ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 78
ಯತಿ ಪ್ರೇಮಿ ಗುರುನಾಥರು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
ಗುರುನಾಥರಿಗೆ ಯಾರಾದರೂ ತಮ್ಮ ಮನೆಗೆ ಯತಿಗಳು, ಸನ್ಯಾಸಿಗಳು, ಬರುತ್ತಾರೆಂದರೆ ಅವರ ಸಂಭ್ರಮ ನೋಡುವಂತಹುದು. ಅದೆಷ್ಟೆಷ್ಟು ಉತ್ತಮ ರೀತಿಯ ಸವಲತ್ತು, ಸೇವೆ, ಸ್ವಾಗತ ಮಾಡಬಹುದೋ, ಅದನ್ನೆಲ್ಲಾ ಕ್ಷಣಾರ್ಧದಲ್ಲಿ ಮಾಡಿಕೊಂಡು ಅವರನ್ನು ಭವ್ಯ ರೀತಿಯಲ್ಲಿ ಸ್ವಾಗತಿಸುತ್ತಿದ್ದುದು ಅನೇಕರ ಅನುಭವಕ್ಕೆ ಬಂದಿದೆ. ಇಂತಹ ಅಭೂತಪೂರ್ವ ಸತ್ಕಾರಗಳನ್ನು ಗುರುನಾಥರಿಂದ ಪಡೆದು ತಮ್ಮನ್ನು ತಾವೇ ಗುರುನಾಥರಿಗೆ ಅರ್ಪಿಸಿಕೊಂಡ ಒಬ್ಬ ಸನ್ಯಾಸಿ ಮಹಾರಾಜರು, ಗುರುವು ದೈಹಿಕ ರೂಪದಲ್ಲಿ ಇಲ್ಲದಿದ್ದರೂ, ಅವರು ನಮ್ಮೊಂದಿಗೆ ಇದ್ದೇ ಇದ್ದಾರೆ ಎಂಬ ದೃಢ ಚಿತ್ತ ಹೊಂದಿದವರು, ಅವರು ಸಖರಾಯಪಟ್ಟಣ್ಣಕ್ಕೆ ಹೋದಾಗಲೆಲ್ಲಾ ಮುಂಚಿತವಾಗಿ ಫೋನು ಮಾಡಿ ತಿಳಿಸದೇ ಹೋದರೂ, ಗುರುನಾಥರು ಸರ್ವ ಸನ್ನದ್ಧರಾಗಿ 'ನಿಮಗಾಗಿ ಕಾಯುತ್ತಿದ್ದೆ' ಎಂದು ತಮ್ಮ ಭಕ್ತ ಸಮೂಹದೊಂದಿಗೆ ಸ್ವಾಗತಿಸುತ್ತಿದ್ದರಂತೆ.
ಮುಂದೆ ಗುರುನಾಥರ ಮಹಾ ನಿರ್ವಾಣವಾದಾಗ, ಅಲ್ಲಿಗೆ ಬರಲಾರದಂತಹ ಸ್ಥಿತಿಯಲ್ಲಿ ಅವರು ಇದ್ದರಂತೆ. ಮುಂದೊಂದು ದಿನ ರಥ ಸಪ್ತಮಿಯಂದು ನರಸಿಂಹ ದೇವಾಲಯದ ಒಂದು ಕಾರ್ಯಕ್ಕೆ ಅರಸೀಕೆರೆಗೆ ಆಗಮಿಸಿದವರು ಯಾರು ಯಾರಿಗೋ ಫೋನು ಮಾಡಿ ಮಾತನಾಡಲು ಪ್ರಯತ್ನಿಸಿದರೂ ಯಾರೂ ಸಿಗಲಿಲ್ಲ. ಕೊನೆಗೆ ಗುರುನಾಥರ ತೋಟದಲ್ಲಿಯೇ ಅವರ ವೃಂದಾವನ ಇದೆ ಎಂಬುದನ್ನು ಹೇಗೋ ತಿಳಿದುಕೊಂಡು ಹೊರಟೇ ಬಿಟ್ಟರಂತೆ - ವೃಂದಾವನ ದರ್ಶನಕ್ಕೆ, ಸಖರಾಯಪಟ್ಟಣ ತಲುಪಿ, ತೋಟದ ಜಾಗವನ್ನು ವಿಚಾರಿಸಿಕೊಂಡು - ವೇದಿಕೆಯ ಬಳಿ ಹೋಗಿ ನೋಡಿದರೆ, ಅದೇನಾಶ್ಚರ್ಯ.... ಸಾವಿರಾರು ಜನರು ಈ ಮಹಾತ್ಮರನ್ನು ಎದಿರುಗೊಂಡು ಸ್ವಾಗತಿಸಿ, ಪೂರ್ಣಕುಂಭ ಸ್ವಾಗತ ನೀಡಿ ಒಳಗೆ ಕರೆದುಕೊಂಡು ಹೋದರಂತೆ... ಇದನ್ನು ಕಂಡ ಆ ಯತಿಗಳು ಹೀಗೆನ್ನುತ್ತಾರೆ. "ನಾನು ಬರುವುದು ಯಾರಿಗೂ ತಿಳಿದಿಲ್ಲ... ಆದರೆ ಗುರುನಾಥರಿಂದ ಏನನ್ನು ಮುಚ್ಚಿಡಲು ಸಾಧ್ಯ ? ಅಷ್ಟೊಂದು ಜನರನ್ನು ಸೇರಿಸಿಬಿಟ್ಟಿದ್ದರು... ಕಾಲಿಡಲೂ ಜಾಗವಿರಲಿಲ್ಲ.... ಗುರುನಾಥರೂ ಸದೇಹಿಯಾಗಿ ಇಲ್ಲದಿದ್ದರೂ.... ಅಲ್ಲಿಂದಲೇ ಎಲ್ಲ ಏರ್ಪಾಟುಗಳನ್ನು ಮಾಡಿ ಯತಿಗಳ ಸತ್ಕಾರವನ್ನು ಅಂದು - ಇಂದೂ ನಡೆಸಿದ ಇದಕ್ಕಿಂತ ಅವರ ಇರುವಿಕೆಗೆ ಬೇಕೇ ಸಾಕ್ಷಿ" ಎನ್ನುತ್ತಾರೆ ಆ ಯತಿವರ್ಯ, ತಪಸ್ವಿಗಳು, ಸಾಕ್ಷಾತ್ ದತ್ತನನ್ನೇ ಗುರುನಾಥರಲ್ಲಿ ಕಂಡವರು.
ಪ್ರಿಯ ಗುರುಬಾಂಧವರೇ, ನಿತ್ಯ ಸತ್ಸಂಗಾಭಿಮಾನಿಗಳೇ, ಗುರುನಾಥರಿಂದ ಅನೇಕ ಸಂಸ್ಥಾನಗಳು, ಮಠ ಮಾನ್ಯಗಳು ಬೆಳಗಿವೆ. ಸೇವೆ ಸಂದಿವೆ, ಲೋಪ ದೋಷಗಳು ಕಂಡಾಗ ನಿರುದ್ವೇಗ ಭಾವದಿಂದ - ಸಲಹೆ ನೀಡಿ, ಉದ್ಧರಿಸಿದ ಆ ಕರುಣಾಳು ಮೂರ್ತಿಗೆ ಅಷ್ಟೇ ಅಪಾರ ಗೌರವವೂ ಅವರುಗಳ ಬಗ್ಗೆ ಇದ್ದೇ ಇತ್ತು. ಹಾಗೆಯೇ ಭಕ್ತ ಸಮೂಹದ ಮೇಲೂ... ಮೇಲು ನೋಟಕ್ಕೆ ಮಾತು ಔಷಧಿಯಾಗಿರುತ್ತಿತ್ತು. ಒಳಗೆ ಅಮೃತವಿರುತ್ತಿತ್ತು.
ಇಂತಹ ಗುರುನಾಥರ ಕುರಿತು ಮತ್ತೊಬ್ಬ ಗುರುಬಂಧುಗಳ ವಿಚಾರ ಹೀಗಿದೆ ನೋಡಿ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment