ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 77
ಯಾರಲ್ಲಿ ಏನು ನುಡಿಸುತ್ತಾರೋ ಗುರುನಾಥರು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಅನೇಕ ಸಾರಿ ತಮ್ಮ ಮನೆಗೆ ಬಂದ ಅವಧೂತರ ಬಗ್ಗೆ ಬಹು ದೊಡ್ಡ ಗೌರವ ಭಾವ ಹೊಂದಿರುವ, ಬನವಾಸಿಯ ಗುರುಬಂಧುಗಳೊಬ್ಬರು ಗುರುನಾಥರ ಬಗ್ಗೆ ಹೀಗೆ ನಮ್ಮ ನಿತ್ಯ ಸತ್ಸಂಗಕ್ಕೆ ಅನುಭವ ರಸದೌತಣ ನೀಡಿದರು.
"ಪೃಥ್ವಿಯನ್ನೇ ದತ್ತನ ಮನೆ ಮಾಡಿಕೊಂಡಿರುವ, ಲೋಕೋಪಚಾರಕ್ಕಾಗಿ ಒಂದು ತುಂಡು ಪಂಚೆಯನ್ನುಟ್ಟ, ಒಬ್ಬ ಲೋಕೋತ್ತರ ಅವಧೂತರು ಸಖರಾಯಪಟ್ಟಣದ ಸ್ವಾಮಿಗಳು. ಉನ್ನತವಾದ ದತ್ತನ ಸ್ವರೂಪವನ್ನೇ ನಾನು ಅವರಲ್ಲಿ ಕಂಡಿದ್ದೆ. ನಮ್ಮ ಮನೆಗೆ ಎಂದರೆ ಬನವಾಸಿಯ ದತ್ತ ರಾಜಯೋಗಿಂದ್ರರ ತಪಸ್ಥಳವಾದ ಈ ಮನೆಗೆ ಗುರುನಾಥರು ಅನೇಕ ಸಾರಿ ಬಂದಿದ್ದಾರೆ. ಆ ತಪಸ್ವಿಗಳ ಜೊತೆ ಈ ಅವಧೂತರು ಅದೇನೇ ನನ್ನ ಸಂಭಾಷಿಸುತ್ತಿದ್ದರೋ, ಅದು ಅವರೊಬ್ಬರಿಗೇ ತಿಳಿದಿದೆ. ಈ ಮನೆಯೆಂದರೆ ಗುರುನಾಥರಿಗೆ ತುಂಬಾ ಪ್ರೀತಿ. ಒಮ್ಮೆ ಅವರ ವಯಸ್ಸಾದ ತಾಯಿಯವರನ್ನು ಕರೆತಂದಿದ್ದರು. ನಿಮಗೆ ಮೇಲೆ ಮೆಟ್ಟಿಲು ಹತ್ತಿ ಬರಲಿಕ್ಕೆ ಆಗುವುದೋ ಇಲ್ಲವೋ... ಎಂದು ಯಾರೋ ಒಬ್ಬರು ಅನುಮಾನಿಸಿದಾಗ 'ಏನಾಗಲ್ಲ ನೀನು ಮೇಲಕ್ಕೆ ಮೆಟ್ಟಿಲು ಹತ್ತಮ್ಮ, ನಾನು ಜೊತೆಗೆ ಇದ್ದೀನಿ' ಎಂದು ಗುರುನಾಥರು ಜೊತೆಗಿದ್ದು, ಒಬ್ಬ ಸತ್ಪುತ್ರ ತನ್ನ ತಾಯಿಗೆ ಮಾಡಬೇಕಾದ ಸೇವೆ, ಸಂರಕ್ಷಣೆಯನ್ನು ಅವರು ಮಾಡಿದುದನ್ನು ನೋಡಿ, ನಾವು ಕಲಿಯಬೇಕಾದ್ದು ಬಹಳಷ್ಟಿದೆ. ಎಲ್ಲರಿಗೂ ಮಾರ್ಗದರ್ಶಕರಾಗಿ, ದತ್ತನ ಸ್ವರೂಪದಲ್ಲಿ ಬಹುದೊಡ್ಡ ಸಾಧಕರೂ, ಅವಧೂತರೂ ಆಗಿದ್ದವರು ಗುರುನಾಥರು. ಅಂತಹವರ ಪಾದಧೂಳು ಈ ಮನೆಯಲ್ಲಿ ಇರುವುದು ನಮ್ಮ ಪೂರ್ವಜರು ಮಾಡಿದ ಪುಣ್ಯಶೇಷದಿಂದಾಗಿ ಎಂಬುದು ನನ್ನ ಅನಿಸಿಕೆ. ದೈಹಿಕವಾಗಿ ಅವರು ನಮ್ಮಿಂದ ದೂರವಾಗಿದ್ದರೂ ಕೂಡಾ, ಇಂದೂ ಎಲ್ಲ ಭಕ್ತರೊಂದಿಗಿನ ಭಾವನಾತ್ಮಕ ಸಂಬಂಧ ಹೊಂದಿ, ಎಲ್ಲರ ಮಾರ್ಗದರ್ಶನ, ರಕ್ಷಣೆ ಮಾಡುತ್ತಿದ್ದಾರೆಂಬುದೂ ಎಲ್ಲರ ಅನಿಸಿಕೆ ಹಾಗೂ ನನ್ನ ನಂಬಿಕೆ. ನಾವು ಶಬ್ದಗಳಿಂದ ಹೇಳು ಅಸಾಧ್ಯ. ಅದು ಅನುಭವಿಸಿಯೇ ತೀರಬೇಕು. ಗುರುನಾಥರು ಎಂತಹವರು ಎಂಬುದನ್ನು ಈ ದತ್ತನ ಮನೆಗೆ ಅವರು ಬಂದಿದ್ದು, ಕೆಲವು ಸಲವಾದರೂ, ಪೃಥ್ವಿಯ ಎಲ್ಲ ಮನೆಗಳೂ ದತ್ತನ ಮನೆ ಎಂದೇ ಸಂಭ್ರಮಿಸುವ ಅನನ್ಯ ಪುರುಷರು ಗುರುನಾಥರಾಗಿದ್ದರು. ಕಲ್ಲಿನಂತೆ ಕಾಣುವ ಕಲ್ಲಿನಲ್ಲಿ ಅಡಗಿದ ಸಕ್ಕರೆಯ ಸಿಹಿ ಜಗಿದ ಭಕ್ತನಿಗೆ ಮಾತ್ರ ಆಗುವಂತೆ, ಜಗಿದವನಿಗೆ ಸವಿರಸ ನೀಡುವಂತೆ, ಜಗಿದ ಭಕ್ತನ ಜೀವನ ಉದ್ಧಾರ ಮಾಡಿದ ಪರಮಾತ್ಮ ಸ್ವರೂಪದ ಗುರುನಾಥರ ದೇಹ ಕಾಣದೇ ಇದ್ದಾಗ ಅನೇಕ ಜನಕ್ಕೆ ಒಂದು ಅನಾಥ ಪ್ರಜ್ಞೆಯ ಅರಿವಾಯಿತು".... ಎಲ್ಲಾ ವಿಧಿಯಾಟ, ಪ್ರಕೃತಿಗೆ ತಲೆಬಾಗುವುದು ಅನಿವಾರ್ಯ. ಅದೇ ಸತ್ಯ.
ಬನವಾಸಿಯ ಶ್ರೀಯುತ ತ್ರಯಂಬಕೇಶ್ವರ ನಾಡಿಗರು, ದತ್ತರಾಜಯೋಗಿಂದ್ರ ಮುಂದಿನ ಪೀಳಿಗೆ ವಯಸ್ಸಾದ ಗುರುಭಕ್ತರಾದ ಅವರಿಗೆ, ಗುರುನಾಥರ ಅಗಲಿಕೆ ತುಂಬಾ ನೋವನ್ನು ನೀಡಿದ್ದರೂ, ಅವರು ಇಲ್ಲಿ ಬಂದಾಗಿನ, ತಮ್ಮ ಮನೆಯಲ್ಲಿ, ತಮ್ಮೊಂದಿಗೆ, ಕುಟುಂಬದವರು, ಶಿಷ್ಯ ಪರಂಪರೆಯನ್ನು ಒಳಗೊಂಡು, ಗುರುನಾಥರು ಬಂದಾಗಿನ ನೆನಪುಗಳನ್ನು ಹೀಗೆ ತಂದುಕೊಂಡರು.
ಮುಂದೆ ಗುರುನಾಥರ ಮಹಾನಿರ್ವಾಣದ ದಿನವೂ ಬನವಾಸಿಯಿಂದ ನಾಡಿಗರು ಹೋಗಿದ್ದರು. ಆನಂತರ ವೈಕುಂಠದ ದಿವಸವೂ ಇದ್ದು ಎಲ್ಲಾ ನೋಡುವ ಅವಕಾಶವೂ ಇವರಿಗೆ ಸಿಕ್ಕಿತು. ಗುರುನಾಥರು ಮತ್ತು ಈ ನಾಡಿಗರ ಅನ್ಯೋನ್ಯತೆ, ಗುರು ಬಂಧುತ್ವ, ಎಷ್ಟು ಗಹನವಾಗಿತ್ತೆಂದರೆ, ವೈಕುಂಠದ ದಿನ ಶೃಂಗೇರಿಯಿಂದ 12 ಜನ ಶ್ರವಣರು ಬಂದಿದ್ದರು. ಗುರುನಾಥರ ಬಗ್ಗೆ ಮಾತನಾಡಲು, ಗುರುನಾಥರೇ ನಾಡಿಗರವರಿಗೆ ಒಂದು ಅವಕಾಶ ಒದಗಿಸಿಕೊಟ್ಟರೇನೋ ಎಂದವರು ಭಾವಿಸುತ್ತಾರೆ. "ಅಂದು ಪ್ರಸಾದದ ವ್ಯವಸ್ಥೆಯನ್ನು ಬೆಂಗಳೂರಿನ ಗುರುಬಂಧುಗಳು ನೆರವೇರಿಸಿದ್ದರು. ಅದು ಸಾಮಾನ್ಯವಾದ ಪ್ರಸಾದವಾಗಿರಲಿಲ್ಲ. ಅಮೃತೋಪಮಯವಾದ ಪ್ರಸಾದವಾಗಿತ್ತು ಗುರುನಾಥರ ದಯೆಯಿಂದ ಎನ್ನುತ್ತಾರೆ" ನಾಡಿಗರು ನೆನಪಿಸಿಕೊಂಡು.
"ಗುರುವು ಎಲ್ಲರ ಸ್ವತ್ತು. ಸೇವಿಸಿದವರಿಗೆ ಅದು ಗೊತ್ತು. ಗುರುನಾಥರ ಅಂತಿಮ ಯಾತ್ರೆಯಲ್ಲಿ ಯಾರಿಗೆ ಅಧಿಕಾರ ಇದೆ - ಯಾರಿಗಿಲ್ಲ? ಎಂಬ ಪ್ರಶ್ನೆ ಕೆಲವರಿಗೆ ಮನದಲ್ಲಿ ಎದ್ದಿರಬಹುದು. ಅಂದು ಗುರುನಾಥರ ಅಂತಿಮ ಯಾತ್ರೆಗೆ ಬಂಡ ಎಲ್ಲ ಶಿಷ್ಯರ ದುಃಖ, ತೊಳಲಾಟ, ಆವೇದನೆ - ಆತ್ಮ ಬಂಧುವನ್ನು ಕಳೆದುಕೊಂಡಿದ್ದಕಿಂತ ಅಧಿಕವಾಗಿತ್ತು. ಕೆಲವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಜಿಜ್ಞಾಸೆ ಮನದಲ್ಲಿ ಎದ್ದಿತ್ತೇನೋ?"
"ಅವತ್ತು ಏನಾಯಿತೋ ನನಗೆ ಗೊತ್ತಿಲ್ಲ. ಅಂದು ವೈಕುಂಠಕ್ಕೆ ಬಂಡ ಹನ್ನೆರಡು ಜನ ಶ್ರವಣರು ಬಂದಿದ್ದರು. ಅವರೇನಾದರೂ ಮಾತನಾಡಬೇಕಿತ್ತು ಆಶೀರ್ವಚನವಾಗಿ. ಆದರೆ, ನನಗೆ ಅಂದಲ್ಲಿ ಗುರುನಾಥರು ಅದೇಕೆ ಹೀಗೆ ನುಡಿಸಿದರೋ ನಾನರಿಯೆ". ಅವರು ಪ್ರಪಂಚದ ಅಪ್ಪ... ಅಪ್ಪನಿಗೆ ಎಲ್ಲ ಭಕ್ತರೂ ಮಕ್ಕಳೇ... ಹಾಗಾಗಿ ಎಲ್ಲ ಮಕ್ಕಳಿಗೂ ಅಪ್ಪನ ಅಂತ್ಯೇಷ್ಟಿ, ಕರ್ಮ ನಡೆಸುವ ಅಧಿಕಾರವನ್ನು ಗುರುನಾಥರೇ ನೀಡಿರುತ್ತಾರೆ. ಅವರೇನು ನಡೆಸಿರುತ್ತಾರೋ ಅದು ಧರ್ಮ ಸಮ್ಮತವೂ, ಶಾಸ್ತ್ರ ಸಮ್ಮತವೂ ಆಗಿರುತ್ತದೆ. ಇದು ನಮ್ಮ ಬಾಹ್ಯ ಚಕ್ಷುವಿಗೆ ಅಸಂಬದ್ಧವೆನಿಸಿದರೂ ಗುರುನಾಥರ ದೃಷ್ಟಿಯಲ್ಲಿ ನಡೆದುದೆಲ್ಲಾ ಸುಸಂಬದ್ಧವೇ. ಹಾಗಾಗಿ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ, ಅದರ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು, ಸದ್ಗುರುನಾಥರ ಬಗ್ಗೆ ಎಂದೆಂದೂ ಚಿಂತನ ಮಾಡುವುದೇ ಸರಿ. ಅದರಲ್ಲೇ ನಮ್ಮ ಜನ್ಮ ಸಾರ್ಥಕತೆ ಇದೆ".
ನಾಡಿಗರ ಬಾಯಿಂದ ಈ ಎಲ್ಲ ನುಡಿಗಳು ಅದು ಹೇಗೆ ಬಂದವೋ ಅವರಿಗೂ ತಿಳಿಯದು. ಒಬ್ಬ ಜ್ಞಾನ, ವಯೋವೃದ್ಧರಾಗಿ, ಗುರುಸೇವಕರಾಗಿ, ಗುರು ಪರಂಪರೆಯಲ್ಲಿ ಬಂದವರಾಗಿ ಅವರಿಂದ ಈ ನುಡಿಗಳನ್ನು ಗುರುನಾಥರೇ ಆಡಿಸಿದ್ದಾರೆ ಎಂದು ಅನೇಕ ಜನ ನೆರೆದಿದ್ದ ಗುರುನಾಥರ ಭಕ್ತರು ಅಭಿಪ್ರಾಯಪಟ್ಟರಂತೆ.
ಪ್ರಿಯ ಗುರು ಬಾಂಧವ ಸತ್ಸಂಗಾಭಿಮಾನಿಗಳೇ, ಕೆಲವೊಂದು ಸಮಯದಲ್ಲಿ ಯಾರೇನು ಮಾಡಬೇಕು? ಯಾರೇನು ಹೇಳಬೇಕೆಂಬ ಸಮಸ್ಯೆ ಉಂಟಾದಾಗ ಗುರುನಾಥರ ದಿವ್ಯ ಚೇತನ ಹೀಗೆ ದಾರಿ ತೋರುತ್ತದೇನೋ. ಎಂದೆಂದೂ ವಿಶ್ವಾತ್ಮರಾಗಿ, ನಿತ್ಯ ಸತ್ಯರಾಗಿರುವ ಗುರುನಾಥರು ಅದೆಷ್ಟು ಜನಕ್ಕೆ ಇಂತಹ ಅನುಭವ, ಮಾರ್ಗದರ್ಶನ ಇಂದೂ ನೀಡುತ್ತಿದ್ದಾರೆ. ನಾಳೆಯೂ ನಮ್ಮೊಂದಿಗೆ ಇರುವಿರಲ್ಲ ಗುರುನಾಥರ ಸತ್ಸಂಗಕ್ಕಾಗಿ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment