ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 31
ಜಾತಿನಿಂದನೆ ಮೊಕದ್ದಮೆಯಿಂದ ಕಾಪಾಡಿದ ಕತೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಅದು 2002 ಅಕ್ಟೋಬರ್ ಕಾಲ. ಅಡಿಕೆ ಕೊಯ್ಲಿನ ಸಂದರ್ಭ. ಸಖರಾಯಪಟ್ಟಣಕ್ಕೆ ಬಂದಿದ್ದೆ. ಇದ್ದಕ್ಕಿದ್ದಂತೆ ಗುರುನಾಥರು ಅಲ್ಲಿದ ಇತರ ಶಿಷ್ಯರನ್ನು ಕರೆದು "ಇನ್ನು ಇಪ್ಪತ್ತೊಂದು ದಿನ ಇವನನ್ನು (ನನ್ನತ್ತ ತೋರಿಸಿ) ಎಲ್ಲಿಗೂ ಹೋಗಲು ಬಿಡಬೇಡಿ ತಿಳೀತಾ?" ಎಂದು ನುಡಿದರು. ಚರಣದಾಸನಾದ ನಾನು ಅಲ್ಲಿಯೇ ಇದ್ದೆ.
ಆ ಇಪ್ಪತ್ತೊಂದು ದಿನಗಳು ನನ್ನ ಕೆಲಸದ ಒತ್ತಡದಲ್ಲಿ ಸ್ನಾನವನ್ನೂ ಮಾಡಿರಲಿಲ್ಲ. ಆ ಎಲ್ಲಾ ಕಾಲವೂ ಅಡಿಕೆ ಕೊಯ್ಲಿನ ಕೆಲಸ ಹಾಗೂ ಗುರುನಾಥರು ಹೇಳಿದ್ದನ್ನು ಮಾಡುವುದರಲ್ಲಿಯೇ ಸಾಗುತ್ತಿತ್ತು.
ಈ ಮಧ್ಯೆ ನಾನು ಊರಿಗೆ ಬಂದಿದ್ದಾಗ ಸಾಮಾನ್ಯವಾಗಿ ಸಂಘಟನೆಯೊಂದರಲ್ಲಿ ಸಕ್ರಿಯವಾಗಿರುತ್ತಿದ್ದೆ. ನನ್ನ ಏಳಿಗೆಯನ್ನು ಸಹಿಸದೆ ಕಾಲ ಸ್ಥಾಪಿತ ಹಿತಾಸಕ್ತಿಗಳು ಒಗ್ಗೂಡಿ ಚರಣದಾಸನಾದ ನಾನು ಹಾಗೂ ನನ್ನ ಕೆಲ ಮಿತ್ರರ ವಿರುದ್ಧ ಜಾತಿ ನಿಂದನೆ ಮೊಕದ್ದಮೆ ದಾಖಲಿಸಿದರು. ಇಂತಹ ದೂರುಗಳು ಬಂದಾಗ ಆರಕ್ಷಕರು ಆರೋಪಿಯನ್ನು ಯಾವುದೇ ವಿಚಾರಣೆ ನಡೆಸದೆ ಮೂರು ತಿಂಗಳು ಬಂದೀಖಾನೆಗೆ ಹಾಕಬಹುದಾಗಿತ್ತು.
ಆದರೆ ಗುರುವಿನ ಅನುಗ್ರಹವಿದ್ದಿತು ಎಂದರೆ, ಎಂತಹ ಆಪತ್ತುಗಳೂ ಸಹ ದಾಟಬಹುದು. ಗುರು ದಾಟಿಸುವನು. ಆ ನಂತರ ನನ್ನ ಮಿತ್ರರನೇಕರ ಒತ್ತಡಕ್ಕೆ ಮಣಿದ ಪೋಲೀಸರು ಎಲ್ಲಾ ರಾಜಕೀಯ ಒತ್ತಡವನ್ನು ಬದಿಗೊತ್ತಿ ನನ್ನ ಹೆಸರನ್ನು ಕೈ ಬಿಟ್ಟಿದ್ದರು. ಮರುದಿನ ನಾನು ಊರಿಗೆ ಹೋದೆ.
ಹಾಗೆಯೇ ಮತ್ತೊಮ್ಮೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭ ದತ್ತ ಜಯಂತಿಯ ಹಿಂದಿನ ದಿನವೆನಿಸುತ್ತದೆ. ಗುರುನಾಥರೊಂದಿಗೆ ಶೃಂಗೇರಿಗೆ ಬಂದಿದ್ದೆ. ಆಗಲೇ ನನ್ನ ಎರಡನೇ ಅಕ್ಕ ಹೆರಿಗೆ ನೋವಿನಿಂದ ಆಸ್ಪತ್ರೆ ಸೇರಿದ್ದನ್ನು ತಿಳಿದ ಚರಣದಾಸನಾದ ನಾನು ಶೃಂಗೇರಿಯಿಂದಲೇ ಊರಿಗೆ ತೆರಳಲು ಯೋಚಿಸಿದೆ.
ಕೂಡಲೇ ಚರಣದಾಸನಾದ ನನ್ನನ್ನು ಕರೆದ ಗುರುನಾಥರು "ಅಯ್ಯಾ ಊರಿಗೆ ಹೋಗು. ಆದರೆ, ಇಂದು ಮಾತ್ರ ಬೇಡಪ್ಪಾ. ಸಖರಾಯಪಟ್ಟಣ ತಲುಪಿ ಆ ನಂತರ ಬೇಕಿದ್ದರೆ ಹೋಗಿ ಬಾ" ಎಂದರು. "ಆಗಲಿ " ಎಂದ ನಾನು ಊರಿಗೆ ಹೋಗದೆ ಮರುದಿನ ನೇರವಾಗಿ ತೀರ್ಥಹಳ್ಳಿಯ ಆಸ್ಪತ್ರೆಗೆ ಹೋದೆ. ಎರಡು ದಿನಗಳಿಂದ ಅಲ್ಲಿಯೇ ಇದ್ದ ನನ್ನ ಸೋದರ ಹೇಳಿದ ಕತೆ ಕೇಳಿ ಗುರು ಕಾರುಣ್ಯದ ಮಹಿಮೆ ಸ್ವಲ್ಪ ತಿಳಿಯಿತು. ಅದೇನೆಂದರೆ, ಹಿಂದಿನ ದಿನ ನಮ್ಮ ಸಂಬಂಧಿಯೊಬ್ಬರನ್ನು ಸಂಘಟನೆಯೊಂದರಲ್ಲಿ ಸಕ್ರೀಯವಾಗಿದ್ದ ಕಾರಣ ಪೋಲೀಸರು ಬಂಧಿಸಿ ಬಳ್ಳಾರಿ ಜೈಲಿಗೆ ಕಳಿಸಿದರಂತೆ. ಪೋಲೀಸರ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತಂತೆ. ನಾನು ಊರಿನಲ್ಲಿ ಇರಲಿಲ್ಲವಾದ ಕಾರಣ ಸುಮ್ಮನಾದರಂತೆ.
ಗುರು ಇಷ್ಟೆಲ್ಲಾ ನನ್ನನ್ನು ಕಾಪಾಡುತ್ತಿದ್ದಾಗ್ಯೂ ಪ್ರಪಂಚದ ಆಕರ್ಷಣೆಗೆ ಬಿದ್ದ ಚರಣದಾಸನಾದ ನಾನು ದಿನ ನಿತ್ಯ ಗುರುನಾಥರೊಂದಿಗೆ ಜಗಳವಾಡುತ್ತಿದ್ದೆ. ಆದರೆ ಅವರ ಮತ್ತು ನನ್ನ ನಡುವೆ ಇದ್ದ ಪ್ರೀತಿಯ ವಿಶ್ವಾಸದ ಸೆಲೆ ಬಹುಶಃ ಇಂದಿನದಂತೂ ಅಲ್ಲ. ಜನ್ಮಗಳ ಬಗ್ಗೆ ಅರಿವಿಲ್ಲದಿದ್ದರೂ ರೂಢಿಯಂತೆ ಹೇಳುವುದಾದರೆ, ಈ ಬಾಂಧವ್ಯ ಜನ್ಮ ಜನ್ಮಾಂತರದ್ದು ಎನ್ನಬಹುದು.
ನಾನು ಅಲ್ಲಿಗೆ ಹೋದ ಹೊಸತರಲ್ಲಿ ಅವರಾಡಿದ ಒಂದು ಮಾತು ನೆನಪಿಗೆ ಬರುತ್ತದೆ. "ಅಯ್ಯಾ, ನೀ ಎಲ್ಲೇ ಹೋಗು. ಕೆಳಗೆ ಬೀಳದಂತೆ ಎಳೆದು ತರುತ್ತೇನೆ. ಧೈರ್ಯವಾಗಿರು" ಎಂಬ ಮಾತು ಪದೇ ಪದೇ ಮನದಲ್ಲಿ ಸುಳಿದಾಡುವುದು.....,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment