ಒಟ್ಟು ನೋಟಗಳು

Thursday, November 24, 2016

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 51


ನುಡಿಮುತ್ತು, ಶಬ್ದ ಬ್ರಹ್ಮ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


"ನೀವಾಡುವ ಪ್ರತೀ ಮಾತೂ ಶಬ್ದ ಮಂಡಲದಲ್ಲಿದ್ದು ನಿಮ್ಮ ಪರಿಸ್ಥಿತಿಗನುಗುಣವಾಗಿ ನೆಲಕ್ಕೆ ಬಡಿದ ಚೆಂಡು ತಿರುಗಿ ಬರುವಂತೆ ಬರುವುದಪ್ಪಾ. ಅದಕ್ಕೆ ಸದಾ ಒಳ್ಳೆ ಮಾತನಾಡಿ. ರಾಮಸ್ಮರಣೆ ಮಾಡಿ, ಚಂದ್ರಶೇಖರ ಭಾರತಿಗಳ ಸ್ಮರಣೆಯಲ್ಲಿರಿ. ನೀವಾಡುವ ಮಾತು, ಮಾಡುವ ಚಿಂತೆ ಆಹಾರ ರೂಪವಾಗಿ ಊಟ ಮಾಡುವ ವ್ಯಕ್ತಿಗೆ ಸೇರುತ್ತದೆ" ಎನ್ನುತ್ತಿದ್ದರು. 

ಒಮ್ಮೆ ಗುರುನಾಥರು ಸದಾ ಓಡಾಡುತ್ತಿದ್ದ ಭಕ್ತರೋರ್ವರ ಕಾರಿನಲ್ಲಿ ಚರಣದಾಸನಾದ ನಾನು ಹಾಗೂ ಆ ಭಕ್ತರು ಕುಳಿತು ಇಲ್ಲ-ಸಲ್ಲದ ವಿಚಾರಗಳ ಬಗ್ಗೆ ಮಾತನಾಡಿದೆವು. ಸ್ವಲ್ಪ ಸಮಯದ ನಂತರ ಗುರುನಾಥರು ಅದೇ ಕಾರಿನಲ್ಲಿ ಎಲ್ಲಿಗೋ ಹೊರಟರು. 

ನಂತರ ದಾರಿಯಲ್ಲಿ ನಗುತ್ತಾ ಆ ಭಕ್ತರಿಗೆ "ಯಾಕ್ರಯ್ಯಾ ಏನೇನೋ ಮಾತಾಡ್ತೀರಾ? ಒಳ್ಳೆ ಮಾತಾಡ್ರಯ್ಯಾ. ನೀವಾಡಿದ ಮಾತು ಕಾರಿನಲ್ಲಿ ಪ್ರತಿಧ್ವನಿಸುತ್ತದೆ ತಿಳೀತಾ?" ಅಂದ್ರಂತೆ. ಆತ ನನಗದನ್ನು ತಿಳಿಸಿದರು. 

ಸದಾ ಕರ್ತವ್ಯ ಮಾಡುತ್ತಾ ಮಾಡಿದ ಕಾರ್ಯವನ್ನೆಲ್ಲಾ ಈಶ್ವರನಿಗೆ ಅರ್ಪಿಸಿ ನಿಮ್ಮೆಲ್ಲ ಆಗು-ಹೋಗುಗಳನ್ನು ಶಿವನೇ ನೋಡುವನು ಅನ್ನುತ್ತಿದ್ದ ಗುರುನಾಥರು, "ಸಮುದ್ರಕ್ಕೆ ಎಸೆದ ವಸ್ತು ಎಲ್ಲಿಗೋಗುತ್ತಯ್ಯಾ? ತಿರುಗಿ ಅಲೆಯ ರೂಪದಲ್ಲಿ ಬರುವುದಲ್ಲವೇ? ಅದೇ ರೀತಿ ಸಾಧ್ಯವಾದಷ್ಟು ಒಳ್ಳೆ ಕೆಲಸ ಮಾಡಿ ಸತ್ಪಾತ್ರರಿಗೆ ದಾನ ಮಾಡಿ. ಅವೆಲ್ಲವೂ ನಿಮಗೆ ಸಮುದ್ರದ ಅಲೆಯಂತೆಯೇ ಆಪತ್ಕಾಲದಲ್ಲಿ ತಿರುಗಿ ಬರುವುದು" ಎನ್ನುತ್ತಿದ್ದರು. 

ಅವರ ಬಳಿ ಯಾರೇ ಸಮಸ್ಯೆ ಹೇಳಿಕೊಂಡು ಬಂದರೂ ಗುರುನಾಥರ ಮೊದಲ ಪ್ರಶ್ನೆ, "ನೋಡಯ್ಯಾ ಅಣ್ಣ ಹಾಗೆ ಮಾಡಿದ. ಅಣ್ಣ ಹೀಗೆ ಮಾಡಿದ ಎನ್ನೋ ಮೊದಲು ನೀನು ಈ ಎಲ್ಲಾ ಮಾತು, ಕಷ್ಟಗಳನ್ನು ಎದುರಿಸಿಯೂ ನಿಮ್ಮ ಕುಟುಂಬದಲ್ಲಿರುವ ನಿನ್ನ ಸ್ಥಾನಕ್ಕೆ ಗೌರವವಾಗಿ ನ್ಯಾಯ ಒದಗಿಸಿದ್ದಿಯೇನಯ್ಯಾ?" ಎನ್ನುತ್ತಿದ್ದರು. 

"ಎಲ್ಲವೂ ನೀನೆ ಆಗಿ ನೀನು ಏನೂ ಅಲ್ಲವಾಗಿ ಕರ್ತವ್ಯ ಮಾಡಬೇಕು ಕಣಯ್ಯಾ" ಅನ್ನುತ್ತಿದ್ದರು. 

"ಸಾಧನೆ,. ಆಧ್ಯಾತ್ಮ ಅಂದ್ರೆ ಬೇರೇನೂ ಇಲ್ಲ ಕಣ್ರೋ". ನಿಮ್ಮ ಪಾತ್ರಕ್ಕೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸುತ್ತಾ , ಯಾರಿಗೂ ನೋವು ಮಾಡದೇ  ಆನಂದ ನೀಡಿ ಆನಂದವಾಗಿರುವುದೇ ಸಾಧನೆ. ತಿಳೀತಾ.... ?" ಅನ್ನುತ್ತಿದ್ದರು. 

ಈ ಸಂದರ್ಭದಲ್ಲಿ ಸಾಧನಾ ಸ್ಥಿತಿಯಲ್ಲಿದ್ದ ಗುರು ಬಂಧುವೊಬ್ಬರು ಹೇಳಿದ ಮಾತನ್ನು ಉಲ್ಲೇಖಿಸುವುದು ಯೋಗ್ಯವೆನಿಸುತ್ತದೆ. 

ಅವರ ಸಾಧನಾವಸ್ಥೆಯಲ್ಲಿ ನಾನು ಹಾಗೂ ಗುರು ಬಂಧು ಸದಾ ಜೊತೆಗಿರುವ ಅವಕಾಶ ದೊರಕಿತ್ತು. 

ಸಂಜೆ ಶಾಲಾ ಕಾಲೇಜು ಮುಗಿಸಿ ವಿದ್ಯಾರ್ಥಿಗಳು ಮನೆಗೆ ತೆರಳುವ ಸಮಯ. ಹಾದಿಯಲ್ಲಿ ನೂರೆಂಟು ಯುವಕ-ಯುವತಿಯರು ಮನೆಗೆ ತೆರಳುತ್ತಿದ್ದರು. ಅವರತ್ತ  ಬೆಟ್ಟು ಮಾಡಿ ಅವರು ಹೀಗೆಂದರು:- "ಎಷ್ಟೊಂದು ಮಾಟಗಳು ಅಲ್ಲವೇ? ಒಂದಿದ್ದಂತೆ ಇನ್ನೊಂದಿಲ್ಲ. ಒಂದಕ್ಕಿಂತ ಒಂದು ಆಕರ್ಷಣೆ ಅಲ್ಲವೇ?" ಅಂದ್ರು. 

ನಾನದಕ್ಕೆ ಹೂಂ... ಅಂದೆ. 

ಮುಂದುವರೆದ ಅವರು "ಆದರೆ ಪ್ರತೀ ವ್ಯಕ್ತಿಯ ದೇಹದ ಅವಯವಗಳೆಲ್ಲವೂ ಒಂದೇ ಆಗಿದ್ದು, ಅದರಲ್ಲಿ ಒಂದನ್ನು ನಾವು ತಾಯಿ, ಅಕ್ಕ, ತಂಗಿ, ಅಜ್ಜಿ, ಹೆಂಡತಿ, ಅಣ್ಣ, ತಮ್ಮ, ತಂದೆ, ಸ್ನೇಹಿತ ಇನ್ನೂ ಮುಂತಾಗಿ ಕರೆಯುತ್ತೇವೆ. ಅದು ಮೂಲದಲ್ಲಿ ಒಂದೇ ಆಗಿದೆ". 

ಹಾಗಾದರೆ ಭಿನ್ನವಾಗಿರುವುದು ನಮ್ಮ ಭಾವನೆ ಅಲ್ಲವೇ? ಅಂದ್ರು. 

ಆಧ್ಯಾತ್ಮವನ್ನು, ಅದ್ವೈತವನ್ನು ಇದಕ್ಕಿಂತ ಸರಳ ರೂಪದಲ್ಲಿ ಹೇಳಲು ಸಾಧ್ಯವೇ ಎಂದು ನನಗನಿಸಿತು. 

ಅದ್ವೈತವನ್ನು ಗುರುನಾಥರು ಹೀಗೆ ಹೇಳುತ್ತಿದ್ದರು. "ಎರಡಲ್ಲದಂತೆ ಬದುಕಯ್ಯಾ, ಕಣ್ಣು ಎರಡಿದ್ದರೂ ಒಂದೇ ಅಲ್ವೇನಯ್ಯಾ?. ಹಾಗೇನೇ ಭಾವ ಭಿನ್ನತೆ ಬರದಂತೆ ಬದುಕಯ್ಯಾ". 

"ಹೇಗೆ ಮನೆಯ ಬೇರೆ ಬೇರೆ ಕೋಣೆಗಳಿಗೆ ನೀರಿನ ಸರಬರಾಜಿಗೆ ಬೇರೆ ಬೇರೆ ನಲ್ಲಿಗಳಿದ್ದರೂ ಬರುವ ನೀರು ಮಾತ್ರ ಒಂದೇ ಅಲ್ಲವೇ? ಅದೇನಾದ್ರೂ ನಾ ಮಾಡಿ, ಮೈಲಿಗೆ ಅನ್ನುತ್ತಾ? ಭಿನ್ನವಾಗಿರುವುದು ನಿನ್ನ ಭಾವ ಅಲ್ಲವೇ?" ಎನ್ನುತ್ತಿದ್ದರು. 

ಮತ್ತೂ ಮುಂದುವರೆದು "ಮಡಿ ಅಂತ ಹೇಳಿ ಹೂ ಹಾಕೋನೂ ನೀನೇ. ಮತ್ತೆ ನೈರ್ಮಲ್ಯ ಅಂದ್ಕೊಂಡು ಅದನ್ನ ದೂರ ಎಸೆಯೋನೂ ನೀನೆ. ಆ ಹೂವು ಏನಾದ್ರೂ ನಾ ಮಡಿ ಮೈಲಿಗೆ ಅಂತ ಹೇಳ್ತಾ?". 

"ಹೇಳಿದ್ದೆಲ್ಲಾ ನಿನ್ನ ಮನಸ್ಸು ಅಲ್ಲವೇ?. ಅದೆಲ್ಲವೂ ನಿನ್ನ ಭ್ರಾಂತಿ ಅಲ್ಲವೆನಯ್ಯಾ" ಅನ್ನುತ್ತಿದ್ದರು. 

"ಕರ್ತವ್ಯ ಮಾಡುತ್ತಾ ಮಾಡುತ್ತಾ ಅದರೊಳಗೆ ಆಧ್ಯಾತ್ಮದ ಹಣತೆ ಹಚ್ಚುತ್ತಿದ್ದುದು ನಮ್ಮ ಗುರುನಾಥರ ವೈಶಿಷ್ಟ್ಯ"......,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment