ಒಟ್ಟು ನೋಟಗಳು

Sunday, November 27, 2016

ಶ್ರೀ ಸದ್ಗುರು ಮಹಿಮೆ   


    ಗ್ರಂಥ ರಚನೆ - ಚರಣದಾಸ 


   ಅಧ್ಯಾಯ  - 54

ಕುರದ ಕತೆ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಶೃಂಗೇರಿಯ ದಕ್ಷಿಣಾಮ್ನಾಯ ಪೀಠಕ್ಕೆ ತುಂಬ ನಡೆದುಕೊಳ್ಳುತ್ತಿದ್ದ  ಅವರು ಜಗದ್ಗುರುಗಳು ಎಲ್ಲೇ ಹೋದರು ಆ ಸ್ಥಳಕ್ಕೆ ಭೇಟಿ ನೀಡುತ್ತಿದ್ದುದು ಸಾಮಾನ್ಯವಾಗಿತ್ತು. ಹಾಗೆ ಒಮ್ಮೆ ಜಗದ್ಗುರುಗಳು ಹಾಸನಕ್ಕೆ ಬಂದ ಸಂದರ್ಭ. 

ಅಲ್ಲಿದ್ದ ಭಕ್ತರೋರ್ವರ ಕೌಟುಂಬಿಕ ಸಮಸ್ಯೆ ಪರಿಹಾರಕ್ಕಾಗಿ ಸುಮಾರು 1-1/2 ಗಂಟೆಗೂ ಅಧಿಕ ಕಾಲ ಸುಡುಬಿಸಿಲಿನಲ್ಲಿ ಕಾಯುವ ರಸ್ತೆಯ ಮೇಲೆ ನಿಂತಿದ್ದರು. ಆ ಕಾರಣಕ್ಕಾಗಿ ತನ್ನೆರಡು ಅಂಗಾಲನ್ನು ಸುಟ್ಟುಕೊಳ್ಳಬೇಕಾಯಿತು. ಹಾಗೇ ಕಾಲುಗಳೆರಡೂ ಸುಟ್ಟು ಹೋದಾಗಲೂ ಕಿಂಚಿತ್ತೂ ವಿಚಲಿತರಾಗಲಿಲ್ಲ. 

ಆ ಕಾಲದಲ್ಲಿ ಸುಮಾರು ಎರಡು ತಿಂಗಳ ಕಾಲ ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದರು. ಆಗ ತನ್ನ ಆರೈಕೆ ಮಾಡಲು ಚರಣದಾಸನಾದ ನಾನು ಇರಬೇಕೆಂದು ಬಹು ಅಪೇಕ್ಷಿಸಿದ್ದರಂತೆ. ಆದರೆ ನಾನು ಮನೆಯ ಇತರ ಕೆಲಸಗಳ ಕಡೆ ಗಮನ ಹರಿಸಿದ್ದರಿಂದ ದೈಹಿಕವಾಗಿ ಅವರ ಜೊತೆ ಇರಲಾಗಲಿಲ್ಲ. 

ಹಾಗೆಯೇ ಇನ್ನೊಮ್ಮೆ ಇದ್ದಕ್ಕಿದ್ದಂತೆಯೇ "ಇನ್ನು ಮೂರು ತಿಂಗಳು ನನ್ನ ಜೀವನ ಬಹಳ ಕಷ್ಟವಿದೆ. ಜೀವ ಹೋದರೂ ಆಶ್ಚರ್ಯವಿಲ್ಲ" ಎಂದಿದ್ದರು. ಅಂತೆಯೇ ಇದ್ದಕ್ಕಿದ್ದಂತೆ ಅವರ ಪೃಷ್ಠ ಭಾಗದಲ್ಲಿ ಒಂದು ಕುರ ವ್ರಣವಾಗಿ ಮಾರ್ಪಟ್ಟಿತು. 

ಆಗ ನನ್ನಿಂದ "ಒಂದು ಲೋಟ ಕಾಫಿ ತರಿಸಿ ಅರ್ಧ ಕುಡಿದ ಗುರುನಾಥರು ಉಳಿದರ್ಧವನ್ನು ನನಗೆ ಕುಡಿಯಲು ನೀಡಿದರು. ನಾ ಕುಡಿಯಲಾರಂಭಿಸಲು "ನನಗೆ ಬಂದ ಕುರವೆಲ್ಲ ನಿನಗೂ ಬರಲಿ" ಎಂದರು. 

ನಾನದಕ್ಕೆ "ಸಂತೋಷದಿಂದ ಸ್ವೀಕರಿಸುವೆ" ಎಂದೆನು. 

ಅದಾಗಿ ನಾನು ತೋಟಕ್ಕೆ ಹೋಗಿ  ಬರುವಷ್ಟರಲ್ಲಿ ಬಲಗಾಲ ಗಂಟಿನಲ್ಲಿ ಒಂದು ಕುರ ಎದ್ದಿತು. ಹಾಗೆ ದೇಹದ ಈತರ ಏಳು ಭಾಗಗಳಲ್ಲಿ ಕುರವೆದ್ದಿತು. ಇತ್ತ ಗುರುನಾಥರ ದೇಹದ ಸ್ಥಿತಿಯಂತೂ ಶೋಚನೀಯವಾಗಿತ್ತು. ಕೂರಲಾಗುತ್ತಿರಲಿಲ್ಲ. ನಡೆಯಲೂ ಮಲಗಲೂ ಆಗುತ್ತಿರಲಿಲ್ಲ. ಜೊತೆಗೆ ಜೊತೆಯಲ್ಲಿದ್ದ ಭಕ್ತರ ಅತಿಯಾದ ಚಿಕಿತ್ಸೆಗಳಿಂದ ಬಹುಶಃ ಮೂರು ತಿಂಗಳ ಕಾಲ ಆ ದೇಹ ಅನುಭವಿಸಿದ ಯಾತನೆ ವರ್ಣನಾತೀತ. ಹಾಗಿದ್ದೂ ಗುರುನಾಥರು ಒಂದಿನಿತೂ ವಿಚಲಿತರಾಗಲಿಲ್ಲ, ಹಾಗೂ ತನ್ನ ದೇಹವನ್ನು ತನ್ನಿಚ್ಚೆಯಂತೆ ಹಿಂಸಿಸುತ್ತಿದ್ದ ಭಕ್ತರಿಗೂ ಏನೂ ಆಕ್ಷೇಪಣೆ ವ್ಯಕ್ತಪಡಿಸಿರಲಿಲ್ಲ. 

"ನನಗೆಂತದಯ್ಯಾ ಸುಖ-ದುಃಖ? ಚಳಿ-ಮಳೆ... ? ಎಲ್ಲವೂ ಒಂದೇ ಕಣೋ" ಅಂತ ಆಗಾಗ್ಗೆ ಮಾರ್ಮಿಕವಾಗಿ ನುಡಿಯುತ್ತಿದ್ದರು. 

ಆ ಮೂರು ತಿಂಗಳಲ್ಲಿ ಸುಮಾರು ಎರಡು ತಿಂಗಳ ಕಾಲ ನನ್ನನ್ನು ಯಾವ ಕಾರಣಕ್ಕೂ ಅವರ ಜೊತೆ ಇರಲು ಬಿಟ್ಟಿರಲಿಲ್ಲ. ಜೊತೆಗಿದ್ದ ಕೆಲವರು ಗುದದ್ವಾರ ಹಾಗೂ ಇತರೆಡೆ ವಿಪರೀತ ಸುಟ್ಟು ಹಾಕುವ ತನಕ ನನ್ನನ್ನು ದೂರ ಕಳಿಸಿದ್ದರು. 

ಆ ನಂತರ ನನ್ನನ್ನು ಹತ್ತಿರ ಬಿಟ್ಟುಕೊಂಡರು. ಬಹುಶಃ ನಾನು ಜನರ ಈ ವಿಪರೀತದ ನಡವಳಿಕೆಯನ್ನು ಖಂಡಿಸುತ್ತಿದ್ದೆ ಎಂಬ ಕಾರಣಕ್ಕೋ ಏನೋ ಸದಾ ನನ್ನನ್ನು ದೂರವಿಟ್ಟಿದ್ದರೆನಿಸುತ್ತದೆ. ಆನಂತರ ಸಂಪೂರ್ಣವಾಗಿ ಗುಣಪಡಿಸಲು ನನಗೆ ಅವಕಾಶ ನೀಡಿದ್ದು ನನ್ನ ಭಾಗ್ಯವೆನಿಸುತ್ತದೆ. 

ನನ್ನ ತಾಳ್ಮೆ ಪರೀಕ್ಷೆಗೆ ಆಗಾಗ್ಗೆ ನಾವಿಬ್ಬರೇ ಇದ್ದಾಗ ಹೇಳುತ್ತಿದ್ದರು. ಜೊತೆಗಿದ್ದವರು ಆ ದೇಹವನ್ನು ಮನಸೋ ಇಚ್ಛೆ ಹಿಂಸಿಸುತ್ತಿದ್ದಾಗಲೂ "ನೀ ಮಾಡಿದ ಆರೈಕೆಯಿಂದ ಬಹಳ ಹಿತವಾಯಿತು ಕಣಪ್ಪಾ.... " ಅನ್ನುತ್ತಿದ್ದರೇ ವಿನಃ ಯಾವ ಕಾರಣಕ್ಕೂ ಅವರಿಗೆ ನೋವು ಮಾಡುವ ಮಾತಾಡ್ತಿರಲಿಲ್ಲ. 

ನಾನು ಈ ಕುರಿತು ಕೇಳಿದರೆ, "ಅವರಿಗೆ ಈ ದೇಹದ ಮೇಲೆ ಅದೊಂದೆ ಆಸೆ ತಾನೇ? ಈಡೇರಿಸಿಕೊಳ್ಳಲಿ ಬಿಡಯ್ಯಾ" ಅನ್ನುತ್ತಿದ್ದರು. ಅಷ್ಟರ ಮಟ್ಟಿಗೆ ದೇಹ ಭಾವವನ್ನು ಪೂರ್ಣ ತೊರೆದಿದ್ದರು. 

ಮತ್ತೊಮ್ಮೆ ಅರಸೀಕೆರೆಯಲ್ಲಿ ಭಕ್ತರೋರ್ವರ ಮನೆಯಲ್ಲಿದ್ದಾಗ ಅವರ ದರ್ಶನಕ್ಕಾಗಿ ಬೆಂಗಳೂರಿನಿಂದ ಕೆಲವು ಪ್ರಖ್ಯಾತ ವೈದ್ಯರುಗಳು ಬಂದಿದ್ದರು. ಅವರು ಗುರುನಾಥರ ದೇಹ ಸ್ಥಿತಿಯನ್ನು ಪರೀಕ್ಷಿಸಬಯಸಿದರಂತೆ. ಅದಕ್ಕೆ ಸಮ್ಮತಿಸಿದ ಗುರುನಾಥರು ಸುಮ್ಮನೆ ಮಲಗಿದರು. 

ಪರೀಕ್ಷೆ ಆರಂಭಿಸಿದ ವೈದ್ಯರುಗಳಿಗೆ ಗುರುನಾಥರ ನಾಡಿ ಬಡಿತ ಹಿಡಿಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. 

ಕೆಲ ಪರೀಕ್ಷೆ ನಡೆಸಿ ಕೆಲ ಗಂಟೆಗಳ ಕಾಲ ಪ್ರಯತ್ನಿಸಿದರೂ ಏನನ್ನೂ ಕಂಡು ಹಿಡಿಯಲಾಗದ ವೈದ್ಯರುಗಳು ದಿಗ್ಬ್ರಾಂತರಾಗಿದ್ದರು. ಗುರುನಾಥರು ಮಾತ್ರ ನಗುತ್ತಾ "ಏನ್ ಡಾಕ್ಟ್ರೇ? ನಾಡಿ ಬಡಿತ ಸಿಗ್ತಿಲ್ವ?" ಎಂದು ಪ್ರಶ್ನೆ ಕೇಳ್ತಾ ಜೊತೆಗೇ  ವೈದ್ಯರ ವೈಯಕ್ತಿಕ ಸಮಸ್ಯೆಗಳನ್ನು ಕೇಳಿ ಪರಿಹಾರ ಸೂಚಿಸುತ್ತಿದ್ದರು. 

ಇತ್ತ ವೈದ್ಯರು ನಾಡಿ ಬಡಿತವೇ ಇರದ ದೇಹ ಬದುಕಿರಲು ಹೇಗೆ ಸಾಧ್ಯವೆಂದು ಯೋಚಿಸುತ್ತಿದ್ದರು. ಇದನ್ನರಿತ ಗುರುನಾಥರು ತನ್ನ ಕೈಯನ್ನೊಮ್ಮೆ ಜಾಡಿಸಿ "ಈಗ ನೋಡಿ ನಾಡಿ ಸಿಗುತ್ತೆ" ಅಂದ್ರಂತೆ. ಅಂತೆಯೇ ಆ ವೈದ್ಯರಿಗೆ ನಾಡಿ ಬಡಿತ ಸಿಕ್ಕಿತಂತೆ. 

ಈ ಘಟನೆ, "ದೇಹ ಭಾವವನ್ನು ಮೀರಿದ ಒಂದು ಶಕ್ತಿ ಇದೆ ಎಂಬುದನ್ನು ಜಗತ್ತಿಗೆ ತಿಳಿಸುತ್ತದೆ ಅಲ್ಲವೇ?" ......,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment