ಒಟ್ಟು ನೋಟಗಳು

Tuesday, August 1, 2017

ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 61
'ಶಂಕರಲಿಂಗ ಇದ್ದಾನಲ್ಲ ಅಲ್ಲಿ ಹೋಗು'



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


'ಸಖರಾಯಪಟ್ಟಣದಲ್ಲಿ ನಮ್ಮ ನೆಂಟರು ಇದ್ದರು. ನಾನು ದಾವಣಗೆರೆಯಲ್ಲಿ ವಾಸವಾಗಿದ್ದೆ. ದನ ಕಟ್ಟಿ ಹಾಲು ಮಾರುತ್ತಿದ್ದೆ. ಸಣ್ಣ ಅಂಗಡಿ ಇಟ್ಟೆ, ಹೋಟಲು ಮಾಡಿದ್ದೆ. ಏನು ಮಾಡಿದರೂ ಅವತ್ತಿಂದವತ್ತಿಗೆ ಕಷ್ಟ. ಪರಿಪಾಟಲಿಗೆ ಕೊನೆಯೇ ಇರಲಿಲ್ಲ. ಆದರೆ ಯಾರ ಬಳಿಯೂ ಒಂದು ಪೈಸೆಯನ್ನು ಕೇಳದೆ ಕಷ್ಟದಲ್ಲೇ ಬದುಕುವ ನನ್ನ ಬವಣೆಗೆ ಕೊನೆ ಇಲ್ಲವೇ?... ಎಂದು ಚಿಂತಿಸಿದಾಗ ನನಗೆ ಕಂಡ ಒಂದೇ ಒಂದು ಮಾರ್ಗ - ಸಖರಾಯಪಟ್ಟಣದ ಅವಧೂತರು. ಅವರ ಬಗ್ಗೆ ಸಾಕಷ್ಟು ಕೇಳಿದ್ದೆನಾದರೂ ಕರ್ಮ ಕಳೆಯದೆ ದರ್ಶನವಾಗಿರಲಿಲ್ಲವೇನೋ, ಅವತ್ತು ಚಿಕ್ಕಮಗಳೂರಿಗೆ ಬಂದ ನಾನು, ಸಖರಾಯಪಟ್ಟಣಕ್ಕೆ ಬಂದೆ. ಊರು ಹೊಸದು, ಗುರುಗಳ ಮುಖ - ಮನೆಗಳ ಪರಿಚಯವಿಲ್ಲ. ಆ ಸಣ್ಣ ಊರಿನಲ್ಲೂ ಮತ್ತೊಂದಷ್ಟು ನನ್ನನ್ನು ವಿಧಿ ಅಲೆಸಿತು. ಆಮೇಲೆ ಯಾರದೋ ಮನೆಯ ಬಾಗಿಲಿನಲ್ಲಿ ನಿಂತು ಎದುರಿಗೆ ಇರುವವರನ್ನು - ಸಖರಾಯಪಟ್ಟಣದ ಅವಧೂತರೆಂದರೆ ಯಾರು? ಅವರ ಮನೆ ಎಲ್ಲಿ? ಎಂದು ಮತ್ತೆ ವಿಚಾರಿಸಿದೆ. ಆ ವ್ಯಕ್ತಿ ನನ್ನನ್ನು ವಿಚಿತ್ರವಾಗಿ ಎಂಬಂತೆ ನೋಡುತ್ತಾ 'ಅದೇ ಅಲ್ಲಿ.. ನಿಮ್ಮ ಮುಂದೆ ಹೋದರಲ್ಲ ಅವರೇ ಅವಧೂತರೆಂದರೆ, ಎದುರಿಗಿನ ಮನೆಯೇ ಅವರ ಮನೆ' ಎಂದರು. ಒಂದು ಪಂಚೆಯನ್ನು ಸೊಂಟಕ್ಕೆ ಸುತ್ತಿಕೊಂಡು, ಮುಖವೆಲ್ಲಾ ಗಡ್ಡಮೀಸೆಗಳಿಂದ ತುಂಬಿದ ಒಂದು ಕೈಯಲ್ಲಿ ಒಂದಷ್ಟು ಹೂವು ಇನ್ನೊಂದು ಕೈಯಲ್ಲಿ ಹಾಲಿನ ಲೋಟ ಹಿಡಿದು ಆ ವ್ಯಕ್ತಿ ಸಾಗುತ್ತಿದ್ದರು. ಜೊತೆಗೆ ಎರಡು ನಾಯಿಗಳು ಅವರ ಹಿಂದೆ ಹೋಗುತ್ತಿದ್ದವು. ನಾನೂ ಅವರ ಹಿಂದೆಯೇ ಸಾಗಿದೆ. ಅಲ್ಲಿ ಸುತ್ತ ಮುತ್ತಲಿದ್ದ ದೇವರುಗಳಿಗೆ, ವಿಗ್ರಹಗಳಿಗೆ ಒಂದು ತೊಟ್ಟು ಹಾಲು ಸುರಿದು, ನಾಲ್ಕು ಹೂವು ಹಾಕಿ - ಆ ನಾಯಿಗಳಿಗೂ ಒಂದು ಸ್ವಲ್ಪ ಹಾಲು ಹಾಕಿ ಮುಂದಿನ ದೇವರು, ಗುಡಿಯ ಬಳಿ ಅವರು ಸರಸರನೆ ಸಾಗುತ್ತಿದ್ದು, ಅಲ್ಲೊಂದು ಈಶ್ವರ ದೇವಾಲಯವಿರಬಹುದು... ಅವರು ಒಳ ಹೋಗಿ ಪೂಜೆ ಮುಗಿಸಿ, ಅವರು ಹೊರ ಬರುವಲ್ಲಿ ನಾನು ಅವರ ಕಾಲಿಗೆ ಬಿದ್ದೆ. ಆದರೆ ಅವರು ನನ್ನಿಂದ ತಪ್ಪಿಸಿಕೊಂಡು ಓಡುತ್ತಿದ್ದರು. ನಾನು ಮತ್ತೆ ಅವರ ಹಿಂದೆಯೇ ಹೋದೆ. 'ಯಾಕೋ... ಯಾರೋ.. ನೀನು.... ನನಗ್ಯಾಕೋ ನಮಸ್ಕಾರ ಮಾಡ್ತೀಯಾ. ಯಾಕೋ ಬುದ್ದಿ ಇಲ್ವೇನೋ... ಹೆಣಕ್ಕೆ ಕಣೋ ನೀನು ನಮಸ್ಕಾರ ಮಾಡೋದು... ಯಾರು ಹೇಳಿದ್ರೋ ನಿಂಗೆ ಇಲ್ಲಿ ಬರೋಕೆ?' ಎಂದು ಯದ್ವಾ ತದ್ವಾ ಬೈಯತೊಡಗಿದರು. ನಾನು ದಾವಣಗೆರೆಯಿಂದ ಬಂದಿದ್ದೀನಿ ಅಂತ.. ಏನೋ ಹೇಳಲು ಶುರು ಮಾಡಿದರೆ... 'ನೀನೇನು ಹೇಳ್ತೀಯಾ ಎಲ್ಲಾ ನಂಗೆ ಗೊತ್ತಿದೆ. ಅಲ್ಲೇ ಶಂಕರಲಿಂಗ ಇದ್ದಾನಲ್ಲ. ಅವನ ಹತ್ರ ಹೋಗೋದು ಬಿಟ್ಟು ಇಲ್ಲಿಗೆ ಏಕೆ ಬಂದೆ...' ಅಂತಲೇ ಇದ್ದರೂ ಅದೇನೋ ಅವರ ಹಿಂದೆ ತಿರುಗುತ್ತಲೇ ಇದ್ದೆ... ಅದೇನು ಅವರಿಗೆ ಕರುಣೆ ಬಂದಿತೋ.. ಒಂದು ಒಂದೂವರೆ ಗಂಟೆಯ ನಂತರ.. ಅದ್ಯಾರದೋ ಮನೆಯಲ್ಲಿ ವೈದಿಕ ನಡೀತಿತ್ತು. ಅದು ಮುಗಿದಿತ್ತು ಅಂತ ಕಾಣಿಸುತ್ತೆ... ಅವರ ಮನೆಗೆ ಹೋಗಿ ವಡೆ, ಉಂಡೆ, ಸಿಹಿ ತಿಂಡಿಗಳನ್ನು ಬಾಳೆ ಎಲೆಯಲ್ಲಿ ಇಸಿದುಕೊಂಡು ನನಗೆ ಕೊಟ್ಟು 'ತಿನ್ನು' ಎಂದರು. ಎಲೆ ತುಂಬಾ ಇತ್ತು. ಅದರಲ್ಲಿ ಒಂದೆರಡನ್ನು ಅವರೂ ತಿಂದರು. ಉಳಿದುದನ್ನು ನನ್ನ ಚೀಲದಲ್ಲೇ ಇಟ್ಟುಕೊಳ್ಳಲು ತಿಳಿಸಿದರು. ಮುಂದಿನ ರಸ್ತೆಗೆ ಬಂದರು. ಒಂದು ಕಲ್ಲಿನ ಮೇಲೆ ಕುಳಿತುಕೊಂಡರು. ಎದುರಿಗೆ ಒಂದು ಬೇಲದ ಮರ.. ಸುತ್ತಲೂ ಮುಳ್ಳು ಕಂಟಿಗಳ ಗಿಡಗಳು. 'ನನಗೆ ಒಂದೆರಡು ಬೇಲದ ಹಣ್ಣು ಕಿತ್ತುಕೊಡು' ಎಂದರು. ಇದೆಲ್ಲದರ ಅಭ್ಯಾಸ ನನಗಿಲ್ಲದಿದ್ದರೂ ಮೈಕೈ ಎಲ್ಲಾ ಮುಳ್ಳಿನಿಂದ ತರಚಿಸಿಕೊಂಡು, ಬೇಲದ ಹಣ್ಣನ್ನು ಉದುರಿಸಿ ತಂದು ಕೊಟ್ಟೆ. ನಂತರ ಅರಳಿ ಮರದ ಬುಡದಲ್ಲಿ ಅರಳಿ ಕಡ್ಡಿಗಳು ಬಿದ್ದಿದ್ದವು. 'ಒಂದೈವತ್ತು ಅರಳಿ ಕಡ್ಡಿ ಆರಿಸಿಕೊಡು.. ಒಂದು ಗೇಣಿನದಿರಲಿ' ಎಂದರು. ಅದೂ ಮಾಡಿದೆ. ಮುಂದೆ ಐದು ರೂಪಾಯಿನ ಒಂದು ದಾರದ ಉಂಡೆ ತಂದು ಕೊಡಲು ಹೇಳಿದರು. ಯಾಕಿವೆಲ್ಲಾ ಗುರುನಾಥರು ಮಾಡಿಸುತ್ತಿದ್ದಾರೆ ಎಂಬ ಚಿಂತೆ ಬಂದರೂ ಪ್ರಶ್ನಿಸುವ ಪ್ರಯತ್ನ ಮಾಡಲಿಲ್ಲ. ನಂತರ ಮನೆಗೆ ಕರೆದುಕೊಂಡು ಹೋದರು. ಅಡುಗೆ ಮನೆಯಲ್ಲಿ ಎದುರು ಬದಿರು ಕುಳಿತು ಊಟ ಬಡಿಸಲು ಹೇಳಿದರು. ಗುರುನಾಥರು ಒಂದು ಎಲೆಯ ಮೇಲೆ ಮತ್ತೊಂದು ಎಲೆ ಹಾಕಿಕೊಂಡರು. ನನಗೆ ಒಂದು ಎಲೆ ಹಾಕಿದರು. ಮನೆಯವರು ಬಿಸಿ ಬೇಳೆಬಾತಿನ ತರಹದ ಏನೋ ಅಡುಗೆ ಮಾಡಿದ್ದರು. ತಂದು ಬಡಿಸಿದರು. ಊಟದ ಹಸಿವಿರದಿದ್ದರೂ, ಗುರುಗಳ ಆಜ್ಞೆಯಂತೆ ಮತ್ತೆ ಊಟ ಮಾಡತೊಡಗಿದೆ. ಕಿರುಗಣ್ಣಲ್ಲೇ ಗುರುನಾಥರತ್ತ ನೋಡಿದೆ. ಊಟ ಸ್ವಲ್ಪ ಮಾಡಿ, ಊಟ ಮಾಡುತ್ತಿರುವಂತೆ ಬೆರಳಾಡಿಸುತ್ತಾ, ಕೆಳಗಿನ ಎಲೆಯನ್ನು ಎಳೆದುಕೊಂಡು ಮೊದಲಿನ ಎಲೆಯ ಮೇಲೆ ಹಾಕಿಕೊಂಡರು. ಮನೆಯವರು ಮತ್ತಷ್ಟು ಅವರಿಗೂ ಬಡಿಸಿ, ನನಗೂ ಬಡಿಸಿದರು.... ನನ್ನ ಹೊಟ್ಟೆ ಬಿರಿದು ಹೋಯಿತು. ನಂತರ ಗುರುನಾಥರು ಎಲೆಗಳನ್ನು ತೆಗೆದುಕೊಂಡು ಹಿಂದೆ ಹೋದರು. ನಾನೂ ಹೋದೆ. ತಮ್ಮ ಎಲೆಯ ಊಟವನ್ನು ಅಲ್ಲಿದ್ದ ದನಗಳಿಗೆಲ್ಲಾ ತಮ್ಮ ಕೈಯಾರೆ ತಿನ್ನಿಸಿದರು. ಅವರ ಎಲ್ಲ ರೀತಿಗಳೂ ಅಯೋಮಯವಾಗಿ ಕಾಣುತ್ತಿತ್ತು. ನಂತರ ಒಳಮನೆಯಲ್ಲಿ ನನಗೆ ಮಲಗಲು ಹೇಳಿ... ಗುರುನಾಥರು ಎಲ್ಲಿ ಹೋದರೋ ತಿಳಿಯಲಿಲ್ಲ'. ದಾವಣಗೆರೆಯ ಗುರುನಾಥರ ಭಕ್ತರಾದ ನಾಗರಾಜ್ ಅವರು ಮೊದಲ ಸಾರಿ ಗುರುನಾಥರೊಂದಿಗೆ ಪಡೆದ ಅನುಭವವನ್ನು ಹೀಗೆ ಹಂಚಿಕೊಂಡು ಸುಮ್ಮನಾದರು. 

ಪ್ರಿಯ ಸತ್ಸಂಗಾಭಿಮಾನಿಗಳೇ.... ಗುರುನಾಥರ ಎಲ್ಲ ಕಾರ್ಯಗಳ ಹಿಂದೆ ಒಂದು ಯಾವುದೋ ಉದ್ದೇಶ, ಯಾರನ್ನೋ ಉದ್ಧಾರ ಮಾಡುವ ಕೆಲಸ ಸಾಗಿಯೇ ಇರುತ್ತದೆ. 

ತಮ್ಮ ಬಳಿ ಆರ್ತರಾಗಿ ಬಂದವರ ಸಂಕಟಗಳನ್ನು, ಕರ್ಮಗಳನ್ನು ನೀಗಿಸುವ ಒಂದು ಸುಲಭ ದಾರಿಯನ್ನು ಅವರು ತೋರಿಸಿರುತ್ತಾರೆ. ಅದೇನೆಂದು ನೀವೂ ಊಹಿಸಬಹುದು. ನಾಳಿನ ಸತ್ಸಂಗಕ್ಕೂ ಬನ್ನಿ. ನಾಗರಾಜ ಅವರಿಗೇನು ಸಿಕ್ಕಿತು, ಅವರೇನು ಕಳೆದುಕೊಂಡರು, ಇವೆಲ್ಲವನ್ನೂ ನಾಳೆಯ ಸತ್ಸಂಗ ಉತ್ತರಿಸಬಹುದೇನೋ? 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

No comments:

Post a Comment