ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 70
ಬನವಾಸಿಯಲ್ಲಿ ಗುರುನಾಥರ ದರ್ಶನ
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುನಾಥರ ಬಗ್ಗೆ ಬಹಳಷ್ಟು ಕೇಳಿದ್ದ ಶಂಕರಲಿಂಗ ಭಗವಾನರ ಶಿಷ್ಯರೊಬ್ಬರು ಗುರುನಾಥರ ದರ್ಶನ ಪಡೆದದ್ದು, ಮತ್ತೊಬ್ಬ ಯತಿಗಳು ತೀರ್ಥಕ್ಷೇತ್ರಗಳಿಗೆ ಶಿಷ್ಯ ಪರಿವಾರವನ್ನು ಕರೆದೊಯ್ದಾಗ, ವಿವಿಧ ಕ್ಷೇತ್ರಗಳನ್ನು ದರ್ಶನ ಮಾಡುತ್ತಾ ಬಂದ ಈ ಶಿಷ್ಯ ಸಮೂಹ ಬನವಾಸಿಯ ಮಧುಕೇಶ್ವರನ ಎದುರಿನಲ್ಲಿ ಗುರುನಾಥರನ್ನು ಕಂಡು - ಭಗವಂತನನ್ನು ನೋಡುವುದನ್ನು ಮರೆತು ಗುರುನಾಥರ ಬಳಿ ನೆರೆದ ವಿಚಾರವೇ ಇಂದಿನ ಸತ್ಸಂಗದ ಸಾರ. ಇದನ್ನು ಗುರುಭಕ್ತರಾದ ನಾಗಭೂಷಣ್ ಅವರು ನಿತ್ಯ ಸತ್ಸಂಗಕ್ಕೆ ಪ್ರಸಾದಿಸಿದ ರೀತಿ ಹೀಗಿದೆ:
"ನಾವು ಶಂಕರಲಿಂಗನ ಪರಮ ಭಕ್ತರೆಂದು ಹೇಳಿಕೊಳ್ಳಲು ಹೆಮ್ಮೆಪಟ್ಟರೂ, ಗುರುನಾಥರ ಬಗ್ಗೆಯೂ ಅತ್ಯಂತ ಗೌರವ ನಮ್ಮಗಳ ಮನದಲ್ಲಿತ್ತು. ಶಂಕರಲಿಂಗರಿಗೆ ಗುರುನಾಥರೆಂದರೆ ವಾತ್ಸಲ್ಯ, ಗುರುನಾಥರಿಗೆ ಶಂಕರಲಿಂಗರೆಂದರೆ ಅನನ್ಯ ಭಕ್ತಿ.. ಹಾಗಾಗಿ ಗುರುನಾಥರನ್ನು ನೋಡುವ ಪೂರ್ವದಲ್ಲೇ ಅವರ ಭಕ್ತರಾಗಿಬಿಟ್ಟಿದ್ದೆವು ನಾವುಗಳೆಲ್ಲಾ. ಗುರುದರ್ಶನಕ್ಕಾಗಿ ಕಾಯುತ್ತಿತ್ತು ಮನಸ್ಸು. ಸಂದರ್ಭ ಕೂಡಿ ಬಂದಿರಲಿಲ್ಲವೇನೋ ? ಎಲ್ಲ ಒಳ್ಳೆಯ ಕೆಲಸಗಳಿಗೆ ಸುಮುಹೂರ್ತ ಕೂಡಿ ಬರಬೇಕಿದೆ. ನಿರಂತರ ಸತ್ಸಂಗದಲ್ಲಿದ್ದಾಗಲೇ ಸತ್ಪುರುಷರ ದರ್ಶನಲಾಭವೂ ಆಗುವುದೆನ್ನುತ್ತಾರೆ. ಹೀಗೆ ಒಮ್ಮೆ ಚಿತ್ರದುರ್ಗ ಕೂಡಲಿ ಶೃಂಗೇರಿ ಮಠದ ಗುರುಗಳು ಸುಮಾರು ನೂರಾರು ಶಿಷ್ಯರುಗಳನ್ನು ಕರೆದುಕೊಂಡು ಸ್ವರ್ಣವಲ್ಲಿ, ಸೋಂದೆ ಮಠಗಳಿಗೆ ಹೊರಟಿದ್ದರು. ಅದರಲ್ಲಿ ನಾನು ನಮ್ಮ ಸ್ನೇಹಿತರುಗಳೂ ಇದ್ದೆವು. ಒಂದು ದಿನ ಇದ್ದು, ಅಲ್ಲಿಯ ಪೂಜೆ ಪುನಸ್ಕಾರಗಳನ್ನು ಮುಗಿಸಿ ಬೆಳಿಗ್ಗೆ ಹೊರಟಾಗ ಗಂಜಿಯೂಟದ ಪ್ರಸಾದ ನಮಗೆಲ್ಲಾ ಸಿಕ್ಕಿತು. ನಮ್ಮ ಚಿತ್ರದುರ್ಗದ ಕಡೆ ಗಂಜಿ ಊಟದ ಪರಿಪಾಠವಿಲ್ಲ. ಹಾಗಾಗಿ ನನ್ನ ಮನಸ್ಸಿನಲ್ಲಿ ಸುಮ್ಮನೆ ಒಂದು ವಿಚಾರ ತಟ್ಟನೆ ಹೊಳೆದು ಮಾಯವಾಯಿತು. 'ನಮ್ಮಲ್ಲಿಯಂತೆ ಉಪ್ಪಿಟ್ಟು ತಿಂಡಿಯಾಗಿ ದೊರೆತಿದ್ದರೆ, ಎಷ್ಟು ಚೆನ್ನಿತ್ತು?' ಇದು ಆಕ್ಷೇಪಣೆಯಲ್ಲ ಮನಸ್ಸಿನ ಒಂದು ಲಹರಿ. ಅದರಕ್ಕಾದಷ್ಟೇ ಬಂದು ಹೋಗಿತ್ತು. ಮುಂದೆ ಅಲ್ಲಿಂದ ನಮ್ಮ ಪ್ರವಾಸ ಗುರುಗಳೊಂದಿಗೆ ಬನವಾಸಿಗೆ. ಬನವಾಸಿಗೆ ಬಂದ ನಾವು ಮಧುಕೇಶ್ವರ ದೇವಾಲಯಕ್ಕೆ ಹೋಗಬೇಕೆಂದು ಆಲೋಚನೆ ಮಾಡುವಲ್ಲಿ ಶಿಷ್ಯ ಸಮೇತರಾಗಿ ಗುರುನಾಥರು ಕಂಡುಬಂದರು. ಎಲ್ಲಿಯ ಸಖರಾಯಪಟ್ಟಣ ಗುರುನಾಥರು, ಎಲ್ಲಿಯ ಬನವಾಸಿ? ಇದೊಂದು ಸದಾವಕಾಶ, ಒಟ್ಟಿನಲ್ಲಿ ನಮಗೆಲ್ಲಾ. ಎಲ್ಲರೂ ಮಧುಕೇಶ್ವರನನ್ನು ಬಿಟ್ಟು ಗುರುನಾಥರ ಬಳಿ ಬಂದೆವು. ಎಲ್ಲರೂ ನಮಸ್ಕರಿಸಿದೆವು. ಗುರುನಾಥರೆಂತಹ ಸರಳರೆಂದರೆ ಅವರಿದ್ದ ಜಾಗವೇ - ಅವರಿಗೆ ಸಿಂಹಾಸನ. ಅವರಿದ್ದ ಪರಿಸರವೇ ಅವರ ದರ್ಬಾರು. ಗುರುನಾಥರಿದ್ದೆಡೆಯೇ ಎಲ್ಲ ಊಟ ತಿಂಡಿ ತೀರ್ಥ ಪ್ರಸಾದಗಳು ಪ್ರತ್ಯಕ್ಷವಾಗಿಬಿಡುತ್ತಿದ್ದವು.
ಮಧುಕೇಶ್ವರನ ದೇವಾಲಯದ ಕಟ್ಟೆಯ ಮೇಲೆ ಗುರುನಾಥರು ಕುಳಿತರು. ನಾವು, ಅವರ ಶಿಷ್ಯರೆಲ್ಲಾ ಗುರುನಾಥರ ಸುತ್ತಾ ಕುಳಿತು, ಅವರಿಂದ ಅದೇನು ಮಹಾ ಉಪದೇಶ ಬರುತ್ತದೋ ಎಂದು ಭಕ್ತಿಯಿಂದ ಕಾಯುತ್ತ, ಕಾತರರಾಗಿ ಕುಳಿತೆವು. ಅನೇಕ ಸ್ವಾರಸ್ಯಕರವಾದ ವಿಚಾರಗಳನ್ನು ಅವರು ಹೇಳತೊಡಗಿದರು. ಹೀಗೆಯೇ ಇದ್ದಕ್ಕಿದ್ದಂತೆ ಅಲ್ಲಿ ಕುಳಿತವರೆಲ್ಲರ ಕೈಗೆ ಹಬೆಯಾಡುವ ಉಪ್ಪಿಟ್ಟಿನ ತಟ್ಟೆಗಳು ಬಂದವು. ನಮಗಂತೂ ಪರಮಾಶ್ಚರ್ಯ. ನಾವು ಅಂದುಕೊಂಡ ವಿಚಾರ ಗುರುನಾಥರಿಗೆ ಅದು ಹೇಗೆ ತಿಳಿಯಿತು? ಸಮರ್ಥನಾದ, ಶಿಷ್ಯ ಕೋಟಿಯ ಹಿತ ಚಿಂತನೆ ಮಾಡುವ ಗುರುನಾಥರಿಗೆ ಅರಿಯದ್ದೇನಿದೆ. ಎಲ್ಲರಿಗೂ ಪ್ರೀತಿಯಿಂದ ಉಪ್ಪಿಟ್ಟು ತಿನ್ನಲು ಹೇಳಿದರು. ಜೊತೆಗೆ 'ಗುರುವೆಂದರೆ ಅಸಾಮಾನ್ಯ, ಗುರುವಿನ ಸೇವೆ ಸಿಗುವುದು ದುರ್ಲಭ. ಸಾರ್ಥಕನಾದ ಗುರುವಿನ ಲಕ್ಷಣಗಳು, ಅವರನ್ನು ಆರಾಧಿಸುವ ರೀತಿ ನೀತಿಗಳ ಬಗ್ಗೆ' ತುಂಬಾ ವಿಶದವಾಗಿ ತಿಳಿಸಿದರು. ಚಿತ್ರದುರ್ಗ ಮಠದ ಗುರುಗಳ ಜೊತೆ ಹೊರಟ ನಾವು ಹೀಗೆ, ಇಲ್ಲಿ ಹೇಗೆ ಗುರುನಾಥರನ್ನು ಕಂಡಿವಿ, ಎಂಬ ನನ್ನ ವಿಚಾರಕ್ಕೆ ಆಮೇಲೆ ತಿಳಿದಿದ್ದೇನೆಂದರೆ - ಬನವಾಸಿ ಬಾರಿಯ ಕದಂಬರ ರಾಜಧಾನಿ ಮಾತ್ರವಲ್ಲ, ಮಧುಕೇಶ್ವರನ ನೆಲೆವೀಡು ಮಾತ್ರವಲ್ಲ, ಅದನ್ನು ಮೀರಿ ಶ್ರೀ ಶ್ರೀ ಶಂಕರಲಿಂಗ ಭಗವಾನರ ಗುರುಗಳಾದ ಶ್ರೀ ಶ್ರೀ ದತ್ತರಾಜ ಯೋಗಿಂದ್ರರ ಜನ್ಮ ಸ್ಥಳ, ಸಾಧನಾ ಸ್ಥಳ. ಹೀಗಾಗಿ ಶ್ರೀ ಗುರು, ಪರಮಗುರುಗಳೆಲ್ಲಾ ಅಲ್ಲಿ ನೆಲೆಸಿರುವುದರಿಂದಲೇ, ಗುರುನಾಥರೂ ಅಲ್ಲಿಗೆ ಬಂದಿದ್ದು, ನಮಗೆಲ್ಲ ಸಿಕ್ಕಿ ಆಶೀರ್ವದಿಸಿದರು ಎಂಬುದು ತಿಳಿಯಿತು. ಗುರುನಾಥರು ಆಡಿದ, ಗುರು ಎಂದರೆ ಭಾವ ಅದು ಶರೀರ ಮಾತ್ರವಲ್ಲ ಎಂದ ಮಾತು ಎಲ್ಲರ ಮನ ನಾಟಿತ್ತು. ಮತ್ತೆ ಗುರುನಾಥರ ಭೇಟಿ ಚಿಕ್ಕಮಗಳೂರಿನಲ್ಲಿ ಎರಡು ಮೂರು ಸಾರಿ ಆಯಿತು. ನಾವು ಶಂಕರಲಿಂಗ ಭಜನಾ ಮಂಡಳಿಯಿಂದ ಹೋಗಿದ್ದೆವು. ನಮ್ಮನ್ನೆಲ್ಲಾ ಕೂರಿಸಿ 'ಭಜನೆ ಮಾಡಿರಯ್ಯಾ. ನಿಮ್ಮ ಭಜನೆ ಇಂಪಾಗಿರುತ್ತೆ' ಎಂದು ಅನೇಕ ಭಜನೆಗಳನ್ನು ಒಂದಾದ ಮೇಲೆ ಒಂದು ಹೇಳಿಸಿದರು. ಅದೆಂಥಹ ತಟ್ಟೆ ಇಡ್ಲಿಯನ್ನು ಗುರುನಾಥರು ನೀಡಿದರೆಂದರೆ ಅಂತಹ ಸವಿಯಾದತಟ್ಟೆ ಇಡ್ಲಿ ಇದುವರೆಗೆ ನಾವು ತಿಂದಿಲ್ಲ. ಒಂದಾದ ಮೇಲೆ ಒಂದರಂತೆ ತಿಂಡಿಗಳ ಸರಬರಾಜು ಆಗುತ್ತಿತ್ತು. ನಮ್ಮ ಬಳಿ ಇದ್ದ ಚೀಲಗಳೆಲ್ಲಾ ಭರ್ತಿಯಾದವು. ರವಿ ಎನ್ನುವ ಭಕ್ತರ ಮನೆಗೆ ಕರೆದೊಯ್ದರು. ಮತ್ತೊಬ್ಬ ಅಯ್ಯಂಗಾರರ ಮನೆಗೆ ಕರೆದೊಯ್ದು ಭಜನೆ ಮಾಡಿಸಿದರು. ನನ್ನನ್ನು ಗುರುನಾಥರು 'ಅಪ್ಪಾವರಿಗೆ ಸನ್ಯಾಸ ಕೊಟ್ಟವರ್ಯಾರಪ್ಪಾ' ಎಂದು ಪ್ರಶ್ನಿಸಿದರು. ನಾನು ಚಂದ್ರಶೇಖರ ಭಾರತಿಗಳೆಂದೆ. ನಮ್ಮನ್ನೆಲ್ಲಾ ಆ ಮನೆಯಲ್ಲಿರುವ ಚಂದ್ರಶೇಖರ ಭಾರತಿಗಳ ವೇದಿಕೆ ದರ್ಶನ ಮಾಡಿಸಿದರು. ಹೇಗಿದೆ ನೋಡಿ ಗುರುಕೃಪೆ. ಶೃಂಗೇರಿಗೆ ಹೋಗದೇ, ಇದ್ದಲ್ಲೇ ಚಂದ್ರಶೇಖರ ಭಾರತೀ ಸ್ವಾಮಿಗಳ ದರ್ಶನ, ಆಶೀರ್ವಾದವನ್ನು ಗುರುನಾಥರು ನಮಗೆ ಕೊಡಿಸಿದ್ದರು. 'ದಂಪತಿಗಳ ಸಮೇತ ಈ ವೇದಿಕೆ ದರ್ಶನ ಮಾಡಿ ನಮಿಸಿ ಬರಬೇಕೆಂದರು' ಗುರುನಾಥರು. 'ನಾನು ಹೇಳುವವರೆಗೆ ಯಾರೂ ಹೋಗಬಾರದು' ಎಂದು ಅದೇಕೆ ಅಂದರೋ ತಿಳಿಯದು. ಆಮೇಲೆ ಕೊನೆಗೆ 'ಇನ್ನು ಹೊರಡಬಹುದು ಎಂದು ಆಶೀರ್ವದಿಸಿದರು'. ನಾವು ಊರು ಮುಟ್ಟುವವರೆಗೆ ಹತ್ತಾರು ಫೋನುಗಳು ಗುರುನಾಥರ ಕಡೆಯಿಂದ ಬರುತ್ತಲೇ ಇತ್ತು. ನಾವು ಊರು ತಲುಪಿದ ವಿಚಾರ ತಿಳಿದ ಮೇಲೆಯೇ ಗುರುನಾಥರು ಸುಮ್ಮನಾದರು. ಆಮೇಲೆ ನಮಗೆ ತಿಳಿದಿದ್ದು, ರಾತ್ರಿಯ ಹೊತ್ತಿನಲ್ಲಿ ಆ ಮಾರ್ಗಗಳಲ್ಲಿ ದರೋಡೆಗಳಾಗುತ್ತವೆ ಎಂದು, ತಮ್ಮ ಬಳಿ ಬಂದವರ ಸುರಕ್ಷತೆಯಲ್ಲಿ ಗುರುನಾಥರು ಇಂತಹ ಜವಾಬ್ದಾರಿ ಹೊತ್ತಿರುತ್ತಿದ್ದರೆಂದರೆ ಚಿಂತಿಸಿದರೆ ಆಶ್ಚರ್ಯವಾಗುತ್ತದೆ'. ಅನುಭವವಾಣಿ ಹೀಗೆ ಗಂಗಾ ನದಿಯಂತೆ ಹರಿಯಿತು.
ಪ್ರಿಯ ಗುರುಬಾಂಧವ ಸತ್ಸಂಗಾಭಿಮಾನಿಗಳೇ, ಗುರುನಾಥರ ಅದೆಷ್ಟು ಮುಖಗಳಿದೆಯೋ... ಎಲ್ಲ ಭಕ್ತರ ದರ್ಶನ ಸಿಗಲಿ, ಕಥನ ಬರಲಿ, ನಮ್ಮ ಮನ ಹಸನಾಗಲಿ. ಒಂದೊಂದು ಮುಖದಲ್ಲಿ, ಅದರ ಹೃದಯಗಳಲ್ಲಿ ಅಡಗಿದ ಸದ್ವಿಚಾರಗಳು ಧಾರೆ ಪ್ರಪಂಚದಲ್ಲಿರುವ ಎಲ್ಲಾ ಗುರುಬಾಂಧವರ ಹೃದಯ ತುಂಬಿ ಸಂತಸ ನೀಡಲಿ...
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment