ, ಅವರ ಪ್ರೀತಿ, ರೀತಿ ನಮಗೊಂದು ಪಾಠ ಕಲಿಸಿತ್ತು. ಎಲ್ಲರೊಂದಿಗೆ ನಾವು ಹೇಗೆ ವರ್ತಿಸಬೇಕು ? ಹೇಗೆ ವರ್ತಿಸುತ್ತಿದ್ದೇವೆ? ಎನ್ನುವುದನ್ನು ಚಿಂತಿಸಲು ಹೆಚ್ಚಿತು. ಇಂದು ನಾನು ಏನಾಗಿದೇನೋ ಅದೆಲ್ಲಾ ಆ ಗುರುನಾಥರು ತಿಳಿಸಿದ ಬೋಧೆಯಿಂದ, ಅವರ ಕರುಣೆ, ಆಶೀರ್ವಾದದಿಂದ.
ಊರಿಗೆ ಹೊರಟ ನನಗೆ ನನ್ನ ಜವಾಬ್ದಾರಿಯನ್ನು ತಿಳಿಸಿದರು. ಪ್ರೀತಿಯಿಂದ 'ದುಡ್ಡಿದೆಯೆನಯ್ಯ ಇಲ್ಲದಿದ್ದರೆ ಹೇಳು ಕೊಡುತ್ತೇನೆ' ಎಂದು ಕಳಿಸಿದರು. ಆದರೂ ನನಗೆ ಎಲ್ಲಿಯೂ ನಿಲ್ಲದಾದಾಗ - ಎಲ್ಲೆಡೆಯಿಂದ ನಕಾರಾತ್ಮಕ ಪ್ರಕ್ರಿಯೆಗಳು ಬಂದಾಗ ಮತ್ತೆ ಗುರುನಾಥರ ಬಳಿ ಬಂದೆ. ಅವರನ್ನೇ ಶರಣು ಹೋದೆ.
'ಹೋಗಯ್ಯ ನಿನಗೆ ವಾಕ್ ಸಿದ್ಧಿಯಾಗಿದೆ. - ನಾನಿನ್ನ ಜೊತೆಗಿರುತ್ತೇನೆಂದು' ನನಗಂದು ಭರವಸೆ ನೀಡಿ, ನನ್ನ ಬದುಕುವ ದಾರಿ ತೋರಿದರು.' ಅಂದೇ ನನ್ನ ಕಷ್ಟವೆಲ್ಲಾ ಕೊನೆಗೊಂಡಿತು. ಇಂದಿಗೂ ಅವರು ನನ್ನ ಜೊತೆಗಿದ್ದು, ಪ್ರೀತಿಯಿಂದ ಕೈ ಹಿಡಿದು ನಡೆಸುತ್ತಿದ್ದಾರೆ' ಎನ್ನುತ್ತಾ ಗುರುನಾಥರ ಲೀಲಯನ್ನು ವಿವರಿಸಿದರು - ಆ ಗುರುಬಂಧುಗಳು.
ಸುಂದರವಾದ, ನಮನ ಯೋಗ್ಯವಾದ ವಿಗ್ರಹ ಒಂದಾಗಿ ಕಗ್ಗಲ್ಲು, ಬದಲಾಗಲು, ಕಲಾವಿದನ ಹಲವು ಉಳಿ ಪೆಟ್ಟುಗಳನ್ನದು ಸಹಿಸಲೇಬೇಕು. ನಮ್ಮ ಗುರುನಾಥರ ಕಠಿಣಾತಿ ಕಠಿಣ ಪರೀಕ್ಷೆಗಳನ್ನು ಎದುರಿಸುವ ಕಗ್ಗಲ್ಲಾದ, ಈ ಗುರು ಬಂಧುಗಳಿಗೆ ಆದ ಅನುಭವ ಅನ್ಯತ್ರ ಅಲಭ್ಯ. ಇಂದೂ ಅವರೊಂದಿಗಿದ್ದು, ನಡೆಸುತ್ತಿರುವುದು ಎಲ್ಲರರಿತ ವಿಚಾರ. ಸಣ್ಣ ಮನೆಯಲ್ಲಿ ಸಾವಿರಾರು ಜನ ಸೇರುವುದು, ಮನೆಯ ಮುಂಭಾಗದ ಸಣ್ಣ ಜಾಗದಲ್ಲೇ ಕುಳಿತು, ಘಾನಾ ವಿದ್ವಾಂಸರುಗಳು ಸಂಗೀತ ಸೇವೆ ಮಾಡುವುದು (ಉಚಿತ), ಸಾವಿರಾರು ಜನರಿಗೆ ಅನ್ನದಾನ ಮಾಡುವುದು, ಇದೆಲ್ಲಾ ಗುರುನಾಥರ ಸಾನ್ನಿಧ್ಯ ಅಲ್ಲಿರುವುದರಿಂದ, ಅವರಲ್ಲಿರುವುದರಿಂದ ಅಲ್ಲವೇ, ಗುರುನಾಥರ ಜಯಂತಿಯ ವೈಭವವನ್ನಿಲ್ಲಿ ನೋಡಬೇಕು.
ಆಶ್ಚರ್ಯದ ಅಕ್ಷಯ ಪಾತ್ರೆ
ಒಮ್ಮೆ ಗುರುನಾಥರ ಮನೆಗೆ ಗುರುಬಂಧು ಒಬ್ಬರು ಬಂದರು. ಜೊತೆಗೆ ಅವರ ಮಗಳನ್ನು ಕರೆ ತಂದಿದ್ದರು. ವೃತ್ತಿಯಲ್ಲಿ ಅವರು ವಕೀಲರಾದರೂ ಗುರುನಾಥರಿಗೆ ಆಪ್ತರು. ತಮ್ಮ ಮಗಳ ಮದುವೆ ನಿಶ್ಚಯವಾದ ವಿಷಯ ತಿಳಿಸಿ, ನಾಲ್ಕು ಮಾವಿನ ಹಣ್ಣುಗಳನ್ನು ಗುರುನಾಥರಿಗೆ ಕೊಡಲು ಬಂದಾಗ 'ನನಗ್ಯಾಕೆ ಕೊಡ್ತೀರಿ. ಈಗ ಹಾಲು ಬರುತ್ತೆ.ಇದನ್ನು ಹೆಚ್ಚಿ ಹಾಕಿ, ಕಾಯಿ ತುರಿಯನ್ನೂ ಹಾಕಿ ಸಕ್ಕರೆ ಹಾಕಿ ಎಲ್ಲರಿಗೆ ಕೊಟ್ಟುಬಿಡಿ' ಎಂದರು.
ಒಂದೆರಡು ಸೇರು ಹಿಡಿಯುವ ಪಾತ್ರೆಯಲ್ಲಿ ಮಾವಿನ ಹಣ್ಣನ್ನು ಹೆಚ್ಚಿ ಹಾಕಿ ಸಕ್ಕರೆಯನ್ನು ಸೇರಿಸಿದರು. ಆಗ ತಾನೇ ಬಂದ ಹಾಲನ್ನು ಆ ಪಾತ್ರೆಗೆ ಎರಡು ಲೀಟರಿನಷ್ಟು ಹಾಕಿದರು. ಮದುವೆಯ ಹುಡುಗಿಗೆ ಕಾಯಿ ತುರಿಯಲು ಹೇಳಿಸಿ, ಎಲ್ಲವನ್ನೂ ಮಿಶ್ರಣ ಮಾಡಿಸಿದರು. ಒಂದು ಸಣ್ಣ ಪಾತ್ರೆಗೆ ಎಷ್ಟೆಲ್ಲಾ ತುಂಬುತ್ತಿದ್ದಾರೆ? ಅದು ಹೇಗೆ ಹಿಡಿಸಿಕೊಂಡಿದೆ ಎಂದು ಅಲ್ಲಿದ್ದ ಮತ್ತೊಬ್ಬ ಗುರು ಬಂಧುಗಳು ನೋಡುತ್ತಿದ್ದರಂತೆ. ಅವರೇ ನನಗಿದನ್ನು ಹೇಳಿದ್ದು.
ಗುರುನಾಥರಿಗೆ ಮೊದಲು ರಸಾಯನವನ್ನು ಕೊಡಲು ಬಂದಾಗ 'ನಿಮ್ಮ ತಂದೆತಾಯಿಗಳಿಗೆ ಮೊದಲು ಕೊಡು ಎಂದರು'. ನಂತರ ಅಲ್ಲಿದ್ದ ಎಲ್ಲ ಜನರಿಗೂ ಕೊಡಿಸಿದರು. ಲೋಟಕ್ಕೆ ಬಗ್ಗಿಸುತ್ತಾ ಕೊಡುತ್ತಾ ಹೋದಂತೆ ಅಕ್ಷಯವಾಗುತ್ತಿತ್ತು - ರಸಾಯನ. ಮತ್ತೆ ಆ ಹೆಣ್ಣುಮಗಳು ಗುರುನಾಥರಿಗೆ ರಸಾಯನ ಕೊಡಲು ಬಂದಾಗ 'ಇನ್ನೊಂದು ಸುತ್ತು ಎಲ್ಲರಿಗೂ ಕೊಟ್ಟು ಬಾರಮ್ಮ' ಎಂದರಂತೆ. ಮತ್ತೆ ಲೋಟಾಗಳಿಗೆ ಬಗ್ಗಿಸಿ, ರಸಾಯನವನ್ನು ಹಂಚುತ್ತಲೇ ಸಾಗಿದರು. ಕೊನೆಗೆ ಗುರುನಾಥರೂ ಸೇವಿಸಿದರು.
'ಅಷ್ಟು ಪುಟ್ಟ ತಪ್ಪಲೆಯಲ್ಲಿ, ಇಷ್ಟೊಂದು ಅದೆಲ್ಲಿ ಅಡಗಿ ಕುಳಿತಿತ್ತು' ಎಂದು ಪ್ರಶ್ನಿಸಿದಾಗ ಘಟನೆಯನ್ನು ನೋಡುತ್ತಿದ್ದ ಗುರು ಬಂಧುಗಳೆನ್ನುತ್ತಾರೆ: 'ಅದು ಅಕ್ಷಯ ಪಾತ್ರೆ' ಅದೇ ಒಂದು ಬ್ರಹ್ಮಾಂಡವಾದಂತಾಗಿತ್ತು. ಗುರುನಾಥರೆಂದರೆ ಯಾರು....... ಅವರೇ ಸಾಕ್ಷಾತ್ ಶಿವಸ್ವರೂಪರು' ಎಂದರಲ್ಲದೇ ಮತ್ತೊಂದು ತಾವು ಕೇಳಿದ ಘಟನೆಯನ್ನು ಹೀಗೆ ವಿವರಿಸತೊಡಗಿದರು. "ಗುರುನಾಥರು ಶೃಂಗೇರಿಗೆ ಹೋಗುತ್ತಿದ್ದಾಗ ಕಾರಿನ ಟೈರೊಂದು ಕಳಚಿಕೊಂಡು ಮುಂದೆ ಹೋಗುತ್ತಿತ್ತಂತೆ. ನೋಡಿದವರು ಗಾಭರಿಯಾಗಿ ತಿಳಿಸಿದಾಗ, ಕಾರು ನಿಲ್ಲಿಸಿದರೆ ನಾಲ್ಕು ಚಕ್ರದ ಕಾರು, ಮೂರ್ ಚಕ್ರದ ಮೇಲೆ ನಿಂತಿತ್ತಂತೆ. ಕೊನೆಗೆ ನಾಲ್ಕನೆಯದನ್ನು ತಂದು ಜೋಡಿಸಿ, ಮುಂದೆ ಸಾಗಿದರಂತೆ. ಗುರುನಾಥರ ಸಾಮರ್ಥ್ಯಗಳಿಗೆ, ಲೀಲೆಗಳಿಗೆ ಕೊನೆಯಿಲ್ಲ" ಎಂದರವರು.
ಭಾಸ್ಕರನು ಮಾಡಿದ ನಾಲ್ಕು ಜನರಿಗೆ ಸಾಲುವ ಅಡಿಗೆಯನ್ನು ಸಾವಿರ ಜನರಿಗೆ ಬಡಿಸಿದ ಕಥೆ, ಗುರುಚರಿತ್ರೆಯಲ್ಲಿ ಬರುತ್ತದೆ. ಗುರುನಾಥರೂ ಆ ದಟ್ಟ ಸ್ವರೂಪರೇ. ಅನಂತವ್ರತದ ಮನೆಯೊಂದಕ್ಕೆ ಅನೇಕ ಗುರುಬಂಧುಗಳನ್ನೂ ಆ ಬೀದಿಯ ಇತರ ಭಕ್ತರನ್ನೂ ಕರೆದು, ಮಾಡಿದ ಅಡುಗೆಯಲ್ಲೇ ಎಲ್ಲರಿಗೂ ತೃಪ್ತಿಯಾಗುವಷ್ಟು ಬಡಿಸಿಸಿದ ಗುರುನಾಥರು - ಇಂತಹ ಅದೆಷ್ಟೋ ಉದಾಹರಣೆಗಳಿಂದ ತಾವು ಯಾರೆಂದು ತೋರಿಸಿದ್ದಾರೆ. ತಮ್ಮ ಪರಮಾಪ್ತ ಗುರು ಬಂಧುವೊಬ್ಬರು, ತಮ್ಮ ಬಳಿ ಬಂದಾಗ ಅವರನ್ನು ತಾವು ನಿತ್ಯ ಕೂರುವ ಅರಳಿಕಟ್ಟೆಯ ಬಳಿ ಕರೆದುಕೊಂಡು ಹೋದರಂತೆ. 'ಬಾರಯ್ಯಾ ಇಲ್ಲಿ ಕುಳಿತುಕೊಳ್ಳಯ್ಯಾ' ಎಂದರು. ಗುರು ಬಂಧುಗಳು ನಿಂತೇ ಇದ್ದರು. 'ನೋಡಯ್ಯಾ ನಾನು ಯಾರು ಹೇಳಯ್ಯಾ' ಎಂದು ವಿಚಿತ್ರ ಪ್ರಶ್ನೆ ಮಾಡಿದರು. ಗುರು ಬಂಧುಗಳು ಏನು ಹೇಳಲು ಸಾಧ್ಯ. ಕೊನೆಗೊಮ್ಮೆ ನೋಡಿದಾಗ ಕಂಡದ್ದು ಶ್ರೀ ದತ್ತಾತ್ರೇಯರ ರೂಪ. ಗುರುಕರುಣೆಗೆ ಮೂಕರಾದ ಅವರು 'ಗುರುನಾಥ, ನಿಮ್ಮನ್ನು ಮುಟ್ಟುವ, ಸೇವೆ ಮಾಡುವ ಅವಕಾಶ ನೀಡಿ ನನ್ನನ್ನು ಉದ್ಧಾರ ಮಾಡಿದಿರಿ. ನೀವೇ ಸಾಕ್ಷಾತ್ ದತ್ತ ಸ್ವರೂಪರು. ನಿಮ್ಮ ಕರುಣೆಗೆ ನಾನು ಚಿರಋಣಿ' ಎಂದು ನಮಿಸಿದರಂತೆ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http:// srivenkatachalaavadhoota. blogspot.in/
No comments:
Post a Comment