ಒಟ್ಟು ನೋಟಗಳು

Monday, November 21, 2016

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 48


ಅನುಗ್ರಹ ದುರುಪಯೋಗ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಗುರುನಾಥರು ಅನುಗ್ರಹಿಸುವುದರಲ್ಲಿ ಹಾಗೂ ನಿಗ್ರಹಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು. ಗುರುನಾಥರ ಬಂಧುವೊಬ್ಬರು ನೆರೆ ಜಿಲ್ಲೆಯ ಕುಟುಂಬವೊಂದರೊಂದಿಗೆ ಬಾಂಧವ್ಯ ಬೆಳೆಸಿದ್ದರು. ಅವರ ಕುಟುಂಬದ ಸದಸ್ಯರೊಬ್ಬರು ಜೀವನ ನಿರ್ವಹಣೆಗಾಗಿ ತುಂಬಾ ಬವಣೆ  ಪಡುತ್ತಿದ್ದರು. ಆ ವ್ಯಕ್ತಿ ಗುರುನಾಥರಲ್ಲಿಗೆ ಬಂದು ತನ್ನ ಕಷ್ಟಗಳನ್ನು ತಿಳಿಸಿದಾಗ ಕರಗಿದ ಗುರುನಾಥರು ಜೀವನ ನಿರ್ವಹಣೆಗಾಗಿ ಆತನಿಗೆ ಕೆಲವು ಸಿದ್ಧಿಗಳನ್ನು ಧಾರೆ ಎರೆದಿದ್ದರು. 

ಆ ವ್ಯಕ್ತಿ ಗುರುನಾಥರು ದೇಹ ಬಿಡುವವರೆಗೂ ಸುಮ್ಮನಿದ್ದವರು ಗುರುನಾಥರು ದೇಹ ಬಿಟ್ಟ ನಂತರ ತನ್ನ ಹೆಸರಿನೊಂದಿಗೆ ಅವಧೂತ ಎಂಬ ಪದ ಸೇರಿಸಿಕೊಂಡರು. ಮಾತ್ರವಲ್ಲ, ಇಲ್ಲ ಸಲ್ಲದ ಯಜ್ಞ-ಯಾಗಾದಿಗಳನ್ನು ಮಾಡಿಸಲು ಶುರುವಿಟ್ಟುಕೊಂಡರು. ಅಂದರೆ ಗುರುಮಾರ್ಗವನ್ನು ಉಧ್ಧಟಿಸಿ ನಡೆದರು. ಪರಿಣಾಮವಾಗಿ ಯಾಗಗಳನ್ನು ಪೂರ್ಣ ಮಾಡಲಾಗಲಿಲ್ಲ. ಹಾಗೂ ಇದೀಗ ಹಲವು ಲಕ್ಷ ರೂಪಾಯಿಗಳಷ್ಟು ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವರು. 

ಈ ಸಂಬಂಧ ಗುರುನಾಥರು ಯಾವಾಗಲೂ ಹೇಳುತ್ತಿದ್ದ ಮಾತೊಂದು ಸದಾ ನೆನಪಾಗುತ್ತದೆ. "ನೋಡಯ್ಯಾ ಕಷ್ಟದಲ್ಲಿದ್ದಾಗ ಬಂದು ನನ್ನ ಕೇಳಿ ಪರಿಹಾರ ಪಡ್ಕೊಂಡು ನಿಮ್ಮ ಭಾರವೆಲ್ಲವನ್ನೂ ನನ್ ಮೇಲೆ ಹಾಕಿ ಹೋಗ್ತೀರಲ್ಲಾ.... ? ಅದೇ ಸುಖವಾಗಿದ್ದಾಗ ಎಂದಾದರೂ ನನ್ನ ವಿಚಾರಿಸ್ತೀರೇನ್ರಯ್ಯಾ? ತಪ್ಪು ಮಾಡುವಾಗ ನನ್ನನ್ನು ಕೇಳ್ತೀರೇನ್ರಯ್ಯಾ?" ಅನ್ನುತ್ತಿದ್ದರು. 


ಹಾಗೇ ಶಿವಮೊಗ್ಗ ಜಿಲ್ಲೆ ಸಮೀಪದಲ್ಲಿ ವಾಸವಿದ್ದ ವ್ಯಕ್ತಿಯೋರ್ವರು ಅಲ್ಪ ಸ್ವಲ್ಪ ಜೋತಿಷ್ಯ ತಿಳಿದುಕೊಂಡು ಅದರಲ್ಲಿ ಜೀವನ ಮಾಡುತ್ತಿದ್ದರು. ಆ ವ್ಯಕ್ತಿ ಒಮ್ಮೆ ಗುರುದರ್ಶನಕ್ಕೆ ಬಂದು ತನ್ನ ಕಷ್ಟಗಳನ್ನ ನಿವೇದಿಸಿಕೊಂಡರು. 

ಕರಗಿದ ಗುರುನಾಥರು ಅಂದಿನಿಂದ ಪ್ರತೀ ಬಾರಿ ಆ ವ್ಯಕ್ತಿ ದರ್ಶನಕ್ಕೆ ಬಂದಾಗ ಸಕ್ಕರೆ, ಕಾಯಿ ತಂದು ಮುಟ್ಟಿ ಅವರಿಗೆ ನೀಡುತ್ತಿದ್ದರು. ಆ ವ್ಯಕ್ತಿ  ಕಷ್ಟ ಪರಿಹಾರಕ್ಕಾಗಿ ತನ್ನಲ್ಲಿಗೆ ಬಂದವರಿಗೆ ಆ ಸಕ್ಕರೆ ಹಾಗೂ ಕಾಯಿಯನ್ನು ನೀಡಿ ಕಳುಹಿಸುತ್ತಿದ್ದರು. ಈ ಕಾರ್ಯ ಬಹುಶಃ ಗುರುನಾಥರು ದೇಹ ಬಿಡುವವರೆಗೂ ನಡೆದು ಬಂದಿತ್ತು ಎನಿಸುತ್ತದೆ. 

ಹಾಗೆಯೇ ವಕೀಲ ವೃತ್ತಿಯಲ್ಲಿದ್ದ ವ್ಯಕ್ತಿಯೋರ್ವರಿಗೆ ಗುರುನಾಥರು "ನೀನು ನಿನ್ನ ಕೆಲಸ ಮಾಡಿದ್ದು ಸಾಕಯ್ಯ. ಇನ್ನು ಮುಂದೆ ನನ್ನ ಕೆಲಸ ಮಾಡು" ಅಂದಿದ್ದರು. ಆ ವ್ಯಕ್ತಿ ಇಂದು ತನ್ನ ವೃತ್ತಿಯನ್ನು ಬಿಟ್ಟು ಮನೆಯಲ್ಲೇ ಇರುವರು. ಮುಂದೆ ಗುರುವಿನಿಂದ ಬರುವ ಆದೇಶಕ್ಕಾಗಿ ಕಾಯುತ್ತಿರುವರು. 

"ಗುರು ದೇಹವಲ್ಲ ಕಣಯ್ಯಾ. ಭಾವನೆ ಪರಿಶುದ್ಧ ಭಾವನೆ" ಎಂಬ ಗುರುನಾಥರ ಮಾತು ಇಂತಹ ಘಟನೆಗಳನ್ನು ನೋಡಿದಾಗ ಸದಾ ನೆನಪಾಗುತ್ತಿರುತ್ತದೆ.....,,,,,,,,


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment