ಒಟ್ಟು ನೋಟಗಳು

Thursday, November 3, 2016

ಶ್ರೀ ಸದ್ಗುರು ಮಹಿಮೆ   

 

   ಗ್ರಂಥ ರಚನೆ - ಚರಣದಾಸ 

 

  ಅಧ್ಯಾಯ  - 30


400 ವರ್ಷದ ಪಾದುಕೆ  




ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।



ಬಾಣಾವರದಲ್ಲಿ ಸುಮಾರು 400 ವರ್ಷ ಹಿಂದೆ ವಾಸವಿದ್ದು ಸಜೀವ ಸಮಾಧಿಯಾದ ಯತಿಯೋರ್ವರ ಸಮಾಧಿ ಇದ್ದು ಗುರುನಾಥರು ಆಗಾಗ್ಗೆ ಅಲ್ಲಿಗೆ ಹೋಗಿ ಬರುತ್ತಿದ್ದರು. ಮಾತ್ರವಲ್ಲ ತನ್ನ ದರ್ಶನಕ್ಕೆ ಬಂದವರನ್ನೂ ಅಲ್ಲಿಗೆ ಕಳಿಸುತ್ತಿದ್ದರು. 

ಅದು 400 ವರ್ಷ ಹಿಂದೆ ಬದುಕಿ ಸಾಧನೆಗೈದ ಕೃಷ್ಣ ಯೋಗೇಂದ್ರ ಎಂಬ ಯತಿವರೇಣ್ಯರ ಸಮಾಧಿ. "ಸಜೀವ ಸಮಾಧಿಯಾಗಿದ್ದ" ರೆಂದು ಗುರುನಾಥರು ಆಗಾಗ್ಗೆ ಹೇಳುತ್ತಿದ್ದರು. ಒಮ್ಮೆ ಅರಸೀಕೆರೆಯಲ್ಲಿ ವಾಸವಿದ್ದ ಗುರುಭಕ್ತರೊಬ್ಬರನ್ನು ಕರೆದು "ಬಾಣಾವರದ ಯತಿವರೇಣ್ಯರ ಪಾದುಕೆಗಳಿವೆ. ಅದನ್ನು ಹುಡುಕಬೇಕು ಕಣಯ್ಯಾ" ಎಂದಿದ್ದರು. 

ಕೆಲಕಾಲ ಕಳೆದ ಮೇಲೆ "ಚಿಕ್ಕ ತಿರುಪತಿಯಲ್ಲಿರುವ ಒಂದು ಜಾಗದಲ್ಲಿ ಪಾದುಕೆ ಇದೆ. ಕೇಳು, ಹುಡುಕಲು ಸಹಕರಿಸುವರು" ಎಂದು ಕಳಿಸಿದರು. ಹಾಗೆ ಹುಡುಕಿದಾಗ ಅಟ್ಟದ ಮೂಲೆಯಲ್ಲಿ ಪಾದುಕೆಗಳು ಸಿಕ್ಕವು. ಅವು ಇಂದಿಗೂ ಅರಸೀಕೆರೆಯ ಒಬ್ಬ ಭಕ್ತರ ಮನೆಯಲ್ಲಿ ಪೂಜಿಸಲ್ಪಡುತ್ತಿದೆ. 

ಅಂತೆಯೇ ಇನ್ನೊಂದು ದಿನ ಎಂದಿನಂತೆಯೇ ಚರಣದಾಸನಾದ ನಾನು ಗುರುನಾಥರು ನನ್ನ ಕೆಲಸವನ್ನು ಮಾಡಿಸಿಕೊಡಲಿಲ್ಲವೆಂದು ಜಗಳವಾಡುತ್ತಿದ್ದೆ. ರಾತ್ರಿ ನನ್ನನ್ನು ಕರೆದು "ಶಿವಮೊಗ್ಗಕ್ಕೆ ಹೋಗಿ ಬಾ" ಎಂದರು. 

ಗುರು ಬಂಧುಗಳ ಕಾರಿನಲ್ಲಿ ಹೋಗಲು ಸಿದ್ಧನಾಗಿದ್ದರೂ ಕೆಲಸ ಮಾಡಿಕೊಡಲಿಲ್ಲವೆಂದು ಸಿಟ್ಟು ಮಾಡಿಕೊಂಡು ನಿಂತಿದ್ದೆ. ಊಟವನ್ನೂ ಮಾಡಿರಲಿಲ್ಲ. ಗುರುನಾಥರು ಬಂದು "ಊಟ ಮಾಡಯ್ಯಾ" ಎಂದರು. ನಾನು ಸಿಟ್ಟಿನಿಂದ "ಬೇಡ" ಅಂದೆ. ಎರಡು ಬಾರಿ ಕೇಳಿದರೂ ಬೇಡವೆನ್ನಲು ಗುರುನಾಥರು "ಆ ದೇಹ ನಿಂದಲ್ಲ ನಂದು. ಅದಕ್ಕೆ ಊಟ ಹಾಕಲು ನಿನ್ನ ಎಂತ ಕೇಳೋದು?" ಎಂದು ಹೇಳಿ ತಟ್ಟೆಗೆ ಊಟ ಹಾಕಿ ಕೊಟ್ಟರು. ಗುರುನಾಥರ ಮಮತೆಯ ಸವಿಯುಂಡಿದ್ದ ಚರಣದಾಸನಾದ ನಾನು ಮುನಿಸಿನಿಂದಲೇ ಊಟ ಮಾಡಿದೆ. 

ನಂತರ ಶಿವಮೊಗ್ಗದ ಗುರು ಬಂಧುಗಳ ಮನೆಗೆ ಹೋಗಿ ಮಲಗಿದೆ. ರಾತ್ರಿ ಹೀಗೊಂದು ಸ್ವಪ್ನವಾಯಿತು: "ನಮ್ಮೂರಿನಲ್ಲಿರುವ ಒಂದು ಹಳ್ಳದ ಬದಿಯಲ್ಲಿ ಚರಣದಾಸನಾದ ನಾನು, ಗುರುನಾಥರು ನಿಂತಿದ್ದು ಅಲ್ಲಿ ಎರಡು ಜೊತೆ ಪಾದುಕೆಗಳಿದ್ದು, ನಾನು ಅವು ಯಾರ ಪಾದುಕೆಗಳೆಂದು ಗುರನಾಥರಲ್ಲಿ ಕೇಳಲು, ಅವು ನಿನಗೆ ಸಂಬಂಧಿಸಿದ್ದೇ ಕಣೋ" ಎಂದಂತೆ ಸ್ವಪ್ನವಾಯಿತು. 

ನಂತರ ಬೆಳಿಗ್ಗೆ ಎದ್ದು ಸಖರಾಯಪಟ್ಟಣಕ್ಕೆ ಬಂದು ಅಲ್ಲಿಂದ ಗುರುನಾಥರಿದ್ದ ಚಿಕ್ಕಮಗಳೂರಿನ ಗುರುಬಂಧುವೊಬ್ಬರ ಮನೆಗೆ ಬಂದು ತಲುಪಿ ಸ್ವಪ್ನದ ವಿಚಾರ ತಿಳಿಸಿದೆ. ಕೂಡಲೇ ಗುರುನಾಥರು ನೇರವಾಗಿ ಅದ್ವೈತ ಪೀಠಕ್ಕೆ ಹೋಗಿ ಜಗದ್ಗುರುಗಳಲ್ಲಿ ಅವರ ಒಂದು ಜೊತೆ ಪಾದುಕೆ ನೀಡುವಂತೆ ವಿನಂತಿಸಲು ತಿಳಿಸಿದರು. 

ಅದು ನವರಾತ್ರಿಯ ಸಮಯ. ಚರಣದಾಸನಾದ ನಾನು ಅದ್ವೈತ ಪೀಠಕ್ಕೆ ಹೋಗಿ ಶ್ರೀ ಶ್ರೀ ಗಳಲ್ಲಿ ವಿನಂತಿಸಿದೆ. ಕೂಡಲೇ ತಮ್ಮ ಪಾದುಕೆಗಳನ್ನಿತ್ತು ಅನುಗ್ರಹಿಸಿದರು. 

"ನಮ್ಮ ಮನೆಯಲ್ಲಿಯೂ ಒಂದು ಜೊತೆ ಪಾದುಕೆ ಇರಬಾರದೇ?" ಎಂಬ ನನ್ನ ಮನೋಭಿಲಾಷೆಯನ್ನು ಗುರುನಾಥರು ಈ ರೀತಿ ಪೂರ್ಣಗೊಳಿಸಿದರು. 

ಕೆಲವು ಕಾಲದ ನಂತರ "ಪಾದುಕೆ ನೀಡುವ ಹಾಗೂ ಪಾದುಕಾಪೂಜೆ ಮಾಡಿಸುವ ಉದ್ದೇಶವೇನು ಗುರುಗಳೇ?" ಎಂದು ಪ್ರಶ್ನಿಸಿದೆ. ಅದಕ್ಕೆ ಗುರುನಾಥರು "ಸಣ್ಣವನಾಗು, ಪಾದುಕೆಯಾಗು, ಸದಾ ವಿನೀತ ಭಾವದಲ್ಲಿರು" ಎಂದು ಉತ್ತರಿಸಿದರು. .......,,,,,,,,,,


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 



।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।





No comments:

Post a Comment